ಶ್ರಾವಣದ ಜಿಟಿಜಿಟಿ ಮಳೀಗೆ ಧಾರವಾಡದ ಓಣಿಗಳೊಳಗೆ ರಾಡಿ ಹಿಡಿದಿತ್ತು. ಹಿಂಗ ನಿಂತ ಮಳಿ ಹಾಂಗ ಸುಳ್ಳಿ ಸುತಗೊಂಡು ರಪರಪ ಹೊಡಿತಿತ್ತು. ಬರೊ ತಿಂಗಳ ಒಂದನೇ ತಾರೀಖಿಗೆ ಖೋಲಿಯ ಬಾಡಿಗೆ ವಾಯಿದೆ ಮುಗಿಯೋದು ಇದ್ದುದ್ದರಿಂದ ನಾನು ಮತ್ತೊಂದು ಖೋಲಿ ತಪಾಸ ಮಾಡಲೇಬೇಕಿತ್ತು. ಅಗಸಿ ಓಣಿಯ ಕಡೀ ಮನಿ ಇದಾದುದರಿಂದ ಪ್ಯಾಟೀಗೂ ಮನೀಗೂ ಭಾಳ ದೂರ ಆಗ್ತಿತ್ತು. ಆಫಿಸಿನಿಂದ ಮಧ್ಯಾಹ್ನದ ಆಸರ-ಬ್ಯಾಸರಾ ಕಳಿಲಿಕ್ಕ ಮನಿಗೆ ಹೋಗಬೇಕಂದ್ರೂ ಅಡ್ಯಾಡೋದು ದೊಡ್ಡ ತ್ರಾಸ ಆಗತಿತ್ತು. ಹಂಗಾಗಿ ಎನ್.ಟಿ.ಟಿ,ಎಫ್, ಸಂಗಮ ಟಾಕೀಜ್ ಸುತ್ತಹರದು ಖೋಲಿ ನೋಡಬೇಕೆಂಬುದು ನನ್ನ ಇರಾದೆ. ಈ ಒಂದ ಸರವು ಎರಡು ಸರವೂ ಅಂತ ಮಳಿ ಕಮ್ಮಿ ಆಗೋದನ್ನ ಕಾಯುತ್ತ, ಈ ತನಕ ಬದಲಿಸಿದ ಮನೆಗಳನ್ನ ಧೇನಿಸುತ್ತ ಕುಳಿತಿರುವಾಗ ಮನೆಯ ಮಾಲಿಕರ ಮಗಳು ಸಣ್ಣ ಪೋರಿ ಪ್ರೇಮ ಪತ್ರ ತಂದುಕೊಟ್ಟಳು.
ಶ್ರೀ ಗಣೇಶಾಯನಮಃ
ಮೊದಲ ಪ್ರೇಮಪತ್ರದ ಸಿಹಿ ನೆನಪಿಗೊಂದು ಮುತ್ತು….
ನಾನು ಸುಮಿ. ನಿಮಗೂ ತಿಳಿದಿರುವಂತೆ ನಮ್ಮವ್ವನ ಹಾದರದ ಕತಿಗಳೂ ನನಗೂ ಗೊತ್ತಾಗಿರುವುದು ಆಶ್ಚಂiÀರ್iವೇನಲ್ಲ. ಈ ದಯನೀಯ ಪ್ರೇಮಪತ್ರದಲ್ಲೊಂದು ಮಾತು ಹೇಳಬೆಕೆಂದರೆ- ನಮ್ಮಪ್ಪ ಸಾಯೋ ಕಾಲಕ್ಕ ‘ಯವ್ವಾ ಸುಮ್ಮವ್ವ, ನಿನಗ ನಂಬಿಕೆ ಬರೋ ಗಂಡಸಿನ ಕೂಟ ನೀನು ಹೊರಟು ಹೋಗು, ನಿಮ್ಮವ್ವನ್ನ ನಂಬಬ್ಯಾಡ ಆಕೀ ನಿನ್ನ ಬಾಳೇವು ಹದಗೆಡಸತಾಳು, ಜ್ವಾಕಿ ಮಗಳ ನಿನ್ನ ಶೀಲ ಹದ್ದುಬಸ್ತನ್ಯಾಗ ಇರಲಿ. ನಿನ್ನದೊಂದು ಲಗ್ನ ಮಾಡಿ ಸಾಯಬೇಕಂದ್ರ…. ಆ ಉಳವಿ ಬಸಪ್ಪಜ್ಜ ಬದುಕಲಿಕ್ಕ ಬಿಡವೊಲ್ಲ. ನಿನ್ನ ಬದುಕು ನಿನ್ನ ಕಣ್ಮುಂದ ಐತಿ ಹುಷಾರಿಂದ ಇರು’ ಅಂತ ನಾಕು ಬುದ್ಧಿ ಮಾತು ಹೇಳಿ ಬೆಳಗಾಗುದರೊಳಗ ಹೊರಟ ಹೋದರು. ಖರೆ, ನಮ್ಮವ್ವ ಅಪ್ಪ ಸತ್ತಾಗಿನಿಂದ ಕಣ್ಣಿ ಬಿಚ್ಚಿಬಿಟ್ಟ ಆಕಳಾಗ್ಯಾಳು.
ಇರಲಿ, ಆದರ ನಾ ನಿಮ್ಮನ್ನ ನೋಡಿದ್ದು, ಆವತ್ತು ಮುಟ್ಟಾಗಿ ತಲೀಮ್ಯಾಲ ನೀರು ಹಾಕ್ಕೊಂಡು ಅಟ್ಟದ ಮ್ಯಾಲ ನಿಂತು ಕೂದಲಾ ಒರಸುತ್ತಿರುವಾಗ ಅಂತ ನೆನಪು. ಆಗ ನೀವು ಹಾರಿಕೆಯ ವಾರೆ ನೋಟದಾಗ ನನ್ನ ಹರಕೊಂಡ ಗಪಗಪ ತಿನ್ನವರ ಹಂಗ ನೋಡತಿದ್ರೀ…. ನಿಮ್ಮ ಜೋಡಿ ನಾ ಪಸಂದ್ ವಾರಿಗಿ ಆಗ್ತೀನಂತ ನನ್ನ ಗೆಳತ್ಯಾರು ಚಾಷ್ಟಿ ಮಾಡಿದ್ದು ಹೌದು ಅನ್ನಿಸಿತು. ನೀವು ಮಸ್ತ್ ಜೋಡಿ ಆಗ್ತೀರಿ ಅನ್ನೋದಕ್ಕಿಂತಲೂ ನಿಮ್ಮೊಳಗ ಹೆಣ್ಣ ಕರಳ ಕಾಣಿಸುವ ಮುಗುದ ಸ್ವಭಾವ ನನಗ ಸೇರಿತು. ನೀವೂ ಅಷ್ಟೆ. ನೀವು ನನ್ನನ್ನ ಸಣ್ಣಂದಿನಿಂದಲೂ ನೋಡಿರುವುದರಿಂದ ಅಭಿಪ್ರಾಯ ಕೇಳುವುದಕ್ಕಿಂತ ಹೆಚ್ಚಾಗಿ ಕೈ ಹಿಡಿದು ಮದುವೆ ಆಗಿ ಸುರಕ್ಷಿತ ಬಾಳು ಕೊಡ್ತೀರಿ ಎಂದು ನಂಬುತ್ತೇನೆ. ಸಧ್ಯಕ್ಕ ಅತಂತ್ರಳಾಗಿರುವ ನಾನು ನಾಳೆ ದಿನಕ್ಕ ಬದುಕುಳಿಯುತ್ತೇನೆಯೇ? ಅನ್ನುವ ಹುಚ್ಚು ಭ್ರಮೆ ಕಾಡುತ್ತದೆ. ದಯಮಾಡಿ, ಸಾಂತ್ವನಕ್ಕಾಗಿ ಸಣ್ಣ ಸುಳಿವು ಕೊಟ್ಟರೂ ಸಾಕು.
ನಿರೀಕ್ಷಣೆಯ ಹಾದಿಯಲ್ಲಿ ಅಬಲೆ
ಸುಮಿ
ತಾಯಿಯ ಮ್ಯಾಲಿನ ನಂಬಿಕೆ, ಬದುಕುವ ಭರವಸೆ ಎರಡರಲ್ಲಿ ಎಳ್ಳಷ್ಟೂ ವಿಶ್ವಾಸ ಇಡದೆ ತನ್ನನ್ನು ಪೂರ್ಣ ಕೊಟ್ಟುಕೊಂಡೇ ಬರೆದಿರುವ ಅವಳ ಪತ್ರ ಓದಿದಾಗ ಅದ್ಯಾಕೋ ಮುಜುಗರವಾಯ್ತು. ಅವಳು ಅವರ ಮನೆಯ ಮಾಳಿಗೆಯ ಮ್ಯಾಲೆ ಅದೆ ನಿರೀಕ್ಷೆಯಲ್ಲಿ ಕನಸು ಕಟ್ಟಿಕೊಳ್ಳಲು ಬಯಸಿ ಜಿಟಿಜಿಟಿ ಮಳೆಗೆ ತೊಯ್ಯುತ್ತ ನಿಂತಿದ್ದು ಕಾಣಿಸಿತು. ಆಕೆಯ ಮುಖದಲ್ಲಿ ನಾಚಿಗೆ ಇರಲಿಲ್ಲವಾಗಲೂ ನಾನು ನಾಚಿ ನೀರಾದೆ. ಈ ಪ್ರೇಮ ಪತ್ರದ ಜ್ವರ ಮೈಯಲ್ಲ ವ್ಯಾಪಿಸಿಕೊಂಡಿತೋ ಏನೋ ಈಗ ಮನಿ ಬಿಡುವ ಮನಸಿಲ್ಲದಾಯ್ತು. ಆದರೂ ಹದಿನೈದು ದಿನದ ಹಿಂದೆಯೆ ಖೋಲಿ ಖಾಲಿ ಮಾಡಲು ತಾಕೀತು ಮಾಡಿದ್ದರಿಂದಾಗಿ ಇಕ್ಕಟ್ಟಿಗೆ ಸಿಕ್ಕಿಕೊಂಡಿದ್ದೆ.
ಅವಳ ತಾಯಿಯ ಬಾಯಿಯೆಂದರೆ ಬಂಬಾಯಿ, ಬಜಾರಿ ಹೆಣ್ಣವಳು. ಮಂದ್ಯಾಗ ನಿಂದರಿಸಿ ಅಬರೂ ಕಳದು ಸಂದೀಗೆ ಕರೆದೂ ಅಪ್ಪ ಅಣ್ಣ ಅನ್ನೋ ಊಸರವಳ್ಳಿ. ಒಂದು ಸಲ ನಮ್ಮ ಮನೀ ಮಾಲಕರ ಹೆಂಡ್ತಿಗೂ ಆಕೆಗೂ ಸಂಶಯಾಸ್ಪದವಾದ ಮಾತಿನ ಕದನವೇ ನಡೆದಿತ್ತು.
‘ಬಾಯಿ ಸತ್ತದ್ದು ನನ್ನ ಗಂಡ ಅವನ ಮ್ಯಾಲ ಹರಲೀ ಹೊರಸಾಕ, ನೀ ಏನ ಅವನ ಜೋಡಿ ಮಲಗಿದ್ದೀ ಏನ ಹಡಸೂ ರಂಡಿ’ ಅಂದದ್ದ ಒಂದೇ ಮಾತು. ಮುಂದಿನದೆಲ್ಲ ಸುಗುಣಾಬಾಯಿ ಜಯಕಾರದ ಮಾತುಗಳ ಸುರಿಮಳೆ ಸುರಿದು ಹೋಯಿತು. ಸುತ್ತಲಿನ ನಾಗರಿಕ ಮಂದಿಗೆಲ್ಲ ಮುಜುಗರ ಆಗಿರಲಿಕ್ಕೂ ಬೇಕು ಅಂತ ಮಾತಿನ ಹಳ್ಳ ಹರಿದು ಮಲಪ್ರಭ ಹೊಳಿ ಸೇರಿಕೊಂಡು ಹುಬ್ಬಳ್ಳಿ ಧಾರವಾಡ ಮಂದಿಗೆಲ್ಲ ನೀರ ಕುಡುಸಿಧಂಗ ಆಯ್ತು.
‘ಅಯ್ಯಯ್ಯ ಧೌಳಕೀನ ನಿನ್ನ ಗಂಡ ಎಷ್ಟ ಕಚ್ಚೇ ಹರಕ ಅದಾನು ಅನ್ನೋದು ಇಡೀ ಊರಿಗೆ ಗೊತ್ತೈತಿ. ಲೇ ಹಾದರಗಿತ್ತಿ, ನೀಯೇನ ಗರತಿ ಸೋಗ ಹಕ್ಕೊಂಡು ಗಂಡನ ವಕಾಲತ್ತ ವಹಿಸಬ್ಯಾಡ. ರಂಡಿಬಾಳೆವು ಅಂತ ಅಂದ ಆಡಲಿಕ್ಕ ನಿಮಗೆಲ್ಲ ಚಂದ ಅಕ್ಕೈತಿ. ನನ್ನ ಗಂಡ ಇದ್ರ ನೀವಾದ್ರೂ ಯಾಕ ಮಾತಾಡತಿದ್ರೀ, ಅಂವ ನಿಮ್ಮ ಕುಂಡಿ ಮ್ಯಾಲ ಒದಿತಿದ್ದ ನೋಡ್ರ್ಯ ಅದಕ್ಕ ಅಂವ ಬದಕಿರೋತನಕ ನನ್ನ ಸುದ್ಧಿಗೆ ಬರತಿರಲಿಲ್ಲ ನೀವೂ.. ಮಿಟಕಲಾಡಿ ಬಂದಾಳಿಲ್ಲಿ ನನಗ ಬಾಳೇವು ಮಾಡಿಕೊಡೋದು ಹೇಳಿಕೊಡಲಿಕ್ಕ, ಭೋಸಡೇರು ತಾವು ತಾವು ಮಾಡೋ ಹಲಕಟ್ ದಂಧೆ ಮುಚ್ಚಿ ಹಾಕಲಿಕ್ಕೆ ನನ್ನಂತಾಕಿ ಮ್ಯಾಲ ಎತ್ತಿ ಕಟ್ಟತಾರು ಹಡಸೂ ರಂಡೇರು.’
ಪಾಪ ಮಾಲಿಕರ ಹೆಂಡತಿ ಅನ್ನಬಾರದಂದು ದಿವಾಳಿ ಆಗಿ ಹೋಗಿದ್ದರು. ಮುಳುಮುಳು ಅತಗೋತ ಹಾಸಿಹೊತ್ತಗೊಂಡು ಮಲಗಿದರೂ ಇವಳ ಬೈಗುಳದ ಬಾಂಬುಗಳು ನಿಂತಿರಲಿಲ್ಲ.
‘ತುಡುಗೀಲೇ ಗೆಣೆಕಾರನ ಕೂಡ ಮಲಗಿ ಗಂಡನ ಮುಂದ ಗರತೇರ ಥರಾ ಸೋಗು ಹಾಕೋ ಲೌಡೇರಗೆ ನಾನು ಯಾವುದರ ಗಂಡಸಿನ ಕೂಡ ಮಾತಾಡಿದರ ಸಾಕು ಒಂದು ಕಥೀನ ಕಟ್ಟತಾರು. ಹುಚುಡು ಕಸಬ್ಯಾರು, ಇಲ್ಲದ್ದ ನಡಸ್ಯಾರು ಓಣ್ಯಾಗ ಹೊಲಸ ರಂಡೇರು.. ಹಾದರಗಿತ್ತೇರು.. ಹಡಸುಗೋಳು……
ಹಿಂಗ ಆ ಸುಮಿ ನೆನಪಾದಗೆಲ್ಲ ಆ ನೆನಪನ್ಯಾಗ ಅವರವ್ವನ ಮಾತುಗಳೂ ಕೇಳತಿದ್ದವು. ಸುಮಿ ಅನ್ನೋಂದು ಅವಳವ್ವ ಸುಗುಣಾಬಾಯಿ ಅಕ್ಕರತೆಯಿಂದ ಕರೆಯೋ ಹೆಸರು. ಸುಮಲತಾ ಯಾವತ್ತೂ ನಕ್ಕೋತ ಇದ್ದದ್ದು ನಾ ಕಾಣಲಿಲ್ಲ. ಯಾಕಂದ್ರ ತಾಯಿ ದೆಸಿಯಿಂದಾಗಿ ಮಂದ್ಯಾಗ ಮಾರಿ ಎತ್ತಿ ನಡಿಲಾರದ ಸಂಕಟ ಉಣ್ಣತಿದ್ದಳು. ತಾಯಿ ಮಗಳ ಜಗಳದಾಗ ಮಾನ, ಮರ್ಯಾದೆ ಮಾತುಗಳು ಬರುತ್ತಿದ್ದವಾದ್ದರಿಂದ ಸುಗುಣಾಬಾಯಿ ನಡವಳಿಕೆ ಸುಮಿಗೆ ಹಿಡಿಸೋದಿಲ್ಲ ಅನ್ನೋದು ಸ್ಪಷ್ಟ ಗೊತ್ತಾಗತಿತ್ತು. ಅಪ್ಪ ಆಕಳ ಸ್ವಭಾವದ ಸಂಭಾವಿತ ಮನಶ್ಯಾ. ಹೊತ್ತಿಲ್ಲದ ಹೊತ್ತಿನ್ಯಾಗ ಯಾಂವ ಯಾಂವನೋ ಗಂಡಸು ಸೇಂಟ ಹಾಕ್ಕೊಂಡು, ಹಲ್ಲಕಿಸಿತಾ ಮನಿಗೆ ಬರೋದನ್ನ ಸಹಿಸದ ಸುಮಿ ಬಂಡೆದ್ದರ, ಸುಗುಣಾಬಾಯಿ ಗಂಡನ್ನ ದೇವರ ಖೋಲ್ಯಾಗ ಹಾಕಿ ಧಪಧಪ ದನಕ್ಕ ಬಡಧಂಗ ಬಡಿತಿದ್ದಳು. “ಮಗಳಿಗೆ ಹಿಂಗ ಮಾತಾಡು ಅಂತ ಹಚ್ಚಿಕೊಟ್ಟು, ಬರೋ ಸಾಹುಕಾರನ ಮುಂದ ಕಿರಿಕಿರಿ ಮಾಡಸಬ್ಯಾಡಾ. ನೀನಂತು ದುಡದ ಹಾಕಲಿಲ್ಲ ನಾನಾದರೂ ನಿಷ್ಠೆಯಿಂದ ಒಬ್ಬ ಗಂಡಸನ್ನ ಇಟಕೊಂಡು ಅವನ ಕೊಡೋ ರೊಕ್ಕದಾಗ ನಿನಗ ಕೂಳ ಮಾಡಿ ಹಾಕತೀನಿ. ಸುಮ್ಮಕ ನಾಯಿಗತೆ ತಿನಕೊಂಡು ಮೂಲ್ಯಾಗ ಬಿದ್ದಿರು” ಅಂತ ತಾಕೀತು ಮಾಡುತ್ತಿದ್ದಳು. ಅವನೊಬ್ಬ ಸವದತ್ತಿ ಸೀಮೆಯ ಲ್ಯಾಂಡಲಾರ್ಡ ಬಂದನಂದ್ರ ಸುಮಿ ತನ್ನ ಮನೀಗೆ ಹೋಗೋದು ಮರೀತಿದ್ದಳು. ಆವಾಗೆಲ್ಲ ನಮ್ಮ ಓನರ್ ಹೆಂಡತಿ ಸುಮಲತಾಳಿಗೆ ಸಮಾಧಾನ ಮಾಡತಿದ್ದರು. ಅವನ ಠಾಕು-ಠೀಕು ದಿರಿಸಿನ ಅರಿವ್ಯಾಗ ಅವನ ಕಾಣತಿದ್ದಿಲ್ಲ. ಬಂದ್ರ ಎರಡ ದಿನ ಉಳದು ಮೈಯಾಗಿನ ಅಂಗಿಯ ಗೀರುಗೀರು ಇಸ್ತ್ರೀ ಮುದುಡ್ಯಾಗುತಲೇ ಹೊರಟು ಹೋಗತಿದ್ದ. ಬಹುಶಃ ತಾಯಿ ಮಗಳ ಜಿದ್ದಾಜಿದ್ದಿ ನಡೆಯುವಾಗ ತಂದೆಯಾದಂತ ಹಿರಿಯ ಪ್ರಾಣಿ ಮೂಲ್ಯಾಗ ಕುಂಯ್‍ಗುಡುತ್ತ ಚಿಟಬರಸತಿದ್ದ. ಹಿಂಗ, ಇಷ್ಟ ಮ್ಯಾಲ ಮೈ ಗೊತ್ತಿದ್ದ ನನಗ ಒಳಗಿನ ಪದರಪದರು ಬಿಡಿಸಿ ಸುಮಿ ಮನೆತನದ ಕತಿ ಹೇಳಿದವರು ನಮ್ಮ ಮಾಲಕರ ಮಾತೋಶ್ರೀ ಮಲ್ಲಮ್ಮತಾಯಿಯವರು. ಈ ಮುದುಕೀನೂ ಹರೇದ ಕಾಲಕ್ಕ ಹಾರ್ಯಾಡಿ ಈಗ ನರ ಬಿಗಿ ಹಿಡಿದು ಮೂಲಿಗುಂಪಾಗ್ಯಾಳು ಅಂತ ಕಾಣಿಸ್ತದ. ಯಾಕಂದ್ರ ಈಕೀ ಬಾಯಾಗ ಹರದು ಬರೋ ಶಬ್ದಗಳು ಸುಗುಣಾಬಾಯಿ ಡಿಕ್ಶನರಿಯೊಳಗ ಸಂಗ್ರಹ ಆದಂಗ ಕಾಣ್ತಾವು.
ಇರಲಿ. ಮಾಡಿದವರ ಪಾಪ ಆಡಿದವರ ಬಾಯಾಗ ಅನ್ನೋದಾದರ(ಇಷ್ಟೆಲ್ಲ ಮಾತಾಡಿದ ಮ್ಯಾಲೂ) ಮಂದಿ ಉಸಾಬರಿ ನಮಗ್ಯಾಕ ಬೇಕು. ಯಾಕ ಬೇಕಪ್ಪ ಅಂದ್ರ-ಬಟ್ಟಲು ಗಣ್ಣಿನ ಮೋದಕ ನೋಟದ, ರಾಶಿ ಕೂದಲಿನ ಇಷ್ಟುದ್ದದ ಹೆರಳು, ಆ ಮೂಗು, ಬಾಯಿ, ಕಣ್ಣು, ತುಟಿ, ಗಲ್ಲ, ಪುಟ್ಟ ಗದ್ದದ ಹುಡುಗಿಯ ಅತೃಪ್ತ ಮುಗುಳ್ನಗೆಯ ನನ್ನ ಪ್ರೀತಿಯ ಸುಮಿಗಾಗಿ ಬೇಕು. ಅವಳ ನಗುವಿನಲ್ಲಿ ಒಂದಂಗುಲ ಸಂಚಾರಿಭಾವ ಏರುಪೇರಾದರೂ ದುಃಖಿಸುತ್ತಿದ್ದ ಅವಲ ಅಳುವಿನ ಬಿಕ್ಕಳಿಕೆಯನ್ನು ಅಜರಾಮರ ನಿಲ್ಲಿಸಲು ನನಗವರ ಮನೆಯ ಆಗುಹೋಗುಗಳ ತಿಳವಳಿಕೆ ಬೇಕಿತ್ತು. ಈ ಸುಗುಣಾಬಾಯಿ ಬಾಯಿಯಿಂದ ಬಚಾವಾಗಿ ಸುಮೀನ ಮದುವೆ ಆಗೋದು ಅಂದ್ರ, ಏಳೂರು ಹಿರೇರನ್ನ ಕರೆಯಿಸಬೇಕಾಗಭೌದು. ನನ್ನ ಹೇಪಲ್ಯಾ ಮೂತಿಗೆ ಆಕೆಯ ಕಂಡಿಷನ್ನಗಳು ಹಸಿಗ್ವಾಡಿಗೆ ಹಳ್ಳ ಒಗಧಂಗ ಬೀಳಬಹುದು. ನಾ ಒಲ್ಲೆ ಅಂದರೂ ಸುಮಿಯ ಅಳುಬುರಕ ಮಾರಿ ನೋಡಕೊಂಡ ಹ್ಞೂ ಬಸಣ್ಣ ಅನ್ನಲೇಬೇಕು.
ಇದೆಲ್ಲದರ ನಡುವ ನಾ ಆಕೀಗೆ ಮಾರಿ ತೋರಸಲಿಕ್ಕ ಹೆದರಿಕೊಂಡು ಕಣ್ಣತಪ್ಪಿಸಿ ಓಡ್ಯಾಡುತ್ತಿದ್ದೆ. ಅಂದು ಕೈಯಾಗ ಸಂತಿ ಚೀಲ ಹಿಡಿದು, ಸಣ್ಣಮಳೆಗೆ ಛತ್ರಿ ಏರಿಸಿ, ಮುಖ ಕೆಳಗ ಮಾಡಿ ರಸ್ತಾ ಹಿಡಿದೆ….ಗರಿಬಿಚ್ಚಿದ್ದ ಕೊಡೆಯ ಗುಮ್ಮಟದ ಮ್ಯಾಲೊಂದು ಟಪ್! ಅಂತ ಕಲ್ಲು ಬಿತ್ತು. ಎದರು ಸಿಡಿದು ಬರೋ ಹನಿಗೆ ಮುಖ ತಿರುಗಿಸಿ ಮಾಳಿಗೆ ಮ್ಯಾಲ ನೋಡಿದೆ ! ‘ಹೆದರಬ್ಯಾಡ ಸುಮಿ ನಿನ್ನ ಫಜೀತಿ ಅರ್ಥ ಆಗ್ಯದ, ಎರಡೇ ಏರಡ ದಿನ ಗಡವು ಕೊಡು’ ಅಂತ ಕೂಗಬೇಕು ಅಂದಕೊಂಡೆ ಧೈರ್ಯ ಸಾಲಲಾರದ, ಸುಗುಣಾಬಾಯಿ ನೆನಪಾಗೂತಲೇ ನನ್ನ ದಾರಿ ನಾ ಹಿಡಿದೆ. ಆ ಮುಖದ ನೆರಳನ್ನ ನನ್ನ ಅಂಜಬುರುಕ ಕಣ್ಣು ಛಲೊತ್ತಿನ್ಯಾಗ ಗುರುತಿಸಲಿಲ್ಲ ಅನ್ನಿಸಿತು. ಆ ಮಳಿಯೊಳಗ ಹುಡುಗಿಯ ಗೋದಿಗೆಂಪ ಗಲ್ಲ ಅದುರಿ ಕಣ್ಣಾಗ ದಳದಳ ನೀರ ಇಳಿದಿರಬಹುದು. ಇಲ್ಲಾ ತುಟಿ ಅದುರಿ, ಗಂಟಲೊಣಗಿ, ಮೂಗು ಹಿಗ್ಗಿಸಿಕೊಂಡು ತುಂಬಿ ಬಂದ ಅಳುವನ್ನ ಹಾಗೆಯೇ ಬಚ್ಚಿಟ್ಟಕೊಂಡಿರಬಹುದು. ಚಾಚಿದ್ದ ಕೈಗೆ ಯಾವ ಆಸರದ ಬಳ್ಳಿಯೂ ಹತ್ತಲಿಲ್ಲದಾಗಿ ಸಾಯೋ ಆಟಕ್ಕ ತಯಾರಾಗಿದ್ದರ..? ಅನ್ನೋ ಕೆಟ್ಟ ಭ್ರಾಂತು ಮೂಡಿದ್ದೆ ತಡ ಹೊಡಮರಳಿ ಮನೆ ಹಾದಿ ಹಿಡಿದೆ. ಸಾವಿನ ಮಾರ್ಗಗಳು ನಾನಾ ಪ್ರಕಾರ ಅದಾವು- ಉರ್ಲು ಹಾಕ್ಕೊಳ್ಳೋದು, ವಿಷ ತಗೊಳ್ಳೋದು, ರೈಲಿನ ಹಳಿಗೆ ತಲೀ ಕೊಟ್ಟು ಅಡ್ಡಾಗಿ ಮಲಗೋದು, ಬಾವಿಗೆ ಬೀಳೊದು, ಇಲ್ಲ ಹುಯ್ಯಂತ ನಿದ್ದಿ ಗುಳಿಗೆ ತಗೊಳ್ಳೋದು. ಹೀಂಗ ಒಂದೊಂದು ರೀತಿಯ ಸಾವಿನ ಮನೆಯ ಬಾಗಿಲೊಳಗ ನಿಂತು ನನಗಾಗಿ ಅತ್ತು ಸತ್ತರ ಅಂಬೋ ಚಿಂತಿಯನ್ನ ಕಲ್ಪಿಸಿಕೊಳ್ಳುತಲೆ ಕೈಕಾಲು ತಣ್ಣಗಾದವು. “ಸುಮಿ ಆತುರಕ್ಕ ಬಿದ್ದು ಅತಿರೇಕದ ನಿರ್ಧಾರಗಳನ್ನ ತಗೋಬ್ಯಾಡ, ನನಗ ಒಂದೆರಡ ದಿನ ಯಾಳೆ ಕೊಟ್ಟರ ವಿಚಾರ ಮಾಡಿ ಹೇಳ್ತೀನಿ” ಅಂತ ಒಂದು ಚೀಟಿ ಬರೆದು ಅವಳಿಗೆ ತಲುಪಿಸಲಿಕ್ಕಾಗದೆ ಒದ್ಯಾಡಿಬಿಟ್ಟಿದ್ದೆ.
ಮುಂದಲ ಎರಡ ದಿನಗಳು ಮನಿಯಿಂದ ತಂದಿದ್ದ ಸೇಂಗಾ ಚಟ್ನಿಯನ್ನು ತಿಂದ ಕಾರಣಕ್ಕಾಗಿ ತಂಪು ಹೆಚ್ಚಾಗಿ ನಮಗ ಹೊಟ್ಟಿ ಝಾಡಸಲಿಕ್ಕ ಹತ್ತಿತು. ಕಾಯುವ ಪತ್ರಗಳಿಗೆ ಉತ್ತರವಿಲ್ಲದಕ್ಕಾಗಿ ಮೂರನೇ ದಿನದ ಅವಳ ಪತ್ರ ಬರಲೇ ಇಲ್ಲ. ವಿಚಿತ್ರ ಅಂದ್ರ ಸುಗುಣಾಬಾಯಿ ಮತ್ತು ಸುಮಿ ಊರುಬಿಟ್ಟು ದೂರದ ಮುಂಬೈಗೆ ರಾತೋರಾತ್ರಿ ಯಾವನದೋ ಕೂಡ ಓಡಿ ಹೋದರು ಅನ್ನೂ ಗುಮಾನಿ ಮಾತು ಓಣಿ ಮಂದಿ ಬಾಯೊಳಗಿತ್ತು.
ಈಗ ಮನೆಯಲ್ಲಿ ನನ್ನ ಮದುವೀ ತಯಾರಿ ನಡೆಸಿದ್ದಾರೆ. ನನ್ನೆದುರು ಓಡಾಡುವ ಪ್ರತಿ ಹುಡುಗಿಯರಲ್ಲೂ ಸುಮಿಯನ್ನು ಕಾಣಲು, ಅವಳ ಹೋಲಿಕೆಗೆ ಸರಿ ಬರುವ ಒಂದಂಶವನ್ನಾದರೂ ಹುಡುಕಿಕೊಳ್ಳಲು ಒದ್ದಾಡುತ್ತೇನೆ. ತಪ್ಪಿತಸ್ಥನ ಹಾಂಗ ತಲೀ ಬಗ್ಗಿಸಿ ನಡೆದಾಡೋ ನನಗ ಸುಮಿ ಸಿಕ್ಕಲಾರಳಾ? ಊರು ಮಂದಿ ನೂರ ಮಾತಾಡಿದರೂ, ಅವಳ ಮುಗ್ಧ ಮುಖದೊಳಗಿನ ನಗು ನನ್ನ ಕೂಡ ಹಾಂಗ ಉಳದದ. ಮುಂದೆ ಏನೇನೋ ಸುದ್ಧಿ ಬಂದವು. ಕೊಲ್ಹಾಪುರದ ಮರಾಠ ಮಂಗಳ ಭವನದೊಳಗ ಚಂದದ ಒಂದೇ ತರದ ಸಾರಿ ಸುತಗೊಂಡ ಅಡಗಿ ಮ್ಯಾಳದೊಳಗ ಸೇರ್ಯಾಳ.. ಪೂಣಾದಾಗ ಮನಿಮನಿ ಮುಸುರಿ ಬೆಳಗಾಕ ಹೋಗತಾಳ…. ಗೋವಾದೊಳಗೊಬ್ಬ ಮೇಸ್ತ್ರೀ ಮದುವಿ ಆಗ್ಯಾಳ.. ಸೊಲ್ಲಾಪುರದೊಳಗ ತಾಯಿ-ಮಗಳು ಸೂಳೆಗಾರಿಕಿ ದಂಧಾ ನಡೆಸಿದಾರು.. ಈ ಹಿಂಗ ನಾಪತ್ತೆಯಾದವರ ಬಗ್ಗೆ ಸಾಕಷ್ಟು ಐತಿಹ್ಯ ಹುಟಕೊಂಡರೂ ಸುಮಿ ನನ್ನ ಹುಡುಕಿಕೊಂಡು ಬರತಾಳ, ಸುರುವಾಗಿದ್ದ ಪ್ರೇಮ ಪ್ರಕರಣದ ಮುಂದಿನ ಕಂತು ಪೂರ್ಣ ಆಗಿ, ನಾನು ಎರಡು ಮಕ್ಕಳ ತಂದೆ ಆಗ್ತೀನಿ ಅನ್ನುವ ನಿರೀಕ್ಷೆಯ ಹಾದಿಯಲ್ಲಿ… ದೇವದಾಸ
****
ದೇವದಾಸನಿಗೆ ಕೊನೇ ಸಂದರ್ಭದಲ್ಲಿ ಧೈರ್ಯ ಸಾಲದ ಕಾರಣ ಅವನಲ್ಲೇ ನಿಂತುಹೋದ ಮಾತುಗಳಿಂದ ಸುಮಿಗಾಗಿರಬಹುದಾದ ನೋವುಗಳ ಕುರಿತು ಕಲ್ಪಿಸಿಯೇ ಬೇಸರವಾಯ್ತು.. ಚೆಂದದ ಕಥೆ ಮಹಾದೇವ್ ಅವ್ರೆ.. ಬಯಲುಸೀಮೆಗೊಮ್ಮೆ ಹೊಕ್ಕಿ ಬಂದಂತಾಯ್ತು.ಕಾದಂಬರಿಯೊಂದರ ಅಧ್ಯಾಯವೊಂದರ ಓದಿದಂಗೂ ಆಯ್ತು 🙂
ಅಗ್ದಿ ನಮ್ ಊರಿನ ಓಣ್ಯಾಗ, ಓಡ್ಯಾಡಿದ್ಹಂಗಾತಬಿಡ್ರಿ. ಛಂದ ಐತ್ರಿ ಕತಿ…