ಈಗ ಟೀವಿ, ಪೇಪರ್ಗಳಲ್ಲೆಲ್ಲಾ ಫುಟ್ಬಾಲು ಜ್ವರ. ಮೆಸ್ಸಿ, ರೊನಾಲ್ಡೋ, ರೋಬಿನ್ ವಾನ್ ಪರ್ಸಿ.. ಹೀಗೆ ತರಾವರಿ ಹೆಸರುಗಳದ್ದೇ ಗುಣಗಾನ ಫೇಸ್ಬುಕ್ , ಟ್ವಿಟ್ಟರ್ಗಳಲ್ಲೂ. ಈ ಜೋಶಿನ ಮಧ್ಯೆಯೇ ಆದಾಯ ತೆರಿಗೆ ಮಾಹಿತಿ ಸಲ್ಲಿಸಲು ಜುಲೈ ಮೂವತ್ತು ಕೊನೇ ದಿನ ಅನ್ನೋ ಮಾಹಿತಿ ಮೂಲೆಲೆಲ್ಲೋ ಮಿಂಚ್ತಾ ಇರತ್ತೆ. ಸಣ್ಣವರಿದ್ದಾಗಿಂದ ಟಿ.ವಿಯಲ್ಲಿ ಈ ಬಗ್ಗೆ ಜಾಹೀರಾತು ನೋಡೇ ಇರ್ತೇವೆ. ಆದ್ರೆ ಸ್ವಂತ ದುಡಿಯೋಕೆ ಶುರು ಮಾಡಿದಾಗ್ಲೇ ಇದೇನಪ್ಪಾ ಅನ್ನೋ ಪ್ರಶ್ನೆ ಹೆಚ್ಚೆಚ್ಚು ಕಾಡತೊಡಗೋದು. ನಾವು ಕಟ್ಟೋ ತೆರಿಗೆಯೇ ಸರ್ಕಾರದ ವಿವಿಧ ಯೋಜನೆಗಳಿಗೆ ಜೀವಾಳ ಅಂತ ಗೊತ್ತಿದ್ರೂ ನ್ಯಾಯಯುತವಾಗಿ ನಮ್ಮ ಆದಾಯಕ್ಕೆ ತಕ್ಕಷ್ಟು ತೆರಿಗೆ ಕಟ್ಟೋಕೆ ಹಿಂದೆ ಮುಂದೆ ನೋಡ್ತೇವೆ.ಸರ್ಕಾರಿ, ಖಾಸಗಿ ಉದ್ಯೋಗದಲ್ಲಿದ್ದೋರು ತಿಂಗಳ ಕೊನೆಯ ಸಂಬಳದ ಮಾಹಿತಿಯಲ್ಲಿ(salary slip) ಒಂದಿಷ್ಟು ದುಡ್ಡು ತರ ತರದ ಟ್ಯಾಕ್ಸಿನ ಹೆಸರಲ್ಲಿ ಕಟ್ಟಾಗೋದು ನೋಡಿ ಬೇಜಾರಾಗಿರ್ತಾರೆ. ತಿಂಗಳಾ ಸಂಬಳದಲ್ಲಿ ಮುರ್ಕೊಂಡಿದ್ದಲ್ದೇ ವರ್ಷಾಂತ್ಯದಲ್ಲಿ ಇದೇನೋ IT Returns Filing ಅಂತ ಬಂದಾಗ ಎಷ್ಟು ಸಲ ಅಂತ ಕಟ್ಟೋದಪ್ಪಾ ಟ್ಯಾಕ್ಸು ಅನಿಸಿಬಿಡತ್ತೆ. ಆದ್ರೆ ಈ IT Returns Filing ಅಥವಾ ಆದಾಯ ತೆರಿಗೆ ಮಾಹಿತಿ ಅಂದ್ರೆ ಮತ್ತೊಂದು ಸಲ ತೆರಿಗೆ ತುಂಬೋದು ಅಂತಲ್ಲ. ಬದಲಿಗೆ ವರ್ಷದಲ್ಲಿ ನೀವೆಷ್ಟು ದುಡೀತಿದೀರ ಅನ್ನೋದ್ನ ಸರ್ಕಾರಕ್ಕೆ ತಿಳಿಸೋ ಒಂದು ಮಾರ್ಗ ಅಷ್ಟೇ. ಈ IT returns ಅಂದ್ರೆ ಐಟಿ, ಬಿ.ಟಿ ಕಂಪೆನಿಯಲ್ಲಿರೋರಿಗೆ ಮಾತ್ರ. ಲಕ್ಷ, ಲಕ್ಷ ದುಡೀತಾರಲ್ಲ ಆ ಜನ, ಅವ್ರು ಕಟ್ಲಿ. ನಾನ್ಯಾಕೆ ಕಟ್ಬೇಕು ಅಂತಾರೆ ಕೆಲೋರು , ನಾನೇನಾದ್ರೂ ನನ್ನ ಆದಾಯದ ಬಗ್ಗೆ ಈ IT Returns Filing ಅಲ್ಲಿ ಹೇಳಿಬಿಟ್ಟೆ ಅಂದ್ರೆ ಸರ್ಕಾರಕ್ಕೆ ಅದೆಷ್ಟೋ ಟ್ಯಾಕ್ಸ್ ಕಟ್ಟಬೇಕಾಗಿ ಬರಬಹುದು. ಅದೂ ಅಲ್ದೇ ಒಂದು ಸಲ ತುಂಬಿದ ತಪ್ಪಿಗೆ ಜೀವಮಾನವಿಡೀ ಸರ್ಕಾರ ನನ್ನಿಂದ ತೆರಿಗೆ ಕೇಳಬಹುದು ಅಂತ್ಲೂ ಅಂತಾರೆ ಉಳಿದೋರು. ಆದ್ರೆ ಈ ತರದ್ದೆಲ್ಲಾ ಶುದ್ದ ತಪ್ಪು ಕಲ್ಪನೆ.ಸರ್ಕಾರಿ, ಖಾಸಗಿ ಉದ್ಯಮದಲ್ಲಿದ್ದೋರು ಮಾತ್ರವೇ ತಮ್ಮ ಆದಾಯದ ಮಾಹಿತಿ ತುಂಬಬೇಕು ಅಂತಲ್ಲ. ಸ್ವಂತ ಉದ್ಯೋಗ ನಡೆಸ್ತಿರೋರು, ಡೈರಿ, ಕೋಳಿ, ಮೊಲಗಳ ಫಾರಂ ನಡೆಸ್ತಿರೋರು, ನರ್ಸರಿ ನಡೆಸ್ತಿರೋರು, ಯಾವುದೋ ಕೈಗಾರಿಕೆ ಸ್ಥಾಪಿಸಿರೋರು, ಕೃಷಿಕರು.. ಹೀಗೆ ಯಾರು ಬೇಕಾದ್ರೂ ತಮ್ಮ ವಾರ್ಷಿಕ ಆದಾಯದ ಮಾಹಿತಿ ಕೊಡಬಹುದು.
ಈ ಆದಾಯ ತೆರಿಗೆ ಮಾಹಿತಿ ತುಂಬೋದಿದ್ಯಲ್ಲಾ ಅದು ನಿಮ್ಮ ಪ್ರಾಮಾಣಿಕ ದುಡಿಮೆಯಿಂದ ಗಳಿಸಿದ ಸಂಪತ್ತಿಗೆ ಒಂದು ದಾಖಲಾತಿ ಅಷ್ಟೇ. ಇನ್ನೂ ಸಿಂಪಲ್ಲಾಗಿ ಹೇಳ್ಬೇಕು ಅಂದ್ರೆ ಎಲ್ಲೋ ಲೂಟಿ ಮಾಡಿ ದಿನವೊಂದರಲ್ಲೇ ಐವತ್ತು ಸಾವಿರ ಗಳಿಸಿದ ಕಳ್ಳನಿಗೂ , ಯಾವ್ಯಾವ್ದೋ ಹಗರಣ ಮಾಡಿ, ಅನ್ಯಾಯದ ಮಾರ್ಗಗಳಿಂದ ಐವತ್ತು ಸಾವಿರ ಸಂಪಾದಿಸಿದವನಿಗೂ , ತಿಂಗಳುಗಟ್ಟಲೇ ಕಷ್ಟಪಟ್ಟು ಐವತ್ತು ಸಾವಿರ ಕೂಡಿಟ್ಟ ನಿಮಗೂ ವ್ಯತ್ಯಾಸ ಕಲ್ಪಿಸೋ ಒಂದು ವಿಧಾನವಷ್ಟೇ ಈ ಆದಾಯ ತೆರಿಗೆ ಮಾಹಿತಿ ಸಲ್ಲಿಕೆ. ನೀವು ಸಂಪಾದಿಸಿದ್ದೆಲ್ಲಾ ನ್ಯಾಯಯುತ ಮಾರ್ಗಗಳಿಂದಲೇ, ಅದ್ಯಾವ್ದೂ ಕಪ್ಪು ಹಣವಲ್ಲ ಅಂತ ಹೇಳಿ ಸರ್ಕಾರ ಪ್ರತಿ ವರ್ಷ ಒಂದು ಪ್ರಮಾಣಪತ್ರ ಕೊಡತ್ತೆ. ಅದನ್ನು ಪಡೆಯೋ ವಿಧಾನವೇ ಈ ಆದಾಯ ತೆರಿಗೆ ಮಾಹಿತಿ ಸಲ್ಲಿಕೆ.
ಹೌದು. ನಾವ್ಯಾಕೆ ನಮ್ಮ ಆದಾಯದ ಬಗ್ಗೆ ಸರ್ಕಾರಕ್ಕೆ ತಿಳಿಸಬೇಕು ಮತ್ತು ಗಳಿಸಿದ ಆದಾಯಕ್ಕೆ ತೆರಿಗೆ ತುಂಬೇಕು ?
ನಮ್ಮ ಆದಾಯದ ಬಗ್ಗೆ ಸರ್ಕಾರಕ್ಕೆ ತಿಳಿಸೋದು ಪ್ರಜ್ಞಾವಂತ ಭಾರತದ ಜವಾಬ್ದಾರಿಯುತ ನಾಗರೀಕರಾದ ನಮ್ಮೆಲ್ಲರ ಕರ್ತವ್ಯ. ಓದುವಾಗ ವಿದ್ಯಾರ್ಥಿವೇತನ ಬೇಕು, ಕೃಷಿ ಸಾಲಕ್ಕೆ ಸಬ್ಸಿಡಿ ಬೇಕು, ತಗೊಂಡ ಸಾಲ ಮನ್ನಾ ಮಾಡಬೇಕು, ಗ್ಯಾಸ ಮೇಲೆ ಸರ್ಕಾರ ಸಬ್ಸಿಡಿ ಕೊಡಬೇಕು, ಮೇಲೆ ಪಾಕಿ, ಚೀನೀಯರಿಂದ , ಕೆಳಗೆ ಕಡಲ್ಗಳ್ಳರಿಂದ, ಬಂಡುಕೋರರಿಂದ ರಕ್ಷಣೆ ಕೊಡೋ ಸೈನ್ಯ ಬೇಕು ಅಂತ ಸರ್ಕಾರದಿಂದ ನೂರೆಂಟು ನಿರೀಕ್ಷೆಗಳನ್ನಿಟ್ಟುಕೊಳ್ಳೋ ನಾವು ಸರ್ಕಾರಕ್ಕೆ ಇದಕ್ಕೆಲ್ಲಾ ದುಡ್ಡೆಲ್ಲಿಂದ ಬರುತ್ತೆ ಅಂತ ಯೋಚ್ನೆ ಮಾಡಿದೀವಾ ? ನಾವು ವಾಸವಿರೋ ಭೂಮಿ, ಸೇವಿಸ್ತಿರೋ ಗಾಳಿ, ಕುಡಿತಿರೋ ನೀರು ಯಾರೋ ದುಷ್ಕರ್ಮಿಗಳ ಕೈಗೆ ಸಿಕ್ಕಿ ನಿರುಪಯುಕ್ತವಾಗದಂತೆ ಪ್ರತ್ಯಕ್ಷ/ಪರೋಕ್ಷವಾಗಿ ತಡೀತಿರೋ ಸರ್ಕಾರಕ್ಕೆ ಅದನ್ನೆಲ್ಲಾ ಮಾಡೋದು ಹೇಗೆ ಸಾಧ್ಯವಾಯ್ತು ಅಂತ ಯೋಚಿಸಿದ್ದೀವಾ ? ನಾವೇನೋ ನಮ್ಮ ಪಾಡಿಗೆ ಸಂಪಾದನೆ ಮಾಡಿಕೊಂಡು ಇದ್ದುಬಿಡುತ್ತೇವೆ, ಯಾರ ನೆರವೂ ಬೇಡವೆಂದ್ರೂ ಒಂದಿಲ್ಲೊಂದು ಸಮಯದಲ್ಲಿ ಬೇಕಾಗೋ ಪೋಲೀಸು, ಪುರಸಭೆ, ನ್ಯಾಯಲಯ, 108 ಅಂಬ್ಯುಲೆನ್ಸು, ೧೦೧ ತರದ ಸೇವೆಗಳನ್ನು, ಪ್ರವಾಹ, ಬರಗಾಲ ಬಂದಾಗ ಜನರ ಜೀವ ರಕ್ಷಿಸೋದಲ್ದೇ , ಕೊಚ್ಚಿಹೋದ ಬದುಕನ್ನು ಮತ್ತೆ ಕಟ್ಟಿಕೊಡೋಕೆ ಈ "ಸರ್ಕಾರ"ಕ್ಕೆ ದುಡ್ಡೆಲ್ಲಿಂದ ಬರುತ್ತೆ ಅಂತ ಯೋಚ್ನೆ ಮಾಡಿದೀವಾ ? ಅದಕ್ಕೆಲ್ಲಾ ಉತ್ತರ ನಾವು ತುಂಬೋ ತೆರಿಗೆ. ಯಾಕೆ ಆದಾಯದ ಮಾಹಿತಿ ಕೊಡಬೇಕು ಅನ್ನೋರಿಗೋಸ್ಕರ ಒಂದು ಉದಾಹರಣೆ. ನೀವು ವರ್ಷಕ್ಕೆ ಮೂರು ಲಕ್ಷ ಆದಾಯ ತರೋ ಯಾವುದೋ ಉದ್ದಿಮೆಯನ ಸರ್ಕಾರದಿಂದ ಮುಚ್ಚಿಟ್ಟು ಮಾಡ್ತಿದೀರ ಅಂತ್ಕೊಳ್ಳಿ. ನಿಮ್ಮ ಪ್ರಕಾರ ಅದ್ನ ಸರ್ಕಾರಕ್ಕೆ ತಿಳಿಸಿದ್ರೆ ವ್ಯಥಾ ಒಂದಿಷ್ಟು ತೆರಿಗೆ ಕಟ್ಟಬೇಕಾಗಿ ಬರಬಹುದು ಮತ್ತು ನಿಮಗೆ ಬರೋ ಲಾಭಕ್ಕೆ ಕತ್ತರಿ ಬೀಳಬಹುದು. ಆದ್ರೆ ದುರಾದೃಷ್ಟವಶಾತ್ ಸಡನ್ನಾಗಿ ಆ ಉದ್ದಿಮೆಯಲ್ಲಿ ಎರಡು ಲಕ್ಷ ಲಾಸಾಗಿಬಿಡುತ್ತೆ ಅಂತ್ಕೊಳ್ಳಿ.ಆಗ ಸರ್ಕಾರ ಏನಾದ್ರೂ ಮಧ್ಯಪ್ರವೇಶಿಸಿ ನಿಮ್ಮ ನೆರವಿಗೆ ಬರೋಕೆ ಮುಂಚೆ ನೀವು ಇಂತದ್ದೊಂದು ಮಾಡ್ತಿದೀರ ಅಂತ ಅದಕ್ಕೆ ಗೊತ್ತಿರಬೇಕಲ್ವಾ ? ಸರ್ಕಾರಕ್ಕೆ ತಿಳಿಸದೇ ಮಾಡ್ತಿರೋ ಕೆಲಸವೇ ಒಂದು ಅನ್ಯಾಯ. ಇನ್ನು ಆ ಅನ್ಯಾಯದಲ್ಲಿ ಆದ ಲಾಸಿನ ನೆರವಿಗೆ ಸರ್ಕಾರ ಬರಲಿ ಅಂದ್ರೆ !!!
ಯಾರ್ಯಾರು ತುಂಬಬಹುದು ಮತ್ತು ಎಷ್ಟೆಷ್ಟು ?
ಸರಿ, ನಾವು ಎಷ್ಟು ಸಂಪಾದನೆ ಮಾಡ್ತಿದೀವಿ ಅಂತ ಸರ್ಕಾರಕ್ಕೆ ಹೇಳಿ, ಸಂಪಾದನೆಯ ಸಮಯದಲ್ಲಿ ಸರ್ಕಾರದ ವಿವಿಧ ಸವಲತ್ತುಗಳನ್ನು ಬಳಸಿದ್ದಕ್ಕಾಗಿ ನಾವು ಸಲ್ಲಿಸೋ ಪ್ರತಿಫಲವೇ ಈ ಆದಾಯ ತೆರಿಗೆ. ನಮಗೆ ಸರ್ಕಾರ ಏನೋ ಕೊಟ್ರು . ನಾವು ಪ್ರತಿಫಲವಾಗಿ ಇನ್ನೇನೋ ಕೊಡ್ತಿದೀವಿ. ಪ್ರತಿಫಲ ಇಂತಿಷ್ಟೇ ಕೊಡ್ಬೇಕು ಅಂತ ಸರ್ಕಾರ ಕೂತ್ರೆ ಹೇಗಿರುತ್ತೆ ? ಉದಾಹರಣೆಗೆ ನೂರು ರೂ ಸಂಪಾದನೆ ಮಾಡಿದೋನಿಗೂ, ಸಾವಿರ ರೂ ಮಾಡಿದೋನಿಗೂ, ಹತ್ತು ರೂಗೂ ಒದ್ದಾಡಿದೋನಿಗೂ ನೀನು ಇಪ್ಪತ್ತು ರೂಪಾಯಿ ತೆರಿಗೆ ಕೊಡ್ಬೇಕು ಅಂದ್ರೆ !! ಪಾಪ ಹತ್ತು ರೂ ಸಂಪಾದಿಸೋನು ಸತ್ತೇ ಹೋಗ್ತಾನೆ ! ಅದಕ್ಕೆ ನಮ್ಮ ಆದಾಯಕ್ಕೆ ಅನುಗುಣವಾಗಿ ಭಿನ್ನಭಿನ್ನವಾಗಿ ತೆರಿಗೆ ವಿಧಿಸುತ್ತೆ ಸರ್ಕಾರ.
ಆ ಪಟ್ಟಿ ಹೀಗೆ ಸಾಗುತ್ತೆ.
೨ ಲಕ್ಷದ ವರೆಗಿನ ಆದಾಯಕ್ಕೆ : ಸಂಪೂರ್ಣ ತೆರಿಗೆ ವಿನಾಯಿತಿ
೨ ಲಕ್ಷದಿಂದ – ೫ ಲಕ್ಷ : ಆದಾಯದ ೧೦%
೫ ಲಕ್ಷದಿಂದ – ೧೦ ಲಕ್ಷ : ಆದಾಯದ ೨೦%
ಹತ್ತು ಲಕ್ಷದ ಮೇಲ್ಪಟ್ಟು : ಆದಾಯದ ೩೦%.
ನಿಮ್ಮ ಆದಾಯಕ್ಕನುಗುಣವಾಗಿ ನೀವೆಷ್ಟು ತೆರಿಗೆ ಕಟ್ಟಬೇಕಾಗುತ್ತೆ ಅನ್ನೋ ಕೆಲ ಉದಾಹರಣೆಗಳ್ನ ನೋಡೋಣ.
ಉದಾ ೧): ನಿಮ್ಮ ವಾರ್ಷಿಕ ಆದಾಯ ೧, ೮೦,೦೦೦ ರೂ ಇದೆ ಅಂತ್ಕೊಳ್ಳಿ.
೨ ಲಕ್ಷದವರೆಗೆ ಸಂಪೂರ್ಣ ತೆರಿಗೆ ವಿನಾಯಿತಿ ಇದೆ. ಹಾಗಾಗಿ ನೀವು ಒಂದು ಪೈಸೆ ತೆರಿಗೆಯನ್ನೂ ಕಟ್ಟಬೇಕಾಗಿಲ್ಲ. ಆದ್ರೂ ನೀವು ಆದಾಯತೆರಿಗೆ ಪ್ರಮಾಣಪತ್ರವನ್ನು ಸಲ್ಲಿಸಿದ್ರೆ , "ನೋಡಪ್ಪಾ, ನನ್ನ ಆದಾಯ ಇರೋದೇ ಇಷ್ಟು. ಹಾಗಾಗಿ ನಾನು ಈ ಸಲ ತೆರಿಗೆ ಕಟ್ಟೋಕೆ ಆಗ್ತಾ ಇಲ್ಲ. ಮುಂದಿನ ಸಲ ನನ್ನ ಆದಾಯವೇನಾದ್ರೂ ೨ ಲಕ್ಷ ದಾಟಿದ್ರೆ , ಅದಕ್ಕನುಗುಣವಾಗಿ ತೆರಿಗೆ ಕಟ್ತೇನೆ. ಸರೀನಾ " ಅಂತ ಸರ್ಕಾರಕ್ಕೆ ಹೇಳಿದ ಹಾಗೆ.
ಉದಾ ೨) ನಿಮ್ಮ ವಾರ್ಷಿಕ ಆದಾಯ ೨,೫೦,೦೦೦.
೨ ಲಕ್ಷದವರೆಗೆ ಸಂಪೂರ್ಣ ತೆರಿಗೆ ವಿನಾಯಿತಿ. ಹಾಗಾಗಿ ನಿಮ್ಮ ಉಳಿದ ಐವತ್ತು ಸಾವಿರಕ್ಕೆ ಹತ್ತು ಪ್ರತಿಶತದಂತೆ ಐದು ಸಾವಿರ ತೆರಿಗೆ ಕಟ್ಟಬೇಕಾಗುತ್ತೆ.
ಉದಾ ೩) ನಿಮ್ಮ ವಾರ್ಷಿಕ ಆದಾಯ ನಾಲ್ಕು ಲಕ್ಷ:
೪-೨=೨ ಲಕ್ಷ. ಅಂದರೆ ನೀವು ಕಟ್ಟಬೇಕಾದ ತೆರಿಗೆ ಇಪ್ಪತ್ತು ಸಾವಿರ.
ಉದಾ ೪)ನಿಮ್ಮ ವಾರ್ಷಿಕ ಆದಾಯ ಆರು ಲಕ್ಷ:
ಮೊದಲ ಎರಡು ಲಕ್ಷಕ್ಕೆ ವಿನಾಯಿತಿ. ನಂತರದ ಮೂರು ಲಕ್ಷಕ್ಕೆ(ಐದು ಲಕ್ಷದವರೆಗಿನ) ಹತ್ತು% ನಂತೆ ಅಂದ್ರೆ ಮೂವತ್ತು ಸಾವಿರ + ಉಳಿದ ಒಂದು ಲಕ್ಷಕ್ಕೆ ೨೦% ನಂತೆ ೨೦ ಸಾವಿರ.
ಒಟ್ಟಿನಲ್ಲಿ ಐವತ್ತು ಸಾವಿರ ತೆರಿಗೆ
ಇಲ್ಲೊಂದು ವಿನಾಯಿತಿ:
ಐದು ಲಕ್ಷದವರೆಗಿನ ಆದಾಯವಿರೋರಿಗೆ ಆದಾಯ ತೆರಿಗೆಯ ಮಾಹಿತಿ ತುಂಬದೇ ಇರೋ ವಿನಾಯಿತಿಯನ್ನೂ ಸರ್ಕಾರ ಕೊಟ್ಟಿದೆ.ಆದ್ರೂ ಆದಾಯ ತೆರಿಗೆ ಮಾಹಿತಿ ತುಂಬೋದು ನಿಮ್ಮ ನ್ಯಾಯಯುತ ಆದಾಯಕ್ಕೊಂದು ಸರ್ಟಿಫಿಕೇಟ್ ಪಡೆದಂತೆ.
ಆದಾಯ ತೆರಿಗೆ ತುಂಬೋದ್ರಿಂದ ಏನು ಲಾಭ:
ಸರಿ. ಒಂದು ರೇಂಜಿಗೆ ನಾನ್ಯಾಕೆ ತೆರಿಗೆ ಕಟ್ಟಬೇಕು, ಎಷ್ಟು ಕಟ್ಟಬೇಕು ಅನ್ನೋದ್ರ ಬಗ್ಗೆ ಮನವರಿಕೆಯಾಗಿರಬಹುದು ನಿಮ್ಮಲ್ಲನೇಕರಿಗೆ ಇಷ್ಟರಲ್ಲೇ. ಆದ್ರೆ ನಾವು ಬಳಸೋ ಉಪ್ಪಿಂದ, ತೊಡೋ ಬಟ್ಟೆಯವರೆಗೆ, ಸಂಚರಿಸೋ ರಸ್ತೆಯಿಂದ, ಕೊಳ್ಳೋ ಕಾರಿನವರೆಗೆ ಪ್ರತಿಯೊಂದಕ್ಕೂ ತೆರಿಗೆ ಅಂತ ಕಟ್ತಾನೆ ಇದೀವಲ್ಲ. ತಿಂಗಳಾ ತಿಂಗಳಾ ಸಂಬಳದಲ್ಲೇ ಮುರ್ಕೊಂಡು ಅದನ್ನ ನೇರವಾಗಿ ಸರ್ಕಾರಕ್ಕೆ ಕಟ್ಟೋ ಕಂಪೆನಿಗಳಿರುವಾಗ ಪ್ರತ್ಯೇಕವಾಗಿ ವರ್ಷಾಂತ್ಯದಲ್ಲಿ ಮಾಹಿತಿ ಸಲ್ಲಿಸೋ ಅನಿವಾರ್ಯತೆ ಇದ್ಯಾ ಅನ್ನೋ ಗುಂಗೀಹುಳ ಇನ್ನೂ ಕೆಲವರಿಗೆ ಕಾಡ್ತಿರಬಹುದು. ಅದಕ್ಕೊಂದಿಷ್ಟು ಉತ್ತರಗಳು ಇಲ್ಲಿವೆ.
೧)ಗೃಹ ಸಾಲ, ವಾಹನ ಸಾಲ, ಮನೆ ಸಾಲ ಹೀಗೆ ತರಾವರಿ ಸಾಲ ಪಡೆಯುವಾಗ ಅನೇಕ ಬ್ಯಾಂಕುಗಳು ಕೊನೆಯ ಮೂರು ವರ್ಷದ ಆದಾಯ ತೆರಿಗೆ ದಾಖಲೆ ಕೇಳುತ್ವೆ. ಹಾಗಾಗಿ ನಿಮ್ಮ ಆದಾಯ ಎಷ್ಟೇ ಇರ್ಲಿ. ಅದರ ಬಗ್ಗೆ ಸರ್ಕಾರಕ್ಕೆ ತಿಳಿಸಿದ ಪ್ರಮಾಣಪತ್ರ ತುಂಬಾ ಮುಖ್ಯ.
೨)ವಿದೇಶ ಪ್ರಯಾಣದ ವೀಸಾ ಸಿಗಲೂ ಇದು ಮುಖ್ಯ
ನನ್ನ ಸಂಪೂರ್ಣ ಆದಾಯಕ್ಕೆ ತೆರಿಗೆ ಕಟ್ಟಬೇಕೇ ? ಅದಕ್ಕೇನೂ ವಿನಾಯಿತಿಗಳಿಲ್ಲವೇ ?
೨ ಲಕ್ಷದವರೆಗಿನ ಆದಾಯಕ್ಕೆ ವಿನಾಯಿತಿ ಇದೆ. ತದನಂತರವೂ ಹಲವು ತರಹದ ವಿನಾಯಿತಿ ಪಡೆಯಬಹುದು.ಅದಕ್ಕೆ ಬೇರೆ ಬೇರೆ ಕಾಲಂಗಳಿವೆ.
೧)೮೦ಸಿ(80C): ಇದನ್ನು ೨೦೦೫ರ ವಿತ್ತ ಆಕ್ಟಿನಲ್ಲಿ ಸೇರಿಸಲಾಗಿದೆ. ಇದರ ಪ್ರಕಾರ ಕೆಳಕಂಡ ಹೂಡಿಕೆಗಳಿಗೆ ವಿನಾಯಿತಿ ಪಡೆಯಬಹುದು
ಅ. ನಿಮ್ಮ ಆದಾಯದಲ್ಲಿ ಬರ್ತಿರೋ ಪಿ.ಎಫ್ ಹಣಕ್ಕೆ, ನೀವಾಗೆ ಕಟ್ತಿರೋ ಐಚ್ಚಿಕ ಪಿ.ಎಫ್(Voluntary PF or VPF)ಗೆ ,
ಆ.ಕಟ್ಟುತ್ತಿರೋ ಜೀವವಿಮಾ ಪಾಲಿಸಿಯ ಹಣಕ್ಕೆ
ಇ.ಬ್ಯಾಂಕಿನಲ್ಲಿ ಕಟ್ಟಬಹುದಾದ Public Provident Fund(PPF) ಗೆ
ಈ. ಈ ವರ್ಷ ಕಟ್ಟಿದ ಪೋಸ್ಟಾಪೀಸಿನ ರಾಷ್ಟ್ರೀಯ ಉಳಿತಾಯ ಖಾತೆಯ ಪ್ರಮಾಣಪತ್ರದ ಹಣ(National Savings certificate) ಗೆ
ಉ. ಮಕ್ಕಳ ಶೈಕ್ಷಣಿಕ ವೆಚ್ಚಕ್ಕೆ
ಊ. ಬ್ಯಾಂಕುಗಳಲ್ಲಿಟ್ಟ ಕೆಲವು Fixed Deposit(FD) ಗಳಿಗೆ ಈ ಕಾಲಂನಡಿಗೆ ತೆರಿಗೆ ವಿನಾಯಿತಿ ಪಡೆಯಬಹುದು. ಆದರೆ ಇವುಗಳ ಒಟ್ಟು ಹಣ ಒಂದು ಲಕ್ಷ ಮೀರಬಾರದಷ್ಟೇ.
೨)೮೦ಸಿ.ಸಿ.ಸಿ(80CCC):
ನೀವು ಖಾಸಗಿ ಉದ್ದಿಮೆಯವರಾಗಿದ್ದರೆ ನಿವೃತ್ತಿಯ ನಂತರ ಬರೋ ಪೆನ್ಷನ್ನಿಗಾಗಿ ಈಗಲೇ ಕಟ್ಟುತ್ತಿರೋ ಪ್ರೀಮಿಯಂಗಾಗಿ
೩)೮೦ಸಿ.ಸಿ.ಡಿ(80CCD):
ಭಾರತ ಸರ್ಕಾರ ೨೦೦೪ರ ಜನವರಿಯಲ್ಲಿ ಪ್ರಾರಂಭಿಸಿರೋ ರಾಷ್ಟ್ರೀಯ ನಿವೃತ್ತಿವೇತನ ಯೋಜನೆ(National Pension System[NPS])
೪)೮೦ಡಿ(80D)
ಅ. ನಿಮ್ಮ ಅಥವಾ ನಿಮ್ಮ ಮೇಲೆ ಅವಲಂಬಿತರಾದವರು(ಪೋಷಕರು, ಪತಿ/ಪತ್ನಿ, ಮಕ್ಕಳ) ವೈದ್ಯಕೀಯ ವಿಮೆಗೆ ಕಟ್ಟಿದ ಹಣಕ್ಕೆ, ಚೆಕಪ್ಪಿಗೆ ಇಲ್ಲಿ ವಾರ್ಷಿಕ ಒಂದು ಲಕ್ಷದವರೆಗೆ ವಿನಾಯಿತಿ ಪಡೆಯಬಹುದು.
೫)೮೦ಡಿ.ಡಿ(80DD)
ನಿಮ್ಮ ಅಥವಾ ನಿಮ್ಮ ಅವಲಂಬಿತರಿಗೆ ಏನಾದ್ರೂ ಅಪಘಾತ, ಅನಾರೋಗ್ಯವಾಗಿ ಅದರ ಚಿಕಿತ್ಸೆಗೆ ಅಂತ ಕಟ್ಟಿದ ಹಣವನ್ನು ವಾರ್ಷಿಕ ಒಂದು ಲಕ್ಷದವರೆಗೆ ಇಲ್ಲಿ ತೋರಿಸಬಹುದು.
೬)೮೦ಇ(80E)
ಉನ್ನತ ಶಿಕ್ಷಣಕ್ಕೆಂದು ಸಾಲ ಪಡೆದಿದ್ದರೆ ಅದರ ಬಡ್ಡಿಯ ಮೇಲೆ ಈ ಕಾಲಂನಡಿ ವಿನಾಯಿತಿ ಪಡೆಯಬಹುದು.
೭)೮೦ಯು(80U): ಅಂಗವೈಕಲ್ಯ ಮತ್ತು ಖಾಯಿಲೆಗಳ ಬಗ್ಗೆ
೮)ಸೆಕ್ಷನ್ ೨೪: ಗೃಹ ಸಾಲದ ಮೇಲೆ ವಿನಾಯಿತಿ
ಇದಿಷ್ಟೇ ಅಲ್ಲದೇ ಪ್ರಧಾನಮಂತ್ರಿ ರಾಷ್ಟ್ರೀಯ ಪರಿಹಾರ ನಿಧಿ,ಕೆಲವು ಅನಾಥಾಶ್ರಮ, ಆಸ್ಪತ್ರೆಗಳಿಗೆ ದಾನವೆಂದು ಕೊಡೋ ಹಣಕ್ಕೆ ೧೦೦% ತೆರಿಗೆ ವಿನಾಯಿತಿ, ಕೆಲವಕ್ಕೆ ೭೫% ತೆರಿಗೆ ವಿನಾಯಿತಿ ಅಂತೆಲ್ಲಾ ಇರುತ್ತೆ. ಸಂಬಳದಲ್ಲೇ ಪ್ರತ್ಯೇಕವಾಗಿ ಕೊಡೋ ವಸತಿಯ ಹಣ(HRA) , ಮತ್ತು conveyance allowannce ಗೆ ಈ ತೆರಿಗೆಯಿಂದ ವಿನಾಯಿತಿ ಇದೆ. ಇಲ್ಲಿ ಮರೆತಿರಬಹುದಾದ, ಒಮ್ಮೆಗೇ ಹೆಚ್ಚಾಗಬಹುದು ಅಂತ ಬಿಟ್ಟಿರಬಹುದಾದ ಇನ್ನೊಂದಿಷ್ಟು ವಿನಾಯಿತಿಗ ಬಗ್ಗೆ ಆದಾಯ ತೆರಿಗೆ ವೆಬ್ ಸೈಟಿಗೆ ಹೋದ್ರೆ ತಿಳಿಯಬಹುದು.ಇಷ್ಟೆಲ್ಲಾ ವಿನಾಯಿತಿಗಳ ನಂತರವೂ ಏನಾದ್ರೂ ತೆರಿಗೆ ಅಂತ ಉಳಿದಿದ್ರೆ ಅದನ್ನ ಕಟ್ಟಿದ್ರಾಯ್ತು !! ಅದು ಸರಿ , ಕಂಪೆನಿಯಿಂದ ಹೆಚ್ಚೇನಾದ್ರೂ ತೆರಿಗೆ ಕಟ್ಟಾಗಿದ್ರೆ ಏನ್ಮಾಡೋದು ಅಂದ್ರಾ ? ಈ ಹೂಡಿಕೆಗಳ ದಾಖಲೆಗಳನ್ನು ಕಂಪೆನಿಗೆ ಮಾರ್ಚು ಒಂದರೊಳಗೆ ಕಟ್ಟಿದ್ರಾಯ್ತು. ನಂತರ ಬರೋ ಫಾರ್ಮು 16 ರಲ್ಲಿ ಇವೆಲ್ಲಾ ದಾಖಲಾಗಿ ಬರುತ್ತೆ. ಅದರಲ್ಲಿ ನಿಮ್ಮಿಂದ ಇಲ್ಲಿಯವರೆಗೆ ಕಟ್ಟಾದ ತೆರಿಗೆ ಎಷ್ಟು ಮತ್ತು ಅದರಲ್ಲಿ ನಿಮಗೆ ವಾಪಾಸ್ ಬರಬೇಕಾದ್ದು ಎಷ್ಟು ಅನ್ನೋ ಮಾಹಿತಿಯೂ ಇರುತ್ತೆ. ನೀವು ಆದಾಯ ತೆರಿಗೆಯ ಮಾಹಿತಿಯನ್ನು ಸಲ್ಲಿಸಿದ ನಂತರ ಆದಾಯ ಇಲಾಖೆಯಿಂದ ಈ ಹೆಚ್ಚಿಗೆ ಕಟ್ಟಾದ ಹಣ ನಿಮಗೆ ವಾಪಾಸ್ಸೂ ಬರುತ್ತೆ. ಹಾಗಾಗಿ ಈ ಮಾಹಿತಿ ಸಲ್ಲಿಕೆಯೆಂದ ನಿಮ್ಮ ಹಣಕ್ಕೆ ಯಾವ ಮೋಸವೂ ಇಲ್ಲ ಮತ್ತು ಬರಬೇಕಾದ ಹಣ ಬಂದೇ ಬರುತ್ತೆ 🙂 ಸಮಯಕ್ಕೆ ಸರಿಯಾಗಿ ಈ ಮಾಹಿತಿ ಸಲ್ಲಿಸೋರಿಗೆ ತೆರಿಗೆಯಲ್ಲಿ ಎರಡು ಸಾವಿರ ರೂಗಳ ವಿನಾಯಿತಿಯೂ ಇದೆ 🙂
ಅದೆಲ್ಲಾ ಸರಿ. ಆದ್ರೆ ಈ ಮಾಹಿತಿಯನ್ನು ಸರ್ಕಾರಕ್ಕೆ ಸಲ್ಲಿಸೋದು ಹೇಗೆ?
ಅ. ಆದಾಯ ತೆರಿಗೆ ಇಲಾಖೆಯ ವೆಬ್ ಸೈಟಾದ https://incometaxindiaefiling.
ಆ. ಇದೇ ತರಹ ಆದಾಯ ತೆರಿಗೆ ಕಛೇರಿಗೆ ಹೋಗಿ ನೇರವಾಗಿ ತೆರಳಿ ಆದಾಯ ತೆರಿಗೆ ಮಾಹಿತಿ ಸಲ್ಲಿಸಬಹುದು
ಇ. ಇದಕ್ಕೆಂದೇ ಇರುವ ಏಜೆಂಟುಗಳ ಮೂಲಕವೂ ಮಾಹಿತಿ ಸಲ್ಲಿಸಬಹುದು.
ನಾನೆಂತೂ ಈ ವರ್ಷದ ಆದಾಯ ತೆರಿಗೆ ಮಾಹಿತಿಯನ್ನ ತುಂಬಿ ಎರಡು ಸಾವಿರದ ಹೆಚ್ಚಳ ವಿನಾಯಿತಿಯನ್ನೂ ಪಡೆದಾಯ್ತು. ನೀವು ? ಇಲ್ಲಿಯವರೆಗೆ ಆದಾಯದ ಮಾಹಿತಿ ಸಲ್ಲಿಸಿರದಿದ್ರೆ ಸಲ್ಲಿಸೋಕೆ ಮುಂದಾಗ್ತೀರಲ್ವಾ ? ಪ್ರತೀ ವರ್ಷ ಸಲ್ಲಿಸೋರಾಗಿದ್ದೆ, ಬಿಡಿ ಮಾತೇ ಇಲ್ಲ. ನಿಮಗೊಂದು ದೊಡ್ಡ ಧನ್ಯವಾದ ಸರ್ಕಾರದ ಕಡೆಯಿಂದ.. ಈ ಸಲವಾದ್ರೂ ಕಟ್ಟೋ ಪ್ರಯತ್ನದಲ್ಲಿದ್ರೆ ಅದಕ್ಕೂ ಒಂದು ಧನ್ಯವಾದ ಮುಂಚಿತವಾಗಿ.. ಈ ಆದಾಯ ತೆರಿಗೆ ಮಾಹಿತಿ ಸಲ್ಲಿಕೆಯ ಬಗ್ಗೆ ನಿಮಗಿದ್ದ ಗೊಂದಲಗಳಲ್ಲಿ ೧% ಆದ್ರೂ ಈ ಲೇಖನದಿಂದ ಬಗೆಹರಿದಿದ್ರೆ , ಬರೆದ ನನ್ನ ಶ್ರಮ ಸಾರ್ಥಕವೆಂಬ ಮಾತುಗಳೊಂದಿಗೆ ವಿರಮಿಸುತ್ತಿದ್ದೇನೆ.
*****
ಭರಪೂರ ಮಾಹಿತಿ. ಥ್ಯಾಂಕ್ಸ್ ಬಿಲಿಯನ್!!!