ಇಂದು ಆಧುನಿಕತೆಯು ಅತ್ಯಂತ ವೇಗದಲ್ಲಿ ಬೆಳೆಯುತ್ತಿರುವುದು ನಿಜಕ್ಕೂ ಸಂತೋಷದ ವಿಷಯ. ಆದರೆ ಈ ತೀವ್ರಗತಿಯ ಆಧುನಿಕತೆಯ ಬೆಳವಣಿಗೆಯಿಂದಾಗಿ ಭಾರತದಲ್ಲಿ ಆಧುನಿಕತೆಯ ಬಿಸಿ (ಶಾಖ) ಹೆಚ್ಚು ತಟ್ಟಿರುವುದು ನಗರ/ಪಟ್ಟಣಗಳಲ್ಲಿ ಎಂದು ಹೇಳಬಹುದು. ಇಂದು ಸಾಮಾಜಿಕ ಸಂಬಂಧಗಳು ಗುರು-ಹಿರಿಯರು, ತಂದೆ-ತಾಯಂದಿರು, ಸ್ತ್ರೀಯರು ತಮ್ಮ ಸ್ಥಾನಮಾನಗಳನ್ನು ಕಳೆದುಕೊಳ್ಳುತ್ತಿರುವುದು ನಿಜಕ್ಕೂ ವಿಷಾದನೀಯ ಸಂಗತಿಯಾಗಿದೆ. ಸ್ವದೇಶಿ ಮತ್ತು ವಿದೇಶಿ ಚಾನೆಲ್‍ಗಳು ಮನೋರಂಜನೆಯ ಹೆಸರಿನಲ್ಲಿ ಬಿತ್ತರಿಸುತ್ತಿರುವ ಅಶ್ಲೀಲ ಚಿತ್ರಗಳಿಂದಾಗಿ ಭಾರತೀಯ ಸಂಸ್ಕøತಿಯ ಸಂಕೇತಗಳಾದ ಸೀರೆ, ಕುಂಕುಮ, ಹಸಿರು ಬಳೆಗಳು ಇಂದು ಕಾಣಸಿಗುವುದು ಅಪರೂಪವಾಗಿದೆ. ಹೀಗೆಯೇ ಮುಂದುವರೆದರೆ ಮುಂದೊಂದು ದಿನ ಅವುಗಳನ್ನೆಲ್ಲಾ ವಸ್ತು ಸಂಗ್ರಾಹಾಲಯದಲ್ಲಿ ನೋಡಬೇಕಾದ ಪರಿಸ್ಥಿತಿ ಒದಗಿಬರಬಹುದು.
ಹಿಂದಿನ ಕಾಲದಲ್ಲಿ ಗುರುವಿಗೆ ಅಪಾರ ಗೌರವವಿತ್ತು. ಅದಕ್ಕಾಗಿಯೇ “ ಗುರುವೇ ನಮಃ” ಎಂದು ಹೇಳುತ್ತಿದ್ದರು. ಆದರೆ ಇಂದು “ ಗುರುವೇನು ಮಹಾ” ಎಂಬ ಶಬ್ದ ಕೇಳಿ ಬರುತ್ತಿದೆ. ಇಂದು ಗುರುವು ಕೇವಲ ವೇತನಕ್ಕಾಗಿ ದುಡಿಯುವವನಾಗಿದ್ದಾನೆ. ಸ್ತ್ರೀಯು ತನ್ನ ಗೌರವಯುತ ಸ್ಥಾನಮಾನ ಕಳೆದುಕೊಂಡಿದ್ದಾಳೆ. ವಿವಾಹವು ಸ್ವರ್ಗದಲ್ಲಿ ನಿಶ್ಚಯವಾಗಿರುತ್ತದೆ ಎಂಬ ಅಂಶ (Marriage is made in Heaven) ಅದು ಬಿಡಿಸಲಾಗದ ಬಂಧನವಾಗಿದೆ ಎಂದು ನಮ್ಮ ಪೂರ್ವಜರು ನಂಬಿದ್ದ ವಿವಾಹವು ಇಂದು ತನ್ನ ಮಹತ್ವವನ್ನು ಕಳೆದುಕೊಂಡಿದೆ. ಇಂದಿನ ವಿವಾಹಗಳು ಕೇವಲ ಒಪ್ಪಂದಗಳಾಗಿ ಮಾರ್ಪಾಡುಗಳಾಗುತ್ತಿವೆ. ಏಕೆಂದರೆ ಕ್ಷಣಕ್ಕೊಂದು ವಿವಾಹ ವಿಚ್ಛೇಧನ ಸಂಭವಿಸುವ ಇಂದಿನ ಕಾಲದಲ್ಲಿ ವಿವಾಹವು ಪವಿತ್ರ ಬಂಧನವಾಗುವುದು ದೂರದ ಮಾತಾಗಿದೆ.
ಮುಂಜಾನೆ ಎದ್ದು ಸ್ನಾನ ಮಾಡಿ, ಪೂಜೆ ಪುರಸ್ಕಾರಗಳಲ್ಲಿ ತೊಡಗುತ್ತಿದ್ದ ಜನ ಇಂದು ಸ್ನಾನ ಮಾಡುವುದಿರಲಿ ಮುಖ ಕೂಡ ತೊಳೆಯದೆ ಚಹಾ, ಗುಟಕಾ, ಸಿಗರೇಟ್, ಮದ್ಯಪಾನ ಮುಂತಾದ ದುಶ್ಚಟಗಳಿಂದ ತಮ್ಮ ದಿನನಿತ್ಯದ ಬದುಕನ್ನು ಆರಂಭಿಸುತ್ತಿದ್ದಾರೆ. ಇಂದು ಜನ ಜೀವನವೆಲ್ಲ ಯಾಂತ್ರಿಕವಾಗಿದೆ. ಎಲ್ಲವನ್ನೂ ಜನರು ಹಣದಿಂದಲೇ ಅಳತೆ ಮಾಡುವ ಪ್ರಸಂಗ ಒದಗಿ ಬಂದಿದೆ. ತಾನಾಯಿತು ತನ್ನ ಕೆಲಸವಾಯಿತು ಎಂದುಕೊಂಡು ಜನ ಇಂದು ಪಕ್ಕದ ಮನೆಯಲ್ಲಿ ದರೋಡೆ ನಡೆದರೂ ಈ ನಗರ ವಾಸಿಗಳಿಗೆ ತಿಳಿಯುವುದಿಲ್ಲ. ಏಕೆಂದರೆ ಆ ಮನೆಯ ಬಗ್ಗೆ ಇವರಿಗೆ ಪರಿಪೂರ್ಣ ವಿಷಯವು ತಿಳಿದಿರುವುದಿಲ್ಲ. ಬಂದವರು ದರೋಡೆಕೋರರೋ ಅಥವಾ ಆ ಮನೆಯವರೋ ಎಂದು ಇವರಿಗೆ ಗೊತ್ತಿರುವುದಿಲ್ಲ. ಸಾಮಾಜಿಕ ಸಂಬಂಧಗಳ ಕೊರತೆ, ಜೀವನದಲ್ಲಿ ಮಾನವೀಯ ಮೌಲ್ಯಗಳಿಲ್ಲದಿರುವಿಕೆಯೇ ಇದಕ್ಕೆಲ್ಲಾ ಪ್ರಮುಖ ಕಾರಣವಾಗಿದೆ.
ಇಷ್ಟೆಲ್ಲಾ ಮಾನವೀಯ ಮೌಲ್ಯಗಳು ಕ್ರಮೇಣ ಅವನತಿಯತ್ತ ಸಾಗಿದ್ದರೂ ಆಧುನಿಕತೆಯಿಂದ ಸ್ವಲ್ಪಮಟ್ಟಿಗೆ ದೂರ ಇರುವ ಹಳ್ಳಿಗಳಲ್ಲಿಂದು ಮಾನವೀಯ ಮೌಲ್ಯಗಳು ಇನ್ನೂ ತನ್ನತನವನ್ನು ಕಾಯ್ದುಕೊಂಡಿವೆ. ಹಳ್ಳಿಗಳಲ್ಲಿ ಸ್ತ್ರೀ ಗೆ ಗೌರವವಿದೆ, ಗುರು-ಹಿರಿಯರಿಗೆ, ತಂದೆ-ತಾಯಿಯರಲ್ಲಿ ಭಯ -ಭಕ್ತಿ ಇದೆ. ಅದೇ ರೀತಿ ವಿವಾಹವೆಂಬುದು ಒಂದು ಪವಿತ್ರ ಬಂಧನವಾಗಿ ಇನ್ನೂ ಉಳಿದುಕೊಂಡಿದೆ. ಆದರೂ ಇತ್ತೀಚಿನ ದಿನಗಳಲ್ಲಿ ಗ್ರಾಮೀಣ ಪ್ರದೇಶಗಳಲ್ಲೂ ನಗರ ಜೀವನ ಶೈಲಿಯ ಅವಾಂತರಗಳ ವಾಸನೆ ಸುಳಿದಾಡತೊಡಗಿರುವುದು ಆತಂಕದ ಸಮಗತಿಯೇ ಸರಿ. ಆದ್ಧರಿಂದ “ ಕೋಟೆಗೆ ಬೆಂಕಿ ಬಿದ್ದ ಮೇಲೆ ದಿಡ್ಡಿ ಬಾಗಿಲು ಹಾಕಿದಂತೆ” ಎನ್ನುವ ಗಾದೆಯಂತೆ ಅಪ್ರಜ್ಞಾಸ್ಥಿತಿಯಿಂದ ಹೊರಬಂದು ಮಾನವೀಯ ಮೌಲ್ಯಗಳ ಉಳಿವು ಮತ್ತು ಸಾಕಾರದತ್ತ ನಮ್ಮನ್ನು ನಾವು ಅರ್ಪಿಸಿಕೊಳ್ಳೋಣ, ನಮ್ಮ ಸಂಸ್ಕೃತಿಯ ಉಳಿಸಿ, ಬೆಳೆಸೋಣ..
-ಶಿವಣ್ಣ ಎಸ್.ಕೆ.
Very good article. I liked.