ಪ್ರೀತಿಯ ಸಖಿ ಚಿಮಣಾ…
ಅಂದು ಸಂಜೆ ತಂಗಾಳಿಯೊಂದಿಗೆ ಮಾತಿಗಿಳಿದು ಮೆಲ್ಲನೆ ಹೆಜ್ಜೆ ಹಾಕುತ್ತ ಸಾಗುತ್ತಿದ್ದಾಗ ದಾರಿಯಲಿ ಉದುರಿಬಿದ್ದ ಎರಡು ಹಳದಿ ಹೂಗಳನ್ನು ಎತ್ತಿ ನನ್ನ ಕೈಗಿಟ್ಟು ಬಿಡಿಸಿಕೊಂಡು ಬಿದ್ದಿವೆ ಬೀದಿಗೆ ಸಾಧ್ಯವಾದರೆ ಬದುಕಿಸಿಕೊ ಎಂದು ಹೇಳಿದೆಯಲ್ಲ ನಾನಾಗಾ ಸಖತ್ ಸೀರಿಯಸ್ಸಾಗಿ ನಿನ್ನನ್ನು ಪ್ರೀತಿಸಲು ಶುರುಮಾಡಿದ್ದು ನಿಜ. ಮುಂಜಾನೆ ಸೂರ್ಯನ ಕಿರಣಗಳು ಮುಗುಳುನಗುತ್ತ ಮನೆಯಂಗಳಕೆ ಬೆಳಕಿನ ರಂಗೋಲಿ ಇಡುತ್ತಿದ್ದಾಗ ನೀ ಹಾದು ಹೋಗುವ ದಾರಿ ತಿರುತಿರುಗಿ ನನ್ನೆ ದುರುಗುಟ್ಟುತ್ತಿತ್ತು.
“ಹೇ ಹಿಂಗೆಲ್ಲ ಕಾದಂಬರಿಯೊಳಗ ಕವನ ಬರದಾಂಗ ಬರದ್ರ ಹೆಂಗ ಅರ್ಥ ಆಗಬೇಕು ನಂಗ ಸೀದಾ ಏನೈತೊ ಅದನ್ ಹೇಳು ಇಲ್ಲಂದ್ರ ಬಿಡು..” ಅಂತ ನೀ ಹೇಳಿ ಹೋಗಿಬಿಟ್ರ ಹೆಂಗ ಅಂತ ಯೋಚನಿ ಮಾಡಕೊಂತ ಕುಂತಿದ್ದೆ ಪಳ್ ಅಂತ ಮಿಂಚ್ ಒಂದು ಬಂದ್ ಹ್ವಾದಂಗ ಕಣ್ಮುಂದ ನೀ ನನ್ನೆರಡು ತೋಳಿನ್ಯಾಗ ಮಲಗಿ ನಕ್ಕಿದ್ದ ಆ ನಗಿ ಬಂದ್ ಹೋತ್ ನೋಡು ನನ್ ಮೈಯ್ಯಾಗ ಒಂಥರಾ ಕರೆಂಟ್ ಪಾಸಾದಾಂಗಾಗಿ ಎಲ್ಲೆದಳಾಕಿ ಎಲ್ಲೆದಳಾಕಿ ಅಂತ ಹುಡಕೆ ಹುಡ್ಕತಿದ್ದೆ ಕೈಚಾಚಿ ಬಾರ ನನ್ ಚಿಮಣಾ ಅಂತ ಚೀರಬೇಕಂತಿದ್ದೆ ಕೈ ಹರದ ಕೌದಿಯೊಳಗಿಂದ ಸೀದಾ ಹೊರಗ ಬಂದ್ಬಿಟ್ತು. ತಂಪ್ ಗಾಳಿ ಕೈಗಿ ತಾಕಿ ಎಚ್ಚರಾಗಿಬಿಟ್ತು ಎದ್ದ ನೋಡಿದ್ರ ಹಾಸಿಗ್ಯಾಗ ಅದಿನಿ. ಕನಸಾ ಇದು ಅಂತ ಕೈಕೈ ಹಿಚಕೊಂಡೆ.
ಆದ್ರು ಚಿಮಣಾ ನೀ ಯಾವಾಗ ನನ್ ಬಾಳೆದಾಗ ಬಂದ್ಯೊ ಅವಾಗಿಂದ ನನ್ ಲೈಪ್ ನ ಖಾಲಿ ಹಾಳಿಗೊಳೆಲ್ಲ ಫುಲ್ ಕಲರ್ಪುಲ್ ಆದಂಗಾಗ್ಯಾವು ಚಿಮಣಾ. ಯಾರ ಏನರೆ ಅನಲಿ ‘ನೀ ನನಗ ನಾ ನಿನಗ’ ಅನ್ನೊದ ಮಾತ್ರ ಯಾರೇನು ಅನಲಾರದಂಗ ಇರಬೇಕು. ದಿನಾ ಬೆಳಕ ಹರದ್ರ ಬೆಳ್ಳಾನ ಲಂಗಾ ದಾವನಿ ಹಾಕೊಂಡು ಬೆಳ್ಳಕ್ಕಿಹಂಗ ನಾಜಿಕಿಲೆ ಅಂಗಳದಾಗ ಕುಂತು ರಂಗೋಲಿ ಬಿಡಸೋವಾಗ ಹಾಂಗ ಒಂದ್ ಲುಕ್ ಕೊಡತಿಯಲ್ಲ ಆಹಾ..! ಅಷ್ಟ ಸಾಕ್ ಅದರಾಗ ನನಗ ಪ್ರೀತಿ ಜಳಕಾನ ಮಾಡಿದಂಗಾಗ್ತೈತಿ.
ಕಾಲೇಜ್ ಕ ಹೋಗು ದಾರ್ಯಾಗ ನಿನಗ ಕಾಡೋ ಆ ಹುಡುಗೊರಿಗೆ.. “ಏ ನಾಲೇಜ್ ಇಲ್ಲದ ಹುಡುಗೊರ್ಯಾ ಓದ್ರಲೇ ಓದ್ರಿ.. ಅಪ್ಪ ಅವ್ವ ಕಷ್ಟ ಪಟ್ಟ ದುಡದು ಓದಾಕ್ ಕಳಸ್ಯಾರು ಚಂದಂಗಿ ಓದಿ ಅಪ್ಪ ಅವ್ವನ ಹೆಸರ ತಗಂಬರ್ರಿ..” ಅಂತ ಒಂದss ಸ್ಪೀಡ್ನ್ಯಾಗ ಪಟಾ ಪಟಾ ಅಂತ ಪಕ್ಕಾ ಹಕ್ಕಿನ ಮಾತಾಡ್ತಿಯಲ್ಲ ಅದss ಆಗತ್ತss ನನಗ ನಿನ್ ಹಿಂದ್ ಬಿಳುವಂಗ ಮಾಡಿದ್ದು. ಇಂತಾ ಕಲಿಯುಗದಾಗು ನಿನ್ನೊಳಗ ಕಲಿಬೇಕು ಕಲಸಬೇಕು ಕಲತಿದ್ದು ಕಾಲಾತೀತವಾಗಿ ಉಳಿಬೇಕು ಉಳಿಯುವಂಗ ಮಾಡಬೇಕು ಅದಕ್ಕೊಂದ ಅರ್ಥ ಇರ್ತದ ಅದನ್ ಕೊಡಬೇಕು ಅನ್ನೊ ನಿನ್ ಬದುಕಿನ ಥಿಯರಿ ಐತೆಲ್ಲ ಅದss ಅದss ನನಗ ನಿನ್ ಮ್ಯಾಲಿನ ಪ್ರೀತಿಗೆ ಕಾರಣ ಆಗಿದ್ದು.
ಚಿಮಣಾ ಇನ್ನಾ ಏನೆನಂತ ಹೇಳಲಿ ಏನ್ ಹೇಳಿದ್ರು ಕಡಿಮಿನ ಅನಸತ್ತ ನನಗ.. ಆ ಗುಲಾಬಿ ಹೂವಿನಮ್ಯಾಲಿನ ಹನಿಯಂಥಾಕಿ ಅದಿ ನೀ ಆ ಗರಿಕಿ ಹುಲ್ಲಿನಮ್ಯಾಲಿನ ಇಬ್ಬನಿಯಂಗದಿ ನೀ ನೀ ಅಂದ್ರ ಅಷ್ಟು ಚಂದ ನೀ ಅಂದ್ರ ಅಷ್ಟ ತೀಡಿದ್ಹಂಗ ಗಂಧ… ಮನಷ್ಯಾಗ ಎಷ್ಟ ಜನ್ಮಾ ಕೊಟ್ಟಾನೊ ಗೊತ್ತಿಲ್ಲ ಆ ದ್ಯಾವ್ರು ಆದರ ನನಗ ಮಾತ್ರ ನಿನ್ ಜೋಡಿನ ಬಾಳೆ ಮಾಡಂಗ ನೂರ ಜನ್ಮ ಕೊಡಪಾ ದೇವ್ರ ಅಂತ ಬೇಡ್ಕೊತಿನಿ ನೋಡು. ಲವ್ಯು ಚಿಮಣಾ. ಪತ್ರ ಓದಿಂದ ಊರ ಹೊರಗಿರೊ ಸಾಲಿ ಹತ್ರಾ ಒಂದ್ ಆಲದ ಗಿಡ ಐತೆಲ್ಲ ಅಲ್ಲಿಗಿ ಬಾ ಭೇಟ್ಯಾಗಿ ಈ ಚೀಟ್ಯಾಗಿರೊ ನನ್ ಒಳಗಿನ ಮಾತುಗಳಿಗೆಲ್ಲ ನಿನ್ನೊಳಗಿರೊ ಉತ್ತರಾ ಬರದಿದ್ ಚೀಟಿ ಕೊಟ್ ಹೋಗು ನಾ ಕಾಯ್ತಿರ್ತಿನಿ…
ಇಂತಿ,
ನಿನ್ನ ಎದಿಗೂಡಿನ ಸಾವಕಾರ
-ಸುರೇಶ್