ಎಲ್ಲಾ ಸಮಾಜಗಳಿಗೂ ಆದರ್ಶ ಪುರಷನಾದ, ಪುರಷೋತ್ತಮನಾದ ರಾಮನ ಆದರ್ಶದ ಕಥೆ ಅನನ್ಯ. ಆ ಕಥೆ ಸೊಗಸಾಗಿ ರಚಿಸಿದ ವಾಲ್ಮೀಕಿ ಧನ್ಯ. ಅನುಸರಿಸಿ ಆದರ್ಶವಾದ ಭಾರತೀಯ ಸಮಾಜ ಪರಮಧನ್ಯ.
ರಾಮಾಮಾಯಣ ವಿಶ್ವದ ಮಹಾಕಾವ್ಯಗಳಲ್ಲಿ ಒಂದು. ರಾಮಾಯಣ ಎಂದರೆ ' ರಾಮನ ಚರಿತೆ ' ಎಂದು ಅರ್ಥ. ' ರಾಮ ' ಎಂದರೆ ಮನೋಹರ, ಸುಂದರ, ರಂಜಿಸು ಎಂಬ ಅರ್ಥಗಳಿವೆ. ' ಆಯನ ' ಎಂದರೆ ಚರಿತೆ, ಗತಿ, ಸ್ಥಾನ ಎಂಬ ಅರ್ಥಗಳಿವೆ. ಅವೆರಡು ಪದಗಳು ಸಮಾಸವಾಗಿ ರಾಮಾಯಣ ಪದವಾಗಿದೆ. ರಾಮಾಯಣ ಸುಮಾರು ಕ್ರಿ. ಪೂ ೫೦೦ ಮತ್ತು ಕಿ ಪೂ ೧೦೦ ರ ನಡುವಿನ ರಚನೆ ಎಂಬುದು ಒಟ್ಟಾಭಿಪ್ರಾಯ. ಅಂದಿನಿಂದ ಇಂದಿನವರೆಗೂ ತನ್ನ ಪ್ರಭಾವವನ್ನು ಭಾರತದ ಸಾಹಿತ್ಯ, ಸಮಾಜ, ಸಂಸ್ಕೃತಿಯ ಮೇಲೆ ಬೀರಿ ಉತ್ತಮ ಸಮಾಜದ ಸೃಷ್ಟಿಗೆ, ಮೌಲ್ಯಗಳ ಉಳಿವಿಗೆ, ಬೆಳವಣಿಗೆಗೆ, ಕಾರಣವಾಗಿದೆ. ಭಾರತದಲ್ಲಿ ನೂರಾರು ರಾಮಾಯಣಗಳ ಸೃಷ್ಟಿಗೆ, ಇದೇ ಮೂಲ. ಸಾಹಿತ್ಯದ ಅನೇಕ ಪ್ರಕಾರಗಳಲ್ಲಿ ಇದನ್ನು ಬಹಳ ಕಡೆ ವಸ್ತುವಾಗಿಸಿಕೊಂಡಿದ್ದಾರೆ. ವಸ್ತುವಾಗಿಸಿಕೊಳ್ಳತ್ತಾ ಇದ್ದಾರೆ. ಕಾಳಿದಾಸಾದಿಯಾಗಿ ಪ್ರಮುಖ ಕವಿ, ಸಾಹಿತಿಗಳ ಮೇಲೆ ಗಾಢ ಪ್ರಭಾವ ಬೀರಿದೆ " ವಾಲ್ಮೀಕಿಯ ವದನಾರವಿಂದದಿಂದ ಹೊರಟ ಕಾವ್ಯಾಂಮೃತವೆಂಬ ಸಾಗರದಿಂದ ಅಮೃತವನ್ನು ಕುಡಿಕುಡಿದು ಎಲ್ಲಾ ಕಾಲದ ಮೇಘಗಳೆಂಬ ಕವಿಗಳು ಕಾವ್ಯ ವೃಷ್ಟಿಯನ್ನು ಕರೆಯುತ್ತಿವೆ " ಈ ಒಬ್ಬ ಕವಿಯ ಮಾತು ಅಲಂಕಾರ ಭಾಷೆಯಲ್ಲಿದ್ದರೂ ಸತ್ಯವಾದ ಅಭಿಪ್ರಾಯವಾಗಿದೆ. ಭಾರತದಲ್ಲಿ ರಾಮಾಯಣ ಮಹಾಕಾವ್ಯ ಮತ್ತು ವಾಲ್ಮೀಕಿ ಮುನಿ ಗೊತ್ತಿಲ್ಲದವರು ಇದ್ದರೂ ಇರಬಹುದು, ರಾಮನನ್ನು ತಿಳಿಯದವರು ಇರಲು ಸಾಧ್ಯವಿಲ್ಲ! ಅಂಥಾ ರಾಮನನ್ನು ಸೃಷ್ಟಿಸಿರುವುದು ವಾಲ್ಮೀಕಿ ಮುನಿಯ ಶ್ರೇಷ್ಠತೆ.
ಅಯೋಧ್ಯೆ, ರಾಮ ಜನ್ಮ ಭೂಮಿ ಆದ ಪ್ರಯುಕ್ತ ಉತ್ತರ ಭಾರತದಲ್ಲಿ ರಾಮಭಕ್ತಿ ಹೆಚ್ಚು. ಪ್ರತಿ ಮನೆಯಲ್ಲಿ ಒಬ್ಬ ರಾಮದೇವ ಅದರ ಫಲವಾಗಿಯೇ ಇರುವಂತಾಗಿರುವುದು. ದಕ್ಷಿಣ ಭಾರತದಲ್ಲಿ ಕಡಿಮೆಯೇನಲ್ಲ. ದೇಶದಾದ್ಯಂತ ಲೆಕ್ಕವಿಲ್ಲದಷ್ಟು ರಾಮ ಮಂದಿರಗಳು, ಹನುಮ ಮಂದಿರಗಳು ತುಂಬಿವೆ. ನಾವು ರಾಮನನ್ನು ದೇವರನ್ನಾಗಿಸಿ ಪೂಜಿಸುತ್ತಿದ್ದೇವೆ. ಇದಕ್ಕೆ ರಾಮನ ಅಕಳಂಕಿತ ವ್ಯಕ್ತಿತ್ವವೇ ಕಾರಣ, ಹಾಗೆ ಸೃಜಿಸಿದ ಕವಿಯೂ ಕಾರಣ.
ರಾಮನನ್ನು ದೇವರೆಂದು ನೋಡುವುದಕ್ಕಿಂತ ಒಬ್ಬ ಮಾನವನನ್ನಾಗಿ ನೋಡುವುದರಿಂದ ರಾಮನ ಘನತೆಯನ್ನು ಹೆಚ್ಚಿಸಬಹುದು. ಅವನನ್ನು ದೇವರು ಅಥವಾ ಭಗವಂತನ ಅವತಾರಿ ಎಂದು ಭಾವಿಸಿದರೆ ಅವನೊಬ್ಬ ಭಗವಂತ ಆದ್ದರಿಂದ ಅವನಿಗೆ ಅಪಾರ ಶಕ್ತಿ ಇರುತ್ತದೆ.ಏನು ಬೇಕಾದರೂ ಮಾಡಬಲ್ಲ! ಎಂಬ ಭಾವನೆ ಬಂದುಬಿಡುತ್ತದೆ. ಆಗ ಅವನ ವ್ಯಕ್ತಿತ್ವ, ಧೀರೋಧ್ಧಾತ ನಡೆ ವನವಾಸದ ಕಷ್ಟ, ರಾಕ್ಷಸರ ಸಂಹಾರಗಳೆಲ್ಲಾ ಘನವಾಗದೆ ರಾಮ ಲಘುವಾಗಿಬಿಡುತ್ತಾನೆ. ಅವನೇ ನನ್ನನ್ನು ದೇವರೆನ್ನಬೇಡಿ ಮನುಷ್ಯನೆನ್ನಿ ಎಂದು ರಾಮಾಯಣದಲ್ಲಿ ಒಂದು ಕಡೆ ಹೇಳುತ್ತಾನೆ. ಸೀತೆಯನ್ನು ಕಳೆದುಕೊಂಡಾಗ ರಾಮ ಸಾಮಾನ್ಯ ಮನುಷ್ಯನಂತೆ ರೋಧಿಸುತ್ತನೆ. ವಾಲ್ಮೀಕಿಯೂ ಅವನನ್ನು ಮನುಷ್ಯನಾಗಿ ನೋಡ ಬಯಸಿದ್ದಾನೆ.
ದೇಶದ ಅನೇಕ ಆದರ್ಶ ನಾಯಕರ ಹುಟ್ಟಿಗೆ ರಾಮ ಕಾರಣನಾಗಿದ್ದಾನೆ. ಅದರಲ್ಲಿ ಗಾಂಧಿ ಪ್ರಮುಖರು, ರಾಮನ ಅಪರಾವತಾರಿ. ' ರಘುಪತಿ ರಾಘವ ರಾಜಾರಾಮ್ ಪತಿತ ಪಾವನ ಸೀತಾರಾಮ್…. ' ಗಾಂಧೀಜಿಯ, ರಾಷ್ಟ್ರದ ಜನಪ್ರಿಯ ಭಜನಾ ಹಾಡಾಗಿದೆ. ಭಾರತೀಯರೆಲ್ಲರ ಮನವನ್ನು ತುಂಬಿದೆ. ಈ ಹಾಡು ಕಿವಿಗೆ ಬೀಳುತ್ತಿದ್ದಂತೆ ಭಕ್ತಿ, ಭಾವ ಉಕ್ಕುತ್ತದೆ. ರಾಮನ ರಾಜ್ಯದಲ್ಲಿ ಪ್ರಜೆಗಳಿಗೆ ಯಾವುದಕ್ಕೂ ಕೊರತೆನೆ ಇರಲಿಲ್ಲ. ಅದಕ್ಕೆ ಗಾಂಧೀಜಿ ಭಾರತವನ್ನು ರಾಮರಾಜ್ಯವಾಗಿಸುವ ಕನಸು ಕಂಡದ್ದು. ಪುರುಷೋತ್ತಮನಾಗಿ, ಏಕ ಪತ್ನಿ ವೃತಸ್ಥನಾಗಿ, ಪಿತೃವಾಕ್ಯ ಪರಿಪಾಲಕನಾಗಿ, ಪ್ರಜಾ ಪ್ರೇಮಿಯಾಗಿ, ಧರ್ಮ ಪರಿಪಾಲಕನಾಗಿ, ವನ್ಯ ಪ್ರೇಮಿಯಾಗಿ, ಋಷಿ ಮುನಿ ಸೇವಕನಾಗಿ ವೀರಾದಿ ವೀರ, ಸಾಹಸಿಯಾಗಿ . ಧೀಮಂತನಾಗಿ …..ಸಮಾಜಕ್ಕೆ ಆದರ್ಶನಾಗಿರುವುದರಿಂದ ಮನಸ್ಸಿಗೆ ಹತ್ತಿರವಾಗುತ್ತಾನೆ. ಮಹಾನ್ ಕಾವ್ಯದಲ್ಲಿ , ಮಹಾನ್ ವ್ಯಕ್ತಿಯಾಗಿ ಧೀರೋದ್ಧಾತನಾಗಿ ಕಾಣುತ್ತಾನೆ. ಧೀರೋಧ್ಧಾತನನ್ನು ಸೃಷ್ಟಿಸಲು ಧೀರೋದ್ಧಾತನಿಂದ ಮಾತ್ರ ಸಾಧ್ಯ. ಇಂಥಾ ಪಾತ್ರ, ಕಾವ್ಯ ಸೃಷ್ಟಿಸಿದ ಕವಿಯ ಜೀವನ ಹೇಗಿದ್ದೀತು?
ಆದಿಕವಿಯಾದ ಮಹಾಕವಿ ವಾಲ್ಮೀಕಿ ಜೀವನದ ಇತಿಹಾಸದ ಬಗ್ಗೆ ವಿವಾದಗಳಿವೆ. ಅವನೊಬ್ಬ ಮುನಿ ಎಂದು ಕೆಲವರು, ಮತ್ತೆ ಕೆಲವರು ಬೇಡನಾಗಿ ನಂತರ ಪರಿವರ್ತನೆಗೊಂಡು ಮುನಿಯಾಗಿ, ರಾಮಾಯಣ ರಚಿಸಿದನೆನ್ನುವರು. ಕ್ರಿ. ಶ ೯ ನೇ ಶತಮಾನದವರೆಗೆ ಬೇಡನಾಗಿದ್ದ ಎಂಬುವುದರ ಬಗ್ಗೆ ಮಾಹಿತಿಯಿಲ್ಲ ಎಂದು ಪಂಜಾಬ್ ಹರಿಯಾಣ ಕೋರ್ಟ್ ೨೦೧೦ ರಲ್ಲಿ ಹೇಳಿದೆ. ಅದೇನೇ ಇದ್ದರೂ ವ್ಯಾಪಕವಾಗಿ ಬಹು ಜನರು ಒಪ್ಪಿತ ಕಥೆಯೊಂದಿದೆ. ಕೆಲವು ಪುರಾಣಗಳಲ್ಲಿ ಬೇಡ, ಮುನಿಯಾಗಿ ಬದಲಾದ ಬದುಕಿನ ವರ್ಣನೆಯಿದೆ.ವಾಲ್ಮೀಕಿ ಪ್ರಚೇತಸ ಮುನಿಯ ಮಗನಾಗಿ ಹುಟ್ಟಿದ. ಅವನ ಹೆಸರು ಆಗ ರತ್ನಾಕರ. ಅವನು ಚಿಕ್ಕವನಿದ್ದಾಗ ಅಡವಿಯಲ್ಲಿ ತಪ್ಪಿಸಿಕೊಂಡು ಬೇಟೆಗಾರನೊಬ್ಬನ ಕೈ ಸೇರುತ್ತಾನೆ. ಅವನ ಆಶ್ರಯದಲ್ಲೇ ಬೆಳೆದು ದೊಡ್ಡ ಬೇಟೆಗಾರನಾಗುತ್ತಾನೆ. ಬೇಟೆಗಾರನೊಬ್ಬನ ಸುಂದರ ಮಗಳನ್ನು ಮದುವೆಯಾಗುತ್ತಾನೆ. ತನ್ನ ಕುಟುಂಬ ದೊಡ್ಡದಾಗುತ್ತದೆ. ಅವರಿಗೆ ಆಹಾರ ಒದಗಿಸುವುದು ಕಷ್ಟವಾಗುತ್ತದೆ. ಆಗ ದರೋಡೆಕೋರನಾಗುತ್ತಾನೆ. ಒಂದು ದಿನ ನಾರದ ಇವನಿಂದ ಲೂಟಿಗೊಳಗಾಗುತ್ತಾನೆ. ನಾರದ ದೇವರ ಪ್ರಾರ್ಥಿಸುತ್ತಾ ತಂಬೂರಿಯಿಂದ ಮಧುರ ದನಿ ಹೊಮ್ಮಿಸುತ್ತಾನೆ. ಆ ಮಧುರ ನಾದ ಕೇಳಿ ವಾಲ್ಮೀಕಿ ಬದಲಾಗುತ್ತಾನೆ. ನಾರದ ರತ್ನಾಕರನನ್ನು
ನೀನು ತೆಗೆದುಕೊಂಡು ಹೋಗುವ ಆಹಾರಾದಿಗಳಲ್ಲಿ ಪಾಲುಗಾರರಾಗುವಂತೆ, ನಿನ್ನ ಪಾಪದಲ್ಲೂ ನಿನ್ನ ಕುಟುಂಬದ ಸದಸ್ಯರು ಪಾಲುಗಾರರಾಗುವರೇ ? ಎಂದು ಪ್ರಶ್ನಿಸುತ್ತಾನೆ. ಈ ಒಂದು ಪ್ರಶ್ನೇ ಅವನನ್ನು ಮಹರ್ಷಿ, ಮಹಾಕವಿಯಾಗಿಸಿತು. ಭಾರತಕ್ಕೇ ವ್ಯಕ್ತಿತ್ವ ರೂಪಿಸಿಕೊಳ್ಳಲು ಅನೇಕ ಆದರ್ಶಗಳ ಪಾತ್ರಗಳನ್ನು ಕೊಟ್ಟಿತು ! ನಾನು ತರುವ ಆಹಾರಾದಿಗಳಲ್ಲಿ ಪಾಲು ಪಡೆಯುವಂತೆ, ನನ್ನ ಪಾಪದಲ್ಲೂ ಪಾಲುಗಾರರಾಗುತ್ತೀರ ? ಎಂದು ರತ್ನಾಕರ ಕೇಳುವುದು, ಕುಟುಂಬದ ಸದಸ್ಯರು ನಿರಾಕರಿಸುವುದು ಕಾಣುತ್ತೇವೆ. ಆಗ ನಾರದರ ಬಳಿ ಬರುತ್ತಾನೆ. ' ರಾಮ ' ಎಂಬ ಪವಿತ್ರ ನಾಮವ ನಾರದ ಬೋಧಿಸುತ್ತಾನೆ. ರಾಮನ ಧ್ಯಾನ ಮಾಡಲು ಸೂಚಿಸಿ, ನಾನು ಹಿಂದಿರುಗಿ ಬರುವವರೆಗೆ ಹೀಗೇ ಧ್ಯಾನ ಮಾಡುತ್ತಿರು. ಎಂದು ಹೇಳಿ ಬಹಳ ವರ್ಷಗಳ ನಂತರ ಹಿಂದಿರುಗುತ್ತಾನೆ. ಬಂದು ನೋಡಿದಾಗ ಸುತ್ತ ಹುತ್ತ ಬೆಳೆದಿರುತ್ತದೆ. ನಾರದ ಅದನ್ನು ನಿವಾರಿಸಿ ವಾಲ್ಮೀಕಿಯಾಗಿ ಮರುಹುಟ್ಟು ಪಡೆವಂತೆ ಮಾಡುತ್ತಾನೆ. ' ವಾಲ್ಮೀಕ ' ಎಂದರೆ ಹುತ್ತ. ವಾಲ್ಮೀಕಿ ಎಂದರೆ ಹುತ್ತದಿಂದ ಹುಟ್ಟಿ ಬಂದವನೆಂದು ಅರ್ಥ. ವಾಲ್ಮೀಕಿ ಧ್ಯಾನದಲ್ಲಿದ್ದಾಗ ಬ್ರಹ್ಮನು " ಕುರು ರಾಮ ಕಥಾ ಪುಣ್ಯಾಂ ಶ್ಲೋಕಬದ್ದಾಂ ಮನೋರಮಾಂ " — ಎಲೈ ಕವಿಯೇ ಪುಣ್ಯವಾದ ರಾಮನ ಕಥೆಯನ್ನು ಶ್ಲೋಕರೂಪದಲ್ಲಿ ಮನೋಹರವಾಗಿ ರಚಿಸು — ಎಂದನಂತೆ. " ನತೇ ವಾಗನೃತ ಕಾವ್ಯೇ ಕಾಚಿದತ್ರ ಭವಿಷ್ಯತಿ " — ನಿನ್ನ ಕಾವ್ಯದಲ್ಲಿ ಬರುವ ಯಾವ ಮಾತೂ ಸುಳ್ಳಾಗುವುದಿಲ್ಲ. — ಎಂದು ಅ್ಪಣೆ ಕೊಡಿಸಿದ.
ವಾಲ್ಮೀಕಿ ಗಂಗಾ ನದಿಯ ಸಮೀಪವಿರುವ ತಮಸಾ ನದಿಯಲ್ಲಿ ಸ್ನಾನ ಮಾಡುತ್ತಿರುವಾಗ ಸಮೀಪ ಮಿಥುನ ಕ್ರೌಂಚಗಳು ರಮಿಸುತ್ತಿರುತ್ತವೆ : ಕೆಂಪು ಕೊಕ್ಕುಳ್ಳ ಸುಂದರ ಹೆಣ್ಣು, ಮದಿಸಿದ ಗಂಡು. ಬೇಡನೊಬ್ಬ ಅದರಲ್ಲಿನ ಗಂಡು ಪಕ್ಷಿಗೆ ಬಾಣ ಹೊಡೆಯಲು ಅದು ರಕ್ತದ ಮಡುವಿನಲ್ಲಿ ಬಿದ್ದು ಒದ್ದಾಡುತ್ತದೆ. ಹೆಣ್ಣಿನ ಆಕ್ರಂದನ ಮುಗಿಲು ಮುಟ್ಟುತ್ತದೆ. ಇದ ಕಂಡು ಮನ ಮರುಗಿ ಹೆಣ್ಣು ಕ್ರೌಂಚವನ್ನು ಸಂತೈಸಿ, ಆ ಕಿರಾತನ ಮೇಲೆ ಕೋಪಗೊಂಡ ವಾಲ್ಮೀಕಿ
ಮಾ ನಿಷಾದ ಪ್ರತಿಷ್ಠಾಂ ತ್ವಮಗಮಃ ಶಾಶ್ವತೀಸ್ಸಮಾಃ !!
ಯತ್ಕ್ರೌಂಚಮಿಥುನಾದೇಕಮಬಧೀಃ ಕಾಮ ಮೋಹಿತಮ್! !
ಎಂದು ನುಡಿಯುತ್ತಾನೆ. ಹೀಗೆ ಶೋಕ ಶ್ಲೋಕವಾಗಿ, ರಾಮಾಯಣ ರಚನೆಗೆ ಆದಿಯಾಯಿತು. ೨೪ ಸಾವಿರ ಶ್ಲೋಕಗಳಲಿ ಮಹಾಕಾವ್ಯ ಸೆರೆಯಾಯ್ತು. ಕವಿಯ ರಾಮ ಭಕ್ತಿ ಧಾರೆ ಹೊರಹೊಮ್ಮಿತು.
ರಾಮೋ ರಾಜೀವ ಲೋಚನಾಃ | ರಾಮೋ ರಮಯತಾಂ ವರಃ |
ರಾಮಃ ಸತ್ಯ ಪರಾಕ್ರಮಃ | ರಾಮೋ ನಾಮ ಜನೈಶ್ಶೃತಃ |
ಕೌಶಲ್ಯ ನಂದ ವರ್ಧನಃ | ಪೂರ್ಣಚಂದ್ರ ನಿಭಾನನಃ |
ಹೀಗೆ ರಾಮನನ್ನು ಕವಿಗೆ ಎಷ್ಟು ಸ್ತುತಿಸಿದರೂ ಸಾಲದಾಗುತ್ತದೆ. ಮನಸಾರೆ ಸ್ತುತಿಸಿ ಧನ್ಯನಾಗುವುದ, ಪರವಶನಾಗುವುದ ಕಾಣುತ್ತೇವೆ. ತಾನಷ್ಟೇ ಅಲ್ಲದೆ ಇಡೀ ಭಾರತವೇ ರಾಮ ನಾಮ ಜಪ, ಸ್ಮರಣೆಯಲ್ಲಿ ತಲ್ಲೀನವಾಗುವಂತೆ ಮಾಡಿದ್ದು ಸಾಮಾನ್ಯವೇ?
ಪಿತೃವಾಕ್ಯ ಪರಿಪಾಲನೆಗಾಗಿ ಅರಸತ್ವ ತ್ಯಜಿಸಿ ಅಡವಿಗೆ ಹೊರಡುವ ರಾಮ, ಅವನಿಗಾಗಿ ಸೀತೆ, ಅವರಿಗಾಗಿ ಲಕ್ಷ್ಮಣ, ಇವರೆಲ್ಲರಿಗಾಗಿ ಭರತ, ಊರ್ಮಿಳೆ …. ತ್ಯಾಗದ ಸರಣಿಯೇ ಸೃಷ್ಟಿಯಾಗಿ, ಕಾವ್ಯದಲ್ಲಿ ತ್ಯಾಗ, ಶೋಕ ಸ್ಥಾಯಿಯಾಗಿದೆ. ಜಟಾಯು, ಸಿಂಹಿಕೆ, ಸಂಪಾತಿ, ಹನುಮಂತ, ಜಾಂಬವಂತ, ಮಾರೀಚ, ಲಂಕಿಣಿ, ಕುಂಭಕರ್ಣ … ಮುಂತಾದ ವಿಚಿತ್ರ ಅದ್ಭುತ ಕಲ್ಪನೆಗಳು ಕವಿಯ ಕಲ್ಪನಾಶಕ್ತಿಗೆ ಸಾಕ್ಷ್ಯಗಳಾಗಿವೆ. ರಾಕ್ಷಸರ ಮಾಯಾಜಾಲ, ಕಾಮರೂಪಿ ವಿದ್ಯೆಗಳು, ಅದ್ಭುತ ನಿಶಾಚರಿ, ಅಸುರೀಶಕ್ತಿ, ಆ ಶಕ್ತಿಯನ್ನು ಮೆಟ್ಟಿ ನಿಲ್ಲುವ ರಾಮನ ಆತ್ಮಸ್ಥೈರ್ಯ ಅಮೋಘ. ರಾಮ, ಸೀತೆ, ಭರತ, ಆಂಜನೇಯರುಗಳಲ್ಲಿ ನಿಷ್ಕಲ್ಮಷವಾದ ಸತ್ಯ ಜೀವನವನ್ನು ಕಾಣುವಂತೆ ಚಿತ್ರಿಸಿದ್ದಾನೆ. ಉದಾತ್ತ ಮಹಾ ಗುಣಗಳು ತುಂಬಿರುವ ಇಂಥಾ ವಿಶ್ವ ಶ್ರೇಷ್ಠ ಮಹಾಕಾವ್ಯ ರಚಿಸಿ ಭಾರತದ ಉತ್ತಮ ಸಂಸ್ಕೃತಿಗೆ ಕಾರಣನಾಗಿದ್ದಾನೆ. ಕೊಲೆ, ದರೋಡೆಯೇ ವೃತ್ತಿಯಾಗಿ ಮಾಡಿಕೊಂಡ ಬೇಡನಿಂದ ಶ್ರೇಷ್ಠ ಆದರ್ಶದ ಬದುಕಿನ, ಉದಾತ್ತ ಗುಣಗಳ ಸೃಷ್ಟಿ, ಪ್ರಕೃತಿಯ ರಮ್ಯ ವರ್ಣನೆ ಸೋಜಿಗ.! ಅತಿ ಸೋಜಿಗ! ನಮೋ ನಮೋ ಇದಕ್ಕೆ ಕಾರಣವಾದ ಆ ಒಂದು ಪ್ರಶ್ನೆಗೆ !!
-ಕೆ ಟಿ ಸೋಮಶೇಖರ ಹೊಳಲ್ಕೆರೆ