ಇದ್ದಕ್ಕಿದ್ದಂತೆ ಎಂದು ಹೇಳಲು ಸಾಧ್ಯವಿಲ್ಲದಿದ್ದರೂ ಯಾವುದೇ ಘನ ಗಂಭೀರ ಕಾರಣಗಳಿಲ್ಲದೆ ನನ್ನ ಬಲದ ಕೈಯ ತೋರು ಬೆರಳಿನಲ್ಲಿ ನೋವು ಕಾಣಿಸಿಕೊಂಡಿತು. ನೋವು ಎಂದರೆ ಅದೇನು ಅಂತಹ ಸಹಿಸಲಸಾಧ್ಯವಾದ ಭಯಂಕರ ನೋವೇನೂ ಅಲ್ಲ. ಆದರೆ ದಿನವಿಡೀ ನಾನಿದ್ದೇನೆ ಎಂದು ಹಣಕಿ ಇಣುಕಿ ಹೋಗುತ್ತಿತ್ತು. ಹೀಗೆ ನೋವುಗಳು ಎಲ್ಲೇ ಪ್ರಾರಂಭವಾದರೂ ನಾನು ಅದರ ಇತಿಹಾಸವನ್ನು ಕೆದಕಲು ಹೊರಡುತ್ತೇನೆ. ಅವುಗಳ ಹುಟ್ಟು, ಬೆಳವಣಿಗೆಗಳ ಬಗ್ಗೆಯೇ ಕುತೂಹಲ ನನಗೆ. ಹಾಗಾಗಿ ನೋವು ಶುರು ಆದದ್ದು ಹೇಗೆ, ಯಾವಾಗ, ಎಷ್ಟು ಗಳಿಗೆಗೆ, ಮುಂತಾದವುಗಳಿಗೆ ಉತ್ತರ ಕಂಡುಕೊಳ್ಳುವ ವ್ಯರ್ಥ ಪ್ರಯತ್ನ ಮಾಡುತ್ತೇನೆ. ವ್ಯರ್ಥ ಎಂದು ಏಕೆ ಹೇಳಿದೆ ಎಂದರೆ ಇಂತಹ ನೋವುಗಳೆಲ್ಲ ನನಗೆ ಅಡ್ವಾನ್ಸ್ ಆಗಿ ಹೇಳಿ ಫೋನ್ ಮಾಡಿ ಅಪಾಯಿಂಟ್ಮೆಂಟ್ ತೆಗೆದುಕೊಂಡು ಬರುತ್ತವೆಯೇ? ಹಾಗಾಗಿ ಮೊದಲ ದಿನ ಮಾಡಿದ ಯಾವ ಹೊಸ ಕೆಲಸದಿಂದಾಗಿ ಈ ನೋವು ಬಂತು ಎಂದು ಹುಡುಕಲು ಕಷ್ಟ ಆಗುತ್ತಿತ್ತು. ಆದರೆ ಈ ಸಲವಂತೂ ಹತ್ತು ಹಲವು ಸಮಾರಂಭಗಳಿಗೆ ಹೋಗಿ ಊಟ ಮಾಡುವುದೊಂದನ್ನು ಬಿಟ್ಟು ನಾನೇನು ಆ ಕೈ ಬೆರಳಿಗೆ ಹೆಚ್ಚು ಕೆಲಸ ನೀಡಿರಲಿಲ್ಲ. ಆದರೂ ನೋವು ಬಂತೆಂದರೆ ಅಚ್ಚರಿಯಲ್ಲವೇ? ಬಂದುದೇನೋ ದೀಪಾವಳಿಯ ಅಳಿಯನಂತೆ ಬಂದಾಗಿದೆ. ಹೊರಗೆ ದಬ್ಬುವುದೇ ಅಲ್ಲವೇ ಕಷ್ಟದ ಕೆಲಸ. ಅದಕ್ಕೂ ನನ್ನ ಪ್ರಯತ್ನ ಜಾರಿಯಲ್ಲಿತ್ತು.
ಮೊದಲನೆಯ ದಿನ ನಾಳೆ ಕಡಿಮೆಯಾದೀತೆಂದೂ, ಎರಡನೆಯ ದಿನ ಇನ್ನೊಂದೆರಡು ದಿನಗಳಲ್ಲಿ ಗುಣವಾಗುವುದೆಂದೂ, ಇನ್ನೊಂದೆರಡು ದಿನ ಕಳೆದ ನಂತರ ವಾರದಲ್ಲಿ ಮಾಯವಾಗಿ ಬಿಡುವುದೆಂದೂ ನಂಬಿದೆ. ಆದರೆ ನನ್ನ ನಂಬಿಕೆ ಸುಳ್ಳಾಗಿ ನೋವು ನನ್ನ ಬಹುಕಾಲದ ಆತ್ಮೀಯ ನೆಂಟನಂತೆ ನನ್ನಲ್ಲೇ ಉಳಿದುಕೊಂಡಿತ್ತು.
ನಾನು ನನಗೆ ತಿಳಿದ ಮನೆಯಲ್ಲಿದ್ದ ಹಳೇ ಸ್ಟಾಕ್ ಹೋಮಿಯೋಪತಿ, ಅಲೋಪತಿ, ಕಿತಾಪತಿ ಎಲ್ಲವನ್ನೂ ಮಾಡಿ ಮುಗಿಸಿ ಇನ್ನು ಹೇಳದೇ ಉಪಾಯವಿಲ್ಲ ಎಂದು ನನ್ನ ಪತಿಗೆ ಹೇಳಿದೆ. ಆಗಲೇ ಯಕ್ಷಗಾನದ ಭಾಮಿನೀ ಷಟ್ಪದಿಯ ಹಾಡೊಂದನ್ನು ಗುಣುಗುಣಿಸುತ್ತಿದ್ದ ಮಾತ್ರಾ ಪ್ರಿಯರಾದ ಅವರು ಒಂದೆರಡು ಪೆಯಿನ್ ಕಿಲ್ಲರ್ ತೆಗೆದುಕೋ ಎಂದು ಉಚಿತ ಸಲಹೆ ನೀಡಿ ಡಾಕ್ಟರ್ ಕ್ಲಿನಿಕ್ಕಿನೆಡೆಗೆ ಅವರ ತೋರು ಬೆರಳು ತೋರಿಸಿದರು. ಅಲ್ಲಿನ ಡಾಕ್ಟರ್ ನನ್ನ ಯಾವ ಬೆರಳು, ಎಷ್ಟು ದಿನದಿಂದ ನೋವು ಇಂತಹ ಯಾವುದೇ ಪ್ರಶ್ನೆಗಳನ್ನು ಕೇಳದೆ ಕೇವಲ ನನ್ನ ಮುಖ ದರ್ಶನ ಮಾತ್ರದಿಂದಲೇ ಖಾಯಿಲೆ ತಿಳಿದುಕೊಂಡವರಂತೆ ಕೆಂಬಣ್ಣದ ನಾಲ್ಕು, ಹಳದಿ ಬಣ್ಣದ ಎರಡು ಗುಳಿಗೆ ನೀಡಿ ಕಡಿಮೆಯಾಗುತ್ತದೆ ಹೋಗಿ ಎಂದು ಬಿಲ್ ನೀಡಿದರು. ಅದನ್ನು ನುಂಗಿ ನೀರು ಕುಡಿದೆ. ಊಹೂಂ.. ಏನಾದರೂ ’ನಾ ನಿನ್ನಾ ಬಿಡಲಾರೆ’ ಎಂದು ನೋವು ನನ್ನನ್ನೇ ಅಂಟಿಕೊಂಡಿತ್ತು. ಯಾಕೋ ಮನೆಯ ಹತ್ತಿರದ ಡಾಕ್ಟರು ಕಲಿತದ್ದೇ ಕಡಿಮೆ ಇರಬಹುದು ಹಾಗಾಗಿ ಮದ್ದು ಸರಿಯಾಗಲಿಲ್ಲ ಇನ್ನೊಮ್ಮೆ ಅಲ್ಲಿಗೆ ಹೋಗಬಾರದು ಎಂದು ನಿಶ್ಚಯಿಸಿದೆ.
ಹಾಗೆಂದು ನೋವು ಕಡಿಮೆಯಾಗಬೇಡವೇ? ಈ ಸಮಯದಲ್ಲೇ ಎಂತಹಾ ನಾಸ್ತಿಕನಿಗೂ ದೇವರ ನೆನಪಾಗುವುದು. ಯಾಕೆಂದರೆ ಈ ದೇವರು ಮನುಷ್ಯನಿಗೆ ಮಾತ್ರ ಅಪರೂಪದ ಕೆಲವು ಉಡುಗೊರೆಗಳನ್ನು ನೀಡಿರುತ್ತಾನೆ. ಅದರಲ್ಲಿ ಸ್ನೇಹಿತರೂ ಸೇರುತ್ತಾರೆ ತಾನೇ.. ಹಾಗಾಗಿ ನಾನು ’ಗೆಳೆತನದ ಸುವಿಶಾಲ ಆಲದಡಿ’ಯಲ್ಲಿ ವಿಶ್ರಾಂತಿ ತೆಗೆದುಕೊಳ್ಳಬಯಸಿದೆ.
ಅಂದಿನಿಂದ ನನ್ನ ಇನ್ ಕಮಿಂಗ್ ಮತ್ತು ಔಟ್ ಗೋಯಿಂಗ್ ಕಾಲ್ ಗಳೆರಡೂ ಕೇವಲ ನೋವಿನ ಸುದ್ಧಿಯನ್ನು ೨೪ * ೭ ನ್ಯೂಸ್ ಚಾನೆಲ್ಲುಗಳಂತೆ ಪ್ರಸಾರ ಮಾಡತೊಡಗಿದವು. ಹಗಲಿನ ವೇಳೆ ಇಂಡಿಯಾದ ಒಳಗಿರುವವರು ಮಾತನಾಡಿದರೆ ರಾತ್ರಿಯ ಹೊತ್ತು ಅವರವರ ಫ್ರೀ ಟೈಮ್ ಎಂದು ಅಮೇರಿಕಾ, ಕೆನಡಾ, ಆಷ್ಟ್ರೇಲಿಯಾದಿಂದೆಲ್ಲ ಸಂತಾಪ ಸೂಚಿಸುವವರು ಸಿಕ್ಕಿದರು.
ಹಲವಾರು ಗೆಳತಿಯರು ನನ್ನನ್ನು ನೋಡಲು ಬಂದು ನನಗೆ ಕಾಫಿ ತಿಂಡಿ ಮಾಡುವ ಕೆಲಸ ಹೆಚ್ಚಿಸಿದರೆ ಇನ್ನೂ ಕೆಲವರು ಊಟಕ್ಕೂ ಹಾಜರಾಗಿ ನನ್ನ ಕೈ ಬೆರಳಿನ ಕಾರ್ಯ ಕ್ಷಮತೆಯನ್ನು ಪರಿಶೀಲಿಸಿದರು. ಹಾಗೆಂದು ಯಾರೂ ಸುಮ್ಮನೇ ಹೋಗಲಿಲ್ಲ. ’ಮೈ ಝಂಡು ಬಾಮ್ ಹುಯಿ ಡಾರ್ಲಿಂಗ್ ತೇರೆ ಲಿಯೇ’ ಎಂದು ಹಾಡುತ್ತಾ ಹಲವಾರು ಸಲಹೆ, ಸೂಚನೆ, ಕೆಲವಾರು ಎಚ್ಚರಿಕೆಗಳನ್ನು ನೀಡಿದರು.ಅದರಲ್ಲಿ ಕೆಲವು ನಿಮಗೂ ಉಪಯೋಗವಾಗಬಹುದೆಂದು ಹೇಳುತ್ತಿದ್ದೇನೆ.
ವಿಕ್ಸ್ ವೇಪೋರಬ್ ಹಚ್ಚು ( ಎರಡು ದೊಡ್ಡ ಡಬ್ಬ ಮೊದಲೇ ಮುಗಿಸಿಯಾಗಿತ್ತು)
ಐಸ್ ಪ್ಯಾಕ್ ಹಾಕು ( ಪಕ್ಕದ ಬೆರಳುಗಳು ಜೋಮುಗಟ್ಟಿ ಸಿಡಿಯತೊಡಗಿದವು)
ತಲೆ ದಿಂಬನ್ನು ಕಾಲಿನ ಮೇಲಿಟ್ಟು ಮಲಗು.
ಹರಳೆಣ್ಣೆಗೆ ತೆಂಗಿನ ಎಣ್ಣೆ, ಕಡಲೆ ಎಣ್ಣೆ, ಎಳ್ಳೆಣ್ಣೆ ಸಾಸಿವೆ ಎಣ್ಣೆ ಸೀಮೆ ಎಣ್ಣೆ ಬೆರೆಸಿ ತಲೆಗೆ ಹಾಕು.
ಬಲದ ಕೈಯ ಬೆರಳಾದ ಕಾರಣ ಎಡದ ಕಾಲಿನ ಬೆರಳಿಗೆ ಮದ್ದು ಹಾಕು.
ಧ್ಯಾನ ಮಾಡು.
ನಿನಗೇನೂ ನೋವಿಲ್ಲ ಎಂದು ದಿನಕ್ಕೆ ಹತ್ತು ಸಲ ಹೇಳು.
ರಾಮ ನಾಮ ಬರೆ.
ದಿನಕ್ಕೆ ಇಪ್ಪತ್ತೈದು ಲೋಟ ನೀರು ಕುಡಿ.
ಐವತ್ತು ಬಸ್ಕಿ ತೆಗೆ.
ಯಾವುದಕ್ಕು ಒಮ್ಮೆ ಜಾತಕ ತೋರಿಸು…
ಇವು ಒಂದು ತರಹದ್ದಾದರೆ ಇನ್ನು ಕೆಲವು ನನಗೆ ಇಷ್ಟವಾಗುವಂತವುಗಳು ಇದ್ದವು.
ಗಂಡನ ಹತ್ತಿರ ಅಡುಗೆ ಕೆಲಸ ಮಾಡಲು ಹೇಳು.
ಬೆಡ್ ರೆಸ್ಟ್ ಮಾಡು.
ಶರೀರ ಹೀಟ್ ಆಗಿರಬಹುದು ದಿನಕ್ಕೆ ನಾಲ್ಕು ಐಸ್ ಕ್ರೀಮ್ ತಿನ್ನು.
ಡಾರ್ಕ್ ಚಾಕೋಲೇಟನ್ನು ಕೈ ಬೆರಳಿಗೆ ಮೆತ್ತಿಕೊಂಡು ನಿಧಾನಕ್ಕೆ ತಿನ್ನು.
ವಾತಾವರಣ ಬದಲಾಯಿಸಲು ಎಲ್ಲಾದರು ಟೂರ್ ಹೋಗು..
ಇದರಲ್ಲಿ ಕೆಲವನ್ನು ಆಲಿಸಿ ಇನ್ನೊಂದು ಕಿವಿಯಲ್ಲಿ ದಾಟಿಸಿ, ಇನ್ನು ಕೆಲವನ್ನು ಪಾಲಿಸಿದರೂ ನೋವು ಹಾಗೆಯೇ ಉಳಿದಿತ್ತು.
ಇಂತಿರ್ಪ ಕಾಲದಲ್ಲಿ ನಡೆಯಲು ಕಷ್ಟ ಪಡುತ್ತಾ ಕೋಲೂರಿಕೊಂಡು ನನ್ನನ್ನು ನೋಡಲು ವೆಂಕಜ್ಜಿ ಬಂದರು. ನನ್ನ ಬೆರಳನ್ನು ತಿರುಗಿಸಿ ಮುರುಗಿಸಿ ನೋಡಿ ನನ್ನ ಕೈ ಹಿಡಿದುಕೊಂಡು ತುಂಬಾ ಹೊತ್ತು ಕಣ್ಣು ಮುಚ್ಚಿ ಮಣ ಮಣಗುಟ್ಟಿದರು. ಪತಿರಾಯರಿಗೂ ಇದೇನೋ ಹೊಸ ಬಗೆ ಚಿಕಿತ್ಸೆ ಎಂದು ಕುತೂಹಲ ಹುಟ್ಟಿ ಅವರೂ ಇದನ್ನು ನೋಡಲು ಬಂದರು. ಒಮ್ಮೆಲೇ ಕಣ್ತೆರೆದ ವೆಂಕಜ್ಜಿ ನನ್ನ ಪತಿರಾಯರ ಕಡೆಗೆ ಮರುಕದಿಂದಲೇ ನೋಡಿದರು. ಯಾಕೋ ಅವರ ಈ ನೋಟ ನನ್ನವರಿಗೆ ಗಾಬರಿ ಹುಟ್ಟಿಸಿ ಏನಾಯ್ತಜ್ಜಿ .. ಏನಾದ್ರು ಸೀರಿಯಸ್ ಇದೆಯಾ ಎಂದು ಕೇಳಿದರು.
ಅಜ್ಜಿ ನಿದಾನವಾಗಿ ಇವಳಿಗೆ ಬಂದದ್ದು ’ಸ್ವರ್ಣ ಸಂಧಿ ವ್ಯಾದಿ’ಯಪ್ಪ.ಇದು ರಾಣಿ ಮಹಾರಾಣಿಯರಿಗೆ ಬರುವಂತದ್ದು. ನಿನ್ನ ಪೂರ್ವಜನ್ಮದ ಪುಣ್ಯದಿಂದ ಇಂತಹ ಹೆಂಡತಿಯನ್ನು ಪಡೆದಿದ್ದೀಯ. ಆದರೆ ಹೆದರಬೇಡ.. ಇದನ್ನು ಸುಲಭದಿಂದ ಗುಣ ಪಡಿಸಬಹುದು. ನೋಡು ಈ ಬೆರಳಿಗೊಂದು ಪಚ್ಚೆ ಕಲ್ಲಿನ ಸುತ್ತ ಮುತ್ತು ಕೂರಿಸಿದ ಉಂಗುರವೊಂದನ್ನು ಮಾಡಿಸು. ಎರಡೇ ದಿನದಲ್ಲಿ ನೋವು ಮಾಯ ಎಂದರು. ನಾನು ಕೂಡಲೇ ರ್ರೀ .. ಹಾಗೇ ಕಿವಿಗೆರಡು ಅದೇ ತರದ್ದು ಓಲೆ, ಕುತ್ತಿಗೆಗೊಂದು ನೆಕ್ಲೇಸ್, ಕೈಗೊಂದೆರಡು ಜೊತೆ ಬಳೇನೂ ಮಾಡಿಸಿ. ಇನ್ನು ಅಲ್ಲೆಲ್ಲಾ ನೋವು ಶುರು ಆದ್ರೆ..? prevention is better than cure ಅಲ್ವೇ.. ಅಂದೆ. ಪಕ್ಕದಲ್ಲಿನೆಟ್ಟಗೆ ನಿಂತಿದ್ದ ಇವರು ಹಾಗೇ ಮೂರ್ಚೆ ತಪ್ಪಿ ಬೀಳಬೇಕೇ..!! ಪಕ್ಕನೆ ಹಿಡಿದುಕೊಳ್ಳಲೆಂದು ಇವರ ಬೆನ್ನಿಗೆ ಕೈ ಕೊಟ್ಟೆ ನೋಡಿ.. ಆಗ ಬಲಗೈಯ ತೋರು ಬೆರಳು ಲಟಕ್ಕೆಂದಿತು.
ಅಷ್ಟೇ.. ನೋವೆಲ್ಲಾ ಮಾಯ..!!
*****
Super 🙂 🙂
ಅಯ್ಯಯ್ಯೋ, ಓಲೆ, ನೆಕ್ಲೇಸಿನ ಆಸೆಗೆ ಬಿದ್ದು ಬರುತ್ತಿದ್ದ ಉಂಗುರವನ್ನೂ ಕಳಕೊಂಡ್ರಲ್ಲಾ… ನೋವಂತೂ ಮಾಯವಾಯ್ತಲ್ಲ, ಬಿಡಿ ಒಳ್ಳೇದೇ ಆಯ್ತು 🙂
ಸೊಗಸಾದ ಬರಹ.