ಆನೆ ಕೊಂದಿತು – ಸಿಂಹ ತಿಂದಿತು!!: ಅಖಿಲೇಶ್ ಚಿಪ್ಪಳಿ

ಭೌದ್ಧ ಧರ್ಮದಲ್ಲೊಂದು ಕಥೆಯಿದೆ. ನೀರಿನಲ್ಲಿ ಬಿದ್ದ ಚೇಳನ್ನು ಸನ್ಯಾಸಿಯೊಬ್ಬ ಬರಿಗೈಯಿಂದ ಎತ್ತಿ ಬದುಕಿಸುವ ಪ್ರಯತ್ನದಲ್ಲಿರುತ್ತಾನೆ. ಚೇಳು ಕುಟುಕುತ್ತದೆ. ಇವನ ಕೈಜಾರಿ ಮತ್ತೆ ನೀರಿಗೆ ಬೀಳುತ್ತದೆ. ಪ್ರತಿಬಾರಿ ಸನ್ಯಾಸಿಯು ಅದನ್ನು ಬದುಕಿಸಲು ಪ್ರಯತ್ನ ಮಾಡುವುದು ಹಾಗೂ ಅದು ಕುಟುಕುವುದು ನಡದೇ ಇರುತ್ತದೆ. ದಾರಿಹೋಕನೊಬ್ಬ ಕೇಳುತ್ತಾನೆ, ಅದು ನಿನಗೆ ಕುಟುಕುತ್ತಿದ್ದರೂ, ಅದನ್ನು ಬದುಕಿಸುವ ಪ್ರಯತ್ನ ಮಾಡುತ್ತಿದ್ದೀಯಲ್ಲ. ಅದಕ್ಕೆ ಆ ಬಿಕ್ಷು ಹೇಳುತ್ತಾನೆ, ಕುಟುಕುವುದು ಅದರ ಧರ್ಮ, ಬದುಕಿಸುವುದು ನನ್ನ ಧರ್ಮ. ಮೇಲ್ನೋಟಕ್ಕೆ ಇದೊಂದು ತರಹದ ನೀತಿ ಕಥೆಯಂತೆ ತೋರಬಹುದು. ಆದರೆ, ಯಾವುದೇ ಪ್ರಾಣಿಗಳಿಗೆ ಸರಳವಾಗಿ ಮನುಷ್ಯನ ಮನೋಧರ್ಮ ಅರ್ಥವಾಗುವುದಿಲ್ಲ. ಅವುಗಳಿಗೆ ಬದುಕುವುದು ಹಾಗೂ ಅಪಾಯದಿಂದ ಪಾರಾಗುವುದು ಮುಖ್ಯವೇ ಹೊರತು, ಮನುಷ್ಯನ ಭಾವನೆಗಳಿಗೆ ಅಲ್ಲಿ ಬೆಲೆಯಿಲ್ಲ.

ಮೊನ್ನೆ ಸಾಗರದ ಅರಮನೆಕೇರಿಯಲ್ಲಿ ವಾಸ ಮಾಡುತ್ತಿದ್ದ, ಸಯಿಫುಲ್ಲಾ ಎಂಬ ಯುವಕ ಹಾವು ಕಚ್ಚಿ ತೀರಿಕೊಂಡ. ಸುಮಾರು ಹತ್ತು ವರ್ಷಗಳಿಂದ ಹಾವು ಹಿಡಿಯುವ ಕಾಯಕದಲ್ಲಿ ತೊಡಗಿಕೊಂಡಿದ್ದ. ಉರಗತಜ್ಞ ಖ್ಯಾತಿಯ ಮನ್ಮಥ ಕುಮಾರ್ ಗರಡಿಯಲ್ಲಿ ಪಳಗಿ ಹಾವು ಹಿಡಿಯುವುದನ್ನು ಕಲಿತಿದ್ದ. ಇನ್ನೂ ಬಾಳಿಬೆಳಗಬೇಕಾದ ಯುವಕ ಅಕಾಲಿಕ ಮರಣಕ್ಕೆ ತುತ್ತಾದ. ಮೊನ್ನೆ ಖುದ್ದು ಮನ್ಮಥ ಕುಮಾರನಿಗೆ ಹಾವು ಕಚ್ಚಿತು. ಕೋಮಾಸ್ಥಿತಿಯವರೆಗೆ ಹೋಗಿ, ಈಗ ಅಪಾಯದಿಂದ ಪಾರಾಗಿ ಬಂದಿದ್ದಾರೆ ಎಂಬ ಸುದ್ದಿ ಇದೆ. ಹಸಿ-ಹಸಿಯಾದ ಈ ಎರಡು ಘಟನೆಗಳನ್ನು ಬೇರೆ ರೀತಿಯಾದ ಆಯಾಮದಲ್ಲೇ ನೋಡಬೇಕಾಗುತ್ತದೆ.

ಹಾವು ಕಂಡು ಹರನೇ ನಡುಗಿದ್ದನಂತೆ ಎಂಬ ಮಾತಿದೆ. ಸ್ವತ: ಕೊರಳಲ್ಲಿ ಹಾವು ಧರಿಸಿದ ಶಿವನೇ ಅಚಾನಕ್ ಆಗಿ ಕಂಡ ಹಾವಿಗೆ ಹೆದರಿದನಂತೆ. ಹಾವಿನ ಕುರಿತಾಗಿ ಇರುವಷ್ಟು ಮಿಥ್ಯೆಗಳು ಮತ್ತಾವ ಪ್ರಾಣಿಗಳ ಕುರಿತಾಗಿ ಇಲ್ಲ. ಸಮಾಜದ ಹೆಚ್ಚಿನ ಜನ ಹಾವುಗಳೆಲ್ಲಾ ವಿಷದ ಹಾವುಗಳೇ ಎಂದು ತಿಳಿದಿದ್ದಾರೆ. ಜೀವಕ್ಕೆ ಅಪಾಯ ಮಾಡಬಲ್ಲಷ್ಟು ವಿಷವಿರುವ ಹಾವುಗಳ ಪ್ರಭೇದ ಬೆರೆಳೆಣಿಕೆಯಷ್ಟು. ಮತ್ತೆಲ್ಲಾ ನಿರುಪದ್ರವಿಗಳು ಹಾಗೂ ಮಾನವನಿಗೆ ಉಪಕಾರಿಗಳು ಆಗಿದ್ದಾವೆ. ಹೆಡೆ ಬಿಚ್ಚಿ ನಿಲ್ಲುವ ನಾಗರ ಹಾವನ್ನು ಮಾತ್ರ ದೈವತ್ವಕ್ಕೇರಿಸಿ, ಬಾಕಿ ನಿರುಪದ್ರವಿಗಳನ್ನು ಕಂಡಲ್ಲಿ ಕೊಲ್ಲುವ ಮನ:ಸ್ಥಿತಿ ಹೊಂದಿದ ಮಾನವನ ಅಜ್ಞಾನದಿಂದಾಗಿಯೇ ಹಲವು ಉರಗಪ್ರಬೇಧಗಳು ವಿನಾಶದಂಚಿಗೆ ಬಂದಿವೆ.

ಮನುಷ್ಯ ತನ್ನ ಆವಾಸಸ್ಥಾನವನ್ನು ವಿಸ್ತರಣೆ ಮಾಡುತ್ತಾ ಹೋದ ಹಾಗೆ, ಪ್ರಾಣಿಗಳ ಸ್ವಾಭಾವಿಕ ಆವಾಸಸ್ಥಾನದ ವ್ಯಾಪ್ತಿ ಕಡಿಮೆಯಾಗುತ್ತಾ ಹೋಗುತ್ತದೆ. ಆಗ ನಡೆಯುವ ಅನ್ಯಜೀವಿ-ಮಾನವನ ಪೈಪೋಟಿಯಲ್ಲಿ ನಡೆಯುವ ಪ್ರಕ್ರಿಯೆಗೆ ಸಂಘರ್ಷವೆಂಬ ಪಟ್ಟ ಕಟ್ಟಿ, ಅದರ ನೈಸರ್ಗಿಕ ನ್ಯಾಯವನ್ನು ಬಲವಂತವಾಗಿ ಕಸಿದುಕೊಳ್ಳುವಲ್ಲಿ ಮಾನವನೇ ಯಾವಾಗಲೂ ಮುಂದಿರುತ್ತಾನೆ ಹಾಗೂ ಸಂಘರ್ಷದ ಎಲ್ಲಾ ಯುದ್ಧಗಳನ್ನು ಮಾನವನೇ ಗೆಲ್ಲುತ್ತಾನೆ.

ಪೇಟೆ-ಪಟ್ಟಣಗಳಲ್ಲಿ ಮನೆಯಲ್ಲಿ ವಾಸವಾಗಿರುವ ಇಲಿಯನ್ನೋ, ಹೆಗ್ಗಣವನ್ನೋ ಹಿಡಿದು ತಿನ್ನಲು ಹಾವು ಬರುವುದು ಸಹಜ. ಈ ಹೊತ್ತಿನಲ್ಲಿ ಮನೆಯ ಜನ ಹಾವನ್ನು ಗಮನಿಸಿದರೋ, ಅವರ ನೆಮ್ಮದಿ ಪೂರ್ಣ ಹಾಳಾಗುತ್ತದೆ. ತಕ್ಷಣದಲ್ಲಿ ಹಾವು ಹಿಡಿಯುವವರು ಯಾರಾದರೂ ಸಿಗುತ್ತಾರಾ ಎಂದು ಬೇಗುದಿಯಿಂದಲೇ ವಿಚಾರಿಸುತ್ತಾರೆ. ಹೆಚ್ಚೂ-ಕಡಿಮೆ ಕಳೆದ 20 ವರ್ಷಗಳಿಂದ ನೂರಾರು ಹಾವುಗಳನ್ನು ಜನವಸತಿ ಪ್ರದೇಶದಿಂದ ಹಿಡಿದು ಕಾಡಿಗೆ ಬಿಡುತ್ತಿದ್ದ ಉರಗತಜ್ಞ ಮನ್ಮಥ ಕುಮಾರ್‍ಗೆ ಈ 60 ವರ್ಷ ದಾಟಿದೆ. 2001ರಲ್ಲಿ ನಡೆದ ಹೆಗ್ಗೋಡಿನ ಹೈತೂರಿನ ಕಾಳಿಂಗ ಸರ್ಪದ ಮೊಟ್ಟೆಯ ಹಗರಣದ ಹೊತ್ತಿನಲ್ಲೇ, ಆತನಿಗೊಂದು ಸಲಹೆ ನೀಡಿದ್ದೆ. ಯುವಕತನದಲ್ಲಿರುವ ಚುರುಕು 50 ವರ್ಷ ದಾಟಿದ ಮೇಲೆ ಇರುವುದಿಲ್ಲ ಮತ್ತು ಹಾವಿಗೆ ನೀನು ಅದನ್ನು ರಕ್ಷಣೆ ಮಾಡುವವ ಅಂತ ತಿಳಿದಿರುವುದೂ ಇಲ್ಲ. ಇನ್ನು ಹಾವು ಹಿಡಿಯುವ ಕೆಲಸವನ್ನು ಬಿಟ್ಟು ಬಿಡು ಎಂದು ಹೇಳಿದ್ದೆ. ಹಾವು ಹಿಡಿಯುವುದು ಒಂದು ಕಲೆ ಜೊತೆಗೆ ವಿಪರೀತ ಆಕರ್ಷಣೆ ಹೊಂದಿದ ವೃತ್ತಿಯದು. ಹಾವು ಹಿಡಿಯುವವರನ್ನು ತಾತ್ಕಾಲಿಕವಾಗಿ ಜನರು ಹೀರೋ ತರಹ ನೋಡುತ್ತಾರೆ. ಹಾಗೆಯೇ ಹಾವು ಹಿಡಿಸಿದವರು ಅಲ್ಪ-ಸ್ವಲ್ಪ ಹಣವೂ ನೀಡುತ್ತಾರೆ.

ಬರೀಗೈಯಿಂದ ಹಾವು ಹಿಡಿಯುವ ಮನ್ಮಥ್ ಕುಮಾರ್ ಹೆಚ್ಚಿನ ಜನರ ಅಚ್ಚರಿಗೆ ಕಾರಣರಾಗುತ್ತಾರೆ. ಆದರೆ, ವೈಜ್ಞಾನಿಕವಾಗಿ, ಹಾವಿಗೆ ತೊಂದರೆಯಾಗದಂತೆ ಹಾವು ಹಿಡಿಯುವ ವೃತ್ತಿಪರ ಉರಗತಜ್ಞರ ಪ್ರಕಾರ, ಬರೀಗೈಯಿಂದ ಹಾವು ಹಿಡಿಯುವುದು ಇಬ್ಬರಿಗೂ ಅಪಾಯಕಾರಿ. ಆದಷ್ಟು ಕೈಯಿಂದ ಮುಟ್ಟದೇ ಹಾವು ಹಿಡಿದು ಚೀಲಕ್ಕೆ ತುಂಬುವ ಕ್ರಮ ಪ್ರಪಂಚಾದ್ಯಂತ ಇದೆ. ಬರೀಗೈಯಿಂದ ಹಾವು ಹಿಡಿಯುವುದನ್ನು ಯಾವ ವೃತ್ತಿಪರ ಉರಗತಜ್ಞರೂ ಒಪ್ಪುವುದಿಲ್ಲ. ಹೊಸನಗರದಲ್ಲಿ ಒಂದು ಕಾಳಿಂಗ ಸರ್ಪದ ತಲೆಯನ್ನು ಒಂದು ಕೈಯಲ್ಲಿ ಹಿಡಿದುಕೊಂಡು, ಅದರ ಬಾಲವನ್ನು ಕಾಲಿನಿಂದ ತುಳಿದು ಮೊಬೈಲ್‍ನಲ್ಲಿ ಮಾತನಾಡುತ್ತಿದ್ದ ಮನ್ಮಥಕುಮಾರ್ ಚಿತ್ರವೂ ಹಲವರ ಕಟುಟೀಕೆಗೆ ಒಳಗಾಗಿತ್ತು.

ಹಾವು ಹಿಡಿಯುವುದಕ್ಕೆ ಅಪಾರ ಧೈರ್ಯ, ತಾಳ್ಮೆ ಹಾಗೂ ಚುರುಕುತನ ಬೇಕಾಗುತ್ತದೆ. ಮೈಯೆಲ್ಲಾ ಕಣ್ಣಾಗಿರಬೇಕಾಗುತ್ತದೆ. ಅದರಲ್ಲೂ ಹದಿನೈದು ಅಡಿ ಉದ್ದವಾಗಿರುವ ಕಾಳಿಂಗ ಸರ್ಪದಂತಹ ಉರಗಗಳನ್ನು ಹಿಡಿಯುವಾಗ ತೀವ್ರ ನಿಗಾ ಬೇಕು. ಸ್ನೇಕ್ ಹೆಸರಿಟ್ಟುಕೊಂಡ ಹಲವರು, ಫೋಟೊಗಳಿಗೆ, ವಿಡಿಯೋಗಳಿಗೆ ಫೋಸ್ ನೀಡುವಂತಹ ಅಪಾಯಕಾರಿ ಕೆಲಸಕ್ಕೆ ಕೈ ಹಾಕುತ್ತಾರೆ. ವೃತ್ತಿಪರ ಉರಗತಜ್ಞರು ಇಂತಹ ಜಾಹಿರಾತು ರೂಪದ ಫೋಸ್‍ಗಳನ್ನು ನೀಡಲೇ ಬಾರದು ಎಂಬ ಎಚ್ಚರಿಕೆಯನ್ನು ನಿರಂತರವಾಗಿ ನೀಡುತ್ತಲೇ ಇರುತ್ತಾರೆ. ಈಗೊಂದು ಮೂರ್ನಾಲ್ಕು ವರ್ಷಗಳ ಹಿಂದೆ ಚಿಕ್ಕಮಗಳೂರು-ಕೊಪ್ಪ ಭಾಗದಲ್ಲಿ ಹಾವು ಹಿಡಿಯುತ್ತಿದ್ದ ಉರಗತಜ್ಞರೊಬ್ಬರು ಇಂತಹ ಮೋಜಿನಾಟಕ್ಕೆ ಕಾಳಿಂಗನ ಕಡಿತಕ್ಕೆ ಬಲಿಯಾಗಿದ್ದರು.

ಮಲೆನಾಡಿನಲ್ಲಿ ಹಾವನ್ನು ರಕ್ಷಿಸುವಲ್ಲಿ ಎಡವಿದ ಸಯಿಫುಲ್ಲಾ ಎಂಬ ಯುವಕ ಪ್ರಾಣ ಕಳೆದುಕೊಂಡ ಹೊತ್ತಿನಲ್ಲೇ ಅತ್ತ ದಕ್ಷಿಣ ಆಫ್ರಿಕಾದ ಕ್ರೂಗರ್ ರಾಷ್ಟ್ರೀಯ ಅಭಯಾರಣ್ಯದಲ್ಲಿ ಘೆಂಡಾಮೃಗದ ಬೇಟೆಗೆ ಹೋದವನೊಬ್ಬ ಆನೆಗೆ ಬಲಿಯಾಗಿ ನಂತರದಲ್ಲಿ ಸಿಂಹಕ್ಕೆ ಆಹಾರವಾದ ಘಟನೆಯನ್ನು ಬಿಬಿಸಿ ವರದಿ ಮಾಡಿದೆ. ವನ್ಯಜೀವಿಗಳ ಬೇಟೆಯನ್ನು ನಿಯಂತ್ರಿಸಲು ಅಲ್ಲಿನ ಅರಣ್ಯ ಸಿಬ್ಬಂದಿಗಳು ಹರಸಾಹಸ ಪಡುತ್ತಿದ್ದಾರೆ. ನೈಸರ್ಗಿಕವಾಗಿ ವನ್ಯಸಂಪತ್ತು ಹೆಚ್ಚಿರುವ 7500 ಚ.ಕಿ.ಮೀ ವ್ಯಾಪ್ತಿಯಲ್ಲಿರುವ ಕ್ರೂಗರ್ ಅಭಯಾರಣ್ಯದಲ್ಲಿ ನಿರಂತರ ಬೇಟೆ ನಡೆಯುತ್ತಿರುತ್ತದೆ. ಆಧುನಿಕ ಬಂದೂಕು ಹಾಗೂ ಕೆಲವೊಮ್ಮೆ ಹೆಲಿಕಾಪ್ಟರ್‍ಗಳನ್ನು ಬಳಸಿ ಆನೆ ಮತ್ತು ಘೇಂಡಾಮೃಗಗಳನ್ನು ಬೇಟೆಯಾಡಲಾಗುತ್ತದೆ. ಚೀನಾದ ಪಾರಂಪಾರಿಕ ಔಷಧ ಪದ್ದತಿಯಲ್ಲಿ ಘೇಂಡಾಮೃಗದ ಕೊಂಬಿಗೆ ವಿಶೇಷ ಬೇಡಿಕೆ ಇದೆ. ಪುರುಷತ್ವವನ್ನು ಹೆಚ್ಚಿಸುತ್ತದೆ ಎಂದು ನಂಬಿಸಲಾಗುವ ಈ ಕೊಂಬಿನಲ್ಲಿ ನಮ್ಮ ದೇಹದ ಕೂದಲು ಹಾಗೂ ಉಗುರಿನಲ್ಲಿರುವ “ಕೆರಟಿನ್” ಅಂಶವಷ್ಟೇ ಇರುತ್ತದೆ. ಆದರೂ ಚೀನಾದ ಮೂಡನಂಬಿಕೆಗೆ ಪ್ರಪಂಚದ ಎಲ್ಲಾ ವನ್ಯಜೀವಿಗಳೂ ಬಲಿಯಾಗುತ್ತಿವೆ.

ಬಂದೂಕುದಾರಿಗಳಾಗಿ ಮೂರು ಜನ ಅಕ್ರಮವಾಗಿ ಕ್ರೂಗರ್ ರಾಷ್ಟ್ರೀಯ ಅಭಯಾರಣ್ಯದಲ್ಲಿ ಘೇಂಡಾಮೃಗಗಳನ್ನು ಬೇಟೆಯಾಡಲು ಹೋಗಿದ್ದಾರೆ. ಅಚಾನಕ್ ಆಗಿ ಪ್ರತ್ಯಕ್ಷವಾದ ದೈತ್ಯಾನೆಯೊಂದು ಮೂವರಲ್ಲಿ ಒಬ್ಬನನ್ನು ತುಳಿದು ಸಾಯಿಸಿತು. ಇಬ್ಬರು ಅದು ಹೇಗೋ ಬಚಾವಾಗಿ ಓಡಿದರು. ನಂತರದಲ್ಲಿ “ಹೆಣ”ವನ್ನು ಕಾಡಿನಿಂದ ಎಳೆದು ತಂದು ರಸ್ತೆ ಬದಿಯಲ್ಲಿ ಹಾಕಿ, ಸತ್ತವನ ಮನೆಯವರಿಗೆ ಈ ಘಟನೆಯ ಸಂದರ್ಭವನ್ನು ವಿವರಿಸಿ ಬಚ್ಚಿಟ್ಟುಕೊಂಡರು. ಸತ್ತವನ ದೇಹವನ್ನು ಹುಡುಕುತ್ತಾ ಹೊರಟವರಿಗೆ ಅರಣ್ಯ ಸಿಬ್ಬಂದಿಗಳು ಎದುರಾದರು, ತೀವ್ರವಾಗಿ ವಿಚಾರಿಸಿದ ನಂತರದಲ್ಲಿ ಇಡೀ ಘಟನೆಯನ್ನು ಸತ್ತವನ ಮನೆಯವರು ವಿವರಿಸಿದರು. ಸರಿ, ಮಾಹಿತಿ ನೀಡಿದವರನ್ನು ಬಂಧಿಸಿ, ವಿಚಾರಣೆ ನಡೆಸಲಾಗಿ, ಘಟನೆ ನಡೆದ ಸ್ಥಳದ ಮಾಹಿತಿಯನ್ನು ನೀಡಿದರು. ಅರಣ್ಯಾಧಿಕಾರಿಗಳು ಬೇಟೆಗಾರರು ನೀಡಿದ ಮಾಹಿತಿಯನ್ನು ಅನುಸರಿಸಿ, ದೇಹವನ್ನು ಹುಡುಕುವ ಕೆಲಸವನ್ನು ಮಾಡಿದರು. ತೀವ್ರ ತಪಾಸಣೆಯ ನಂತರದಲ್ಲಿ ಅರಣ್ಯ ಸಿಬ್ಬಂದಿಗಳಿಗೆ ತಲೆಬುರುಡೆ ಹಾಗೂ ಕಾಲು ದೊರಕಿದವು. ದೇಹದ ಇತರೆ ಭಾಗಗಳನ್ನು ಸಿಂಹಗಳ ಹಿಂಡು ತಿಂದು ಹಾಕಿತ್ತು.

ಈ ವರದಿಯನ್ನು ಬಿಬಿಸಿ ಬಿತ್ತರಿಸುತ್ತಿದ್ದಂತೆ, ವನ್ಯಜೀವಿಗಳ ಮುಖದಲ್ಲಿ ಮಂದಹಾಸ ಮಿನುಗಿತು. ಬೇಟೆಗಾಗಿ ಹೋದವನಿಗೆ ತಕ್ಕ ಶಾಸ್ತಿಯಾಯಿತು ಎಂದು ಸಂಭ್ರಮಿಸಿದರು. ಆದರೆ, ನರಮಾಂಸ ತಿಂದ ಸಿಂಹಗಳ ಹಿಂಡು, ಮತ್ತೆ ಮನುಷ್ಯರನ್ನು ತಿನ್ನುವ ಅಪಾಯವನ್ನು ತಳ್ಳಿಹಾಕುವಂತಿಲ್ಲ ಎಂಬ ಆತಂಕವನ್ನು ಅರಣ್ಯ ಇಲಾಖೆ ಹೊರಹಾಕಿದೆ. ಇಂತಹ ಘಟನೆ ನಡೆಯುವುದು ಕೋಟಿಗೊಂದು ಬಾರಿ ಇರಬಹುದು. ನಮ್ಮಲ್ಲೂ ವ್ಯಾಪಕ ಬೇಟೆ ನಡೆಯುತ್ತಿದೆ. ಅದರಲ್ಲೂ ಮೊದಲ ಹಿಂಗಾರು ಮಳೆ ಬಿದ್ದ ರಾತ್ರಿ ಬೇಟೆಗಾರರಿಗೆ ಹಬ್ಬ. ನೀರನ್ನರಸಿ ಬರುವ ಪ್ರಾಣಿಗಳು ಶಿಕಾರಿಗೆ ಬಲಿಯಾಗುತ್ತವೆ.

ವಿಪರ್ಯಾಸ ನೋಡಿ, ಬೆಂಗಳೂರಿನ ಅರಣ್ಯ ಭವನದಲ್ಲಿ 35ಕ್ಕೂ ಹೆಚ್ಚು ಐ.ಎಫ್.ಎಸ್.ಗಳು ಕಾರ್ಯನಿರ್ವಹಿಸುತ್ತಾರೆ. ಎಲ್ಲರಿಗೂ ಐಷರಾಮಿ ಕಾರು, ಅದಕ್ಕೆ ಡ್ರೈವರ್, ಪೆಟ್ರೋಲ್, ಮನೆ, ದೂರವಾಣಿ ಇತ್ಯಾದಿಗಳೆಲ್ಲಾ ಲಭ್ಯವಿದೆ. ಇವರಿಗಾಗಿ ಸರ್ಕಾರದ ಅಥವಾ ಸಾರ್ವಜನಿಕರ 2 ಕೋಟಿಯಷ್ಟು ಹಣವನ್ನು ಈ ಬಿಳಿಯಾನೆಗಳ ಮೇಲೆ ವೆಚ್ಚ ಮಾಡಲಾಗುತ್ತದೆ. ಆದರೆ ಕೆಳಹಂತದ ವಾಚರ್ ಹಾಗೂ ಗಾರ್ಡ್‍ಗಳು ಅಂದರೆ ನಿಜವಾಗಲೂ ಫೀಲ್ಡ್ ವರ್ಕ್ ಅಥವಾ ಕ್ಷೇತ್ರ ಕಾರ್ಯಾಚರಣೆ ಮಾಡುವ ಸಿಬ್ಬಂದಿಗಳಿಗೆ ನೀಡಲು ಹಣವಿಲ್ಲ. ಶಿವಮೊಗ್ಗ ಜಿಲ್ಲೆಯ ಕೆಲವು ಭಾಗಗಳಲ್ಲಿ ಕೆಳಹಂತದ ನೌಕರರ ಸಂಖ್ಯೆ ತೀರಾ ತೀರಾ ಕಡಿಮೆ ಇದೆ. 90 ಜನ ಗಾರ್ಡ್‍ಗಳು ಇರಬೇಕಾದ ಜಾಗದಲ್ಲಿ ಬರೀ 3 ಮಂದಿ ಕೆಲಸ ಮಾಡುತ್ತಿರುವ ಶೋಚನಿಯ ಪರಿಸ್ಥಿತಿ ಇದೆ. ಹೀಗಾದಲ್ಲಿ ನಮ್ಮ ವನ್ಯಸಂಪತ್ತು ಉಳಿಯುವುದು ಹೇಗೆ? ಇದುವರೆಗೂ ಆಗಿಹೋದ ಯಾವ ಅರಣ್ಯ ಮಂತ್ರಿಗಳೂ ಕೂಡಾ ಅರಣ್ಯ ಹಾಗೂ ಜೀವಿವೈವಿಧ್ಯದ ಕುರಿತು ಕಾಳಜಿ ತೋರಿ, ಕಾರ್ಯರೂಪಕ್ಕೆ ಬರುವ ಹಾಗೆ ಮಾಡಲಿಲ್ಲ. ಐ.ಎ.ಎಸ್.ಗಳೆಂಬ ಅಶ್ವಿನಿ ದೇವತೆಗಳು ಇಲ್ಲ-ಸಲ್ಲದ ಸಬೂಬು ಹೇಳಿ ಜನಪ್ರತಿನಿಧಿಗಳ ದಿಕ್ಕು ತಪ್ಪಿಸುವ ಕೆಲಸವನ್ನೇ ಮಾಡುತ್ತಾ ಬಂದಿದ್ದಾರೆ.

ಅವೈಜ್ಞಾನಿಕ ಕ್ರಮದಿಂದ ಹಾವು ಹಿಡಿಯುವುದು ಜೀವಕ್ಕೆ ಅಪಾಯವಾಗುವ ಸಾಧ್ಯತೆ ಇರುವ ಘಟನೆಯಲ್ಲದೇ ಮಲೆನಾಡಿನಲ್ಲಿ ಬೇಟೆಗೆ ಹೋದ ಸಂದರ್ಭದಲ್ಲಿ ಕೋವಿಗೆ ಬಲಿಯಾದವರೂ ಇದ್ದಾರೆ. ಸೊರಬ-ಹೊಸನಗರಗಳಲ್ಲಿ ಇಂತಹ ಘಟನೆಗಳು ನಡೆದಿದ್ದು ದಾಖಲಾಗಿದೆ. ಇದರ ಜೊತೆಗೆ ಮೇಯಲು ಹೋದ ಜಾನುವಾರುಗಳು ಕಳ್ಳಬೇಟೆಗಾರರ ಗುಂಡಿಗೆ ಬಲಿಯಾದ ನಿದರ್ಶನಗಳೂ ಇವೆ. ಕಳೆದ ಮೂರು ತಲೆಮಾರುಗಳಲ್ಲಿ ಶೇ.62ರಷ್ಟು ಜೀವಿವೈವಿಧ್ಯ ನಾಶವಾದ ಹಿನ್ನೆಲೆಯಲ್ಲಿ ಬೇಟೆಯಾಡುವುದು ಅಥವಾ ಬೇಟೆಗೆ ಪ್ರೋತ್ಸಾಹ ನೀಡುವುದು ನಾಗರೀಕ ಸಮಾಜದ ಒಳ್ಳೆಯ ಲಕ್ಷಣವಲ್ಲ.

-ಅಖಿಲೇಶ್ ಚಿಪ್ಪಳಿ


 

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x