ಆಪ್ತ ರಕ್ಷಕ!: ಗುರುಪ್ರಸಾದ ಕುರ್ತಕೋಟಿ

ಅವತ್ತು  ಕೆಲಸ ಮುಗಿಸಿ ನಾನು ಮನೆಗೆ ಬಂದಾಗ ರಾತ್ರಿ ಹನ್ನೊಂದು ಗಂಟೆ. ಕೆಲಸದ ಸುಸ್ತು, ತಲೆ ಬೇರೆ ಸಣ್ಣಗೆ ನೋಯುತ್ತಿತ್ತು. ನಮ್ಮ ಅಪಾರ್ಟಮೆಂಟಿನ ಹೊರಗೆ ಕಾರು ನಿಲ್ಲಿಸಿಕೊಂಡು "ಅವನು" ಗೇಟು ತೆಗೆಯಲೆಂದು ಕಾಯುತ್ತಿದ್ದೆ… 

ಅವನ ಹೆಸರು ನಂದೀಶ. ಅವನನ್ನು ಏನಂತ ಪರಿಚಯಿಸಬೇಕೆಂದು ಗೊತ್ತಾಗುತ್ತಿಲ್ಲ. ಸೆಕ್ಯುರಿಟಿ ಅನ್ನಲೇ? ಊಹುಂ, ಅವನು ಅದಕ್ಕಿಂತ ಜಾಸ್ತಿ. ವಾಚ್ ಮನ್ ಅನ್ನಲೂ  ಮನಸ್ಸಿಲ್ಲ, ಏಕೆಂದರೆ ವಾಚ್ ಮ್ಯಾನ್ ಗಳು ಬರೀ ವಾಚ್ ಮಾಡುತ್ತಾರೆ ಅಷ್ಟೆ!  ಅವನನ್ನು  ನಮ್ಮ "ಆಪ್ತ ರಕ್ಷಕ" ಅಂತ ಕರೆಯುವುದೇ ಸರಿ ಅನಿಸುತ್ತದೆ. 

… ಗೇಟು ತೆಗೆದವನೆ ಓಡುತ್ತ ನನ್ನ ಕಡೆಗೆ ಬಂದು "ಸಾರ್ ಅಲ್ಲೇ ಇರಿ, ಒಳ್ಗೆ ಬರ್ಬೇಡಿ" ಅಂತ ಸ್ವಲ್ಪ ಎಚ್ಚರಿಸುವ ರೀತಿಯಲ್ಲಿ ಹೇಳಿದ. ಮೊದಲೆ ತಡವಾಗಿ ಬಂದಿದ್ದ ನಾನು ತಾಳ್ಮೆ ಕಳೆದುಕೊಂಡಿದ್ದೆ.  

"ಯಾಕ್ರಿಪಾ?" ಸ್ವಲ್ಪ ಗಂಟು ಮುಖದಿಂದಲೇ ಕೇಳಿದೆ

"ಹಾವ್ ಬಂದೈತೆ ಸಾರ್! ಮಿಡಿ ನಾಗ್ರಾ… ಅಲ್ಲೆ ಇರಿ…" ಹಾವು ಅನ್ನುವ ಶಬ್ಧವೇ ನನ್ನ ಬಾಯಿ ಮತ್ತು ಕಣ್ಣುಗಳನ್ನು ಅಗಲಿಸಿತ್ತು. ನನ್ನ ತಲೆ ನೋವು ಸದ್ದಿಲ್ಲದೇ ಓಡಿ ಹೋಗಿತ್ತು. ಹಾವು ಹಿಡಿಯುವಷ್ಟು ಧೈರ್ಯವಾನನಲ್ಲ ನಾನು. 

"ಹಾವು ಹಿಡಿಯವ್ರಿಗೆ ಫೋನ್ ಮಾಡೋಣ್ ತಡ್ರಿ" ಅಂತ ಅಂದೆ. 

"ಅದ್ಯಾಕೆ ಬುಡಿ ಸಾರ್. ನಾನಿಲ್ವೆ? ಒಂದ್ನಿಮಿಷ ಹಂಗೆ ಇರಿ" ಅಂದವನೆ ಎಲ್ಲಿಂದಲೋ ಒಂದು ಕೋಲು, ಗೋಣಿ ಚೀಲವೊಂದನ್ನು ತಂದು. ಆ ಮಿಡಿನಾಗರವನ್ನು ಆ ಚೀಲದಲ್ಲಿ ಯಶಸ್ವಿಯಾಗಿ ಕಳಿಸಿ, ಚೀಲದ ಬಾಯಿ ಮುಚ್ಚಿ, ಹಾಗೆ ಹಿಡಿದುಕೊಂಡು ಹೋಗಿ ದೂರದಲ್ಲೆಲ್ಲೋ ಬಿಟ್ಟು ಬಂದ. ಇದೆಲ್ಲವನ್ನು ಅವನು ನನ್ನ ಕಣ್ಣ ಮುಂದೆಯೇ ಮಾಡಿದ್ದು, ಅದೂ ಒಂದೆ ಕೈಯಲ್ಲಿ ಅಂದರೆ ನೀವು ನಂಬಲಿಕ್ಕಿಲ್ಲ. ಒಂದೇ ಕೈಯಲ್ಲಿ ಯಾಕೆ ಅಂದರೆ ಅವನ ಎಡಗೈಯನ್ನು ಒಂದು ದುರ್ಘಟನೆಯಲ್ಲಿ ಕಳೆದುಕೊಂಡಿದ್ದಾನೆ! ನಾನು ನನ್ನ ಎರಡೂ ಕೈ ಇಟ್ಟುಕೊಂಡೂ ಮಾಡಲಾಗದ ಕೆಲಸವನ್ನು ಒಂದೇ ಕೈಯಲ್ಲಿ ಮಾಡಿ ನಮ್ಮ ರಕ್ಷಣೆ ಮಾಡುವವನನ್ನು ಆಪ್ತ ರಕ್ಷಕ ಅನ್ನದೆ ಬೇರೇನೂ ಅನ್ನಲು ಸಾಧ್ಯ?  

     

ಅವತ್ತೊಂದು ದಿನ, ತನಗಾದ ದುರ್ಘಟನೆಯನ್ನು ನೆನಪಿಸಿಕೊಂಡು ಹೇಳುತ್ತಿದ್ದ.  

"… ಇಲ್ಲಿ ಬರೋಕಿಂತ ಮೊದ್ಲು ನಮ್ಮ ಹಳ್ಳಿನಾಗೆ ನಾನು ಗೂಡ್ಸ್ ಗಾಡಿ ಓಡಸ್ತಿದ್ದೆ ಅನ್ನಿ. ಅವೊತ್ತು ಸಾಮಾನು ತುಂಬ್ಕೊಂಡು ಹೊಯ್ತಿದ್ದೆ. ದಾರೀಲಿ ಎಲ್ಲೋ ಎಡವಟ್ಟು ಆಗಿ ಗಾಡಿ ಪಲ್ಟಿ ಹೊಡೀತು ಸಾರ್. ಎರಡು ಮೂರು ಸರ್ತಿ ಉಳ್ಳಿರಬೇಕು. ಎಡಕಿನ ಕೈ ಮ್ಯಾಕೆ ಗಾಡಿ ಬಿದ್ದಿತ್ತು. ನನಗೆ  ಎಚ್ಕಾರಾನೆ ಇರಲಿಲ್ಲ ಅನ್ನಿ. ಆಮ್ಯಾಕೆ ಆಸ್ಪತ್ರೇಲಿ ಎಚ್ಚರಾ ಆದಾಗ್ಲೆ ನಂದೊಂದು ಕೈ ಕಳ್ಕೊಂಡಿದ್ದು ಗೊತ್ತಾಗಿದ್ದು." ತನ್ನ ಕೈಯನ್ನೇ ಕಸಿದುಕೊಂಡ ಆ ವಿಧಿಯಾಟವನ್ನು ವಿವರಿಸಿದ ಅವನ ಮುಖದಲ್ಲಿ ಎಳ್ಳಷ್ಟೂ ಬೇಸರವಿರಲಿಲ್ಲ. ಆದರೆ ಅದನ್ನು ಕೇಳಿ ನನ್ನ ಮನಸ್ಸು ಭಾರವಾಗಿತ್ತು. 

ಮೊಳಕೈಯಿಂದ  ಕೆಳಗೆ ಕತ್ತರಿಸಿ ತುಂಡಾಗಿದ್ದ ಕೈಯನ್ನು ಮರು ಜೋಡಿಸುವ ಸಾಧ್ಯತೆಗಳನ್ನು ವೈದ್ಯರು ಅಲ್ಲಗಳೆದರಂತೆ. ಸ್ವಲ್ಪ ದಿನಗಳ ಬಳಿಕ ಈ ಘಟನೆಯಿಂದ ಚೇತರಿಸಿಕೊಂಡ ಮೇಲೆ ಬೆಂಗಳೂರಿಗೆ ಕೆಲಸ ಹುಡುಕಿಕೊಂಡು ಬಂದನಂತೆ. 

ನಮ್ಮ ಅಪಾರ್ಟ್ಮೆಂಟಿನ  ರಕ್ಷಣೆಯ ಜವಾಬ್ದಾರಿ ಹೊತ್ತು ಈಗಾಗಲೇ ಐದು ವರ್ಷಗಳು ಸಂದಿದೆ. ದಿನದ ೨೪ ಗಂಟೆಯೂ ನಮ್ಮ ಕಟ್ಟಡದ ಯಾವುದೇ ಒಂದು ಸದ್ದಿಗೂ ಅವನದೊಂದು ಕಿವಿ ಇಟ್ಟಿರುತ್ತಾನೆ! ಅವನು ಯಾವಾಗ ಮಲಗುತ್ತಾನೋ ಆ ದೇವರಿಗೆ ಗೊತ್ತು. ನಮಗಂತೂ ನೆಮ್ಮದಿಯ ನಿದ್ದೆಯನ್ನು ದಯಪಾಲಿಸಿದ್ದಾನೆ. 

ಕೆಲವರಿಗೆ ಕಾರ್ ಚಾಲನೆಯನ್ನೂ ಕಲಿಸಿದ್ದಾನೆ. ಯಾವಾಗಲೂ ನಗುಮುಖದಲ್ಲೇ ಮಾತಾಡುತ್ತಾನೆ. ಯಾವುದೇ ಕೆಲಸಕ್ಕೆ ಸಂಬಂದಿಸಿದವರ ಫೋನ್ ನಂಬರು ಅವನ ಬಳಿ ಇರುತ್ತದೆ. ಒಂದು ವೇಳೆ ಕೆಲಸಕ್ಕೆ ಯಾರೂ ಸಿಕ್ಕಿಲ್ಲವೆಂದರೆ ಆ ಕೆಲಸವನ್ನು ಯಾವುದೇ ಅಪೇಕ್ಷೆಯಿಟ್ಟುಕೊಳ್ಳದೆ ಮಾಡುತ್ತಾನೆ. ಅದು ಪ್ಲಂಬಿಂಗ್ ಆಗಿರಬಹುದು, ಇಲೆಕ್ಟ್ರಿಕ್ ಕೂಡಾ ಆಗಿರಬಹುದು!

ಯಾರೇ ಅಪರಿಚಿತರು ಯಾವುದೇ ಫ಼್ಲ್ಯಾಟಿಗೆ ಬಂದರೂ ಅವರ ಜೊತೆಗೆ ಆ ಮನೆಯವರೆಗೂ ಬಂದು ಅವರು ನಮಗೆ ಪರಿಚಿತರು ಅಂತ ಗೊತ್ತಾದಾಗಲೇ ಅಲ್ಲಿಂದ ಹೋಗುತ್ತಾನೆ. ಅವನು ಸುಮ್ಮನೆ ಕೂಡೋದೇ ಕಡಿಮೆ. ಕಸ ಗೂಡಿಸುತ್ತಲೋ, ಕಾರು ತೊಳೆಯುತ್ತಲೋ ಏನೋ ಒಂದು ಕೆಲಸ ಮಾಡುತ್ತಾ 'ಕಾಯಕವೇ ಕೈಲಾಸವೆನ್ನುವ' ಬಸವಣ್ಣನ ತತ್ವವನ್ನು ಅಕ್ಷರಶಃ ಮೈಗೂಡಿಸಿಕೊಂಡಿದ್ದಾನೆ.    

ಅವನ ಸಹಧರ್ಮಿಣಿ ಕೂಡ ಅವನಿಗೆ ಹೀಗಾಯ್ತಲ್ಲಾ ಅಂತ ಬೇಸರಿಸದೆ, ಅವನ ಆತ್ಮವಿಶ್ವಾಸವನ್ನು ಹೆಚ್ಚಿಸಿದ್ದಾಳೆ. ಅವರಿಗೊಬ್ಬಳು ಮುದ್ದಾದ ಮಗಳಿದ್ದಾಳೆ. ಅವಳಿಗೆ ಒಳ್ಳೆಯ ಶಿಕ್ಷಣ ಕೊಡಿಸುತ್ತಿದ್ದಾನೆ. ತನ್ನ ಕೈ ಹೋಯಿತಲ್ಲಾ  ಅಂತ ಅಳುತ್ತ ಕೂಡದೆ, ತನ್ನ ಹಣೆಬರಹವನ್ನು ಹಳಿಯದೆ, ಯಾವಾಗಲೂ ನಗುತ್ತಾ, ಸ್ವಾಭಿಮಾನದ ಬದುಕನ್ನು ನಡೆಸುವ ನಂದೀಶ ಖಂಡಿತವಾಗಿಯೂ ಒಂದು ಆದರ್ಶವೇ ಅಂದರೆ ಉತ್ಪ್ರೇಕ್ಷೆಯಾಗಲಾರದು. ಅವನಿಗೆ ಒಳ್ಳೆಯದಾಗಲೆಂದು ಹಾರೈಸುತ್ತಾ…     

*****

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

9 Comments
Oldest
Newest Most Voted
Inline Feedbacks
View all comments
Akhilesh Chipli
Akhilesh Chipli
9 years ago

ನಿ(ನ)ಮ್ಮ ನಂದೀಶರಿಗೊಂದು ಇದೋ ಸಲಾಂ!!

ಗುರುಪ್ರಸಾದ ಕುರ್ತಕೋಟಿ

ಪ್ರೀಯ ಅಖಿಲೇಶ್, ನಿಮ್ಮ ಸಲಾಮ್ ಅನ್ನು ಅವರಿಗೆ ತಲುಪಿಸುವೆ :). ಧನ್ಯವಾದಗಳು!

ಮೂರ್ತಿ
ಮೂರ್ತಿ
9 years ago

ವ್ಯಕ್ತಿಯೊಬ್ಬ ಜೀವನದ ಕ್ರೂರತೆಗೆ ತನ್ನನ್ನು ನಿರ್ಲಿಪ್ತವಾಗಿ ಒಪ್ಪಿಸಿಕೊಂಡ ಬಗೆಯನ್ನು ಎಷ್ಟೊಂದು ಮುದವಾಗಿ, ಎಲ್ಲೂ ಅತಿವಾಚ್ಯವೆನ್ನಿಸದಂತೆ ಹೇಳಬಹುದು ಎಂಬುದು ನಿಮ್ಮ ಲೇಖನ ಓದಿದ ಮೇಲೆ ಅರಿವಾಗಿದೆ ! ಈ ರೀತಿ ನಮ್ಮ ಸುತ್ತಲೂ ನಡೆಯುವ ಸಹಜ ಘಟನಾವಳಿಗಳನ್ನು, ತಿಳಿ ಹಾಸ್ಯದ ಲೇಪದೊಂದಿಗೆ ಹಿತವಾಗಿ ವಿವರಿಸುವ ಶೈಲಿ ನಿಮಗೊಲಿದಿರುವುದು ಇಲ್ಲಿ ಮತ್ತೂ ಸ್ಪಷ್ಟ, ಈ ಲೆಖನ ರಂಜಿಸುವ ಗುಣಕ್ಕಿಂತ ತನ್ನ ಆರ್ದ್ರತೆಯ ಹೂರಣದಿಂದಾಗಿ ಆಪ್ತವೆನಿಸುತ್ತದೆ.

ನಂದೀಶನಂಥ ಎಷ್ಟೋಜನ ನಮ್ಮ ಕಣ್ಮುಂದೆಯೇ ಇದ್ದರೂ ನಮಗೆ ಕಾಣುವುದಿಲ್ಲ. ಅಂಥವರೊಬ್ಬರನ್ನು "ನೋಡಿ" ನಿಮ್ಮವನನ್ನಾಗಿಸಿಕೊಂಡ ನಿಮ್ಮ ಸ್ನೇಹಪರತೆ ಹಾಗೂ ಗುಣಾಢ್ಯತೆ ಮೆಚ್ಚುವಂಥದ್ದು.

 

ಗುರುಪ್ರಸಾದ ಕುರ್ತಕೋಟಿ

ಮೂರ್ತಿ ಬಾವಾ, ಪ್ರೀತಿ, ಅಭಿಮಾನದಿಂದ ಕೂಡಿದ ನಿಮ್ಮ ಅನಿಸಿಕೆಗಳನ್ನು ಓದುವುದೇ ನನಗೆ ಖುಷಿ! ನೀವು ಹೇಳಿದ್ದು ಸರಿ, ಇಂತಹ ಎಷ್ಟೊ ಜನರು ನಮ್ಮ ಮುಂದಿದ್ದರೂ ಅವರನ್ನು ಗುರುತಿಸಲಾಗದೆ ನಾವು ಕಣ್ಣಿದ್ದೂ ಕುರುಡರಾಗಿರುತ್ತೆವೇನೊ! ನಮ್ಮ ಅಹಂ ಬಿಟ್ಟು ಪ್ರೀತಿಯಿಂದ ಮಾತಾಡಿದಾಗ ಅಲ್ಲೊಬ್ಬ ಅಪ್ರತಿಮ ವ್ಯಕ್ತಿ, ಸ್ನೇಹಿತ ಸಿಗುವ ಸಾಧ್ಯತೆಗಳು ತುಂಬಾ ಇರುತ್ತವೆ… ಅಲ್ಲವೆ? ಧನ್ಯವಾದಗಳು! 

umesh desai
9 years ago

ಸೊಗಸಾದ ಲೆಖನ ಗುರು..ಅಂತು ನಿಮಗೆ ಸಿಗುವ ವ್ಯಕ್ತಿಗಳೆಲ್ಲ ವಿಶೇಷದವರಾಗಿರತಾರೆ..

ಗುರುಪ್ರಸಾದ ಕುರ್ತಕೋಟಿ
Reply to  umesh desai

ದೇಸಾಯ್ರ, ಹೌದು ಆ ವಿಷಯದಲ್ಲಿ ನಾನು ಅದೃಷ್ಟವಂತ ಅಂತ ಕಾಣುತ್ತೆ. ಆದರೆ, ನನ್ನ ತಿಳುವಳಿಕೆಯ ಮಟ್ಟಿಗೆ ಪ್ರತೀ ವ್ಯಕ್ತಿಯಲ್ಲೂ ಒಂದು ವಿಶೇಷತೆಯಿರುತ್ತದೆ. ಅದನ್ನು ಅವರಲ್ಲಿ ಕಾಣಲು ಅವರ ಕೆಲವು ಅವಗುಣಗಳನ್ನು ಬದಿಗೆ ಇಟ್ಟು ನೊಡಬೇಕು ಅಷ್ಟೆ! :). ಧನ್ಯವಾದಗಳು!

ಅಮರದೀಪ್.ಪಿ.ಎಸ್.
ಅಮರದೀಪ್.ಪಿ.ಎಸ್.
9 years ago

ಕೈಕಾಲು ನೆಟ್ಟಗಿಟ್ಟುಕೊಂಡೇ ನಾನು ಭಾಳ ಸೋಮಾರಿಯಾಗಿಬಿಟ್ಟೆ ಅಂತ ಆವಾಗಾವಾಗ ಅನ್ನಿಸೋದು ಮಾತ್ರ ಸುಳ್ಳಲ್ಲ…ಗುರು…

ಗುರುಪ್ರಸಾದ ಕುರ್ತಕೋಟಿ

ಅಮರ್ ಭಾಯ್, ಹೌದು ಎಷ್ಟೋ ಸರ್ತಿ ನನಗೂ ಹಾಗೆ ಅನಿಸಿದ್ದಿದೆ! ಓದಿ ನಿಮ್ಮ ಅನಿಸಿಕೆ ವ್ಯಕ್ತಪಡಿಸಿದ್ದಕ್ಕೆ ಧನ್ಯವಾದಗಳು!

Prakasha
Prakasha
9 years ago

ಚೆನ್ನಾಗಿದೆ

9
0
Would love your thoughts, please comment.x
()
x