ಆಲ್ ನ್ಯಾಚುರಲ್ ಎಂಬ ಮರಾಮೋಸ:ಅಖಿಲೇಶ್ ಚಿಪ್ಪಳಿ ಅಂಕಣ


 
ಮನುಷ್ಯನ ಬುದ್ಧಿ ಒಂದೊಂದು ಬಾರಿ ಪೂರ್ವಜನುಮದ ಸ್ಮರಣೆಗೆ ಹೋಗುತ್ತದೆ. ಕೋತಿ ಬುದ್ಧಿ. ಮೊನ್ನೆ ನಮ್ಮ ಹಿರಿಯ ಸ್ನೇಹಿತರೊಬ್ಬರು ಬೆಂಗಳೂರಿಗೆ ಹೋಗಿದ್ದರು. ಈಶಾನ್ಯ ಭಾಗದಿಂದ ಬಂದ ಒಂದಿಷ್ಟು ಜನ ಬಿದಿರಿನಿಂದ ಮಾಡಿದ ಅಲಂಕಾರಿಕ ವಸ್ತುಗಳನ್ನು ಮಾರಾಟ ಮಾಡುತ್ತಿದ್ದರು. ಇದೇನು ಹೊಸ ವಿಷಯವಲ್ಲ. ಗುಡಿ ಕೈಗಾರಿಕೆಗಳಲ್ಲಿ ತಯಾರಿಸಿದ ವಸ್ತುಗಳನ್ನು ಎಲ್ಲಾ ತಾಲ್ಲೂಕು ಕೇಂದ್ರಗಳಲ್ಲೂ ಮಾರಾಟ ಮಾಡುತ್ತಾರೆ. ರಸ್ತೆ ಬದಿಗಳಲ್ಲಿ ಗಿಡಮೂಲಿಕೆ ಔಷಧಗಳನ್ನು ಮೈಕಿನಲ್ಲಿ ಕೂಗುತ್ತಾ ಮಾರಾಟ ಮಾಡುವ ಜನ ಆಗಾಗ ಕಾಣ ಸಿಗುತ್ತಾರೆ. ಇವರು ಕೊಡುವ ಮೂಲಿಕೆಗಳಿಂದ ಎಲ್ಲಾ ತರಹದ ರೋಗಗಳು ವಾಸಿಯಾಗುತ್ತವೆ ಎಂದು ಕೂಗಿ-ಕೂಗಿ ಹೇಳುತ್ತಾರೆ. ದೀರ್ಘ ಕಾಲದಿಂದ ನರಳುತ್ತಿರುವ ರೋಗಿಗಳಿಗೆ ಇಂತಹ ರಸ್ತೆ ಬದಿಯ ಗಿಡಮೂಲಿಕೆಯ ವಕ್ತಾರರು ದೇವರಂತೆ ತೋರುತ್ತಾರೆ. ಹಿಮಾಲಯದ ತಪ್ಪಲಿಲಿಂದ ಗಿಡಮೂಲಿಕೆಗಳು ಸರ್ವರೋಗ ನಿವಾರಕಗಳು ಎಂದು ಆಕರ್ಷಕ ಮಾತಿನಲ್ಲಿ ಮೋಡಿ ಮಾಡುತ್ತಾನೆ. ಸರ್ಕಾರಿ ಆಸ್ಪತ್ರೆಗೆ ತಿರುಗಿ-ತಿರುಗಿ ವಾಸಿಯಾಗದ ಬಡವರು ತಮ್ಮ ಬೆನ್ನು-ಸೊಂಟ ನೋವಿನಿಂದ ಮುಕ್ತಿ ಪಡೆಯಲು ಇಂತವರ ಮೊರೆ ಹೋಗುವುದು ಸಹಜ. ಇದು ಒಂದು ತರಹದ ವ್ಯವಹಾರ-ವ್ಯಾಪಾರ. ಇಂತಹ ರಸ್ತೆ ಬದಿಯ ಟೆಂಟ್‌ಗಳು ಸಾಮಾನ್ಯ ೧-೨ ದಿನವಿರುತ್ತವೆ. ಊರಿನ ಬಕ್ರಗಳೆಲ್ಲಾ ಬಂದು ಹೋದ ತಕ್ಷಣ ಇವರು ಇಲ್ಲಿಂದ ಟೆಂಟ್ ಕಿತ್ತು ಮುಂದಿನ ಊರಿಗೆ ಹೋಗುತ್ತಾರೆ. ಹಾಗೇ ನಾಗಾಲ್ಯಾಂಡ್-ಮಿಜೋರಾಂನಿಂದ ಬಿದಿರುಬುಟ್ಟಿ ಮಾರಾಟಗಾರರು ಮಾರುವ ವಸ್ತುಗಳನ್ನು ಸಾವಯವ ಬಿದಿರಿನಿಂದ ತಯಾರಿಸಿದ್ದಾಗಿ ಹೇಳುತ್ತಿದ್ದರು. ಬೆಂಗಳೂರಿನ ನಮ್ಮ ಐ.ಟಿ. ಬಿ.ಟಿಯ ವೈಟ್‌ಕಾಲರ್‌ಗಳು ಕ್ಯೂ ಹಚ್ಚಿ ಅವರ ಸಾವಯವ ಬಿದಿರಿನಿಂದ ತಯಾರಾದ ವಸ್ತುಗಳನ್ನು ಮುಗಿಬಿದ್ದು ಕೊಳ್ಳುತ್ತಿದ್ದರು. ವಿದ್ಯಾವಂತರೆಲ್ಲ ಬುದ್ಧೀವಂತರಲ್ಲ. ಬುದ್ಧಿವಂತರೆಲ್ಲಾ ವಿವೇಕಿಗಳಲ್ಲ ಎಂದು ಯಾರೋ ಹೇಳಿದ ಮಾತು ಕೇಳಿ ನಗು ಬಂತು.
 
ಬಿದಿರಿನ ಬಗ್ಗೆ ಹೇಳುವುದಾದರೆ, ಬಿದಿರುನ್ನು ಅರಣ್ಯ ಇಲಾಖೆಯವರು ನಾಟವೆಂದು ಪರಿಗಣಿಸಿ, ಇದಕ್ಕೆ ನಿರ್ಭಂಧ ಹೇರಿದ್ದರು. ಬಿದಿರನ್ನು ಸಾಗಿಸಲು ಅರಣ್ಯ ಇಲಾಖೆಯ ಅನುಮತಿ ಕಡ್ಡಾಯ ಎಂಬ ಕಾನೂನು ಜಾರಿಯಲ್ಲಿತ್ತು.  ಬಿದಿರನ್ನು ಹುಲ್ಲು ಎಂದು ಪರಿಗಣಿಸಿದ ಅಧಿಕೃತ ಸರ್ಕಾರಿ ಆದೇಶ ಬಂದ ಮೇಲೆ ಬಿದಿರಿಗೆ ಮುಕ್ತ ಮಾರುಕಟ್ಟೆ ಸಿಕ್ಕಿತು. ಬಿದಿರು ಎಂಬ ಸಸ್ಯ ಹುಲ್ಲಿನ ಜಾತಿಗೆ ಸೇರಿದ ಅತ್ಯಂತ ವೇಗವಾಗಿ ಬೆಳೆಯುವ, ಜನರಿಗೆ, ರೈತರಿಗೆ, ಗುಡಿಕೈಗಾರಿಕೆಗಳಿಗೆ ಅತ್ಯಂತ ಉಪಯುಕ್ತ ವಸ್ತು. ಬಿದಿರನ್ನು ಬೆಳೆದು, ಬಿದಿರಿನ ಆಕರ್ಷಕ ವಸ್ತುಗಳನ್ನು ತಯಾರಿಸಿ ಬದುಕು ಕಂಡುಕೊಂಡ ಹಲವು ಕುಟುಂಬಗಳು ದೇಶದಲ್ಲಿವೆ. ಕಾಡು ಉತ್ಪನ್ನ ಎಂದು ಕರೆಸಿಕೊಳ್ಳುವ ಬಿದಿರಿಗೆ ಯಾರು ನೀರು-ಗೊಬ್ಬರ ನೀಡುವುದಿಲ್ಲ. ಅಂದರೆ ನಿಸರ್ಗ ಸಹಜವಾಗಿ ಬಿದಿರು ಬೆಳೆಯುತ್ತದೆ. ಇದಕ್ಕೆ ರಾಸಾಯನಿಕ ಗೊಬ್ಬರಗಳ ಅವಶ್ಯಕತೆಯಿಲ್ಲ, ಕೀಟನಾಶಕಗಳು ಬೇಕಾಗಿಲ್ಲ. ಅಂದರೆ ನಿಸರ್ಗಸಹಜವಾಗಿಯೇ ಇದು ಸಾವಯವ ಎಂಬ ಅರ್ಥವನ್ನು ಪಡೆದುಕೊಂಡಿರುತ್ತದೆ. ಇದನ್ನೆ ವ್ಯಾಪಾರಿ ಮನ:ಸ್ಥಿತಿಯವರು ಹಣವನ್ನಾಗಿ ಪರಿವರ್ತಿಸಿಕೊಂಡು ಲಾಭ ಮಾಡಿಕೊಳ್ಳುತ್ತಾರೆ. ಹುಟ್ಟಿನಿಂದ ಬೇರೇನು ನೋಡದ ನಮ್ಮ ವಿದ್ಯಾವಂತ ಐಟಿಗಳು ಸಾವಯವ ಪದವನ್ನು ಕೇಳಿಯೇ ಪುಳಕಿತರಾಗುತ್ತಾರೆ. ಕೇಳಿದಷ್ಟು ದುಡ್ಡು ಕೊಟ್ಟು ಈ ಸಾವಯವ ಬಿದಿರಿನ ಬುಟ್ಟಿಯನ್ನು ಹೆಮ್ಮೆಯಿಂದ ಮನೆಗೆ ಕೊಂಡೊಯ್ಯುತ್ತಾರೆ. ಹೀಗೆ ಗೋವಾದಲ್ಲೂ ಸಾವಯವ ಹತ್ತಿಯಿಂದ ಮಾಡಿದ ಟೀ ಶರ್ಟ್‌ಗಳನ್ನು ಮಾರಾಟ ಮಾಡುತ್ತಾರೆ. ಕೊಳ್ಳುವ ಕುರಿಗಳಿರುವಾಗ ಸಾವಯವ ಅಥವಾ ನಿಸರ್ಗ ಸಹಜವಾದ ಯಾವುದಕ್ಕೂ ಬೇಡಿಕೆ ಬರುತ್ತದೆ. ಇಲ್ಲೊಂದು ಚೋದ್ಯವಿದೆ. ಆರ್‍ಗ್ಯಾನಿಕ್ ಅಥವಾ ಸಾವಯವ ಅಥವಾ ನಿಸರ್ಗದತ್ತವಾದ ವಸ್ತುಗಳಿಂದ ತಯಾರಿಸಿದ ವಸ್ತುಗಳು ಎಂದರೇನು ಎಂಬುದನ್ನು ಮೊದಲು ತಿಳಿಯಬೇಕಾಗುತ್ತದೆ. ಪೇಟೆಯಲ್ಲಿ ಸಿಗುವ, ಪಳ-ಪಳ ಹೊಳೆಯುವ ಆಪಲ್‌ನ್ನು ಬೆಳೆಯುವಾಗ ಸಾಕಷ್ಟು ರಾಸಾಯನಿಕಗಳನ್ನು ಬಳಸಿರುತ್ತಾರೆ. ಹೇರಳ ಕೀಟನಾಶಕಗಳನ್ನು ಬಳಸಿ, ಬೇಗ ಕೆಡದಂತೆ ಮಾಡಲು ಪ್ರಿಸರ್‌ವೇಟಿವ್‌ಗಳನ್ನು ಚುಚ್ಚಿ, ಬಣ್ಣ ಬರಲು ಮತ್ತೊಂದು ಹಾರ್ಮೊನ್, ಸೈಜಿಗೆ ಮತ್ತೊಂದು ಹಾರ್ಮೊನ್. ಸದಾ ಹೊಳೆಯಲು ವ್ಯಾಕ್ಸ್ ಕೋಟಿಂಗ್ ಇತ್ಯಾದಿಗಳನ್ನು ಮಾಡುತ್ತಾರೆ. ದೂರದ ಕಾಶ್ಮೀರದಿಂದ ಭಾರತದ ಇತರ ಭಾಗಗಳಿಗೆ ಫ್ಲೈವುಡ್ ಡಬ್ಬದೊಳಗೆ ನೀಟಾಗಿ ಜೋಡಿಸಿ, ಸಾವಿರಾರು ಕಿಲೋಮೀಟರ್ ದೂರ ಬಂದು ಅಂಗಡಿಯಲ್ಲಿ ನೇತಾಡುತ್ತವೆ. ಅದ್ಯಾವಗಲೋ ವೈದ್ಯಲೋಕ ಹೇಳಿದ ಮಾತು ಸಾಮಾನ್ಯರ ತಲೆಯಲ್ಲಿ ಇಂದೂ ರಿಂಗಣಿಸುತ್ತದೆ. ದಿನಕ್ಕೊಂದು ಸೇಬು ತಿನ್ನು – ವೈದ್ಯರಿಂದ ದೂರವಿರು. ಇಷ್ಟೆಲ್ಲಾ ಕೀಟನಾಶಕ ಹಾಗೂ ರಾಸಾಯನಿಕಗಳನ್ನು ಬಳಸಿದ ಯಾವ ಸೇಬು ಆರೋಗ್ಯಕ್ಕೆ ಒಳ್ಳೆಯದೋ ಯಾರೂ ಹೇಳಬೇಕು. ನಾವು ಕೊಂಡು ತಿನ್ನುವ ಸೇಬಿನಲ್ಲಿ ರಾಸಾಯನಿಕ ಅಂಶಗಳು ಇವೆಯೇ ಎಂದು ನೋಡಲು ನಮ್ಮಲ್ಲಿ ಯಾವ ಸಲಕರಣೆಯೂ ಇಲ್ಲ. ಸೇಬು ತಿಂದು ವಾಂತಿಯಾದರೆ, ಮತ್ತೇ ವೈದ್ಯೋ ನಾರಾಯಣೋ ಹರಿ ಎಂದು ಅದೇ ವೈದ್ಯರತ್ತ ಚಿತ್ತ ಬೆಳಸಬೇಕು. 
 
ಟಿ.ವಿ. ಸಂಸ್ಕ್ರತಿ ಬಂದ ಮೇಲೆ ಪ್ರಪಂಚದ ಮೂಲೆಯಲ್ಲಿನ ಸುದ್ಧಿಗಳು ತಕ್ಷಣ ಜನರನ್ನು ತಲುಪುತ್ತವೆ. ಜನರ ಮನರಂಜನೆಯ ಪರಿಭಾಷೆಯೂ ಬದಲಾಗಿದೆ. ಎಲ್ಲಾ ತರಹದ ಮನರಂಜನೆಗಳೂ ಟಿ.ವಿ.ಯಲ್ಲಿ ಲಭ್ಯ. ಮನೆಹಾಳು ಮಾಡುವ ಧಾರಾವಾಹಿಗಳೂ ಬಿತ್ತರವಾಗುತ್ತವೆ. ಇಷ್ಟೇ ಆದರೂ ಸಹಿಸಬಹುದಿತ್ತು. ಮಧ್ಯೆ-ಮಧ್ಯೆ ಬರುವ ಜಾಹೀರಾತುಗಳು!! ಅಬ್ಬಾ ತಲೆಚಿಟ್ಟು ಹಿಡಿಸುತ್ತವೆ. ರೇಷ್ಮೆಯಂತಹ ಕೂದಲಿಗೆ ನಿಸರ್ಗದತ್ತವಾದ ವಸ್ತುಗಳಿಂದ ತಯಾರಿಸಿದ ಫಲಾನ ಶಾಂಪೂವನ್ನೇ ಬಳಸಿ ಎಂದು ಮೈದೋರುವ ಲಲನೆಯರು. ಹೀಗೆ ಪ್ರತಿಯೊಂದು ಐಟಂಗಳಿಗೂ ನೈಸರ್ಗಿಕ ಅಥವಾ ಅಮೂಲ್ಯ ಗಿಡಮೂಲಿಕೆಗಳಿಂದ ತಯಾರಿಸಿದ ಎಂದೋ ಹೇಳಿ ಜನರನ್ನು ಹಾದಿ ತಪ್ಪಿಸುತ್ತಾರೆ. ಈ ಭೂಮಿಯ ಮೇಲೆ ವಾಸಿಸುತ್ತಿರುವ ನಾವು ಬಳಸುವ ಪ್ರತಿಯೊಂದು ನಿಸರ್ಗದಿಂದ ಪಡೆದುದೇ ಆಗಿದೆ. ಯಾವುದೂ ನಿಸರ್ಗದಿಂದ ಹೊರತಾದುದಲ್ಲ. ಅತಿಭಯಂಕರ ವಿಷಗಳಾದ ಪಾದರಸ, ಸಯನೈಡ್ ಇತ್ಯಾದಿಗಳು ನಿಸರ್ಗದ ವಸ್ತುಗಳಿಂದ ತಯಾರಿದವುಗಳಾಗಿವೆ. ಶ್ವಾಸಕೋಶ ಕ್ಯಾನ್ಸರ್ ತರುವ ಕಲ್ನಾರು, ಭೂಬಿಸಿಗೆ ಕಾರಣವಾಗಿರುವ ತೈಲ, ಕಲ್ಲಿದ್ದಲು ಇವೆಲ್ಲವೂ ಭೂಮಿಯ ಒಡಲಾಳದಿಂದ ಬಗೆದವುಗಳಾಗಿವೆ.
 
ಬೆಂಗಳೂರಿನ ಸ್ನೇಹಿತರೊಂದಿಗೆ ಅದೂ-ಇದೂ ಮಾತನಾಡುತ್ತಾ ಇದ್ದಾಗ, ಮಾತು ಸಾವಯವ ಕೃಷಿ ಉತ್ಪನ್ನಗಳೆಡೆಗೆ ಹೊರಳಿತು. ಸಾವಯವ ಉತ್ಪನ್ನಗಳು ಎಂದರೆ ಯಾವುದೇ ಕೃತಕ ರಾಸಾಯನಿಕಗಳು, ಕೀಟನಾಶಕಗಳನ್ನು ಬಳಸದೇ ಬೆಳೆದ ಪದಾರ್ಥಗಳು. ಸಾವಯವ ಪದಾರ್ಥಗಳಿಗೆ ಬೇಡಿಕೆಯೂ ಹೆಚ್ಚು ಮತ್ತು ಇದನ್ನು ಬೆಳೆಯುವಲ್ಲಿ ಖರ್ಚು ಹೆಚ್ಚು ಎಂಬುದು ಅವರ ಅಭಿಪ್ರಾಯ. ಆಗವರು ಒಂದು ವಿಚಿತ್ರ ಸಂಗತಿಯನ್ನು ಹೇಳಿದರು. ಯಾವುದೇ ಉತ್ಪನ್ನ ಕಾಡಿನಿಂದ ಬಂದುದಾದರೆ ಅದಕ್ಕೆ ಸಾವಯವ ಎಂಬ ಸರ್ಟಿಫಿಕೇಟ್ ಬೇಕಿಲ್ಲ. ಏಕೆಂದರೆ, ಕಾಡಿನಲ್ಲಿ ಹೋಗಿ ಯಾರೂ ಔಷಧ ಸಿಂಪರಣೆ ಮಾಡುವುದಿಲ್ಲವಾದ್ದರಿಂದ ಅದು ಸಂಪೂರ್ಣ ಸಾವಯವ. ಹಾಗಾಗಿಯೇ ಕಾಡುತ್ಪನ್ನಗಳಿಗೆ ಬೇಡಿಕೆ ಹೆಚ್ಚು. ಅರಣ್ಯ ಇಲಾಖೆಯಿಂದ ಪಡೆದ ಪರವಾನಿಗೆಯನ್ನಿಟ್ಟುಕೊಂಡು, ವ್ಯಾಪಾರಿಗಳು ಹಳ್ಳಿಗಳ ಕೂಲಿ-ಕಾರ್ಮಿಕರಿಗೆ ಕಿಂಚಿತ್ ಆಮಿಷ ತೋರಿಸಿ ಲೋಡುಗಟ್ಟಲೆ ಕಿರುಅರಣ್ಯ ಉತ್ಪನ್ನಗಳನ್ನು ಅತಿಕಡಿಮೆ ಬೆಲೆಗೆ ಪಡೆದು ಅತಿ ಹೆಚ್ಚು ಬೆಲೆಗೆ ದೊಡ್ಡ ಪಟ್ಟಣಗಳಿಗೆ ಸಾಗಿಸಿ ಲಕ್ಷಾಂತರ ಲಾಭಗಳಿಸುತ್ತಾರೆ. ೧೦೦% ನೈಸರ್ಗಿಕ ಎಂಬುದನ್ನು ಬಿಂಬಿಸಲು ಅರಣ್ಯ ಇಲಾಖೆಯಿಂದ ಪಡೆದ ಪರವಾನಿಗೆಯನ್ನು ಗುರಾಣಿಯಂತೆ ತೋರುತ್ತಾರೆ. ಇದರಿಂದಾಗಿ ಅಮೂಲ್ಯ ಗಿಡಮೂಲಿಕೆಗಳು ಪಶ್ಚಿಮಘಟ್ಟಗಳಿಂದ ಕಣ್ಮರೆಯಾಗುತ್ತಿವೆ. ಬೆಂಕಿ ಪೆಟ್ಟಿಗೆ ಕಾರ್ಖಾನೆಗಳಿಗೆ ಮೆದು ಮರವೆಂದು ಬೂರಲ ಮರಗಳನ್ನು ಬೇಕಾಬಿಟ್ಟಿ ಕಡಿದು ಸಾಗಿಸಲಾಯಿತು. ಹೊಳಗೇರಲು ಮರಗಳ ಸಂತತಿ ಇದೀಗ ಅಳಿವಿನಂಚಿನಲ್ಲಿದೆ. ಉಪ್ಪಾಗೆಯಂತೂ ಹೇಳ ಹೆಸರಿಲ್ಲದಂತೆ ಮಾಯವಾಗಿದೆ. ಹೀನಾರಿ, ಕೊಡಸಗಳು ಅದೇ ಹಾದಿ ಹಿಡಿದಿವೆ. ಪುತ್ರಂಜೀವಿ ಮರಗಳು ಬೆರಳೆಣಿಕೆಯಷ್ಟಿವೆ. ಕಾಡು ದಾಲ್ಚಿನಿ (ನಿಸನಿ) ಮರಗಳ ಮಾರಣ ಹೋಮ ವರ್ಷಕ್ಕೆರೆಡು ಬಾರಿ ನಡೆಯುತ್ತದೆ, ಚಿಗುರಲು ಬಿಡದಂತೆ ಸವರಿ ಹಾಕಲಾಗುತ್ತಿದೆ. ಸೊಗದೆ ಬೇರಿನ ಸುವಾಸನೆ ಮುಂದಿನ ಜನಾಂಗಕ್ಕೆ ಮರೀಚಿಕೆಯಾಗಲಿದೆ. ಕಾಡರಶಿನ, ಕಾಡುಶುಂಠಿ ಇತ್ಯಾದಿಗಳು ಹೆಸರಿಲ್ಲದಂತೆ ಇತಿಹಾಸದ ಪುಟದೊಳಕ್ಕೆ ಪೋಟೊ ಮತ್ತು ವಿವರಗಳೊಂದಿಗೆ ಸೇರಿಹೋಗಲಿವೆ. ಇದೆಲ್ಲವನ್ನೂ ಹರಾಜು ಹಾಕಿದ ಅರಣ್ಯ ಇಲಾಖೆಯ ಲಾಭ ಹೆಚ್ಚುತ್ತದೆ. ಒಟ್ಟುಮಾಡಿ ಮಾರಾಟ ಮಾಡುವ ಮಧ್ಯವರ್ತಿಗಳ ಮನೆಬಾಗಿಲಿನಲ್ಲಿ ಐಷಾರಾಮಿ ಕಾರುಗಳು ಗರ್ವದ ಸಂಕೇತವಾಗಿ ನಿಂತಿರುತ್ತವೆ.
 
ಯಾವುದು ನಿಸರ್ಗದತ್ತವಾದುದು? ನಿಸರ್ಗದ ವ್ಯಾಪ್ತಿಯಂತೆ ಈ ಶಬ್ಧಕ್ಕೆ ನಿರ್ಧಿಷ್ಟವಾದ ವ್ಯಾಖ್ಯೆಯಿಲ್ಲ. ಎಲ್ಲವೂ ನಿಸರ್ಗದತ್ತವಾದ್ದರಿಂದ, ಲಾಭಗಳಿಸುವ ದುರಾಲೋಚನೆ ಹೊಂದಿರುವ ಕಂಪನಿಗಳು ಈ ಶಬ್ಧವನ್ನು ಹೇರಳವಾಗಿ ಬಳಸಿ ಜನರನ್ನು ಕುರಿಗಳನ್ನಾಗಿ ಮಾಡುತ್ತವೆ. ಯಾವುದೇ ಒಂದು ವಿಷಪೂರಿತ ರಸಾಯನವನ್ನು ತಯಾರು ಮಾಡಬೇಕಾದಲ್ಲಿ, ಹಲವು ರೀತಿಯ ಅಂಶಗಳನ್ನು ನಿರ್ಧಿಷ್ಟ ಪ್ರಮಾಣದಲ್ಲಿ ಸೇರಿಸಬೇಕಾಗುತ್ತದೆ. ಉದಾಹರಣೆಯನ್ನೇ ನೀಡುವುದಾದರೆ, ಸೇಬು ಹಣ್ಣಿನ ಬೀಜದಲ್ಲಿ ಸಯನೈಡ್ ಅಂಶವಿರುತ್ತದೆ. ಹಾಗೆಯೇ ನಿಸರ್ಗ ಹಲವು ಸಸ್ಯಗಳಲ್ಲಿ ಕ್ರಿಮಿ-ಕೀಟಗಳಿಂದ ಬಚಾವು ಮಾಡುವ ಸಲುವಾಗಿ ಔಷಧಗಳನ್ನು ಗಿಡಗಳಲ್ಲಿಯೇ ಇರುವ ಹಾಗೆ ಸೃಷ್ಟಿಸಿದೆ. ಮೇಲೆ ಹೇಳಿದ ಬಿದಿರು ಕೂಡ ಖಾದ್ಯ ಯೋಗ್ಯವಾಗಿದೆ. ಬಿದಿರಿನ ಮೊಳಕೆ (ಕಳಲೆ) ಯನ್ನು ತಂದು ವಿವಿಧ ಸ್ವಾದಿಷ್ಟ ಭಕ್ಷ್ಯಗಳನ್ನು ಮಲೆನಾಡಿಗರು ಮಾಡುತ್ತಾರೆ. ಬಿದಿರಿನಲ್ಲೂ ಸಯನೈಡ್ ಅಂಶವಿದೆ. ಸಯನೈಡ್ ಎಂಬುದು ವಿಷಕಾರಿಯಾಗಿದೆ. ಆದ್ದರಿಂದ ಬಿದಿರ ಮೊಳಕೆ ಅಥವಾ ಕಳಲೆಯನ್ನು ತಂದು ಅದರ ಸಿಪ್ಪೆಗಳನ್ನು ತೆಗೆದು ಬೇಕಾದ ಆಕಾರದಲ್ಲಿ ಹೆಚ್ಚಿಟ್ಟುಕೊಂಡು ಮೂರು-ನಾಲ್ಕು ದಿನ ನೀರಿನಲ್ಲಿ ನೆನೆಸಿಟ್ಟು ವಿಷದ ಅಂಶ ಕಳೆದುಹೋದ ಮೇಲೆ ಅದನ್ನು ಉಪಯೋಗಿಸುತ್ತಾರೆ. ಕೆಸವಿನ ಎಲೆಯೂ ಕೂಡ ಸವಿಯಲು ರುಚಿ. ಆದರೆ ಮಾಡುವ ಮುಂಚೆ ಅದಕ್ಕೂ ಕೆಲವು ಸಂಸ್ಕಾರಗಳನ್ನು ಮಾಡಬೇಕಾಗುತ್ತದೆ. ಸರಿಯಾಗಿ ಸಂಸ್ಕರಣೆ ಮಾಡದೆ ಕೆಸವಿನೆಲೆ  ಪದಾರ್ಥವನ್ನು ತಿಂದರೆ ಬಾಯಿ-ಗಂಟಲಲ್ಲಿ ವಿಪರೀತ ತುರಿಕೆ ಶುರುವಾಗುತ್ತದೆ.
 
ಹೀಗೆ ಪೇಟೆಗಳಲ್ಲಿ ಲಭ್ಯವಿರುವ ಸಾಕಷ್ಟು ನಿಸರ್ಗದತ್ತವೆಂಬ ಹಣೆಪಟ್ಟಿ ಹಚ್ಚಿಕೊಂಡ ಹಲವು ಉತ್ಪನ್ನಗಳು ವಾಸ್ತವಿಕವಾಗಿ ನೈಸರ್ಗಿಕವಾಗಿರುವುದಿಲ್ಲ. ಮಾರುಕಟ್ಟೆ ಸೆಳೆಯುವ ಒಂದು ತಂತ್ರವಾಗಿ ಈ ಶಬ್ಧ ಬಳಕೆಯಾಗುತ್ತದೆ. ಉದಾಹರಣೆಯಾಗಿ ಪೆಪ್ಸಿಯ ಒಡೆತನದಲ್ಲಿರುವ ನೇಕೆಡ್ ಎಂಬ ಪೇಯದ ಬಾಟಲಿಯ ಮೇಲೆ ನ್ಯಾಚುರಲ್ ಎಂಬುದನ್ನು ದೊಡ್ಡದಾಗಿ ಬಿಂಬಿಸಲಾಗಿದೆ ಮತ್ತು ಇದು ತೀವ್ರ ಆಕ್ಷೇಪಣೆಗೆ ಗುರಿಯಾಗಿದೆ. ಮೂಲತ: ಮಾವಿನ ಹಣ್ಣಿನಿಂದ ತಯಾರಾದ ಈ ನೇಕೆಡ್ (ಈ ಪದವೂ ಕೂಡ ಯುವಕ-ಯುವತಿಯರನ್ನು ಸೆಳೆಯುವ ಮಾರಾಟ ತಂತ್ರ) ಕಂಪನಿ ಕಳೆದ ವರ್ಷ ತಪ್ಪು ಮಾಹಿತಿ ನೀಡಿ ಗ್ರಾಹಕರಿಗೆ ಈ ಮೋಸ ಮಾಡದ್ದರಿಂದಾಗಿ ೯೦ ಲಕ್ಷ ಡಾಲರ್‌ಗಳ ಪರಿಹಾರವನ್ನು ನೀಡಿ, ತನ್ನ ಉತ್ಪನ್ನಗಳ ಮೇಲೆನ ಲೇಬಲ್‌ನ್ನು ಬದಲಾಯಿಸಿದೆ. ಇದೇ ತರಹ ಸುಮಾರು ನೂರು ಕಂಪನಿಗಳು ಗ್ರಾಹಕರಿಗೆ ದಂಡ ತೆತ್ತು. ತಮ್ಮ ಲೇಬಲ್ ಮೇಲೆ ಮುದ್ರಿಸುತ್ತಿದ್ದ ಆಲ್ ನ್ಯಾಚುರಲ್ ಪದಗಳನ್ನು ತೆಗೆದು ಹಾಕಿವೆ. ಇದು ಅಮೇರಿಕದ ಗ್ರಾಹಕನ ಗೆಲುವು ಆಗಿದೆ. ನಮ್ಮ ದೇಶದಲ್ಲಿಯೂ ನೈಸರ್ಗಿಕ , ಸಾವಯವ ಪರಿಪೂರ್ಣ ಗಿಡಮೂಲಿಕೆಗಳಿಂದ ಕೂಡಿದ ಇತ್ಯಾದಿ ಶಬ್ಧಗಳು ಗ್ರಾಹಕರನ್ನು ನಿತ್ಯವೂ ಮೋಸಗೊಳಿಸುತ್ತಿವೆ. ನಮ್ಮಲ್ಲಿ ಗ್ರಾಹಕ ಕಾಯ್ದೆ ಅಷ್ಟು ಜನಪ್ರಿಯವಾಗಿಲ್ಲ. ಹಾಗಾಗಿ ನೀವು ಸಾವಯವ ಅಥವಾ ಪ್ರಕೃತಿದತ್ತವಾದ ಎಂಬ ಶಬ್ಧಗಳನ್ನು ಪೋಣಿಸಿ ಯಾವುದನ್ನಾದರೂ ಮಾರಾಟ ಮಾಡಬಹುದು. ಅಮೆರಿಕಾದಲ್ಲಿ ನಿಷೇಧಗೊಂಡ ಅದೇ ನೇಕೆಡ್ ಕಂಪನಿಯ ತಂಪು ಪಾನಿಯಗಳು ಆಲ್ ನ್ಯಾಚುರಲ್ ಎಂಬ ಲೇಬಲ್ ಹೊತ್ತು ಭಾರತದಲ್ಲಿ ಮಾರಾಟವಾಗಬಹುದು.
 
ಯಾವುದೇ ವ್ಯವಹಾರದಲ್ಲಿ ಗ್ರಾಹಕನೇ ಅಂತಿಮ. ಗ್ರಾಹಕನಿಲ್ಲದೆ ಯಾವ ವಸ್ತುವಿಗೂ ಬೆಲೆಯಿಲ್ಲ. ಇದನ್ನರಿತ ಕಂಪನಿಗಳು ಗ್ರಾಹಕರನ್ನು ಸೆಳೆಯಲು ಸಾವಿರಾರು ತಂತ್ರಗಳನ್ನು ಉಪಯೋಗಿಸುತ್ತವೆ. ಮಜಾ ಎಂದರೆ ಅವೆಲ್ಲವೂ ಸುಳ್ಳಿನ ತಳಪಾಯವನ್ನೇ ಹೊಂದಿರುತ್ತವೆ. ಕುಲಾಂತರಿ ಬೆಳೆಯಿಂದ ತಯಾರಿಸಿದ ಒಂದು ಪಾನಿಯವೋ ಅಥವಾ ತಿನಿಸನ್ನು ವಾಸ್ತವವಾಗಿ ಯಾವುದರಿಂದ ತಯಾರಿಸಿದ್ದು ಎಂಬುದನ್ನು ಗ್ರಾಹಕನಿಗೆ ಅರ್ಥ ಮಾಡಿಕೊಳ್ಳುವಂತೆ ಮುದ್ರಿಸಬೇಕು ಎಂಬ ಕಾನೂನಿದೆ. ಕಾಲ-ಕಾಲಕ್ಕೆ ಈ ಕಾನೂನುಗಳನ್ನು ತಿದ್ದುಪಡಿ ಮಾಡಿ ಗ್ರಾಹಕ ಸ್ನೇಹಿಯಾಗಿ ಪರಿವರ್ತಿಸುವ ಪ್ರಯತ್ನಗಳು ನಡೆಯುತ್ತವೆ. ಆದರೂ ಕಂಪನಿಗಳು ರಂಗೋಲಿಯಡಿಯಲ್ಲಿ ನುಸುಳಿ ತಮ್ಮ ಕಾರ್ಯಸಾಧು ಮಾಡಿಕೊಳ್ಳುತ್ತವೆ. ಕುಲಾಂತರಿ ಶಬ್ಧಕ್ಕೆ ಪರ್‍ಯಾಯವಾದ ಶಬ್ಧಗಳನ್ನೇ ಟಂಕಿಸಿ ಉತ್ಪನ್ನಗಳನ್ನು ಮಾರಾಟ ಮಾಡುವ ಹುನ್ನಾರಗಳು ನಡೆಯುತ್ತವೆ. ೧೦೦% ನ್ಯಾಚುರಲ್ (ಉದಾ: ೧೦೦% ನ್ಯಾಚುರಲ್ ಸಿನ್ಸ್ ೧೦೦ ಇಯರ್‍ಸ್) ಈ ತರಹದ ಮುದ್ರಣವನ್ನು ಎಲ್ಲೆಂದರಲ್ಲಿ ಕಾಣಬಹುದು. ಇದರ ವಾಸ್ತವ ಅರ್ಥ ನೂರು ವರ್ಷಗಳಿಂದ ನಾವು ನಿಮಗೆ ಮೋಸ ಮಾಡುತ್ತಾ ಬಂದಿದ್ದೇವೆ ಎಂಬುದೇ ಆಗಿದೆ. ಕೋಟಿಗೊಬ್ಬರು ಇಂತದನ್ನು ಗಮನಿಸಿ ನ್ಯಾಯಾಲಗಳ ಗಮನ ಸೆಳೆಯಬಹುದು. ಸಾಕ್ಷಿ ಸಮೇತ ಸಿಕ್ಕಿ ಹಾಕಿಕೊಂಡ ಕಂಪನಿಗಳಿಗೆ ನ್ಯಾಯಾಲಯಗಳು ದಂಡವನ್ನು ವಿಧಿಸಬಹುದು. ಕೋಟ್ಯಾಂತರ ರೂಪಾಯಿಗಳನ್ನು ಬಾಚಿ ಶಕ್ತವಾದ ಕಂಪನಿಗೆ ಸಾವಿರಾರು ರೂಪಾಯಿಗಳ ದಂಡ ಯಕ:ಶ್ಚಿತ್ ಸಮಾನ. ದಂಡ ನೀಡಿಯೂ ಕಂಪನಿ ಗೆದ್ದ ಹೆಮ್ಮೆಯಲ್ಲಿ ಹುಸಿ ನಗುತ್ತದೆ. ಹಣಕ್ಕಾಗಿ ಬಿಂಕದ ಬೆಡಗಿಯರು ತಮ್ಮ ಮೈ-ಮಾಟವನ್ನು ಧಾರಳವಾಗಿ ದರ್ಶನ ಮಾಡುತ್ತಾರೆ. ಅಮೇರಿಕದಲ್ಲಿ ನಿಷೇಧಗೊಂಡ ಮೌಂಟೇನ್ ಡ್ಯೂ ತಂಪು ಪಾನೀಯ ಇಂಡಿಯಾದಲ್ಲಿ ಎಗ್ಗಿಲ್ಲದೆ ಮಾರಾಟವಾಗುತ್ತದೆ.
 
ಹಿರಿಯ ಸ್ನೇಹಿತರೊಬ್ಬರು ಕಾಲ್ಗೇಟ್ ಕಂಪನಿಗೆ ಒಂದು ಪತ್ರವನ್ನು ಬರೆದರು. ನೀವು ತಯಾರಿಸುವ ಪೇಸ್ಟಿನಲ್ಲಿ ದನದ ಮೂಳೆಗಳನ್ನು ಸೇರಿಸುತ್ತಾರೆ ಎಂಬ ಮಾತು ಪ್ರಚಲಿತದಲ್ಲಿದೆ ಇದು ನಿಜವೇ? ಎಂಬ ಪ್ರಶ್ನೆ. ಕಾಲ್ಗೇಟ್ ಕಂಪನಿಯಿಂದ ಇವರಿಗೊಂದು ಸುದೀರ್ಘ ಪತ್ರ ಬಂತು. ವಿವರಣೆ ಹೀಗಿತ್ತು. ನೀವು ಕೇಳಿರುವ ಪ್ರಶ್ನೆ ಸತ್ಯಕ್ಕೆ ದೂರವಾದದು. ನೀವು ಯಾವಾಗ ಬೇಕಾದರೂ ಬಂದು ಮುಂಬಯಿಯ ನಮ್ಮ ಕಾರ್ಖಾನೆಗೆ ಬೇಟಿ ನೀಡಬಹುದು. ಮುಂಬಯಿಯಲ್ಲರುವ ಆ ಕಾರ್ಖಾನೆಯಲ್ಲಿ ದನದ ಮೂಳೆಯನ್ನು ಸೇರಿಸುವುದಿಲ್ಲ. ಅಲ್ಲಿ ಬರೀ ಪ್ಯಾಕಿಂಗ್ ಮಾಡಲಾಗುತ್ತದೆ ಎಂಬುದನ್ನು ಈ ಸ್ನೇಹಿತರು ಕಂಡು ಹಿಡಿದರು. ದನದ ಮೂಳೆ ಪುಡಿಯನ್ನು ಬೆಂಗಳೂರಿನ ಕಸಾಯಿ ಖಾನೆಯಿಂದ ತರಿಸಿಕೊಳ್ಳಲಾಗುತ್ತದೆ ಎಂಬುದನ್ನು ಹಿರಿಯ ಪರ್ತಕರ್ತರೊಬ್ಬರು ಈ ಹಿಂದೆ ಜಾಹೀರುಗೊಳಿಸಿದ್ದರು. ಕಾಲ್ಗೇಟ್ ಪೇಸ್ಟು ಬಳಸುವ ಎಷ್ಟು ಜನರಿಗೆ ಈ ಸತ್ಯ ಗೊತ್ತು?


ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

4 Comments
Oldest
Newest Most Voted
Inline Feedbacks
View all comments
prashasti
10 years ago

ಸಖತ್ತಾಗಿದೆ ಅಖಿ ಭಾಯ್ 🙂
ಸಾವಯವ ಪದಾರ್ಥಗಳಿಗೆ c1, c2 ಅಂತೆಲ್ಲಾ ರೇಟಿಂಗ್ ಕೊಡೋದ್ರ ಬಗ್ಗೆ ಗೊತ್ತಿತ್ತು. ಆದ್ರೆ ಇಷ್ಟೆಲ್ಲಾ ಒಳಹೊರಹುಗಳಿರೋದ್ರ ಬಗ್ಗೆ ಅರಿವಿರಲಿಲ್ಲ. ಎಂದಿನಂತೆ ಮಾಹಿತಿಪೂರ್ಣ ಲೇಖನ 🙂

Utham Danihalli
10 years ago

Katu sathyagallu estavaythu lekana

Akhilesh Chipli
Akhilesh Chipli
10 years ago

ಧನ್ಯವಾದಗಳು ಪ್ರಶಸ್ತಿ & ಉತ್ತಮ್ ಜೀ. 

sharada.m
sharada.m
10 years ago

ಆಹಾರ ಪದ್ದತಿಯಲ್ಲಿ ನಾವು ಹಿರಿಯರನ್ನು ಅನುಸರಿಸುವುದು ಚೆನ್ನಾಗಿದೆ.

4
0
Would love your thoughts, please comment.x
()
x