ಕಾಲಚಕ್ರ ಉರುಳುತ್ತನೇ ಇರುತ್ತದೆ. ಉರುಳುವಾಗ ಚಕ್ರದ ಭಾಗ ಹಿಂದಿನದು ಮುಂದಕ್ಕೆ, ಮುಂದಿನದು ಹಿಂದಕ್ಕೆ ಬರುವುದು ಸಹಜ! ಇತಿಹಾಸ ಸಹ ಪುನರಾವರ್ತನೆಯಾಗುತ್ತದೆ ಎನ್ನುತ್ತಾರೆ. ಹಾಗೇ ಮಾನವನ ಬದುಕಿನ ರೀತಿ ಸಹ ಪುನರಾವರ್ತನೆಯಾಗಬೇಕಿದೆ! ನಾವು ನಾಗರೀಕರು ತುಂಬಾ ಮುಂದುವರಿದವರು ಎಂಬುದು ನಾವು ಬಹಳ ಹಿಂದುಳಿದವರೆಂಬ ಧ್ವನಿಯನ್ನು ಒಳಗೊಂಡಿದೆಯಲ್ಲವೆ? ನಮಗೆ ಅನುಕೂಲವಾಗಲೆಂದು, ಸುಲಭವಾಗಿ ಬದುಕಬೇಕೆಂದು ಕಷ್ಟಕರ ಬದುಕನ್ನು ತೊರೆದು ಸುಲಭವಾಗಿ ಬದುಕಲು ಪ್ರಯತ್ನಿಸುವಾಗ ಹಿಂದಿನದಕ್ಕೆ ತಿಲಾಂಜಲಿ ಇತ್ತು ಹೊಸದನ್ನು ಬಿಗಿದಪ್ಪಿಕೊಂಡು ಜೀವಿಸುತ್ತಿದ್ದೇವೆ. ಅದರ ದುಷ್ಪರಿಣಾಮಗಳು ಈಗ ಅರಿತದ್ದರಿಂದ ಹಿಂದಿನ ಜೀವನದ ರೀತಿಯ ಕಡೆಗೆ ಹಿಂದಿರುಗಬೇಕಿದೆ! ಹಾಗೆ ಹಿಂದಿರುಗುವ ಚಿಂತನೆಗಳು ನಡೆಯುತ್ತಿವೆ.
ವ್ಯವಸಾಯದಲ್ಲಿ ಹಿಂದೆಲ್ಲ ಕಡಿಮೆ ಇಳುವರಿ ಬರುತ್ತಿತ್ತು. ಇಂದು ರಾಸಾಯನಿಕ ಗೊಬ್ಬರಗಳಿಂದ, ಕ್ರಿಮಿನಾಶಕ, ಕೀಟನಾಶಕ, ಟಾನಿಕ್, ಸುಧಾರಿತ ಬೀಜಗಳಿಂದಾಗಿ ಹೆಚ್ಚು ಇಳುವರಿಯೇನೋ ಪಡೆದಿವಿ. ರಾಸಾಯನಗಳನ್ನು ಭೂಮಿಗೆ ಸುರಿದು ಸುರಿದೂ ಭೂಮಿಯ ಫಲವತ್ತತೆಯನ್ನು ಹಾಳು ಮಾಡಿದಿವಿ! ನೆಲದಲ್ಲಿರುವ ರೈತನ ಮಿತ್ರ ಎರೆಹುಳ ಮುಂತಾದ ರೈತ ಉಪಕಾರಿ ಕ್ರಿಮಿಕೀಟಗಳು ನಾಶವಾಗಿವೆ. ಭೂಮಿ ನಿಸ್ಸಾರವಾಗಿ ಮುಂದೆ ಬೆಳೆ ಬೆಳೆಯುವ ಸಾಮರ್ಥ್ಯವನ್ನೇ ಕಳೆದಕೊಳ್ಳಲಿದೆ! ಇದರಿಂದ ಭೂಮಿಯ ಸಾರ ಹೆಚ್ಚಿಸಬೇಕೆಂಬ ಕೂಗು ಎಲ್ಲಾ ಕಡೆಯಿಂದ ಕೇಳಿ ಬರುತ್ತಿದೆ. ರಾಸಾಯನಿಕ ಗೊಬ್ಬರ ಅಪಾಯಕಾರಿ. ಅದರ ಬಳಕೆ ಕಡಿಮೆ ಮಾಡಿ ಭೂಮಿಯ ಸಾರ ಹೆಚ್ಚಿಸಲು ಕೊಟ್ಟಿಗೆ ಗೊಬ್ಬರ, ಎರೆ ಹುಳುವಿನ ಗೊಬ್ಬರ, ಸಾವಯವ ಗೊಬ್ಬರಗಳಿಗೆ ಪ್ರಾಮುಖ್ಯತೆ ಬರತೊಡಗಿದೆ. ಆದರೆ ದನಗಳ ಸಾಕದ ಪ್ರಯುಕ್ತ ಕೊಟ್ಟಿಗೆ ಗೊಬ್ಬರ ದುರ್ಲಬವಾಗಿದೆ, ಸಾವಯವ ಗೊಬ್ಬರದ್ದೂ ಇದೇ ಕತೆ! ಮತ್ತೆ ಕಾಡು ಬೆಳೆಸುವುದು ದನಗಳ ಸಾಕಾಣಿಕೆ ಕಡೆಗೆ ಗಮನ ಕೊಡುವುದೊಂದೇ ಉಳಿದಿರುವ ಏಕ ಮಾತ್ರ ದಾರಿ!
ಪರಿಸರ ಮಾಲಿನ್ಯ: ರೈತರು ದನಗಳ ಬದಲಾಗಿ ತನ್ನ ಎಲ್ಲಾ ಕೆಲಸ ಕಾರ್ಯಗಳಿಗೆ ಟ್ರಾಕ್ಟರ್ ಉಪಯೋಗಿಸುತ್ತಿರುವುದರಿಂದ ಪರಿಸರ ಮಾಲಿನ್ಯ ಹೆಚ್ಚುತ್ತಿದೆ. ದನಗಳು ಪರಿಸರ ಮಾಲಿನ್ಯ ತಡೆಗಟ್ಟುವಲ್ಲಿ ಮಹತ್ವದ ಪಾತ್ರವಹಿಸಿದ್ದವು. ಅಂದರೆ ಕೆಲವು ವೈಜ್ಞಾನಿಕ ಅಧ್ಯಯನಗಳು ಇವುಗಳು ವಾತಾವರಣದಲ್ಲಿನ ವಿಷಾನಿಲದ ಪರಿಣಾಮವನ್ನು ತಡೆಯುವಷ್ಟು ಸಾಮರ್ಥ್ಯ ಹೊಂದಿದ್ದವು ಎಂಬ ಸತ್ಯವನ್ನು ಸಂಶೋಧಕರು ತೋರಿಸಿಕೊಟ್ಟಿದ್ದಾರೆ! ಹಾಗೂ ಗೋವಿನ ಉತ್ಪನ್ನಗಳು ಅನೇಕ ರೋಗಗಳಿಗೆ ಸಿದ್ದೌಷಧ ಎಂದು ಹೇಳಲಾಗುತ್ತಿದೆ. ಅಗ್ನಿ ಹೋತ್ರ ಹೋಮ ಪ್ರಕೃತಿಯಲ್ಲಿ ಆಕ್ಸಿಜನ್ ಹೆಚ್ಚುಮಾಡುವುದಲ್ಲದೆ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಎಂದು ನಂಬಲಾಗುತ್ತಿದೆ. ಪಂಚಗವ್ಯ ಚಿಕಿತ್ಸೆ ಅನೇಕ ರೋಗಗಳ ನಿವಾರಿಸುತ್ತದೆ ಎಂದು ನಂಬಲಾಗಿದೆ. ಇದರ ಮೂತ್ರವನ್ನು ಈಗಾಗಲೇ ಅನೇಕ ಕಾಯಿಲೆಗಳ ವಾಸಿಮಾಡಲು ಬಳಸುತ್ತಿದ್ದಾರೆ. ರಾಮಚಂದ್ರಾಪುರದಲ್ಲಿ ಇದರ ಮೂತ್ರ ಸಂಗ್ರಹಿಸಿ ಅವಶ್ಯಕವಿರುವವರಿಗೆ ಕೊಡುತ್ತಿದ್ದಾರೆ! ಕೇಂದ್ರ ಸರ್ಕಾರ ಇದರ ವೈಜ್ಞಾನಿಕ ಅಧ್ಯಯನಕ್ಕೆ ಮುಂದಾಗಿದೆ. ಈ ಎಲ್ಲಾ ಕಾರಣದಿಂದಲೂ ಮತ್ತೆ ದನಗಳ ಸಾಕುವ ಕಡೆಗೆ ಗಮನಹರಿಸಬೇಕಿದೆ!
ಕೃಷಿಗಾಗಿ, ಮನೆ ನಿರ್ಮಿಸಲು, ಕಾರ್ಖಾನೆ ಆರಂಭಿಸಲು … ಹೀಗೆ ವಿವಿದುದ್ದೇಶಗಳಿಗಾಗಿ ಕಾಡನ್ನು ನಾಶ ಮಾಡಿ ಗಗನಚುಂಬಿ ಕಟ್ಟಡಗಳ ಕಟ್ಟಿ, ಬೃಹದಾಕಾರದ ಕಾರ್ಖಾನೆಗಳ ಸ್ಥಾಪಿಸಿ ಪರಿಸರ ಮಾಲಿನ್ಯಕ್ಕೆ ಕಾರಣನಾಗಿ ಅಸಾಮಾನ್ಯ ಸಾಧನೆ ಮಾಡಿದೆವು ಎಂದುಕೊಂಡಿವಿ! ಮಳೆ ಹೋಗಿ ಮುಗಿಲು ಸೇರುವಂತೆ ಮಾಡಿದುದು ಪ್ರತಿಫಲವಾಯ್ತ! ಜಾಗತಿಕ ತಾಪ ಹೆಚ್ಚಳ, ಹಸಿರು ಮನೆ ಪರಿಣಾಮ, ಆಮ್ಲ ಮಳೆ, ಬರ, ಪ್ರವಾಹ, ಭೂಕಂಪ, ಸುನಾಮಿ ಕೊಡುಗೆಗಳಾದವು. ಇವುಗಳ ಹೋಗಲಾಡಿಸಲು ಮತ್ತೆ ಕಾಡು ಕಾಪಾಡುವ, ಗಿಡ ನೆಡುವ, ಮರ ಬೆಳೆಸುವ ಚಿಂತನೆಗಳು ಚಿಗುರಿವೆ! ಗಿಡ ನೆಡಬಹುದು ಮರವಾಗಿ ಅದನ್ನು ಬೆಳೆಸುವುವಲ್ಲಿ ಪ್ರತಿಫಲ ಪಡೆಯುವುದು ಕಷ್ಟ. ಅನಿವಾರ್ಯ! ಪ್ರಯತ್ನಗಳು ಇನ್ನೂ ಚುರುಕಾಗಬೇಕಿದೆ.
ರಾಸಾಯನಿಕ ಗೊಬ್ಬರ, ಕ್ರಿಮಿ, ಕೀಟ ನಾಶಕಗಳು ಆಹಾರದ ಸತ್ವವನ್ನು ಕಡಿಮೆಗೊಳಿಸಿ, ಅದರಲ್ಲಿ ರಾಸಾಯನಿಕಗಳು ಉಳಿದು ಜೀವಿಗಳ ದೇಹ ಸೇರಿ ಅದು ವಿಷವಾಗಿ ಪರಿಣಮಿಸಿ ಕೆಟ್ಟ ಪರಿಣಾಮ ಬೀರುವುದರಿಂದ ಅವುಗಳ ಬಳಕೆ ಮಾಡದೆ ಸಾವಯವ ಗೊಬ್ಬರ ಬಳಸಬೇಕೆಂಬ ಕೂಗು ಎಲ್ಲೆಡೆ ಕೇಳಿ ಬರತೊಡಗಿದೆ! ಆದ್ದರಿದ ಮತ್ತೆ ದನಗಳ ಸಾಕುವ ಕಡೆಗೆ ಗಮನಹರಿಸಬೇಕಿದೆ. ಕೊಟ್ಟಿಗೆ ಗೊಬ್ಬರ, ಎರೆ ಹುಳು ಗೊಬ್ಬರ, ಸಾವಯವ ಗೊಬ್ಬರ ಬಳಸುವ ಅನಿವಾರ್ಯತೆ ಉಂಟಾಗುತ್ತಿದೆ!
ಸಿರಿ ಧಾನ್ಯಗಳು: ಆಧುನಿಕತೆ ಹೆಚ್ಚಿದಂತೆ ಜೀವನದಲ್ಲಿ, ಆಹಾರ ಸೇವಿಸುವ ಕ್ರಮದಲ್ಲಿ ಬಹಳಷ್ಟು ಬದಲಾವಣೆಯಾಯ್ತು! ಕಡಿಮೆ ಮಳೆಗೂ ಹೆಚ್ಚು ಇಳುವರಿ ಬರುತ್ತಿದ್ದ ರಾಗಿ, ನವಣೆ, ಸಾಮೆ, ಸಜ್ಜೆ, ಅರಗ, ಅರ್ಕ, ಸಾಮೆ, ಊದಲು, ರಾಗಿ, ಸಜ್ಜೆ ಮುಂತಾದ ಸಿರಿ ಅಥವಾ ಕಿರು ಧಾನ್ಯಗಳನ್ನು ಉಪಯೋಗಿಸುವುದ ನಿಲ್ಲಿಸಲಾಯಿತು. ಯಥೇಚ್ಛವಾಗಿ ಬೆಳೆಯುತ್ತಿದ್ದರಿಂದಾಗಿ ಅತಿ ಕಡಿಮೆ ಆದಾಯ ಬರುತ್ತಿದ್ದರಿಂದ, ಅವು ಬಡವರು ಉಪಯೋಗಿಸುವ ಧಾನ್ಯಗಳೆಂಬ ಭಾವನೆ ಇದ್ದುದರಿಂದ ಎಲ್ಲರೂ ಸಿರಿವಂತರ ಆಹಾರವಾದ ನೆಲ್ಲಕ್ಕಿಯ ಬಳಸತೊಡಗಿದ್ದರಿಂದ ಅದನ್ನು ಬೆಳೆಯುವುದ ಕಡಿಮೆ ಮಾಡಲಾಯಿತು! ಜತೆಗೆ ಲಾಭದಾಯಕವಲ್ಲ ಎಂದು ಬೆಳೆಯುವುದು ನಿಲ್ಲಿಸಲಾಯಿತು. ಅಕ್ಕಿ ಬಳಸಿ ಅಡುಗೆ ಮಾಡುವುದು ಸುಲಬವೆಂದು, ಅದರಲ್ಲಿ ಬೇರೆ ಬೇರೆ ಆಹಾರ ಪದಾರ್ಥಗಳ ತಯಾರಿಸುವುದು ಸುಲಭವೆಂದು, ಕೆಲವರಿಗೆ ಅನಿವಾರ್ಯವೆಂದು ಅದನ್ನೇ ಬಳಸಲಾಯಿತು. ಇದರಿಂದ ಅನೇಕ ಆನಾರೋಗ್ಯ ಸಮಸ್ಯೆಗಳು ಕಾಡಲು ಆರಂಭವಾಯಿತು. ಮಧುಮೇಹ ರೋಗಿಗಳಿಗೆ ಅಕ್ಕಿಯಲ್ಲಿ ಸಕ್ಕರೆ ಅಂಶ ಹೆಚ್ಚಿರುವುದರಿಂದ ಅದರ ಸೇವನೆ ರೋಗ ಉಲ್ಬಣಿಸಲು ಕಾರಣವಾಗುವುದನ್ನು ತಪ್ಪಿಸಲು ರಾಗಿಗೆ ಪ್ರಾಮುಖ್ಯತೆ ಬಂತು! ‘ ರಾಗಿ ಉಂಡವನು ನಿರೋಗಿಯಾಗುವನು ‘ ಎಂದು ಸರ್ವಜ್ಞನ ಹೇಳಿದರೆ, ಕನಕದಾಸರು ರಾಗಿ ಕುರಿತೇ ಒಂದು ಅಪರೂಪದ ‘ ರಾಮದಾನ್ಯ ಚರಿತೆ ‘ ಎಂಬ ಕಾವ್ಯ ರಚಿಸಿ ಎಲ್ಲರೂ ಉಬ್ಬೇರಿಸುವಂತೆ ಮಾಡಿದರು. ಅದರಲ್ಲಿ ಎಲ್ಲ ಧಾನ್ಯಗಳಿಗಿಂತ ರಾಗಿಯೇ ಶ್ರೇಷ್ಠ ಧಾನ್ಯ ಎಂದು ತೀರ್ಮಾನವಾಗುತ್ತದೆ. ರಾಮ ಅದಕ್ಕೆ ರಾಘವ ಎಂದು ಹೆಸರು ಕೊಡುವುದು ಆ ಧಾನ್ಯದ ಮಹತ್ವ ಎತ್ತಿ ತೋರುವಂತಾಗಿದೆ. ಸಿರಿ ( ನವಣೆ, ಸಾಮೆ, ಅರ್ಕ, ಊದಲ, ಕೊರಲ ) ಧಾನ್ಯಗಳಲ್ಲಿ ನಾರಿನಂಶ ಬೇರೆ ಧಾನ್ಯಗಳಿಗಿಂತ ಹೆಚ್ಚು ಇರುವುದರಿಂದ ಮತ್ತು ಪಿಷ್ಟದ ಮಧ್ಯದಿಂದಲೂ ನಾರಿನಂಶ ಇರುವಂತೆ ರೂಪುಗೊಂಡಿರುವುದರಿಂದ ರೋಗಗಳು ಬರದಂತೆ ತಡೆಯುತ್ತವೆ! ಮಲಬದ್ದತೆ ಉಂಟಾಗದಂತೆ ಮಾಡುತ್ತವೆ. ಮೂಲವ್ಯಾದಿಯಾಗುವುದನ್ನು ತಪ್ಪಿಸುತ್ತವೆ. ಸುಮಾರು ಐದಾರು ಗಂಟೆಯ ತನಕ ಗ್ಲೂಕೋಸನ್ನು ಕೊಡುತ್ತನೇ ಇರುತ್ತವೆ. ಹೀಗೆ ಇನ್ನು ಮುಂತಾಗಿ ಸಿರಿ ಧಾನ್ಯಗಳ ಮಹತ್ವ ಅರಿತು ಅವು ಆರೋಗ್ಯ ಸುಧಾರಿಸಲು ಉತ್ತಮ ಎಂದು ತಿಳಿದು ಬಂದುದರಿಂದ ಮತ್ತೆ ಅವುಗಳನ್ನು ಬೆಳೆಯುವ , ಸೇವಿಸುವ ಪ್ರಯತ್ನ ಹೆಚ್ಚುತ್ತಿದೆ!
ಡಾ|| ಎ ಖಾದರ್ ರವರು ಇವುಗಳ ಮಹತ್ವ ಸಾರುತ್ತಾ ಇವುಗಳ ಸೇವನೆಯಿಂದ ರೋಗಗಳು ಬರುವುದಿಲ್ಲ, ಈಗ ಬಂದಿರುವ ರೋಗಗಳ ಈ ಸಿರಿ ಧಾನ್ಯಗಳ ನಿಯಮಿತ ಸೇವನೆ ಮಾತ್ರದಿಂದಲೇ ವಾಸಿ ಮಾಡಬಹುದೆಂಬುದನ್ನು ತಾವು ಪ್ರಯೋಗಗಳ ಮೂಲಕ ಕಂಡುಕೊಂಡು ನಾಡಿನ ಜನತೆಯಲ್ಲಿ ಜಾಗೃತಿ ಉಂಟು ಮಾಡಿ ರೋಗಗಳಿಂದ ಮುಕ್ತರಾಗುವಂತೆ ಸಿರಿಧಾನ್ಯಗಳ ಬೆಳೆಯುವಂತೆ ಪ್ರೋತ್ಸಾಹಿಸುತ್ತಿದ್ದಾರೆ! ಅಷ್ಟೇ ಅಲ್ಲ ಅವರೇ ಪ್ರಯೋಗಗಳನ್ನು ಮಾಡುತ್ತಿದ್ದಾರೆ. ಮಾಡಿಯೇ ಹೇಳುತ್ತಿದ್ದಾರೆ! ಹಾಗೆ ಪ್ಲಾಸ್ಟಿಕ್ ನ ದುಷ್ಪರಿಣಾಮ, ಆರೋಗ್ಯವಂತ ಆಹಾರ, ನೀರಿನ ಯೋಗ್ಯ ಸಂಗ್ರಹಗಳ ಬಗ್ಗೆ ನಿಖರವಾಗಿ, ಮಾನವನಿಗೆ ಉಪಯೋಗವಾಗುವಂತೆ ಚಿಂತಿಸುತ್ತಾ, ನಾಡಿನಾದ್ಯಂತ ಸುತ್ತಾಡಿ ಜನಜಾಗೃತಿ ಮೂಡಿಸುತ್ತಿದ್ದಾರೆ.
ಆಯುರ್ವೇದ: ಪ್ರತಿಯೊಂದು ಕಾಯಿಲೆಗಳಿಗೂ ನಾವು ಅಲೋಪತಿ ಚಿಕಿತ್ಯೆಯನ್ನೇ ಅವಲಂಬಿಸಿದ್ದಿವಿ. ಅದರ ಪಾರ್ಶ್ವಪರಿಣಾಮಗಳಿಂದಾಗಿ ಮತ್ತು ಕೆಲವು ರೋಗಗಳಿಗೆ ಸೂಕ್ತವಲ್ಲವಾದ್ದರಿಂದ ಆಯುರ್ವೇದವೇ ಸೂಕ್ತವಾದುದು ಎಂದು ನಂಬಿದ್ದರಿಂದ, ಪ್ರಕೃತಿ ಚಿಕಿತ್ಸೆ, ಆಯುರ್ವೇದಗಳು , ಹೋಮಿಯೋಪತಿ ಚಿಕಿತ್ಸೆಗಳು ಪರಿಣಾಮಕಾರಿಯಾಗಿ ಕೆಲವು ರೋಗಗಳನ್ನು ಹೋಗಲಾಡಿಸಿದುದರಿಂದ, ಅವುಗಳನ್ನು ಅಧ್ಯಯನ ಮಾಡಿ ಅವುಗಳನ್ನು ಪರಿಣಾಮಕಾರಿಯಾಗಿ ಬಳಸಿ ಚಿಕಿತ್ಸೆ ಕೊಡುತ್ತ ಭರವಸೆ ಮೂಡಿಸಿದುದರಿಂದ, ಅವುಗಳು ಅಡ್ಡ ಪರಿಣಾಮ ಬೀರವಾದ್ದರಿಂದ ಮತ್ತೆ ಅವುಗಳಿಗೆ ಪ್ರಾಮುಖ್ಯತೆ ಬರತೊಡಗಿದೆ! ಅವುಗಳಿಗೆ ಪ್ರಾಮುಖ್ಯತೆ ಬಂದುದರಿಂದ ಆಯುರ್ವೇದ ಚಿಕಿತ್ಸಾ ಕೇಂದ್ರಗಳು ಅಲ್ಲಲ್ಲಿ ತಲೆ ಎತ್ತುತ್ತಿವೆ. ಜನಪ್ರಿಯವಾಗಿ ರೋಗಗಳ ನಿವಾರಿಸುವಲ್ಲಿ ಪರಿಣಾಮಕಾರಿಯಾಗಿ ಕೆಲಸಿಸುತ್ತಿವೆ! ಆಯುರ್ವೇದ ಕಾಲೇಜುಗಳು ತೆರೆದಿರುವುದು, ಆಯುರ್ವೇದ ಆಸ್ಪತ್ರೆಗಳು ಬಹಳಷ್ಟುಕಡೆ ಉತ್ತಮವಾಗಿ ನಡೆಯುತ್ತಿರುವುದು ಆದರ ಬೇಡಿಕೆ ಮತ್ತು ಮಹತ್ವ ಸಾರುತ್ತಿವೆ!
ಶ್ರಮದ ಬದುಕು : ಇತ್ತೀಚೆಗೆ ಶ್ರಮರಹಿತ ಬದುಕೇ ಸುಖ ಎಂದು ಜನ ಭಾವಿಸಿದುದರಿಂದ ಅದಕ್ಕೆ ಹೆಚ್ಚು ಪ್ರಾಮುಖ್ಯತೆ ಬಂದು ಬಹಳಷ್ಟು ಜನ ಶ್ರಮರಹಿತವಾಗಿ ಜೀವಿಸುತ್ತಿದ್ದರು! ಅದು ಅನಾರೋಗ್ಯಕ್ಕೆ ಹಾದಿ ಎಂಬುದು ತಿಳಿದ ಪ್ರಯುಕ್ತ ಶ್ರಮದ ಬದುಕಿಗೆ ಪ್ರಾಮುಖ್ಯತೆ ಬಂದರೂ ಶ್ರಮರಹಿತ ಉದ್ಯೋಗಗಳನ್ನು ಅವಲಂಬಿಸಿದುದರಿಂದ, ಉದ್ಯೋಗಗಳೆಲ್ಲ ಬಹುತೇಕ ಶ್ರಮರಹಿತವಾಗಿರುವುದರಿಂದ ಅವನ್ನು ಅವಲಂಬಿಸಿದುದರಿಂದ ಬೆಳಿಗ್ಗೆ ಸಂಜೆ ವಾಕ್, ಜಾಗಿಂಗ್, ವ್ಯಾಯಾಮ, ಯೋಗಾಸನ, ಜಿಮ್ ಗಳ ಮೊರೆ ಹೋಗಿ ಆರೋಗ್ಯ ಕಾಪಾಡಿಕೊಂಡು ಮತ್ತೆ ದೈಹಿಕ ಶ್ರಮ ಪಡುವಕಡೆಗೆ ಮುಖ ಮಾಡುವಂತಾಗಿದೆ!
ಹೀಗೆ ಎಲ್ಲಾ ಕ್ಷೇತ್ರಗಳಲ್ಲೂ ಹಿಂದಿನವರ ಬದುಕಿನ ರೀತಿ ಆರೋಗ್ಯಕರ ಎಂದು ತಿಳಿದ ಪ್ರಯುಕ್ತ ಆ ಆರೋಗ್ಯಕರ ಬದುಕಿನ ಕಡೆಗೆ ನಡೆಯುವ ಪ್ರಯತ್ನ ಮಾಡಲಾಗುತ್ತಿದೆ.
-ಕೆ ಟಿ ಸೋಮಶೇಖರ ಹೊಳಲ್ಕೆರೆ