ಮೆಕ್ಸಿಕೊ ದೇಶದ ಪ್ರಜೆಯೊಬ್ಬ ದೊಡ್ಡ ಸೂಟ್‌ಕೇಸಿನಲ್ಲಿ ೫೫ ಆಮೆಗಳನ್ನು ಮತ್ತು ೩೦ ಬಣ್ಣದ ಓತಿಗಳನ್ನು ಸಾಗಿಸುವಾಗ ಫ್ರಾಂಕ್‌ಫರ್ಟ್ ವಿಮಾನ ನಿಲ್ದಾಣದಲ್ಲಿ ಕಸ್ಟಮ್ ಅಧಿಕಾರಿಗಳಿಗೆ ಸಿಕ್ಕಿ ಬೀಳುತ್ತಾನೆ. ಮೆಕ್ಸಿಕೊ ಸಿಟಿಯಿಂದ ಫ್ರಾಂಕ್‌ಫರ್ಟ್ ಮಾರ್ಗವಾಗಿ ಬಾರ್ಸಿಲೋನಕ್ಕೆ ಈ ಅಪರೂಪದ ಪ್ರಾಣಿಗಳನ್ನು ಕಳ್ಳಸಾಗಾಣಿಕೆ ಮಾಡುತ್ತಿದ್ದ ಎಂದು ಅಲ್ಲಿಯ ಪತ್ರಿಕೆಗಳಲ್ಲಿ ವರದಿಯಾಗಿದೆ. ೫೦ ರಿಂದ ೬೦ ಸಾವಿರ ಪೌಂಡ್ ಬೆಳೆಬಾಳುವ ಈ ಪ್ರಾಣಿಗಳಲ್ಲಿ ಮೂರು ಆಮೆಗಳು ಸತ್ತು ಹೋಗಿದ್ದವು. ಮತ್ತೊಂದು ಹಾರುವ ಓತಿ ಗರ್ಭ ಧರಿಸಿತ್ತು ಎಂಬುದನ್ನು ಅಲ್ಲಿನ ವನ್ಯಜೀವಿ ತಜ್ಞರು ಹೇಳಿದ್ದಾರೆ. ಈ ತರಹದ ಕಳ್ಳ ಸಾಗಾಣಿಕೆ ಹಿಂದೆಯೂ ಅಲ್ಲಿ ಪತ್ತೆಯಾಗಿತ್ತು. ಒಬ್ಬ ಮಹಿಳೆ ಅಪರೂಪದ ಬಣ್ಣದ ಗಿಳಿಯ ಮೊಟ್ಟೆಯನ್ನು ತನ್ನ ಪ್ಯಾಂಟಿನ ಜೇಬಿನಲ್ಲಿ ಸಾಗಿಸುವಾಗ ಸಿಕ್ಕಿ ಬಿದ್ದಿದ್ದಳು. ಈ ವರದಿಯನ್ನು ಓದುತ್ತಿದ್ದಾಗಲೇ ಇನ್ನೊಂದು ಸುದ್ದಿಯು ಕಣ್ಣಿಗೆ ಬಿತ್ತು. ಇಂಟರ್‌ನ್ಯಾಷನಲ್ ಇನ್ಟ್ಸಿಟ್ಯೂಟ್ ಫಾರ್ ಸ್ಪೀಸೀಸ್ ಇವರು ಇನ್ನೂ ಹತ್ತು ಹೊಸ ಪ್ರಾಣಿಗಳ ಪ್ರಭೇದಗಳನ್ನು ಪತ್ತೆ ಮಾಡಿದ್ದಾರೆ. ಇದರಲ್ಲಿ ಅತಿ ಮುಖ್ಯವಾದ ಪ್ರಾಣಿಯೆಂದರೆ ಅತಿಚಿಕ್ಕ ಮಾಂಸಾಹಾರಿ ಸಸ್ತನಿ. ನೋಡಲು ಬೆಕ್ಕು ಹಾಗೂ ಕಾಡುಪಾಪದ ಮಿಶ್ರಣದಂತಿರುವ ಈ ಪ್ರಾಣಿಗೆ ಒಲಿಂಗೋಟೊ ಎಂದು ಹೆಸರಿಟ್ಟಿದ್ದಾರೆ. ಅತ್ಯಂತ ದಟ್ಟವಾದ ಕಾಡಿನಲ್ಲಿ ಮಾತ್ರ ವಾಸಿಸುವ ಈ ಪ್ರಾಣಿಯನ್ನು ಕೊಲಂಬಿಯಾ ಮತ್ತು ಈಕ್ವೆಡಾರ್‌ನ ಆಂಡೀಸ್ ಪರ್ವತ ಶ್ರೇಣಿಯಲ್ಲಿ ಪತ್ತೆ ಹಚ್ಚಲಾಗಿದೆ. ಜೀವಿಗಳ ಪರಸ್ಟರ ಅವಲಂಬನೆಯ ಈ ಲೋಕದಲ್ಲಿ ಕೆಲವು ಪ್ರಾಣಿಗಳ ಬಗ್ಗೆ ಸಾಮಾನ್ಯ ಜನರಿಗೆ ಅರಿವು ಕಡಿಮೆ. ಕೆಲವಷ್ಟು ಪ್ರಾಣಿಗಳ ಬಗ್ಗೆ ತಪ್ಪು ತಿಳುವಳಿಕೆಯನ್ನು ಹೊಂದಿದ್ದಾರೆ. ಉದಾಹರಣೆಯಾಗಿ ಒಂಟೆಯ ಡುಬ್ಬದಲ್ಲಿ ನೀರಿರುತ್ತದೆ. ಒಂಟೆಯ ಡುಬ್ಬದಲ್ಲಿ ನೀರು ಇರುವುದಿಲ್ಲ. ಅದರಲ್ಲಿ ಕೊಬ್ಬಿನಂಶ ಇರುತ್ತದೆ. ಕಷ್ಟಕಾಲದಲ್ಲಿ ಈ ಕೊಬ್ಬನ್ನು ಬಳಸಿಕೊಂಡು ಒಂಟೆ ಹಲವು ದಿನ ಬದುಕುತ್ತದೆ. ಹೀಗೆ ಮತ್ತೊಂದು ಬಾವಲಿಗಳಿಗೆ ಕಣ್ಣು ಇರುವುದಿಲ್ಲ. ಬಾವಲಿಗಳಿಗೆ ಕಣ್ಣು ಇರುತ್ತದೆ. ಆದರೆ ಅದರ ದೃಷ್ಟಿ ತೀರಾ ಮಂದ. ಇತ್ಯಾದಿಗಳನ್ನು ಓದುತ್ತಿದ್ದ ಹಾಗೆ ಅನೆಯ ಬಗ್ಗೆ ಕೆಲವು ಗೊತ್ತಿಲ್ಲದ ಮಾಹಿತಿಗಳು ಸಿಕ್ಕವು. ಇದೋ ನಿಮಗಾಗಿ.
೧. ಆನೆಗಳು ಬಗ್ಗೆ ಎಲ್ಲರಿಗೂ ತಿಳಿದಿರಲಿಕ್ಕೆ ಸಾಕು. ಹಾಗಾದರೆ ಎಷ್ಟು ಜಾತಿಯ ಆನೆಗಳಿವೆ, ೨, ೩, ೫, ೬.
ಉತ್ತರ: ೩. ಬಹಳ ಹಿಂದಿನಿಂದ ತಜ್ಞರು ೨ ಜಾತಿಯ ಆನೆಗಳನ್ನು ಮಾತ್ರ ಗುರುತಿಸಿದ್ದರು. ಏಷಿಯನ್ ಆನೆ ಮತ್ತು ಆಫ್ರಿಕಾದ ಆನೆ ಹಾಗೂ ಇದರ ಜೊತೆಯಲ್ಲಿ ೪ ಏಷಿಯನ್ ಆನೆಗಳ ಉಪಪ್ರಭೇದಗಳು ಹಾಗೂ ೨ ಆಫ್ರಿಕಾದ ಆನೆಯ ಉಪಪ್ರಭೇದಗಳನ್ನು ಗುರುತಿಸಿದ್ದರು. ಆದರೆ ಇದೀಗ ಹೊರಬಂದ ಹೊಸ ಸಂಶೋಧನೆಯ ಪ್ರಕಾರ ೨ ಆಫ್ರಿಕಾದ ಉಪಪ್ರಭೇದಗಳಲ್ಲಿ ಒಂದು ಮುಖ್ಯ ಪ್ರಭೇದವಾಗಿದೆ ಎಂಬ ಫಲಿತಾಂಶ ಬಂದಿದೆ. ಡಿಎನ್‌ಎ ಪರೀಕ್ಷೆಯಿಂದ ಇದನ್ನು ಸಾಬೀತು ಮಾಡಲಾಗಿದೆ. ಇದಕ್ಕೆ ಆಫ್ರಿಕ ಸಾವನ್ನ ಆನೆಯೆಂದು ಹೆಸರಿಟ್ಟಿದ್ದಾರೆ.
೨. ಆನೆಗಳು ನೀರು ಕುಡಿಯದೆ ಎಷ್ಟು ದಿನ ಇರಬಲ್ಲವು? ೨೪ ಗಂಟೆಗಳು, ೨ ದಿನಗಳು, ೩ ದಿನಗಳು ಅಥವಾ ೧ ವಾರ.
ಉತ್ತರ: ೩ ದಿನಗಳು. ಆನೆಗಳಿಗೆ ನೀರು ತುಂಬಾ ಮುಖ್ಯ. ಪ್ರತಿದಿನ ಆನೆಗಳು ನೀರು ಕುಡಿಯಲು ಬಯಸುತ್ತವೆಯಾದರೂ, ೩ ದಿನಗಳವರೆಗೆ ಬಾಯಾರಿಕೆಯನ್ನು ತಡೆದುಕೊಳ್ಳಬಲ್ಲವು.
೩. ಆನೆಗಳು ಅತಿ ಚಿಕ್ಕ ಪ್ರಾಣಿಗೂ ಹೆದರುತ್ತವೆ. ಹಾಗಾದರೆ ಆ ಪ್ರಾಣಿ ಯಾವುದು. ಇಲಿ, ಚೇಳು, ಸಗಣಿ ಹುಳ ಅಥವಾ ಜೇನು.
ಉತ್ತರ : ಜೇನು. ಆನೆಗಳು ಜೇನುಗಳಿಗೆ ಅತಿ ಭಯಪಡುತ್ತವೆ. ಜೇನು ಹುಟ್ಟುಗಳಿರುವುದನ್ನು ಮತ್ತೊಂದು ತಂಡಕ್ಕೆ ತಿಳಿಸಲು ಅವು ಪ್ರತ್ಯೇಕವಾಗಿ ಕೂಗಿ ಎಚ್ಚರಿಸುವುದನ್ನು ಅಳವಡಿಸಿಕೊಂಡಿದ್ದಾವೆ. ಕೀನ್ಯಾದ ರೈತರು ತಮ್ಮ ಹೊಲಗಳಲ್ಲಿ ಜೇನು ಸಾಕುವುದರ ಮೂಲಕ ಆನೆಗಳ ದಾಳಿಯಿಂದ ತಪ್ಪಿಸಿಕೊಳ್ಳುವುದನ್ನು ಕಲಿತಿದ್ದಾರೆ. ಜೇನು ಗುಂಯ್‌ಗುಡುವ ಶಬ್ಧವನ್ನು ರೆಕಾರ್ಡ್ ಮಾಡಿ ಹೊಲಗಳಲ್ಲಿ ಅಳವಡಿಸುವುದನ್ನು ಅನುಸರಿಸಲಾಗುತ್ತಾದರೂ, ಜೇನು ಹುಟ್ಟುಗಳೇ ಅತ್ಯಂತ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತವೆ ಎಂಬುದು ಸತ್ಯ.
೪. ಅತಿ ದೂರದ ಹಿಂಡಿನೊಂದಿಗೆ ಆನೆಗಳು ಹೇಗೆ ಸಂಪರ್ಕ ಸಾಧಿಸುತ್ತವೆ.
ಜೋರಾಗಿ ಕೂಗುವುದು, ನೆಲದ ಮೂಲಕ, ಅಲ್ಟ್ರಾಸೋನಿಕ್ ಅಲೆಯ ಮೂಲಕ ಅಥವಾ ಸೊಂಡಿಲನ್ನು ಜೋರಾಗಿ ಮರಕ್ಕೆ ಬಡಿಯುವುದರ ಮೂಲಕ
ಉತ್ತರ: ನೆಲದ ಮೂಲಕ. ಅಪಾಯ ಬಂದಾಗ ಕೂಗುವುದರ ಮೂಲಕವೂ ಸಂಹವನ ನಡೆಸುತ್ತವೆ. ಆನೆಯ ಘೀಳು ೫ ಮೈಲುಗಳವರೆಗೂ ಕೇಳಬಲ್ಲದಾದರೂ, ಇನ್‌ಫ್ರಾಸಾನಿಕ್ ರಂಬ್ಲಿಂಗ್ ಮಾದರಿಯಲ್ಲಿ ನೆಲದ ಮೂಲಕ ೧೦ ಮೈಲುಗಳವರೆಗೂ ಸಂಹವನ ನಡೆಸಬಲ್ಲವು. ಜೇನು ಹುಟ್ಟು ಹಾಗೂ ಮನುಷ್ಯರ ಇರುವಿಗೆ ಬೇರೆಯದೇ ಮಾದರಿಗಳನ್ನು ಉಪಯೋಗಿಸುತ್ತವೆ.
೫. ಆನೆಗಳು ಸರಾಸರಿ ಎಷ್ಟು ವರ್ಷಗಳು ಬದುಕುತ್ತವೆ – ೩೫-೪೫, ೮೫-೧೦೦, ೬೫-೮೫ ಅಥವಾ ೫೦-೭೦ ವರ್ಷಗಳು.
ಉತ್ತರ: ೫೦-೭೦ ವರ್ಷಗಳು. ಆನೆಗಳ ಸರಾಸರಿ ಬದುಕು ೫೦-೭೦ ವರ್ಷಗಳು. ಆನೆಗಳಿಗೆ ಆಹಾರವನ್ನು ಅಗಿದು ತಿನ್ನಲು ಬಲವಾದ ದವಡೆಗಳಿರುತ್ತವೆ. ಒಂದು ಆನೆಯ ಜೀವಿತಾವಧಿಯಲ್ಲಿ ಈ ದವಡೆಗಳು ಉದುರಿ ಹೊಸ ದವಡೆ ಹುಟ್ಟುವ ಪ್ರಕ್ರಿಯೆ ನಡೆಯುತ್ತದೆ. ಹೀಗೆ ಆರು ಬಾರಿ ದವಡೆ ಹಲ್ಲು ಉದುರಿ, ಹೊಸದಾಗಿ ಹುಟ್ಟುತ್ತವೆ. ಆದರೆ ಕೊನೆಯ ಅಂದರೆ ೬ನೇ ಬಾರಿ ಹುಟ್ಟಿದ ಹಲ್ಲು ಬಿದ್ದ ಮೇಲೆ ಮತ್ತೆ ಹುಟ್ಟುವುದಿಲ್ಲ. ಕೊನೆಯ ಬಾರಿ ದವಡೆ ಹಲ್ಲು ಉದುರಿದ ನಂತರ ಆನೆಗೆ ಆಹಾರ ಸೇವನೆ ಸಾಧ್ಯವಾಗುವುದಿಲ್ಲವಾದ್ದರಿಂದ, ಸ್ವಾಭಾವಿಕವಾಗಿ ಹಸಿವಿನಿಂದಾಗಿ ಆನೆಗಳು ಅಸುನೀಗುತ್ತವೆ.
೬. ಒಂದು ಬಾರಿಗೆ ಆನೆಯು ತನ್ನ ಸೊಂಡಿಲಿನಲ್ಲಿ ಎಷ್ಟು ಗ್ಯಾಲನ್ ನೀರನ್ನು ಶೇಖರಣೆ ಮಾಡಬಲ್ಲದು?
೦.೫-೧ ಗ್ಯಾ, ೧-೧.೫ ಗ್ಯಾ, ೨-೨.೫ ಗ್ಯಾ ಅಥವಾ ೩-೩.೫ ಗ್ಯಾಲನ್ – ೨-೨.೫ ಗ್ಯಾಲನ್
ಉತ್ತರ: ಪ್ರಬುದ್ಧ ಆನೆಯು ೨ ರಿಂದ ೨.೫ ಗ್ಯಾಲನ್‌ಗಳಷ್ಟು ನೀರನ್ನು ತನ್ನ ಸೊಂಡಿಲಿನಲ್ಲಿ ಹಿಡಿದಿಟ್ಟುಕೊಳ್ಳಬಲ್ಲದು. ಮೊದಲು ಸೊಂಡಿಲಿನಿಂದ ನೀರನ್ನು ಹೀರಿಕೊಂಡು ನಂತರ ಅದೇ ನೀರನ್ನು ಬಾಯಿಯ ಒಳಗೆ ಸಿಂಪಡಿಸಿಕೊಳ್ಳುತ್ತದೆ. ಈ ಮೂಲಕ ನೀರನ್ನು ಆನೆಯು ಕುಡಿಯುತ್ತದೆ.
೭. ಆನೆಗಳ ಹತ್ತಿರದ ಸಂಬಂಧಿ ಯಾವುದು – ಜಿರಾಫೆ, ಘೆಂಡಾ, ಹಂದಿ, ಹೈರಾಕ್ಸ್.
ಉತ್ತರ: ಹೈರಾಕ್ಸ್. ಆಫ್ರಿಕಾದ ಕಲ್ಲು ಗುಡ್ಡಗಳಲ್ಲಿ ವಾಸಿಸುವ ಹೈರಾಕ್ಸ್ ಎಂಬ ಚಿಕ್ಕ ಇಲಿಯಂತಹ ಸಸ್ತನಿ ಆನೆಗಳಿಗೆ ಹತ್ತಿರದ ಸಂಬಂಧಿ ಎಂದು ತಜ್ಞರ ಅಭಿಪ್ರಾಯ.
೮. ಆನೆಯ ಹಿಂಡಿನ ಯಜಮಾನ ಯಾರಾಗಿರುತ್ತಾರೆ? ವಯಸ್ಸಾದ ಹೆಣ್ಣಾನೆ ಅಥವಾ ವಯಸ್ಸಾದ ಗಂಡಾನೆ
ಉತ್ತರ: ವಯಸ್ಸಿನಲ್ಲಿ ಹಿರಿಯದಾದ ಹೆಣ್ಣಾನೆ. ತೀರಾ ವಯಸ್ಸಾದ ಹೆಣ್ಣಾನೆಯು ಅಲ್ಲ. ಗುಂಪಿನ ಯಜಮಾನಿಗೆ ಹಲವು ಜವಾಬ್ದಾರಿಗಳಿರುತ್ತವೆ. ಚೆನ್ನಾದ ಜ್ಞಾಪಕ ಶಕ್ತಿ ಇರಬೇಕು. ಆಹಾರ ಎಲ್ಲಿ ಸಿಗುತ್ತದೆ ಎಂಬ ಅರಿವು ಇರಬೇಕು. ಹಾಗೂ ಕುಟುಂಬದಲ್ಲಿ ಸಂಭಾವ್ಯ ಜಗಳಗಳನ್ನು ಬಗೆಹರಿಸುವ ತಜ್ಞತೆ ಇರಬೇಕು.
೯. ಆನೆಯು ಎಷ್ಟು ವೇಗವಾಗಿ ಓಡಬಲ್ಲದು? ೫-೧೦ ಮೈಲು/ಗಂಟೆಗೆ, ೧೫-೨೦ ಮೈಲು/ಗಂಟೆಗೆ, ೨೫-೩೦ ಮೈಲು/ಗಂಟೆಗೆ ಅಥವಾ ಆನೆ ಓಡುವುದಿಲ್ಲ.
ಉತ್ತರ: ೧೫-೨೦ ಮೈಲು/ಗಂಟೆಗೆ. ಅಚಾನಕ್ ಆಗಿ ಆನೆ ಓಡಲು ಶುರುಮಾಡಿದರೆ, ನಿಮ್ಮನ್ನು ಅತಿ ಬೇಗದಲ್ಲಿ ತಲುಪಬಲ್ಲದು. ಆನೆಯ ದೈಹಿಕ ರಚನೆಯಿಂದ ಹಲವು ಜನ ಆನೆಗೆ ಓಡಲು ಸಾಧ್ಯವಿಲ್ಲ ಎಂದೇ ಭಾವಿಸಿದ್ದಾರೆ. ೧೫-೨೦ ಮೈಲು ವೇಗದಲ್ಲಿ ಆನೆ ಓಡಬಲ್ಲದು. ಆದರೆ ಬಹಳ ದೂರ ಓಡಲು ಆನೆಗೆ ಸಾಧ್ಯವಿಲ್ಲ.
೧೦. ಪ್ರಪಂಚದಲ್ಲಿ ಪ್ರತಿವರ್ಷ ಎಷ್ಟು ಆನೆಗಳನ್ನು ಹತ್ಯೆ ಮಾಡಲಾಗುತ್ತಿದೆ? ೫-೧೦ ಸಾವಿರ, ೧೪-೧೭ ಸಾವಿರ, ೨೦-೨೩ ಸಾವಿರ ಅಥವಾ ೨೫-೩೦ ಸಾವಿರ
ಉತ್ತರ: ೨೫-೩೦ ಸಾವಿರ ಆನೆಗಳು ಕಾಡುಗಳ್ಳರಿಂದ ಹತವಾಗುತ್ತವೆ. ಕಳೆದ ವರ್ಷ ಆಫ್ರಿಕಾ ಖಂಡವೊಂದರಲ್ಲೇ ೨೫ ಸಾವಿರ ಆನೆಗಳನ್ನು ಅವುಗಳ ದಂತಕ್ಕಾಗಿ ಹತ್ಯೆ ಮಾಡಲಾಗಿದೆ. ಇದೇ ವೇಗದಲ್ಲಿ ಆನೆಗಳ ಹತ್ಯೆ ನಡೆಯುತ್ತಿದ್ದರೆ, ಆನೆಗಳ ಸಂತತಿ ನಾಶವಾಗುವ ದಿನ ದೂರವಿಲ್ಲ.
೧೧. ಈ ಜಗತ್ತಿನ ಅರಣ್ಯ ಪ್ರದೇಶದಲ್ಲಿ ಎಷ್ಟು ಆನೆಗಳಿವೆ? ೧೦-೧೩ ಲಕ್ಷ, ೭.೫-೧೦ ಲಕ್ಷ, ೪-೭ ಲಕ್ಷ ಅಥವಾ ೩-೫ ಲಕ್ಷ.
ಉತ್ತರ: ೪-೭ ಲಕ್ಷ ಆನೆಗಳು ಜಗತ್ತಿನ ಕಾಡಿನಲ್ಲಿ ಇವೆ ಎಂದು ಅಂದಾಜು ಮಾಡಲಾಗಿದೆ. ಆನೆಗಳ ಹತ್ಯೆಯ ಸರಣಿ ಇದೇ ರೀತಿ ಮುಂದುವರೆಯುತ್ತಿದ್ದರೆ. ಮುಂದಿನ ೨೦-೩೦ ವರ್ಷಗಳಲ್ಲಿ ಆನೆಗಳ ಸಂತತಿ ನಾಮಾವಶೇಷವಾಗಲಿದೆ.
೧೨. ಆನೆಗಳು ಕನ್ನಡಿಯಲ್ಲಿ ತಮ್ಮನ್ನು ತಾವು ಗುರುತಿಸಿಕೊಳ್ಳಬಲ್ಲವು – ಸರಿ ಅಥವಾ ತಪ್ಪು.
ಉತ್ತರ : ಸರಿ. ೧೯೭೦ರಲ್ಲಿ ಸೈಕಾಲಜಿ ತಜ್ಞ ಡಾ:ಗಾರ್ಡನ್ ಗ್ಯಾಲಪ್ ಜ್ಯೂನಿಯರ್ ಎಂಬುವವನು ಇದೇ ವಿಷಯದ ಮೇಲೆ ಸಂಶೋದನೆ ನಡೆಸಿ ಕೇವಲ ಚಿಂಪಾಂಜಿ, ಡಾಲ್ಪಿನ್, ಆನೆ ಮತ್ತು ಮನುಷ್ಯರು ಮಾತ್ರ ಕನ್ನಡಿಯಲ್ಲಿ ತಮ್ಮ ಪ್ರತಿಬಿಂಬವನ್ನು ಗುರುತಿಸ ಬಲ್ಲವು ಎಂದು ಕಂಡುಹಿಡಿದಿದ್ದಾನೆ.
ಹೀಗೆ ಪ್ರತಿ ಪ್ರಾಣಿಗಳ ಜೀವನವೂ ಅಚ್ಚರಿಗಳ ಮೂಟೆ. ಅಲ್ಲದೆ ಜಗತ್ತಿನಲ್ಲರುವ ಎಲ್ಲಾ ತರಹದ ಪ್ರಾಣಿಗಳು ಒಂದಲ್ಲಾ ಒಂದು ರೀತಿಯಲ್ಲಿ ಈ ಭೂಮಿಗೆ ಉಪಯುಕ್ತವಾಗಿವೆ ಎಂದು ಹೇಳಲು ಅಡ್ಡಿಯಿಲ್ಲ.
******