ಆಯ ತಪ್ಪಿದ್ರೆ ಅಪಾಯ: ಎಂ.ಎಸ್.ನಾರಾಯಣ.

                                     
ಮೊನ್ನೆ  ವಾರಾಂತ್ಯಕ್ಕೆ ಗೆಳಯರೆಲ್ಲರೂ ಮೈಸೂರಿನ ನಮ್ಮ ಹಳೆಯ ಅಡ್ಡಾ, ವಿಶ್ವನ ಕ್ಯಾಂಟೀನಿನಲ್ಲಿ ಸೇರಿದ್ದೆವು. ಆಗಷ್ಟೇ ನಮ್ಮನ್ನು ಸೇರಿಕೊಂಡ ಹರೀಶ, “ಇವತ್ತಿನ್ ಬಿಲ್ ನಂದ್ಕಣ್ರಪ್ಪಾ, ಕೊನೇಗೂ ಶ್ರೀರಾಂಪುರ್ದಲ್ಲಿ ಒಂದ್ ಥರ್ಟೀಫ಼ಾಟೀ ತೊಗೊಂಡೇಬಿಟ್ಟೇ ಕಣ್ರೋ, ಬ್ಯಾಂಕ್ಲೋನ್ಗೋಡಾಡ್ತಿದೀನಿ, ಒಂದೊಳ್ಳೆ ಮುಹೂರ್ತ ನೋಡಿ ಗುದ್ಲೀ ಪೂಜೆ ಮಾಡ್ಸೋದೊಂದೇ ಬಾಕಿ ನೋಡಿ” ಅಂತ ಗುಡ್ನ್ಯೂಸ್ ಕೊಟ್ಟೇಬಿಟ್ಟ. ಎಲ್ರೂ ಕಂಗ್ರಾಟ್ಸ್ ಹೇಳುವುದರೊಳಗೆ, ಕಂಟ್ರ್ಯಾಕ್ಟರ್ ಕಂ ಹವ್ಯಾಸೀ ವಾಸ್ತುತಜ್ಞ ಮೋಹನ “ಯಾವ್ ಫೇಸಿಂಗಮ್ಮಾ?” ಎನ್ನಲು, ಅರ್ಥವಾಗದೇ ಉತ್ತರಿಸಲು ತಿಣಕಾಡುತ್ತಿದ್ದ ಹರಿಯ ಸಹಾಯಕ್ಕೆ ಧಾವಿಸಿದ ರಿಯಲ್ ಎಸ್ಟೇಟ್ ರಂಗ, “ಸೈಟ್ಯಾವ್ ದಿಕ್ಕ್ನೋಡ್ಕೊಂಡಿದ್ಯಮ್ಮಾ?” ಅಂದ. ಅದಕ್ಕೆ ಹರಿ, “ನಾರ್ತೀಸ್ಟ್ ಕಾರ್ನರ್” ಎನ್ನುತ್ತಿದ್ದಂತೆ ಅತ್ಯುತ್ತೇಜಿತನಾದ ಮೋನಿ, “ಬೆಸ್ಟೂ ಗುರೂ, ಮೊದ್ಲು ಅಯ್ನೋರತ್ರ ಹೋಗಿ ಒಂದೊಳ್ಳೆ ಆಯ ಹಾಕಿಸ್ಕೊಂಡ್ಬಾ, ಪಕ್ಕಾ ವಾಸ್ತು ಪ್ರಕಾರ ಸಖತ್ತಾಗ್ ಕಟ್ಟ್ಸಿಬಿಡುವಂತೆ, ಆಯಾನೇ ಮೈನು” ಎಂದ. ಈ ವಾಸ್ತು ಪರಿಭಾಷೆಯ ಹೆಚ್ಚು ಪರಿಚಯವಿಲ್ಲದ ಹರಿ, ಕಣ್ಣು ಕಣ್ಣು ಬಿಡುತ್ತಾ, “ಆಯ ಅಂದ್ರೇನೋ?” ಎನ್ನುತ್ತಿದ್ದಂತೆ, ಮೋನಿ, “ಅಯ್ಯೋ, ಆಯ ಗೊತ್ತಿಲ್ಲ್ವೇನೋ? ಮನೆ ಕಟ್ಸೋವಾಗ 35×35,41×35 ಅಂತೆಲ್ಲಾ ಬೇರ್ಬೇರೆ ಅಳತೆ ಆಯ ಇರತ್ತಮ್ಮಾ, ವಾಸ್ತೂಗೆ ಆಯಾನೇ ಕಣಮ್ಮ ಮೈನು,” ಎನ್ನುತ್ತಿದ್ದಂತೆ, ಅಲ್ಲಿಯವರೆಗೂ ಗಂಭೀರವಾಗಿ ಸಿಗರೇಟು ಸುಡುತ್ತಿದ್ದ ವಿಚಾರವಾದಿ ವಿಟ್ಲ, “ಲೋ, ಈ ವಾಸ್ತು ಗೀಸ್ತು ಎಲ್ಲಾ ಬರೀ ಓಳು ಕಣಮ್ಮಾ, ನೀನ್ಸುಮ್ನೆ ನಿನ್ನನ್ಕೂಲ ನೋಡ್ಕೊಂಡ್ ಹೆಂಗ್ಬೇಕೋ ಹಂಗ್ ಮನೆ ಕಟ್ಸ್ಕೊಳೊ, ಹರೀ” ಎಂದುಬಿಟ್ಟನು. ಇದರಿಂದ ಅಪ್ಸೆಟ್ಟಾದಂತಾದ ಮೋನಿ ಮತ್ತು ರಂಗ, ನಮ್ಮ ಪರಿಚಿತರ ಪೈಕಿ ವಾಸ್ತುವಿನ ಫಲಾಫಲಗಳನ್ನು ಅನುಭವಿಸಿದವರ ನಿದರ್ಶನಗಳನ್ನು ಉದುರಿಸತೊಡಗಿದರು.

ನಂತರ ಮೋನಿ, ಹರಿಯನ್ನು ನೋಡಿ ಕಕ್ಕುಲತೆಯಿಂದ, “ಈ ವಿಟ್ಲನ್ಮಾತ್ಕೇಳ್ಕೊಂಡ್ಹಾಳಾಗ್ಬೇಡ ಹರಿ, ನೀನ್ಹೋಗ್ ಒಂದೊಳ್ಳೆ ಆಯ ಹಾಕಿಸ್ಕೊಂಬಾಮ್ಮಾ, ವಾಸ್ತು ಪ್ರಕಾರ ನಾ ನಿಂತ್ಮನೆ ಕಟ್ಟಿಸ್ಕೊಡ್ತೀನಿ, ಆಯಾನೇ ಮೈನು, ಈ ನನ್ಮಗಂಗೆ ಏನ್ಗೊತ್ತಾಗತ್ತೆ, ಆಯ ತಪ್ಪಿದ್ರೆ ಅಪಾಯ ಗ್ಯಾರಂಟಿ” ಎಂದನು. ಅದಕ್ಕೆ ವಿಟ್ಲ, “ನೊಡೀಗ ಹೇಳಿದ್ಯಲ್ಲಾ ಮೋನಿ, ಆಯ ತಪ್ಪಿದ್ರೆ ಅಪಾಯ ಗ್ಯಾರಂಟಿ ಅಂತ, ಈ ಮಾತ್ನ ನಾನೊಪ್ತೀನಿ, ಆದ್ರೆ ವಾಸ್ತು ಗೀಸ್ತು ನಂಬಲ್ಲ” ಅಂದ. ಇದರಿಂದ ಮೋನಿಗೆ ರೇಗಿ, “ಅದೇನ್ ಎಡಬಿಡಂಗಿ ಮಾತೂಂತಾಡ್ತೀಯ ವಿಟ್ಲಾ, ವಾಸ್ತು ನಂಬಲ್ಲ್ವಂತೆ, ಆಯ ತಪ್ಪಿದ್ರೆ ಅಪಾಯ ಗ್ಯಾರಂಟೀ ಅಂತೊಪ್ತಾನಂತೆ” ಅಂದ, ಸ್ವಲ್ಪ ಸಿಟ್ಟಿನಿಂದಲೇ. ಅಷ್ಟರಲ್ಲಿ ಗ್ರೇಪ್ಜೂಸಿನ ಕೊನೆಯ ಗುಟುಕನ್ನು ಗುಟುಕರಿಸಿ ಗ್ಲಾಸು ಕೆಳಗಿಟ್ಟ ವಿಟ್ಲ, “ಸಿಂಪಲ್ಲಮ್ಮಾ ವಾಸ್ತು ಗೀಸ್ತು ನಾ ನಂಬಲ್ಲ, ಆದ್ರೆ, ಹೋದ್ತಿಂಗ್ಳು ನೀರ್ಮನೇಲಿ ಆಯ ತಪ್ಪಿ ಬಿದ್ಬಿಟ್ಟೆ, ಬಿದ್ದೇಟ್ಗೆ ಸೊಂಟ ಉಳುಕಿ ಒಂದ್ವಾರ ಒದ್ದಾಡ್ಬುಟ್ಟೆ, ಹಾಗಾಗಿ ಆಯ ತಪ್ಪಿದ್ರೆ ಅಪಾಯ ಗ್ಯಾರಂಟೀ ಅಂತೊಪ್ತೀನಿ” ಎಂದು ನಗುತ್ತಾ ಕಣ್ಣುಹೊಡೆದು ಅಂಗೈಯೆತ್ತಿ, ಪಕ್ಕದಲ್ಲಿ ನಿಂತಿದ್ದ ನನ್ನೊಂದಿಗೆ ಹೈ ಫ಼ೈವ್ ಮಾಡಿದ. ಎಲ್ಲರೂ ಘೊಳ್ಳೆಂದು ನಕ್ಕೆವು. ನಂತರ ಎಲ್ಲರೂ ಕೂಡಿ ಮೋನಿಯ ಇನ್ನೋವಾದಲ್ಲಿ ಲಾಂಗ್ ಡ್ರೈವ್ ಹೋಗಿ, ಡಾಭಾವೊಂದರಲ್ಲಿ ಒಬ್ಬರ ಕಾಲೊಬ್ಬರೆಳೆಯುತ್ತಾ ಮಾತಾಡಿಕೊಂಡು, ಊಟ ಮುಗಿಸಿ ಡಿಸ್ಪರ್ಸಾದೆವು. 

‘ಆಯಾನೇ ಮೈನು, ಆಯ ತಪ್ಪಿದ್ರೆ ಅಪಾಯ ಗ್ಯಾರಂಟಿ,’ ಎಷ್ಟು ಅರ್ಥಗರ್ಭಿತ ಮಾತುಗಳಿವು. ಆ ರಾತ್ರಿ ಏಕಾಂತದಲ್ಲಿ ಯೋಚಿಸತೊಡಗಿದೆ. ಈ ಮಾತಿಗೆ ಇಂದು ‘ಅಡ್ಡಾ’ದಲ್ಲಿ ಅಂದುಕೊಂಡದ್ದಕ್ಕಿಂತ ಹೆಚ್ಚು ಆಯಾಮಗಳಿವೆ ಅನ್ನಿಸಿತು. ಆಯ, ಅಂದರೆ ಸಮತೋಲನ. ಜೀವನದಲ್ಲಿ ಸಮತೋಲನ ಕಳೆದುಕೊಂಡರೆ ಪತನ ನಿಶ್ಚಿತ. ದೈಹಿಕವಾಗಿ ಮಾತ್ರವಲ್ಲ, ಮಾನಸಿಕವಾಗಿಯೂ, ಬೌದ್ಧಿಕವಾಗಿಯೂ ಈ ಮಾತು ಬಹಳ ಅರ್ಥಪೂರ್ಣ. ದಿನಾಲೂ ನಮ್ಮ ಮಧ್ಯೆ ನಡೆದಾಡುವ ಜ್ವಲಂತ ಉದಾಹರಣೆಗಳನ್ನು, ಈ ಹಿನ್ನಲೆಯಲ್ಲಿ ಗಮನಿಸದಿರಲು ಸಾಧ್ಯವೇ ಇಲ್ಲ. ಅಸಾಧಾರಣ ಬುದ್ಧಿಮೆತ್ತೆಯ ಪ್ರತಿಭಾವಂತ ಪ್ರಾಧ್ಯಾಪಕನೊಬ್ಬ ತನ್ನ ಕೆಟ್ಟ ಜೀವನಶೈಲಿಯ ಕೃಪೆಯಿಂದ ಯಾವಾಗಲೂ ಅನಾರೋಗ್ಯದಿಂದ ನರಳುತ್ತಲೇ ಇರುತ್ತಾನೆ. ಕೌಟುಂಬಿಕ ಹಿನ್ನಲೆ, ಆರೋಗ್ಯ, ಅಪ್ರತಿಮ ಪ್ರತಿಭೆ, ಹೀಗೆ ಮತ್ತೆಲ್ಲವೂ ಚೆನ್ನಾಗಿದ್ದಾಗ್ಯೂ, ವ್ಯಾಪಾರಿಯೊಬ್ಬ ತನ್ನ ವೃತ್ತಿ ಬದುಕಿನಲ್ಲಿಯೇ ನೆಲೆ ಕಂಡುಕೊಳ್ಳುವಲ್ಲಿ ದಯನೀಯವಾಗಿ ಸೋತು ಹೋಗಿರುತ್ತಾನೆ. ಜೀವನದಲ್ಲಿ ಎಲ್ಲ ಯಶಸ್ಸುಗಳನ್ನೂ ತನ್ನದಾಗಿಸಿಕೊಂಡ ಯಶಸ್ವೀ ವೈದ್ಯನೊಬ್ಬ, ಯಾಕೋ, ಏನೋ, ಚೈತನ್ಯವೇ ಇಲ್ಲದ ಜೀವಚ್ಛವದಂತೆ ಓಡಾಡಿಕೊಂಡಿರುತ್ತಾನೆ. ತನ್ನ ವಿಶೇಷ ಪ್ರತಿಭೆಯಿಂದ ವೃತ್ತಿಯಲ್ಲಿ ಅದ್ವಿತೀಯ ಯಶಸ್ಸು ಕಂಡು, ಕೋಟಿ ಕೋಟಿ ಗಳಿಸುವ ಗೌರವಾನ್ವಿತ ವಕೀಲನೊಬ್ಬ, ಬದುಕಿನಲ್ಲಿ ಹೆಂಡತಿಯ ವಿಶ್ವಾಸಘಾತಕತೆಯಿಂದ, ಮಕ್ಕಳ ಅವಿಧೇಯತೆ, ತಿರಸ್ಕಾರಗಳಿಂದ ಕೌಟುಂಬಿಕ ಸೌಖ್ಯವೇ ಇಲ್ಲದೆ, ಕುಡಿತದ ದಾಸನಾಗಿ ಹೋಗಿರುತ್ತಾನೆ. ಹೀಗೆ, ಉಳಿದಂತೆ ಜೀವನದಲ್ಲಿ ಅಸಾಧಾರಣ ಯಶಸ್ಸು ಸಿಕ್ಕಿದ ಹೊರತಾಗಿಯೂ, ಬದುಕಿನ ಎಲ್ಲಾ ಪ್ರಮುಖ ಅಂಶಗಳ ನಡುವೆ ಒಂದು ಸಮತೋಲನ ಕಾಯ್ದುಕೊಳ್ಳುವಲ್ಲಿ ಸೋತು ಬದುಕನ್ನು ಮೂರಾಬಟ್ಟೆಯನ್ನಾಗಿಸಿಕೊಂಡವರ ಅನೇಕ ದುರಂತ ನಿದರ್ಶನಗಳು ನಮಗೆಲ್ಲಾ  ಚಿರಪರಿಚಿತವೇ ಆಗಿರುತ್ತದೆ. 

ಸರ್ಕಸ್ಸಿನಲ್ಲಿ ನಾಲ್ಕಾರು ಚೆಂಡುಗಳನ್ನೋ, ಬಾಟಲಿಗಳನ್ನೋ ಏಕಕಾಲಕ್ಕೆ ಗಾಳಿಯಲ್ಲಿ ವೃತ್ತಾಕಾರವಾಗಿ ಎಸೆಯುತ್ತಾ ಹಿಡಿಯುತ್ತಾ, ಅವು ಬೀಳದಂತೆ ಎಚ್ಚರದಿಂದ ಆಯ ಕಾಯ್ದುಕೊಂಡು, ಪ್ರೇಕ್ಷಕರನ್ನು ರಂಜಿಸುವ ಚಮತ್ಕಾರವನ್ನು ನೀವೆಲ್ಲರೂ ನೋಡಿರುತ್ತೀರಿ. ಇಂಗ್ಲೀಷಿನಲ್ಲಿ ಇದಕ್ಕೆ ‘ಜಗ್ಲರಿ’ ಎನ್ನುತ್ತಾರೆ. ಜೀವನವೂ ಒಂದು ರೀತಿಯ ಜಗ್ಲರಿ ಆಟವೇ. ಅಮೆರಿಕದ ಪ್ರಸಿದ್ಧ ಇಂಗ್ಲಿಷ್ ಲೇಖಕ ಜೇಮ್ಸ್ ಪ್ಯಾಟ್ಟೆರ್ಸನ್ ಪರಿಚಿಯಿಸಿದ ಈ ವಿಶ್ಲೇಷಣೆಯು, ಇಲ್ಲಿ ಪ್ರಸ್ತುತವೆನಿಸಿ, ಪ್ರಸ್ತಾಪಿಸುತ್ತಿದ್ದೇನೆ. ಪ್ಯಾಟ್ಟೆರ್ಸನ್, ಜೀವನವನ್ನು ಐದು ಚೆಂಡುಗಳ ಜಗ್ಲರಿ ಆಟವೆನ್ನುತ್ತಾನೆ. ಅವನು ಈ ಐದು ಚೆಂಡುಗಳನ್ನು ವೃತ್ತಿ, ಕುಟುಂಬ, ಆರೋಗ್ಯ, ಗೆಳಯರು ಹಾಗೂ ಚೈತನ್ಯಗಳೆಂದು ಹೆಸರಿಸುತ್ತಾನೆ. ಈ ಚೆಂಡುಗಳಲ್ಲಿ ವೃತ್ತಿಯೆಂಬ ಚೆಂಡು, ರಬ್ಬರ್ ಚೆಂಡಾಗಿದ್ದು ಜಗ್ಲರಿ ಆಡುವಾಗ ಆಕಸ್ಮಿಕವಾಗಿ ಕೆಳಗೆ ಬಿದ್ದರೂ, ಅದು ಮತ್ತೆ ಪುಟಿದೆದ್ದು ಬರುವುದರಿಂದ ಹೆಚ್ಚೇನೂ ತೊಂದರೆಯಾಗದು. ಆದರೆ, ಕುಟುಂಬ, ಆರೋಗ್ಯ, ಗೆಳಯರು ಹಾಗೂ ಚೈತನ್ಯಗಳೆಂಬ ಉಳಿದ ನಾಲ್ಕು ಚೆಂಡುಗಳು ಗಾಜಿನಿಂದ ಮಾಡಲ್ಪಟ್ಟಿದ್ದು ಅವುಗಳೇನಾದರೂ ಕೆಳಗೆ ಬಿದ್ದಲ್ಲಿ ಒಂದೇ ಸಲಕ್ಕೆ ಒಡೆದು ಪುಡಿ ಪುಡಿಯಾಗದಿದ್ದರೂ, ಅವುಗಳಲ್ಲಿ ಶಾಶ್ವತವಾಗಿ ಛಿನ್ನಗೊಂಡು ಮತ್ತೆಂದೂ ಮೊದಲಿನಂತಾಗದ ಹಾಗೆ ಹಾನಿಗೊಳ್ಳುವುದಂತೂ ನಿಶ್ಚಿತವೆಂದು ಜೇಮ್ಸ್ ಎಚ್ಚರಿಸುತ್ತಾನೆ.

ಬದುಕಿನಲ್ಲಿ ಇಷ್ಟೊಂದು ಮಹತ್ವ ಹೊಂದಿರುವ ಈ ‘ಆಯ’ ತಪ್ಪದಿರಲು ನಾವೇನು ಮಾಡಬಹುದು? ಜೀವನದಲ್ಲಿ, ಸೂಕ್ಷ್ಮ ಸಮತೋಲನದ ಸಮನ್ವಯತೆಯ ಸಾಧನೆಗೆ ಸೂತ್ರಗಳೇನು? ಈ ವಿಚಾರವನ್ನು ಇನ್ನೂ ಸ್ವಲ್ಪ ಆಳವಾಗಿಯೂ, ಸೂಕ್ಷ್ಮವಾಗಿಯೂ ಆಲೋಚಿಸಿ ನೋಡೋಣ. ಸಮತೋಲನದ ಸ್ವರೂಪವನ್ನರಿಯಲು ಮತ್ತೊಮ್ಮೆ ಸರ್ಕಸ್ಸಿನದೇ ಉದಾಹರಣೆಯನ್ನು ತೆಗೆದುಕೊಳ್ಳೋಣ.  ಸರ್ಕಸ್ಸಿನಲ್ಲಿ, ಎತ್ತರದಲ್ಲಿ ಕಟ್ಟಲಾಗಿರುವ ಬಿಗಿಯಾದ ಹಗ್ಗದ ಮೇಲೆ ವ್ಯಕ್ತಿಯೊಬ್ಬನು ನಡೆಯುವ ಆಟದ ಪ್ರದರ್ಶನವನ್ನು ನೀವೆಲ್ಲರೂ ನೋಡಿರುತ್ತೀರಿ. ಹಾಗೆ ಹಗ್ಗದ ಮೇಲೆ ನಡೆಯುವವರು, ತಮ್ಮ ಕೈಯಲ್ಲಿ ಒಂದು ನೀಳವಾದ ಪಟ್ಟಿಯೊಂದನ್ನು ಹಿಡಿದಿರುತ್ತಾರಲ್ಲವೇ?  ಆ ಪಟ್ಟಿಯನ್ನು ಮಧ್ಯದಲ್ಲಿ ಹಿಡಿದುಕೊಂಡು, ತಮ್ಮ ಅಗತ್ಯಕ್ಕೆ ತಕ್ಕಂತೆ ಅದರ ಎರಡೂ ಧ್ರುವಗಳನ್ನೂ ಮೇಲೆ, ಕೆಳಗೆ ಮಾಡುತ್ತಾ, ಆಯ ತಪ್ಪದ ಹಾಗೆ ಸಮತೋಲನ ಕಾಯ್ದುಕೊಂಡು ಹಗ್ಗದ ಮೇಲೆ ನಡೆಯುವ ಅವರ ಕೌಶಲ್ಯವನ್ನು ನೋಡಿ ನಾವು ಕೈತಟ್ಟಿ ಅಭಿನಂದಿಸುತ್ತೇವೆ. ಅವರು ಬಳಸುವ ಆ ಪಟ್ಟಿಯ ಎರಡು ತದ್ವಿರುದ್ಧ ಧ್ರುವಗಳ ಸಮನ್ವಯತೆಯಿಂದ ಅದರ ಮಧ್ಯದಲ್ಲಿರುವ ಅವರ ಶರೀರ, ಸಮತೋಲನ ಸಾಧಿಸುವುದು ಕಾಕತಾಳೀಯವೇನಲ್ಲ. ಸೃಷ್ಟಿಯ ಸಮತೋಲನದ ರಹಸ್ಯವು ವಿವಿಧ ವೈಪರಿತ್ಯಗಳ ವಿದ್ಯುಕ್ತ ವಿನ್ಯಾಸದಲ್ಲಿ ಅಡಗಿರುವುದೊಂದು ವಿಸ್ಮಯ. ಮಹಾನ್ ದಾರ್ಶನಿಕ ಓಶೋ, ಸತ್ಯದ ಪರಿಕಲ್ಪನೆಯನ್ನು ಅದ್ಭುತವಾಗಿ ವಿವರಿಸುತ್ತಾ, ಹಕ್ಕಿಯ ಹಾರಾಟದ ಉದಾಹರಣೆಯನ್ನು ಕೊಡುತ್ತಾರೆ. ಅದರ ಉಲ್ಲೇಖ ಈ ಸಂದರ್ಭಕ್ಕೆ ಅತ್ಯಂತ ಪ್ರಸ್ತುತವಾಗಿದೆ.
  
‘ಸತ್ಯವು ನೇರವಾಗಿ ತದ್ವಿರುದ್ಧವಾಗಿರುವ ಧ್ರುವೀಕೃತ ಅಂಶಗಳ ಕೇಂದ್ರವಾಗಿರುತ್ತದೆ’, ಎಂದೆನ್ನುವ ಓಶೋ ಹೇಳುವಂತೆ, ಒಂದು ಹಾರುವ ಹಕ್ಕಿಯ ಎರಡು ರೆಕ್ಕೆಗಳು ಯಾವಾಗಲೂ ಭಿನ್ನಾಭಿಪ್ರಾಯವನ್ನೇ ಹೊಂದಿರುತ್ತವೆ. ಅಲ್ಲದೇ, ಪರಸ್ಪರ ತದ್ವಿರುದ್ಧ ದಿಕ್ಕಿನಲ್ಲಿರುವ ಆ ರೆಕ್ಕೆಗಳು ಒಂದು ಮೇಲೆ ನೋಡಿದರೆ ಇನ್ನೊಂದು ಕೆಳಗೆ ನೋಡುತ್ತದೆ. ಆದರೆ, ದುರದೃಷ್ಟವಶಾತ್, ಆ ರೆಕ್ಕೆಗಳ ನಡುವೆಯೇನಾದರೂ ಸಹಮತ ಮೂಡಿಬಿಟ್ಟರೆ, ಆ ಕ್ಷಣದಲ್ಲಿ, ಪಾಪ ಹಕ್ಕಿ ಧೊಪ್ಪನೆ ನೆಲಕ್ಕೆ ಬಿದ್ದು ಬಿಡುತ್ತದೆ. ಏಕೆಂದರೆ ಹಾರುವ ಹಕ್ಕಿಯ ಸಮತೋಲನ ಅದರ ರೆಕ್ಕೆಗಳ ವೈರುಧ್ಯದಲ್ಲಿದೆ. ಈ ವಿವೇಕಭರಿತ ಮಾತುಗಳು ಎಷ್ಟು ನಿಜವಲ್ಲವೇ? ಹೀಗೇ, ಇನ್ನೊಂದೆರಡು ಗಹನವಾದ ವಿಚಾರಗಳಲ್ಲಿ ಸತ್ಯದ ರಚನೆಯ ಸ್ವರೂಪವನ್ನೂ ಅದರಲ್ಲಿನ ಮೇಲ್ನೋಟದ ವೈರುಧ್ಯಗಳನ್ನು ಗಮನಿಸಿದಲ್ಲಿ ವಿಷಯವು ಹೆಚ್ಚು ಸ್ಪಷ್ಟವಾದೀತು.

ನಾವೆಲ್ಲರೂ ತಿಳಿದಿರುವಂತೆ ‘ಕರ್ಮವಾದ’ ಹಿಂದೂ ಧರ್ಮದ ಒಂದು ಪ್ರಮುಖ ಸಿದ್ಧಾಂತವಾಗಿದೆ. ಕರ್ಮವಾದದ ಪ್ರತಿಪಾದನೆಯಂತೆ ನಾವುಗಳು ಮಾಡುವ ಕರ್ಮಗಳ ಫಲವನ್ನು ಭವಿಷ್ಯದಲ್ಲಿ ನಾವೇ ಆನುಭವಿಸಬೇಕು ಮತ್ತು ನಾವು ಈಗ ಅನುಭವಿಸುತ್ತಿರುವ ಕಷ್ಟಸುಖಗಳೆಲ್ಲವೂ ನಮ್ಮ ಹಿಂದಿನ ಕರ್ಮಗಳ ಫಲಗಳೇ ಆಗಿರುತ್ತವೆ. ಕನ್ನಡದ ನುಡಿಗಟ್ಟಾದ ‘ಮಾಡಿದ್ದುಣ್ಣೋ ಮಹರಾಯ’ ಎನ್ನುವುದು ಕರ್ಮವಾದವನ್ನಾಧರಿಸಿದ್ದು, ನಾವು ಪಡೆಯುವ ಫಲಗಳು ನಾವು ಮಾಡುವ ಕರ್ಮಗಳ ಮೇಲೆ ಅವಲಂಬಿಸಿರುವುದಾಗಿ ತಿಳಿಸುತ್ತದೆ. ಒಟ್ಟಾರೆ, ನಮ್ಮ ಬದುಕಿನ ಎಲ್ಲ ಆಗುಹೋಗುಗಳಿಗೆ ನಾವೇ ಸಂಪೂರ್ಣ ಹೊಣೆಗಾರರೆನ್ನುವುದು ಕರ್ಮವಾದದ ತಿರುಳು. ಹಿಂದೂ ಧರ್ಮದ ಇನ್ನೊಂದು ಮುಖ್ಯ ಸಿದ್ಧಾಂತವಾದ ‘ದೈವವಾದ’ವು, ನಮ್ಮ ಜೀವನದ ಆಗುಹೋಗುಗಳೆಲ್ಲವೂ ಪೂರ್ವ ನಿರ್ಧಾರಿತವಾಗಿದ್ದು, ನಮ್ಮ ನಿಯಂತ್ರಣದಲ್ಲಿ ಯಾವುದೂ ಇರುವುದಿಲ್ಲವೆಂದು ತಿಳಿಸುತ್ತದೆ. ‘ತೇನವಿನಾ ತೃಣಮಪಿ ನ ಚರತಿ’, ಅಂದರೆ, ಆ ವಿಧಾತನ ಆಗ್ರಹಿವಿಲ್ಲದೆ ಒಂದು ಹುಲ್ಲುಕಡ್ಡಿಯೂ ಅಲುಗುವುದಿಲ್ಲವೆಂಬ ಈ ಮಾತು ದೈವ ಸಿದ್ಧಾಂತವನ್ನು ಆಧರಿಸಿದೆ. ಹಿಂದೂ ಧರ್ಮದ ಈ ಎರಡು ಸಿದ್ಧಾಂತಗಳೂ ಮೇಲ್ನೋಟಕ್ಕೆ ಪರಸ್ಪರ ವಿರೋಧಾತ್ಮಕವಾಗಿ ಕಂಡುಬರುವುದಲ್ಲವೇ? ಆದರೆ ಶಾಸ್ತ್ರಗಳಲ್ಲಿರುವ ವಿವರಣೆಯಂತೆ ಇವುಗಳಲ್ಲಿ ಯಾವುದೇ ವೈರುಧ್ಯಗಳಿಲ್ಲ. ಆಧ್ಯಾತ್ಮ ಪಥದಲ್ಲಿ ನಾವಿರುವ ಹಂತದ ಮೇಲೆ ಈ ಸಿದ್ಧಾಂತಗಳ ಪ್ರಸ್ತುತತೆ ನಿರ್ಧರಿಸಲಾಗುವುದೆಂದು ಶಾಸ್ತ್ರಗಳು ತಿಳಿಸುತ್ತವೆ. ಅರ್ಧ ಲೋಟ ನೀರನ್ನು ನೋಡಿ, ಒಬ್ಬನು ಲೋಟ ಅರ್ಧ ತುಂಬಿದೆಯೆಂದರೆ, ಇನ್ನೊಬ್ಬ ಲೋಟ ಅರ್ಧ ಖಾಲಿಯಿದೆ ಎನ್ನಬಹುದಲ್ಲವೇ? ಆದರೆ ಈ ಇಬ್ಬರಲ್ಲಿ ಯಾರೂ ಸುಳ್ಳುಹೇಳುತ್ತಿಲ್ಲವಲ್ಲವೇ? ಇಬ್ಬರೂ ನುಡಿಯುತ್ತಿರುವುದೂ ಸತ್ಯವೇ ಆಗಿದ್ದು, ಎರಡೂ ಹೇಳಿಕೆಗಳೂ ನೋಡುವವರ ದೃಷ್ಟಿಕೋನವನ್ನು ಅವಲಂಬಿಸಿವೆಯಷ್ಟೆ. 

*****

(ಮುಂದುವರೆಯುವುದು….)

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

5 Comments
Oldest
Newest Most Voted
Inline Feedbacks
View all comments
ramacharan
ramacharan
10 years ago

Ist prize to the last part of your article Sir. As usual it has come out well.  Many congratulations. waiting to read the next part.

amardeep.p.s.
amardeep.p.s.
10 years ago

good write up sir….like it..

Narayan Sankaran
Narayan Sankaran
10 years ago

Thanks so much Ram and Amardeep 🙂

Soory Hardalli
Soory Hardalli
10 years ago

good article. But why in the category of 'lalitha prabandha?

5
0
Would love your thoughts, please comment.x
()
x