ನಮ್ಮ ಮಕ್ಕಳು ವಿದೇಶಗಳಲ್ಲಿದ್ದಾರೆ. ಅವರಲ್ಲಿಗೆ ಅಗಾಗ್ಗೆ ಹೋಗಿ ಬರುತ್ತಿರುತ್ತೇವೆ. ಬರೆಯುವ ಹವ್ಯಾಸ ನನ್ನದು. ಜೊತೆಗೆ ಸ್ನೇಹಿತರೊಂದಿಗೆ, ಇ-ಮೈಲಿನಲ್ಲಿ ವಿಷಯಗಳನ್ನು ವಿನಿಮಯ ಮಾಡಿಕ್ಕೊಳ್ಳುವ ಅಭ್ಯಾಸವಿದೆ. ವಿದೇಶದಲ್ಲಿರುವಾಗ ಉಪಯೋಗಿಸಲು ಒಂದು ಪುಟ್ಟ ಲ್ಯಾಪ್ಟಾಪು ಇದ್ದರೆ ಅನುಕೂಲವೆನ್ನಿಸುತ್ತಿತ್ತು. ಆದರೆ ಹೆಚ್ಚು ಖರ್ಚು ಮಾಡಲು ಮನಸ್ಸಿರಲಿಲ್ಲ. ಮನೆಯಲ್ಲಾಗಲೇ ಒಂದು ಡೆಸ್ಕ್‍ಟಾಪು ಇತ್ತು. ಸರಿ ಆನ್‍ಲೈನಿನಲ್ಲಿ ಹುಡುಕಿದೆ. ಕಂಪ್ಯೂಟರಿನ ಸ್ಕ್ರೀನಿನ ಮೇಲೆ ಲ್ಯಾಪ್ಟಾಪು ನೋಡಿದೆ. ನಾಲಕ್ಕು ಸಾವಿರಕ್ಕೆ ಲ್ಯಾಪ್ಟಾಪು ಜೊತೆಗೊಂದು ಬ್ಯಾಕ್‍ಪ್ಯಾಕಿನ ವಿಶೇಷ ರಿಯಾಯತಿಯ ಕೊಡುಗೆ ಆಕರ್ಷಕವಾಗಿತ್ತು. ಹನ್ನೊಂದು ಇಂಚಿನ ಸ್ಕ್ರೀನು, ಪೂರ್ಣವಾದ ಕೀಬೋರ್ಡು ಎಲ್ಲಾ ಇದ್ದು ನೋಡಲು ಚೆನ್ನಾಗಿತ್ತು. ಆರ್ಡರ್ ಮಾಡಿ ಕ್ರೆಡಿಟ್ ಕಾರ್ಡಿನಲ್ಲಿ ಹಣ ಸಂದಾಯ ಮಾಡಿದೆ. ಈ ಆನ್‍ಲೈನ್ ವ್ಯಾಪಾರ ಎಷ್ಟು ಸುಲಬ ಎಂದು ಖುಷಿಯಾಯಿತು. ಅಂಗಡಿಗೆ ಹೋಗಲು ಆಟೋ ಹಿಡಿಯಲಿಲ್ಲ. ಆಟೋದವರ ಬಳಿ ಮೀಟರಿನ ಬಗೆಗೆ ಜಗಳವಾಡಲಿಲ್ಲ! ಹತ್ತಾರು ಅಂಗಡಿಗಳನ್ನು ಸುತ್ತಲಿಲ್ಲ! ಬಿಸಿಲಿನಲ್ಲಿ ದಣಿಯಲಿಲ್ಲ! ಅಂಗಡಿಯಾತನಿಗೆ ಐದು ಸಾವಿರದೊಳಗೆ ಲ್ಯಾಪ್ಟಾಪು ಬೇಕು ಎಂದು ಹೇಳುವ ಮುಜುಗರವಿರಲಿಲ್ಲ! ಎಲ್ಲಾ ಅರ್ಧ ಗಂಟೆಯಲ್ಲಿ ನನ್ನ ಮನೆಯಲ್ಲಿ ಕುಳಿತೇ ಮುಗಿದಿತ್ತು. ಐದೇ ದಿನಗಳಲ್ಲಿ ದೆಹಲಿಯಿಂದ ಕೋರಿಯರ್ ಬಂತು.
ಪ್ಯಾಕಿಂಗ್ ಓಪನ್ ಮಾಡಿದಾಗ ಮಾತ್ರ ಕಸಿವಿಸಿಯಾಯಿತು. ಸ್ಕ್ರೀನಿನಲ್ಲಿ ಕಂಡದ್ದಕ್ಕಿಂತ ಅದು ತುಂಬಾ ಚಿಕ್ಕದಾಗಿತ್ತು. ಕೀಬೋರ್ಡೇನೇನೋ ಚೆನ್ನಾಗೇ ಇತ್ತು. ಆನ್ ಮಾಡಿದಾಗ ಚಾಲನೆಯೂ ಆಗಿ, ಸ್ಕ್ರೀನ್ ಕೂಡ ತೆರೆಯಿತು. ಆದರೆ ಮೋಸ ಹೋಗಿದ್ದು ಕೆಲವೇ ನಿಮಿಷಗಳಲ್ಲಿ ಗೊತ್ತಾಯಿತು! ಯಾವ ಅಪ್ಲಿಕೇಷನ್ ಓಪನ್ ಮಾಡಿದರೂ ಐದು ನಿಮಿಷ ತೆಗೆದುಕ್ಕೊಳ್ಳುತ್ತಿತ್ತು. ವೈಫೈ ಮೂಲಕ ಇಂಟರ್ನೆಟ್ ಉಪಯೋಗಿಸಲು ಪ್ರಯತ್ನಿಸಿದರೆ 'ಕನೆಕ್ಟಿಂಗ್' ಅಂತ ಮೆಸೇಜು ಬಂತೇ ಹೊರತು ಕನೆಕ್ಟೇ ಆಗಲಿಲ್ಲ.
ನೆರೆಮನೆಯ ಕಂಪ್ಯೂಟರ್ ಇಂಜಿನಿಯರ್ ಹುಡುಗನಿಗೆ ತೋರಿಸಿದೆ. "ಇದನ್ಯಾಕೆ ತಗೊಂಡ್ರಿ ಅಂಕಲ್, ಇದು ಉಪಯೋಗಕ್ಕೆ ಬರೊಲ್ಲ. ಇದರ ಆಪರೇಟಿಂಗ್ ಸಿಸ್ಟಂ ವಿಂಡೋಸ್ ಸಿಇ ಅಂತ. ಯಾವುದೋ ಕಾಲದಲ್ಲಿ ಮೊಬೈಲುಗಳಿಗೆ ಉಪಯೋಗಿಸುತ್ತಿದ್ದರು. ಇದನ್ನ ಅಪ್‍ಗ್ರೇಡೂ ಮಾಡೋಕಾಗೊಲ್ಲ. ನನ್ನ ಒಂದು ಮಾತು ಕೇಳಿದ್ದರೆ ಚೆನ್ನಾಗಿತ್ತು" ಎಂದುಬಿಟ್ಟ! ಪೆಚ್ಚಾಯಿತು!
"ಇದನ್ನೇನಾದ್ರೂ ಇಂಪ್ರೂವ್ ಮಾಡೋಕಾಗೊಲ್ವಾ, ಇನ್ನೊಂದು ಸ್ವಲ್ಪ ಖರ್ಚಾದರೂ ಪರವಾಗಿಲ್ಲ" ಎಂದಿದ್ದೆ.
"ಇದ್ನೇನೂ ಮಾಡೋಕಾಗೊಲ್ಲ. ಉಪಯೋಗಿಸೋಕೂ ಆಗೊಲ್ಲ. ಎಸೆಯೋಕೂ ಮನಸ್ಸು ಬರೊಲ್ಲ. ಯಾಕೆ ಹೀಗೆ ಮಾಡಿದ್ರಿ..? ಗೊತ್ತಿಲ್ಲದೆ ಇದ್ರೆ ಯಾರನ್ನಾದ್ರೂ ಕೇಳಬೇಕು. ಈ ಫೀಲ್ಡಲ್ಲಿ ಸಿಕ್ಕಾಪಟ್ಟೆ ವೇಗವಾಗಿ ಚೇಂಜಸ್ ಆಗ್ತಾ ಇವೆ"
ಹೌದೆನ್ನಿಸಿತು. ನಮಗೆ ಗೊತ್ತಿಲ್ಲದಿರುವ ವಿಷಯವನ್ನು ತಿಳಿದುಕ್ಕೊಳ್ಳಬೇಕು. ಅದಕ್ಕೆ ವಯಸ್ಸಾಗಲೀ, ವಿದ್ಯೆಯಾಗಲೀ ಅಡ್ಡಿಯಾಗಬಾರದು ಎನ್ನಿಸಿತು.
ಇನ್ನೆಂದೂ ಆನ್ಲೈನ್ ಷಾಪಿಂಗ್ ಸಹವಾಸ ಬೇಡ ಎನ್ನಿಸಿತು. ಅಂಗಡಿಯಲ್ಲಾದರೆ ಅದನ್ನು ನೋಡಿ, ಮುಟ್ಟಿ, ಹಲವಾರು ಪ್ರಶ್ನೆಗಳನ್ನು ಕೇಳಿ ಸಮಾದಾನವಾದರೆ ಕೊಳ್ಳಬಹುದು! ಇಲ್ಲಿ? ವಾಪಸ್ಸು ಮಾಡಬಹುದಾದರೂ ಅದು ದೊಡ್ಡ ತಲೆನೋವು! ಅದರ ಪ್ಯಾಕಿಂಗ್ ನಾವೇ ಮಾಡಬೇಕು. ನಮ್ಮ ಖರ್ಚಲ್ಲಿ ವಾಪಸ್ಸು ಕಳಿಸಬೇಕು. ಅವರು ಹಣ ವಾಪಸ್ಸು ಮಾಡುವ ತನಕ ಕಾಯಬೇಕು. ಅವರು ಕೇಳುವ ಹತ್ತಾರು ಪ್ರಶ್ನೆಗಳಿಗೆ ಉತ್ತರಿಸಬೇಕು. ಹಣವನ್ನೇನೂ ವಾಪಸ್ಸು ಮಾಡುವುದಿಲ್ಲ ಬದಲಿಗೆ ಅವರದ್ದೇ ಇನ್ನೊಂದು ಉತ್ಪನ್ನವನ್ನು ತೆಗೆದುಕ್ಕೊಳ್ಳಬೇಕು. ವಿದೇಶದಲ್ಲಿರುವ ನನ್ನ ಮಕ್ಕಳನ್ನು ಈ ಬಗ್ಗೆ ಕೇಳಿದೆ. ಅಲ್ಲಿ ಕೊಂಡು, ಉಪಯೋಗಿಸಿ ನಂತರ ಬೇಡವೆನ್ನಿಸಿದರೆ ವಾಪಸ್ಸು ಮಾಡುವುದು ತುಂಬಾ ಸುಲಬವಂತೆ. ಮಾರಿದವರು ಯಾವುದೇ ಪ್ರಶ್ನೆಯನ್ನೂ ಕೇಳದೆ, ವಸ್ತುವನ್ನು ವಾಪಸ್ಸು ಪಡೆದು, ಹಣ ವಾಪಸ್ಸು ಮಾಡುತ್ತಾರಂತೆ!
'ಪ್ರಥಮ ಚುಂಬನಂ ದಂತ ಭಗ್ನಂ' ಎನ್ನುವಂತಾಗಿತ್ತು ನನ್ನ ಆನ್ಲೈನ್ ವ್ಯಾಪಾರ! ಅಲ್ಲಿಂದ ಮುಂದೆ ಆನ್ಲೈನಿನಲ್ಲಿ ವ್ಯಾಪಾರ ಮಾಡುವಾಗ ಎಚ್ಚರವಾಗಿದ್ದು ವಿವೇಚನೆಯನ್ನು ಉಪಯೋಯೋಗಿಸುತ್ತೇನೆ.