ಬೆಂದಕಾಳೂರಿನ ಕುಂದಲಹಳ್ಳಿ ಅನ್ನೋ ಒಂದು ಹಳ್ಳಿಯಲ್ಲದ ಹಳ್ಳಿಯ ಕೆರೆಯ ಪಕ್ಕದಲ್ಲಿ ನಮ್ಮ ಪೀಜಿಯಿದೆ ಅನ್ನೋ ವಿಚಾರವನ್ನ ಹಿಂದಿನ ಲಹರಿಗಳಲ್ಲಿ ಓದೇ ಇರುವ ನಿಮಗೆ ಅದ್ರ ಹೆಸರು ಹೇಳೋ ಅಗತ್ಯ ಇಲ್ಲದಿದ್ದರೂ ಅಲ್ಲಿನ ಆಲಿಯೋ ಕತೆಯನ್ನಂತೂ ಹೇಳಲೇಬೇಕು. ಆಲಿಯೋನಾ ? ಅದ್ಯಾರು ಅಂತ ಊಹೆ ಮಾಡೋಕೆ ಶುರು ಮಾಡಿದ್ರಾ ? ನಾ ಹೇಳಹೊರಟಿದ್ದು ಲವ್ ಯೂ ಆಲಿಯಾ ಬಗ್ಗೆಯಲ್ಲ, ಮಾತಾಡಿದ್ದೆಲ್ಲಾ ಕಾಮಿಡಿಯಾಗೋ ಆಲಿಯೋ ಭಟ್ ಬಗ್ಗೆಯೋ ಅಲ್ಲ. ನಮ್ಮ ಪೀಜಿ ಕಿಶೋರ್ ಭಯ್ಯಾನ ಆಲಿಯೋ ಬಗ್ಗೆ. ಈಗ ಈ ಕಿಶೋರ್ ಭಯ್ಯಾ ಯಾರೂ ಅಂದ್ರಾ ? ನಮ್ಮ ಪೀಜಿಯಲ್ಲಿ ಸದ್ಯಕ್ಕಿರೋ ಬಾಣಸಿಗನೇ ಬಿಹಾರದ ಕಿಶೋರ್ ಭಯ್ಯಾ. ಅವ ಬಂದು ಆರು ತಿಂಗಳಾದರೂ ಒಂದಕ್ಷರ ಕನ್ನಡವನ್ನೂ ಕಲಿಯದೇ ಅವನಿಗೋಸ್ಕರ ನಾವೇ ಹಿಂದಿಯಲ್ಲಿ ಮಾತಾಡುವಂತಾಗಿರೋದು ಮಾರತ್ತಳ್ಳಿ ಮಾರ್ಕೇಟಲ್ಲಿ ಸಿಗೋ ಅಪರಿಚಿತನ ಎದುರು ಹಿಂದಿಯೋ,ಇಂಗ್ಲೀಷೋ,ತೆಲುಗೋ ಅಂತ ಕನ್ನಡ ಬಿಟ್ಟು ಬೇರೆಲ್ಲಾ ಭಾಷೆಯಲ್ಲಿ ಮಾತಾಡಬೇಕಾದ ಪರಿಸ್ಥಿತಿ ಬಂದೊದಗಿದಷ್ಟೇ ವಿಪರ್ಯಾಸ. ಆಲಿಯೋ ವಿಚಾರ ಕನ್ನಡಪರ ಘೋಷವಾಗಿ ಬದಲಾಗ್ತಾ ಇದೆ ಅಂದ್ಕೊಂಡ್ರಾ ? ಆ ತರವೇನೂ ಇಲ್ಲ. ಸದ್ಯಕ್ಕದನ್ನು ಪಕ್ಕಕ್ಕಿಟ್ಟು ಆಲಿಯೋ ಕತೆಗೆ ಮರಳೋಣ.
ಭಯ್ಯಾ ಇಸ್ಮೆ ಆಲಿಯೋ ಕಹಾಂ ಹೈ ? ರಾತ್ರೆ ಊಟಕ್ಕೆ ಕೂತಾಗ ಪಕ್ಕ ಬಂದು ಕೂತ ಭಯ್ಯಾ ಪ್ರಶ್ನೆಯೆತ್ತಿದ. ಯಾವ ಆಲಿಯೋನಪ್ಪ ಇವ್ನು ಕೇಳ್ತಿರೋದು ಅಂತ ಅರ್ಥ ಆಗದ ನಾನು ಅವನಿಗೆ ಏನಪ್ಪ ನೀ ಹೇಳ್ತಿರೋದು ಅಂದ. ಅವ ತನ್ನ ಮೊಬೈಲನ್ನು ತೋರಿಸ್ತಾ ಮೊದಲು ಕೇಳಿದ್ದ ಪ್ರಶ್ನೆಯನ್ನೇ ಪುನರಾವರ್ತಿಸಿದ. ಎರಡನೇ ಬಾರಿಯೂ ಅರ್ಥವಾಗದ ನಾನು ಯಾವ ಆಲಿಯೋ ಬಗ್ಗೆಯಪ್ಪ ನೀ ಹೇಳ್ತಿರೋದು, ಆಲಿಯೋ ಕಟ್ಕಂಡು ನಿಂಗೇನಾಗ್ಬೇಕು ಅಂತ ಕೇಳೋಕೆ ಹೊರಟವನು ಸುಮ್ಮನಾದೆ. ಹೊಸದಾಗಿ ಕಟ್ಕೊಳ್ಳೋದೇನು ? ಅವನಿಗೆ ಈಗಾಗ್ಲೇ ಮದುವೆಯಾಗಿ ಮಕ್ಕಳೂ ಇದ್ದಾರೆ ಅಂತ ಹಿಂದೊಮ್ಮೆ ಹೇಳಿದ ನೆನಪು. ಅಂತದ್ದರಲ್ಲಿ ಇದ್ಯಾವುದೂ ಆಲಿಯೋ ಬಗ್ಗೆ, ಅದೂ ಮೊಬೈಲಲ್ಲಿರೋ ಆಲಿಯೋ ಬಗ್ಗೆ ಕೇಳ್ತಿದ್ದಾನೆ ಅಂದ್ರೆ ಅದು ಮೊಬೈಲಿಗೆ ಸಂಬಂಧಪಟ್ಟಿದ್ದೇ ಇರಬೇಕು ಅಂದ್ಕೊಂಡು ಆಲಿಯೋ ಇಂದ ಏನಾಗ್ಬೇಕಪ್ಪ ನಿಂಗೆ ಅಂದೆ. ಅದೇ ಹಾಡೆಲ್ಲಾ ಬರತ್ತಲ್ಲ, ಆಲಿಯೋ ಪ್ಲೇಯರ್, ಅದೆಲ್ಲಿದೆ ಅಂದ ಅವ. ಅಯ್ಯೋ ಭಯ್ಯಾ ಅದು ಆಲಿಯೋ ಅಲ್ಲ, ಆಡಿಯೋ ಪ್ಲೇಯರ್ರು ಅಂತ ಅವನ ಪಾಲಿಗೆ ಹೊಸದೇ ಆಗಿದ್ದ ಆ ಸೆಕೆಂಡ್ ಹ್ಯಾಂಡ್ ಸ್ಮಾರ್ಟ್ ಫೋನಿನಲ್ಲಿ ಆಡಿಯೋ ಪ್ಲೇಯರ್ ಹುಡುಕತೊಡಗಿದೆ. ಒಂದು ಪದದ ಅಪಭ್ರಂಶ ಎಷ್ಟೆಲ್ಲಾ ಕಲ್ಪನೆಗಳನ್ನು ಹುಟ್ಟಿಸಬಹುದಲ್ವಾ ಅನ್ನೋ ಮುಗುಳ್ನಗೆ ಬೀರುತ್ತಾ.
ಅಂದ ಹಾಗೆ ಅದು ಹೆಸರಿಗೆ ಸ್ಮಾರ್ಟ್ ಫೋನಾಗಿದ್ದರೂ ಅದು ಸ್ಮಾರ್ಟಾಗೇನಿರಲಿಲ್ಲ. ಕೀಬೋರ್ಡಲ್ಲಿ ಒತ್ತಿದಂತೆ ಎರಡೆರಡು ಬಾರಿ ಒತ್ತಿದರೆ ಸ್ಪರ್ಷವನ್ನು ಗ್ರಹಿಸೋ ಪರದೆ, ಶಕ್ತಿಮೀರಿ ಒತ್ತಿದರೆ ಮಾತ್ರಾ ಹೆಚ್ಚುಕಮ್ಮಿಯಾಗೋ ವಾಲ್ಯೂಮ್ ಬಟನ್ ಸಾಲದೆಂಬಂತೆ ಆ ಫೋನಿಗೆ ಪಾಸ್ ವರ್ಡ್ ಬೇರೆ. ಆ ಪಾಸ್ವರ್ಡ್ ಏನಂತ ನಮ್ಮ ಭಯ್ಯಾನಿಗಲ್ಲ, ಅವನಿಗೆ ಆ ಫೋನನ್ನು ಮಾರಿದವನಿಗೂ ಗೊತ್ತಿಲ್ಲವಂತೆ. ಮತ್ತೆ ಕೆಲಸ ಹೆಂಗೆ ಮಾಡೋದು ಆ ಫೋನಿಂದ ಅಂದ್ರಾ ? ರಿಸ್ಟಾರ್ಟ್ ! ಪರದೆ ಲಾಕ್ ಆಯ್ತಾ ರೀಸ್ಟಾರ್ಟ್. ಅದು ಲಾಕ್ ಆಗೋವರೆಗೆ ಬಳಸೋದು. ಅಪ್ಪಿ ತಪ್ಪಿ ಅದು ಲಾಕ್ ಆಯ್ತಾ ಮತ್ತೆ ರೀಸ್ಟಾರ್ಟ್. ಬ್ಯಾಟರಿ ಖಾಲಿ ಆಗ್ತಾ ಬಂದ ರಿಮೋಟನ್ನು ತಟ್ಟಿ ಕುಟ್ಟಿ ಯಾವುದೋ ಕೋನದಿಂದ ಬಳಸೋ ತರ ಆತ ತನ್ನ ಮೊಬೈಲನ್ನೂ ಬಳಸ್ತಿದ್ದ. ಅದ್ರಲ್ಲಿ ಒಂದ್ಸಲ ಒತ್ತಿದರೆ ಓಪನ್ ಆಗಲ್ಲ. ಎರಡ್ಸಲ ಒತ್ತೋ ಹೊತ್ತಿಗೆ ಮತ್ಯಾವುದೋ ತೆರಕೊಳ್ಳತ್ತೆ. ಅಂತದ್ರಲ್ಲಿ ಅದರಲ್ಲಿ ಆಲಿಯೋ ಅಲ್ಲಲ್ಲ ಆಡಿಯೋ ಪ್ಲೇಯರ್ ಹುಡುಕೋದು ಐಸ್ ಬಕೇಟ್ ಚಾಲೆಂಜಿನ ತರಹ ಡಬ್ಬಾ ಮೊಬೈಲ್ ಚಾಲೆಂಜಂತೊಂದು ಮಾಡಬಹುದಾದ ಐಡಿಯಾ ಕೊಡುತ್ತಿತ್ತು !
ಅಂತೂ ಆಡಿಯೋ ಪ್ಲೇಯರ್ ಸಿಕ್ಕಿದ್ರೂ ಅದರಲ್ಲಿ ನುಡಿಸೋಕೆ ಆಡಿಯೋಗಳಿರಲಿಲ್ಲ. ಇದ್ದವೆಲ್ಲಾ ವಿಡಿಯೋ ಸಾಂಗುಗಳೇ. ಅದರಲ್ಯಾವುದನ್ನು ತೆರೆದ್ರೂ ಮೂಕಿ ಚಿತ್ರದಂತೆ ಬರೀ ವಿಡಿಯೋ ಬರ್ತಿತ್ತೇ ಹೊರತು ಶಬ್ದದ ಸುಳಿಯೇ ಇಲ್ಲ. ವಾಲ್ಯೂಂ ಬಟನ್ ನೋಡಿದ್ರೆ ೦ ತೋರುಸ್ತಾ ಇದೆ. ಏನು ಮಾಡಿದ್ರೂ ಅದನ್ನು ಹೆಚ್ಚಿಸೋಕೆ ಆಗಬಾರದೇ ? ಮೊದಲೇ ಹಳೇ ಮೊಬೈಲು. ಕೀಯೇನಾದ್ರೂ ಕೈಗೆ ಬಂದ್ರೆ ಅನ್ನೋ ಭಯ ಬೇರೆ. ಕೊನೆಗೆ ಇದ್ನ ಒತ್ತಿದ್ರೆ ಶಬ್ದ ಜಾಸ್ತಿಯಾಗುತ್ತೆ . ಆಗ್ಲಿಲ್ಲ ಅಂದ್ರೆ ಇದ್ನ ಮೊಬೈಲ್ ಶಾಪಿಗೆ ತಗೊಂಡೋಗಪ್ಪ ಅಂದೆ. ಯಾವ ಶಾಪ್ ಅಂತ ಅವನು ಮತ್ತೆ ಕೇಳೋದೇ ? ಅದೇ ಕಣಪ್ಪಾ, ನೀ ಎಲ್ಲಿಂದ ಇದಕ್ಕೆ ಕರೆನ್ಸಿ ಹಾಕಿಸ್ತೀಯೋ ಆ ಶಾಪ್ ಕಣಪ್ಪಾ ಅಂತ ಮತ್ತೊಂದು ರೌಂಡ್ ಅನ್ನ ಹಾಕಿಕೊಳ್ಳೋಕೆ ತೆರಳಿದೆ. ಈ ಮೊಬೈಲಲ್ಲಿ ಆಲಿಯೋ ಅಲ್ಲಲ್ಲ ಆಡಿಯೋ ಹುಡುಕೋಕೆ ಪಟ್ಟ ಶ್ರಮದಿಂದ ತಿಂದಿದ್ದ ಆಹಾರ ಕರಗಿತ್ತಲ್ವೇ ? ! ಎರಡನೇ ರೌಂಡಿನ ಆಹಾರ ಹೊಟ್ಟೆ ಸೇರೋ ಹೊತ್ತಿಗೆ ಭಯ್ಯಾನ ಶಕ್ತಿ ಪ್ರಹಾರಕ್ಕೆ ಆ ಮೂಕಿಯ ಬಾಯಲ್ಲಿ ಧ್ವನಿ ಹೊರಟಿತ್ತು. ಆಡಿಯೋ ಪ್ಲೇಯರಿಂದ ಭೋಜ್ಪುರಿ ಹಾಡಸಾಗರವೇ ಹರಿದಿತ್ತು.