ದೇಶದೆಲ್ಲೆಡೆ ಜನಜೀವನದೊಂದಿಗೆ ಮಕ್ಕಳ ವಿದ್ಯಾಭ್ಯಾಸವನ್ನೂ ಅಸ್ತವ್ಯಸ್ತಗೊಳಿಸಿರುವ ಕೊರೋನಾ ಸಂದಿಗ್ಧ ಪರಿಸ್ಥಿತಿಯಲ್ಲಿ ಶೈಕ್ಷಣಿಕ ವರ್ಷದ ಆರಂಭದಿಂದಲೂ ಮಕ್ಕಳ ವಿದ್ಯಾಭ್ಯಾಸ ಗೊಂದಲದ ಗೂಡೇ ಆಗಿದೆ. ಒಂದು ಕಡೆ ಇಷ್ಟೊಂದು ದೀರ್ಘ ಕಾಲದ ರಜೆಯಿಂದಾಗಿ ಮಕ್ಕಳು ತಾವು ಕಲಿತದ್ದೆಲ್ಲವನ್ನು ಮರೆತು ಕುಳಿತಿದ್ದಾರೆ. ಇನ್ನೊಂದೆಡೆ ಶಿಕ್ಷಕರು ಮಕ್ಕಳನ್ನು ಈ ಪರಿಸ್ಥಿತಿಯಲ್ಲಿ ಕಲಿಕೆಗೆ ಅಣಿಗೊಳಿಸಿಕೊಂಡು ಶಿಕ್ಷಣ ನೀಡುವುದು ಸವಾಲಿನ ಕೆಲಸವಾಗಿದೆ. ಎಲ್ಲಾ ಮಕ್ಕಳಿಗೂ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಿ ಶಾಲೆಯ ಸಿದ್ದ ಭೌತಿಕ ಕಲಿಕಾ ಕೊಠಡಿಗಳಲ್ಲಿ ಬೋಧನೆ ಮಾಡಲು ಅವಕಾಶವಿಲ್ಲದ ಈ ಸಂದರ್ಭದಲ್ಲಿ ಮಕ್ಕಳ ಮೂಲ ಸಾಮರ್ಥ್ಯಗಳ ಕಲಿಕೆಗೆಂದು ನೂತನವಾಗಿ ಆರಂಭವಾದ ಕಾರ್ಯಕ್ರಮವೇ “ವಿದ್ಯಾಗಮ”. ಇದರನ್ವಯ ಕಾಲ್ಪನಿಕ ಕಲಿಕಾ ಕೊಠಡಿಗಳನ್ನು ನಿರ್ಮಿಸಿಕೊಂಡು ಮೂರು ರೀತಿಯ ಗುಂಪುಗಳನ್ನಾಗಿ ಮಾಡಿಕೊಂಡು ಕಲಿಕೆಗೆ ಅನುಕೂಲಿಸಬೇಕು. ಮೊದಲನೆಯ ಕೋಣೆಯಲ್ಲಿ ಮೊಬೈಲ್ ಸೌಲಭ್ಯ ಹೊಂದಿಲ್ಲದ ಮಕ್ಕಳ ಗುಂಪಿರುತ್ತದೆ. ಎರಡನೆಯ ಕೊನೆಯಲ್ಲಿ ಇಂಟರ್ನೆಟ್ ರಹಿತ, ಮೊಬೈಲ್ ಫೋನ್ ಹೊಂದಿರುವ ಮಕ್ಕಳ ಗುಂಪಿದ್ದು ಮೂರನೆಯ ಕೋಣೆಯಲ್ಲಿ ಇಂಟರ್ನೆಟ್ ಸಹಿತ ಕಂಪ್ಯೂಟರ್ /ಸ್ಮಾರ್ಟ್ ಫೋನ್ ಹೊಂದಿರುವ ಮಕ್ಕಳ ಗುಂಪಾಗಿರುತ್ತದೆ.
ಯಾವುದೇ ಒಂದು ಕಾರ್ಯಕ್ರಮದ ಅನುಷ್ಠಾನವಾಗುವಲ್ಲಿ ಅದರ ಸಾಧಕ -ಬಾಧಕಗಳು ಇದ್ದೆ ಇರುತ್ತವೆ. ಹಾಗೆ ಈ ಕಾರ್ಯಕ್ರಮದ ಆರಂಭದಲ್ಲಿ ಬಹಳಷ್ಟು ಸವಾಲುಗಳು ಎದುರಾಗಿ ಕ್ರಮೇಣ ಅವುಗಳಿಗೆ ಹೊಂದಿಕೊಳ್ಳುವಂತಾಗಿದೆ. ಅದರಲ್ಲೂ ಸರ್ಕಾರಿ ಶಾಲೆಯ ಶಿಕ್ಷಕರಿಗೆ ಆನ್ಲೈನ್ ಶಿಕ್ಷಣವನ್ನು ನೀಡುವಲ್ಲಿ ಹಲವು ಸಮಸ್ಯೆಗಳು ಮೈದೋರಿವೆ. ಅವುಗಳಲ್ಲಿ ಕೆಲವನ್ನು ನೋಡುವುದಾದರೆ ಮೊದಲಿಗೆ ಸರ್ಕಾರಿ ಶಾಲೆಗಳಿಗೆ ತಮ್ಮ ಮಕ್ಕಳನ್ನು ಕಳಿಸುವ ಪೋಷಕರಲ್ಲಿ ಇದುವರೆಗೂ ಉತ್ತಮ ಸ್ಮಾರ್ಟ್ ಫೋನ್ ಗಳು ಲಭ್ಯವಿಲ್ಲ. ಇದ್ದರೂ ಅವುಗಳಲ್ಲಿ ಕಡಿಮೆ ಗುಣಮಟ್ಟದ ಫೋನ್ಗಳಾದ್ದರಿಂದ ವಿಡಿಯೋಗಳು ಸುತ್ತಿ ಸುತ್ತಿ ವೀಕ್ಷಿಸಲು ತಡೆಯುಂಟಾಗಿ ಮಕ್ಕಳಿಗೆ ಪರಿಣಾಮಕಾರಿಯಾಗುತ್ತಿಲ್ಲ. ಸರ್ಕಾರಿ ಶಾಲೆಯ ಅದೆಷ್ಟೋ ಮಕ್ಕಳು ತಮ್ಮತಂದೆ -ತಾಯಿಯರು ದುಡಿಮೆಗಾಗಿ ನಗರಗಳಿಗೆ ಹೋಗಿರುವ ಕಾರಣ ಅಜ್ಜಿ -ತಾತಂದಿರ ಮನೆಯಲ್ಲಿ ಬೆಳೆದು ಶಾಲೆಗೆ ಬರುವವರಿದ್ದಾರೆ. ಹಿರಿಯ ತಲೆಮಾರುಗಳಲ್ಲಿ ಹೆಚ್ಚು ಅನಕ್ಷರಸ್ಥರಿದ್ದು ತಂತ್ರಜ್ಞಾನದ ಮಾಹಿತಿ ಅವರಿಗೆ ಅರಿವಿಲ್ಲದಿರುವ ಕಾರಣ ಮಕ್ಕಳಿಗೆ ಸೂಕ್ತ ಮಾರ್ಗದರ್ಶನ ಹಾಗೂ ಸಲಕರಣೆಗಳ ಕೊರತೆಯಿದೆ. ಪೋಷಕರ ಮನೆಗಳಲ್ಲಿ ಒಂದೇ ಸ್ಮಾರ್ಟ್ ಫೋನ್ ಗಳನ್ನು ಹೊಂದಿದ್ದು ಮನೆಯಲ್ಲಿ ಎರಡು -ಮೂರು ಮಕ್ಕಳಿದ್ದಾಗ ಅವರಿಗೆ ತಮ್ಮ ಎಲ್ಲ ಮಕ್ಕಳಿಗೂ ಏಕಕಾಲದಲ್ಲಿ ಸ್ಮಾರ್ಟ್ ಫೋನ್ ಪೂರೈಸಲು ಸಾಧ್ಯವಾಗುತ್ತಿಲ್ಲ. ಜೊತೆಗೆ ಇವರು ಮಧ್ಯಮ ಅಥವಾ ಕೆಳವರ್ಗದ ಜನರಾಗಿರುವ ಕಾರಣ ಮೊಬೈಲ್ ಗೆ ಸಾಕಷ್ಟು ಇಂಟರ್ನೆಟ್ ಕರೆನ್ಸಿ ಹಾಕಿಸಲು ವಿಫಲರಾಗುತ್ತಿದ್ದಾರೆ.
ಮತ್ತೂ ಅವರು ಕೂಡ ನೌಕರಿಗಳಿಗೆ ಹೊರಗೆ ಹೋಗುವ ಕಾರಣ ಅವರಿಗೂ ಫೋನ್ಗಳ ಅಗತ್ಯವಿದ್ದು, ಮನೆಯಲ್ಲಿ ಮಕ್ಕಳ ಕೈಯಲ್ಲಿ ಕೊಟ್ಟುಹೋಗಲು ಹಿಂಜರಿಯುತ್ತಿದ್ದಾರೆ. ಬಹುತೇಕ ಹಳ್ಳಿಗಳಲ್ಲಿ ನೆಟ್ವರ್ಕ್ಗಳ ಸಮಸ್ಯೆಯಿದ್ದು ಸೂಕ್ತ ಸ್ಥಳಾವಕಾಶವನ್ನು ಅರಸಿ ಎತ್ತರದ ದೇವಸ್ಥಾನಗಳ ಆವರಣಕ್ಕೋ ಅಥವಾ ಬೆಟ್ಟಗಳನ್ನು ಹುಡುಕಿಯೋ ಬಂದು ಕುಳಿತುಕೊಳ್ಳಬೇಕಾಗುತ್ತದೆ. ಇಂತಹ ಸ್ಥಳಗಳು ಎಷ್ಟರ ಮಟ್ಟಿಗೆ ಮಕ್ಕಳಿಗೆ ಸುರಕ್ಷಿತವಾಗಿವೆ ಎಂಬ ಪ್ರಶ್ನೆಯೂ ಕಾಡುವುದುಂಟು ಆದರೆ ಅನಿವಾರ್ಯ. ಇನ್ನು ಈ ಆನ್ಲೈನ್ ತರಗತಿಗಳಿಗೆ ಸಮಯದ ಮಿತಿಯಿದ್ದು ಏಕಕಾಲದಲ್ಲೂ ಎಲ್ಲಾ ಶ್ರೇಣಿಯ ಮಕ್ಕಳಿಗೆ ವೈಯಕ್ತಿಕ ಅವಧಾನವನ್ನು ನೀಡಿ ಬೋಧಿಸಲು ಶಿಕ್ಷಕರಿಗೆ ಸಾಧ್ಯವಾಗುವುದಿಲ್ಲ. ಸಾಮಾನ್ಯವಾಗಿ ಕಲಿಕೆಯಲ್ಲಿ ಮುಂದಿರುವ ಮಕ್ಕಳಿಗೆ ಈ ಪದ್ಧತಿ ಸೂಕ್ತವೇ ಹೊರೆತು ಕಲಿಕಾ ನ್ಯೂನತೆ ಹೊಂದಿರುವ ಮಕ್ಕಳಿಗಲ್ಲ. ಏಕೆಂದರೆ ಅವರಿಗೆ ಕೆಲವು ವಿಶೇಷ ಅವಧಿಗಳ ಅವಶ್ಯಕತೆಯಿರುತ್ತದೆ. ಸರಿಯಾದ ಹಿಮ್ಮಾಹಿತಿಯನ್ನು ಕೊಟ್ಟು ಪರಿಶೀಲಿಸಲು ಕಷ್ಟವಾಗುತ್ತಿದೆ. ಮಕ್ಕಳಿಗೆ ಸಂಬಂಧಿಸಿದ ಪೂರಕ ದಾಖಲೆಗಳ ನಿರ್ವಹಣೆಯು ಕಷ್ಟವೇ ಆಗಿರುತ್ತದೆ. ಇಲ್ಲಿ ನೇರ ಸಂವಹನಕ್ಕೆ ಕಡಿಮೆ ಅವಕಾಶವಿರುವ ಕಾರಣ ತರಗತಿಗಳು ಒಮ್ಮೊಮ್ಮೆ ಏಕತಾನತೆಯ ಭಾವ ಮೂಡಿಸುತ್ತವೆ. ಸೂಕ್ತ ಕಲಿಕಾ ವಾತಾವರಣ ದೊರೆಯದೆ ಶಿಕ್ಷಕರ ಶ್ರಮಕ್ಕೆ ತಕ್ಕಂತಹ ಪ್ರತಿಫಲ ದೊರೆಯುವುದಿಲ್ಲ. ನಿಯಮಿಯವಾಗಿ ಸ್ಮಾರ್ಟ್ ಫೋನ್ ಗಳಲ್ಲಿ ತರಗತಿಗೆ ಹಾಜರಾಗುವುದರಿಂದ ಸಣ್ಣ ವಯಸ್ಸಿನ ಮಕ್ಕಳ ಕಣ್ಣು ಹಾಗೂ ಮೆದುಳಿನ ನರಗಳ ಮೇಲೆ ತೀವ್ರ ಪರಿಣಾಮ ಉಂಟಾಗಿ ಕ್ರಮೇಣ ಎಷ್ಟೋ ಮಕ್ಕಳಿಗೆ ಮೈಗ್ರೇನ್ ನಂತಹ ತಲೆನೋವು ಕೂಡ ಉಂಟಾಗುವ ಸಂಭವವಿರುತ್ತದೆ. ಆರೋಗ್ಯದ ಮೇಲೆ ಪರಿಣಾಮ ಬೀರಿ ಹಾನಿಯಾಗುವ ಸಂಭವ ಹೆಚ್ಚಾಗುತ್ತದೆ.
ಇಷ್ಟೆಲ್ಲಾ ಅಡಚಣೆಗಳಿದ್ದರೂ ನಾವಿಂದು ಅನಿವಾರ್ಯ ಪರಿಸ್ಥಿತಿಯಲ್ಲಿ ಈ ಆನ್ಲೈನ್ ಶಿಕ್ಷಣ ಪದ್ದತಿಗೆ ಜೋತುಬೀಳುವಂತಾಗಿದೆ. ಇದು ಮಕ್ಕಳಿಗಷ್ಟೇ ಅಲ್ಲ ಶಿಕ್ಷಣ ಇಲಾಖೆಯಲ್ಲಿ ಶಿಕ್ಷಕರಿಗೂ ತರಬೇತಿಗಳನ್ನು ಆನ್ಲೈನ್ ಮುಖಾಂತರವೇ ನೀಡಲಾಗುತ್ತಿದ್ದು ಎಷ್ಟೋ ಜನ ಶಿಕ್ಷಕರೂ ಕೂಡ ಈಗ ತಂತ್ರಜ್ಞಾನದ ಬಳಕೆಯ ದೃಷ್ಟಿಯಿಂದ ತಮ್ಮನ್ನು ತಾವು ಅಪ್ಗ್ರೇಡ್ ಮಾಡಿಕೊಳ್ಳುವ ಅವಶ್ಯಕತೆಯಿದೆ. ಕೊರೋನಾ ಪರಿಸ್ಥಿತಿ ತಿಳಿಯಾಗಿ ಮೊದಲಿನಂತೆ ಶಾಲಾ ಪರಿಸರದಲ್ಲಿ ಮಕ್ಕಳಿಗೆ ಶಿಕ್ಷಣ ದೊರೆಯುವಂತಾಗುವವರೆಗೆ ತಾತ್ಕಾಲಿಕವಾಗಿ ನಾವು ಮಕ್ಕಳೊಂದಿಗೆ ಸಮನ್ವಯ ಸಾಧಿಸಲು ಆನ್ಲೈನ್ ತಂತ್ರಜ್ಞಾನದೊಂದಿಗೆ ಹೆಜ್ಜೆಹಾಕಬೇಕಾಗಿದೆ.
-ತೇಜಾವತಿ ಹುಳಿಯಾರ್