ಲೇಖನ

ಆಸ್ಪತ್ರೆಯಲ್ಲಿ ಕಂಡ ದೃಶ್ಯಗಳು: ಶರತ್ ಹೆಚ್.ಕೆ.

ಆಸ್ಪತ್ರೆಯಲ್ಲಿ ಕಂಡ ದೃಶ್ಯಗಳು

ಆಸ್ಪತ್ರೆ ಎಂಬ ಜಗದೊಳಗಿನ ಮರಿಜಗತ್ತಿಗೆ ಇರುವ ಮುಖಗಳು ಹತ್ತು ಹಲವು. ನೋವು-ನಲಿವು, ಮಾನವೀಯ-ಅಮಾನವೀಯ ಬಣ್ಣಗಳು ಅಲ್ಲಿನ ಗೋಡೆಯ ತುಂಬ ಆವರಿಸಿಕೊಂಡಿವೆ. ಆಸ್ಪತ್ರೆಯ ಅಂಗಳದಲ್ಲಿ ನನ್ನ ಕಣ್ಣು ಚಿತ್ರಿಸಿಕೊಂಡ ಕೆಲ ಕಪ್ಪು ಬಿಳುಪಿನ ದೃಶ್ಯಗಳು ಇಲ್ಲಿವೆ.

ದೃಶ್ಯ ೧:
ಜಗತ್ತಿಗೆ ಹೊಸ ಜೀವವೊಂದರ ಆಗಮನವಾಗಿದೆ. ಅದ ಕಂಡು ಅಲ್ಲಿರುವವರ ಮನದಿಂದ ಹರ್ಷದ ಹೊನಲು ಹೊಮ್ಮುತ್ತಿದೆ. ಅಲ್ಲೇ ಸನಿಹದಲ್ಲಿ ಹಿಂದೆಂದೋ ಜಗತ್ತಿಗೆ ಬಂದು, ಹಲವರ ಮನದಲ್ಲಿ ಸಂಭ್ರಮದ ತೇರು ಎಳೆದಿದ್ದ ಜೀವ ಜಗದ ವ್ಯವಹಾರ ಮುಗಿಸಿ, ಆಗ ಸಂಭ್ರಮಿಸಿದ್ದವರ ಎದೆಯಲ್ಲಿ ನೋವಿನ ಪಸೆ ಇರಿಸಿ ಕಾಣದ ಕಣಗಳಾಗಿ ಕಣ್ಮರೆಯಾಗುವ ಕ್ರಿಯೆಗೆ ಅಣಿಯಾಗಿ ನಿಂತಿದೆ.

ದೃಶ್ಯ ೨:
ಆಪರೇಶನ್ ಥಿಯೇಟರ್ ಒಳಗೆ ಜೀವವೊಂದು ಸಾವು-ಬದುಕಿನ ನಡುವೆ ಸೆಣಸುತ್ತಿದೆ. ಆ ಜೀವದ ಬದುಕುವ ಆಸೆಗೆ ಅಲ್ಲಿರುವವರು ನೀರುಣಿಸುತ್ತಿದ್ದಾರೆ. ಹೊರಗೆ ಆತಂಕದ ಮಡುವಿನಲ್ಲಿ ಸಿಲುಕಿರುವ ಮನದ ಒಡೆಯರು ನಿಂತಿದ್ದಾರೆ.

ದೃಶ್ಯ ೩:
ವೈದ್ಯರ ಕೋಣೆಯಲ್ಲಿ ಸೂಟು ಬೂಟು ಹಾಕಿಕೊಂಡು ಕೈಯಲ್ಲೊಂದು ಬ್ಯಾಗ್ ಹಿಡಿದಿರುವ ಇಬ್ಬರು ಕುಳಿತಿದ್ದಾರೆ. ಡಾಕ್ಟರ್‌ಗೆ ತಮ್ಮನ್ನು ತಾವು ಪರಿಚಯಿಸಿಕೊಂಡು ಬ್ಯಾಗ್‌ನಿಂದ ಔಷಧಿ ತೆಗೆದು ತೋರಿಸಿ ವ್ಯವಹಾರ ಕುದುರಿಸುತ್ತಿದ್ದಾರೆ. ವೈದ್ಯರು ಸಮ್ಮತಿಸಿದ್ದಾರೆ. ಅವರು ತಮ್ಮ ಕೆಲಸ ಅಚ್ಚುಕಟ್ಟಾಗಿ ಮುಗಿಸಿ ಮತ್ತದೇ ಗಾಂಭೀರ್ಯದಲ್ಲಿ ಹೊರ ಬರುತ್ತಿದ್ದಾರೆ.

ದೃಶ್ಯ ೪:
ಬಿಲ್ ಕೌಂಟರ್ ಬಳಿ ಏರಿದ ದನಿಯಲ್ಲಿ ಯಾರೋ ಮಾತನಾಡುತ್ತಿದ್ದಾರೆ. ಕಾಸಿಲ್ಲದವನ ಬಳಿ ಕಾಸಿಗಾಗಿ ಪೀಡಿಸುತ್ತಿದ್ದಾರೆ. ಮುಲಾಜನ್ನು ಮೂಲೆಗಟ್ಟಿ ಕಾಸಿಲ್ಲದವನ ವಿರುದ್ಧ ಕಿಡಿಕಾರುತ್ತಿದ್ದಾರೆ. ಅವನ ಕಣ್ಣೀರು ಅಲ್ಲಿ ಬೆಲೆ ಕಳೆದುಕೊಂಡಿದೆ.

ದೃಶ್ಯ ೫:
ಮನುಷ್ಯತ್ವದ ಹಂಗು ಕಳಚಿಟ್ಟ ವೈದ್ಯ ಇನ್ನೂ ಜಗದ ದರ್ಶನ ಪಡೆಯದ ಜೀವವೊಂದರ ಹತ್ಯೆಗೆ ಅಣಿಯಾಗುತ್ತಿದ್ದಾನೆ. ಮಗು ಗಂಡೇ ಆಗಿರಬೇಕೆಂಬ ಜಿದ್ದಿಗೆ ಬಿದ್ದವರು ಆ ಹತ್ಯೆಗೆ ಸುಪಾರಿ ನೀಡುತ್ತಿದ್ದಾರೆ. ಅವನು ಹಾಗು ಅವರ ನಡುವೆ ಗುಪ್ತ ಮಾತುಕತೆ ನಡೆಯುತ್ತಿರುವ ಕೋಣೆಯ ಬಾಗಿಲ ಮೇಲೆ ’ಲಿಂಗ ಪತ್ತೆ ಮಾಡಲಾಗುವುದಿಲ್ಲ’ ಎಂಬ ಬರಹವಿದೆ.

ದೃಶ್ಯ ೬:
ದೇಹವೊಂದು ಜೀವದ ಹಂಗು ತೊರೆದಿದೆ. ವೈದ್ಯರ ನಿರ್ಲಕ್ಷ್ಯವೇ ಇದಕ್ಕೆ ಕಾರಣವೆಂಬ ಆಕ್ರೋಶದ ದನಿ ಅಲ್ಲಿ ಕೇಳಿ ಬರುತ್ತಿದೆ. ವೈದ್ಯರ ವಿರುದ್ಧ ಘೋಷಣೆಗಳು ಮೊಳಗುತ್ತಿವೆ. ಅಲ್ಲಿಗೆ ಕ್ಯಾಮೆರಾಗಳೂ ಬಂದಿವೆ. ಘೋಷಣೆ ಕೂಗುತ್ತಿರುವವರ ಕಡೆಗೆ ಅವು ಫೋಕಸ್ ಆಗುತ್ತಿವೆ. ಅಲ್ಲೀಗ ಕಾವೇರಿದ ವಾತಾವರಣ. ಹೆಣ ಮುಂದಿಟ್ಟುಕೊಂಡು ಕೆಲವರು ಆರ್ಭಟಿಸುತ್ತಿದ್ದಾರೆ. ರಾಜಿ ಮಾತುಕತೆಗೆ ವೇದಿಕೆ ಸಿದ್ಧಗೊಂಡಿದೆ. ತಮ್ಮ ಉದ್ದೇಶ ಈಡೇರಿದ ಕಾರಣ ಅವರು ಅಲ್ಲಿಂದ ಕದಲುತ್ತಿದ್ದಾರೆ.
-ಎಚ್.ಕೆ.ಶರತ್

ಕನ್ನಡದ ಬರಹಗಳನ್ನು ಹಂಚಿ ಹರಡಿ

Leave a Reply

Your email address will not be published. Required fields are marked *