ಬೆಳಿಗ್ಗೆ ಸ್ನಾನ ಮುಗಿಸಿ ಬಂದ ಕುಮುದ ಪೂಜೆ ಮಾಡುತ್ತಿದ್ದಳು. ತನ್ನ ಮದುವೆಯ ಮೂರನೇ ವಾರ್ಷಿಕೋತ್ಸವವಾಗಿದ್ದರಿಂದ ಸ್ವಲ್ಪ ವಿಶೇಷವಾದ ಪೂಜೆ ನಡೆಯುತ್ತಿತ್ತು. ಆದ್ರರೇ ಮನಸ್ಸಿನಲ್ಲಿ ಇನ್ನು ಅಡಿಗೆಮನೆಯ ಕೆಲಸ ಮುಗಿಸಿಲ್ಲವಲ್ಲ ಅನ್ನೋ ಯೋಚನೆ ಇತ್ತು. ಚಪಾತಿ ಹಿಟ್ಟು ಕಲಸಿಟ್ಟಿದ್ದೇನೆ. ತರಕಾರಿ ಪಲ್ಯ ಹಾಗು ಚಟ್ನಿ ಮಾಡಿದ್ದಾಗಿದೆ. ಗಂಡನಿಗೆ ಡಬ್ಬಿಗೆ ಹಾಕಿಕೊಡುವ ಕೆಲಸ ತನ್ನದಾದ್ದರಿಂದ, ಮನಸ್ಸು ಪೂಜೆಯಲ್ಲಿ ಪೂರ್ತಿ ಇರಲಿಲ್ಲ. ಜೊತೆಯಲ್ಲಿ ಮಗು ಎದ್ದರೆ ಹೇಗೆ ಸಂಭಾಳಿಸುವುದು ಅನ್ನೋ ಯೋಚನೆ ಬೇರೆ. ಹಾಗಾಗಿ ಪೂಜೆ ಹೆಂಗೋ ಹಂಗೆ ಮಾಡಿ ಸಮಾಧಾನ ಮಾಡುಕೊಳ್ಳುತ್ತಿದ್ದಳು. ತನಗೆ ಭಕ್ತಿ ಹೆಚ್ಚಾಗಿದ್ದು ವ್ರತ ನಿಯಮಗಳನ್ನು ಪಾಲಿಸುತ್ತಿದ್ದ ಹುಡುಗಿಗೆ ಇಂತಹ ಪೂಜೆ ಅಪೂರ್ಣ ಅನ್ನಿಸುತ್ತಿತ್ತು. ಆದರೂ ಜೀವನದ ಎಲ್ಲ ದಿನಗಳು ಒಂದೇ ತರಹ ಇರುವುದಿಲ್ಲವಲ್ಲ ಅಂತ ಸಮಾಧಾನ ಮಾಡಿಕೊಳ್ಳುತ್ತಾ ಅಡುಗೆ ಮನೆಗೆ ಧಾವಿಸಿದಳು. ಮನೆಯ ಹಿರಿಯರಿಗೆ ಸಮಯಕ್ಕೆ ಸರಿಯಾಗಿ ಅಡಿಗೆ ತಿಂಡಿಗಳು ಆಗಬೇಕು ಇಲ್ಲದಿದ್ದರೆ ನನ್ನ ಬಗ್ಗೆ ಅಕ್ಕ ಪಕ್ಕದ ಮನೆಗಳಿಂದ ಇಲ್ಲ ಸಲ್ಲದ ಆರೋಪಗಳು ಹೇಳಿಕೊಂಡಿರುವ ವಿಷಯ ತಿಳಿದು ಬರುತ್ತದೆ. ಅಂತಹ ಪ್ರಸಂಗ ಬರುವುದು ಬೇಡ ಎಂದು ಚುರುಕಾಗಿ ಅಡಿಗೆ ಕೆಲಸ ಮುಂದುವರೆಸಿದಳು.
ಶಾರದಾ ತನ್ನ ಸೊಸೆಯನ್ನು ನೋಡುತ್ತಾ ನನ್ನ ಬಗ್ಗೆ ಒಂದಿಷ್ಟು ಅಭಿಮಾನವಿಲ್ಲ ಎಂಥ ಹುಡುಗಿ, ನನಗೇನು ಅಷ್ಟು ತಿಳಿಯುವುದಿಲ್ಲವೇ ಅವರ ವಿವಾಹ ವಾರ್ಷಿಕೋತ್ಸವ ಇಂದು, ನಾನು ಏನಾದರು ಮಾಡಿಕೊಡುತ್ತಿದ್ದೆ. ಒಂದು ದಿನವಾದರೂ ಅಡಿಗೆ ಮಾಡಿ ಅತ್ತೆ, ನಿಮ್ಮ ಕೈ ರುಚಿ ಎಷ್ಟು ಚಂದ ಅಂತ ಹೇಳುವ ಸೌಜನ್ಯವಾದರೂ ಬೇಡವೇ! ನನಗೋ ಅಡಿಗೆ ಮಾಡುವ ಅಭ್ಯಾಸವು ತಪ್ಪಿ ಹೋಗಿದೆ, ವಯಸ್ಸಾಗಿರುವ ಕಾರಣ ಸ್ವಲ್ಪ ಹೆಚ್ಚು ಕಮ್ಮಿ ಆಗಬಹುದು. ಆದರೆ ಮಕ್ಕಳ ಸಂತೋಷವನ್ನು ಅರ್ಥ ಮಾಡಿಕೊಳ್ಳದ ಕೆಟ್ಟ ಹೆಂಗಸೇನಲ್ಲ ಅಂತ ತನ್ನ ಬಗ್ಗೆ ತಾನೇ ಅಂದುಕೊಳ್ಳುತಿದ್ದಳು. ತನ್ನ ಮಗನಾಗಲಿ ಗಂಡನಾಗಲಿ ತನ್ನಿಂದ ಚೆನ್ನಾಗಿ ಸೇವೆ ಮಾಡಿಸಿಕೊಂಡು, ಈಗ ಎಲ್ಲ ಮರೆತು ಹೋಗಿದ್ದಾರೆ. ಏನಾದರು ಮಾಡಲು ಹೋದರೆ ಸುಮ್ಮನಿರಬಾರ್ದ, ವಯಸ್ಸಾಗಿದ್ದರೂ ಏನಾದರೂ ಮಾಡಿ ಎಲ್ಲರಿಗು ತೊಂದರೆ ಕೊಡುತತೀಯ ಅನ್ನುತ್ತಾರೆ. ನನ್ನ ಇರುವಿಕೆಗೆ ಗೌರವವೇ ಇಲ್ಲವೆನಿಸುತ್ತದೆ. ನನ್ನವರೇ ಹೀಗಿರುವಾಗ ಇನ್ನು ಹೊರಗಿನಿಂದ ಬಂದ ಹೆಣ್ಣು, ಕುಮುದ ಹೇಗೆ ನನ್ನ ಅರ್ಥಮಾಡಿಕೊಂಡಾಳು!
ಪುರುಷೋತ್ತಮ ತನ್ನ ಹೆಂಡತಿಯ ಮುಖವನ್ನು ನೋಡುತ್ತಾ "ವಯಸ್ಸಾಯಿತು ಇನ್ನು ಇವಳಿಗೆ ಕೋಪ ಕಡಿಮೆ ಆಗುತ್ತಿಲ್ಲ, ಸೊಸೆ ಬಂದಮೇಲಾದರೂ ಆರಾಮಾಗಿ ಇರುತ್ತಾಳೆಂದರೆ, ಹಾಗೆ ಕಾಣುತ್ತಿಲ್ಲ. ಪಾಪ ಕುಮುದ ಎಲ್ಲ ಕೆಲಸ ಮಾಡಿ, ಕಾಫಿ ತಿಂಡಿ ಎಲ್ಲ ನೋಡಿಕೊಂಡರು ಏನಾದರೊಂದು ವಿಷಯ ತೆಗೆದು ಕಿರಿ ಕಿರಿ ಮಾಡುವ ಹೆಂಗಸು ಈ ಶಾರದಾ. ಇವಳನ್ನು ಸಮಾಧಾನ ಮಾಡುವ ತಾಕತ್ತು ಯಾರಿಗೆ ಇಲ್ಲ. ಇಷ್ಟು ವರ್ಷ ಮನೆಯಲ್ಲಿ ಎಲ್ಲ ಮಾಡಿದ್ದಾಳೆ, ಈಗಲಾದರೂ ಸಂತೋಷದಿಂದ ಇರಬಾದರೆ! ಕಾರ್ತಿಕ್ ಪಾಪ ಅಮ್ಮನನ್ನು, ಹೆಂಡತಿಯನ್ನು ಇಬ್ಬರನ್ನು ಖುಷಿಯಾಗಿಟ್ಟುಕೊಳ್ಳಲು ಹರಸಾಹಸ ಮಾಡುತ್ತಿದ್ದಾನೆ. ದೇವರೇ ಕಾಪಾಡಬೇಕು ಆ ಹುಡುಗನನ್ನು.
ಕಾರ್ತಿಕ್ ಆಫೀಸ್ ಗೆ ತಯಾರಾಗಿ ಬಂದು "ಕುಮುದ, ತಿಂಡಿ ರೆಡಿ ಆಯ್ತಾ? ಸಂಜೆ ಡಿನ್ನರ್ ಗೆ ಹೊರಗೆ ಹೋಗೋಣ ಎಲ್ಲರು. ನಮ್ಮ ರೆಗ್ಯುಲರ್ ರೆಸ್ಟೋರೆಂಟ್ನಲ್ಲಿ ಟೇಬಲ್ ಬುಕ್ ಮಾಡಿಬಿಡು". ಎಂದು ಹೇಳಿತ್ತಾ ಅಮ್ಮನ ಕಡೆ ತಿರುಗಿ ಸಂಜೆ ಬೇಗ ಬರ್ತೀನಿ ಅಮ್ಮ, ರೆಡಿ ಆಗಿರಿ ಎಲ್ಲರು ಹೊರಗೆ ಊಟಕ್ಕೆ ಹೋಗೋಣ" ಎಂದ. ಶಾರದಾ ಅದಕ್ಕೆ "ನೀವಿಬ್ಬರೇ ಹೋಗಿ, ನಮಗೇನು ಅಲ್ಲಿ ಕೆಲಸ. ನಾನು ಮನೆಯಲ್ಲೇ ಏನಾದರು ಮಾಡಿಕೊಳ್ಳುತ್ತೇನೆ. ನಿಮ್ಮಪ್ಪಂಗೆ ಕೊಲೆಸ್ಟರಾಲ್ ಇದೆ, ಹೊರಗಡೆ ತಿಂದರೆ ಆಗೋಲ್ಲ." ಎಂದು ಹೇಳುವಾಗ ಸೊಸೆ ತನ್ನನ್ನು ಕರೆಯಲಿ ಅನ್ನುವ ಮನಸ್ಸು.
ತನ್ನ ಅತ್ತೆಗೆ ತಮ್ಮ ಜೊತೆ ಬರುವ ಮನಸ್ಸಿಲ್ಲವೆಂದು ಕುಮುದ ಅಂದುಕೊಳ್ಳುತಿರುವಾಗಲೇ ಮಾವ "ಒಂದು ದಿನ ತಿಂದರೆ ಏನಾಗೋಲ್ಲ, ಸುಮ್ಮನೆ ಮನೆಯಲಿ ಕಿರಿಕಿರಿ ಶುರುಮಾಡಬೇಡ, ನಿನ್ನದು ಯಾವಾಗಲೂ ಇದ್ದದ್ದೇ. ಇವತ್ತು ಅವರ ಆನಿವರ್ಸರಿ. ಯಾಕೆ ಅವರ ಮನಸ್ಸಿಗೆ ಬೇಜಾರು ಮಾಡುತ್ತೀಯಾ" ಎಂದರು. ಶಾರದಾಗೆ ನಾನೇನು ತಪ್ಪು ಮಾತಾಡಿದ್ದೇನೆ ಅನ್ನೋ ಭಾವನೆ.
ಕಾರ್ತಿಕ್ ಕೊನೆಗೆ "ಅಮ್ಮ, ಅಪ್ಪಂಗೆ ಸರಿಹೋಗು ಊಟನೇ ಆರ್ಡರ್ ಮಾಡಿದ್ರಾಯ್ತು. ನೀನು ಖುಷಿಯಾಗಿ ಬಾಮ್ಮ. ನಂಗೊಳ್ಳೇ ಹೆಂಡ್ತಿನ ಹುಡುಕಿ ಕೊಟ್ಟಿದೀಯ. ಮೂರು ವರ್ಷ ಆಯಿತು, ಇನ್ನು ಯಾಕೆ ಈ ಮನಸ್ತಾಪ" ಎಂದಾಗ ಏನೋ ಒಂಥರಾ ಹಿತವಾದ ಭಾವನೆ ಎಲ್ಲರಿಗು.
-ಗಿರಿಜಾ ಜ್ಞಾನಸುಂದರ್
Good thought's .Great patience to imagine the things, Full mulgobetdera.
Keep it up
ಓದುವಾಗ ಭಾವನೆಗಳ ಪರಿಚಯವಾಗಬೇಕೆಂಬುದು ನನ್ನ ಉದ್ದೇಶ.ಅದರಲ್ಲಿ ಸಫಲವಾದಾಗ ಸಂತೋಷ.
Nice one.
Thank you Vidya