ಆಮೆಗತಿಯ ನ್ಯಾಯಪುರಾಣ: ಅಖಿಲೇಶ್ ಚಿಪ್ಪಳಿ ಅಂಕಣ

ಭಾರತದ ಪ್ರಜಾಪ್ರಭುತ್ವ ಸಂವಿಧಾನ ವಿಶೇಷವಾದದು. ಇಲ್ಲಿನ ಕಾನೂನಿನಲ್ಲಿ ಸಮಾಜದ ಕಟ್ಟಕಡೆ ವ್ಯಕ್ತಿಗೂ ನ್ಯಾಯ ಸಿಗಬೇಕೆಂಬ ಇಚ್ಚೆಯಿದೆ. ದೌರ್ಜನ್ಯವನ್ನು ತಡೆಯಲು, ಅಶಕ್ತರಿಗೆ, ಮಹಿಳೆಯರಿಗೆ ಹೀಗೆ ಎಲ್ಲರಿಗೂ ಸಮಾನ ನ್ಯಾಯ ಸಿಗುವಂತೆ ಆಗಬೇಕು ಎನ್ನುವ ಆಶಯವಿದೆ. ನ್ಯಾಯ ಕೊಡಲು ನ್ಯಾಯದೇವರಿದ್ದಾರೆ. ಪರ-ವಿರೋಧ ವಾದಿಸಲು ನ್ಯಾಯವಾದಿಗಳಿದ್ದಾರೆ. ಆದರೂ ನ್ಯಾಯ ಸಿಗುವುದು ವಿಳಂಬವಾಗುತ್ತಿದೆ ಎಂಬ ಗಂಭೀರ ಆರೋಪವಿದೆ. ಚಿಕ್ಕ-ಪುಟ್ಟ ವ್ಯಾಜ್ಯಗಳನ್ನು ಪರಿಹರಿಸಲು ತ್ವರಿತ ನ್ಯಾಯಾಲಯಗಳಿವೆ. ಒಂದೊಂದು ಘಟನೆಗಳಿಗೆ ಸಂಬಂಧಿಸಿದಂತೆ ವಾದಿಸಲು ನುರಿತ ವಕೀಲರ ಪಡೆಯಿದೆ. ಹಿಡಿದ ಪೋಲಿಸರನ್ನೇ ಅಪರಾಧಿ ಸ್ಥಾನದಲ್ಲಿ ನಿಲ್ಲಿಸಬಲ್ಲ ನಿಷ್ಣಾತರು ನಮ್ಮಲ್ಲಿದ್ದಾರೆ.

೨೦೦೧ರಲ್ಲಿ ಇರಬೇಕು. ಒಂದು ಗುರುವಾರ ಬೆಳಗ್ಗೆ ೧೦ ಗಂಟೆಯಿರಬೇಕು. ಎರಡು ಜನ ಹಾವಾಡಿಗರು, ಹಾವಾಡಿಸುತ್ತಾ ಮನೆಗೆ ಬಂದರು. ಹಳ್ಳಿಗಳಲ್ಲಿ ಈಗ ಬಿಕ್ಷೆ ಬೇಡುವ ವೃತ್ತಿ ಕಡಿಮೆಯಾಗಿದೆ ಅಥವಾ ಇಲ್ಲವೇ ಇಲ್ಲ ಎನ್ನುವಷ್ಟಿದೆ. ಆ ಹಾವಾಡಿಗರು ತಾವು ಹಿಡಿದ ಹಾವನ್ನು ಬಿದಿರಿನ ಬುಟ್ಟಿಯಿಂದ ಹೊರಗೆ ತೆಗೆದು, ಪುಂಗಿಯೂದಿ, ಒಂದಷ್ಟು ಅಕ್ಕಿಯನ್ನು ಪಡೆದು ಹೋಗುತ್ತಾರೆ. ಮನೆಯಲ್ಲಿ ಹಾವಿನ ಕಾಟವಿದ್ದರೆ ಒಂದೈವತ್ತು ಕೊಟ್ಟರೆ ಹಾವನ್ನು ಹಿಡಿದುಕೊಂಡು ಹೋಗುತ್ತಾರೆ. ಹಾವಾಡಿಗರು ಬಂದಾಗ ಮತ್ಯಾರು ಮನೆಯಲ್ಲಿರಲಿಲ್ಲ. ಹಾಂವು ನೋಡ್ತಿರಾ ಸ್ವಾಮಿ? ಎಂದರು. ತೋರಿಸು ಎಂದೆ, ಮಾಮೂಲಿ ಮುದಿ ನಾಗರ ಹಾವು, ಅದಕ್ಕೆ ಹೆಡೆ ಬಿಚ್ಚಲು ಆಗಲಿಲ್ಲ. ನೋಡಿ ಇದರ ಹೆಡೆ ಮೇಲೆ ಮುಕ್ಕಾಲು ಘಳಿಗೆಯಿದೆ ಎಂದ. ಮುಕ್ಕಾಲು ಘಳಿಗೆಯೆಂದರೆ, ಆಕಸ್ಮಿಕವಾಗಿ ಆ ಹಾವು ವ್ಯಕ್ತಿಗೆ ಕಚ್ಚಿದರೆ, ಮುಕ್ಕಾಲು ತಾಸಿನಲ್ಲಿ ಕಚ್ಚಿಸಿಕೊಂಡ ವ್ಯಕ್ತಿ ಸತ್ತು ಹೋಗುತ್ತಾನೆ ಎಂದು ಅರ್ಥೈಸಿಕೊಳ್ಳಬೇಕು. ಯಥಾಪ್ರಕಾರ ಡಬ್ಬದಲ್ಲಿಯ ಅಕ್ಕಿಯನ್ನು ತಂದು ಚೀಲಕ್ಕೆ ಹಾಕುವಾಗ ಅಚಾನಕ್ ಆಗಿ ೫೦೦ ರೂಪಾಯಿಗಳ ಒಂದಷ್ಟು ನೋಟುಗಳನ್ನು ಅವರ ಚೀಲದಲ್ಲಿ ಕಂಡೆ. ೫೦೦ರ ನೋಟು ನನ್ನ ಹತ್ತಿರವೇ ಇರಲಿಲ್ಲ. ಹಾವಾಡಿಗರ ಹತ್ತಿರ ಹೇಗೆ ಬಂತು? ಕೋಟಿ ರೂಪಾಯಿಗಳ ಪ್ರಶ್ನೆ? ದಿನವಿಡೀ ತಲೆ ಕೆರೆದುಕೊಂಡಿದ್ದೇ ಬಂತು. ಉತ್ತರ ಮಾತ್ರ ಸಿಗಲಿಲ್ಲ. ತಪ್ಪೋ ಸರಿಯೋ ಗೊತ್ತಿಲ್ಲ. ಈ ರಹಸ್ಯವನ್ನು ಭೇದಿಸಬೇಕೆಂಬ ಪ್ರಬಲ ಇಚ್ಚೆಯುಂಟಾಯಿತು. ಪ್ರತಿ ಗುರುವಾರ ಬೆಳಗ್ಗೆ ೧೦ ಗಂಟೆಗೆ ಅದೇ ಹಾವಾಡಿಗರು ಬಿಕ್ಷೆ ಬೇಡಲು ಬರುತ್ತಾರೆ ಎಂಬುದು ಖಚಿತವಾಗಿತ್ತು. 

ಮುಂದಿನ ಗುರುವಾರ ೧೦ ಗಂಟೆಗೆ ನನ್ನೆಲ್ಲಾ ಕೆಲಸಗಳನ್ನು ಬಿಟ್ಟು ಇವರಿಗಾಗಿ ಕಾಯುತ್ತಾ ಕುಳಿತೆ. ೧೦ ಗಂಟೆಗೆ ಬಂದರು. ಈ ದಿನ ಅವರ ಹತ್ತಿರ ಸ್ವಲ್ಪ ಹೆಚ್ಚೇ ಮಾತನಾಡಿದೆ. ಹಾವು ಕಚ್ಚಿದರೆ ಏನು ಔಷಧ ಕೊಡುತ್ತೀರಿ ಎಂಬ ವಿವರಗಳನ್ನು ಪಡೆದುಕೊಂಡೆ. ಅದೂ ಇದೂ ಮಾತನಾಡುತ್ತಾ, ಈ ಹಾವು ಸತ್ತ ಮೇಲೆ ಏನು ಮಾಡುತ್ತೀರಿ ಕೇಳಿದೆ. ಇಲ್ಲ ಸ್ವಾಮಿ ಹಾವೆಂದರೆ ದೇವರು, ಸಂಸ್ಕಾರ ಮಾಡುತ್ತೀವಿ. ಸುಡುವಾಗ ದುಡ್ಡನ್ನೂ ಹಾಕುತ್ತೀವಿ ಎಂದರು. ನನ್ನ ಸಮಸ್ಯೆ ಇನ್ನೂ ಜಟಿಲವಾಯಿತು. ಅಲ್ರೋ ಮತ್ತೆ ಹಾವುಗೊಲ್ಲರು ಹಾವಿನ ಚರ್ಮ ಮಾರ್‍ತಾರೆ ಅಂತ ಜನ ಹೇಳ್ತಾರಲ್ಲೋ ಎಂದೆ. ಬಿಡಿ ಸಾಮಿ, ಜನ ಸುಳ್ಳು ಹೇಳ್ತಾರೆ. ದೇವ್ರಾಣೆ ನಾವು ಮಾರೋದಿಲ್ಲ ಎಂದ. ಅಲ್ಲಾ ಮಾರಾಯ ಹಾವಿನ ಚರ್ಮ ಬೇಕಾಗಿತ್ತು ಮಾರಾಯ ಒಂದು ಬೆಲ್ಟ್ ಮಾಡಿಸಿಕೊಳ್ಳೋಕೆ ಎಂದೆ. ಬಿಡಿ ಸ್ವಾಮಿ ನೀವು ಎಂದ.

ಸಮಸ್ಯೆ ಬಗೆ ಹರಿಯಲಿಲ್ಲ. ಪರಿಸರ ಮತ್ತು ವನ್ಯಜೀವಿಗಳ ರಕ್ಷಣೆಗಾಗಿ ಕೆಲಸ ಮಾಡುವ ನಮ್ಮಂತವರಿಗೆ ಕೆಲವು ಜನ ಖಬರಿಗಳಿರುತ್ತಾರೆ. ಅವರೇ ನಮಗೆ ಮುಂದೆ ನಡೆಯಬಹುದಾದ ಘಟನೆಗಳ ಬಗ್ಗೆ ಮುನ್ಸೂಚನೆ ನೀಡುತ್ತಾರೆ. ಇಂತವರು ಇಂತಹ ದಿನ ಇಲ್ಲಿ ಮರ ಕಡಿಯುತ್ತಾರೆ ಎಂದು ತಿಳಿಸುತ್ತಾರೆ. ಅಂತಹ ಖಬರಿಯೊಬ್ಬನನ್ನು ಇವರ ಹಿಂದೆ ಬಿಟ್ಟೆ. ನಾಲ್ಕೇ ದಿನದಲ್ಲಿ ಖಬರಿ ತಂದ ಮಾಹಿತಿ ಅಚ್ಚರಿ ಹುಟ್ಟಿಸುವಂತಿತ್ತು. ಸದಾ ಅಲೆಮಾರಿ ಮನ:ಸ್ಥಿತಿಯ ಈ ಹಾವಾಡಿಗರು, ಸಾಗರದಿಂದ ೨೦ ಕಿ.ಲೋ ಮೀಟರ್ ದೂರದಲ್ಲಿ ಸ್ವಂತ ಮನೆ ಮಾಡಿಕೊಂಡಿದ್ದರು. ಅದೂ ಆರ್.ಸಿ.ಸಿ. ಮನೆಗಳು. ರಹಸ್ಯವನ್ನು ಬೇಧಿಸಲೇ ಬೇಕೆಂದು ಬಲವಾಗಿ ಅನಿಸಿದ್ದೇ ಈಗ. ಮತ್ತೆ ಮರುವಾರ ಅವರಿಗಾಗಿ ಕಾಯುತ್ತಾ ಕುಳಿತೆ. ಮತ್ತೆ ಬಂದರು. ಕಳೆದ ೨ ವಾರದಿಂದ ನನ್ನ ಅವರ ಮಧ್ಯ ಒಂತರಾ ವಿಶ್ವಾಸ ಮೂಡಿತ್ತು. ಸರಿ ಉಭಯಕುಶಲೋಪರಿ ಮಾತನಾಡಿದೆವು, ಅದೇ ಮುದಿ ಹಾವನ್ನು ಎಂತಾ ನೋಡೋದು ಮಾರಾಯ ತೋರ್‍ಸದು ಬ್ಯಾಡ ಬಿಡು ಎಂದೆ. ಇಲ್ಲಾ ಸಾಮಿ ನಿನ್ನೆ ಹೆಗ್ಗೋಡಿನಲ್ಲಿ ಹಿಡಿದಿದ್ದು, ಬಾರಿ ಜೋರಿದೆ. ನೋಡಿ ಬರೀ ಅರ್ಧ ಘಳಿಗೆ ಎಂದು ಮುಚ್ಚಲ ತೆಗೆದ. ಸಿಟ್ಟಿನಿಂದ ಬುಸ್ ಗುಟ್ಟಿದ ಹಾವು ಅವನ ಕೈಗೆ ಜೋರಾಗಿ ಬಡಿಯಿತು. ನಿಜವಾಗಲೂ ಹಾವು ಜೋರಾಗಿತ್ತು. ಮುದಿ ಹಾವನ್ನು ಏನು ಮಾಡಿದೆಯಪ್ಪಾ ಕೇಳಿದರೆ, ಇಲ್ಲಾ ಮೊನ್ನೆ ಸತ್ತೋತು ಎಂದ. ರಾತ್ರಿ ಕೋಳಿಮೊಟ್ಟೆ ತಿನ್ನಿಸಿ ಮಲಗಿಸಿದ್ದೆವು. ಬೆಳಗಾಗುವಷ್ಟರಲ್ಲಿ ಸತ್ತು ಹೋಗಿತ್ತು. ವಯಸ್ಸಾಗಿತ್ತು ಬಿಡಿ ಎಂದ. ಮತ್ತೆ ನನ್ನ ವರಾತ ತೆಗೆದೆ. ನೋಡ್ರಪಾ ನನಗೆ ಹಾವಿನ ಚರ್ಮ ಬೇಕಾಗಿತ್ತು. ಹೊಸಾದು ಬೇಡ. ಯಾಕೇಂದ್ರೆ ಚರ್ಮ ತಗೋಂಡು ಹೋಗುವ ನನ್ನ ಸ್ನೇಹಿತ ದುಬೈನಲ್ಲಿರುತ್ತಾನೆ. ಹಸೀದು ತಂದು ಕೊಟ್ಟು, ಅದೂ ವಾಸನೆ-ಗೀಸನೆ ಬಂದ್ರೆ ಪೋಲಿಸ್ರು ಅವನ್ನ ಹಿಡಿದು ಜೈಲಿಗೆ ಹಾಕ್ತಾರೆ. ಹಾಗಾಗಿ ಹಳೇದು ಅಂದರೆ ವರ್ಷದ ಹಿಂದಿದ್ದು, ವಾಸನೆ ಬರದೆ ಇರೋವಂತ ಚರ್ಮ ಇದ್ರೆ ಬೇಕಿತ್ತು. ಅದಕ್ಕೆ ದುಡ್ಡು ಕೊಡುವ ಎಂದೆ. ಹಂಗಾದ್ರೆ ಒಂದು ಕೆಲಸ ಮಾಡಿ ಹಳೇದು ೨ ಚರ್ಮ ಇದೆ ೧೦೦೦ ರೂಪಾಯಿಗೆ ಒಂದು ಚರ್ಮ ಅಂದರೆ ೨೦೦೦ ಕೊಡಿ ಮುಂದಿನ ವಾರ ತಂದು ಕೊಡ್ತೇವೆ ಎಂದರು. ಅಡ್ವಾನ್ಸಾಗಿ ೨೦೦ ಕೇಳಿದರು. ನನ್ನ ಮೇಲೆ ಅವರಿಗೆ ನಂಬುಗೆ ಹುಟ್ಟಬೇಕು ಎಂದರೆ ೨೦೦ ರೂಪಾಯಿ ಪೀಕಲೇ ಬೇಕು. ಅನಿವಾರ್ಯ. ಇದ್ದಿದ್ದೇ ಇನ್ನೂರು, ಅದನ್ನೇ ಕೊಟ್ಟೆ.

ಇಂತಹ ಸ್ಥಿತಿ ಯಾರಿಗೂ ಬರಬಾರದು. ನಾನಾಡುತ್ತಿರುವುದು ದೊಡ್ಡ ಜೂಜು, ಇವರ ರಹಸ್ಯ ಭೇದಿಸುವ ನನ್ನ ಹುಚ್ಚಿಗೆ ಮತ್ತೆ ಹಾವು ಬಲಿಯಾದರೆ, ಅದಕ್ಕೆ ನಾನೇ ನೇರ ಹೊಣೆಯಾಗುತ್ತೇನೆ. ಸಂರಕ್ಷಣೆ ದೃಷ್ಟಿಯಿಂದ ಇದನ್ನು ಮಾಡುವುದು ಅನಿವಾರ್ಯ. ಈ ಬಗ್ಗೆ ಆಗ ರೇಂಜರ್ ಆಗಿದ್ದ ಶ್ರೀ ಶಂಕರ್‌ರವರ ಹತ್ತಿರ ಚರ್ಚೆ ಮಾಡಿದ್ದೆ. ಅಪರಾಧಿಗಳನ್ನು ರೂಪಿಸುವ ಕೆಲಸ ನಮ್ಮದಲ್ಲ. ಬರೀ ಬಾಯಿ ಮಾತಿನಿಂದ ಅವರನ್ನು ಪರಿವರ್ತಿಸಲು ಸಾಧ್ಯವಿಲ್ಲ. ಮಾಲು ಸಮೇತ ಹಿಡಿದು, ಶಿಕ್ಷೆಯಾದಲ್ಲಿ, ಮುಂದಿನ ದಿನಗಳಲ್ಲಿ ಚರ್ಮ ಮಾರುವ ದಂಧೆಗೆ ಕಡಿವಾಣ ಹಾಕಬಹುದು ಎಂದು ಅಭಿಪ್ರಾಯಪಟ್ಟರು. ಮುಂದಿನ ಗುರುವಾರ ಮತ್ತೆ ಅದೇ ಹಾವಾಡಿಗರು ಬಂದರು. ಮೊದಲೇ ನಿಗದಿ ಪಡಿಸಿದಂತೆ, ಮನೆಯ ಸುತ್ತ ಸುಮಾರು ೧೨ ಜನ ಅರಣ್ಯ ಇಲಾಖೆಯ ಸಿಬ್ಬಂದಿ ಅಡಗಿ ಕುಳಿತಿದ್ದರು. ೧೦ ಗಂಟೆಗೆ ೨ ಹಾವಿನ ಚರ್ಮ ಸಮೇತ ಹಾವಾಡಿಗರು ಬಂದರು. ಸುಲಭವಾಗಿ ಬಲೆಗೆ ಬಿದ್ದರು. ಮಾಲು ಸಮೇತ ಸಿಕ್ಕ ಅವರನ್ನು ಬಂಧಿಸಿ, ಕೋರ್ಟ್‌ಗೆ ಹಾಜರುಪಡಿಸಿದರು. ಎಫ್.ಐ.ಆರ್. ಹಾಕಿದರು. ಮೊಬೈಲ್ ಅಷ್ಟಾಗಿ ಜನಪ್ರಿಯವಾಗಿರದಿದ್ದ ಆ ಕಾಲದಲ್ಲೂ ಸುದ್ದಿ ತಿಳಿದ ಹಾವಾಡಿಗರ ಸಂಬಂಧಿಗಳು, ಸ್ನೇಹಿತರು ಕೋರ್ಟ್‌ನಲ್ಲಿ ಜಮಾಯಿಸಿದರು. ಸಾಕ್ಷಿ ಪಟ್ಟಿಯಲ್ಲಿ ನನ್ನ ಹೆಸರನ್ನು ನಮೂದಿಸಿದರು. ಆಮೇಲೆ ಹಣದ ಬಾಂಡ್ ಮತ್ತು ಇತರೆ ಪ್ರಕ್ರಿಯೆಗಳನ್ನು ಮುಗಿಸಿ ಆರೋಪಿಗಳು ಜಾಮೀನು ಪಡೆದು ಹೊರಬಂದರು. ಕೋರ್ಟಿನಲ್ಲಿ ಕೇಸು ೪ ವರ್ಷ ನಡೆಯಿತು. ಸಾಕ್ಷಿ ಹೇಳಲು ಹೋದವನಿಗೆ, ಹಾವಾಡಿಗರ ಪರ ವಕೀಲ ಕೇಸಿಗೆ ಸಂಬಂಧವಿಲ್ಲದ ಅನೇಕ ಪ್ರಶ್ನೆಗಳನ್ನು ಕೇಳಿದ. ನೀವು ಬ್ರಾಹ್ಮಣರಾಗಿದ್ದರಿಂದ, ಕೆಳವರ್ಗದ ಹಾವುಗೊಲ್ಲರ ಮೇಲೆ ಸುಳ್ಳು ಕೇಸು ಹಾಕಿದ್ದೀರಿ ಇತ್ಯಾದಿ ಅಸಂಬಧ್ದ ಪ್ರಶ್ನೆಗಳನ್ನು ಕೇಳಿ ರೇಜಿಗೆ ಹುಟ್ಟಿಸಿದ. ವಕೀಲ ಕೇಳಿದ ಅಸಂಭದ್ದ ಪ್ರಶ್ನೆಗಳನ್ನು ಅಲ್ಲಗಳೆದು, ಕೇಸಿಗೆ ಸಂಬಂಧಿಸಿದ ವಿಚಾರದಲ್ಲಿ ಸತ್ಯವನ್ನು ನುಡಿದು ಈಚೆ ಬರುವಷ್ಟರಲ್ಲಿ ಕೋರ್ಟಿನ ಸಹವಾಸ ಕಷ್ಟ ಎನಿಸಿತ್ತು. ಅಂತಿಮವಾಗಿ ಆರೋಪಿಗಳಿಗೆ ಮೂರು ವರ್ಷ ಜೈಲು ಶಿಕ್ಷೆ ಘೋಷಣೆಯಾಯಿತು ಎಂದು ಆಗಿನ ಎ.ಪಿ.ಪಿ. ತಿಳಿಸಿದರು. ಅವರು ಮತ್ತೆ ಮೇಲಿನ ಕೋರ್ಟ್‌ಗೆ ಅಪೀಲು ಹೋಗುತ್ತಾರೆ. ಅಲ್ಲೂ ವಾದ ನಡೆಯುತ್ತದೆ. ಅಲ್ಲಿ ನ್ಯಾಯಾಲಯ ಅವರನ್ನು ಬಿಡುಗಡೆ ಮಾಡುತ್ತದೋ ಅಥವಾ ಶಿಕ್ಷೆಯನ್ನು ಎತ್ತಿ ಹಿಡಿಯುತ್ತದೆಯೋ ಗೊತ್ತಿಲ್ಲ.

ಹಾವಿನ ಚರ್ಮದ ಮೊಕದ್ದಮೆ ೪ ವರ್ಷಗಳಲ್ಲಿ ಬಗೆಹರಿಯಿತೆಂದರೆ ಅತ್ಯಂತ ತ್ವರಿತವಾಗಿ ಬಗೆ ಹರಿಯಿತು ಎಂದುಕೊಳ್ಳಬಹುದು. ಮಧ್ಯಪ್ರದೇಶದಲ್ಲಿ ವನ್ಯಜೀವಿಗಳಿಗೆ ಸಂಬಂಧಿಸಿದ ಸುಮಾರು ೧೬೦ ಮೊಕದ್ದಮೆಗಳು ಕಳೆದ ೪೦ ವರ್ಷಗಳಿಂದ ಕೋರ್ಟ್‌ನಲ್ಲೇ ಕೊಳೆಯುತ್ತಿವೆ. ೧೭ ಮೇ ೧೯೭೫ರಲ್ಲಿ ಖಾನಾ ರಾಷ್ಟ್ರೀಯ ಉದ್ಯಾನವನದಲ್ಲಿ ಹಂತಕರಿಗೆ ಬಲಿಯಾದ ಹುಲಿ ಮೊಕದ್ದಮೆ ಇನ್ನೂ ತೀರ್ಮಾನದ ಹಂತಕ್ಕೆ ಬಂದಿಲ್ಲ. ೨೫ ಸೆಪ್ಟೆಂಬರ್ ೧೯೭೯ರಲ್ಲಿ ಬಾಲಗಡ್ ಜಿಲ್ಲೆಯಲ್ಲಿ ಹಂತಕರಿಗೆ ಬಲಿಯಾದ ಹುಲಿ ಮೊಕದ್ದಮೆ ಇನ್ನೂ ಪ್ರಾಥಮಿಕ ತನಿಖೆಯ ಹಂತದಲ್ಲೇ ಇದೆ. ಇದಕ್ಕೂ ಮುಂಚಿತವಾಗಿ ಅಂದರೆ ೯ ಜುಲೈ ೧೯೭೩ ಶಿವಪುರಿ ಜಿಲ್ಲೆಯ ಮತ್ತು ೧೪ ಫೆಬ್ರುವರಿ ೧೯೭೫ರಲ್ಲಿ ಚಿಂದ್ವಾರದಲ್ಲಿ ಬಲಿಯಾದ ಚಿರತೆಗಳಿಗೆ ಸಂಬಂಧಿಸಿದ ಮೊಕದ್ದಮೆ ಜಿಲ್ಲಾ ನ್ಯಾಯಾಲಯಗಳಲ್ಲಿ ಇನ್ನೂ ಗಿರಕಿ ಹೊಡೆಯುತ್ತಲೇ ಇದೆ. ಖಾನಾ, ಪೆಂಚ್, ಪನ್ನ ಮತ್ತು ಬಂದ್ವಾಗಡ್ ರಾಷ್ಟ್ರೀಯ ಉದ್ಯಾನವನಗಳಲ್ಲಿಯ ೧೭ ಹುಲಿ ಹತ್ಯೆಯ ಮೊಕದ್ದಮೆಗಳು ಹಾಲಿ ಯಾವ ತೀರ್ಮಾನಕ್ಕೂ ಸಿಗದೆ ನ್ಯಾಯಾಲಯದ ಕಡತಗಳಲ್ಲೇ ಬಾಕಿಯಿದೆ. ಈ ಎಲ್ಲಾ ವಿವರಗಳನ್ನು ಮಾಹಿತಿ ಹಕ್ಕು ಕಾರ್ಯಕರ್ತರಾದ ಅಜಯ್ ದುಬೆ ಎಂಬುವವರು ಪಡೆದು ಪತ್ರಿಕೆಗಳಿಗೆ ನೀಡಿದ್ದನ್ನು ಟೈಮ್ಸ್ ಆಫ್ ಇಂಡಿಯಾ ಪತ್ರಿಕೆ ಪ್ರಕಟಿಸಿದೆ.

ನ್ಯಾಯಾಲಯಗಳ ಈ ಆಮೆಗತಿಯನ್ನು ನೋಡಿದರೆ ಮೂಕ ಪ್ರಾಣಿಗಳಿಗೆ ಈ ದೇಶದಲ್ಲಿ ನ್ಯಾಯ ಸಿಗುವುದೇ ಇಲ್ಲ ಎಂಬ ಭಾವನೆ ಬರುವುದು ಸುಳ್ಳಲ್ಲ. ನಾನಾ ರೀತಿಯ ಸುಳ್ಳುಗಳನ್ನು ಹೆಣೆದು ಪ್ರತಿಬಾರಿ ಆರೋಪಿ ಪರ ವಕೀಲರು ದಿನಾಂಕ ಪಡೆಯಲು ಸಮರ್ಥರಾಗುತ್ತಾರೆ. ಭೋಪಾರ್‍ಸ್‌ನಂತಹ ನೂರಾರು ಕೋಟಿ ಹಗರಣಗಳ ರೂವಾರಿಗಳು ಸತ್ತೇ ಹೋದರು. ಕೇಸು ಅಲ್ಲಿಗೆ ಕ್ಲೋಸ್ ಆದ ಹಾಗೆ. ಆರೋಪಿ ಇಲ್ಲದ ಕೇಸು ಯಾರಿಗೆ ಬೇಕು. ಹೀಗೆ ವನ್ಯಜೀವಿ ಹಂತಕರನ್ನು ಪರೋಕ್ಷವಾಗಿ ರಕ್ಷಣೆ ಮಾಡಲಾಗುತ್ತದೆ. ಆರೋಪಿಗಳೂ ನ್ಯಾಯಾಲಯದ ಈ ನಿಧಾನಗತಿಯ ಪ್ರಯೋಜನ ಪಡೆದು ಇನ್ನಷ್ಟು ರಾಜರೋಷವಾಗಿ ತಮ್ಮ ದುಷ್ಕ್ರತ್ಯಗಳನ್ನು ಮುಂದುವರೆಸುತ್ತಾರೆ. ೧೯೭೩ರಲ್ಲಿ ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ ಅಧಿಕಾರಿ ಇಷ್ಟೊತ್ತಿಗೆ ಸೇವೆಯಿಂದ ನಿವೃತ್ತನಾಗಿರುತ್ತಾನೆ ಅಥವಾ ಜೀವನದಿಂದಲೇ ನಿವೃತ್ತನಾಗಿರಬಹುದು. ಇನ್ನು ಆ ಮೊಕದ್ದಮೆಗೆ ನ್ಯಾಯ ಸಿಗುವ ಪರಿಯೆಂತು?

೨೦೧೦ರ ಗಣತಿಯಂತೆ ದೇಶದಲ್ಲಿ ಒಟ್ಟು ೧೭೦೬ ಹುಲಿಗಳಿವೆ. ೧೯೯೮ರಲ್ಲಿ ೧೪, ೧೯೯೯ರಲ್ಲಿ ೩೮, ೨೦೦೦ರಲ್ಲಿ ೩೯ ಹುಲಿಗಳನ್ನು ಕೊಲ್ಲಲಾಗಿದೆ ಎಂದು ರಾಷ್ಟ್ರೀಯ ಹುಲಿ ಸಂರಕ್ಷಣಾ ಸಂಸ್ಥೆಯೇ ವರದಿ ಮಾಡಿದೆ. ೨೦೧೧ರಲ್ಲಿ ೫೬ ಹುಲಿಗಳನ್ನು ಹತ್ಯೆ ಮಾಡಲಾಗಿದೆಯೆಂದರೆ ಒಟ್ಟು ಹುಲಿಗಳ ಸಂಖ್ಯೆ ೧೭೦೬ ರಲ್ಲಿ ೫೬ ಹುಲಿಗಳನ್ನು ಕಳೆಯಬೇಕಾಗುತ್ತದೆ. ಇದು ಬರೀ ಮಧ್ಯಪ್ರದೇಶದ ಕತೆ ಮಾತ್ರ. ದೇಶದ ಇನ್ನಿತರ ನ್ಯಾಯಾಲಯಗಳಲ್ಲಿ ಈ ತರಹದ ಅದೆಷ್ಟು ಲಕ್ಷ ವನ್ಯಜೀವಿಗಳಿಗೆ ಸಂಬಂಧಿಸಿದ ಮೊಕದ್ದಮೆಗಳು ಬಾಕಿಯಿವೆ ಎಂಬ ಲೆಕ್ಕ ಯಾರಲ್ಲೂ ಇಲ್ಲ. ಅರಣ್ಯ ಮತ್ತು ವನ್ಯಜೀವಿಗಳ ರಕ್ಷಣೆಗಾಗಿ ಪ್ರತ್ಯೇಕ ನ್ಯಾಯಾಲಯಗಳನ್ನು ಸ್ಥಾಪಿಸುವುದೇ ಮೊಕದ್ದಮೆಗಳನ್ನು ಶೀಘ್ರವಾಗಿ ಪರಿಹರಿಸಲು ಇರುವ ಏಕೈಕ ಮಾರ್ಗ. ಬರೀ ಮಾನವ ಹಕ್ಕುಗಳಿಗೆ ಮಾತ್ರ ಮಾನ್ಯ ಮಾಡುವ ಕಾನೂನು ರೂಪಿಸುವ ಸಂಸದರು ಈ ಬಗ್ಗೆ ತುರ್ತಾಗಿ ಗಮನಹರಿಸುವುದು ಸೂಕ್ತ. ಲೋಕಸಭಾ ಚುನಾವಣೆ ಹತ್ತಿರ ಬರುತ್ತಿರುವ ಈ ಸಂದರ್ಭದಲ್ಲಿ ರಾಷ್ಟ್ರೀಯ ಪಕ್ಷಗಳು ತಮ್ಮ ಚುನಾವಣ ಪ್ರಣಾಳಿಕೆಗಳಲ್ಲಿ ಅರಣ್ಯ ಮತ್ತು ವನ್ಯಜೀವಿ ಸಂರಕ್ಷಣೆಗಾಗಿ ಪ್ರತ್ಯೇಕ ನ್ಯಾಯಾಲಯಗಳನ್ನು ಸ್ಥಾಪಿಸುವ ಭರವಸೆಯನ್ನು ನೀಡಬೇಕು ಮತ್ತು ಗೆದ್ದಮೇಲೆ ನೀಡಿದ ಭರವಸೆಯನ್ನು ಈಡೇರಿಸುವ ಬದ್ಧತೆ ತೋರಬೇಕು ಮತ್ತು ಜನರು ಇಂತವರಿಗೆ ಓಟು ನೀಡಬೇಕು.

*****

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

3 Comments
Oldest
Newest Most Voted
Inline Feedbacks
View all comments
Suman
Suman
10 years ago

Lekhanadallidda samajika kalakali tumba ishta aaytu…… chanda barediri…

amardeep.p.s.
amardeep.p.s.
10 years ago

ಪರಿಸರ ಕಾಳಜಿ ಮತ್ತು ವನ್ಯ ಮೃಗಗಳ ಸಂರಕ್ಷಣೆಗಾಗಿ ತಾವು ಇಟ್ಟುಕೊಂಡಿರುವ  ಆಸಕ್ತಿ ಮೆಚ್ಛುವಂಥಾದ್ದು… ಲೇಖನ ಚೆನ್ನಾಗಿದೆ. ನಿಮ್ಮ ದೂರಾಲೋಚನೆ ಕೂಡ….

Akhilesh Chipli
Akhilesh Chipli
10 years ago

ಸುಮನ್ ಮತ್ತು ಅಮರದೀಪ್ ಈವ೯ರಿಗೂ ಧನ್ಯವಾದಗಳು. 

3
0
Would love your thoughts, please comment.x
()
x