ಆರೋಗ್ಯದ ಮೇಲೆ ಸಕಾರಾತ್ಮಕ ಮನೋಭಾವದ ಪರಿಣಾಮ: ವೈ. ಬಿ. ಕಡಕೋಳ

KADAKOL Y.B.
ಮನುಷ್ಯನ ನಡೆ-ನುಡಿ ಆತನ ಮನೋಭಾವ, ಕ್ರಿಯೆ, ಪ್ರತಿಕ್ರಿಯೆಗಳು ಒಂದೇ ರೀತಿ ಇರುವುದಿಲ್ಲ. ಒಂದು ಸಾಮಾನ್ಯ ಪ್ರಚೋದನೆಗೆ ಹತ್ತಾರು ಜನ ಹತ್ತಾರು ರೀತಿಯ ಪ್ರತಿಕ್ರಿಯೆಗಳನ್ನು ವ್ಯಕ್ತಪಡಿಸಬಹುದು. ಉದಾಹರಣೆಗೆ ಒಂದು ಮಗು ಅಳುತ್ತಿದ್ದರೆ ಕೆಲವರು "ಅಯ್ಯೋ ಪಾಪ ಎನ್ನಬಹದು. ಇನ್ನು ಕೆಲವರು “ಛಿ ಏನು ಅನಿಷ್ಟ ಎಷ್ಟು ಅಳುತ್ತೆ” ಎನ್ನಬಹುದು. ಇನ್ನು ಕೆಲವರು “ಪಾಪ ಆ ಮಗುವನ್ನು ರಮಿಸಬೇಕು” ಎನ್ನಬಹುದು. ಒಬ್ಬರು ಮಗುವಿನ ಪಕ್ಕದಲ್ಲಿ ಕುಳಿತು ರಮಿಸಲು ಯತ್ನಿಸಬಹುದು. ಹೀಗೆ ಕೇವಲ ಒಂದು ಘಟನೆ ಹತ್ತಾರು ಜನರಲ್ಲಿ ಹತ್ತಾರು ಯೋಚನೆಗಳನ್ನು ಹುಟ್ಟುಹಾಕುತ್ತದೆ. ಆದರೆ ನಾವಿಲ್ಲಿ ಗಮನಿಸಬೇಕಾದ ಸಂಗತಿ ಎಂದರೆ ಇಲ್ಲಿರುವ ಅನೇಕ ಮನಸ್ಸುಗಳ ಭಾವನೆಯನ್ನು.      

ನಮ್ಮ ಬದುಕಿನಲ್ಲಿ ನಮ್ಮಲ್ಲಿ ಕರುಣೆ, ಶಾಂತಿ, ಸಮಚಿತ್ತ ಮನಸ್ಸು. ಒಳ್ಳೆಯದರ ಬಗ್ಗೆ ಮೆಚ್ಚುಗೆ, ಪ್ರಶಂಸೆ, ಪ್ರೋತ್ಸಾಹ ಇತ್ಯಾದಿ ಗುಣಗಳನ್ನು ಹೊಂದಿದ್ದಲ್ಲಿ ಮಾತ್ರ ಅಳುತ್ತಿರುವ ಮಗುವನ್ನು ರಮಿಸುವ ಮನೋಭಾವನೆ ನಮ್ಮ ಮನಸ್ಸಲ್ಲಿ ಹುಟ್ಟುತ್ತದೆಯೇ ವಿನಃ ವಿಕೃತ ಮನಸ್ಸು ನಮ್ಮದಾಗಿದ್ದಲ್ಲಿ ಆ ಮಗುವಿನ ಬಗ್ಗೆ ತಾತ್ಸಾರ ಮನೋಭಾವನೆ ಹೊಂದುವುದು.      

ಭಾವನೆಯು ಚಿತ್ತಸ್ಥಿತಿ, ಮನೋಧರ್ಮ, ವ್ಯಕ್ತಿತ್ವ, ಸ್ವಭಾವ ಹಾಗೂ ಪ್ರೇರಣೆಯೊಂದಿಗೆ ಸಂಬಂಧವನ್ನು ಹೊಂದಿದೆ. ಇಂಗ್ಲೀಷ “ಇಮೋಷನ್” ಎಂಬ ಪದ ಪ್ರೆಂಚ ಪದ “ಇಮೌವಾಯರ್” ಎಂಬ ಪದದಿಂದ ಬಂದಿದೆ. ಇದು ಲ್ಯಾಟಿನ್ ಪದ “ಇಮೋವಿರ್” ಅನ್ನು ಆಧರಿಸಿದೆ.     

ಮಾನವ ವಿಜ್ಞಾನವು ಮಾನಸಿಕ ಕ್ರಿಯೆ, ಕಾಯಿಲೆ, ಮತ್ತು ನರವ್ಯೂಹದ ಕಾರ್ಯವಿಧಾನಗಳಲ್ಲಿ ಭಾವನೆಗಳು ತಮ್ಮದೇ ಆದ ಪಾತ್ರವಹಿಸುತ್ತದೆ. ಗ್ರಾಮೀಣ ಪ್ರದೇಶದಲ್ಲಿ ಒಂದು ಮಾತಿದೆ ಹೊಟ್ಟೆಕಿಚ್ಚು ಮಾಡುವ ವ್ಯಕ್ತಿಗಳಿಗೆ ಆತನ ಹೊಟ್ಟೆಯಲ್ಲಿ ಹುಣ್ಣಾಗುತ್ತದೆ ಎನ್ನುತ್ತಾರೆ. ಲೊಚಲೊಚ ವಟಗುಡುವ ವ್ಯಕ್ತಿಗಳಿಗೆ ನೀನು ಕಪ್ಪೆ ಅಥವ ಹಲ್ಲಿಯಂತಾಗ್ತಿಯ ಅಂತಾರೆ ತಾತ್ಪರ್ಯವಿಷ್ಟೇ ನಮ್ಮ ಮನಸ್ಸಿನ ಭಾವನೆಗಳು ನಮ್ಮ ವ್ಯಕ್ತಿತ್ವವನ್ನು ತೋರಿಸುತ್ತವೆ.    

ಇಲ್ಲಿ ವೈಜ್ಞಾನಿಕ ದೃಷ್ಟಿಕೋನದಿಂದ ಭಾವನಗೆಳನ್ನು ಮಾನಸಿಕ ಕ್ರಿಯೆ ಮತ್ತು ವರ್ತನೆಯಾಗಿ ನೋಡಬೇಕಾಗುತ್ತದೆ. ಯಾವುದೇ  ಒಂದು ಪರಿಸರಕ್ಕೆ ಹೊಂದಿಕೊಳ್ಳಲು ಅಸಾಧ್ಯವಾದ ಮನಸ್ಸು ತನ್ನಲ್ಲಿ ಹಲವಾರು ನೋವುಗಳನ್ನು ಅನುಭವಿಸುತ್ತದೆ. ಅಲ್ಲದೇ ಯೋಚನೆಯಲ್ಲಿ ತನ್ನನ್ನು ತಾನು ಮುಳುಗಿಸಿಕೊಳ್ಳುತ್ತದೆ ಮಾತ್ರವಲ್ಲದೆ ಇಂತಹ ಒಂದು ಮನಸ್ಥಿತಿಯುಳ್ಳ ವ್ಯಕ್ತಿಯು ಹೆಚ್ಚು ಒಂಟಿಯಾಗಿರಲು ಬಯಸುತ್ತಾನೆ. ಒಟ್ಟಾರೆಯಾಗಿ ಅಂತರ್ಮುಖಿಯಾಗಿ ತನ್ನ ಜೀವನವನ್ನು ನಡೆಸುತ್ತಾನೆ ಇದರಿಂದ ಅವರಲ್ಲಿ ಅಪರಾಧಿತನ ಹೆಚ್ಚು ಉದ್ಬವಿಸುತ್ತದೆ.    

ಇಂದು ಅನೇಕ ವಿಕೃತ ಕಾರ್ಯಗಳ ವರದಿಗಳನ್ನು ದಿನಪತ್ರಿಕೆಗಳಲ್ಲಿ ದೂರದರ್ಶನ ವಾಹಿನಿಗಳ ಸುದ್ದಿ ಜಾಲದಲ್ಲಿ ನಾವು ನೋಡುತ್ತಿರುವ ಅನೇಕ ಘಟನೆಗಳು ಮನೋವಿಕಾರಕ್ಕೆ ಒಳಗಾದ ವ್ಯಕ್ತಿಗಳು ಮಾಡುವ ಕೃತ್ಯಗಳು.      

ತನ್ನ ಭಾವನೆಗಳನ್ನು ತಾನಿರುವ ಪರಿಸರದಲ್ಲಿ ಯಾರಿಗೂ ಹೇಳಿಕೊಳ್ಳಲಾರದೇ ತನ್ನಲ್ಲಿ ತಾನು ಕೊರಗುವ ವ್ಯಕ್ತಿ ಕೊನೆಗೊಂದು ದಿನ ಮನೋರೋಗಿಯಾಗುತ್ತಾನೆ. ಸಂವೇದನೆ ಮತ್ತು ಭಾವನೆಗಳೇ ಇಲ್ಲದ ಪರಿಸ್ಥಿತಿಯಲ್ಲಿ ಎಂದಿಗೂ ಸೂಕ್ಷ್ಮ ಮನಸ್ಸು ಇರಲು ಬಯಸುವುದಿಲ್ಲ. ಅಂತಹ ಸೂಕ್ಷ್ಮ ಮನಸ್ಸಿಗೆ ನೋವುಂಟು ಮಾಡಿದವರ ಬಳಿಯೂ ಇನ್ನೆಂದೂ ತನ್ನ ಆತ್ಮವಿಶ್ವಾಸಕ್ಕೆ ಧಕ್ಕೆ ತರಿಸಿಕೊಳ್ಳುವಂತಹ ಘಟನೆಗಳನ್ನು ಉಂಟು ಮಾಡಿಕೊಳ್ಳುವುದಿಲ್ಲ. ಈ ರೀತಿಯ ಘಟನೆ ಬಂದೊದಗಿದಾಗ ಸೂಕ್ಷ್ಮ ಮನಸ್ಸಿನ ವ್ಯಕ್ತಿಗಳು ತಮಗೆ ಹೊಂದಿಕೊಳ್ಳಲಾರದ ವ್ಯಕ್ತಿಗಳಿಂದ ದೂರ ಹೋಗಬಹುದು. ಇಲ್ಲವೇ ಸನ್ನಿವೇಶವನ್ನೇ ಬದಲಾವಣೆ ಮಾಡಬಹುದು. ಅಥವ ಅವರನ್ನು ಮರೆತು ಹೊಸ ವಿಷಯದತ್ತ ಮಾತನಾಡತೊಡಗಬಹುದು. ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಅವರ ಮಾತಿನಿಂದ ಉದ್ವಿಗ್ನರಾಗಬಹುದು.      

ಇಂತಹವರು ತಮ್ಮ ಮನಸ್ಸಿನ ಹತೋಟಿ ತಪ್ಪಿ ಆರೋಗ್ಯ ಹದಗೆಡುವಂತಹ ಕಾರ್ಯಗಳಲ್ಲಿ ತೊಡಗುವರು. ಉದಾಹರಣೆ ಧೂಮ್ರಪಾನ, ಮದ್ಯವ್ಯಸನ, ಲೈಂಗಿಕತೆ, ಕಳ್ಳತನ ಇಂತಹ ಕುಕೃತ್ಯಗಳಲ್ಲಿ ತೊಡಗಿ ತಮ್ಮ ಶಾರೀರಿಕ ಸ್ವಾಸ್ತ್ಯವನ್ನು ಹದಗೆಡಿಸಿಕೊಳ್ಳುವ ಜೊತೆಗೆ ಸಮಾಜದಲ್ಲಿಯೂ ಕೂಡ ಅಪರಾಧಿ ಸ್ಥಾನದಲ್ಲಿ ನಿಲ್ಲುವರು.     

ಭಯ, ದ್ವೇಷ, ಅಸೂಯೆ, ಸೋಲಿನ ಮನೋಭಾವ ಹಾಗೂ ಸ್ವಾರ್ಥವು ಸಮಸ್ತ ದೇಹದ ಅಂಗಾಂಗಗಳಿಗೆ ಕೆಡಕನ್ನುಂಟು ಮಾಡಿ ಕಾಯಿಲಿಗೆ ಕಾರಣವಾಗುತ್ತವೆ.     

ಹಾಗಾದರೆ  ಆರೋಗ್ಯದ ಮೇಲೆ ಸಕಾರಾತ್ಮಕ ಮನೋಭಾವದ ಪರಿಣಾಮ ಬೆಳೆಸಿಕೊಳ್ಳಬೇಕಾದರೆ ನಮ್ಮ ದೈನಂದಿನ ಬದುಕನ್ನು ನಾವು ಹೇಗೆ ರೂಢಿಸಿಕೊಳ್ಳಬೇಕು ಎಂಬುದಕ್ಕೆ ಇಲ್ಲಿವೆ ಕೆಲವು ಸಲಹೆಗಳು. 
•    ಸದಾಕಾಲ ನಾವು ಧನಾತ್ಮಕ ಚಿಂತನೆಯನ್ನು ಹೊಂದಬೇಕು. 
•    ಹೊಸ ಹವ್ಯಾಸಗಳಾದ ಯೋಗ, ಚಿತ್ರಕಲೆ, ಸಂಗೀತ ಇತ್ಯಾದಿಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. 
•    ವರ್ತನೆಯಲ್ಲಿ ಪರಿವರ್ತನೆಯನ್ನು ತಂದುಕೊಳ್ಳಬೇಕು. 
•    ಜೀವನ ಶೈಲಿಯಲ್ಲಿ ಸ್ವಲ್ಪಮಟ್ಟಿಗಿನ ಬದಲಾವಣೆಯನ್ನು ತರುತ್ತ ನೈತಿಕ ಮೌಲ್ಯಗಳನ್ನು ಒಂದೊಂದಾಗಿ ನಮ್ಮಷ್ಟಕ್ಕೆ ನಾವು ಅಳವಡಿಸಿಕೊಳ್ಳುತ್ತ ಸಾಗಬೇಕು. 
•    ಸದಾ ಅಧ್ಯಯನಶೀಲರಾಗಬೇಕು. ಉತ್ತಮ ಪುಸ್ತಕ, ಪತ್ರಿಕೆಗಳಲ್ಲಿ ಒಳ್ಳೆಯ ಬರಹಗಳನ್ನು ಒದಬೇಕು. 
•    ಶಿಸ್ತುಬದ್ದ ಜೀವನಕ್ಕೆ ಶರಣಾಗಬೇಕು. 
•    ನಮ್ಮ ಜವಾಬ್ದಾರಿಯನ್ನು ಮೊದಲು ನಾವು ಅರಿಯಬೇಕು. 
•    ನಾವು ಸೇವಿಸುವ ಆಹಾರವು ಕೂಡ ಮನಸ್ಸಿನ ಮೇಲೆ ಪ್ರಭಾವ ಬೀರುವುದು.

ಡಾಃಜೋಸೆಫ್ ಎಫ್. ಮಾಂಟಿಗ್ ರವರು ಹೀಗೆ ಹೇಳಿದ್ದಾರೆ “ನೀನೇನು ತಿನ್ನುವಿಯೋ ಅದರಿಂದ ಹೊಟ್ಟೆ ಹುಣ್ಣು ಬರುವುದಿಲ್ಲ. ನಿನ್ನನ್ನೇನು ತಿನ್ನುತ್ತದೆಯೋ ಅದರಿಂದಲೇ ಹೊಟ್ಟೆಯಲ್ಲಿ ಹುಣ್ಣಾಗುವುದು” ಇದರರ್ಥ ನಮ್ಮ ಬದುಕಿನಲ್ಲಿ ದೈನಂದಿನ ಆಹಾರ ಕ್ರಮವೂ ಕೂಡ ಮನಸ್ಸಿನ ಮೇಲೆ ಒಳ್ಳೆಯ ಹಾಗೂ ವಿಕೃತ ಪರಿಣಾಮವನ್ನುಂಟು ಮಾಡುತ್ತದೆ. ಕಾರಣ ಮಾಂಸ, ಮದ್ಯಪಾನ, ದೂಮ್ರಪಾನದಂತಹ ಆಹಾರ ಸೇವಿಸದೇ ಹಣ್ಣು ಹಂಪಲು ತರಕಾರಿ ಶಾಖಾಹಾರಿ ವಸ್ತುಗಳಿಂದ ತಯಾರಾದ ಆಹಾರ ಸೇವನೆ ಕೂಡ ಮನಸ್ಸಿನ ಮೇಲೆ ಉತ್ತಮ ಪ್ರಭಾವ ಬೀರುವಲ್ಲಿ ಸಹಾಯಕ ಕಾರಣ ತಾತ್ವಿಕ ಆಹಾರ ಸೇವನೆ ರೂಢಿಸಿಕೊಳ್ಳಬೇಕು. 

ನಮ್ಮಲ್ಲಿ ಮನಸ್ಸು ರೋಗ ಸೃಷ್ಟಿಸಬಲ್ಲದು ಹಾಗೂ ಗುಣಪಡಿಸಬಲ್ಲದು. ತಾಳ್ಮೆ. ಪ್ರೀತಿ. ಕರುಣೆ. ದಾನಬುದ್ದಿ ಹಾಗೂ ನಿಸ್ವಾರ್ಥ ಸೇವಾ ಮನೋಭಾವ ಇವೇ ಮೊದಲಾದ ರಚನಾತ್ಮಕ ಭಾವನೆಗಳು ದೇಹದ ಎಲ್ಲಾ ಭಾಗಗಳಲ್ಲಿ ಉತ್ಸಾಹಯುತ ಆರೋಗ್ಯಕರ ಚಟುವಟಿಕೆಗಳಿಗೆ ಕಾರಣವಾಗುತ್ತವೆ. ಆದ ಕಾರಣ ನಾವು ಶ್ರೀಮಂತರಿರಲಿ, ಬಡವರಿರಲಿ ದೈಹಿಕವಾಗಿ ಮಾನಸಿಕವಾಗಿ ಆರೋಗ್ಯದಿಂದ ಇರಬೇಕಾದಲ್ಲಿ ನಮ್ಮ ಮನಸ್ಸಿನ ಭಾವನೆಗಳು ನಮ್ಮ ಹತೋಟಿಯಲ್ಲಿರಬೇಕು. ಮನವೆಂಬ ಮರ್ಕಟದಂತೆ ನಾವು ಬದುಕದೇ ನಮ್ಮ ಹಿಡಿತದ ಮನಸ್ಸಿನಂತೆ ನಾವು ಬದುಕಬೇಕು. ಅಂದಾಗ ಮಾತ್ರ ಸಕಾರಾತ್ಮಕ ವಿಚಾರಗಳು ನಮ್ಮ ಬದುಕಿನಲ್ಲಿ ರೂಢಿತವಾಗುತ್ತವೆ. ಚಿತ್ತ ಚಾಂಚಲ್ಯ ನಮ್ಮತ್ತ ಸುಳಿಯದು. 

-ವೈ. ಬಿ. ಕಡಕೋಳ


   

 

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x