ಪಂಜು-ವಿಶೇಷ

ಆರದಿರಲಿ ಬೆಳಕು: ಎಸ್. ಜಿ. ಸೀತಾರಾಮ್, ಮೈಸೂರು.

ಭಾರತ ರಾಷ್ಟ್ರೀಯ ನೇತ್ರದಾನ ಪಾಕ್ಷಿಕೋತ್ಸವ (ಆಗಸ್ಟ್ 25-ಸೆಪ್ಟೆಂಬರ್ 8, 2015) ಮತ್ತು ವಿಶ್ವ ದೃಷ್ಟಿ ದಿನ (8 ಅಕ್ಟೋಬರ್ 2015) ಸಂದರ್ಭಕ್ಕೊಂದು ನುಡಿಕಾಣಿಕೆ

ಮಣ್ಣುಪಾಲಾಗುತ್ತಿರುವ ಕಣ್ಣುರಾಶಿ      
      

                                                                                ಕಾರ್ನಿಯಾ ಕುರುಡು ಬಾಲಕಿ  

  ಕಾರ್ನಿಯಾ ಕುರುಡು ಬಾಲಕ


ದೃಷ್ಟಿವಂತರಾಗಿ ನಾವು ಅದೆಷ್ಟು ಅದೃಷ್ಟವಂತರು ಮತ್ತು   ಅಂಧರ ಬಾಳು ಅದೆಷ್ಟು ಅಂಧಕಾರಮಯ ಎಂದು ಚಿಂತಿಸುವವರು ವಿರಳ.  ಸೃಷ್ಟಿಯು ನಮಗಿತ್ತಿರುವ ದೃಷ್ಟಿಭಾಗ್ಯಕ್ಕಾಗಿ, ನೇತ್ರದಾನದ ಮೂಲಕ ಕೃತಜ್ಞತೆ ಸಲ್ಲಿಸುವವರು ಮತ್ತೂ ವಿರಳ. ಹೀಗಾಗಿಯೇ, ಭಾರತದಲ್ಲಿ ಪ್ರತಿವರ್ಷ ಒಂದೂವರೆ ಕೋಟಿ ಮರಣೋತ್ತರ ಕಣ್ಣುಗಳು ಮಣ್ಣುಪಾಲಾಗುತ್ತಿವೆ; ದಾನದ ಬದಲು ದಹನವಾಗುತ್ತಿವೆ. ಸುಮಾರು ಹತ್ತಾರು ಲಕ್ಷ ದೃಷ್ಟಿವಂಚಿತರು ಕಾರ್ನಿಯಾಗಳಿಗಾಗಿ ಕಳವಳದಿಂದ ಕಾಯುತ್ತಿರುವಾಗ, ಹತ್ತಾರು ಸಾವಿರದಷ್ಟು ಕಾರ್ನಿಯಾಗಳು ದಕ್ಕುವುದೂ ಕಷ್ಟಸಾಧ್ಯವಾಗಿದ್ದು, ಅಲ್ಪಸಂಖ್ಯೆಯ ದೃಷ್ಟಿಹೀನರಿಗೆ ಮಾತ್ರ ದೃಷ್ಟಿದಾಯಕ ಕಾರ್ನಿಯಾ ಶಸ್ತ್ರಚಿಕಿತ್ಸೆ ನೀಡಲು ಸಾಧ್ಯವಾಗುತ್ತಿದೆ. ಮತ್ತು ಕಾರ್ನಿಯಾ-ಕುರುಡಿರುವವರಲ್ಲಿ ಶೇ. 60ರಷ್ಟು ಸಂಖ್ಯೆಯು ಮಕ್ಕಳು ಮತ್ತು ಯುವಜನರಿಂದಲೇ ಸಂಯೋಜಿತವಾಗಿದ್ದು, ಇದು ಪ್ರತಿವರ್ಷ ಹಲವುಹತ್ತು ಸಾವಿರಗಳಷ್ಟು ಬೆಳೆಯುತ್ತಿದೆ. ಈ ತೆರನಾದ ಕಾರಣಗಳಿಂದಲೇ ಭಾರತವು ಇಂದು ‘ಅಂಧರ ಅಗ್ರ ಅಂಧಕೂಪ” ಎಂದು ವಿಶ್ವಕುಖ್ಯಾತವಾಗಿದೆ. 

ಈ ಆಘಾತಕಾರಿ-ಆತಂಕಕಾರಿ ಪರಿಸ್ಥಿತಿಯಲ್ಲಿ, ನೇತ್ರದಾನದ ಮಹಾತ್ಮೆಯನ್ನು ಎಷ್ಟು ವರ್ಣಿಸಿದರೂ ಅತ್ಯುಕ್ತಿಯಾಗಲಾರದು.

ಕಾರ್ನಿಯಾ, ಕಾರ್ನಿಯಾ ಹಾನಿ, ಕಾರ್ನಿಯಾ ಕಸಿ 

ಕಣ್ಗುಡ್ಡೆಯ ಮೊತ್ತಮುಂದಿನ ಕಪ್ಪುಭಾಗದಲ್ಲಿದ್ದು, ಹೊರಗಿನಿಂದ ಹರಿಯುತ್ತಿರುವ ಬೆಳಕನ್ನು ಕಣ್ಣಿನ ಹಿಂಭಾಗದೆಡೆಗೆ ಕೇಂದ್ರೀಕರಿಸುವುದರಲ್ಲಿ ಅನುವಾಗುವ, ಅಂಗಿಗುಂಡಿ ಗಾತ್ರ-ತಿಳಿಗಾಜು ರೂಪದ ಪಟಲವೇ “ಕಾರ್ನಿಯಾ.” ಈ ‘ಅಕ್ಷಾಂಶ’ವೊಂದೇ ಇಡೀ ದೇಹದಲ್ಲಿ ಪಾರದರ್ಶಕವಾದ ಅಂಗಾಂಶ. ಸಹಜಾತ ದೋಷಗಳು, (ವಿಶೇಷವಾಗಿ ಬಾಲ್ಯದಲ್ಲಿ) ನ್ಯೂನಪೌಷ್ಟಿಕತೆ ಮುಂತಾದ ಕಾರಣಗಳು ಕಾರ್ನಿಯಾವನ್ನು ದೃಷ್ಟಿ ಕುಂದುವ ಮಟ್ಟಿಗೆ ಮಬ್ಬಾಗಿಸಬಹುದು. ಹಾಗೆಯೇ, ಎಳೆಮಕ್ಕಳ ಆಟಿಗೆ ಅಥವಾ ಪೆನ್ಸಿಲ್/ಪೆನ್ ಚುಚ್ಚಿದಾಗ, ಚೆಂಡು, ಚಿನ್ನಿದಾಂಡು, ಬಿಲ್ಲುಬಾಣದ ಆಟಗಳನ್ನಾಡುವಾಗ, ಪಟಾಕಿ ಹೊಡೆಯುವಾಗ, ಸಾಸಿವೆ ಸಿಡಿಸುವಾಗ, ಬೆಸುಗೆ ಕೆಲಸಗಳಲ್ಲಿ ಥಟ್ಟನೆ ಉರಿಯೆದ್ದಾಗ ಅಥವಾ ಕಿಡಿ ಹಾರಿದಾಗ, ಕಣ್ಣಿಗೆ ಸುಣ್ಣಬಣ್ಣ ಬಿದ್ದಾಗ, ಆ್ಯಸಿಡ್ ಎರಚಲಿಗೆ ಬಲಿಯಾದಾಗ ಮತ್ತು ಇಂಥ ಇತರ ಆಪತ್ಕಾಲಗಳಲ್ಲಿ ಕಣ್ಣಿಗೆ ಉಂಟಾಗಬಹುದಾದ ಗಾಯ ಮತ್ತು ಕಲೆ; ಸೋಂಕುರೋಗ; ಅಳಲೆಕಾಯಿ ಪಂಡಿತರ “ಔಷಧಾಪಚಾರ” ಇತ್ಯಾದಿ ಹತ್ತಾರು ಕಾರಣಗಳಿಂದ ಕಾರ್ನಿಯಾ ಹಾನಿಯಾಗಿ ದೃಷ್ಟಿನಾಶವಾಗಬಹುದು.  ಹಾನಿಯಾಗಿರುವ ಕಾರ್ನಿಯಾದೆಡೆಯಲ್ಲಿ ಉತ್ತಮ ಕಾರ್ನಿಯಾವನ್ನು ನೆಟ್ಟು, ದೃಷ್ಟಿಯನ್ನು ಉಳಿಸುವ ಅಥವಾ ಮರಳಿಸುವ ಅತಿಸೂಕ್ಷ್ಮ ಶಸ್ತ್ರಚಿಕಿತ್ಸೆಯೇ “ಕಾರ್ನಿಯಾ ಕಸಿ.” ಕಸಿ ಪ್ರಕ್ರಿಯೆಗಳಲ್ಲಿ ಸಾಮಾನ್ಯವಾದ ಈ ಶಸ್ತ್ರಚಿಕಿತ್ಸೆಯ ಯಶಸ್ಸಿನ ಪ್ರಮಾಣ 90%ಗಿಂತಲೂ ಅಧಿಕವಾಗಿದೆ. ಈ ಕಸಿಯನ್ನು ನೆರವೇರಿಸಲು ಹಾಗೂ ವೈದ್ಯಕೀಯ ಶಿಕ್ಷಣ-ಸಂಶೋಧನೆಗಳನ್ನು ಮುಂದುವರೆಸಲು ದಾನಿತ ಕಾರ್ನಿಯಾವು ಅತ್ಯವಶ್ಯ ವಸ್ತುವಾಗಿದೆ ಮತ್ತು ನೈಸರ್ಗಿಕ ಕಾರ್ನಿಯಾಕ್ಕೆ ಸಮಾನವಾಗುವ ಕೃತಕ ಕಾರ್ನಿಯಾ ಇನ್ನೂ ಕಂಡುಹಿಡಿಯಲ್ಪಟ್ಟಿಲ್ಲ. [ಕಾರ್ನಿಯಾ ಕಸಿಯನ್ನು “ಕೆರಟೋಪ್ಲ್ಯಾಸ್ಟಿ,” “ಕಾರ್ನಿಯಲ್ ಗ್ರಾಫ್ಟಿಂಗ್,” ಅಥವಾ “ಕಾರ್ನಿಯಾ ಟ್ರ್ಯಾನ್ಸ್‍ಪ್ಲ್ಯಾಂಟೇಶನ್” ಎಂದು ಕರೆಯುತ್ತಾರೆ. ನೇತ್ರದಾನದಂತೆಯೇ, ಈ ಕಣ್‍ಕಣದಲ್ಲಿಯೂ ಶಾಸ್ತ್ರಜ್ಞ-ಶಸ್ತ್ರಜ್ಞರ ಸಂಖ್ಯೆಯಲ್ಲಿ ಕೊರತೆಯಿದೆ.]

ಕವಿದಿರುವ ಕಾರ್ನಿಯಾ          

 ಕಸಿಯಾದ ಕಾರ್ನಿಯಾ

ಕಾರ್ನಿಯಾ ಕೊಯ್ಲಿನ ಕ್ರಮ
ಒಂದು ಕಾಲದಲ್ಲಿ, “ಇನ್ಯೂಕ್ಲಿಯೇಶನ್” ಕ್ರಮದಿಂದ, ಇಡೀ ಕಣ್ಗುಡ್ಡೆಯನ್ನೇ ಶವದಿಂದ ಕಿತ್ತುಕೊಳ್ಳಬೇಕಿತ್ತು. ಆದರೆ ಇಂದು, ರಕ್ತಸ್ರಾವ, ಹೊಲಿಗೆ, ಕಟ್ಟುಪಟ್ಟಿ ಏನೂ ಇಲ್ಲದಂತೆ, ಕಾರ್ನಿಯಾದ ಉಂಡಿಗೆಯನ್ನಷ್ಟೇ ಉಪಾಯವಾಗಿ ಕಳಚಿಕೊಳ್ಳಬಹುದಾದ್ದರಿಂದ, ಶವವು ಯಾವರೀತಿಯಲ್ಲೂ ವಿರೂಪಗೊಳ್ಳುವುದಿಲ್ಲ. [ಈ ಕಾರ್ಯವಿಧಿ ಆದ ಮೇಲೆ ಶವದ ಮುಚ್ಚಿದ ರೆಪ್ಪೆಗಳನ್ನು ತೆಗೆದರೆ, ಕಣು,್ಣ ಗಾಜಿಲ್ಲದ ಕೈಗಡಿಯಾರದಂತೆ ಕಾಣಬಹುದಷ್ಟೆ. ಆದರೂ, ಕೆಲವರು ಕಾರ್ನಿಯಾದಿಂದ ತೆರವಾದ ಜಾಗವನ್ನು ತಾತ್ಕಾಲಿಕವಾಗಿ ಪ್ಲ್ಯಾಸ್ಟಿಕ್ ಕಾರ್ನಿಯಾ-ಕ್ಯಾಪ್‍ಗಳಿಂದ ತುಂಬಿಸುವುದುಂಟು.] ಈ ಇಡೀ ಕಾರ್ನಿಯಾ ಕಟಾವನ್ನು (ಹಾರ್ವೆಸ್ಟ್) 20-25 ನಿಮಿಷಗಳಲ್ಲಿ ಜರುಗಿಸಿ, ಒಂದೊಂದು ಕಾರ್ನಿಯಾವನ್ನೂ ಸಂರಕ್ಷಕ ದ್ರಾವಣವಿರುವ ಪುಟ್ಟ ಸೀಸೆಗಳಲ್ಲಿಟ್ಟು, ತುರ್ತಾಗಿ ಹತ್ತಿರದ ಕೇಂದ್ರ ನೇತ್ರಭಂಡಾರಕ್ಕೆ (ಐ ಬ್ಯಾಂಕ್) ಸಾಗಿಸಲಾಗುತ್ತದೆ. ಬೆಂಗಳೂರಿನ “ಲಯನ್ಸ್ ಅಂತಾರಾಷ್ಟ್ರೀಯ ನೇತ್ರಭಂಡಾರ”ವು ಅಂಥ ಒಂದು ಕೇಂದ್ರವಾಗಿದ್ದು, ಅಲ್ಲಿ ಕಾರ್ನಿಯಾ ಠೇವಣಿಗಳ ಸಂಗ್ರಹಣೆಯಷ್ಟೇ ಅಲ್ಲದೆ, ಕಾರ್ನಿಯಾ ಕಸಿ ಮತ್ತು ಹೊರಗಿನ ಕಸಿ-ಶಸ್ತ್ರಜ್ಞರಿಗೆ ಕಾರ್ನಿಯಾ ವಿತರಣೆಯನ್ನೂ ಕೈಗೊಳ್ಳಲಾಗುತ್ತದೆ.  

ಕಣ್ಕೊಡುಗೆ ಯಾರಿಂದ? ಅದರ ಹಿರಿಮೆಯೇನು?

ವಾಸ್ತವವಾಗಿ, ಒಂದು ವರ್ಷದ ಮಗುವೂ ಸೇರಿದಂತೆ, ಯಾರಾದರೂ ನೇತ್ರದಾನ ಮಾಡಬಹುದು; ಇದಕ್ಕೆ ವಯೋಮಿತಿಯಿಲ್ಲ. ಕನ್ನಡಕ ತೊಟ್ಟವರು, ಕಣ್ಣುಪೊರೆಯ ಶಸ್ತ್ರಚಿಕಿತ್ಸೆಗೊಳಗಾದವರು, ಸಕ್ಕರೆ ಕಾಯಿಲೆ ಅಥವಾ ರಕ್ತದೊತ್ತಡ ಇರುವವರು, ಮೊದಲಾದವರೆಲ್ಲರೂ ನೇತ್ರದಾನಿಗಳಾಗಬಹುದು. ಈ ದಾನದ ಕೆಲವು ಹೆಚ್ಚುಗಾರಿಕೆಗಳೆಂದರೆ- 1) ಕಣ್ಣನ್ನು ಕಡೆಯುಸಿರವರೆಗೂ ಬಳಸಿ, ಏನನ್ನೂ ಕಳೆದುಕೊಳ್ಳದೆ, ಬೇರೊಬ್ಬರಿಗೆ ದಿವ್ಯ ದಾನವನ್ನಾಗಿಸಬಹುದು;  2) ಈ ಮೂಲಕ ಒಂದು ಅತ್ಯುತ್ಕೃಷ್ಟ ದಾನವನ್ನು ಕಣ್ಮರೆಯಾದ ಮೇಲೂ ಕೊಟ್ಟಂತಾಗುತ್ತದೆ; 3) ಕಾರ್ನಿಯೇತರ ಭಾಗಗಳಲ್ಲಿ ಅಂಧರಾದವರೂ, ತಮ್ಮ ಕಾರ್ನಿಯಾವು ಸರಿಯಿದ್ದರೆ, ಅದನ್ನು ಕೊಡುಗೆಯಾಗಿಸಬಹುದು; 4) ದಾನಿತ ಕಾರ್ನಿಯಾಗಳು ಇನ್ನೊಂದು ಬಾಳಿನ ನಿಡುಪಯಣಕ್ಕೂ ಕೊಡುಗೆಯಾಗಲೆಂದೇ ರಚಿಸಲ್ಪಟ್ಟಿವೆಯೇನೋ ಎಂಬಂತೆ,  ಪರನೇತ್ರಪ್ರವೇಶವಾದ ಮೇಲೂ ಸಶಕ್ತವಾಗಿರುತ್ತವೆ; 5) ಕಣ್ಣಿನ ಬೇರೆ ಹಲವು ದೋಷಗಳನ್ನು ಬೇರೆ ರೀತಿಯ ಚಿಕಿತ್ಸೆಗಳಿಂದ ನೇರ್ಪಡಿಸಬಹುದಾದರೂ, ಕಾರ್ನಿಯಾ ಕುರುಡಿಗೆ ಮಾತ್ರ ದಾನಿತ ಕಾರ್ನಿಯಾ ಒಂದೇ ಪರಿಹಾರಮಾರ್ಗವಾಗಿದೆ; ಮತ್ತು 6) ಕಣ್ಣನ್ನು ಕೊಡುವಾಗ ರಕ್ತವರ್ಗದ ತಾಳೆಹಾಕುವ ಅಗತ್ಯವಿಲ್ಲ.       

“ಮನುಷ್ಯ ಜಾತಿ ತಾನೊಂದೆ ವಲಂ” ಎಂಬುದನ್ನು ಸಾರಲು, ಜೀವಜಾಲದಲ್ಲಿ ನಾವೂ ಒಂದು ಕೊಂಡಿಯೆಂದು ಆತ್ಮಾಭಿಮಾನ ಹೊಂದಲು ಕಾರ್ನಿಯಾ ದಾನಕ್ಕಿಂತ ಉತ್ತಮ ಮಾಧ್ಯಮವಿರಲಾರದು.

ನೇತ್ರಾರ್ಥಿಗಳಿಗೆ ನೆರವಾಗುವ ಬಗೆ

ಮರಣವಾದ 6 ಗಂಟೆಗಳೊಳಗೇ ಶವದಿಂದ ಕಣ್ಣುಗಳನ್ನು ಸಂಗ್ರಹಿಸುವುದು ಅತ್ಯವಶ್ಯವಾದ್ದರಿಂದ, ಮೃತರ ಆಪ್ತರು ಹತ್ತಿರದ ನೇತ್ರಭಂಡಾರಕ್ಕೆ ತಡಮಾಡದೇ ಕರೆ ನೀಡಬೇಕು. ಶವದ ಎರಡೂ ಕಣ್ಣುಗಳನ್ನು ತೇವವಾದ ಹತ್ತಿಯಿಂದ ಕೂಡಲೇ ಮುಚ್ಚಿಡಬೇಕು ಮತ್ತು ಶವದ ಬಳಿಯಿರುವ ಫ್ಯಾನನ್ನು ಕೂಡಲೇ ಆರಿಸಬೇಕು. ಶವದ ತಲೆಯನ್ನು 6 ಇಂಚುಗಳಷ್ಟು ಮೇಲೆತ್ತಿಟ್ಟಲ್ಲಿ, ಕಾರ್ನಿಯಾ ಕೊಯ್ಲಿನಲ್ಲಾಗಬಹುದಾದ ರಕ್ತಸ್ರಾವವನ್ನು ತಡೆಗಟ್ಟಬಹುದು.
ಕಣ್ಣನ್ನು ತುರ್ತಾಗಿ ಸಂಗ್ರಹಿಸಿಕೊಳ್ಳಲು “104” ಸಂಖ್ಯೆಗೆ ಕರೆನೀಡಿ
      
ಮೃತರ ಕಣ್ಣುಗಳ ದಾನವು ಅವರ ಮೃತಿಯಾದೊಡನೆಯೇ ಕಾರ್ಯಗತವಾಗುವಂತೆ, ನೀವೀಗ ಕರ್ನಾಟಕದಲ್ಲಿ ಎಲ್ಲಿಂದಲಾದರೂ “ಐ-ಬ್ಯಾಂಕ್ ಕಾಲ್ ಸೆಂಟರ್”ನ “104” ಸಂಖ್ಯೆಗೆ ಕರೆನೀಡಬಹುದು. ಆ ಕೂಡಲೇ, ನಿಮ್ಮನ್ನು ನಿಮ್ಮ ಅತಿಹತ್ತಿರದ ಐ-ಬ್ಯಾಂಕ್‍ಗೆ ನೇರವಾಗಿ ಕನೆಕ್ಟ್ ಮಾಡಲಾಗುತ್ತದೆ; ಆ ಐ-ಬ್ಯಾಂಕ್‍ನ ಸಂಪರ್ಕ ವ್ಯಕ್ತಿ ಮತ್ತು ಸಂಪರ್ಕ ಸಂಖ್ಯೆಗಳನ್ನು ನಿಮಗೆ ಒಡನೆಯೇ ಮೆಸೇಜ್ ಮಾಡಲಾಗುತ್ತದೆ.   

ಮತ್ತೊಂದಿಷ್ಟು ಮುಖ್ಯಾಂಶಗಳು
> ಮೃತರ ನೇತ್ರದಾನದ ವಾಗ್ದಾನಪತ್ರವಿಲ್ಲದಿದ್ದಾಗ್ಯೂ, ಅವರ ಕಣ್ಣುಗಳನ್ನು ಅವರ ಆಪ್ತಬಂಧುಗಳು ಧಾರಾಳವಾಗಿ ದಾನ ಮಾಡಬಹುದು. ಕಡೆಯಲ್ಲಿ ನೇತ್ರದಾನವು ಕಾರ್ಯಗತವಾಗುವುದು ಯಾವ ಕಾನೂನಿನ ಬಲದಿಂದಲೂ ಅಲ್ಲ; ಬಂಧುಗಳ ಸಕಾಲಿಕ ಸಹಕಾರದಿಂದ ಮಾತ್ರ.
> ಕೊಡುಗೆಕಣ್ಣನ್ನು ಪಡೆದವರು ಯಾರೆಂಬುದನ್ನು ತಿಳಿಯಲಾಗದಾದರೂ, ತಾವು ಕೊಟ್ಟ ಕಣ್‍ಜೋಡಿಯಿಂದ ಇಬ್ಬರು ಅಂಧರಿಗೆ (ಒಂದೊಂದು ಕಣ್ಣಲ್ಲಿ) ದೃಷ್ಟಿ ಬರಿಸಿದ ಸಾರ್ಥಕತೆಯನ್ನು ದಾನಿಗಳು ಪಡೆಯಬಹುದು.  
> ನೇತ್ರ ಸಂಗ್ರಹಣೆಯ ಪ್ರಕ್ರಿಯೆಯು ಅಂತಿಮ ಸಂಸ್ಕಾರಕ್ಕೆ ಯಾವ ವಿಧದಲ್ಲೂ  ಅಡ್ಡಿಬರುವುದಿಲ್ಲ. 
> ದೃಷ್ಟಿದಾನವು ದೃಷ್ಟಿವಿಕಲರಿಗೆ ಹಿತಬೆಳಕಿನ, ಹೊಸಬಾಳಿನ ಕೊಡುಗೆಯನ್ನೀಯುವ ಅಮೋಘ ಸೇವೆಯಾದ್ದರಿಂದ, ಎಲ್ಲ ಮಾನವೀಯ ಸಂಪ್ರದಾಯ-ಸಂಸ್ಕೃತಿಗಳಿಗೂ ಸಮ್ಮತವಾಗಿರುತ್ತದೆ. 
> ಕಾರ್ನಿಯಾ ಕೊಯ್ಲಿಗೆ ಸಾಕಷ್ಟು ಹಣ ಖರ್ಚಾಗುವುದಾದರೂ, ನೇತ್ರದಾತೃಗಳಿಗೆ ಇದೊಂದು ಉಚಿತ ಮಾನವೀಯ ಸೇವೆಯಾಗಿರುತ್ತದೆ. ವೈದ್ಯರೇ ಶವವಿರುವೆಡೆಗೆ ಧಾವಿಸಿ, ಕಾರ್ನಿಯಾಗಳನ್ನು ತೆಗೆದೊಯ್ಯುತ್ತಾರೆ. 
> ಕಾರ್ನಿಯಾ ಮಾರಾಟವು ಕಾನೂನುಬಾಹಿರವಾಗಿದ್ದು, ಕಾರ್ನಿಯಾ-ಕಸಿಗೊಳಗಾಗುವರು ಕಾರ್ನಿಯಾಕ್ಕೆಂದೇ ಯಾವ ದರವನ್ನೂ ತೆರಬೇಕಿಲ್ಲ. 
> ಬದುಕಿರುವವರ ಆರೋಗ್ಯವಂತ ಕಣ್ಣುಗಳನ್ನು ಯಾವುದೇ ಕಾರಣಕ್ಕೂ ತೆಗೆಯುವುದಿಲ್ಲ.  

ಇರುಳ ವಿರುದ್ಧ ಬೆಳಕಿನ ಯುದ್ಧ

                       ಮುಂಗತ್ತಲೆಯಿಂದ                  

ಮುಂಬೆಳಗಿಗೆ


> 1944ರಲ್ಲಿ ಜಗತ್ತಿನ ಮೊದಲ ನೇತ್ರನಿಧಿ – ದ ಐ ಬ್ಯಾಂಕ್ ಫಾರ್ ಸೈಟ್ ರೆಸ್ಟರೇಶನ್- ನ್ಯೂಯಾರ್ಕ್‍ನಲ್ಲಿ ಪ್ರಾರಂಭವಾಯಿತು. 1947ರಲ್ಲಿ ಭಾರತದ ಮೊಟ್ಟಮೊದಲ ನೇತ್ರನಿಧಿಯನ್ನು ಮದ್ರಾಸ್‍ನ ಸರ್ಕಾರಿ ನೇತ್ರವೈದ್ಯಾಲಯ ಹಾಗೂ ಪ್ರಾಂತೀಯ ನೇತ್ರವೈದ್ಯ ಸಂಸ್ಥೆಯ ಡಾ. ಆರ್. ಇ. ಎಸ್. ಮುತೈಯ್ಯ ಅವರು ಸ್ಥಾಪಿಸಿದರಲ್ಲದೆ, 1948ರಲ್ಲಿ ಭಾರತದ ಮೊತ್ತಮೊದಲ ಕಾರ್ನಿಯಾ ಜೋಡಣೆಯನ್ನೂ ದಾಖಲಿಸಿದರು.
 
> 1824ರಲ್ಲಿ ಜರ್ಮನಿಯ ಫ್ರ್ಯಾನ್ಸ್ ರೈಸಂಜರ್ ಎಂಬ ವಿದ್ಯಾರ್ಥಿಯು ಮೊಲದ ಕಾರ್ನಿಯಾಗಳನ್ನು ಮನುಷ್ಯನಿಗೆ ಅಳವಡಿಸಿದರೂ, ಆ ಕಾರ್ನಿಯಾಗಳು ಸ್ಪಷ್ಟವಾಗಿ ಉಳಿಯಲಿಲ್ಲ. ಆದರೆ, 1837ರಲ್ಲಿ ಸ್ಯಾಮುಯೆಲ್ ಬಿಗರ್ ಎಂಬಾತನು ಗಝೆಲ್-ಜಿಂಕೆಯೊಂದಕ್ಕೆ (ಪ್ರಾಯಶ:, ಸತ್ತ ತಾಯಿಜಿಂಕೆಯ ಕಾರ್ನಿಯಾವನ್ನು ಕಣ್ಣಿಲ್ಲದ ಮರಿಜಿಂಕೆಗೆ) ಮಾಡಿದ ಕಾರ್ನಿಯಾ ಕಸಿಯು ಯಶಸ್ವಿಯಾಯಿತು. 1905ರ ಅಂತ್ಯದಲ್ಲಿ ಎಡ್ವರ್ಡ್ ಜರ್ಮ್ ಎಂಬ ನೇತ್ರನಿಪುಣನು, ಸುಣ್ಣದಿಂದಾಗಿ ಸುಟ್ಟಿದ್ದ ಒಬ್ಬನ ಕಣ್ಣುಗಳಿಗೆ ಕಾರ್ನಿಯಾ ಕಸಿಯನ್ನು ಯಶಸ್ವಿಗೊಳಿಸಿ, ಮಾನವ ಕಾರ್ನಿಯಾವನ್ನು ಮೊಟ್ಟಮೊದಲ ಬಾರಿಗೆ ಮಾನವನಿಗೇ ಕಸಿಮಾಡಿದ ಕೀರ್ತಿಗೆ ಪಾತ್ರನಾದನು. [ಕಸಿ ಶಸ್ತ್ರಚಿಕಿತ್ಸೆಯ ಪ್ರಥಮಗಳಲ್ಲಿ ಒಂದಾದ ಈ ಕಸಿಗೆ ಕಾರ್ನಿಯಾಗಳನ್ನು ದಾನಮಾಡಿದ 11 ವರ್ಷದ ಬಾಲಕನು ಜೀವಂತವಾಗಿದ್ದರೂ, ಅವನ ಕಣ್ಣುಗಳು ಗಾಯದಿಂದ ಶಾಶ್ವತವಾಗಿ ನಾಶವಾಗಿದ್ದು, ಕಾರ್ನಿಯಾ ಮಾತ್ರ ಉಪಯುಕ್ತವಾಗಿ ಉಳಿದಿತ್ತು.] ಈ ತಂತ್ರಜ್ಞಾನವು ವಿಕಾಸಗೊಂಡು, 1935ರಲ್ಲಿ ಶೈತ್ಯೋಪಚಾರಿತ ಕಾರ್ನಿಯಾದಿಂದ ಮಾಡಿದ ಒಂದು ಕಸಿಯು ವೈದ್ಯಶಾಸ್ತ್ರಪ್ರಮಾಣವಾಗಿ, ಅದನ್ನು ಸಾಧಿಸಿ, ಮತ್ರ್ಯಕುಲಕ್ಕೆ ಅಮತ್ರ್ಯ ಉಪಕಾರಗೈದ ಯೂಕ್ರೇಯ್ನ್‍ನ ನೇತ್ರವೈದ್ಯಪಟು ವ್ಲಾಡಮೀರ್ ಫಿಲಾಟಾಫ್ ನನ್ನು “ಕಾರ್ನಿಯಾ ಕಸಿ”ಯ ಪಿತಾಮಹನೆಂದು ಕರೆಯಲಾಯಿತು.  ದಾನಿತ ಕಾರ್ನಿಯಾಗಳ ಅಭಾವವನ್ನು ನೀಗಿಸುವ ನಿಟ್ಟಿನಲ್ಲಿ, ಕಾರ್ನಿಯಾ ಕಸಿಯಲ್ಲಿ ಸದ್ಯದ “ಸುವರ್ಣ ಪ್ರಮಾಣ”ವಾಗಿರುವ “ಪೆನಿಟ್ರೇಟಿಂಗ್ ಕೆರಟೋಪ್ಲ್ಯಾಸ್ಟಿ”ಗಿಂತಲೂ ಸುಧಾರಿತವಾದ ಡಿ.ಎ.ಎಲ್.ಕೆ. ಮತ್ತು ಡಿ.ಎಂ.ಇ.ಕೆ. ಪ್ರಕ್ರಿಯೆಗಳು ಈಚೆಗೆ ಪ್ರಯೋಗಿಸಲ್ಪಡುತ್ತಿವೆ. 

> 1989ರಲ್ಲಿ ಭಾರತದ ನೇತ್ರನಿಧಿ ಮಂಡಳಿ (ಐ-ಬ್ಯಾಂಕ್ ಅಸೋಸಿಯೇಶನ್ ಆಫ್ ಇಂಡಿಯಾ) ಎಂಬ ಶೃಂಗಸಂಸ್ಥೆಯು ಪ್ರವರ್ತಿತಗೊಂಡಿತು. ಇದರ ಕೇಂದ್ರ ಕಚೇರಿ ಹೈದರಾಬಾದ್‍ನಲ್ಲಿದೆ.  “ಪಚ್ಚೆಗಣ್ಣಿನ ಭುವನ ಮನಮೋಹಿನಿ” ಐಶ್ವರ್ಯ ರೈ ಅವರ ಮೊಟ್ಟಮೊದಲ ಜಾಹೀರಾತು ವಿಡಿಯೋವನ್ನು, ನೇತ್ರದಾನ ಜಾಗೃತಿಗಾಗಿ 1996ರಲ್ಲಿ ಅರ್ಪಿಸಿದ್ದು ಈ ಸಂಸ್ಥೆಯೇ. [23 ಸೆಕೆಂಡುಗಳ ಈ ವಿಡಿಯೋವನ್ನು “ಯೂಟ್ಯೂಬಿ”ಸಲಾಗಿದೆ.]

> 1976ರಲ್ಲಿ ಜಿಲ್ಲಾ ಅಂಧತ್ವ ನಿಯಂತ್ರಣ ಸಂಘಗಳ ಮೂಲಕ ಚಾಲಿತವಾದ ಭಾರತ ಸರ್ಕಾರದ “ಅಂಧತ್ವ ನಿಯಂತ್ರಣ ರಾಷ್ಟ್ರೀಯ ಕಾರ್ಯಕ್ರಮ”ದ ಅಂಗವಾಗಿ, 1986ರಿಂದೀಚೆಗೆ, ಪ್ರತಿ ಆಗಸ್ಟ್ 25-ಸೆಪ್ಟೆಂಬರ್ 8 ಕಾಲಮಾನವನ್ನು “ರಾಷ್ಟ್ರೀಯ ನೇತ್ರದಾನ ಪಕ್ಷ” ಎಂದು ಆಚರಿಸಲಾಗುತ್ತಿದೆ. ಭಾರತದ ನೇತ್ರನಿಧಿ ಮಂಡಳಿಗೆ ಸೇರಿರುವ ಎಲ್ಲ ನೇತ್ರನಿಧಿಗಳು ಮತ್ತು ಕಣ್‍ಹುಂಡಿಗಳು (ಸಂಗ್ರಹಣೆ ಕೇಂದ್ರಗಳು) ಈ ಸಂದರ್ಭದಲ್ಲಿ ಕಾರ್ನಿಯಾ ಕಾರಣಕ್ಕಾಗಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತವೆ. 

> ವಿಶ್ವ ಆರೋಗ್ಯ ಸಂಸ್ಥೆ ಮತ್ತು ಅಂತಾರಾಷ್ಟ್ರೀಯ ಅಂಧತ್ವ ನಿರೋಧ ನಿಯೋಗದ ಸಮನ್ವಯನದಲ್ಲಿ ಪ್ರತಿ ಅಕ್ಟೋಬರ್‍ನ ಎರಡನೇ ಗುರುವಾರವನ್ನು “ವಿಶ್ವ ದೃಷ್ಟಿದಿನ” ಎಂದು ಆಚರಿಸಲಾಗುತ್ತದೆ. 
  
> ಗರಿಷ್ಠ ಪ್ರಮಾಣದಲ್ಲಿ ಕಾರ್ನಿಯಾಗಳನ್ನು ಸಂಗ್ರಹಿಸಿ, ಅವುಗಳಲ್ಲಿ ತನ್ನ ಆಂತರಿಕ ಬೇಡಿಕೆಗಳನ್ನು ಪೂರೈಸುವುದಲ್ಲದೆ, ಉಳಿಕೆಯನ್ನು ಅನೇಕ ದಶಕಗಳಿಂದ 50-60 ದೇಶಗಳಿಗೆ ಒದಗಿಸಿ, ನಮ್ಮ ಪುಟ್ಟ ನೆರೆರಾಷ್ಟ್ರ ಶ್ರೀಲಂಕಾವು ತನ್ನ ವಿಶಿಷ್ಟ ನೇತ್ರದಾನಧರ್ಮವನ್ನು ಮೆರೆದಿದೆ; ಜಗತ್ತಿನ ಆಪ್ತ ಅಂಧಬಂಧುವಾಗಿದೆ. ಬದುಕಿರುವಾಗಲೇ, ಆ ದೇಶದ ಕೊಡುಕಣ್‍ಧಾರಾಳಿಗಳು, “ಈಗಲೇ ನನ್ನ ಒಂದು ಕಣ್ಣನ್ನು ದಾನ ಮಾಡಬಹುದೇ?” ಎಂದು ಮುಂದಾಗುತ್ತಾರಂತೆ!! 

“ದೃಷ್ಟಿದಾತ”ರಾದರೆ ಸಾಲದು. “ದೃಷ್ಟಿದೂತ”ರಾಗಿ. 
      
ನಿಮ್ಮ ಕಣ್ಣುಗಳನ್ನೇ ಕೊಡುವುದು ಉದಾರ-ಉದಾತ್ತ ಸಂಗತಿ, ನಿಜ. ಆದರೆ, ಬೇರೆಯವರನ್ನೂ ಈ ಘನಕಾರ್ಯಕ್ಕೆ ನೀವು ಪ್ರಚೋದಿಸಬಹುದಲ್ಲವೇ? ಬನ್ನಿ, “ದೃಷ್ಟಿದೂತ” ಸ್ವಯಂಸೇವೆಗೆ ಸೇರಿ, ಆದಷ್ಟೂ ಕಣ್ಣುಗಳಿಂದ ಕುರುಡನ್ನು ತೊಲಗಿಸಿ. ನೇತ್ರದಾನದ ನೇತಾರರಾಗಿ ಕಣ್ಣುಳ್ಳವರ ಒಳಗಣ್ಣನ್ನು ತೆರೆಸಿ. 

ಇದಕ್ಕಾಗಿ ನೀವು 9902080011 ಸಂಖ್ಯೆಗೆ ಮುಂದೆ ಕಾಣುವ ಸಂದೇಶವನ್ನು ಸಾಗಿಸಿದರೆ ಸಾಕು:
Eye<space>Name<space>Place
[“Eye” ಒತ್ತಿ; ಜಾಗ ಬಿಡಿ. “ನಿಮ್ಮ ಹೆಸರು” ಒತ್ತಿ; ಜಾಗ ಬಿಡಿ. “ಸ್ಥಳದ ಹೆಸರು” ಒತ್ತಿ; ಸಂದೇಶ ಸಾಗಿಸಿ.]

> ಮೇಲ್ಕಂಡ ಸಂದೇಶ ತಲುಪಿದೊಡನೆ, ನಿಮ್ಮ ನೇತ್ರದಾನದ ಬಗ್ಗೆ ಮರುನೆನಪಿಸುವ ಮತ್ತು ನಿಮ್ಮ ಕಣ್ಣಿನ ಆರೋಗ್ಯಕ್ಕಾಗಿ ಸೂಚನೆ ನೀಡುವ ಸಂದೇಶಗಳು ನಿಮಗೆ ಬರತೊಡಗುತ್ತವೆ. ನಿಮಗೆ ಅತ್ಯಂತ ಹತ್ತಿರವಿರುವ ಐ-ಬ್ಯಾಂಕ್‍ನ  ಸಂಪರ್ಕಮಾಹಿತಿಯೂ ನಿಮ್ಮನ್ನು ತಡವಿಲ್ಲದೆ ತಲುಪುತ್ತದೆ. 

> ನಿಮ್ಮ ಬಂಧುಮಿತ್ರರೆಲ್ಲರನ್ನೂ “ದೃಷ್ಟಿದೂತ” ಸೇವೆಗೆ ಕರೆತನ್ನಿ. ಒಬ್ಬೊಬ್ಬ ಸ್ವಯಂಸೇವಕರೂ ನಿಯತ್ತಿನಿಂದ ನೇತ್ರಗಳನ್ನು ಸೇರಿಸುತ್ತಾ ಹೋದಂತೆ, ಒಬ್ಬೊಬ್ಬರಾಗಿ ದೃಷ್ಟಿಶೂನ್ಯರು ದೃಷ್ಟಿಶಾಲಿಗಳಾಗುತ್ತಾ ಹೋಗುತ್ತಾರೆ. 

> ನೇರ ನೋಂದಣಿಗಾಗಿ ಮತ್ತು ಹೆಚ್ಚಿನ ಮಾಹಿತಿಗಾಗಿ www.nayanajyothi.org  ಸಂದರ್ಶಿಸಿ.

ನಿಮಿಷದಲ್ಲಿ ನೋಂದಣಿ: ತಂತ್ರಜ್ಞಾನದ ಮಹಿಮೆ

9902080011 ಎಂಬ “ನೇತ್ರದಾನ-ನಿಷ್ಠ” ಲಾಂಗ್‍ಕೋಡ್ ತೆರೆದುದೇ ತಡ, ಒಂದೊಮ್ಮೆ ಕಾಗದದ ಫಾರಂಗಳಿಂದ ವರ್ಷವಿಡೀ ಮಾಡುತ್ತಿದ್ದ ನೋಂದಣಿಗಳು ಈಗ ಕೆಲವೇ ನಿಮಿಷಗಳಲ್ಲಿ ನೇತ್ರಾವತಿಯಂತೆ ಹರಿದುಬರುತ್ತಿವೆ; ಕಾಗದ ಮತ್ತು ಸಮಯ-ಶ್ರಮಗಳ ಉಳಿತಾಯವಾಗುತ್ತಿದೆ. ಈ ಸಂಖ್ಯೆಗೆ ರವಾನಿಸುವ ಸಂದೇಶಕ್ಕೆ ನೀವು ಯಾವ ಶುಲ್ಕವನ್ನೂ ತೆರಬೇಕಿಲ್ಲ ಮತ್ತು ಇದು ಅಖಿಲ ಭಾರತ ಸಂಖ್ಯೆಯಾದ್ದರಿಂದ, ಬೇರೆ ರಾಜ್ಯದವರೂ ಇದಕ್ಕೆ “0” ಸೇರಿಸಬೇಕಿಲ್ಲ ಎಂಬ ಸಂಗತಿಗಳೂ ಇಲ್ಲಿ ಗಮನಾರ್ಹ. 

 
 “ದೃಷ್ಟಿ ದೂತ” ಕರೆಯ ಫಲಕ

“ದೃಷ್ಟಿದೂತ” ಸೇವೆಯಲ್ಲಿ, ನೀವೇನನ್ನು ಮಾಡುವಿರಿ?
> ಹೆಚ್ಚೆಚ್ಚು ವ್ಯಕ್ತಿಗಳನ್ನು ನೇತ್ರದಾನ ಮಾಡಲು ಮನವೊಲಿಸುವಿರಿ.
> ಮೃತರ ಆಪ್ತರಿಗೆ “ಸಾಂತ್ವನದ ಸಖಿ ಅಥವಾ ಸಖ” ಆಗಿ, ಅವರನ್ನು ಮೃತರ ನಯನದಾನಕ್ಕಾಗಿ ಅನುನಯದಿಂದ ಅನುಗೊಳಿಸುವಿರಿ.
>”ಕಾರ್ನಿಯಾ ಕಸಿ”ಗೆ ಅರ್ಹ ಅಂಧರನ್ನು ಗುರುತಿಸಿ, ಅವರಿಗೆ ದೃಷ್ಟಿ ಕೊಡಿಸುವಲ್ಲಿ ನೆರವಾಗುವಿರಿ.

  ದೃಷ್ಟಿಬಂಧುಗಳ ದೃಷ್ಟಿಕ್ಷೇಪಣೆಗಾಗಿ

> ಕಣ್ಣಿರುವುದು ದಹನಕ್ಕಲ್ಲ; ದಾನಕ್ಕೆ! ದೀಪವನ್ನೇ ಸುಡುವುದೇ? 
> ಕಣ್ಣು ಮಣ್ಣಾಗದಿರಲಿ! ಕಣ್ಣಿಲ್ಲದವರಿಗದು ಕಣ್ಣಾಗಲಿ!
> ಇಹಲೋಕದ ಈ ಕಣ್ಣ ಪರಲೋಕಕ್ಕೆ ಒಯ್ಯುವಿರೇಕೆ?
> ಕಣ್ಮರೆಯಾದವರ ಕಣ್ಣೂ ಮರೆಯಾಗಲೇಕೆ?
> ಕಣ್ಮುಚ್ಚುವಾಗ ನಾವು, ಕಣ್ಣಿಗೂ ನೀಡಬೇಕೇ ಸಾವು?
> ಚಿತಾಗಾರಕ್ಕಲ್ಲ, ನೇತ್ರಭಂಡಾರಕ್ಕಾಗಲಿ ಆ ಜೋಡಿಕಂಗಳು! 
> ಎರಡು ಕಣ್ಣು ಮುಚ್ಚುತ್ತಿದ್ದಂತೆ, ಇನ್ನೆರಡು ಕಣ್ಣು ತೆರೆಯಲಿ!
> ಕುರುಡು ನಂಬಿಕೆ ತೊರೆದು, ಕುರುಡು ಕಂಗಳ ತೆರೆಸಿ!
> ಕಡೆಯ ಬೀಳ್ಕೊಡುಗೆಗೆ ಕಲಶವಾಗಲಿ ಕಣ್ಕೊಡುಗೆಯು!
> ನಮ್ಮ ನೋಟ ಮುಗಿದ ಮೇಲೆ, ಇನ್ನಿಬ್ಬರಿಗೆ ದಕ್ಕಲಿ ಆ ನೋಟಶಕ್ತಿ!
> ಈ ಕಂಗಳೆರಡು ಬದುಕುಳಿದು, ಜಗವ ನೋಡುತ್ತಿರಲಿ, ಬಿಡಿ!
> ಕಂಗಳು ತಂಗಳಾಗದಿರಲಿ! ಬೆಳದಿಂಗಳಾಗಲಿ ಬೇರೊಂದು ಬಾಳಿಗೆ!
> ಜೋಡಿಕಂಗಳನಿತ್ತು ಜ್ಯೋತಿಜೊತೆಯನ್ನು ಬೆಳಗಿ!
> ಕಣ್ಣುದಾನಕ್ಕಿಂತ ಇನ್ನು ದಾನವು ಬೇಕೆ? 
> ಕಂಗಳ ದಾನಕ್ಕಿಂತ ಮಂಗಳಕರವಿನ್ನೇನು?
> “ನಯನವೇ ಪ್ರಧಾನ” ಎಂಬುದರಲ್ಲಿದೆ ನಯನಪ್ರದಾನದ ಹಿರಿಮೆ-ಗರಿಮೆ!
> ಮಡಿದವರ ನೆನಪಲ್ಲಿ ಕೊಡುಗೆ ಬೇರೇಕೆ? ಕಣ್ಕೊಡುಗೆಯೇ ಕೈಲಾಸವಲ್ಲವೇ?
> ಕಣ್ಕೊಡುಗೆಯ ಕೈಂಕರ್ಯವು ಕೈಲಾಸಕ್ಕೂ ಸೈ ಎನಿಪುದು!
> ಇಕ್ಕಣ್ಣನ್ನೀಯುವರಿಗೆ ಮುಕ್ಕಣ್ಣನೂ ಮಣಿದಾನು!
> ದೃಷ್ಟಿಭಾಗ್ಯವನ್ನು ಅಂಧರಿಗಿತ್ತು, ಸೃಷ್ಟಿಕಾರ್ಯವನ್ನಿಷ್ಟು ಪುಷ್ಟಿಗೊಳಿಸಿ! 
> ಕೆರೆಯ ನೀರನು ಕೆರೆಗೆ ಚೆಲ್ಲಿ! ದೃಷ್ಟಿಯನ್ನು ದೃಷ್ಟಿಹೀನರಿಗಿತ್ತು ಸಂತುಷ್ಟಿ ಹೊಂದಿ!
> ಕಣ್ಕೊಡುಗೆಗಿಲ್ಲ ಯಾವ ಗಡಿ! ಯಾವೆಣ್ಣೆಯಾದರೂ ಬೆಳಗುವುದೇ ಗುರಿ!
> ಆತ್ಮಕ್ಕೆ ಸಿಗಬಹುದು ಮುಂದೊಂದು ಮುಕ್ತಿ! 
  ದೃಷ್ಟಿದಾನದಿಂದ ಸಿಗಲೀಗ ಕುರುಡುತನಕ್ಕೆ ಮುಕ್ತಿ!!
> ಕಣ್ಣೀರಿನ ಕರುಣೆ ಏಕೆ? ಕಣ್ಕೊಡುಗೆಯನಿತ್ತು, ಮಾನವತೆಯ ಮೆರೆಯಬಾರದೇ?
> ಉದಾತ್ತತೆಯೆಂಬುದು ಮನುಜರಿಗೆ ವರದಾನ!  ತೋರಲದನು ಮಾಡಿ ನೇತ್ರದಾನ! 
 > ಸಾವಾದ ಮೇಲೂ ಸೇವೆಗೈಯ್ಯುತ್ತಿರಲಿ ನಮ್ಮ ಅಕ್ಷಾಂಶ!
> ಕರುಣಾಳು ಬಾ ದಾನಿಯೇ, ಕಣ್‍ನೀಡಿ ಮುನ್ನಡೆಸು ಕಣ್ಣಿಲ್ಲದವರನು!
> ಅಂಧತ್ವ ತೊಲಗಿ, ಅಂದವಾಗಲೆಲ್ಲರ ಬಾಳು!
> ಬದುಕು ಬೆಳಗಲಿ! ಕಣ್ಕೊಡುಗೆಯಿಂದ ಸಾವೂ ಬೆಳಗಲಿ!
> ತಮಸೋ ಮಾ ಜ್ಯೋತಿರ್ ಗಮಯ – ಕತ್ತಲ ಕಂಗಳಿಗೆ ಬೆಳಕು ಬರಲಿ!
  ಮೃತ್ಯೋರ್ ಮಾ ಅಮೃತಂ ಗಮಯ – ಮಣ್ಣಾಗುವ ಕಣ್ಣಿಗೆ ಮರುಬಾಳು ಬರಲಿ!!
> ಕಾರ್ನಿಯಾದಾರಿದ್ರ್ಯ ನೀಗಲಿ! ದೃಷ್ಟಿಲಕ್ಷಿ ಎಲ್ಲೆಡೆ ನಲಿಯಲಿ!
> ನೇತ್ರದಾನದ ವಾಗ್ದಾನ ಮಾಡಿ, ಮರಣವನ್ನು ಮಹಾನವಮಿಯನ್ನಾಗಿಸಿ!
> ನೂರ್ಕಾಲ ಬಾಳಿ ~ ನೂರಾರು ಕಣ್ತೆರೆಸಿ ~ ನೂರ್ ಜಹಾನ್ ಆಗಿ!
 [“ನೂರ್ ಜಹಾನ್” ಅಂದರೆ “ಜಗಜ್ಯೋತಿ” ಎಂದಾಗುತ್ತದೆ.]

~ 0 ~

ಕನ್ನಡದ ಬರಹಗಳನ್ನು ಹಂಚಿ ಹರಡಿ

2 thoughts on “ಆರದಿರಲಿ ಬೆಳಕು: ಎಸ್. ಜಿ. ಸೀತಾರಾಮ್, ಮೈಸೂರು.

Leave a Reply

Your email address will not be published. Required fields are marked *