ಆಪರೇಷನ್ ಡೆಂಗ್ಯೂ (ಭಾಗ 2): ನಟರಾಜು ಎಸ್ ಎಂ

ಇಲ್ಲಿಯವರೆಗೆ

ಸಿಲಿಗುರಿಯನ್ನು ಎರಡನೇ ಕೋಲ್ಕತ್ತಾ ಎನ್ನುತ್ತಾರೆ. ಸಿಲಿಗುರಿ ಈಶಾನ್ಯ ರಾಜ್ಯಗಳಿಗೆ ಹೆಬ್ಬಾಗಿಲು ಇದ್ದಂತೆ. ಇಂತಹ ಸಿಲಿಗುರಿಯನ್ನು ತಲುಪುತ್ತಿದ್ದಂತೆ ನಾವು ಮಾಡಿದ ಮೊದಲ ಕೆಲಸವೆಂದರೆ ಸಿಲಿಗುರಿಯ ನಕ್ಷೆಯನ್ನು ಒಂದು A4 ಹಾಳೆಯಲ್ಲಿ ಪ್ರಿಂಟ್ ಮಾಡಿಸಿಕೊಂಡೆವು. ಸಿಲಿಗುರಿಯ ನಕ್ಷೆಯನ್ನು ಪ್ರಿಂಟ್ ಮಾಡಿಸಿಕೊಂಡ ಕಾರಣವೇನೆಂದರೆ ಸಿಲಿಗುರಿಗೆ ಸೇರಿದ ಒಟ್ಟು 47 ವಾರ್ಡ್ ಗಳಲ್ಲಿ ನಮ್ಮ ಜಲ್ಪಾಯ್ಗುರಿಗೆ ಸೇರಿದ 14 ವಾರ್ಡ್ ಗಳಲ್ಲಿ ಯಾವ ವಾರ್ಡ್ ಗಳ ಜನರು ಡೆಂಗ್ಯೂ ಜ್ವರದಿಂದ ಹೆಚ್ಚು ಬಳಲುತ್ತಿದ್ದಾರೆ ಎಂಬುದನ್ನು ಮೊದಲು ತಿಳಿಯಬೇಕಿತ್ತು. ನಮ್ಮ ಬಳಿಯಿದ್ದ ಡಾಟಾ ಉಪಯೋಗಿಸಿ ನಾರ್ಥ್ ಬೆಂಗಾಲ್ ಮೆಡಿಕಲ್ ಕಾಲೇಜ್ ಮತ್ತು ಪ್ರೈವೇಟ್ ಆಸ್ಪತ್ರೆಗಳಲ್ಲಿ ಅಂದಿನವರೆಗೂ ಡಿಟೆಕ್ಟ್ ಆದ ಪ್ರತಿ ಡೆಂಗ್ಯೂ ಕೇಸ್ ಗಳನ್ನು ನಕ್ಷೆಯಲ್ಲಿ ಕಾಣುವ ವಾರ್ಡ್ ಗಳ ಮೇಲೆ ಚುಕ್ಕಿಯಂತೆ ಇಡುತ್ತಾ ಹೋದೆವು.

ಸಿಲಿಗುರಿಯ ಮಧ್ಯಭಾಗದಲ್ಲಿ ಹರಿಯುವ ಮಹಾನಂದ ನದಿಯ ಉದ್ದಗಲಕ್ಕೂ ತಗ್ಗು ಪ್ರದೇಶಗಳಂತೆ ಕಾಣುವ ವಾರ್ಡ್ ಗಳಲ್ಲಿ ಡೆಂಗ್ಯೂ ಜ್ವರದಿಂದ ಬಳಲುತ್ತಿರುವ ಸಂಖ್ಯೆ ಜಾಸ್ತಿ ಇರುವುದು ನಮಗೆ ಗೋಚರಿಸುತ್ತಾ ಹೋಯಿತು. ಒಂದೆರಡು ಕೇಸ್ ಗಳಿರುವ ವಾರ್ಡ್ ಗಳನ್ನು ಬಿಟ್ಟು ಹೆಚ್ಚು ಕೇಸ್ ಗಳಿಂದ ತುಂಬಿರುವ ವಾರ್ಡ್ ಗಳಲ್ಲಿ ನಮ್ಮ ಹೆಲ್ತ್ ಕ್ಯಾಂಪ್ ಗಳನ್ನು ಶುರು ಮಾಡಲು ಒಂದು ನೀಲ ನಕ್ಷೆಯನ್ನು ತಯಾರಿಸಿಕೊಂಡೆವು. ಆ ವಾರ್ಡ್ ಗಳ ಲೋಕಲ್ ಕೌನ್ಸಿಲರ್ ಗಳ ಫೋನ್ ನಂಬರ್ ಗಳನ್ನು ಪಡೆದು ನಾವು ಹೆಲ್ತ್ ಕ್ಯಾಂಪ್ ಗಳನ್ನು ಮಾಡುವ ವಿಷಯಗಳನ್ನು ಮತ್ತು ದಿನಾಂಕಗಳನ್ನು ಅವರಿಗೆ ತಿಳಿಸಿದೆವು. 

ಮೊದಲ ದಿನ ಒಂದು ಬಸ್ತಿಯಲ್ಲಿ ಹೆಲ್ತ್ ಕ್ಯಾಂಪ್ ಮಾಡಲು ನಾವು ಹೋದಾಗ ಸುಮಾರು ಇನ್ನೂರು ಜನ ಜ್ವರದಿಂದ ನರಳುತ್ತಿದ್ದವರು ಚಿಕಿತ್ಸೆಗಾಗಿ ಸಾಲುಗಟ್ಟಿ ನಿಂತರು. ಡೆಂಗ್ಯೂ ಜ್ವರ ಎಂದರೇನು ಅದರ ಲಕ್ಷಣಗಳೇನು ಡೆಂಗ್ಯೂ ಜ್ವರಕ್ಕೆ ಚಿಕಿತ್ಸೆಯೇನು ಡೆಂಗ್ಯೂ ಜ್ವರವನ್ನು ನಿಯಂತ್ರಿಸುವುದು ಹೇಗೆ ಎಂದು ನಿಮಗೆ ತಿಳಿದಿರುತ್ತದೆ ಎಂದುಕೊಳ್ಳುವೆ. ಆದರೆ ನಿಮ್ಮ ಮಾಹಿತಿಗಾಗಿ ಡೆಂಗ್ಯೂ ಜ್ವರ ಕುರಿತು ಒಂದೆರಡು ಮಾತುಗಳನ್ನು ಹೇಳುವುದು ಇಲ್ಲಿ ಸೂಕ್ತ ಎನಿಸುತ್ತಿದೆ.

ಡೆಂಗ್ಯೂ ಜ್ವರ ಎಂದರೇನು?

ಡೆಂಗ್ಯೂ ಜ್ವರ ಡೆಂಗ್ಯೂ ವೈರಸ್ ನಿಂದ ಬರುತ್ತದೆ. ಇದು ಈಡಿಸ್ ಈಜಿಪ್ಟೈ ಅಥವಾ ಈಡೀಸ್ ಆಲ್ಬೋಪಿಕ್ಟಸ್ ಎಂಬ ಸೊಳ್ಳೆಗಳು ಕಚ್ಚುವುದರಿಂದ ಒಬ್ಬರಿಂದ ಒಬ್ಬರಿಗೆ ಹರಡುತ್ತದೆ. ಈಡಿಸ್ ಈಜಿಪ್ಟೈ ಅಥವಾ ಈಡೀಸ್ ಆಲ್ಬೋಪಿಕ್ಟಸ್ ಎಂಬ ಸೊಳ್ಳೆಗಳ ಕಾಲುಗಳ ಮೇಲೆ ಬಿಳಿ ಮತ್ತು ಕಪ್ಪು ಪಟ್ಟೆಗಳು ಇರುತ್ತವೆ. ಆ ಕಾರಣಕ್ಕೆ ಈಡೀಸ್ ಆಲ್ಬೋಪಿಕ್ಟಸ್ ಎಂಬ ಜಾತಿಯ ಸೊಳ್ಳೆಗಳನ್ನು ಟೈಗರ್ ಮಸ್ಕಿಟೋ ಎಂದು ಕರೆಯಲಾಗುತ್ತದೆ. ಈ ಸೊಳ್ಳೆಗಳು ದಿನದ ವೇಳೆ ಜನರಿಗೆ ಕಚ್ಚುತ್ತವೆ. ಸೂರ್ಯೋದಯಕ್ಕೆ ಮುಂಚಿನ ಎರಡು ಗಂಟೆಗಳು ಮತ್ತು ಸೂರ್ಯಾಸ್ತದ ನಂತರದ ಎರಡು ಗಂಟೆಗಳಲ್ಲಿ ಈ ಸೊಳ್ಳೆಗಳು ಹೆಚ್ಚು ಕಚ್ಚುತ್ತವೆ. 

ಡೆಂಗ್ಯೂ ಜ್ವರದ ಲಕ್ಷಣಗಳು ಏನು?

ವಿಪರೀತ ಜ್ವರ,  ವಿಪರೀತ ತಲೆ ನೋವು, ಕಣ್ಣುಗಳ ಹಿಂದಿನ ಭಾಗದಲ್ಲಿ ನೋವು, ಮಾಂಸ ಖಂಡಗಳಲ್ಲಿ ಕೀಲುಗಳಲ್ಲಿ ನೋವು (ಮೈ ಕೈ ನೋವು), ವಾಂತಿ, ಚರ್ಮದ ಮೇಲೆ ಸಣ್ಣ ಸಣ್ಣ ಗುಳ್ಳೆಗಳು (Rash)ಕಾಣಿಸಿಕೊಳ್ಳುವುದು ಮತ್ತು ಮೈ ಆ ಗುಳ್ಳೆಗಳ ಕಾರಣದಿಂದ ಕೆರೆತ ಸಹ ಇರುತ್ತದೆ. ಇವು ಕ್ಲಾಸಿಕಲ್ ಡೆಂಗ್ಯೂ ಜ್ವರದ ಲಕ್ಷಣ. 

ಮತ್ತೊಂದು ಬಗೆಯ ಡೆಂಗ್ಯೂವಿನಲ್ಲಿ ಮೇಲಿನ ಲಕ್ಷಣಗಳ ಜೊತೆಗೆ ಕೆಲವರಲ್ಲಿ ಮೂಗು ಬಾಯಿ ವಸುಡುಗಳಲ್ಲಿ ರಕ್ತ ಸ್ರಾವ ವಾಗುವ ಸಾಧ್ಯತೆಗಳು ಇರುತ್ತದೆ. ಇಂತಹ ರಕ್ತ ಸ್ರಾವದ ಪ್ರಕಾರದ ಡೆಂಗ್ಯೂ ಜ್ವರಕ್ಕೆ ಡೆಂಗ್ಯೂ ಹೆಮರೇಜಿಕ್ ಫೀವರ್ ಎಂದು ಕರೆಯುತ್ತಾರೆ. 

ಡೆಂಗ್ಯೂ ಜ್ವರದ ಚಿಕಿತ್ಸೆ ಏನು?

ಸಾಮಾನ್ಯವಾಗಿ ಡೆಂಗ್ಯೂ ಜ್ವರಕ್ಕೆ ವಿಶೇಷವಾದ ಚಿಕಿತ್ಸೆ ಬೇಕಾಗಿರುವುದಿಲ್ಲ. ಡಾಕ್ಟರರ ಸಲಹೆಯ ಮೇರೆಗೆ ಪ್ಯಾರಾಸಿಟಾಮಾಲ್ ಮಾತ್ರೆಗಳನ್ನು ತೆಗೆದುಕೊಂಡರೆ ಜ್ವರ, ತಲೆ ನೋವು ಮೈ ಕೈ ನೋವುಗಳು ಕಡಿಮೆಯಾಗುತ್ತವೆ. ರೆಸ್ಟ್ ತೆಗೆದುಕೊಂಡು ಹೆಚ್ಚು ನೀರಿನ ಪದಾರ್ಥಗಳನ್ನು ಸೇವಿಸುವುದರ ಜೊತೆಗೆ ಪೌಷ್ಟಿಕ ಆಹಾರಗಳನ್ನು ಸೇವಿಸುವುದರಿಂದ ರೋಗಿ ಬೇಗ ಚೇತರಿಸಿಕೊಳ್ಳುತ್ತಾನೆ. ಡೆಂಗ್ಯೂ ರೋಗಿಗಳು ಜ್ವರದಿಂದ ಬಳಲುತ್ತಿರುವಾಗ ಪ್ಯಾರಾಸಿಟಮಾಲ್ ಬಿಟ್ಟು ಆಸ್ಪಿರಿನ್, ಬ್ರೂಫೇನ್ ನಂತಹ ಮಾತ್ರೆಗಳನ್ನು ಸೇವಿಸಬಾರದು. ಯಾಕೆಂದರೆ ಆಸ್ಪಿರಿನ್, ಬ್ರೂಫೇನ್ ನಂತಹ ನೋವು ನಿವಾರಕ ಮಾತ್ರೆಗಳು ಡೆಂಗ್ಯೂ ರೋಗಿಗಳಲ್ಲಿ ರಕ್ತ ಸ್ರಾವ ಉಂಟು ಮಾಡುತ್ತವೆ. ರಕ್ತ ಸ್ರಾವದ ಲಕ್ಷಣಗಳು ಕಂಡು ಬಂದ ಡೆಂಗ್ಯೂ ರೋಗಿಯನ್ನು ತಕ್ಷಣ ಹತ್ತಿರದ ಆಸ್ಪತ್ರೆ ಸೇರಿಸಬೇಕು. ಯಾಕೆಂದರೆ ಅಂತಹ ಡೆಂಗ್ಯೂ ಪೀಡಿತ ರೋಗಿಗಳಲ್ಲಿ ರಕ್ತ ಹೆಪ್ಪುಗಟ್ಟುವಿಕೆಯಲ್ಲಿ ನೆರವಾಗುವ ಪ್ಲೇಟ್ ಲೆಟ್ ಗಳ ಸಂಖ್ಯೆ ಕಡಿಮೆಯಾಗುವ ಕಾರಣ ರಕ್ತ ಸ್ರಾವವಾಗಿ ರೋಗಿ ಶಾಕ್ ಗೆ ಹೋಗಿ ಮರಣ ಹೊಂದುವ ಸಾಧ್ಯತೆ ಹೆಚ್ಚಾಗಿರುತ್ತದೆ. 

 ಮೇಲಿನ ಪುಟ್ಟ ಮಾಹಿತಿಯನ್ನು ಡೆಂಗ್ಯೂ ಕುರಿತಾಗಿ ನೀಡಿ ಮತ್ತೆ ನಮ್ಮ ಹೆಲ್ತ್ ಕ್ಯಾಂಪಿನ ಕಡೆಗೆ ಒಂದಷ್ಟು ಕಣ್ಣು ಹಾಯಿಸುತ್ತಿದ್ದೇನೆ. ಹಾಗೆ ಸಾಲಾಗಿ ನಿಂತ ಇನ್ನೂರಕ್ಕೂ ಹೆಚ್ಚು ಜನರನ್ನು ಪರೀಕ್ಷಿಸಿದ ನಮ್ಮ ವೈದ್ಯರ ತಂಡ ರೋಗಿಗಳಿಗೆ ಚಿಕಿತ್ಸೆಯನ್ನು ನೀಡುವಲ್ಲಿ ಬ್ಯುಸಿಯಾಗಿದ್ದರು. ನಮ್ಮ ಟೆಕ್ನಿಷಿಯನ್ ಜ್ವರದಿಂದ ಬಳಲುತ್ತಿರುವವರ ರಕ್ತವನ್ನು ಪರೀಕ್ಷೆಗಾಗಿ ಸಂಗ್ರಹಿಸುತ್ತಿದ್ದ. ನಮ್ಮ ಹೆಲ್ತ್ ಕ್ಯಾಂಪಿನ ಮೂಲ ಉದ್ದೇಶ ಡೆಂಗ್ಯೂ ಜ್ವರವನ್ನು ಎಷ್ಟು ಬೇಗ ಸಾಧ್ಯವೋ ಅಷ್ಟು ಬೇಗ ಜನಗಳಲ್ಲಿ ಗುರುತಿಸುವುದು ಮತ್ತು ಅವರಿಗೆ ಸರಿಯಾದ ಸಮಯದಲ್ಲಿ ಚಿಕಿತ್ಸೆ ನೀಡುವುದಾಗಿತ್ತು. ಅದರ ಜೊತೆಗೆ ಡೆಂಗ್ಯೂ ನಿಯಂತ್ರಣ ಕ್ರಮಗಳನ್ನು ನಾವು ರೂಪಿಸುತ್ತಿದ್ದೆವು. 

ನಮ್ಮ ಹೆಲ್ತ್ ಕ್ಯಾಂಪ್ ನ ಮಾಹಿತಿ ದೊರೆತ ಕಾಂಗ್ರೇಸ್, ಸಿಪಿಎಂ, ತೃಣಮೂಲ್ ನ ರಾಜಕಾರಣಿಗಳು ದಂಡು ದಂಡಾಗಿ ನಮ್ಮ ಕ್ಯಾಂಪಿನತ್ತ ಬರಲು ಶುರು ಮಾಡಿದ್ದರು. ಅವರ ಜೊತೆಗೆ ಬಂದ ಮಾಧ್ಯಮದವರು ಸಹ ಕ್ಯಾಂಪಿನ ಫೋಟೋಗಳನ್ನು ಕ್ಲಿಕ್ಕಿಸುತ್ತಿದ್ದರು. ನಾವು ಡೆಂಗ್ಯೂ ಜ್ವರ ನಿಯಂತ್ರಣದ ರೂಪು ರೇಷೆಗಳ ಕುರಿತು ವ್ಯಸ್ತವಾಗಿದ್ದ ವೇಳೆಯಲ್ಲಿ ರಾಜಕಾರಣಿಗಳು ಈ ಡೆಂಗ್ಯೂ ಜ್ವರವನ್ನು ತಮ್ಮ ಬೇಳೆ ಬೇಯಿಸಿಕೊಳ್ಳಲು ಹೇಗೆ ಬಳಸಿಕೊಳ್ಳಬಹುದು ಎಂಬಂತೆ ಅವರು ಹವಣಿಸುತ್ತಿರುವುದು ಸ್ಪಷ್ಟವಾಗಿ ನಮ್ಮ ಕಣ್ಣಿಗೆ ಬೀಳುತ್ತಿತ್ತು. ಮಾಧ್ಯಮದವರೂ ಸಹ ಅವರ ಜೊತೆ ಕೈ ಜೋಡಿಸಿದವರಂತೆ ನಮಗೆ ಕಾಣುತ್ತಿದ್ದರು. ಇಂತಹ ಸಮಯದಲ್ಲಿ ಒಂದು ಸಾವು ರಾಜಕಾರಣಿಗಳು ಮತ್ತು ಮಾಧ್ಯಮಗಳು ಅತಿ ಹೆಚ್ಚು ಕಾರ್ಯನಿರತರಾಗುವಂತೆ ಮಾಡಿಬಿಡುತ್ತವೆ. ಆ ಒಂದು ಸಾವು ಸಂಭವಿಸಿದರೆ ನಮ್ಮ ಬೇಳೆಯನ್ನು ಚೆನ್ನಾಗಿ ಬೇಯಿಸಿಕೊಳ್ಳಬಹುದು ಎಂದು ಒಮ್ಮೊಮ್ಮೆ ನಮ್ಮ ರಾಜಕಾರಣಿಗಳು ಮತ್ತು ಮಾಧ್ಯಮದವರು ನಮ್ಮ ದೇಶದಲ್ಲಿ ಕಾಯುತ್ತಾರೆ ಎನ್ನುವುದು ವಿಷಾದನೀಯ. 

ಡೆಂಗ್ಯೂ ನಿಯಂತ್ರಣ ಕುರಿತು ಮುಂದಿನ ವಾರ ಬರೆಯುತ್ತೇನೆ. 

ಮತ್ತೆ ಸಿಗೋಣ

 

ನಿಮ್ಮ ಪ್ರೀತಿಯ

ನಟರಾಜು

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

6 Comments
Oldest
Newest Most Voted
Inline Feedbacks
View all comments
Santhoshkumar LM
10 years ago

Good job Nattu..Very Informative!

ಮಾಲತಿ ಎಸ್.
ಮಾಲತಿ ಎಸ್.
10 years ago

proud of you Nataraju.

Hipparagi Siddaram
Hipparagi Siddaram
10 years ago

ಸರ್, ಉತ್ತಮ ಮಾಹಿತಿ ಮತ್ತು ಅನುಭವದ ಲೇಖನ….ನಿಮ್ಮ ವೃತ್ತಿಪ್ರೇಮವನ್ನು ನಾನು ಬಹಳಷ್ಟು ಮೆಚ್ಚಿಕೊಂಡಿದ್ದೇನೆ…ಸಾಗಲಿ ನಿಮ್ಮ ಸೇವೆ ಸಮಾಜದ….ಬಡವರಿಗೆ….ಕೆಳವರ್ಗದ  ನಿರ್ಗತಿಕರಿಗೆ…..ನಿತ್ಯ ನಿರಂತರ !
ಶುಭದಿನ !

ನಳಿನ ಡಿ
ನಳಿನ ಡಿ
10 years ago

ಉತ್ತಮ ಕೆಲಸ ಮಾಡುವವರನ್ನು ತಮ್ಮ ಇಷ್ಟದಂತೆ ಬಳಸಿಕೊಳ್ಳುವುದೇ ಇಂದಿನ ಜಗತ್ತು, ಆದರೂ ಡೆಂಗ್ಯೂ ಸಮಯಕ್ಕೆ ತಯಾರಿ ಚೆನ್ನಾಗಿಯೇ ನಡೆದಿತ್ತು.  ನೋಡುವಾ ಮುಂದಿನ ವಾರ

amardeep.p.s.
amardeep.p.s.
10 years ago

ನ . ಸೀ .. ಮಾ … ಜಿ .. ನಿಮ್ಮ ಸಾಮಾಜಿಕ ಕಳಕಳಿ ಹಾಗು ಸೇವಾ ಮನೋಭಾವ ಮೆಚ್ಚುವಂಥದ್ದು … ಲೇಖನ ಚೆನ್ನಾಗಿದೆ …. ಭಾಗ- 1 ಕೂಡ ಚೆನ್ನಾಗಿತ್ತು …..

ಸಾವಿತ್ರಿ.ವೆಂ.ಹಟ್ಟಿ
ಸಾವಿತ್ರಿ.ವೆಂ.ಹಟ್ಟಿ
9 years ago

ಲೇಖನ ಬಹಳ ಇಷ್ಟವಾಯಿತು ಸರ್. ಈಗ ನಿಮ್ಮ ಟೀಮ್ ನಿರ್ವಹಿಸುತ್ತಿರುವ ಕಾರ್ಯಚಟುವಟಿಕೆಗಳ ಕುರಿತು ದಯವಿಟ್ಟು ಬರೆದು ನಮಗೆ ಓದಲು ಕೊಡಿ.

6
0
Would love your thoughts, please comment.x
()
x