ಆ ಒಂದು ಮಾತು !: ಕೆ ಟಿ ಸೋಮಶೇಖರ ಹೊಳಲ್ಕೆರೆ.

somashekar-k-t

ಆ ಒಂದು ಮಾತು ಅವನ ಬದುಕಿನ ಗುರಿಯನ್ನು ನಿರ್ಧರಿಸಿತು. ಮಾರ್ಗವನ್ನು ಕಂಡುಕೊಳ್ಳುವ ಒತ್ತಾಯ ಮಾಡಿತು. ಕಂಡುಕೊಂಡು ಗುರಿ ತಲುಪುವಂತೆ ಮಾಡಿ, ಆಕಾಶದಲ್ಲಿ ನಕ್ಷತ್ರವಾಗಿ ಹೊಳೆಯುವಂತೆ ಮಾಡಿತು.

"Where there is a will there is a way"  ಸಾಧಿಸಲು ಅಸಾಧ್ಯವಾದುದು ಯಾವುದೂ ಇಲ್ಲ. ಮನುಷ್ಯ ಮನಸ್ಸು ಮಾಡಿದರೆ ಏನು ಬೇಕಾದರೂ ಸಾಧಿಸಲು ಸಮರ್ಥ ಇದ್ದಾನೆ. ಈ ಮಾತುಗಳು ಮತ್ತು ಯುವಕರೇ ," ಏಳಿ, ಎದ್ದೇಳಿ ಗುರಿ ಮುಟ್ಟುವತನಕ ನಿಲ್ಲದಿರಿ " ,  " ಯುವಶಕ್ತಿ ಹುಚ್ಚು ಹೊಳೆಯಿದ್ದಂತೆ "  ಈ ಸ್ವಾಮಿವಿವೇಕಾನಂದರ ಮಾತುಗಳು ಗೊತ್ತಿಲ್ಲದವರಿಲ್ಲ.

ಮೇಲಿನ ಮಾತುಗಳಿಂದ ನಾಲ್ಕು ಅಂಶಗಳು ತಿಳಿದು ಬರುತ್ತವೆ. ಒಂದನೆಯದು : ಮನುಷ್ಯನಿಗೆ ಏನನ್ನು ಬೇಕಾದರೂ ಸಾದಿಸುವ ಸಾಮರ್ಥ್ಯ ಇದೆ ಎನ್ನುವುದು. ಎರಡನೆಯದು : ಸಾಮರ್ಥ್ಯ ಎಲ್ಲರಲ್ಲೂ ಇರುತ್ತದೆ,  ಅದರ ಸದುಪಯೋಗ ಯಾವಾಗ ಆಗುತ್ತದೆಂದರೆ ಅವನು ಸಾಧಿಸಲು ಮನಸ್ಸು ಮಾಡಿದಾಗ ಮಾತ್ರ! ಮೂರನೆಯದು :  ಯುವಕರಲ್ಲಿ ಆ ಸಾಮರ್ಥ್ಯ ಅಪರಿಮಿತವಾಗಿ ಇರುತ್ತದೆ  ಎನ್ನುವುದು. ನಾಲ್ಕನೆಯದು :  ಸಾಧಿಸಲು ಅವಿಶ್ರಾಂತ ಪರಿಶ್ರಮ ಅಗತ್ಯ.ಗುರಿ ಮುಟ್ಟಿಯೇ ತೀರಬೇಕೆನ್ನುವ ಛಲ ಬೇಕು ಎಂಬ ಅಂಶಗಳು. ಇವು ನಮ್ಮಲ್ಲಿದ್ದರೆ ಏನನ್ನು ಬೇಕಾದರೂ ಸಾಧಿಸಬಹುದು!

ಹಲ್ಲು ಇದ್ದವರಿಗೆ ಕಡಲೆ ಇರುವುದಿಲ್ಲ, ಕಡಲೆ ಇದ್ದವರಿಗೆ ಹಲ್ಲು ಇರುವುದಿಲ್ಲ — ಈ ಗಾದೆ ಸಾಧಿಸಬೇಕೆಂದಿರುವವರಿಗೆ ಅವಕಾಶಗಳು ಇರುವುದಿಲ್ಲ, ಅವಕಾಶಗಳು ಇದ್ದವರಿಗೆ ಸಾಧಿಸಲು ಆಸಕ್ತಿ ಇರುವುದಿಲ್ಲ. ಹೀಗೆ ಸಾಧನೆಗೆ ಸಂಬಂಧಿಸಿದಂತೆ ಅನ್ವಯಿಸಬಹುದು! ಸಾಕಷ್ಟು ಜನರಿಗೆ ತಮ್ಮ ಗುರಿಗಳು ಇಂಥವೇ ಎಂದು ಸಾಧಿಸುವ ಸಾಮರ್ಥ್ಯ ಇದ್ದಾಗ  ಗುರುತಿಸಿಕೊಳ್ಳಲು ಸಾಧ್ಯವಾಗಿರುವುದಿಲ್ಲ! .ಗುರುತಿಸಿಕೊಳ್ಳವಷ್ಟೋತ್ತಿಗೆ ಅದನ್ನು ಸಾಧಿಸುವ ಸಾಮರ್ಥ್ಯ ಇಲ್ಲದಂತಾಗಿರುತ್ತದೆ. ಸಾಧಿಸುವ ಸಾಮರ್ಥ್ಯ ಇದ್ದಾಗ ಸಾಧಿಸಬೇಕಾದದು ಏನು ಎಂದು ತಿಳಿದೇ ಇರುವುದಿಲ್ಲ.ಹೀಗೆ ಗುರಿ ಗುರುತಿಸಿಕೊಳ್ಳುವ ಮುನ್ನ ಸಾಮರ್ಥ್ಯ ಹೀನರಾಗದಿರುವುದಕ್ಕೆ ಗುರುವಿನ ಮಾರ್ಗದರ್ಶನ ಕೊರತೆಯೇ ಕಾರಣ!  ಇದರಿಂದ ಗುರು ಎಷ್ಟು ಮುಖ್ಯ ಎಂದು ತಿಳಿಯುತ್ತದೆ.

ಹಿಂದೆ ಗುರು ಇದ್ದ, ಮುಂದೆ ಗುರಿ ಇತ್ತು, ದಂಡು ಸಾಗುತಿತ್ತು. ಎಂಬ ಮಾತಿನ ಅರ್ಥ ಸೈನ್ಯಕ್ಕೆ ಮಾರ್ಗದರ್ಶನ ಮಾಡುವ ಸೇನಾಧಿಪತಿ ಗುರುವಾಗಿದ್ದು, ಯಾವ ಕಡೆಗೆ ಸೈನ್ಯ ಸಾಗಬೇಕೆಂಬುದನ್ನು ನಿರ್ದೇಶಿಸುತ್ತಿದ್ದ ಆ ಕಡೆಗೆ ಸೈನ್ಯ ಸಾಗುತಿತ್ತು. ಸೈನ್ಯಕ್ಕೆ ಇಂಥದ್ದೇ ಗುರಿ ಎಂದು ತೋರಿಸಿದ್ದರಿಂದ ಭೇಧಿಸಲು ಸುಲಭ ಆಗುತಿತ್ತು. ಮಾರ್ಗದರ್ಶನ ಮಾಡುವವರು ಇರದಿದ್ದರೆ ಅಗಾಧ ಸಾಮರ್ಥ್ಯದ ಸೈನ್ಯವಿದ್ದೂ ವ್ಯರ್ಥ. ಇಲ್ಲಿ ಗುರಿ ತೋರಿಸುವವರು ಬಹಳ ಮುಖ್ಯ.

ಇಂದು ಗುರು ಇಲ್ಲದೆಯೂ ಗುರಿ ಮುಟ್ಟುವ ಅವಕಾಶಗಳು ಎಲ್ಲರ ಮುಂದಿವೆ. ಸಾಧಿಸುವ ಉತ್ಕಟತೆಯೇ ಜ್ಙಾನವನ್ನು ಗುರು ಆಗಿಸಿಕೊಂಡು ಮಾರ್ಗಗಳನ್ನು ಹುಡುಕಿಕೊಟ್ಟು , ಮುಟ್ಟ ಬೇಕಿರುವ ಗುರಿಯಕಡೆ ಕರೆದೊಯ್ಯುತ್ತದೆ. ಅಂತರ್ಜಾಲ ಸಂಪರ್ಕವಿರುವ ಕಂಪ್ಯೂಟರುಗಳು, ಮೊಬೈಲ್ ಗಳು ಗುರುವಾಗಿ, ಮಾರ್ಗ ದರ್ಶಕರಾಗಿ, ಸ್ನೇಹಿತರಾಗಿರುವುದರಿಂದ ಯುವಕರನೇಕರು ದೇಶ ವಿದೇಶಗಳಲ್ಲಿ ಸ್ವಾವಲಂಬಿಗಳಾಗಿ ಉದ್ಯೋಗ ಮಾಡುತ್ತಿರುವುದೇ ಇದಕ್ಕೆ ಸಾಕ್ಷಿ!  ಅದಕ್ಕೂ ಗುರುವನ್ನು ಆಶ್ರಯಿಸಿದ್ದರೆ ಇನ್ನೂ ಬೇಗ ಗುರಿ ತಲುಪಿ ನೆಮ್ಮದಿ ಕಾಣಬಹುದಿತ್ತು

ತನ್ನ ಐದು ವರುಷದ ವಯಸ್ಸಿನಲ್ಲೇ ಮಾತೆಯ ಮಮತೆಯ ಸಂಕೋಲೆಯಿಂದ ಬಿಡಿಸಿಕೊಂಡು, ಭಯಂಕರ ಕಾಡಿನಲ್ಲಿ ನುಗ್ಗಿ ಹೋಗಬೇಕೆಂದರೆ, ಕ್ರೂರ ಮೃಗಗಳಿಗೂ, ಕಲ್ಲು ಮುಳ್ಳಿಗೂ ಅಂಜದೆ ನಡೆದನೆಂದರೆ, ಯಮುನಾ ನದಿ ತೀರದಲ್ಲಿ ಆಕಸ್ಮಿಕವಾಗಿ ನಾರದ ಮಹಾ ಋಷಿಗಳು ಎದುರಾಗಿ ನಿನ್ನ ನಿರ್ಧಾರ ತುಂಬಾ ಕಷ್ಟ ಎಂದು ಹೇಳಿದರೂ, ದೈರ್ಯಗುಂದದೆ ತನ್ನ ಅಚಲ ಸ್ಪಷ್ಟ ಅದಮ್ಯ ನಿರ್ಧಾರವನ್ನು ಸ್ಪಷ್ಟವಾಗಿ ಹೇಳಿ ಅವರಿಂದನೇ ತಪಸ್ಸು ಮಾಡಲು ಬೇಕಾದ ಮಂತ್ರ ಮಾರ್ಗದರ್ಶನ ಪಡೆದು,  ಅನ್ನ ಪಾನೀಯಗಳನ್ನು ತೊರೆದು ಭಗವಂತ ಪ್ರತ್ಯಕ್ಷ ಆಗುವವರೆಗೂ ಭಯಂಕರ ತಪಗೊಂಡು, ಭಗವಂತನಿಂದ ಅನುಗ್ರಹಿಸಲ್ಪಟ್ಟು,  ರಾಜ್ಯಕ್ಕೆ ಹಿಂದಿರುಗಿದ.  ಇವನಿಗೆ ಬಿರುನುಡಿದವರು ತಪ್ಪು ಅರಿತು ಎಲ್ಲರೂ ಭವ್ಯ ಸ್ವಾಗತ ಕೋರಿದರು. ತಂದೆಯ ಕಾಲಾನಂತರ ತಾನೇ ರಾಜನಾಗಿ ಅನೇಕ ವರ್ಷ ರಾಜ್ಯಭಾರ ಮಾಡಿ, ಅನೇಕ ಯಜ್ಙಗಳನ್ನು ಮಾಡಿ, ಮರಣಾನಂತರ ದ್ರುವ ನಕ್ಷತ್ರವಾಗಿ ಹೊಳೆಯುತ್ತಾ ಸಾಧಕರಿಗೆ ಸದಾ ಚೈತನ್ಯ ತುಂಬುತ್ತ ಆದರ್ಶನಾಗುವಂತೆ ಮಾಡಿದ ಆ ಮಾತು ಅವನ ಮೇಲೆ ಎಷ್ಟು ಗಾಢ ಪರಿಣಾಮ ಬೀರಿದ್ದೀತು? ಆ ಮಾತನ್ನು ಅವಳು ಹೇಳಲಿಲ್ಲವೆಂದರೆ ಇಷ್ಟೆಲ್ಲಾ ಸಾಧನೆ ಆಗುತ್ತಿರಲಿಲ್ಲ ! ಆ ಮಾತು ಅವನ ಗುರಿಯನ್ನು ಚಿಕ್ಕ ವಯಸ್ಸಿನಲ್ಲಿರುವಾಗಲೇ ನಿರ್ದರಿಸಿದುದರಿಂದ, ಇಷ್ಟೆಲ್ಲ ಸಾಧ್ಯವಾಯಿತು. ಆ ಮಾತನಾಡಿದವರು ಎಷ್ಟು ಪುಣ್ಯವಂತರಿರಬಹುದು!

ಉತ್ತಾನಪಾದ ಅರಸನಿಗೆ ಸುನೀತ ಮತ್ತು ಸುರುಚಿ ಎಂಬ ಇಬ್ಬರು ಹೆಂಡಿರು. ಸುನೀತಳ ಮಗ ಧ್ರುವ, ಸುರುಚಿ ಮಗ ಉತ್ತಮ. ಉತ್ತಾನಪಾದನಿಗೆ ಸುರುಚಿ ಇಷ್ಟ. ಒಂದು ದಿನ ಸಿಂಹಾಸನದ ಮೇಲೆ ಉತ್ತಾನಪಾದ ಕುಳಿತಿದ್ದ, ಅವನ ತೊಡೆಯ ಮೇಲೆ ಉತ್ತಮ ಕುಳಿತಿದ್ದ. ತಾನೂ ತನ್ನ ತಂದೆಯ ತೊಡೆ ಏರಬೇಕೆಂದು ತಂದೆಯ ಹತ್ತಿರಕ್ಕೆ ಧ್ರುವ ಹೋದ. ಇದನ್ನು ಕಂಡು ಸುರುಚಿ " ರಾಜ ಸಿಂಹಾಸನ ಏರುವ ಭಾಗ್ಯ ನಿನಗಿಲ್ಲ, " ಎಂದು ಗದರಿಸಿ ಅವನನ್ನು ತಳ್ಳಿದಳು. ಆಗ ಧ್ರುವ " ನನಗೇಕೆ ಆ ಭಾಗ್ಯವಿಲ್ಲ " ಎಂದು ಕೇಳಿದ." ಅದನ್ನು ಆ ದೇವರನ್ನೇ ಕೇಳು ಹೋಗು " ಎಂದಳು ಸುರುಚಿ. ಆ ದೇವರನ್ನೇ ಕೇಳು ಹೋಗು ! ಆ ದೇವರನ್ನೇ ಕೇಳು ಹೋಗು ! ಎಂದ ಆ ಮಾತು ಅವನ ಜೀವನದ ಗುರಿ ನಿರ್ಧರಿಸಿತು! ಛಲ ಹುಟ್ಟಿಸಿತು. ಧ್ರುವ ನಕ್ಷತ್ರವಾಗುವ ಸಾಧನೆಗೆ ನೆರವಾಯಿತು!

ಪ್ರತಿಯೊಬ್ಬರಿಗೂ ಅಸಾಧ್ಯವಾದುದನ್ನು ಅಥವಾ ಅಂದುಕೊಂಡದನ್ನು ಸಾಧಿಸುವ ಸಾಮರ್ಥ್ಯ ಇದ್ದೇ ಇರುತ್ತದೆ! ಆ ಸಾಮರ್ಥ್ಯ ಇರುವ ವಯಸ್ಸಿನಲ್ಲಿ ಗುರಿ ನಿರ್ಧಾರ ಆಗಬೇಕಷ್ಟೇ. ಸಾಧಿಸಬೇಕೆದಿರುವವರು ಚಿಕ್ಕ ವಯಸ್ಸಿನಲ್ಲೇ ಗುರಿ ನಿರ್ಧರಿಸಿಕೊಳ್ಳಬೇಕು. ಇದಕ್ಕೆ ಎಲ್ಲರೂ ಸಮರ್ಥರು! ಪೋಷಕರ,  ಹೆತ್ತವರ, ಗುರುಗಳ ಪಾತ್ರಗಳೂ ಇಲ್ಲಿ ಬಹು ಮುಖ್ಯ. ಇವರು ಪ್ರೋತ್ಸಾಹದಾಯಕರಾಗಿರಬೇಕು. ಮಕ್ಕಳ ಗುರಿ ನಿರ್ಧರಿಸಲು ಸಹಕರಿಸಿ ಅವರನ್ನು ಮಹಾನ್ ಸಾಧಕರಾಗಿಸಿ ! ಇದು ನಮ್ಮೆಲ್ಲರ ಹೊಣೆ. ಅದರಲ್ಲಿ ದೇಶದ ಭವಿಷ್ಯ ಅಡಗಿದೆ. ಭಾರತದ ಭವಿಷ್ಯ ಉಜ್ವಲಿಸುವಂತಾಗಲು ತಮ್ಮ ಮಕ್ಕಳಿಗೆ ಮೌಲ್ಯಯುತ ಗುರಿ ತೋರಿ. ಅದು ಅರ್ಜುನ ಪಕ್ಷಿಗೆ ಗುರಿ ಇಡುವಂತೆ ಅಚಲವೂ ಸ್ಥಿರವೂ ಆಗಿರಲಿ. ಗುರಿ ಅಷ್ಟೇ  ಕಾಣುವಂತಿರಬೇಕು!

* ಕೆ ಟಿ ಸೋಮಶೇಖರ ಹೊಳಲ್ಕೆರೆ.


 

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Oldest
Newest Most Voted
Inline Feedbacks
View all comments
0
Would love your thoughts, please comment.x
()
x