ಆರ್ಕೆಸ್ಟ್ರಾಗಳೂ ಎಕ್ಸಾಮುಗಳೂ: ಪ್ರಶಸ್ತಿ ಅಂಕಣ

ಮೊನ್ನೆ ಬೆಳಗ್ಗೆ ಟೀವಿ ಹಾಕ್ತಿದ್ದ ಹಾಗೇ ಯಾವ್ದೋ ಕಾರ್ಯಕ್ರಮ. ನಿಮ್ಮ ಆರ್ಮ್ ನ ರೈಟ್ಗೆ ೪೫ ಡಿಗ್ರಿ ರೊಟೇಟ್ ಮಾಡಿ. ಆಮೇಲೆ ಲೆಗ್ಸ ನ ಹಾಗೇ ಪುಷ್ ಮಾಡಿ. ಹಾಗೇ ೨೦ ರೌಂಡ್ಸ್ ರಿಪೀಟ್ ಮಾಡಿ… ಯಪ್ಪಾ, ಇದ್ಯಾವ ಭಾಷೆಯೋ ಶಿವನೇ. ಬೆಂಗ್ಳೂರ ಕನ್ನಡ ಇಷ್ಟು ಕರಾಬ್ ಆಯ್ತಾ ಅಂತ ಬೇಜಾರಾಗಿ ಟೀವೀನೆ ಆಫ್ ಮಾಡ್ತೆ. ಸಂಜೆ ಮನೆಗೆ ವಾಫಾಸ್ ಬಂದ್ರೂ ಮತ್ತೆ ಟೀವಿ ಹಾಕೋ ಮಸಸ್ಸಾಗಿರ್ಲಿಲ್ಲ. ಮುಖಹೊತ್ತಿಗೆ(FB 🙂 ) ತೆಗಿತಾ ಇದ್ದೆ. ಅದೇ ಸಮಯಕ್ಕೆ ಪಕ್ಕದ ದೇವಸ್ಥಾನದ ಕಡೆಯಿಂದ ಮೈಕ್ ಸೌಂಡಲ್ಲಿ ಕನ್ನಡ ಹಾಡೇನೋ ಕೇಳಿದ ಹಾಗಾಯ್ತು. ಹಂಗೇ ಟೆರೇಸ್ಗೆ ಹೋಗಿ ನೋಡಿದ್ರೆ, ಅಯ್ ಆರ್ಕೆಸ್ಟಾ ! 🙂 ಈ ಬೆಂಗ್ಳೂರಲ್ಲಿ, ಅದೂ ಮಾರತ್ತಳ್ಳಿ ಮೂಲೇಲೂ ಕನ್ನಡ ಆರ್ಕೆಸ್ಟ್ರಾ.. ಪರ್ವಾಗಿಲ್ವೇ ಅನಿಸ್ತು. ಹಂಗೇ ಪಕ್ಕಂತ ಪ್ಲಾಷಾಗಿದ್ದು ಆರ್ಕೆಸ್ಟ್ರಾದಲ್ಲಿ ಏಳ್ತಿದ್ದ ಧ್ವನಿ ತರಂಗಗಳ ತರಾನೇ ಎದ್ದಿದ್ದು ಅದರೊಂದಿಗಿನ ಹಳೇ ನೆನಪುಗಳು..

ನಮ್ಮೂರಲ್ಲಿ ಆರ್ಕೆಸ್ಟ್ರಾ ಅಂತ ಮೈಕ್ ಹಾಕ್ತಿದ್ದಿದ್ದು ವರ್ಷದ ಗಣಪತಿ ಜಾತ್ರೇಲಿ ಮಾತ್ರ . ಬೇರೆ ಟೈಮಲ್ಲಿ ಮೈಕಾಸುರನ ಹಾವಳಿ ಇರ್ತಿದ್ದಿದ್ದು ಎಲ್ಲಾ ಕಡೆ ಇರೋ ಒಂದು ತಿಂಗಳು ಮಾತ್ರ 🙁 ಆದ್ರೆ ಪದವಿಗೆ ಅಂತ ಹೊರಗಡೆ ಓದೋಕೆ ಬಂದಾಗ ಮೈಕಾಸುರನ ಹಲಬಗೆಯ ಹಾವಳಿಗಳನ್ನ ಪ್ರತ್ಯಕ್ಷ ಅನುಭವಿಸೋ ಹಾಗಾಯ್ತು 🙁 ಒಂದು ತಿಂಗಳಂತೂ ಎಲ್ಲಿ ನೋಡಿದ್ರೂ ಮೈಕ್ ಹಾವಳಿ. ದೊಡ್ಡ ದೊಡ್ಡ ಅಟ್ಟಣಿಗೆ ಮೇಲೆ ಅವರು ಕಟ್ಟಿರೋ ಮೂರು ದಿಕ್ಕಿನ ಮೈಕುಗಳು. ಅದ್ರಿಂದ ಹೊರಬರ್ತಿದ್ದ ಓತಾನುಪ್ರೋತ ಪ್ರವಚನಗಳು, ಕೂಗಾಟಗಳು. ನಂಬಿಕೆಗಳು ವೈಯುಕ್ತಿಕ. ಅದ್ರ ಬಗ್ಗೆ ದೂಸ್ರಾ ಮಾತಿಲ್ಲ. ಆದ್ರೆ ಅದಕ್ಕೇಂತ ಪಾಪದ ವಿದ್ಯಾರ್ಥಿಗಳ ಭವಿಷ್ಯದ ಕತೆ ? ..

ನಿನ್ನಿಂದಲೇ ನಿನ್ನಿಂದಲೇ,ಕನಸೊಂದು ಶುರುವಾಗಿದೆ.. ಅಂತ ಹಾಡೊಂದು ಮೈಕಲ್ಲಿ ಕೇಳೋಕೆ ಶುರುವಾಯ್ತು ಅಂದ್ರೆ ಅಲ್ಲೆಲ್ಲೋ ಆರ್ಕೆಸ್ಟ್ರಾ(ರಸಮಂಜರಿ) ಶುರುವಾಗಿದೆ ಎಂದೇ ಅರ್ಥ. ಪ್ಯಾರ್ಗೆ ಆಗ್ಬುಟ್ಟೈತೆ ಇಂದ ಕುಲದಲ್ಲಿ ಮೇಲ್ಯಾವುದೋವರೆಗೆ ಎಲ್ಲಾ ರೇಂಜ್ ಹಾಡುಗಳೂ ಇರ್ತಿದ್ದ ಆ ರಸಮಂಜರಿಗಳೆಂದರೆ ಕಿವಿಗೊಂತರಾ ಹಬ್ಬ. ಎರಡು ಮೂರು ಕಿಲೋಮೀಟರ್ವರೆಗೂ ಕೇಳುವಷ್ಟು ಸಣ್ಣಕ್ಕೇ(!) ಇರ್ತಿದ್ದ ಮೈಕ್ ಸೌಂಡಿದು ಒಂತರಾ ಅನಿರ್ವಚನೀಯ ಆನಂದ 🙂 ಬೇರೆ ಟೈಮಲ್ಲಾದ್ರೆ ಆ ಆರ್ಕೆಸ್ಟ್ರಾ ನಡೀತಿದ್ರೂ ಅಲ್ಲಿಗೆ ಹೋಗ್ದೇ ಮನೇಲಿರೋದಾ ?! ಅಂತಾ ಸೀನೇ ಇಲ್ಲ. ಸುತ್ತಮುತ್ತ ಎಲ್ಲೇ ಇದ್ರೂ ಅಲ್ಲಿಗೆ ಹೋಗಿ ಅ ದು ಮುಗ್ಯೋವರ್ಗೂ ಅಲ್ಲೇ ಕೂತು/ನಿಂತು ಚಪ್ಪಾಳೆ ತಟ್ಟಿ,ಸೀಟಿ ಹೊಡ್ದು ಖುಷಿ ಪಡೋ ಜಮಾನ ನಮ್ದು 🙂 ಆದ್ರೆ ಏನ್ಮಾಡೋದು. ಈ ಆಕ್ರೆಸ್ಟ್ರಾಗಳು ಬರ್ತಿದ್ದಿದ್ದೇ ನಂ ಎಕ್ಸಾಂ ಟೈಮಲ್ಲಿ. ಇದೊಂತರಾ ಜಾಮೂನು ಬಾಯ್ಗಿಟ್ಟು ತಿನ್ಬೇಡ ಅಂದಂಗೆ 🙁 ಮನೆ ಬಾಗ್ಲು ಹಾಕ್ಕೊಂಡು ಕೂತ್ರೂ ಕಿವಿಗಪ್ಪಳಸ್ತಿದ್ದ ಫೇವರಿಟ್ ಹಾಡುಗಳು ಒಂದ್ಕಡೆ. ಮಾರ್ನೇ ದಿನ ಬೆಳ್ಗೆ ಆದ್ರೆ ಎಕ್ಸಾಮು. ಅದ್ಕೆ ಓದ್ಲೇ ಬೇಕಾದ ಅನಿವಾರ್ಯತೆ ಇನ್ನೊಂದು ಕಡೆ.. ಯಪ್ಪಾ.. ಮನೇಲೇಳೋಣ ಅಂದ್ರೆ “ಸಂತೇಲಿದ್ರೂ ನಿದ್ರೆ ಮಾಡ್ತಾರಂತೆ ಮಾಡೋರು, ಬೀದಿ ದೀಪದಡೀಲಿ ಓದಿ ರ್ಯಾಂಕ್ ಬಂದ್ರಂತೆ ದೊಡ್ಡೋರು..” ಅನ್ನೋರವ್ರು. ಹೇಳೋ ಉಪಯೋಗಿಲ್ಲ. ಯಾರಿಗೇಳೋದ್ರಿ ನಂ ಪ್ರಾಬ್ಮಮ್ಮು ? 🙁

ಈ ಹಬ್ಬಗಳಿಗೂ , ಪರೀಕ್ಷೆಗಳಿಗೂ ಆರ್ಕೆಸ್ಟ್ರಾಗಳಿಗೂ ತ್ರಿಕೋನ ಪ್ರೇಮಕತೆ ಏನಾದ್ರೂ ನಡೀತಿದ್ಯಾ ಅಂತ ಅನ್ಸೋಕೆ ಶುರು ಆಗಿದ್ದು ಪದವಿಗೇಂತ ಶಿವಮೊಗ್ಗಕ್ಕೆ ಬಂದಾಗ. ಡಿಸೆಂಬರಾಂತ್ಯಕ್ಕೆ ಹಬ್ಬಗಳ ಸೀಸನ್, ವರ್ಷಂತ್ಯ. ಅದೇ ಸಮಯದಲ್ಲಿ ಹೇಳಿ ಮಾಡಿಸಿದಂತೆ ಪರೀಕ್ಷೆಗಳ ಸಾಲು. ನಾನೇಕೆ ಕಮ್ಮಿ ಅಂತ ಅದೇ ಸಮಯಕ್ಕೆ ದಿನಾ ರಾತ್ರಿ ಒಂದಿಲ್ಲೊಂದು ಕಡೆ ಆರ್ಕೆಸ್ಟ್ರಾ. ಒಂದು ದಿನ ಭಗತ್ ಸಿಂಗ್ ಕನ್ನಡ ಸಂಘ ಆದ್ರೆ ಮಾರ್ನೇ ದಿನ ಹಿಂದಿನ ರೋಡಿನ ಮತ್ಯಾವ್ದೋ ಮಹಿಳಾ ಸಂಘ. ಆದಾದ ಮಾರ್ನೇ ದಿನ ಇನ್ನೆನ್ನೋ ಇನ್ಯಾವ್ದೋ ಸಂಘ. ಒಟ್ನಲ್ನಿ ಡಿನೆಂಬರ್ ಕೊನೆ,ಜನವರಿ ಮೊದಲ್ನೇ ವಾರ ಪೂರ್ತಿ ಇದೇ ಕತೆ.ಬೆಳ ಬೆಳಗ್ಗೆ ಎದ್ದು ಓದೋ ಗೆಳೆಯರು ಕೆಲವರಷ್ಟೆ. ಸಂಜೆ ಆಗ್ತಿದ್ದ ಹಾಗೆ ಪುಸ್ತಕದ ನೆನಪಾಗ್ತಿದ್ದ , ಓದೋ ಮೂಡು(!) ಬರ್ತಿದ್ದ ನಮ್ಗೆಲ್ಲಾ ಇದೊಂತರ ಸಂಕಟ ಶುರು ಆಗ್ತಿತ್ತು. ಗಣಪತಿ ಹಬ್ಬ, ದೀಪಾವಳಿ , ಕನ್ನಡ ರಾಜ್ಯೋತ್ಸವ.. ಹೀಗೆ ಹಬ್ಬದ ಹಿಂದೆ ಮುಂದೆಲ್ಲಾ ಇಂಟರ್ನಲ್ಲು(ಕಿರುಪರೀಕ್ಷೆ)ಗಳು ಮತ್ತು ಹಬ್ಬ ಅಂದ ಮೇಲೆ ಇದ್ದೇ ಇರ್ತಿದ್ದ ರಸಮಂಜರಿಗಳು.. ಕೇಳೋ ಹಂಗಿಲ್ಲ. ಬಿಡೋ ಹಂಗಿಲ್ಲದಂತಾ ಪರಿಸ್ಥಿತಿಗಳು.

ಮನೇಲಿ ನೆಂಟ್ರು ಬಂದ್ರೂ ಮಾತನಾಡಿಸದೇ ಡಿಸ್ಟರ್ಬ ಮಾಡಿಕೊಳ್ಳದೇ ತಮ್ಮದೇ ಪ್ರತ್ಯೇಕ ಸ್ಟಡಿ ರೂಂ ನಲ್ಲಿ ಓದ್ಕೊಳ್ಳೋ ಪಟ್ಟಣದ ಮಕ್ಕಳನ್ನು ನೋಡಿದ್ರೂ ಆ ತರದ ಪರಿಸ್ಥಿತೀಲಿ ಬೆಳೆದಿರ್ಲಿಲ್ಲ ನಾವು. ಕೆಲೋ ಸಲ ಪರೀಕ್ಷೆ ಸಮಯದಲ್ಲೇ ಮನೆಯಲ್ಲಾಗುತ್ತಿದ್ದ ಕಾರ್ಯಕ್ರಮಗಳು, ಬರ್ತಿದ್ದ ನೆಂಟರುಗಳ ನಡುವೆಯೇ ಓದಿದ್ದೂ ಉಂಟು. ಆದ್ರೆ ಮನೆ ಕಾರ್ಯಕ್ರಮ ಅಂದ್ರೆ ಒಂದೆರಡು ದಿನದ ಗಲಾಟೆ, ಶಾಂತ. ಆಮೇಲೆ ಎಲ್ಲಾ ಶಾಂತ..  ಹಳ್ಳಿಯ ಪ್ರಶಾಂತತೆಯ ನಡುವೆ ಬೆಳೆದಿದ್ದಕ್ಕೋ ಏನೋ ಈ ಮೈಕಾಸುರನ ಹಾವಳಿ ಹೆವೀ ಕಿರಿಕಿರಿ ಉಂಟು ಮಾಡ್ತಿತ್ತು.ಪರೀಕ್ಷೆ ಸಮಯದಲ್ಲಿ ಯಾರೋ ಕ್ರಿಕೆಟ್ ಮ್ಯಾಚನ್ನೋ, ಸೀರಿಯಲ್ಲನ್ನೋ ದೊಡ್ಡದಾಗಿ ಹಾಕಿದ್ರೆ ಸ್ವಲ್ಪ ಸಣ್ಣ ಮಾಡ್ರಿ ಅಂತ ಮನವಿ ಮಾಡ್ಬೋದು. ಆದ್ರೆ ಈ ಕಿಲೋಮೀಟರ್ಗಟ್ಲೆ ದೂರ ಕೇಳೋ ಮೈಕಾಸುರನಿಗೇನು ಮಾಡೋದು ? ನಂಗೊಬ್ಬನಿಗೆ ಎಕ್ಸಾಮು ಅಂತ ಮೈಕೇ ಹಾಕ್ಬೇಡ ಅನ್ನೋಕಾಗುತ್ತಾ ? ಮೈಕೈ ನೋವಿತ್ತು ಶಾಲೆಗೆ ಬರ್ಲಿಲ್ಲ ಅಂದ ಹಾಗೇನೇ ಮೈಕಿತ್ತು ಓದ್ಲಿಲ್ಲ ಅಂತ ಎಕ್ಸಾಮು ತಪ್ಪಿಸ್ಕೊಳ್ಳೊಕಾಗುತ್ತಾ ? 🙂 ಯಾರಿಗೇಳೋಣ ನಂ ಪ್ರಾಬ್ಲಮ್ಮು.. 🙁

ಮುಂಚೆ ಎಲ್ಲಾ ಚುನಾವಣೆ ಬಂತೂದ್ರೆ ಅದ್ರುದ್ದು ಇನ್ನೊಂದು ಗೋಳು. ಬೆಳಗ್ಗೆಯಿಂದ ಕೂಗುತ್ತಿದ್ದ ಆಟೋಗಳು ಸಾಲದೂಂತ ರಾತ್ರೆಯವರೆಗೂ ನಡೀತಿದ್ದ ಪ್ರಚಾರ ಭಾಷಣಗಳು. ಈಗ ಚುನಾವಣಾ ಆಯೋಗದ ಕಟ್ಟುನಿಟ್ಟಿನ ಕ್ರಮಗಳಿಂದ ಈ ಕೂಗಾಟಗಳು ಎಷ್ಟೋ ಕಮ್ಮಿಯಾಗಿದೆ. ಸಿಕ್ಕಾಪಟ್ಟೆ ಥ್ಯಾಂಕ್ಸ್ ರೀ ಸರ.

ಮೈಕಾಸುರನ ವಿರುದ್ದ ಕೋರ್ಟಲ್ಲೂ ಸೆಣಸಿ ಗೆದ್ದವರಿದ್ದಾರೆ. ರಾತ್ರೆ ಹತ್ತರ ಮೇಲೆ ಯಾವ್ದೇ ಕಾರಣಕ್ಕೂ ಮೈಕಾಕೋ ಹಾಗಿಲ್ಲ ಅಂತ ನ್ಯಾಯದೇವತೆಯ ಆದೇಶವೂ ಇದೆ ಅಂತ ಓದಿದ್ದೆ. ಕೇಳಿದ್ದೆ. ಆದ್ರೆ ತಿಂಗ್ಳುಗಟ್ಲೇ ಮೈಕಾಕೋರನ್ನ ಕಂಡು, ಮಧ್ಯರಾತ್ರಿಯ ಮೈಕಾಸುರನ ಮಧುರ ಧ್ವನಿ(!) ಕೇಳುವಾಗ ಈ ರೂಲುಗಳು ನೆನಪಾಗಿ ನಗು ಬರುತ್ತೆ !!

ಅನಿವಾರ್ಯ , ಪರ್ಯಾಯಗಳು ಒಂದೇ ನಾಣ್ಯದ ಎರಡು ಮುಖಗಳು ಅಂತೊಂದು ಮಾತಿದೆ. ಏನಾದ್ರೂ ಆಗ್ಬೇಕು ಅಂದ್ರೆ ಆಗ್ಬೇ ಬೇಕು ಅಷ್ಟೆ. ಓದದೇ ಹೆದ್ರಿ ಸಾಯೋಕಿಂತ, ಯಾರ್ಯಾರಿಗೋ ಶಾಪ ಹಾಕ್ತಾನೆ ದಿನ ಕಳಿಯೋಕಿಂತ ಆದಷ್ಟು ಓದೋಣ ಅನ್ನೋ ನಿರ್ಧಾರ ಮೂಡ್ತಿದ್ದಿದ್ದು ಅದೇ ಸಮಯದಲ್ಲಿ. ಮೂವತ್ತು ಪರ್ಸೆಂಟ್ ಓದೋಕಾದ್ರೆ ಅಷ್ಟೇ ಓದೋಣ. ಈ ಕಿವಿಗಪ್ಪಳಿಸೋ ಸಂಗೀತದ ಮಧ್ಯೆ ಹತ್ತು ಪರ್ಸೆಂಟ್ ಆದ್ರೂ ನೆನಪಿದ್ರೆ ಅಷ್ಟೇ ಸಾಕು. ಏನೂ ಬರೀದೆ ಇರೋಕಿಂತ ಹತ್ತು ಅಂಕ ಬಂದ್ರೂ ಅದು ದೊಡ್ಡ ಸಾಧನೆಯೇ. ಏನಾದ್ರಾಗ್ಲಿ ಓದ್ಲೇಬೇಕು ಅನ್ನೋ ಹಟ, ಛಲ ಮೂಡ್ತಿತ್ತು ಮನಸ್ಸಲ್ಲಿ. ಹೊರಗಡೆ ಸೌಂಡನ್ನು ಕಮ್ಮಿ ಮಾಡೋಕೆ ಅಂತ ಜೋರಾಗಿ ಫ್ಯಾನು ಹಾಕೋದು, ಆಥವಾ ಓಂಕಾರದ ಕ್ಯಾಸೆಟ್ ಹಾಕೋದು ಅಥವಾ ಬಾಯ್ಬಿಟ್ಟು ಓದೋದು .. ಹೀಗೆ ಶುರುವಲ್ಲಿ ಸುಮಾರು ಪ್ರಯೋಗ ಮಾಡಾಯ್ತು.. ಆದ್ರೆ ಕೊನೆಗೆ ಅರ್ಥ ಆದ(ಒಬ್ಬರಿಗೆ ಸತ್ಯ ಅನ್ಸಿದ್ದು ಇನ್ನೊಬ್ಬರಿಗೆ ಅನಿಸ್ಲೇ ಬೇಕಂತೇನಿಲ್ಲ 🙂 ) ಸಂಗತಿ ಅಂದ್ರೆ ಎಲ್ಲಕ್ಕೂ ಕಾರಣ ಮನಸ್ಸೇ ಅಲ್ವಾ ಅಂತ..

ನಾವು ಕಿರಿಕಿರಿ ಅಂದ್ಕೊಳ್ತಾ ಹೋದ್ರೆ ಎಲ್ಲವೂ ಕಿರಿಕಿರಿ ಅನ್ಸುತ್ತೆ. ಸೊಳ್ಳೆಯ ಗುಯ್ಗುಟ್ಟುವಿಕೆಯೂ ಡಿಸ್ಟರ್ಬ್ ಮಾಡುತ್ತೆ! ಸ್ವಲ್ಪ ಅತಿಶಯೋಕ್ತಿ ಅನ್ಸಿದ್ರೂನೂ ಪ್ರಯತ್ನಪಟ್ರೆ, ಇಲ್ಲಾ ಅಂದ್ಕೊಂಡ್ರೆ ಏನೂ ಇಲ್ಲ !! ವಾರ, ತಿಂಗಳು, ವರ್ಷ ಕಳೀತಾ ಹೆಂಗಾಗೋಯ್ತು ಅಂದ್ರೆ ಈ ಹಿನ್ನೆಲೇಲಿ ಈ ಆರ್ಕೆಸ್ಟ್ರಾ ಸಂಗೀತ ಇಲ್ದಿದ್ದೆ ಎಕ್ಸಾಮಿಗೆ ಓದೋ ಖುಷೀನೆ(!) ಸಿಗ್ತಿರ್ಲಿಲ್ಲ 🙂 ಏನೋ ಮಿಸ್ಸಾದಂಗೆ..:-) ಈಗಿರುವಷ್ಟು ತಾಳ್ಮೆ, ಸಹನೆ, ಸಹಿಷ್ಣುತೆ ಯನ್ನು ರೂಢಿಸಿಕೊಂಡಿರೋ ಹಿಂದೆ ಮೈಕಾಸುರನ ಕೊಡುಗೆಯನ್ನು ಎಂದೂ ಮರ್ಯೋಕೆ ಸಾಧ್ಯ ಇಲ್ಲ.  ನಿನ್ನ ಕೃಪೆಯಿಂದ ರ್ಯಾಂಕ್ ಬರದೇ ಇರಬಹುದು. ಆದ್ರೆ ಎಂತಾ ಗಲಾಟೆಯಲ್ಲೂ ಬುದ್ದಿ ಸ್ಥಿಮಿತ ಕಳೆದುಕೊಳ್ದೇ ಇರೋ ಅಂತ ವರ ಸಿಕ್ಕಿದೆ 🙂 ಜಾತ್ರೆ, ಬಸ್ಸು, ಬೋರು ಕೊರೆತಗಳು ..ಹೀಗೆ ಎಲ್ಲಿ ಬೇಕೆಂದರಲ್ಲಿ ಓದಬಲ್ಲ ಶಕ್ತಿ ಕಲ್ಪಿಸಿದೆ (ಅದರಲ್ಲಿ ತಲೆಗೆ ಹೋಗಿದ್ದೆಷ್ಟೆಂಬುದು ಬೇರೆ ಮಾತು 🙂 ). ನಿನ್ನ ಕೊಡುಗೆಗಳಿಗೆ, ಸುಮಧುರ (!) ನೆನಪುಗಳಿಗೆ ಎಷ್ಟು ಠ್ಯಾಂಕ್ಸ್ ಹೇಳಿದ್ರೂ ಕಮ್ಮೀನೆ. ಆದ್ರೂ ಹಿಂಗೇ ಒಂದು ಇರ್ಲಿ. ನಿನ್ನೆಲ್ಲಾ ಪ್ರತ್ಯಕ್ಷ, ಪರೋಕ್ಷ ಸಹಕಾರಗಳಿಗೆ ಈ ಮೂಲಕ ಮತ್ತೊಂದು ಥ್ಯಾಂಕ್ಸ್ ಮೈಕಾಸುರ..:-)

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

7 Comments
Oldest
Newest Most Voted
Inline Feedbacks
View all comments
Santhoshkumar LM
Santhoshkumar LM
10 years ago

Super!

prashasti
10 years ago

Thank you santhosh 🙂

medini
medini
10 years ago

ತುಂಬ ಚನಾಗಿದ್ದು .. ಇದು ನನ್ experience ಕೂಡ. .. i really enjoyed it … ಎಗ್ಸ್ಯಾಮ್ ಟೈಮ್ ಅಲ್ಲಿ ಕೇಳದೆ ಒಂದ್ ತರ ಮಜ. ತುಂಬಾ ಥ್ಯಾಂಕ್ಸ್ ಮತ್ತೆ ಆ ದಿನಗಳನ್ನ ನೆನಪು ಮಾಡ್ಸಿದ್ದಕ್ಕೆ.. ಯಾವಾಗ್ಲೂ ಇಂತ ಚಿಕ್ ಚಿಕ್ ವಿಷ್ಯಗಳೇ ದೊಡ್ ದೊಡ್ ಮಜ ಕೊಡದು ಅಲ್ದಾ….

prashasti
10 years ago
Reply to  medini

ಹೌದು ಅನುಸ್ತು ಮೇಧಿನಿ ಅಕ್ಕಾ 🙂 ಥ್ಯಾಂಕ್ಯೂ 🙂

Venkatesh
10 years ago

Wonderful 

GAVISWAMY
10 years ago

ಲೇಖನ ಚೆನ್ನಾಗಿದೆ .ಕಾಲೇಜು ದಿನಗಳಲ್ಲಿ 
ನಾನಾನು ಸಹಾ ಹಾಸ್ಟೆಲಿನ ಸುತ್ತಮುತ್ತ 
ಸಂಜಯನಗರದಲ್ಲಾಗಲೀ , ಗಂಗೇನಳ್ಳಿನಲ್ಲಾಗ್ಲಿ
ಆರ್ಕೆಸ್ಟ್ರಾ ನಡೀತಾ ಇದೆ ಅಂದ್ರೆ ಮಿಸ್ ಮಾಡ್ತಿರ್ಲಿಲ್ಲ.

 

Utham
10 years ago

Superb chenagidhe

7
0
Would love your thoughts, please comment.x
()
x