ಮನ್ನೆ ಮಧ್ಯಾನ್ಹಾ ಆಫೀಸನ್ಯಾಗ ಹಿಂಗ ಸುಮ್ನ ಕೂತಿದ್ವಿ. ಅಂಥಾದ್ದೇನು ಕೆಲಸಾ ಇದ್ದಿದ್ದಿಲ್ಲಾ. ನಮ್ಮ ಜೋಡಿ ಕೆಲಸಾ ಮಾಡೊ ಹುಡಗಿ ಸವಿತಾ ಇಂಟರನೇಟ್ ನ್ಯಾಗ ಇ-ಪೇಪರ ಓದ್ಲಿಕತ್ತಿದ್ಲು. ಹಂಗ ಓದಕೊತ, ” ಮೆಡಮ್ಮ ರಿ ಬಂಗಾರದ ರೇಟ್ ಮೂವತ್ತೆರಡು ಸಾವಿರದಾ ಐದುನೂರಾ ಚಿಲ್ಲರ ಆಗೇತಂತ ನೋಡ್ರಿ. ಹಿಂಗಾದ್ರ ಎನ ಬಂಗಾರದ ಸಾಮಾನ ಮಾಡಿಸ್ಕೊಳ್ಳಾಕ ಆಕ್ಕೇತರಿ. ಹಿಂದಕಿನ ಮಂದಿ ತಲ್ಯಾಗ ಬಂಗಾರದ ಹೂವಿನ ಚಕ್ಕರ ಮತ್ತ ಭಂಗಾರದ ಕ್ಯಾದಗಿ, ಹೆರಳಮಾಲಿ ಮಾಡಿಸಿಕೊಂಡ ಹಾಕ್ಕೊತ್ತಿದ್ರಂತ ರಿ, ಈಗ ನಮಗ ಲಗೂಮಾಡಿ ಕಿವ್ಯಾಗ ಸಣ್ಣ ಭೆಂಡವಾಲಿ ಮಾಡಿಸಿಕೊಂಡ ಹಾಕ್ಕೊಳಾಕಾಗಂಗಿಲ್ಲರಿ. ಅಂದ್ಲು. ಆಕಿ ಮಾತು ಕೇಳಿ ಖರೆ ಅನಿಸ್ತು. ನಮ್ಮತ್ತಿಯವರು ಹೇಳತಿರತಾರ, ಅವರ ಮದವಿಮುಂದ ೧೨೫ ರೂಪಾಯಿಗೆ ತೊಲಿ ಭಂಗಾರ ಇತ್ತಂತ. ೧೦ ರೂ. ತೊಲಿ ಬೆಳ್ಳೀ ಇತ್ತಂತ. ಈಗಿನ ಭಂಗಾರದ ರೇಟ್ ನೋಡಿ ಆವಾಗನ ನಾವು ಒಂದಿಷ್ಟ್ ಶ್ಯಾಣೆತನಾ ಮಾಡಿ ಭಂಗಾರ ತಗೊಂಡ್ಡಿಟ್ಟಿದ್ರ ಮಕ್ಕಳ ಮದುವಿಗೆ,ಮಮ್ಮಕ್ಕಳಿಗೆ ಉಪಯೋಗರ ಆಗತಿತ್ತು ಅಂತ ಪೇಚಾಡತಿರ್ತಾರ. ನಮ್ಮ ಮಾವನವರಿಗೆ ಆಗಿನ ಕಾಲದಾಗ ಬರೆ ೨೦೦ ರೂಪಾಯಿ ವರದಕ್ಷಿಣಿ ಕೊಟ್ಟಿದ್ರಂತ.ಇದನ್ನ ಕೇಳಿದ್ರಂತು ನಗುನ ಬರತದ.
ಇನ್ನ ಬೆಳ್ಳಿ ಸಾಮಾನಂತು ಈಗಿನ ಸ್ಟೀಲಿನ ಸಾಮಾನಿನಂಘ ಮನಿತುಂಬೆಲ್ಲಾ ಇರತಿದ್ವಂತ. ಸಣ್ಣ ಕೂಸುಗೊಳಿಗೆ ಆಟಾ ಆಡ್ಲಿಕ್ಕೆ ಬೆಳ್ಳಿ ಗಿಲಗಂಚಿ, ಬೆಳ್ಳಿ ಗುಬ್ಬಿಚಟ್ಟ ಮಾಡಿಸಿ ತೊಟ್ಟಿಲಿಗೆ ಕಟ್ಟಸ್ತಿದ್ರಂತ.ಈಗಿನ ಕಾಲಮಾನದಾಗ ಬೆಳ್ಳಿ ಆಟದ ಸಾಮಾನ ಮಾಡ್ಸೊದ ಹೋಗಲಿ ಕೂಸಿಗೆ ಒಂದ ಬೆಳ್ಳಿ ಉಡದಾರಾ ಮಾಡಸ್ಲಿಕ್ಕೆ ಹಿಂದಮುಂದ ನೋಡೊ ಪರಿಸ್ಥಿತಿ ಬಂದದ. ನಮ್ಮಮ್ಮ ಹೇಳತಿದ್ಲು ಆವಾಗೆಲ್ಲಾ ಹೆಣ್ಣಮಕ್ಕಳು ಧಡೆಗಟ್ಟಲೆ ಭಂಗಾರ ಮೈಮ್ಯಾಲೆ ಹಾಕ್ಕೊಂಡ (ಹೇರಕೊಂಡ) ಅಡ್ಯಾಡತಿದ್ರಂತ. ೧೪ ತೊಲಿ ಅಂದ್ರ ಒಂದ ಧಡೆ ಅಂತಿದ್ರಂತ. ನಮ್ಮಮ್ಮನ ಸೊದರತ್ತಿ ಮೈಮ್ಯಾಲೆ ಪ್ರತಿದಿನಾ ೪ ಧಡೆ ಭಂಗಾರದ ವಡವಿಇರತಿದ್ದುವಂತ. ಹಬ್ಬಾಹುಣ್ಣಿವಿ ಮದವಿಮುಂಜಿವ್ಯಾಗ ೮-೧೦ ಧಡೆ ಬಂಗಾರದ ಆಭರಣಾ ಹಾಕ್ಕೊತ್ತಿದ್ರಂತ. ಈಗಿನ ಕಾಲದಾಗ ನಾವು ೪ ಧಡೆ ಅಂತು ದೂರಉಳಿತು ೪ ಗುಂಜಿ ಭಂಗಾರ ಮೈಮ್ಯಾಲೆ ಹಾಕ್ಕೊಬೇಕಾದ್ರ ಎಲ್ಲೆ ಯಾರ ಕಿತ್ಕೊಂಡ ಹೋಗತಾರೊ ಅಂತ ಹೆದರಕೋತ ಹಾಕ್ಕೊಬೇಕಾಗತದ. ನಮ್ಮಮ್ಮ ತನ್ನ ಕಿವ್ಯಾಗಿನ ಭಂಗಾರದ ಭೆಂಡವಾಲಿ ಆಗಿನ ಕಾಲದಾಗ ಬರೆ ೨೫ ರೂಪಾಯಿಗೆ ತಗೊಂಡಿದ್ಲಂತ, ಅದ ತೂಕದ್ದ ಭೆಂಡವಾಲಿ ನಾ ಪಂಚಮಿಹಬ್ಬಕ್ಕ ೧೦೦೦೦ ರೂಪಾಯಿ ಕೊಟ್ಟ ತಗೊಂಡೆ. ಎಲ್ಲಿ ೨೫ ರೂಪಾಯಿ,ಎಲ್ಲಿಯ ೧೦೦೦೦ ರೂ. ಎನ ಕತಿ,ಹೆಂಗ ತುಟ್ಟಿಕಾಲಾ ಬರಲಿಕತ್ತದ. ಈ ಪರಿಸ್ಥಿತಿಯ ಭಾಳಷ್ಟ ಪರಿಣಾಮಾ ನಮ್ಮಂಥ ಮಧ್ಯಮವರ್ಗದ ಜನರ ಮ್ಯಾಲೆನಾ ಭಾಳ ಆಗತದ. ಯಾಕಂದ್ರ ಅತೀ ಬಡವರ್ಗದವರಿಗೆ ಗೊತ್ತಿರತದ ಭಂಗಾರಾ, ಬೆಳ್ಳಿ, ಐಷಾರಾಮಿಯ ವಸ್ತುಗಳೆಲ್ಲಾ ತಮಗ ಆಕಾಶದಾಗಿನ ನಕ್ಷತ್ರಗಳಂತ ಅದಕ್ಕ ಅವರು ಯಾವ ವಿಚಾರ ಮಾಡದ ಇದ್ದದ್ದರಾಗ ತೄಪ್ತಿಯಿಂದ ಆರಾಮ ಇದ್ದು ಬಿಡತಾರ.ಇನ್ನ ಶ್ರೀಮಂತರಿಗೆ ರೊಕ್ಕಕ್ಕ ಎನ್ ಕಡಮಿ ಇರುದಿಲ್ಲಾ,ಅವರಿಗೆ ಯಾವದು ಎಷ್ಟ ರೇಟಾದ್ರು ಲೆಕ್ಕಕ್ಕ ಇರುದಿಲ್ಲಾ. ಅಂದಮ್ಯಾಲೆ ಬರೊ ತ್ರಾಸ ಎಲ್ಲಾ ಮಧ್ಯಮ ವರ್ಗದವ್ರಿಗೆನ. ಇವರಿಗೆ ತಮ್ಮ ಎಲ್ಲಾ ಆಸೆಗಳನ್ನ ಪೂರೈಸ್ಕೊಳ್ಳಿಕ್ಕೆ ಅವಕಾಶಗಳಿರತಾವ ಆದ್ರ ಭಾಳ ಹೆಣಗಾಡಬೇಕಾಗ್ತದ.
ಬರೆ ಈ ಬೆಳ್ಳಿ ಭಂಗಾರಾ ಅಷ್ಟ ಅಲ್ಲಾ ಹಿಂದಕಿನ ಕಾಲದಾಗ ದವಸ ಧಾನ್ಯ,ಬೆಣ್ಣಿ ಹಾಲು ಮೊಸರು,ದಿನನಿತ್ಯದ ಅವಶ್ಯಕ ಸಾಮಾನಗೊಳು,ಅರವಿ-ಅಂಚಡಿ ಎಲ್ಲಾ ಭಾಳ ಸೊವಿ ಇದ್ವಂತ. ನಮ್ಮನಿಯವರ ದೊಡ್ಡಮ್ಮಾ ಚಂಪಕ್ಕಅಂತ ಇದ್ದರು,ಅವರು ತಮ್ಮ ಕಾಲದ ಸುದ್ದಿ ಎಲ್ಲಾ ಹೇಳ್ತಿದ್ರು, ಕೇಳಿದ್ರ ವಿಚಿತ್ರ ಅನಿಸ್ತಿತ್ತು. ಆವಾಗೆಲ್ಲಾ ತಾಮ್ರದ ದುಡ್ಡು,ಆಣೆದ ಕಾಲ ಇತ್ತಂತ. ಎರಡ ಆಣೆಕ್ಕ ಸೇರ ಬೆಣ್ಣಿ, ಆವಾಗೆಲ್ಲಾ ಮೊಸರನ್ನ ರೊಕ್ಕಾ ಕೊಟ್ಟು ತಗೊತ್ತಿದ್ದಿಲ್ಲಂತ. ಜ್ವಾಳಾ,ಗೋದಿ,ಸಜ್ಜಿ ಕೊಟ್ರ ಅದಕ್ಕ ಬದಲಾಗಿ ಮಸರು ಕೊಡತಿದ್ರಂತ.ನಾವ ಎಂಥಾ ಪಾತ್ರಿಯೊಳಗ ಧಾನ್ಯಾ ಕೊಡತಿದ್ವೊ ಅದರ ತುಂಬ ಗಟ್ಟಿ ಕೆನಿಮೊಸರು ಕೊಡತಿದ್ರಂತ. ಇನ್ನ ಮಜ್ಜಗಿ ಅಂತು ಹಂಗ ರೊಕ್ಕಾರುಜಿ ಇಲ್ಲದ ಪ್ರೀತಿಯಿಂದ ತಂಬಗಿಗಟ್ಟಲೆ ಕೊಡತಿದ್ರಂತ. ಈಗ ನಾವು ೧೦ ರೂ. ಕೊಟ್ರ ಒಂದು ಗಿಂಡಿ ನೀರ ಮಜ್ಜಿಗಿ ಅಂಥಾ ಮೊಸರು ಕೊಡತಾರ. ಈಗ ೪೦೦ ರೂಪಾಯಿಗೆ ೧ಕೇಜಿ ಬೆಣ್ಣಿ ಆಗೇದ . ಹಿಂದಕಿನ್ ಮಂದಿಯ ೧ ತಿಂಗಳ ಪಗಾರಾ ಈಗ ಬರೆ ಬೆಣ್ಣಿ ತಗೊಳಿಕ್ಕೆ ಸಾಲುದಿಲ್ಲಾ. ಆಗೇಲ್ಲಾ ಒಂದು ರೂಪಾಯಿ ಕೊಟ್ರ ೪-೫ ಸೇರು ಜ್ವಾಳಾ,ಅಕ್ಕಿ, ಸಿಗತಿದ್ವಂತ.ಈಗ ೪೦ ರೂ. ೧ಕೇಜಿ ಜ್ವಾಳಾಗ್ಯಾವ. ನಮ್ಮತ್ತಿಯವರು ಸಾಲಿಗೆ ಹೋಗಬೇಕಾದ್ರ ತೂತಿನ ದುಡ್ಡು,ತಾಮ್ರದ ದುಡ್ಡು ಅಂತ ಇರತಿದ್ವಂತ,ಒಂದು ತೂತಿನ ದುಡ್ಡಿಗೆ ಬೊಗಸಿತುಂಬ ಪುಠಾಣಿ,ಸಕ್ಕರಿ ಕೊಡತಿದ್ರಂತ.
ನಮ್ಮ ಮಾವನವರು ನಮ್ಮತ್ತಿಯವರಿಗೆ ೫ ರೂ. ವಾರದ ಸಂತಿಗಂತ ಕೋಡತಿದ್ರಂತ.ನಮ್ಮತ್ತಿಯವರು ಅದರಾಗ ವಾರಕ್ಕ ಬೇಕಾಗೊ ಅಷ್ಟು ಕಾಯಿಪಲ್ಯಾ,ಸಾಸಿವಿ,ಜಿರಿಗಿ,ಮಸಾಲಿ ಸಾಮಾನು,ಹಣ್ಣು ಹಂಪಲಾ ಮತ್ತ ಕೈತುಂಬ ಚಿಕ್ಕಿ ಕಾಜಿನಬಳಿ ಇಟಗೊಂಡ ಬರತಿದ್ರಂತ. ಈಗಿನ ಕಾಲದಾಗ ೫ ರೂಪಾಯಿಗೆ ಒಂದ ಶಿವಡ ರಾಜಗಿರಿ,ಮೆಂತೆಪಲ್ಯಾ ಬರಂಗಿಲ್ಲಾ. ನಮ್ಮಜ್ಜ ತಿಂಗಳಾ ೨೫ ರೂಪಾಯಿ ತಿಂಗಳ ಖರ್ಚಿಗೆ ಕೊಡತಿದ್ನಂತ ನಮ್ಮಜ್ಜಿಗೆ.ಮನ್ಯಾಗ ಎಲ್ಲಾರನು ಹಿಡದು ಒಟ್ಟ ೨೦ ಮಂದಿ ಇದ್ರಂತ. ಮತ್ತ ಮ್ಯಾಲೆ ಬರೊಹೋಗೊ ಮಂದಿ ಬ್ಯಾರೆ.ಅಜ್ಜಿ ಹೆಂಗ ಸಾಲತಿತ್ತು ನಿಂಗ ಎಲ್ಲಾ ನಿಭಾಯಿಸಲಿಕ್ಕೆ ಅಂತ ಕೇಳಿದ್ರ,ಅಜ್ಜಿ ನಕ್ಕೊತ ” ಹುಚ್ಚ ಖೊಡಿ,ಅದರಾಗ ಎಲ್ಲಾ ಸಂತಿ ತಂದು ೨೫ ರೂ.ನ್ಯಾಗ ಇನ್ನು ೮-೧೦ ರೂಪಾಯಿ ಉಳಸತಿದ್ದೆ ದಿನಾ ಬಂದಹೋಗವರಿಗೆಲ್ಲಾ ಅವಲಕ್ಕಿ ಫಳಾರ ಮತ್ತ ಸಣ್ಣಕ್ಕಿ ಅನ್ನಾ ಖಮ್ಮಗ ಅನ್ನೊ ತುಪ್ಪಾನ ಊಟಕ್ಕ ಬಡಸತಿದ್ದೆ.ಅಂದ್ಲು.”ಆವಾಗೆಲ್ಲಾ ದಿನಾ ಅವಲಕ್ಕಿ ಫಳಾರ ಯಾರು ಮಾಡತಿದ್ದಿಲ್ಲಂತ. ಅಳ್ಳಹಿಟ್ಟ ಕಲಿಸಿನ ಫಳಾರ ಮಾಡತಿದ್ರಂತ ಎಲ್ಲಾರಮನ್ಯಾಗ. ದಿನಾ ಅವಲಕ್ಕಿ ತಿನ್ನೊವರು ಭಾಳ ಶ್ರೀಮಂತರ ಲಿಸ್ಟ್ ನ್ಯಾಗ ಸೇರತಿದ್ರು.ಈಗ ಕಾಲಾ ಹೆಂಗ ಬದಲಾಗೇದ ಅಂದ್ರ ನಾವಾಗಲಿ ನಮ್ಮಕ್ಕಳಾಗಲಿ ಅವಲಕ್ಕಿ ಅಂದ್ರ ” ಅಯ್ಯ ಬರೆ ಅವಲಕ್ಕಿ ಹೆಂಗ ತಿನ್ನೊದ ಅಂತ ಮೂಗಮುರಿತೇವಿ.ಯಾರದರ ಮನಿಗೆ ಹೋದಾಗ ಅವಲಕ್ಕಿ ಕೊಟ್ರ. ಒಣಾಒಣಾ-ಠಣಾಠಣಾ ಅವಲಕ್ಕಿ ಮಾಡಿದ್ರು ಅಂತ ಆಡ್ಕೊತಾರ. ಈಗ ಪ್ಯಾಟ್ಯಾಗ ಹೋದ್ರ ೨೫ ರೂಪಾಯಿ ಒಬ್ಬರಿಗೆ ಬರೆ ಶೇವಪೂರಿ, ಗೋಬಿಮಂಚೂರಿಗೆ ತಿನ್ನಲಿಕ್ಕೆ ಸಾಲಂಗಿಲ್ಲಾ.
ನಂಗಿನ್ನು ನೆನಪದ ನಮ್ಮಜ್ಜಿ ಅಂತಿದ್ಲು,” ಹುಬ್ಬಳ್ಳಿಗೆ ಬರ್ಬೆಕಾದ್ರ ೫ ರೂಪಾಯಿ ಇಟಕೊಂಡ ಬರತಿದ್ಲಂತ,ಅದರಾಗ ೨ ರೂಪಾಯಿ ಉಳಿಸ್ಕೊಂಡ ಹೋಗತಿದ್ಲಂತ.ಇಂಥಾ ಸುದ್ದಿ ಕೇಳಿದ್ರನ ಎಷ್ಟ ಖುಷಿ ಆಗತದ.ಈಗ ನಾವೆನರ ೫ ರೂ. ತಗೊಂಡ ಹೊದರ ಊರಿಂದ ಊರಿಗೆ ಹೋಗೊದಂತು ದೂರ ಉಳಿತು, ಸಿಟಿ ಬಸ್ ನ್ಯಾಗ ಒಂದ ಸ್ಟಾಪಿನಿಂದ ಮುಂದಿನ್ ಸ್ಟಾಪಿಗು ಹೋಗಲಿಕ್ಕಾಗುದಿಲ್ಲ.
ನಮ್ಮತ್ತಿಯವರ ಮದವ್ಯಾಗ ೧೫೦ ಕೊಟ್ಟಸೀರಿ ತಗೊಂಡಿದ್ರಂತ. ಮಂದಿಯೆಲ್ಲಾ ಭಾಳ ತುಟ್ಟಿ ಸೇರಿ ಹಾಕ್ಯಾರ ಮದಮಗಳಿಗೆ,ಅಂತ ಮಾತಾಡಕೊತಿದ್ರಂತ.ಈಗ ಮದುಮಗಳ ಅರವಿಗೆನ ಮೂವತ್ತ ನಲವತ್ತಸಾವಿರ್ ರೂಪಾಯಿ ಖರ್ಚ ಆಗತಾವ.ಇದ ರೊಕ್ಕದಾಗ ಹಿಂದಕಿನ ಮಂದಿ ಊರಿಗೆ ಊಟಾ ಹಾಕಿಸಿ ಸಿಕ್ಕಾಪಟ್ಟೆ ಗ್ರ್ಯಾಂಡ ಆಗಿ ಮದವಿ ಮಾಡತಿದ್ರಂತ. ಛೊಲೊ ೧೮ ಮಳದ್ದು ಸೀರಿ ಬರೆ ೨೦ ರೂಪಾಯಿಗೆ ಸಿಗತಿದ್ವಂತ.ನಮ್ಮ ಚಂಪಕ್ಕ ದೊಡ್ಡಮ್ಮ ೧೮ ಮಳದ್ದ ಸೀರಿ ಕಚ್ಚಿ ಹಾಕಿ ಉಡತಿದ್ರು. ಹಳ್ಯಾಗ ಎಲ್ಲಾ ಹೆಣ್ಣಮಕ್ಕಳು “ಚಂಪಕ್ಕ ನೋಡ್ರಿ ದಿನಾ ೨೦ ರೂ. ಸೀರಿ ಉಟಗೊತಾಳ “ಅಂತ ಅಗಾಧ ಪಟ್ಟ ನೋಡತಿದ್ರಂತ.ಈಗಿನ ಕಾಲದಾಗ ೨೦ ರೂಪಾಯಿಗೆ ಛೊಲೊದೊಂದ ಕರ್ಚಿಫ್ ಬರುದಿಲ್ಲಾ.ಈಗ ಅರವಿ ಹೋಲಿಗಿ ಹೋಲಿಲಿಕ್ಕೆ ಹಾಕಬೇಕಂದ್ರ ಎಷ್ಟ ತುಟ್ಟಿ ಆಗೇದಂದ್ರ ಸುಮ್ನ ನಾವ ಹೋಲಿಗಿ ಕಲತು ನಮ್ಮ ಅರವಿ ನಾವನ ಹೋಲಕೊಬೇಕನಿಸ್ತದ. ಆಗ ೨೫ ಪೈಸಾಕ್ಕ ಒಂದ ಕುಬಸಾ ಹೋಲದಕೋಡತಿದ್ರಂತ. ಮತ್ತ ಬ್ಲೌಸ್ ಹೋಲಿಲಿಕ್ಕೆ ೫೦ಪೈಸಾ ತಗೊತಿದ್ರಂತ. ಆಹಾ ಎಂಥಾ ಸುಭಿಕ್ಷವಾದ ಕಾಲಾ ಅದು ಮತ್ತ ಆ ದಿನಗೊಳು ತಿರಗಿ ಬರಬಾರದಾ ಅನಿಸ್ತದ. ಕೇರೂರಾಗ ನಮ್ಮನಿ ಹತ್ರ ಅಗ್ನಿಹೋತ್ರಿ ಅಂತ ಒಬ್ಬರು ಹೈಸ್ಕೂಲ ಪ್ರಿನ್ಸಿಪಾಲ ಮೆಡಂ ಇದ್ದಾರ,ಒಂದಿನಾ ಮಧ್ಯಾನ್ಹ ಕೈಯ್ಯಾಗ ಒಂದ ಹೋಸಾದು ಬೆಳ್ಳಿ ತಟ್ಟಿ ಹಿಡಕೋಂಡ ಬಂದು ನಮ್ಮತ್ತಿಯವರಿಗೆ ತೋರಿಸಿ” ನಮ್ಮ ಮದವ್ಯಾಗಿನ ಬನಾರಸಿ ಸೀರಿ ಭಾಳ ಹಳೆವಾಗಿ ಇಟ್ಟಲ್ಲೆ ಕಟಗರಿಸಿದ್ವು, ಅದಕ್ಕ ಸೀರಿ ಅಂಚಿನ ಜರಿಯೋಳಗ ೩೦೦೦ ಸಾವಿರರೂಪಯಿದು ಬೆಳ್ಳಿ ಹೋಂಡತು. ಅದರಾಗ ಒಂದ ಬೆಳ್ಳಿ ತಟ್ಟಿ ತಗೊಂಡ ಬಂದೆ ಅಂದ್ರು.ಆಗಿನ ಕಾಲಕ್ಕ ಅವರು ಆ ಎರಡು ಬನಾರಸಿ ಸೀರಿ ೪೦೦ ಒಂದರಂಘ ತಗೊಂಡಿದ್ರಂತ.ಅವರ ಮಾತು ಕೇಳಿ ನಂಗಂತು ಅಗಾಧನ ಅನಿಸ್ತು. ಆದ್ರ ಕಾಲಾ ಹಿಂಗ್ಯಾಕ ಬದಲಾಗಲಿಕತ್ತದ,ಯಾಕ ಮದಲಿನಂಘ ಸಮಾಧಾನದಿಂದ ಕೂಡಿದ ಜೀವನ ಇಲ್ಲಾ ಅನ್ನೊದಕ್ಕ ಮನಶ್ಯನಲ್ಲೆ ಜಾಸ್ತಿ ಆಗತಿರೊ ದುರಾಸೆನ ಕಾರಣ ಅನಿಸ್ತದ.
ಆವಾಗೆಲ್ಲಾ ಮಂದಿ ಅಲ್ಪ ತೄಪ್ತರಿದ್ದರು. ಅತಿಆಸೆ ಇರತಿದ್ದಿಲ್ಲಾ. ದೇಶದ ಸಂಪನ್ಮೂಲಗಳ ಬಳಕಿ ಅವಶ್ಯಕತೆಗನುಸಾರ ಆಗತಿತ್ತು. ಹೆಂಗೆಂಗ ಮನಶ್ಯಾನಲ್ಲೆ ದುರಾಸೆ ಮತ್ತ ರೊಕ್ಕದ ದಾಹಾ ಹೆಚ್ಚಾಗಲಿಕತ್ತೊ ಹಂಗಂಗ ದೇಶದ ಸಂಪನ್ಮೂಲಗಳ ದುರ್ಬಳಕಿ ಶುರು ಆತು.ಇದರಿಂದ ನಮಗ ಸಿಗಬೇಕಾದಂಥಾ ನಮ್ಮ ಅವಶ್ಯಕತೆಗಳನ್ನ ಪೂರೈಸೊ ಅಂಥಾ ಸಾಧನಗಳು ನಮಗ ಸಿಗಲಾರದ ಅನೈತಿಕವಾಗಿ ದೇಶದ ಹೋರಗ ಹೋಗಲಿಕ್ಕ ಶುರು ಆದವು. ನಮ್ಮ ಮನ್ಯಾಗ ನಾವ ರೊಕ್ಕಾಕೊಟ್ಟ ಕೊಂಡ ತಿಂಧಂಗ, ನಮ್ಮಲ್ಲಿಂದ ರಫ್ತಾಗಿ ಹೋದ ನಮ್ಮುವ ವಸ್ತುಗಳನ್ನ ಹೋರಗಿನ್ ಮಂದಿ ನಮಗ ದುಪ್ಪಟ್ಟ ರೊಕ್ಕಕ್ಕ ಮಾರಲಿಕ್ಕೆ ಶುರುಮಡಿದ್ರು.ಹಿಂಗಾಗಿ ತಪ್ಪುದಾರಿ ಹಿಡದು ರೊಕ್ಕಾ ಗಳಿಸಿ ಶ್ರೀಮಂತರಾಗವರು ಆದ್ರು.ಅದರಾಗ ಮ್ಯಾಲಿಂದ ಮ್ಯಾಲೆ ಈ ಅಕಾಲಾ, ಬರಗಾಲಾ ಅಂತ ದೇಶದ್ದು ಮತ್ತ ಜನರದ್ದು ಪರಿಸ್ಥಿತಿ ಇನ್ನುಹಗೆಟ್ಟು ಹೋತು. ಒಂದ ಸಲಾ ಹಿಂದತಿರಗಿ ನೋಡಿದ್ರ ಎಷ್ಟ ಸಂಭೄಧ್ಧಿಯಿಂದ ಕೂಡಿದ ಕಾಲ ಅದು. ಅಂಥಾ ಕಾಲಾ ಬಂದ್ರ ಎಷ್ಟ ಛಂದ ಇರತದ. ಅಲ್ಲಾ ಕೇಳಲಿಕ್ಕೆ ಅಷ್ಟ ಛೊಲೊ ಅನಿಸ್ತದ ಅಂದ್ರ ಅನುಭೊಗಿಸಿದ್ರ ಇನ್ನು ಎಷ್ಟ ಮಸ್ತ ಇರಬಹುದು. ಆದ್ರ ಅದೆಲ್ಲಾ ಕನಸಿನ ಮಾತನ ಖರೆ. ಬರೆ ನಮ್ಮಜ್ಜ ಅಜ್ಜಿ ಹೇಳೊದನ್ನ ಕೇಳಿ ಖುಷಿಪಡಬೇಕ ಹೊರತು ಅಂಥಾ ಸುಭೀಕ್ಷದ ಕಾಲಾ ಮತ್ತ ಎನ್ ತಿರಗಿ ಬರಂಗಿಲ್ಲಾ. ಒಂದ ಟಿವ್ಹಿ ಜಾಹಿರಾತಿನ್ಯಾಗ ಹೇಳತಾರ ನೋಡ್ರಿ” ನಾ ವೊಹ ದಿನ ಲೌಟಾಯೆಂಗೆ, ನಾ ವೊಹ ಖಾಲಿ ಸಡಕೆ” ಅನ್ನೊದು ಶಂಬರ್ ಟಕ್ಕೆ (೧೦೦%) ಖರೆ ಅದ.
******
ಎಲ್ಲಾ ಕಾಲದಾಗೂ ಜನ ನಂ ಕಾಲಾನೇ ಛಂದಿತ್ತು ಈಗನಂಗಲ್ಲ, ಈಗ ಬಿಡಿ ಕಾಲ ಕೆಟ್ಟೋಯ್ತು ಅನ್ನೋದಕ್ಕೆ ಇತಿಹಾಸನೇ ಸಾಕ್ಷಿ ಅಲ್ವೇ?
ಅಕ್ಕಿ ತಿನ್ನೋರ್ ಹೋಗಿ ಬತ್ತ ತಿನ್ನೋರ್ ಬಂದ್ರು, ಬತ್ತ
ತಿನ್ನೋರ್ ಹೋಗಿ ಹೊಟ್ಟ್ ತಿನ್ನೋರು ಬಂದ್ರು, ಹೊಟ್ನು
ಬಿಡದಂತೆ ತಿನ್ನೋರ್ ಹೋಗಿ ಇನ್ಯಾರ್ ಬರ್ತಾರೋ?
ಎಲ್ಲಾ ಧಾರಣಿ ಹೆಚ್ಚಾಗಿ ಮಧ್ಯಮ ವಗ೯ & ಕೆಳಮಧ್ಯಮ ವಗ೯ದ ಜನ ಬದುಕೋದು ಕಷ್ಟ ಐತಿ ಬಿಡ್ರಿ.
ಹೌದು ರೀ , ನಿಜಾ ಹೇಳಿದ್ರಿ
ಕಾಲ ಕೆಟ್ಟೋಯ್ತು ಅನ್ನೋದನ್ನ ಛಂದ ಬರೆದಿದ್ದೀರಿ . ನೀವಂದು ಕೊಂಡಂತೆ ನಮ್ಮ ಹಿರಿಯರು ಇದೇಥರ ಮಾತಾಡ್ತಿದ್ರು . ನಾಳೆ ನಮ್ ಮಕ್ಳು ಹಿಂಗೇ ಅಂತಾರೆ . ಹೆಂಗೆ ಜನರಲ್ಲಿ ಕ್ಯಾಶ್ ಫ್ಲೋ ಆಗ್ತದ ಹಂಗ ಲೈಫ್ ಇರ್ತದ . ನಿಮ್ಮ ಕಳಕಳಿ ವ್ಯಕ್ತಪಡಿಸಿದ ರೀತಿ ಚಲೋ ಇತ್ರಿ . ಅಭಿನಂದನೆಗಳು
ನಾ ವೊಹ ದಿನ ಲೌಟಾಯೆಂಗೆ, ನಾ ವೊಹ ಖಾಲಿ ಸಡಕೆ
ಚಲೋ ಹೇಳಿದ್ರಿ. ಆ ಕಾಲಾನ ನೆನಿಸಿಕೊಂಡು ಖುಷಿ ಪಡಬಹುದಷ್ಟೆ
ಸತ್ಯವಾದ ಮಾತು ಮೇಡಮ್…. ಬಹಳ ಚೆಂದ ಬರೆದೀರಿ….
AA KAALA BHAALA CHENDA IITTA AKKA… BHAALA CHANDA BARDIRI..
🙂