ಆಧುನಿಕ ವಿಜ್ಞಾನಕ್ಕೆ ಸವಾಲಾದ ಪುರಾತನ ಸಲಕರಣೆಗಳು: ಆರ್.ಬಿ.ಗುರುಬಸವರಾಜ ಹೊಳಗುಂದಿ


21ನೇ ಶತಮಾನದಲ್ಲಿ ನಮ್ಮ ಪೂರ್ವಜರ ಹೆಚ್ಚಿನ ಸಹಾಯವಿಲ್ಲದೇ ನಾವು ಮಹತ್ತರವಾದ ಮತ್ತು ಪ್ರಬಲವಾದ ತಾಂತ್ರಿಕ ಸಾಮ್ರಾಜ್ಯವನ್ನು ಸಾಧಿಸಿದ್ದೇವೆಂದು ಭಾವಿಸುತ್ತೇವೆ. ಆದರೆ ಭಾವಿಸಿದಂತೆ ಇದು ಸತ್ಯವಲ್ಲ. ಇತ್ತೀಚಿನ ಸಂಶೋಧನೆ ಎಂದು ಹೇಳುವ ಬಹುತೇಕ ವಸ್ತುಗಳನ್ನು ನಮ್ಮ ಪೂರ್ವಜರು ಆಗಲೇ ಬಳಸಿದ್ದರು ಮತ್ತು ನಾವು ಈಗ ಯೋಚಿಸುವುದಕ್ಕಿಂತ ಮುಂಚಿತವಾಗಿ ಅವರು ವೈಜ್ಞಾನಿಕವಾಗಿ ಮುಂದುವರೆದಿದ್ದರು ಎನ್ನುವುದಕ್ಕೆ ಕೆಲವೊಂದು ನಿದರ್ಶನಗಳು ದೊರೆಯುತ್ತವೆ. ಅಂತಹ ಕೆಲ ಸಲಕರಣೆಗಳೇ ನಮ್ಮ ಇಂದಿನ ಆಧುನಿಕ ತಂತ್ರಜ್ಞಾನಕ್ಕೆ ಹಾಗೂ ವಿವಿಧ ಸಂಶೋಧನೆಗಳಿಗೆ ಪ್ರೇರಣೆಯಾಗಿವೆ. ಹಾಗಾದರೆ ಆ ವಸ್ತುಗಳು ಯಾವುವು? ಇಂದಿನ ವಿಜ್ಞಾನಕ್ಕೆ ಸವಾಲಾದ ಅವುಗಳ ವಿಶೇಷತೆ ಏನು? ಅವು ಈಗ ಎಲ್ಲಿವೆ? ಎಂಬಿತ್ಯಾದಿ ಪ್ರಶ್ನೆಗಳು ಕಾಡುತ್ತಿವೆಯೇ? ಅವುಗಳ ಬಗ್ಗೆ ಒಂದಿಷ್ಟು ಮಾಹಿತಿ ತಿಳಿಯೋಣ.

ಬಾಗ್ದಾದ್ ಬ್ಯಾಟರಿ
ಇಂದು ಎಲ್ಲೆಡೆ ಬ್ಯಾಟರಿಗಳನ್ನು ಕಾಣುತ್ತೇವೆ. ಮೊಬೈಲ್‍ಗಳಲ್ಲಿ, ಗಡಿಯಾರಗಳಲ್ಲಿ, ಆಟಿಕೆಗಳಲ್ಲಿ ಬ್ಯಾಟರಿಗಳನ್ನು ಕಾಣುತ್ತೀರಿ. ಅಂತಹ ಬ್ಯಾಟರಿಯು ಕ್ರಿ.ಪೂ. 150ನೇ ಇಸ್ವಿಯ ಆಸುಪಾಸಿನಲ್ಲಿ ಬಳಸಿದ್ದರು ಎನ್ನುವುದಕ್ಕೆ ಪುರಾವೆ ದೊರೆತಿದೆ. ಪುರಾತನ ಬ್ಯಾಟರಿಯು ಈಗಿನ ಇರಾಕ್‍ನ ಖುಜುತ್ ರಾಬು ಎಂಬಲ್ಲಿ ಕಂಡುಬಂದಿದೆ. ಇದರ ಕಾರ್ಯವು ನಾವು ಬಳಸುವ ಬ್ಯಾಟರಿಯಂತೆಯೇ ಇದೆ. ಆದರೆ ವಿನ್ಯಾಸ ಮತ್ತು ಔಟ್‍ಲುಕ್ ಸ್ವಲ್ಪ ಒರಟಾಗಿದೆ. ಇದು ಸಿರಾಮಿಕ್ ಮಡಕೆಯ ರೂಪದಲ್ಲಿದ್ದು ಒಳಗಡೆ ಲೋಹದ ಕೊಳವೆ ಮತ್ತು ಕಬ್ಬಿಣದ ರಾಡ್‍ಗಳಿರುವ ಒಂದು ಕಲಾಕೃತಿಯಾಗಿದೆ. ಇದರ ಮೂಲ ಮತ್ತು ಉದ್ದೇಶ ಅಸ್ಪಷ್ಟವಾಗಿದೆ. ಈ ವಸ್ತುವು ಗಾಲ್ವಾನಿಕ್ ಕೋಶವಾಗಿ ಕಾರ್ಯನಿರ್ವಹಿಸುತ್ತಿತ್ತು, ವಿದ್ಯುದ್ವಿಭಜನೆಗಾಗಿ ಅಥವಾ ಕೆಲವು ರೀತಿಯ ಎಲೆಕ್ಟ್ರೋ ಥೆರಪಿಗೆ ಬಳಸಲಾಗುತ್ತಿತ್ತು ಎಂದು ಊಹಿಸಲಾಗಿದೆ. ಇದು 0.8-2 ವೋಲ್ಟ್ಸ್ ವಿದ್ಯುತ್ ಉತ್ಪಾದಿಸುತ್ತದೆ ಎಂದು ಪ್ರತಿಕೃತಿಯ ಅಧ್ಯಯನದ ಪ್ರಕಾರ ತಿಳಿದು ಬಂದಿದೆ.

ಪುರಾತನ ಬಾಗ್ದಾದ್ ನಾಗರೀಕತೆಯಲ್ಲಿ ಬ್ಯಾಟರಿಯನ್ನು ಏಕೆ ಬಳಸಿದರು ಎಂಬ ಪ್ರಶ್ನೆ ಮೂಡುವುದು ಸಹಜ. ಆಧುನಿಕ ಜನರು ನೂರಾರು ವರ್ಷಗಳ ಕಾಲ ವಿದ್ಯುತನ್ನು ಅರ್ಥ ಮಾಡಿಕೊಂಡಿರಲಿಲ್ಲ. ಆದಾಗ್ಯೂ ಪುರಾತನ ಬಾಗ್ದಾದ್‍ನಲ್ಲಿ ಇಂತಹ ಬ್ಯಾಟರಿ ಬಳಸಿರುವುದು ಅನೇಕ ಊಹೆಗಳಿಗೆ ಕಾರಣವಾಗುತ್ತದೆ.

ಕಬ್ಬಿಣದ ಕಂಬ
ಸಾಮಾನ್ಯವಾಗಿ ಕಂಬಗಳು ಪುರಾತನ ಸಂಸ್ಕೃತಿಯ ವೈಜ್ಞಾನಿಕ ಪ್ರಗತಿಯನ್ನು ಸೂಚಿಸುವುದಿಲ್ಲ. ಆದರೆ ದೆಹಲಿಯ ವಾಸ್ತುಶಿಲ್ಪ ಆಧಾರಿತ 23 ಅಡಿ ಎತ್ತರದ ಕಬ್ಬಿಣದ ಕಂಬವು ಖಚಿತವಾಗಿ ವೈಜ್ಞಾನಿಕ ಮಾಹಿತಿ ಒಳಗೊಂಡಿದೆ. ಈ ಸ್ತಂಭವು ಆಧುನಿಕ ವಿಜ್ಞಾನಿಗಳಿಗೆ ಆಸಕ್ತಿದಾಯಕವಾಗಿದೆ. ಏಕೆಂದರೆ ಇದು ನಿರ್ಮಾಣವಾಗಿ 1600ಕ್ಕೂ ಹೆಚ್ಚು ವರ್ಷಗಳಾಗಿದ್ದರೂ ತುಕ್ಕು ಹಿಡಿಯದೇ ಇರುವುದು ಎಲ್ಲರ ಸೋಜಿಗಕ್ಕೆ ಕಾರಣವಾಗಿದೆ. ಕಬ್ಬಿಣವು ನೀರು ಅಥವಾ ತಂಪಾದ ವಾತಾವರಣದಿಂದ ತುಕ್ಕು ಹಿಡಿಯುತ್ತದೆ ಎಂದು ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗೂ ಗೊತ್ತಿರುವ ಒಂದು ವೈಜ್ಞಾನಿಕ ಸತ್ಯ.

6000 ಕಿಲೋ ಗ್ರಾಂ ತೂಕವಿರುವ ಈ ಸ್ತಂಭವು ಇಂದಿನ ಪುರಾತತ್ವಜ್ಞರ ಮತ್ತು ವಿಜ್ಞಾನಿಗಳ ಸ್ಪೂರ್ತಿದಾಯಕ ವಿಷಯವಾಗಿದೆ. ದೆಹಲಿಯು ತಂಪಾದ ಪ್ರದೇಶವಾಗಿದೆ. ಆದಾಗ್ಯೂ ಈ ಸ್ತಂಭವು ಹವಾಮಾನದ ವೈಪರೀತ್ಯಗಳಿಂದ ಯಾವುದೇ ಬದಲಾವಣೆ ಹೊಂದದೇ ಇರುವುದು ಅಚ್ಚರಿಯ ವಿಷಯವಾಗಿದೆ. ಲೋಹಶಾಸ್ತ್ರದ ಬಗ್ಗೆ ಅಷ್ಟೊಂದು ಮಹತ್ವ ಇಲ್ಲದ ಕಾಲದಲ್ಲಿ ಇಂತಹ ಅದ್ಬುತ ರಚನೆ ಮಾಡಿರುವುದು ಅಂದಿನ ಲೋಹದ ಕೆಲಸಗಾರರ ಪರಾಕ್ರಮವನ್ನು ಮೆಚ್ಚಲೇಬೇಕು. ಇಂತಹ ಅನೇಕ ವಾಸ್ತುಶಿಲ್ಪಗಳು ಕಾಲಾಂತರದಲ್ಲಿ ನಾಶ ಹೊಂದಿವೆ. ಆದರೆ ಇದು ಇಂದಿಗೂ ತುಕ್ಕು ಹಿಡಿಯದೇ ಮತ್ತು ಹಾಳಾಗದೇ ಅಚಲವಾಗಿ ನಿಂತಿರುವುದು ಅಚ್ಚರಿಯಲ್ಲವೇ?

ಲಾಂಗ್ಯೂ ಗುಹೆಗಳು
ಗುಹೆಗಳು ಮಾನವನ ವಿಕಾಸದೊಂದಿಗೆ ತಳಕು ಹಾಕಿಕೊಂಡಿವೆ. ಗುಹೆಗಳಿಂದ ಪ್ರಾರಂಭವಾದ ಮಾನವನ ಜೀವನ ಇಂದು ದೊಡ್ಡ ದೊಡ್ಡ ಪರ್ವತಗಳನ್ನು ಕೊರೆದು ಸುರಂಗ ಮಾಡುವ ಹಾಗೂ ಸಮುದ್ರದಾಳದಲ್ಲಿ ದೈತ್ಯ ರಂಧ್ರಗಳನ್ನು ಕೊರೆಯುವ ಹಂತಕ್ಕೆ ತಲುಪಿದೆ. ಇದು ನಿಸ್ಸಂಶಯವಾಗಿ ಒಂದು ದೊಡ್ಡ ಸಾಧನೆ. ಇದಕ್ಕೆ ಕಾರಣ ಆಧುನಿಕ ತಂತ್ರಜ್ಞಾನ. ನಾವೀಗ ಈ ಗುಹೆಗಳು ಅಥವಾ ಸುರಂಗಗಳ ಬಗ್ಗೆ ಪ್ರಸ್ತಾಪಿಸುತ್ತಿಲ್ಲ. ಬದಲಿಗೆ 2500 ವರ್ಷಗಳ ಹಿಂದೆ ನಿರ್ಮಾಣವಾದ ಲಾಂಗ್ಯೂ ಗುಹೆಗಳ ಬಗ್ಗೆ.

 

 

 

OLYMPUS DIGITAL CAMERA

 

ಚೀನಾದ ಝೆಜಿಯಾಂಗ್ ಪ್ರಾಂತ್ಯದ ಫಿನಿಕ್ಸ್ ಬೆಟ್ಟಗಳ ಸಾಲಿನಲ್ಲಿರುವ ಈ ಲಾಂಗ್ಯೂ ಗುಹೆಗಳು ಮಾನವ ನಿರ್ಮಿತ ಬೃಹತ್ ಗುಹೆಗಳೆಂದು ಪರಿಗಣಿತವಾಗಿವೆ. ಇಲ್ಲಿ ಒಟ್ಟು 24 ಗುಹೆಗಳಿದ್ದು ಪ್ರತಿಯೊಂದು ಗುಹೆಯೂ ಸರಾಸರಿ 1000 ಚದರ ಮೀಟರ್‍ಗಿಂತಲೂ ಹೆಚ್ಚಿನ ವ್ಯಾಪ್ತಿ ಮತ್ತು 30 ಮೀಟರ್ ಎತ್ತರ ಹೊಂದಿವೆ. ವಿಶೇಷ ಎಂದರೆ ಈ ಗುಹೆಗಳು ಸಂಪೂರ್ಣವಾಗಿ ಕಲ್ಲಿನ ಗುಹೆಗಳಾಗಿವೆ. ವಿಜ್ಞಾನ ಮತ್ತು ತಂತ್ರಜ್ಞಾನ ಬೆಳವಣಿಗೆ ಹೊಂದದ ಅಂದಿನ ಕಾಲದಲ್ಲಿ ಇಷ್ಟೊಂದು ಬೃಹತ್ ಪ್ರಮಾಣದ ಗುಹೆಗಳನ್ನು ಹೇಗೆ ಕೊರೆದರು ಎಂಬುದೇ ಸೋಜಿಗ. ಹತ್ತುಲಕ್ಷ ಘನ ಮೀಟರ್‍ಗಿಂತ ಹೆಚ್ಚಿನ ಕಲ್ಲನ್ನು ತೆಗೆದು ಹೊರಹಾಕಲಾಗಿದೆ ಎಂದು ಅಂದಾಜಿಸಲಾಗಿದೆ. ಆಧುನಿಕ ಶೈಲಿಯ ಕಟ್ಟಡಗಳಲ್ಲಿರುವಂತೆ ಗೋಡೆ, ಪಿಲ್ಲರ್ ಮತ್ತು ಸೀಲಿಂಗ್ ರಚನೆಗಳನ್ನು ಈ ಗುಹೆಗಳಲ್ಲಿ ಕಾಣಬಹುದಾಗಿದೆ. ಈ ಗುಹೆಗಳ ನಿರ್ಮಾಣದ ಬಗ್ಗೆ ಯಾವುದೇ ದಾಖಲೆ ಇಲ್ಲದಿರುವುದರಿಂದ ಅವರು ಇವನ್ನು ಏಕೆ ನಿರ್ಮಸಿದರು ಎಂಬುದೇ ಯಕ್ಷಪ್ರಶ್ನೆಯಾಗಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಇದೊಂದು ತುಂಬಾ ಆಕರ್ಷಕ ಪ್ರವಾಸಿ ತಾಣವಾಗಿದೆ.

ನಿಮ್ರಡ್ ಲೆನ್ಸ್
ನಿಮ್ರಡ್ ಲೆನ್ಸ್ ಒಂದು ನೈಸರ್ಗಿಕ ಸ್ಪಟಿಕದ ಮಸೂರವಾಗಿದ್ದು 3000 ವರ್ಷಗಳ ಹಿಂದೆ ರಚಿತವಾಗಿದೆ ಎಂದು ಅಂದಾಜಿಸಲಾಗಿದೆ. ಆಸ್ಟಿನ್ ಹೆನ್ರಿ ಲೇಯಾರ್ಡ್ ಅವರು 1850ರಲ್ಲಿ ಇರಾಕಿನ ನಿಮ್ರಡ್‍ನ ಅಸಿರಿಯಾದ ಅರಮನೆಯಲ್ಲಿ ಈ ಲೆನ್ಸ್‍ನ್ನು ಪತ್ತೆ ಮಾಡಿದರು. ಇದು 3x ಆಪ್ಟಿಕಲ್ ಲೆನ್ಸ್ ಹೊಂದಿದ್ದು, ನಿಖರವಾದ ಅಳತೆಯೊಂದಿಗೆ ಡಿಸ್ಕ್ ಆಕಾರದಲ್ಲಿ ರಚಿತವಾಗಿದೆ. ಇದು ಕ್ರಿ.ಪೂ750 ರಿಂದ ಕ್ರಿ.ಪೂ710ರ ಅವಧಿಯಲ್ಲಿ ರಚಿತವಾಗಿದೆ ಎಂದು ಅಂದಾಜಿಸಲಾಗಿದೆ. ಆದರೆ ಆ ಅವಧಿಯಲ್ಲಿ ಮಸೂರವನ್ನು ಬಳಸಿದ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಇದನ್ನು ಭೂತಗನ್ನಡಿಯಂತೆ ಅಥವಾ ಸೂರ್ಯನ ಬೆಳಕನ್ನು ಕೇಂದ್ರೀಕರಿಸಿ ಬೆಂಕಿಯನ್ನು ಉಂಟುಮಾಡುವ ಗಾಜಿನಂತೆ ಬಳಸಲಾಗುತ್ತಿತ್ತು. ಅಸಿರಿಯನ್ನರಿಗೆ ಸ್ಪಟಿಕದ ಬಗ್ಗೆ ಗೊತ್ತಿರಲಾರದ ಕಾಲದಲ್ಲಿ ಇಂತಹ ರಚನೆ ಮಾಡಿರುವುದು ಆಶ್ಚರ್ಯವೆನಿಸುತ್ತದೆ.

ಭೂಕಂಪ ಶೋಧಕ
ಸ್ಕಾಟಿಷ್ ಭೌತಶಾಸ್ತ್ರಜ್ಞ 1841ರಲ್ಲಿ ಆದುನಿಕ ಸಿಸ್ಮೋಗ್ರಾಫ್(ಭೂಕಂಪ ಸೂಚಕ ಯಂತ್ರ)ನ್ನು ಕಂಡು ಹಿಡಿದ. ಆದರೆ ಇದು ತುಂಬಾ ತಡವಾದ ಸಂಶೋಧನೆ ಎನ್ನಬಹುದು. ಏಕೆಂದರೆ ಕ್ರಿ.ಶ.132ರಲ್ಲಿಯೇ ಚೀನಿಯರು ಭೂಕಂಪ ಶೋಧಕ ಯಂತ್ರವನ್ನು ಕಂಡುಹಿಡಿದಿದ್ದಾರೆ. ಇಂತಹ ಒಂದು ಶೋಧಕ ಯಂತ್ರವನ್ನು ನಿರ್ಮಿಸಿದವರು ಹಾಂಗ್ ರಾಜವಂಶದ ಪಂಡಿತ ಝಾಂಗ್ ಚೆಂಗ್.

ಈ ಸಾಧನವು ಆರು ಅಡಿ ವ್ಯಾಸದ ದೊಡ್ಡ ಕಂಚಿನ ಪಾತ್ರೆಯಾಗಿತ್ತು. ಇದರಲ್ಲಿ ಎಂಟು ದಿಕ್ಕುಗಳಿಗೂ ಎಂಟು ಡ್ರ್ಯಾಗನ್‍ಗಳಿದ್ದು ಕೆಳಮುಖ ಮಾಡಿವೆ ಹಾಗೂ ಪಾತ್ರೆಯನ್ನು ಬೋರಲು ಹಾಕಿದಂತಿದೆ. ಪ್ರತಿಯೊಂದು ಡ್ರ್ಯಾಗನ್‍ನ ಬಾಯಿಯ ಎದುರಿಗೆ ಒಂದೊಂದು ಸಣ್ಣ ಕಂಚಿನ ಕವಚವನ್ನು ಇಡಲಾಗಿದೆ. ಈ ಉಪಕರಣದ ಒಳಗೆ ಎಂಟು ಚೆಂಡುಗಳಿದ್ದು, ಪ್ರತಿಯೊಂದು ಚೆಂಡು ಒಂದೊಂದು ಡ್ರ್ಯಾಗನ್‍ನ ಬಾಯಿಯಿಂದ ಹೊರಬಂದು ಮುಂದಿರುವ ಕವಚದೊಳಗೆ ಬೀಳುವಂತೆ ರಚಿಸಲಾಗಿದೆ. ಭೂಕಂಪ ಸಂಭವಿಸುವ ವೇಳೆ ಭೂಮಿ ಅಲುಗಾಡುತ್ತದೆ ಮತ್ತು ಯಾವ ದಿಕ್ಕಿನಲ್ಲಿ ಅದು ಸಂಭವಿಸುತ್ತದೆಯೋ ಆ ದಿಕ್ಕಿಗೆ ಈ ಉಪಕರಣ ಸ್ವಲ್ಪ ವಾಲುತ್ತದೆ. ಆಗ ಅದರಲ್ಲಿದ್ದ ಚೆಂಡು ವಾಲಿದ ದಿಕ್ಕಿನ ಕಡೆಯಿರುವ ಡ್ರ್ಯಾಗನ್‍ನ ಬಾಯಿಯಿಂದ ಎದುರಿಗಿರುವ ಕವಚದೊಳಗೆ ದೊಡ್ಡ ಶಬ್ದದೊಂದಿಗೆ ಬೀಳುತ್ತದೆ. ಭೂಕಂಪ ಯಾವ ದಿಕ್ಕಿಗೆ ಸಂಭವಿಸುತ್ತಿದೆ ಎಂಬುದು ತಿಳಿಯುತ್ತಿತ್ತು. ಕ್ರಿ.ಶ.138ರಲ್ಲಿ ಈ ಉಪಕರಣದ ಪಶ್ಚಿಮಕ್ಕಿರುವ ಒಂದು ಚೆಂಡು ಹೊರಬಂದು ಭೂಕಂಪದ ಸುಳಿವನ್ನು ನೀಡಿತು. ಆಗ ಎಲ್ಲರಿಗೂ ಇದು ಕೆಲಸ ಮಾಡುತ್ತದೆ ಎಂದು ತಿಳಿಯಿತು. ಆದರೆ ಅದು ಹೇಗೆ ಕಾರ್ಯ ನಿರ್ವಹಿಸುತ್ತದೆಯೆಂದು ನಿಖರವಾಗಿ ಇಂದಿಗೂ ತಿಳಿದಿಲ್ಲ.

ಆಂಟಿಕ್ಯೆಥೆರಾ ಯಾಂತ್ರಿಕತೆ

ಇಂದು ಯಾವುದೇ ವಿಧವಾದ ಸಂಚಾರದ ವೇಳೆ ಮೊಬೈಲ್ ಅಥವಾ ಕಂಪ್ಯೂಟರ್‍ನ ಸಹಾಯದಿಂದ ಜಿ.ಪಿ.ಎಸ್ ಆಧಾರಿತ ಮಾರ್ಗವನ್ನು ಕಂಡುಕೊಳ್ಳುತ್ತೇವೆ. ಹಿಂದಿನ ಕಾಲದಲ್ಲಿ ನೌಕಾ ಮಾರ್ಗ ಮಾತ್ರ ಹೆಚ್ಚು ಪ್ರಚಲಿತದಲ್ಲಿತ್ತು. ಅವರು ಗ್ರಹ ಮತ್ತು ನಕ್ಷತ್ರಗಳ ಚಲನೆಯನ್ನು ಆಧರಿಸಿ ಲೆಕ್ಕಾಚಾರ ಮಾಡಿ ತಮ್ಮ ಮಾರ್ಗವನ್ನು ಕಂಡುಕೊಳ್ಳುತ್ತಿದ್ದರು. ಆದರೆ ಸ್ವಲ್ಪ ಲೆಕ್ಕಾಚಾರ ತಪ್ಪಿದರೂ ಸಂಪೂರ್ಣವಾಗಿ ಮಾರ್ಗವೇ ಬದಲಾಗುತ್ತಿತ್ತು. ಆಗ ಅವರು ಬಳಸಿದ್ದು ಆಂಟಿಕ್ಯೆಥೆರಾ ಯಾಂತ್ರಿಕತೆ.

ಆಂಟಿಕ್ಯೆಥೆರಾ ಯಾಂತ್ರಿಕತೆಯು ನಿಖರವಾದ ನಾಕ್ಷತ್ರಿಕ ಚಲನೆಯನ್ನು ಪತ್ತೆಹಚ್ಚುವ ಸಾಮಥ್ರ್ಯ ಹೊಂದಿದ್ದ ವಿಸ್ಮಯಕಾರಿ ಯಂತ್ರವಾಗಿತ್ತು. ಇದು ಇಂದಿನ ಆಧುನಿಕ ಗಡಿಯಾರದಂತೆ ತ್ರಿಕೋನೀಯ ಹಲ್ಲುಗಳುಳ್ಳ ಗಿಯರ್‍ಗಳನ್ನು ಹೊಂದಿದೆ. ಇದರಲ್ಲಿ 37 ವಿವಿಧ ಚಕ್ರಗಳಿದ್ದು ಚಂದ್ರನ ಚಲನೆಯನ್ನು ಅನುಸರಿಸಿ ಗ್ರಹ, ನಕ್ಷತ್ರಗಳ ಚಲನೆ, ಗ್ರಹಣಗಳ ಬಗ್ಗೆ ಊಹಿಸಲು ಬಳಸಲಾಗುತ್ತಿತ್ತು ಎಂದು ತಿಳಿದುಬಂದಿದೆ. ಇದು ಕ್ರಿ.ಪೂ.205ಕ್ಕೂ ಹಿಂದೆಯೇ ನಿರ್ಮಾಣಗೊಂಡಿದ್ದು, ಗ್ರೀಕ್‍ನ ರೋಡ್ಸ್ ದ್ವೀಪದಲ್ಲಿ ಕಂಡುಬಂದಿದೆ. ಈ ಸಾಧನವನ್ನು 13 ಇಂಚು ಅಗಲ ಮತ್ತು 7 ಇಂಚು ಉದ್ದದ ಮರದ ಪಟ್ಟಿಗೆಯಲ್ಲಿ ಮುಚ್ಚಿಡಲಾಗಿತ್ತು.

ಲಿಕಾರ್ಗಸ್‍ನ ಲೋಟ

ಇಂದು ಯಾವುದಾದರೂ ಕರಕುಶಲ ವಸ್ತುಗಳ ಮಳಿಗೆಗೆ ಹೋದರೆ ಅಲ್ಲಿ ವಿವಿಧ ವಿನ್ಯಾಸದ ಗೃಹೋಪಯೋಗಿ ವಸ್ತುಗಳನ್ನು ಕಾಣುತ್ತೀರಿ. ಅದರಲ್ಲಿ ವಿವಿಧ ಕೆತ್ತನೆಗಳಿರುವ ಕೆಲವು ಆಕರ್ಷಕ ಗಾಜಿನ ಲೋಟಗಳೂ ಇರುತ್ತವೆ. ಆಧುನಿಕ ಜಗತ್ತಿನಲ್ಲಿ ಹೇಗೆ ಬೇಕಾದರೂ ವಸ್ತುಗಳನ್ನು ತಯಾರಿಸಬಹುದೆಂದು ಎಲ್ಲರಿಗೂ ತಿಳಿದ ವಿಚಾರ. ಆದರೆ ಕ್ರಿ.ಶ4 ನೇ ಶತಮಾನದಲ್ಲಿ ಇಂತಹ ಸುಂದರ ಲೋಟವನ್ನು ತಯಾರಿಸಲು ಸಾಧ್ಯವೇ? ಸಾಧ್ಯವಿಲ್ಲ ಎಂಬುದೇ ಎಲ್ಲರ ಉತ್ತರ. ಆದರೆ ಅಂತಹ ಸುಂದರ ಲಕ್ಷಾಂತರ ಸಣ್ಣ ತುಣುಕುಗಳುಳ್ಳ ಗಾಜಿನ ಲೋಟವನ್ನು 4ನೇ ಶತಮಾನದಲ್ಲಿಯೇ ತಯಾರಿಸಲಾಗಿತ್ತು ಎಂದರೆ ಆಶ್ಚರ್ಯವೇ? ಹೌದು ಇಂತಹದೊಂದು ಉಪಕರಣ 1600 ವರ್ಷಗಳ ಹಿಂದೆ ರೋಮನ್‍ನಲ್ಲಿ ಇತ್ತೆಂದು ತಿಳಿದು ಬಂದಿದೆ. ಇಂದಿನ ನ್ಯಾನೋ ತಂತ್ರಜ್ಞಾನಕ್ಕೆ ಸವಾಲಾದ ಉಪಕರಣವೊಂದನ್ನು ಅಂದೇ ತಯಾರಿಸಲಾಗಿತ್ತು. ಕೆಂಪು ಮತ್ತು ಹಸಿರು ಗಾಜುಗಳನ್ನು ಬಳಸಿ ತಯಾರಿಸಲಾದ ಈ ಲೋಟದ ಮೇಲೆ ವ್ಯಕ್ತಿಯ ಹಾಗೂ ಮರಬಳ್ಳಿಗಳ ಉಬ್ಬು ಚಿತ್ರಣವನ್ನು ಕಾಣಬಹುದು.

ಡಮಾಸ್ಕಸ್ ಉಕ್ಕು

ಡಮಾಸ್ಕಸ್ ಉಕ್ಕಿನ ಆಯುಧಗಳು ಕ್ರಿ.ಶ.ಮೂರನೇ ಶತಮಾನದಲ್ಲಿಯೇ ಬಳಕೆಯಾಗಿವೆ. ಲೋಹಶಾಸ್ತ್ರ ಬಳಕೆಯಾಗದ ಕಾಲದಲ್ಲಿಯೇ ಉಕ್ಕಿನ ಬಳಕೆ ಮಾಡುವ ಕಲೆ ಸಿರಿಯಾದ ಜನರಿಗೆ ತಿಳಿದಿತ್ತು ಎಂಬುದಕ್ಕೆ ಡಮಾಸ್ಕಸ್(ಸಿರಿಯಾದ ರಾಜಧಾನಿ) ಉಕ್ಕಿನ ಕತ್ತಿಗಳೇ ಸಾಕ್ಷಿ. ಡಮಾಸ್ಕಸ್ ಉಕ್ಕನ್ನು ಉತ್ಪಾದಿಸುವ ಮೂಲ ವಿಧಾನ ಇಂದಿಗೂ ನಿಖರವಾಗಿ ತಿಳಿದಿಲ್ಲ. ಆದಾಗ್ಯೂ 17ನೇ ಶತಮಾನದವರೆಗೂ ಡಮಾಸ್ಕಸ್ ಆಯುಧಗಳಿಗೆ ಹೆಚ್ಚು ಬೇಡಿಕೆ ಇತ್ತು.

ಯೊಲಿಪಿಲಾ ಉಗಿ ಇಂಜಿನ್

781ರಲ್ಲಿ ಜೇಮ್ಸ್ ವ್ಯಾಟ್ ಕಂಡುಹಿಡಿದ ಹಬೆಯಂತ್ರವು ಕೈಗಾರಿಕಾ ಕ್ಷೇತ್ರದಲ್ಲಿ ಕ್ರಾಂತಿಯನ್ನೇ ಉಂಟುಮಾಡಿತು. ಆದರೆ ಕ್ರಿ.ಶ. ಒಂದನೇ ಶತಮಾನದಲ್ಲಿಯೇ ಹಬೆಯಂತ್ರ ಇತ್ತು ಎಂದರೆ ಯಾರಿಗೆ ತಾನೇ ಆಶ್ಚರ್ಯವಿಲ್ಲ. 1ನೇ ಶತಮಾನದಲ್ಲಿ ಮೊದಲ ಬಾರಿಗೆ ಅಲೆಕ್ಸಾಂಡ್ರಿಯಾದ ನಾಯಕ ಯೊಲಿಪಿಲಾ ಈ ಸಾಧನವನ್ನು ವಿವರಿಸಿದ್ದಾನೆ. ಆದರೆ ಅದರ ಬಳಕೆ ಹೇಗೆ ಎಂಬುದು ತಿಳಿದಿಲ್ಲ. ಇದರ ಕೇಂದ್ರದಲ್ಲಿರುವ ನೀರಿನ ಧಾರಕವನ್ನು ಬಿಸಿ ಮಾಡಿದಾಗ ಟರ್ಬೈನ್ ತಿರುಗುತ್ತದೆ. ಟರ್ಬೈನ್ ತಿರುಗಿದಂತೆಲ್ಲಾ ಅದರಲ್ಲಿನ ನೀರು ತಿರುಗುತ್ತಾ ಹಬೆ ಉತ್ಪತ್ತಿ ಮಾಡುತ್ತಿತ್ತು. ಆದರೆ ಈ ಹಬೆಯನ್ನು ಯಾವುದಕ್ಕೆ ಬಳಸುತ್ತಿದ್ದರೆಂದು ತಿಳಿದು ಬಂದಿಲ್ಲ.

ಇಂತಹ ಅದೆಷ್ಟೋ ಸಲಕರಣೆಗಳು ಇತಿಹಾಸದ ಕಾಲಗರ್ಭದಲ್ಲಿ ಹೂತು ಹೋಗಿವೆ. ಅವು ಇಂದಿನ ವಿಜ್ಞಾನಕ್ಕೆ ಸವಾಲಾಗಿವೆ. ಭವಿಷ್ಯದಲ್ಲಿ ಅಂತಹ ಸಲಕರಣೆಗಳ ಬಗ್ಗೆ, ಅಂದರೆ ಅವುಗಳ ನಿರ್ಮಿಸಿದ ಕಾರ್ಯವಿಧಾನ, ಉದ್ದೇಶ ಮತ್ತು ಬಳಕೆಯ ವಿಧಾನಗಳ ಬಗ್ಗೆ ಹೆಚ್ಚಿನ ಸಂಶೋಧನೆಗಳು ನಡೆಯಲಿ ಎಂಬುದೇ ನಮ್ಮ ಆಶಯ.
-ಆರ್.ಬಿ.ಗುರುಬಸವರಾಜ ಹೊಳಗುಂದಿ


 

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Oldest
Newest Most Voted
Inline Feedbacks
View all comments
0
Would love your thoughts, please comment.x
()
x