ಪಂಜು-ವಿಶೇಷ

ಆಧುನಿಕ ಮಹಿಳೆಯರು ಶಿಲುಬೆಗೇರುವ ಪರಿ: ಶ್ರೀದೇವಿ ಕೆರೆಮನೆ

ನಾನು ಸೀತೆಯಷ್ಟು ಸಹಿಷ್ಣು, ಸರ್ವ ಸಹನೆಯವಳಲ್ಲ. ಅವಶ್ಯಕತೆ ಉಂಟಾದಲ್ಲಿ ನಾನು ವಿಪ್ಲವ ಮಾಡ ಬಲ್ಲೆ… ಪ್ರತಿ ಹಿಂಸೆಯನ್ನೂ ಮಾಡಬಲ್ಲೆ. ಕಳೆದ ಎರಡು ತಿಂಗಳಿಂದ ಡಾ. ಪ್ರತಿಭಾ ದೇವಿಯವರು ಬರೆದ, ಮೂತಿದೇವಿ ಜ್ಞಾನಪೀಠ ಪ್ರಶಸ್ತಿಯನ್ನು ಪಡೆದ ’ಯಾಜ್ಞಸೇನಿ’ ಕೃತಿಯನ್ನು ಗೌತಮ ಗಾಂವಕರರು ನನ್ನ ಕೈಗಿಟ್ಟಾಗಿನಿಂದ ಕನಿಷ್ಟ ಸಾವಿರ ಸಲ ಈ ವಾಕ್ಯವನ್ನು ಓದಿದ್ದೇನೆ. ಆಸ್ವಾದಿಸಿದ್ದೇನೆ. ಒಳಗೊಳಗೇ ಈ ವಾಕ್ಯವನ್ನು ಮಥಿಸಿದ್ದೇನೆ, ಈ ವಾಕ್ಯವನ್ನು ನನ್ನದಾಗಿಸಿಕೊಳ್ಳಲು ಪ್ರಯತ್ನವನ್ನೂ ಮಾಡಿದ್ದೇನೆ. ಬಹುಶಃ ಮಹಿಳಾ ವಾರಾಚರಣೆಯ ಈ ಸಂದರ್ಭದಲ್ಲಿ ಈ ಮಾತು ಕೇವಲ ನನಗಷ್ಟೇ ಅಲ್ಲ ಸಕಲ ಸ್ತ್ರೀ ಕುಲಕ್ಕೂ ದಾರಿಯಾಗಬಲ್ಲುದು.

ಕಳೆದ ಒಂದು ವಾರದಿಂದೀಚೆಗೆ ಮಹಿಳಾ ದಿನಾಚರಣೆಯ ಅಂಗವಾಗಿ ಎಲ್ಲಾ ಪತ್ರಿಕೆಗಳಲ್ಲಿ ಒಂದಲ್ಲಾ ಒಂದು ಲೇಖನಗಳು ಪ್ರಕಟವಾಗುತ್ತಲೇ ಇವೆ. ’ಮಹಿಳಾ ಸಮಾನತೆಯಿಂದಲೇ ಸರ್ವರ ಉದ್ಧಾರ’ (Equality for Women is Progress for All) ಎನ್ನುವ ದೊಡ್ಡ ಘೋಷವಾಕ್ಯ ಹೊಂದಿರುವ ಈ ವರ್ಷ ನಾವು ಕೇವಲ ಒಂದು ದಿನವನ್ನಷ್ಟೇ ಮಹಿಳೆಗಾಗಿ ಮೀಸಲಿಡದೇ ಇಡೀ ವಾರವನ್ನೇ ಮಹಿಳಾ ವಾರವನ್ನೇ ಮಹಿಳಾವಾರವನ್ನಾಗಿ ಆಚರಿಸಿದ್ದೇವೆ. ಇಡೀ ಒಂದು ವಾರ ಮಹಿಳೆಯ ಹಿಂದಿನ ಸ್ಥಿತಿಗತಿಯನ್ನು, ಆಧುನಿಕತೆಯನ್ನು ಎಳೆ ಎಳೆಯಾಗಿ ಬಿಡಿಸಿಡಲಾಗಿದೆ. ವೇದ ಕಾಲದಲ್ಲಿನ ಮಹಿಳೆಯರ ವೈಭವವನ್ನು, ಮನುವಿನ ಕಾಲಕ್ಕಾದ ಮಹಿಳೆಯರ ಹೀನಾಯ ಸ್ಥಿತಿಯನ್ನು, ನಂತರದ ಮಹಿಳೆಯರ ಸ್ಥಿತಿಯನ್ನು ಹಂತ ಹಂತವಾಗಿ ತೆರೆದಿಡಲಾಗಿದೆ. ಹೆಣ್ಣೆಂದರೆ ಗಂಡಿನ ಸೊತ್ತು ಎಂದು ತಿಳಿದ ಮನುವಿನ ವಾಕ್ಯಗಳನ್ನೇ ಕಂಠಸ್ಯವನ್ನಷ್ಟೇ ಅಲ್ಲದೇ ಹೃದಯಸ್ಯ ಮಾಡಿಕೊಂಡ ಭಾರತೀಯ ಮಹಿಳೆಯರ ಪಾಡು ನಿಜಕ್ಕೂ ಇಂದಿಗೂ ಒಂದು ರೀತಿಯ ಅಗ್ನಿವರ್ತುಲದ ಒಳಗಡೆ ಬೇಯುತ್ತಿರುವಂತಹ ಬದುಕು. 

ನಾವೀಗ ಇಪ್ಪತ್ತೊಂದನೆಯ ಶತಮಾನದಲ್ಲಿದ್ದೇವೆ. ನಮ್ಮ ಎರಡು ತಲೆಮಾರುಗಳ ಹಿಂದಿನಂತೆ ನಾವು ಅತ್ಯಂತ ಪರಾವಲಂಭಿ ಜೀವನ ನಡೆಸುತ್ತಿಲ್ಲ. ನಾವು ದುಡಿಯುತ್ತಿದ್ದೇವೆ. ನಮಗೆ ಅಗತ್ಯವಿರುವ ಹಣವನ್ನು ನಾವೇ ಗಳಿಸುತ್ತಿದ್ದೇವೆ. ಆದರೆ ಅದನ್ನು ನಾವೇ ನಮ್ಮ ಸ್ವಂತ ಅಭಿಪ್ರಾಯದಂತೆ ಖರ್ಚು ಮಾಡುವಷ್ಟು  ಸ್ವಾತಂತ್ರ್ಯ ಎಷ್ಟು ಮಹಿಳೆಯರಿಗೆ ಲಭಿಸಿದೆ? ನನ್ನೊಬ್ಬ ಸ್ನೇಹಿತೆಯಿದ್ದಾಳೆ.  ಇವತ್ತಿಗೂ ಆಕೆಗೆ ತನ್ನ ಎ.ಟಿ.ಎಂ.ನ ಪಿನ್ ಕೋಡ್ ಗೊತ್ತಿಲ್ಲ. ಬ್ಯಾಂಕ್ಗೆ ಹೋಗಿ ತಮಗೆ ಬೇಕಾದ ಹಣವನ್ನು ತೆಗೆಯಲು ಬರುವುದಿಲ್ಲ. ತಾನು ತಿಂಗಳಿಗೆ ಇಪ್ಪತೈದು- ಮುವತ್ತು ಸಾವಿರ ದುಡಿಯುವಾಗಲೂ ಗಂಡ  ಕೊಡುವ ಕೇವಲ ಒಂದೋ ಎರಡೋ ಸಾವಿರದಿಂದ ತನ್ನ ತಿಂಗಳ ಖರ್ಚು ವೆಚ್ಚ ನಿಭಾಯಿಸುವುದನ್ನು ಕಂಡಿದ್ದೇನೆ. ಒಂದು ತಿಂಗಳು ತನ್ನ ಆಫೀಸಿನಲ್ಲಿ ಸ್ವಲ್ಪ ಹೆಚ್ಚು ಖರ್ಚಾಯಿತೋ ಅದಕ್ಕೂ ಆಕೆ ಗಂಡನ ಎದುರು ಅಪರಾಧಿಯಂತೆ ತಲೆ ತಗ್ಗಿಸಿ ನಿಂತು ವಿವರಣೆ ನೀಡಬೇಕು. ತಿಂಗಳ ಮೊಬೈಲ್ ಕರೆನ್ಸಿ ಬೇಗ ಖರ್ಚಾದರೂ ಆತನ ಅನುಮಾನದ ದೃಷ್ಟಿ ಎದುರಿಸಬೇಕು. ’ತಾನು ದುಡಿಯುವುದಾದರೂ ಏತಕ್ಕೆ?’ ಆಕೆ ನಿರಾಶಳಾಗಿ ಎಷ್ಟೋ ಸಲ ಹೇಳಿದಾಗ ’ನೀನು ನೌಕರಿ ಮಾಡುವವಳೆಂದೇ ಮದುವೆ ಆಗಿದ್ದು, ಇಲ್ಲದಿದ್ದರೆ ನಿನ್ನನ್ಯಾರು ಮದುವೆ ಆಗುತ್ತಿದ್ದರು?’ ಎಂದು ಮುಖಕ್ಕೆ ಹೊಡೆದಂತೆ ಹೇಳಿ ಬಿಡುವ ಗಂಡ ’ನಾನೇನು ಕುಡಿಯುತ್ತೇನೆಯೇ? ಸಿಗರೇಟು ಸೇದುತ್ತೇನೆಯೇ? ಎಲ್ಲವನ್ನೂ ಸಂಸಾರಕ್ಕೇ ಬಳಸುತ್ತೇನೆ. ಕೂಡಿಡುತ್ತೇನೆ. ಆಗಲ್ಲ ಎಂದರೆ  ಹೇಳಿ ಬಿಡು. ಎಲ್ಲ ಕೆಲಸ ನೀನೆ ಮಾಡಿ ಬಿಡು. ನನಗೆ ತಿಂಗಳಿಗೆ ಎರಡು ಸಾವಿರ ಕೊಟ್ಟು ಬಿಡು. ಹಾಯಾಗಿರುತ್ತೇನೆ.’ ಎಂದು ಎ.ಟಿ.ಎಂ. ಪಾಸ್‌ಬುಕ್, ಹಾಗು ತಿಂಗಳ ಖರ್ಚು ಪಟ್ಟಿ ಎಲ್ಲವನ್ನು ತಂದು ಇವಳೆದುರಿಗೆ ಗುಪ್ಪೆ ಹಾಕಿದರೆ ಆಕೆ ನಿಜಕ್ಕೂ ನಡುಗಿ ಹೋಗುತ್ತಾಳೆ ಎಂಬುದನ್ನು ಹಲವಾರು ಸಲ ಪ್ರಯೋಗಾತ್ಮಕವಾಗಿ ಕಂಡುಕೊಂಡಿದ್ದಾನೆ. ತನ್ನಿಂದ ನಿಭಾಯಿಸಲಾಗದು ಎಂಬುದನ್ನು ಆಕೆ ತಾನಾಗಿಯೇ ಮಾನಸಿಕವಾಗಿ ಒಪ್ಪಿಕೊಳ್ಳುವಂತೆ ಮಾಡಿ ಬಿಟ್ಟಿರುವುದರಿಂದ ಆಕೆ ಇಂದಿಗೂ ಕೇವಲ ನೊಗಕ್ಕೆ ಕಟ್ಟಿದ ಎತ್ತಿನಂತೆ ಆಚೆ ಈಚೆ ನೋಡದೆ ದುಡಿಯುತ್ತಲೇ ಇದ್ದಾಳೆ. ಇದು ಕೇವಲ ನನ್ನ ಸ್ನೇಹಿತೆಯೊಬ್ಬಳ ಮಾತಲ್ಲ. ಬಹುತೇಕ ಮಹಿಳೆಯರು ಎದುರಿಸುತ್ತಿರುವ ಅತಂತ್ರತೆ ಇದು.

ಆ ಮನೆಯಲ್ಲಿ ಇಬ್ಬರೂ ಕೆಲಸಕ್ಕೆ ಹೋಗುತ್ತಾರೆ. ಒಂದೇ ಆಫೀಸಿಗೆ. ಪ್ರತಿದಿನ ಜೊತೆಯಲ್ಲಿಯೇ ಹೋಗಿ ಜೊತೆಯಲ್ಲಿಯೇ ವಾಪಸ್ ಬರುತ್ತಾರೆ. ಮನೆಗೆ ಬಂದದ್ದೇ ಉಸಿರಾಡಲೂ ಪುರುಸೊತ್ತಿಲ್ಲದೇ, ಉಟ್ಟ ಸೀರೆಯನ್ನೂ ತೆಗೆಯದೆ ಚಹಾ ಮಾಡಲು ಓಡುವಾಗ ಆಕೆಯ ಗಂಡ, ನಿಧಾನವಾಗಿ ಫ್ರೆಶ್ ಆಗಿ, ’ಥೂ ನಿನ್ನ, ಮುಖ ತೊಳೆಯಲೂ ಆಗೋದಿಲ್ವೇ? ಎಷ್ಟು ಅಸಹ್ಯ ಮಾಡಿಕೊಂಡಿರ್‍ತಿ?’ ಎನ್ನುತ್ತ ಇನ್ನೂ ಚಹಾ ಮಾಡಿಕೊಡದಿರುವುದರ ಬಗ್ಗೆ ಅಸಹನೆ ವ್ಯಕ್ತ ಪಡಿಸುತ್ತ ಬೆಳಿಗ್ಗೆ ಒಮ್ಮೆ ಓದಿದ್ದ ಪೇಪರ್‌ನ್ನು ಪುನರಾವಲೋಕನ ಮಾಡುತ್ತಿರುತ್ತಾನೆ. ಅಷ್ಟರಲ್ಲೇ ಮನೆಗೆ ಬಂದಿರುವ ಮಕ್ಕಳನ್ನೂ ಸಂಬಾಳಿಸಿ, ಅವರ ಹೊಟ್ಟೆಯನ್ನೂ ನೋಡಿಕೊಂಡು, ಅವರ ಹೋಂವರ್ಕನ್ನೂ ಮಾಡಿಸುತ್ತ, ’ತಮ್ಮ ಯಜಮಾನರಿಗೆ ಎಲ್ಲವೂ ಬಿಸಿಬಿಸಿ ಅಡುಗೆಯೇ ಆಗಬೇಕು’ ಎನ್ನುತ್ತ ರಾತ್ರಿಯ ಅಡುಗೆ ಮಾಡುತ್ತ, ಬೆಳಿಗ್ಗೆ ಉಳಿದಿದ್ದ ತೊಳಿ ಬಳಿ ಮಾಡಿಕೊಳ್ಳುತ್ತ ರಾತ್ರಿ ಹನ್ನೊಂದು ಗಂಟೆಗೆ ಆಕೆ ಮಲಗಲು ಬರುವಷ್ಟರಲ್ಲಿ ಕಾದೂ ಕಾದೂ ಕೋಪ ನೆತ್ತಿಗೇರಿಸಿಕೊಂಡವ ’ ಇಲ್ಲಿ ನಾನು ಕಾಯ್ತಿರ್‍ತೀನಿ ಅನ್ನೋದು ಗೊತ್ತಾಗೊಲ್ವಾ? ಬೇಗ ಬರೋಕೆ ಏನು ದಾಡಿ?’ ಎಂದು ರೇಗುವಾಗ ತನಗೇ ಕೇಳಿಸದಂತೆ ’ಕೆಲಸ ಮುಗಿದಿರಲಿಲ್ಲ’ ಎಂದರೆ, ಆತ ಮತ್ತಿಷ್ಟು ಕೆರಳಿ ’ಅಷ್ಟು ಕೆಲಸ ಏನಿರುತ್ತೆ? ಅಷ್ಟು ಕೆಲಸ ಇದ್ದರೆ ಮೊದಲೇ ಇಲ್ಲಿ ಬಂದು ಬಿಡು. ನಂತರ ನಿನ್ನ ಉಳಿದ ಕೆಲಸ ಮಾಡಿಕೊಳ್ಳುವೆಯಂತೆ. ನನಗೆ ನಿದ್ರೆ ಮಾಡಲು ಲೇಟಾಗುವುದಿಲ್ಲವೇ? ನಾಳೆ ಆಫೀಸ್‌ಗೆ ಹೊರಡಬೇಡವೇ?’ ಎಂದಾಗ ಈಕೆಗೋ ಮೈ ಪರಚಿಕೊಳ್ಳುವಷ್ಟು ಅಸಹನೆ. ’ತಾನೂ ಅದೇ ಆಫೀಸ್‌ಗೆ ಹೋಗುವವಳು. ತಾನೆ ಬೆಳಗೆದ್ದು ಬೆಳಗಿನ ತಿಂಡಿ, ಅಡುಗೆ, ಮಕ್ಕಳ ಊಟದ ಡಬ್ಬಿ ಎಲ್ಲವನ್ನೂ ಮಾಡಿಡಬೇಕಾದವಳು, ಇವರಿಗೇನು ಲೇಟಾಗೋದು?’ ಎನ್ನುವ ಮನದಾಳದ ಮಾತು ಅಪ್ಪಿ ತಪ್ಪಿ ಕೂಡ ಬಾಯಿಂದ ಹೊರಬರದಂತೆ ಕಚ್ಚಿ ಹಿಡಿಯುತ್ತಾಳೆ. ಆತ ಬೈಯ್ಯುತ್ತ ನಿತ್ಯಕರ್ಮಕ್ಕೆ ಜಾರಿದರೆ ಆಕೆಗೋ ಮೈಯ್ಯೆಲ್ಲ ಮುಳ್ಳುಗಳೆದ್ದಂತೆ. ಒಳಗಿನ ಆಸೆ, ಬಯಕೆಗಳೆಲ್ಲ ಕರಗಿ ಇದೊಂದು ಮುಗಿದರೆ ಸಾಕು ಎಂಬ ನಿರ್ಲಿಪ್ತತೆಗೂ ಆತನ ಅಸಹನೆ. ’ಸುಸ್ತಾಗಿದೆ’ ಎನ್ನುವ ಆಕೆಯ ಮಾತು ಪ್ರತಿದಿನದ ಮಾತು ಎಂಬಂತೆ ಆತ ಗಣನೆಗೇ ತೆಗೆದು ಕೊಳ್ಳುವುದಿಲ್ಲ. ’ನನ್ನೊಂದಿಗೆ ಹೋಗ್ತಿ, ನನ್ನೊಂದಿಗೇ ಬರ್‍ತಿ. ಉಳಿದವರನ್ನು ನೋಡು. ದಿನಾ ಎರಡೆರಡು ಬಸ್ ಹತ್ತಿ ಬರೋದಿಲ್ವಾ? ನಿನಗೇ ಅವರಿಗಿಂತ ಹೆಚ್ಚು ಸುಸ್ತಾಗುತ್ತದೆಯೇ?’ ಎಂಬ ಅವಹೇಳನದ ಮಾತನ್ನಾಡುತ ಆತ ನಿದ್ರೆಗೆ ಜಾರಿದರೆ ನಾಳೆ ಏನು ಮಾಡೋದು ಎನ್ನುವ ಯೋಚನೆಯಲ್ಲಿ ಆಕೆ ಕಾಳು ನೆನೆಸಿಲ್ಲ ಎಂದೋ, ಹಾಲು ಸರಿಯಾಗಿ ಮುಚ್ಚಲಿಲ್ಲ ಎಂದೋ ಮತ್ತೆ  ನಾಲ್ಕೈದು ಬಾರಿ ಎದ್ದು ಓಡಾಡಿ ಮಲಗುವಷ್ಟರಲ್ಲಿ ಬೆಳಕು ಮೂಡ ತೊಡಗಿರುತ್ತದೆ. ಇದೂ ಕೂಡ ಆಕೆಯೊಬ್ಬಳ ಕಥೆಯಲ್ಲ. ಯಥಾವತ್ತು ಹೀಗೇ ಇರದಿದ್ದರೂ ಮೂಲ ಕಥೆಯಲ್ಲಿನ ಅಲ್ಪ ಸ್ವಲ್ಪ ಬದಲಾವಣೆಯೊಂದಿಗೆ ಬಹುತೇಕರ ಮನೆಯಲ್ಲಿನ ಮಾಮೂಲು. 
 
ಹಾಗೆ ನೋಡಿದರೆ ಇಂದಿಗೂ ಬಹುತೇಕ ವಿಷಯಗಳಲ್ಲಿ ಹೆಣ್ಣು ಇನ್ನು ಸೆಕೆಂಡ್ಸ ಆಗಿಯೇ ಉಳಿದಿದ್ದಾಳೆ. ಅದು ಕುಟುಂಬ ನಿರ್ವಹಣೆಯಾಗಿರಬಹುದು. ಯಾವುದಾದರೂ ವಿಷಯದಲ್ಲಿ ತೀರ್ಮಾನ ತೆಗೆದುಕೊಳ್ಳುವ ವಿಷಯದಲ್ಲಿ ಇರಬಹುದು.  ಸೆಕ್ಸ ಇರಬಹುದು, ಮಕ್ಕಳನ್ನು ಪಡೆಯುವ ವಿಷಯವಾಗಿರಬಹುದು ಅಥವಾ ಮಕ್ಕಳನ್ನು ಬೆಳೆಸುವ ವಿಷಯವಾಗಿರಬಹುದು. ಎಲ್ಲದರಲ್ಲಿಯೂ ಹೆಣ್ಣು ಎರಡನೆಯವಳಾಗಿಯೇ ಇನ್ನೂ ಉಳಿದಿರೋದನ್ನು ಯಾರೂ ಅಲ್ಲಗಳೆಯಲು ಸಾಧ್ಯವಿಲ್ಲ. ಪ್ರತಿಯೊಂದರಲ್ಲೂ ಆಕೆ ಒಪ್ಪಿಗೆಯನ್ನು ಪಡೆದೇ ಮುಂದುವರಿಯಬೇಕಾದ ಸನ್ನಿವೇಶವಿದೆ.

ಇದೆಲ್ಲದರ ಹೊರತಾಗಿ ಹೆಣ್ಣಿನ ಕುರಿತಾದ ಅವಹೇಳನಕಾರಿ ಹೇಳಿಕೆಗಳು, ಹಳಸಲು ಜೋಕ್‌ಗಳು ಮತ್ತೆ ಮತ್ತೆ ಆಕೆಯನ್ನು ನಿರಾಶಾವಾದದತ್ತ ಮುಖ ಮಾಡುವಂತೆ ಮಾಡುತ್ತಿದೆ. "A Few Women have extra passion for mathematics. They minus their age, multiply the price of their clothes, and add at least a few years to the age of their best friend" ಎಂಬಂತಹ ಮಾತುಗಳು  ಹಾಗೂ ಹೆಣ್ಣೊಬ್ಬಳು ಎಂದಿಗೂ ತನ್ನ ಅಲಂಕಾರ, ಬಂಗಾರ, ಬಟ್ಟೆಯತ್ತಲಷ್ಟೇ ಗಮನ ಕೊಡುತ್ತಾಳೆ ಎಂಬಂತಹ ತಲೆತಲಾಂತರದಿಂದ ಬಂದಂತಹ ಹೇಳಿಕೆಗಳ ಪುನರುಚ್ಛಾರಗಳು ಆಕೆಯನ್ನು ಹದ್ದುಬಸ್ತಿನಲ್ಲಿಡಲು ಮಾಡಿದವುಗಳೇ ಹೊರತೂ ಬೇರೇನೂ ಅಲ್ಲ ಎಂಬುದನ್ನು ಗಂಡಸರು ಮತ್ತೆ ಮತ್ತೆ ಅರ್ಥ ಮಾಡಿಕೊಳ್ಳಬೇಕಿದೆ ಹಾಗೂ ಅದಕ್ಕೂ ಮೊದಲು ಹಾಗೆ ಹೇಳಿಸಿಕೊಂಡಾಗಲೆಲ್ಲ ಅಳುತ್ತ ಕುಳಿತುಕೊಳ್ಳುವ ಹೆಂಗಸರು ತಿಳಿಯಬೇಕಿದೆ.

ತಾನು ತ್ಯಾಗಮಯಿ ಎನ್ನಿಸಿಕೊಳ್ಳುವ ಉತ್ಸಾಹದಲ್ಲಿ ಮಹಿಳೆಯರು ಮಾಡುವ ಅವಾಂತರಗಳೇನೂ ಕಡಿಮೆ ಇಲ್ಲ. ಗಂಡನಿಂದ ಹೊಡೆಸಿಕೊಂಡೂ ’ಪಾಪ ಅವರಿಗೆ ರಾತ್ರಿ ಬಿಸಿಯಾದ ಅಡುಗೆ ಇಲ್ಲದಿದ್ದರೆ ಆಗೋಲ್ಲ’ ಎನ್ನುತ್ತ ಉಡುಗೆ ಮಾಡಿ ಉಣಡಿಸಿ ಏನೂ ಆಗದಂತೆ ತಮ್ಮನ್ನು ಒಪ್ಪಿಸಿಕೊಳ್ಳುವುದನ್ನು ಕಂಡಾಗ, ತಮ್ಮ ಗಂಡನಲ್ಲಿಯ ದರ್ಪವನ್ನು ತನ್ನ ಗಂಡು ಮಕ್ಕ್ಳಲ್ಲಿಯೂ ಕಾಣ ಬೇಕು ಎಂದು ಬಯಸುತ್ತಾ ವಂಶೋದ್ಧಾರಕನ್ನು ಬೆಳೆಸುವಲ್ಲಿ ತನ್ನತನವನ್ನೇ ಮರೆಯುವುದನ್ನು ಕಂಡಾಗ ಹೆನ್ಣು ಎಷ್ಟೋ ಸಲ ಶೋಷಣೆಗೆ ತನ್ನನ್ನು ತಾನೇ ಒಪ್ಪಿಸಿಕೊಳ್ಳುವುದನ್ನು ಇಚ್ಚಿಸುತ್ತಾಳೆ ಎನ್ನಿಸದೇ ಇರದು. ಇದಕ್ಕೆ ಉದಾಹರಣೆಯಾಗಿ ಇನ್ನೂ ಕೆಲವು ಘಟನೆಗಳನ್ನು ನೋಡಿ. ಆತನಿಂದ ಸಂದೇಶ ಬರದೇ ಊಟ ಮಾಡುವುದಿಲ್ಲ ಎಂದು ಪಣತೊಟ್ಟ ಆಕೆ ನಾಲ್ಕಾರು ದಿನ ಹೇಳದೇ ಕೇಳದೇ ಮಾಯವಾಗಿ ಬಿಡುವ ಆತನಿಗಾಗಿ ಕಾಯುತ್ತ ಊಟ ಬಿಡುತ್ತ, ಊಟ ಬಿಟ್ಟಿದ್ದಕ್ಕಾಗಿ ಆಗಾಗ ಆಸ್ಪತ್ರೆ ಸೇರಿ ಗ್ಲೂಕೋಸ್ ಹಾಕಿಸಿಕೊಳ್ಳುವಾಕೆಯನ್ನು ಕಂಡಾಗ. ದುಡಿದಿದ್ದನ್ನೆಲ್ಲ್ಲ ತಂದು ಅಪ್ಪನ ಕುಡಿತಕ್ಕೋ, ಅಣ್ಣನ ಚಟಕ್ಕೋ ಪೂರೈಸುವ ಗಾರ್ಮೆಂಟ್ ಹುಡುಗಿಯರನ್ನು ಕಂಡಾಗ, ಬೀಡಿ ಕಟ್ಟುತ್ತ ಕೂಲಿ ಕೆಲಸಕ್ಕೆ ಹೋಗುತ್ತ ಅಥವಾ ಅಲ್ಲೆಲ್ಲೋ ಫ್ಯಾಕ್ಟರಿ ಕೆಲಸಕ್ಕೆ ಹೋಗುತ್ತ ಅಲ್ಲಿನ ಗಂಡಸರ ಅಟ್ಟ ಹಾಸಕ್ಕೂ ಬಲಿಯಾಗುತ್ತ ಅಪ್ಪ, ಅಮ್ಮ ತಮ್ಮ-ತಂಗಿಯರನ್ನು ನೋಡಿಕೊಳ್ಳುತ್ತ ತನ್ನ ಭವಿಷ್ಯದ ಕುರಿತು ಕನಸು ಕಾಣುವುದನ್ನೇ ಬಿಟ್ಟಿರುವ ಅಸಂಖ್ಯಾತ ತರುಣಿಯರನ್ನು ಗಮನಿಸಿದಾಗ,  ’ನಿಜಕ್ಕೂ ನನ್ನ ಮೇಲೆ ಪ್ರೀತಿಯಿದ್ದಿದ್ದರೆ ಒಪ್ಪಿಕೊಳ್ಳುತ್ತಿದ್ದೆ.’ ಎನ್ನಿಸಿಕೊಳ್ಳುತ್ತ, ತನಗೆ ಪ್ರೀತಿ ಇದೆ ಎಂಬುದನ್ನು ತೋರಿಸಿಕೊಳ್ಳಲು ತನ್ನ ದೇಹವನ್ನೇ ಯಡುಗೊರೆಯನ್ನಾಗಿ ಕೊಟ್ಟುಕೊಳ್ಳುವ  ಹುಡುಗಿಯರನ್ನು ನೋಡಿದಾಗ ಈ ಇಮೋಷನಲ್ ಬ್ಲಾಕ್ ಮೇಲ್ ಇರುವ ತನಕ ಜಗತ್ತಿನಲ್ಲಿ ಹೆಣ್ಣು ಎಷ್ಟು ಆಧುನಿಕಳಾದರೇನು ಎನ್ನಿಸುವುದಂತೂ ಸುಳ್ಳಲ್ಲ.

ಹೌದು. ತಾನು ಎಲ್ಲವನ್ನೂ ಮಾಡಬಲ್ಲೆ ಎಂದು ಹೊರಟ ಮಹಿಳೆ ಹೊರಗೂ ಸಹಕಾರ ಸಿಗದೇ, ಮನೆಯೊಳಗೂ ಸ್ಪಂದನೆ ದೊರಕದೇ ಕಕ್ಕಾಬಿಕ್ಕಿಯಾಗುತ್ತಿದ್ದಾಳೆ. ಎಲ್ಲೋ ಕೆಲವು ಮಹಿಳೆಯರು ಮಾತ್ರ ಈ ಎಲ್ಲಾ ಸವಾಲುಗಳನ್ನು ಎದುರಿಸಿ ತಮ್ಮ ಉದ್ಯೋಗದಲ್ಲೂ ಮನೆಯೊಳಗೂ ಯಶಸ್ವಿಯಾಗುತ್ತಿದ್ದು ಅಂತಹ ಬೆರಳೆಣಿಕೆಯ ಮಹಿಳೆಯರನ್ನೇ ಎದುರಿಗಿಟ್ಟು ಮಹಿಳೆಯರು ಸ್ವಾವಲಂಭಿಗಳಾಗಿದ್ದಾರೆ, ಅವರಿಗೆ ಪೂರ್ಣಪ್ರಮಾಣದ ಸಹಕಾರ ಕುಟುಂಬದಿಂದ ಹಾಗೂ ಸಮಾಜದಿಂದ ದೊರಕುತ್ತಿದೆ ಎಂಬುದನ್ನೇ ಮಾಧ್ಯಮಗಳು ಹೈಲೈಟ್ ಮಾಡಿ, ಇಂತಹ ಮಹಿಳಾ ದಿನಾಚರಣೆಯಂದು ಅವರ ದೊಡ್ಡ ದೊಡ್ಡ ಫೋಟೋ ಹಾಕಿ, ಇನ್ನೂ  ಈ ಅಸ್ಥಿರತೆಯಿಂದ ಹೊರಬರದೇ ತೊಳಲಾಡುತ್ತಿರುವವರತ್ತ  ಒಂದು ದಿವ್ಯ ನಿರ್ಲಕ್ಷವನ್ನು ತೋರುತ್ತ, ಜಗತ್ತಿಗೆ ಭಾರತದ ಮಹಿಳೆಯರು ಮುಂದಿನ ಶತಮಾನದತ್ತ ದಾಪುಗಾಲು ಹಾಕುತ್ತಿದ್ದಾರೆ ಎಂದೇ ಬಿಂಬಿಸಲು ಹೊರಟಿವೆ.

ಅದರೆ ಈ ಮೆಟ್ರೋಪೊಲಿಟನ್ ಸಿಟಿಯ ಗೆದ್ದ ಮಹಿಳೆಯರ ಹೊರತಾಗಿ ನಮ್ಮಂತಹ ಹಳ್ಳಿಗಳಲ್ಲಿರುವ ಮಹಿಳೆಯರ ಕುರಿತೂ ಯೋಚಿಸಬೇಕಿದೆ. ಹಳೆಯದನ್ನೆಲ್ಲ ಬಿಟ್ಟು ಹೊಸದನ್ನು ತನ್ನದಾಗಿಸಿಕೊಳ್ಳುವತ್ತ ದಿಟ್ಟ ಹೆಜ್ಜೆ ಇಡುತ್ತ ಮುಂದಿನ ಜನಾಂಗದ ಮಹಿಳೆಯರಿಗೊಂದು ಹೊಸ ಮಾರ್ಗವನ್ನು ಹಾಕಿಕೊಡುವ ಸಂಕ್ರಮಣದಲ್ಲಿರುವ ನನ್ನ ತಲೆಮಾರಿನ ಮಹಿಳೆಯರು ತಮ್ಮ ಶಿಲುಬೆಯನ್ನು ತಾವೆ ಹೊರಬೇಕಿದೆ. ಅತ್ತ ಹಳೆಯದನ್ನು ಬಿಟ್ಟಿದ್ದಕ್ಕಾಗಿ ಚೂಪು ನೋಟ ಎದುರಿಸುತ್ತ, ಅವಹೇಳನದ ಮಾತನ್ನು ಕೇಳಿಸಿಕೊಳ್ಳುತ್ತಲೆ ಹೊಸ ಬೆಳಕಿಗೊಂದು ಮುನ್ನುಡಿ ಬರೆಯುವತ್ತ ಹೆಜ್ಜೆ ಇಡಬೇಕಿದೆ. ನಮ್ಮ ಶಿಲುಬೆಗೆ ನಾವೇ ಹೆಗಲಾಗಬೇಕಿದೆ.

******                

ಕನ್ನಡದ ಬರಹಗಳನ್ನು ಹಂಚಿ ಹರಡಿ

7 thoughts on “ಆಧುನಿಕ ಮಹಿಳೆಯರು ಶಿಲುಬೆಗೇರುವ ಪರಿ: ಶ್ರೀದೇವಿ ಕೆರೆಮನೆ

  1. ಚೆನ್ನಾಗಿದೆ ಶ್ರೀದೇವಿ ಕೆರೆಮನೆ ಅವರೇ, ದಿನನಿತ್ಯ ನಡೆಯುವ ಪ್ರಸಂಗಗಳನ್ನು ಹಸಿ ಹಸಿ ಗೋಡೆ ಮೇಲೆ ಹರಳು ಒತ್ತಿದಂತೆ ಬರೆದಿದ್ದೀರಿ…… ಅಭಿನಂದನೆಗಳು….

  2. ತುಂಬ ಚೆನ್ನಾಗಿ ವಿಶ್ಲೇಷಿಸಿದ್ದೀರಿ ಶ್ರೀದೇವಿ…ಇಷ್ಟ ಆಯ್ತು

Leave a Reply

Your email address will not be published. Required fields are marked *