ಹಿಂತಿರುಗಿ ನೋಡಿದಾಗ: ರುಕ್ಮಿಣಿಮಾಲಾ

೧೯೭೪ನೇ ಇಸವಿಯಲ್ಲಿ ದಕ್ಷಿಣಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಮಿತ್ತನಡ್ಕದಲ್ಲಿರುವ ಸರ್ಕಾರೀ ಪ್ರಾಥಮಿಕ ಶಾಲೆಗೆ ಒಂದನೇ ತರಗತಿಗೆ ಸೇರಿದಾಗ ನನ್ನ ವಯಸ್ಸು ಐದು. ಮನೆಯಿಂದ ಶಾಲೆಗೆ ಒಂದು ಮೈಲಿ ನಡೆದೇ ಹೋಗುತ್ತಿದ್ದುದು. ನಮಗೆ ಮಹಮ್ಮದ್ ಎಂಬ ಶಿಕ್ಷಕರು ಅ ಆ ಇ.. ..  ಕನ್ನಡ ಅಕ್ಷರ ಮಾಲೆ ಕಲಿಸಿದವರು. ಅವರ ಮೇಜಿನಮೇಲೆ ನಾಗರಬೆತ್ತ ಸದಾ ಇರುತ್ತಿತ್ತು. ಒಮ್ಮೆಯೂ ನಾನು ಅದರ ಪೆಟ್ಟಿನ ರುಚಿ ಪಡೆದವಳಲ್ಲ! ಆದರೆ ಏಕೋ ಗೊತ್ತಿಲ್ಲ ಆ ಬೆತ್ತದಮೇಲೆ ನನಗೆ ಬಲು ಕೋಪವಿತ್ತು. ನಮ್ಮ ಮೇಸ್ಟರು ಮದ್ಯಾಹ್ನ ಊಟವಾಗಿ ಖುರ್ಚಿಯಲ್ಲಿ ಕುಳಿತು ಕಾಲು ಮೇಜಿನ ಮೇಲೆ ಇಟ್ಟು ನಿದ್ದೆ ಮಾಡುತ್ತಿದ್ದರು. ಆಗ ಒಮ್ಮೆ ಆ ಬೆತ್ತವನ್ನು ಮುರಿದು ಹೊರ ಬೀಸಾಕಿದ್ದೆ. ಅವರು ಎಚ್ಚರಗೊಂಡಮೇಲೆ ಯಾರು ಬೆತ್ತ ಮುರಿದದ್ದು ಎಂದಾಗ ಯಾರೂ ನನ್ನ ಹೆಸರು ಹೇಳಲಿಲ್ಲ. ಎಲ್ಲರಿಗೂ ಬೆತ್ತದಮೇಲೆ ವೈರವಿತ್ತು. ಪೊದೆಯಿಂದ ಬೆತ್ತ ಮುರಿದು ತಾ ಎಂದು ನನ್ನನ್ನೇ ಕಳುಹಿಸಿದರು! ನಮಗೆ ಸ್ಲೇಟಿನಲ್ಲಿ ಒಂದು ಬದಿ ಅ ಇನ್ನೊಂದು ಬದಿ ಆ ಎಂದು ದೊಡ್ದದಾಗಿ ಬರೆದುಕೊಟ್ಟು ಅದರ ಮೇಲೆ ಬರೆಯಿರಿ ಎಂದು ಕೊಟ್ಟು ಅವರು ನಿದ್ದೆ ಮಾಡುತ್ತಿದ್ದರು.  ಅವರು ನಿದ್ದೆ ಮುಗಿಸಿ ಏಳುವಾಗ ಸ್ಲೇಟಿನಲ್ಲಿ ಜಾಗವೇ ಇಲ್ಲದಂತೆ ಅ ಆ ಎಂಬುದು ಅಷ್ಟು ದಪ್ಪವಾಗಿ ತಿದ್ದುತ್ತಿದ್ದೆವು!  

೨ನೇ ಈಯತ್ತೆಗೆ ನಮಗೆ ಆಚಾರಿ ಮಾಶ್ಟ್ರು ಎಂದೇ ಹೆಸರುವಾಸಿಯಾದ ಜನಾರ್ಧನ. ಅವರನ್ನು ಕಂಡರೆ ಎಲ್ಲ ಮಕ್ಕಳಿಗೆ ಬಲು ಪ್ರೀತಿ. ಅವರು ಅಷ್ಟೇ ಮಕ್ಕಳಿಗೆ ಹೊಡೆಯುತ್ತಿರಲಿಲ್ಲ. ಕಥೆ ಹೇಳುತ್ತಲೇ ಪಾಟದ ಕಡೆಗೂ ನಮ್ಮ ಗಮನ ಸೆಳೆಯುತ್ತಿದ್ದರು. ಅವರೊಂದಿಗೆ ನಮಗೆ ಎಷ್ಟು ಸಲಿಗೆ ಇತ್ತೆಂದರೆ ಅವರ ಮೇಜಿನ ಮೇಲೆ ಹತ್ತಿ ಕೂರುತ್ತಿದ್ದೆವು. ಅಡಿಗೆ ನುಗ್ಗಿ ಅವರ ಕಾಲಿಗೆ ಕಚಗುಳಿ ಇಡುತ್ತಿದ್ದೆವು. ಅವರ ಡ್ರಾಯರಿಗೇ ಕೈಹಾಕುತ್ತಿದ್ದೆವು. ಆದರೂ ಅವರು ನಮ್ಮನ್ನು ಬೈಯುತ್ತಿರಲಿಲ್ಲ.  ೨ ಪಾಸಾಗಿ ೩ನೇ ತರಗತಿಗೆ ಬಂದಾಗ ಏನಾಶ್ಚರ್ಯ? ಅವರೂ ಪಾಸಾಗಿ ನಮ್ಮ ತರಗತಿಗೇ ಬರಬೇಕೆ! ಆಗ ನಮಗಾದ ಆನಂದ ಅಷ್ಟಿಷ್ಟಲ್ಲ. ಇದರಿಂದ ನನ್ನ ತಂಗಿಗೆ ಬಲು ದೊಡ್ಡ ನಷ್ಟವಾಯಿತು.  ಅವಳು ಮೂರನೇ ತರಗತಿಗೆ ಬಂದಾಗ ಅವರು ಪುನಃ ೨ನೇ ತರಗತಿಗೇ ಹಿಂಬಡ್ತಿ ಪಡೆದಿದ್ದರು. 

ನಾಲ್ಕನೇ ತರಗತಿಯಲ್ಲಿ ನಾರಾಯಣ ಭಟ್ಟರು ನಮಗೆ ಕಲಿಸುತ್ತಿದ್ದುದು. ಅವರು ಪ್ರಶ್ನೆ ಕೇಳಿದಾಗ ಉತ್ತರಿಸದಿದ್ದರೆ ಪೂಟ್‌ಕೋಲಿನಿಂದ ಕೈಬೆರಳ ಗಂಟಿಗೆ ಹೊಡೆಯುತ್ತಿದ್ದರು. ಕೆಲವು ಹುಡುಗರಿಗೆ ಸರೀ ಪೆಟ್ಟು ಬೀಳುತ್ತಿತ್ತು. ಅವರಿಗೆ ಫೂಟ್ಕೋಲು ಕೊಡಲು ತಾ ಮುಂದು ನಾಮುಂದು ಎಂಬ ಪೈಪೋಟಿ ನಮಗೆ. ಏಕೆಂದರೆ ಅವರು ಕೊಡುವ ಪೆಟ್ಟಿಗೆ ಫೂಟ್‌ಕೋಲು ಎರಡು ತುಂಡಾಗುತ್ತಿತ್ತು. ಆಗ ಹೊಸದು ತೆಗೆದುಕೊಡುತ್ತಿದ್ದರು! ಈಗ ಯೋಚಿಸಿದಾಗ ಪಾಪ ಆ ಹುಡುಗರ ಮನಸ್ಥಿತಿ ಆಗ ಹೇಗಿದ್ದಿರಬಹುದು ಎಂದು ಪಶ್ಚಾತ್ತಾಪವಾಗುತ್ತದೆ. ನಮಗೋ ಹೊಸ ಫೂಟ್ಕೋಲು ಪಡೆಯುವ ಸಂಭ್ರಮವಷ್ಟೇ ಆಗ ಇರುತ್ತಿದ್ದುದು. 

ಐದನೇ ತರಗತಿಗೆ ಬಂದಾಗ ಹೊಸದಾಗಿ ಇಂಗ್ಲೀಷ್ ಅಕ್ಷರ ಕಲಿಯುವ ಸಂಭ್ರಮ. ಬಳಪದಿಂದ ಪೆನ್ನಿಗೆ ಭಡ್ತಿ. ಆಹಾ ಶಾಯಿಪೆನ್ನು ಹಿಡಿದು ಬರೆಯುವ ಉತ್ಸಾಹ. ಶಾಯಿಪೆನ್ನಿನ ಮೇಲೆ ಅದೇನೋ ಒಂದು ತರಹದ ಪ್ರೀತಿ. ಅದನ್ನು ಹಿಡಿದಾಗ ಏನೋ ಸಾಧಿಸಿದಂಥ ಭಾವ. ಬರೆಯುವಾಗ ಬೆರಳಿಗೆ ಶಾಯಿ ಆದರೆ ಇನ್ನೂ ಖುಷಿ.  ಲೆಕ್ಕ ಪಾಟಕ್ಕೆ ಮುಖ್ಯೋಪಾಧ್ಯಾಯರಾದ ಸದಾಶಿವ ಭಟ್ಟರು. ಅವರ ಕೈಯಲ್ಲಿ ಸದಾ ಇಲೆಕ್ಟ್ರಿಕ್ ವಯರ್ ಗರಗರನೆ ತಿರುಗುತ್ತಲೇ ಇರುತ್ತಿತ್ತು. ಮಗ್ಗಿಯನ್ನು ಎಷ್ಟು ಉರು ಹೊಡೆದರೂ ಅವರು ಕೇಳುವಾಗ ಹೊರಗೇ ಬರುತ್ತಿರಲಿಲ್ಲ. ವಯರ್ ಮೇಲೆಯೇ ಕಣ್ಣು. ಅವರೋ ಬೆಂಚಿನಿಂದ ಸಾಲಾಗಿ ಕೇಳದೆ ಒಬ್ಬೊಬ್ಬರಿಗೆ ಒಂದೊಂದು ಅಲ್ಲಲ್ಲಿಂದ ಕೇಳುತ್ತಿದ್ದರು. ಎಷ್ಟೋಸಲ ವಯರಿನ ಪೆಟ್ಟಿನ ಉರಿ ಅನುಭವಿಸಿದ್ದೆ. 

ಆರನೇ ತರಗತಿಗೆ ಬಂದಾಗ ಹಿಂದಿ ಕಲಿಯುವ ಸಂಭ್ರಮ. ತಿರುಮಲೇಶ್ವರಭಟ್, ಸುಬ್ರಮಣ್ಯ ಭಟ್ ಮಾಸ್ತರರೆಂದರೆ ಅಚ್ಚುಮೆಚ್ಚು. ಅವರಲ್ಲಿದ್ದ ಕೆಂಪುಶಾಯಿ ಪೆನ್ನು ಪಡೆದು ಕೈಗೆ ಶಾಯಿ ಮೆತ್ತಿಕೊಳ್ಳುವುದೆಂದರೆ ನನಗೆ ಬಲು ಇಷ್ಟವಿತ್ತು. ಕೆಂಪುಶಾಯಿ ಪೆನ್ನು ಕೈಯಲ್ಲಿ ಹಿಡಿದರೆ ಅದೇನೋ ಸಂಭ್ರಮ. ದೊಡ್ದ ಸಂಪತ್ತು ಲಭಿಸಿದಂತ ಭಾವ. ಅದರಿಂದ ರೈಟ್ ಮಾರ್ಕ್ ಹಾಕಿದರೆ ಆಗುವ ಸಂತೋಷಕ್ಕೆ ಎಣೆಯಿಲ್ಲ! 

ಆಗಸ್ಟ್ ೧೫ರಂದು ಸ್ವಾತಂತ್ರ್ಯ ದಿನದಂದು ಧ್ವಜ ಹಿಡಿದು ಒಂದು ಮೈಲಿ ಮೆರವಣಿಗೆ ಹೋಗುವ, ಶಕ್ತಿಮೀರಿ ಜಯಕಾರ ಹಾಕುತ್ತ ಭಾಗಿಯಾಗುವ ಘಳಿಗೆ ಬಲು ಹಿತಕರ. ಮತ್ತೆ ತಿರುಗಿ ಬಂದು ಶಾಲೆಯಲ್ಲಿ ಸೇರಿ ಒಂದು ಚಾಕಲೆಟ್ ಪಡೆಯುವ ಸಂದರ್ಭವನ್ನು ಎಂದೂ ತಪ್ಪಿಸಿಕೊಳ್ಳುತ್ತಿರಲಿಲ್ಲ! ಅದನ್ನು ತಿನ್ನುವ ಸಂತೋಷಕ್ಕೆ ಎಣೆಯುಂಟೆ? 

ಏಳನೇ ತರಗತಿಗೆ ಬಂದಾಗ ಇಡೀ ಶಾಲೆಗೇ ನಾವೇ ಹಿರಿಯರು ಎಂಬ ಗತ್ತು ತಂತಾನೇ ಆವರಿಸುವ ಘಳಿಗೆ. ಕಿರಿಯರನ್ನು ನೋಡುವಾಗ ಇವರು ನಾವು ಹೇಳಿದಂತೆ ಕೇಳಬೇಕು ಎನ್ನುವ ಭ್ರಮೆ. ಆಗ ನಮ್ಮ ಶಾಲೆಯಲ್ಲಿ ಮಧ್ಯಾಹ್ನಕ್ಕೆ ಬಿಸಿಬಿಸಿ ಉಪ್ಪಿಟ್ಟು ಕೊಡುವ ಪದ್ಧತಿ ಇತ್ತು. ಉಪ್ಪಿಟ್ಟು ತಯಾರಿಸಲು ಈಗಿನಂತೆ ಅಡುಗೆಯವರ ನೇಮಕ ಇಲ್ಲದ ಕಾಲ. ಆರು ಮತ್ತು ಏಳನೇ ತರಗತಿಯ ಮಕ್ಕಳು ಸೇರಿ ಉಪ್ಪಿಟ್ಟು ತಯಾರಿಸಬೇಕಿತ್ತು. ೪-೫ ಮಕ್ಕಳ ಒಂದು ಗುಂಪು ಮಾಡಿ ಸರದಿ ಪ್ರಕಾರ ಉಪ್ಪಿಟ್ಟು ತಯಾರಿಸುವ ಪಾಳಿ ಬೀಳುತ್ತಿತ್ತು. ಅಂಗಡಿಯಿಂದ ೧೦ಪೈಸೆಗೆ ಪ್ರತೀದಿನ ಉಪ್ಪು ನಾವೇ ತರಬೇಕಿತ್ತು. ಅಬ್ಬ ಉಪ್ಪಿಟ್ಟು ತಯಾರಿಸುವ ಕೆಲಸ ಅಂದರೆ ಅದೇನೋ ದೊಡ್ಡ ಯಜ್ಞ ಮಾಡಲೂ ಇಷ್ಟು ಕಷ್ಟಪಡಬೇಕಿಲ್ಲವೇನೋ ಎಂಬಂತಾಗುತ್ತಿತ್ತು. ಸೌದೆ ಒಲೆಗೆ ಉರಿ ಹಾಕಲೇ ಕನಿಷ್ಟ ಒಂದು ಗಂಟೆ ಹಿಡಿಯುತ್ತಿತ್ತು! ಒಂದಿಗೇ ಕಣ್ಣಲ್ಲಿ ಧಾರಾಕಾರ ನೀರು! ದೊಡ್ಡ ಬಾಣಲೆಯಲ್ಲಿ ನೀರಿಟ್ಟು ಅಂತೂ ಉಪ್ಪಿಟ್ಟು ತಯಾರಿ ಆಗುವಾಗ ಊಟಕ್ಕೆ ಬಿಡುವ ಗಂಟೆ ಕೇಳಿಬರುತ್ತಿತ್ತು. ೧೨.೩೦ಕ್ಕೆ ಅದನ್ನು ಎಲ್ಲ ಮಕ್ಕಳಿಗೂ ಬಡಿಸುವ ಕೆಲಸವೂ ನಮ್ಮದೇ. ನಾವು ಉಪ್ಪಿಟ್ಟು ಮಾಡಿದ ದಿನ ಮಾತ್ರ ಉಪ್ಪಿಟ್ಟು ತಿನ್ನುತ್ತಿದ್ದುದು. ಈಗ ಯೋಚಿಸಿದರೆ ಅಯ್ಯೋ ಆಗಿನ ಪರಿಸ್ಥಿತಿಯೇ ಎನಿಸುತ್ತದೆ. ಒಂದನೇ ತರಗತಿಯಿಂದ ಸುರುವಾಗಿ ಸಾಲಾಗಿ ದಿನಪತ್ರಿಕೆ ತುಂಡು ಹಿಡಿದು ಸರತಿ ಸಾಲಿನಲ್ಲಿ ನಿಲ್ಲಬೇಕು. ಪತ್ರಿಕೆ ಮನೆಯಿಂದ ತರಲು ಮರೆತರೆ ನೋಟ್ ಪುಸ್ತಕದ ಹಾಳೆ ಹರಿದು ಇಟ್ಟುಕೊಳ್ಳುವ ಅಭ್ಯಾಸವೂ ಕೆಲವರಿಗೆ ಇತ್ತು! ಆ ಕಾಗದದಲ್ಲಿ ಬಿಸಿ ಉಪ್ಪಿಟ್ಟು ಹಾಕುವಾಗ ಹರಿಯದೇ ಅದರಿಂದ ಉಪ್ಪಿಟ್ಟು ತಿನ್ನುವುದು ಎಂದರೆ ಸಾಹಸದ ಕೆಲಸವೇ ಸರಿ. ಎಷ್ಟು ಸಂತೋಷದಿಂದ ಉಪ್ಪಿಟ್ಟು ತಿನ್ನುತ್ತಿದ್ದೆವು. (ಈಗ ಇದನ್ನು ನೆನೆಸಿಕೊಂಡರೆ ಈಗಿನ ಮಕ್ಕಳು ಹೆಚ್ಚು ಭಾಗ್ಯವಂತರು ಎನಿಸುತ್ತದೆ. ಸರ್ಕಾರದ ವತಿಯಿಂದ ತಟ್ಟೆಯಲ್ಲಿ ಬಿಸಿ ಬಿಸಿ ಊಟ.) ಮತ್ತೆ ಉಪ್ಪಿಟ್ಟು ಮಾಡಿದ ಮಸಿಮೆತ್ತಿದ ಬಾಣಲೆಯನ್ನು ತಿಕ್ಕಿ ತೊಳೆಯುವವರ ಸ್ಥಿತಿ ಈಗ ನೆನೆಸಿಕೊಂಡರೆ ವ್ಯಥೆ ಎನಿಸುತ್ತದೆ. ಬಾವಿಯಿಂದ ನೀರು ಸೇದಿ ಬೂದಿ ಉಪಯೋಗಿಸಿ ಪಾತ್ರೆ ತೊಳೆಯಬೇಕಿತ್ತು. ಆ ಕೆಲಸ ಏಳನೇ ತರಗತಿಯ ಗಾತ್ರದಲ್ಲಿ ಎದ್ದು ಕಾಣುವ ಬಾಲಕರ ಮೇಲೆ ಬೀಳುತ್ತಿತ್ತು. 

ನಮ್ಮ ನಮ್ಮ ತರಗತಿಗಳನ್ನು ನಾವೇ ಗುಡಿಸಿಕೊಳ್ಳುತ್ತಿದ್ದೆವು. ಈಗ ಆ ಕೆಲಸ ಮಾಡಲು ವಿದ್ಯಾರ್ಥಿಗಳಿಗೆ ಅವಮಾನವೆನಿಸುತ್ತದೆ. ನಾವಂತೂ ಬಲು ಖುಷಿಯಿಂದ ಆ ಕೆಲಸ ಮಾಡುತ್ತಿದ್ದೆವು. ಅಂತೂ ಏಳು ಪಾಸಾಗಿ ಆ ಶಾಲೆ ಬಿಡುವಾಗ ಬಲುದುಃಖ. 

ಸರ್ಕಾರಿ ಜ್ಯೂನಿಯರ್ ಕಾಲೇಜು ಕನ್ಯಾನ. ಇಲ್ಲಿ ೮ರಿಂದ ಪಿಯು.ಸಿ ವರೆಗೆ ವಿದ್ಯಾಭಾಸ ಮಾಡಿದೆ.   ಎಂಟನೇ ತರಗತಿಗೆ ಸೇರ್ಪಡೆ. ಮನೆಯಿಂದ ಎರಡುಮೈಲಿ ದೂರ. ನಡೆದೇ ಹೋಗುತ್ತಿದ್ದುದು. (ಈಗ ಯಾವ ಮಕ್ಕಳೂ ನಡೆದು ಹೋಗಲಿಕ್ಕಿಲ್ಲ. ಸಾರಿಗೆ ಸೌಕರ್ಯವೂ, ಪೋಷಕರ ಆದಾಯ ಸೌಲಭ್ಯವೂ, ಮನೆಯಲ್ಲಿ ಸೀಮಿತ ಮಕ್ಕಳ ಸಂಖ್ಯೆಯೂ ಇರುವ ಕಾರಣದಿಂದ ನಡೆದು ಶಾಲೆಗೆ ಹೋಗುವ ಪರಿಸ್ಥಿತಿ ಯಾರಿಗೂ ಬರುವುದಿಲ್ಲ) ಹೊಸ ಶಾಲೆ, ಅಪರಿಚಿತ ಅಧ್ಯಾಪಕರು  ಏನೋ ಆತಂಕ. ಅಭ್ಯಾಸವಾಗುತ್ತ ಅದೇ ಖುಷಿ. 

ಲೆಕ್ಕ ಪಾಟಕ್ಕೆ ಅಹಮ್ಮದ್ ಮಾಸ್ತರರು. ನಮ್ಮ ಕ್ಲಾಸಿನಲ್ಲಿ ಸುರೇಶ ಎಂಬ ಹುಡುಗ ಕ್ಲಿಷ್ಟಕರ ಗಣಿತ ಸಮಸ್ಯೆಯನ್ನು ಪರಿಹರಿಸುವುದರಲ್ಲಿ ನಿಷ್ಣಾತ. ತರಗತಿಗೇ ಮೊದಲಿಗನಾಗಿ ಜಾಣನೆಂಬ ಬಿರುದು ಪಡೆದಿದ್ದ. ನಮ್ಮ ಅಹಮ್ಮದ್ ಮಾಸ್ತರರಿಗೆ ಬಿಡಿಸಲಾಗದ ಲೆಕ್ಕವನ್ನು ಸುರೇಶ ಬಿಡಿಸುತ್ತಿದ್ದ. ಅಹಮ್ಮದ್ ಮಾಸ್ತರರು ಲೆಕ್ಕ ಸಮಸ್ಯೆಗಳನ್ನು ಫಲಕದ ಎದುರು ಬರೆದು ಅದನ್ನು ವಿವರಿಸುವ ಸಂದರ್ಭದಲ್ಲಿ ಕೆಲವೊಮ್ಮೆ ಅವರೇ ತಬ್ಬಿಬ್ಬಾಗುವುದು ಇತ್ತು. ಆಗ ಅವರನ್ನು ನೋಡುವುದೇ ನನಗೆ ಸೋಜಿಗ. ಅವರ ಕೈ ಬೆವರಿ ಆಗಾಗ ಒರೆಸಿಕೊಳ್ಳುತ್ತಿದ್ದರು! ಮತ್ತೆ ಸುರೇಶ ನೀನೇ ಇದನ್ನು ಮಾಡು ಎಂದು ನುಡಿದು ಸೀಮೆಸುಣ್ಣ ಅವನ ಕೈಗಿಡುತ್ತಿದ್ದರು. ಅವರು ಕುರ್ಚಿಯಲ್ಲಿ ಕೂತು ಮುಖದ ಬೆವರು  ಒರೆಸಿಕೊಳ್ಳುತ್ತಿದ್ದರು! 

ಕನ್ನಡಕ್ಕೆ ಕನ್ನಡ ಪಂಡಿತರೆಂದೇ ಪ್ರಸಿದ್ಧಿಹೊಂದಿದ ಶಂಕರನಾರಾಯಣ ಭಟ್ಟರು. ಕನ್ನಡ ಪಾಟ ಸೊಗಸಾಗಿ ಮಾಡುತ್ತಿದ್ದರು. ಕೋಪಿ ಬರೆದುಕೊಂಡು ಹೋಗದೆ ಇದ್ದರೂ “ದೇವರು ಒಳ್ಳೆಯದು ಮಾಡಲಿ ಎನ್ನುತ್ತಿದ್ದರು! ಪ್ರಶ್ನೆಗೆ ಉತ್ತರಿಸದಿದ್ದರೆ “ಬರಬರುತ್ತ ರಾಯನ ಕುದುರೆ..” ಎಂದು ನುಡಿದು ಅಲ್ಲಿಗೆ ನಿಲ್ಲಿಸುತ್ತಿದ್ದರು. ಮಾರನೇ ದಿನದಿಂದ ಹಾಗೆ ಅವರಿಂದ ಹೇಳಿಸಿಕೊಳ್ಳಲು ಯಾರೂ ತಯಾರಿರುತ್ತಿರಲಿಲ್ಲ! 

ಡ್ರಾಯಿಂಗ್ ಪಾಟಕ್ಕೆ ಪದ್ಮನಾಭ ಮಾಸ್ತರರು. ನನಗೋ ಡ್ರಾಯಿಂಗ್ ಅಂದರೇ ತಲೆನೋವು. ಅಂತೂ ಹೇಗೋ ೩ ವರ್ಷ ಅವರು ಹೇಳಿದ ಚಿತ್ರ ಸೊಟ್ಟದಾಗಿ ಬಿಡಿಸಿ ಬಣ್ಣ ತುಂಬಿದ್ದೆ.  

ನಾನು ಹೈಸ್ಕೂಲಿನಲ್ಲಿದ್ದಾಗ ನನ್ನ ಅಕ್ಕ ಕಾಲೇಜಿನಲ್ಲಿದ್ದಳು. ಕಾಲೇಜಿಗೆ ಸಮವಸ್ತ್ರ ಇರಲಿಲ್ಲ. ನಮಗೆ ಇತ್ತು. ಒಂದು ದಿನ ಪಿಟಿ ಮಾಸ್ತರರು ನನ್ನಕ್ಕನನ್ನು ನಿಲ್ಲಿಸಿ ಸಮವಸ್ತ್ರ ಧರಿಸಿಲ್ಲ ಎಂದು ಬೈದರಂತೆ. ಅವಳು ವಿವರಿಸಿ ಹೇಳಿದಾಗ ಅವರು ಬೇಸ್ತು ಬಿದ್ದರಂತೆ. ನಾನು ನಮ್ಮಕ್ಕ ನೋಡಲು ಒಂದೇ ತರಹ ಎಂದು ಅವರೆಲ್ಲರ ಅಂಭೋಣ. ಆದರೆ ನಮಗೆ ಯಾವತ್ತೂ ಹಾಗೆ ಕಾಣಿಸಿರಲಿಲ್ಲ! ಅವಳನ್ನು ನಾನೆಂದು ತಿಳಿದ ಪಿಟಿ ಮಾಸ್ತರರಿಂದ ಬೈಗಳು ತಿಂದಿದ್ದಳು! ನಾನು ಆಟದಲ್ಲಿ ಯಾವಾಗಲೂ ಮುಂದೆ. ಅದು ಯಾವ ಆಟ ಆದರೂ ಸರಿಯೇ. ನೀಲಿ ಹಳದಿ ಕೆಂಪು ಬಿಳಿ ಅಂತ ನಾಲ್ಕು ಗುಂಪು ಮಾಡುತ್ತಿದ್ದರು. ಎಲ್ಲ ಗುಂಪು ಮುಖ್ಯಸ್ಥರಿಗೆ ನನ್ನನ್ನು ಸೇರಿಸಿಕೊಳ್ಳಲು ಪೈಪೋಟಿ. ನನ್ನ ತಂಗಿ ಹಾಗೂ ನಾನು ಬೇರೆ ಬೇರೆ ಗುಂಪಲ್ಲಿರುತ್ತಿದ್ದೆವು. ಆಟವಾಡುವಾಗ ನಮ್ಮೊಳಗೇ ಸ್ಪರ್ಧೆ. ಯಾವತ್ತೂ ನಾನು ಅವಳಿಗೆ  ಆಟ ಬಿಟ್ಟುಕೊಟ್ಟಿಲ್ಲ. ಆಗ ಎಲ್ಲರೂ ನನ್ನ ತಂಗಿಗೆ ಅನುಕಂಪ ತೋರಿಸುತ್ತಿದ್ದರು. 

ಅಂತೂ ಹತ್ತು ಪಾಸಾಯಿತು. (ಒಮ್ಮೆ ಆಂಗ್ಲ ವೀಷಯದಲ್ಲಿ ಡುಮ್ಕಿ ಹೊಡೆದು, ಮತ್ತೆ ಬರೆದು ಪಾಸಾಗಿದ್ದು) ಅದೇ ಪ್ರೌಢಶಾಲೆಗೆ ಹೊಂದಿಕೊಂಡೇ ಇರುವ ಜೂನಿಯರ್ ಕಾಲೇಜು ಮೆಟ್ಟಲು ಹತ್ತಿದೆ. ಪಿಯುಸಿಗೆ ಬಂದಾಗ ಕನ್ನಡ ಮಾಧ್ಯಮದಿಂದ ಇಂಗ್ಲೀಷ್ ಮಾಧ್ಯಮಕ್ಕೆ ಭಡ್ತಿ. ಉಪನ್ಯಾಸಕರು ನಮ್ಮ ಕಷ್ಟ ನೋಡಲಾರದೆ ಕನ್ನಡದಲ್ಲೂ ಪಾಟ ವಿವರಿಸಿ ನಮ್ಮ ತಲೆಗೆ ತುಂಬುವಲ್ಲಿ ಸಫಲರಾದರು.  ಕಲಾವಿಭಾಗದಲ್ಲಿ ಕೇವಲ ಹತ್ತು ಜನ ಹುಡುಗರು, ನಾವು ಸುಮಾರು ೨೫ ಮಂದಿ ಹುಡುಗಿಯರು. ನಮ್ಮದೇ ರಾಜ್ಯಭಾರ. ಅವರಿಗೆಲ್ಲ ನಾನೇ ನಾಯಕಿ. ದಿನದಲ್ಲಿ ಯಾರಾದರೂ ಉಪನ್ಯಾಸಕರು ಬಾರದೆ ಇದ್ದ ದಿನ ಹುಡುಗರೆಲ್ಲ ತರಗತಿಯಿಂದ ಹೊರ ನಡೆಯುತ್ತಿದ್ದರು. ನಾವು ಮಾಡದ ಗಲಾಟೆ ಇಲ್ಲ. ಆಗ ಪಾಟ ಮಾಡುವ ಸರದಿ ನನ್ನದು. ನಾನು ಬೋರ್ಡ್ ಎದುರು ನಿಂತು ನಮ್ಮ ಪ್ರೌಢ ಶಾಲೆಯ ಡ್ರಾಯಿಂಗ್ ಮಾಸ್ತರರು ಮಾಡುವಂತೆಯೇ ಅವರನ್ನು ಅಣಕಿಸುತ್ತ ಪಾಟ ಸುರು ಮಾಡುತ್ತಿದ್ದೆ. ವಕ್ರವಕ್ರವಾಗಿ ಗೆರೆ ಎಳೆದು (ಚಿತ್ರ ಬಿಡಿಸುವ ವಿಷಯದಲ್ಲಿ ಅವರ ಹಾಗೆಯೇ ಅಣಕಿಸಲು ನನ್ನಿಂದ ಸಾಧ್ಯವಿರುತ್ತಿರಲಿಲ್ಲ!) ನೋಡಿ ಹೀಗೆ ಚಿತ್ರ ಬಿಡಿಸಿರಿ ಎಂದು ಕನ್ನಡಕದ ಸೆರೆಯಿಂದ ನೋಡುವಂತೆ ಅಭಿನಯಿಸುತ್ತಿದ್ದೆ. ಮತ್ತು ಅವರು ಚಿತ್ರ ಬಿಡಿಸುತ್ತಿರುವಾಗ ನಮ್ಮ ಮಾತಿನ ಸದ್ದಾದರೆ ಏನದು ರಾಮಾಯಣದಲ್ಲಿ ಪಿಟ್ಕಾಯಣ ಎಂದು ಹಿಂತಿರುಗಿ ಕನ್ನಡಕ ಜಾರಿಸಿ ನಮ್ಮನ್ನು ನೋಡುತ್ತಿದ್ದರು. ನಾನೂ ಹಾಗೆಯೇ ಹೇಳುತ್ತಿದ್ದೆ. ಆಗ ನನ್ನನ್ನು ನೋಡಿ ಗೆಳತಿಯರೆಲ್ಲ ಬಿದ್ದುಬಿದ್ದು ನಗುತ್ತಿದ್ದರು. ಹೀಗೆ ಒಮ್ಮೆ ನಗು ಸ್ಫೋಟಗೊಂಡಾಗ ಆದ ಗಲಾಟೆಯಿಂದ ಪಕ್ಕದ ತರಗತಿಯಲ್ಲಿ ಪಾಟ ಮಾಡುತ್ತಿದ್ದ ರಾಜ್ಯಶಾಸ್ತ್ರದ  ಉಪನ್ಯಾಸಕರು ನಮ್ಮ ತರಗತಿಗೆ ಬಂದರು. ಅವರು ಬರುತ್ತಾ ಇದ್ದಾರೆ ಎಂದು ನನ್ನ ಸಹಪಾಟಿಗಳು ಮೊದಲೇ ಹೇಳಿದ್ದರಿಂದ ನಾನು ಕೂಡಲೇ ಬೋರ್ಡ್ ಮೇಲಿದ್ದ ಚಿತ್ರ ಅಳಿಸಿ ಏನೂ ಆಗದಂತೆ ನನ್ನ ಸ್ಥಳದಲ್ಲಿ ಬಂದು ಕುಳಿತೆ. ಅವರು ಬಂದು ಚೆನ್ನಾಗಿ ಬೈದರು. ಬೋರ್ಡ್‌ನಲ್ಲಿ ಡಿಆರ್ ಎಂಬ ಆಂಗ್ಲ ಅಕ್ಷರ ಇತ್ತು. ಅವರು ಬಂದದ್ದರಿಂದ ಅದನ್ನು ಅಳಿಸಲಾಗಿರಲಿಲ್ಲ. ಅದನ್ನು ನೋಡಿ ಇದೇನು ಎಂದರು. ಯಾರೂ ಬಾಯಿ ಬಿಡಲಿಲ್ಲ. ನನ್ನನ್ನು ಕೇಳಿದರು. ನಾನು ಮೊಂಡು ಧೈರ್ಯದಿಂದ ಅದು ಡ್ರಾಯಿಂಗ್ ಎಂದೆ. ಅವರು ಅದನ್ನು ಒಪ್ಪಲು ತಯಾರಿರಲಿಲ್ಲ. ಅರ್ಥಶಾಸ್ತ್ರ ಉಪನ್ಯಾಸಕರ ಹೆಸರು ಡಿ ಆರ್ ಉಮೇಶ್. ಅವರನ್ನು ಏನೋ ತಮಾಷೆ ಮಾಡುತ್ತಿರುವುದು ಎಂದು ಅವರ ವಾದ. ಅವರು ನಮ್ಮನ್ನು ಕುಳಿತುಕೊಳ್ಳಲು ಹೇಳದೆ ಬೈದು ನಿರ್ಗಮಿಸಿದರು. ನಾವು ಹಠದಿಂದ ನಿಂತೇ ಇದ್ದೆವು. ಆಮೇಲೆ ನಾವು ಒಂದು ತಿಂಗಳು ಅವರ ಬಳಿ ಮಾತಾಡದೆ ಅವರನ್ನು ಸತಾಯಿಸಿದ್ದೆವು.

 

ತರಗತಿಯಲ್ಲಿ ಮೊದಲ ಬೆಂಚಲ್ಲಿ ಕೂರುವುದೆಂದರೆ ಏನೋ ಗೌರವ ಎಂದೇ ನನಗಿದ್ದ ಭಾವನೆಯಾಗಿತ್ತು. ಆದರೆ ನನಗೆ ಹತ್ತನೇ ಈಯತ್ತೆವರೆಗೆ ಪ್ರಥಮ ಬೆಂಚಲ್ಲಿ ಕೂರುವ ಸೌಭಾಗ್ಯ ಸಿಗಲೇ ಇಲ್ಲ. ಎತ್ತರದ ಪ್ರಕಾರ ಬೆಂಚಲ್ಲಿ ಕೂರಿಸುತ್ತಿದ್ದರು. ಹಿಂದಿನ ಬೆಂಚಲ್ಲಿ ಕೂರುವುದೆಂದರೆ ನನ್ನ ಮನಸ್ಸು ಒಪ್ಪುತ್ತಿರಲಿಲ್ಲ. ಅದಕ್ಕೆ ನಾನು ಎತ್ತರ ಅಳೆಯುವಾಗ ಕಾಲು ಸ್ವಲ್ಪ ಕುಂಟಿಸಿ ನಿಲ್ಲುತ್ತಿದ್ದೆ. ಹಾಗಾಗಿ ಪ್ರತೀ ತರಗತಿಯಲ್ಲೂ ಹಿಂದಿನಿಂದ ಒಂದು ಬೆಂಚು ಮುಂದೆ ನನ್ನ ಸ್ಥಾನ ಖಾಯಮ್ಮು! ಕುಳ್ಳಗೆ ಇರುವ ಸಹಪಾಟಿಗಳನ್ನು ನೋಡಿ ನಾನು ಕರುಬುತ್ತಿದ್ದೆ! ಅಂತೂ ಮೊದಲ ಬೆಂಚಲ್ಲಿ ಕೂರುವ ನನ್ನ ಆಸೆ ಪಿಯುಸಿಗೆ ಬಂದಾಗ ಈಡೇರಿತು. ತಮಾಷೆ ಅಂದರೆ ಮೊದಲ ಬೆಂಚಲ್ಲಿ ಮೊದಲ ಜಾಗದಲ್ಲಿ ಕೂರಲು ಯಾರೂ ತಯಾರಿರುತ್ತಿರಲಿಲ್ಲ. ಉಪನ್ಯಾಸಕರು ಬಂದು ಮೊದಲು ಕೂತವರ ನೋಟ್ಸನ್ನೇ ನೋಡುವುದು ಎಂದು ಎಲ್ಲ ಹಿಂಜರಿದಿದ್ದರು. ಅನಾಯಾಸವಾಗಿ ನನಗೆ ಆ ಸ್ಥಳ ಸಿಕ್ಕಿತ್ತು. ನಾನು ಖುಷಿಯಿಂದಲೇ ಕುಳಿತೆ. 

ಹೀಗೆಯೇ ಎರಡನೇ ಪಿಯುಸಿಯೂ ಮುಗಿದೇ ಹೋಯಿತು. ಆಗ ನನಗೆ ಮದುವೆಯೂ ನಿಶ್ಚಯ ಆಗಿ ಪಿಯುಸಿ ತರಗತಿ ಮುಗಿಯುವ ಮೊದಲೇ ನಾನು ಕಾಲೇಜು ಬಿಡಬೇಕಾಗಿ ಬಂದದ್ದು ನೆನಸಿಕೊಂಡರೆ ಈಗಲೂ ನನಗೆ ಬಲು ದುಃಖವಾಗುತ್ತದೆ.  ಅಲ್ಲಿಗೆ ನನ್ನ ವಿದ್ಯಾರ್ಥಿಜೀವನ ವಿಷಾದದೊಂದಿಗೆ ಮುಕ್ತಾಯ ಹಂತ ತಲಪಿದ್ದನ್ನು ನೆನಪಿಸಿಕೊಳ್ಳಲು ನನಗೆ ಈಗಲೂ ಇಷ್ಟವಿಲ್ಲ.

ಹಿಂತಿರುಗಿ ನೋಡಿದಾಗ ಈಗ ಮಕ್ಕಳ ವಿದ್ಯಾಭ್ಯಾಸಕ್ಕೆ ಎಷ್ಟೊಂದು ಅವಕಾಶಗಳು ಎಂದು ಖುಷಿಯಾಗುತ್ತದೆ. ನಿಜಕ್ಕೂ ವಿದ್ಯಾರ್ಥಿಜೀವನ ಈ ಹಿಂದೆಯೂ ಮುಂದೆಂದೂ ಅಮೂಲ್ಯವಾದ ಕ್ಷಣಗಳು ಎಂಬುದರಲ್ಲಿ ಸಂಶಯವೇ ಇಲ್ಲ. 

*****  

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

1 Comment
Oldest
Newest Most Voted
Inline Feedbacks
View all comments
Santhosh
10 years ago

Super 🙂

1
0
Would love your thoughts, please comment.x
()
x