ಆದರ್ಶ ಶಿಕ್ಷಕ, ವಿರಳ ಯುವ ಬರಹಗಾರ ವೈ. ಬಿ. ಕಡಕೋಳ: ಡಾ. ವ್ಹಿ. ಬಿ. ಸಣ್ಣಸಕ್ಕರಗೌಡರ

ಇದೇ ಜನೇವರಿ 21 ರಂದು ಹಾರೂಗೇರಿಯ ಅಜೂರ ಪ್ರತಿಷ್ಠಾನದವರು ಕೊಡಮಾಡುವ ಜಿಲ್ಲಾ ಮಟ್ಟದ ಸಾಹಿತ್ಯ ಕೃತಿಗೆ ವೈ. ಬಿ. ಕಡಕೋಳರ ಪಯಣಿಗ ಕೃತಿ ಆಯ್ಕೆಯಾಗಿದೆ. ಅಷ್ಟೇ ಅಲ್ಲ ಸೇಡಂ ತಾಲೂಕಿನ ಮೇದಕ ಗ್ರಾಮದ ಚನ್ನಕೇಶ್ವರ ಶಿಕ್ಷಣ ಮತ್ತು ಗ್ರಾಮೀಣ ಅಭಿವೃದ್ಧಿ ಟ್ರಸ್ಟ(ರಿ) ವತಿಯಿಂದ ಶ್ರೀ ಚನ್ನಕೇಶ್ವರ ಉತ್ಸವದ ಅಂಗವಾಗಿ ಪೆಬ್ರುವರಿ 1 ರಂದು ಜರಗುವ ಮಾತೋಶ್ರೀ ನಾಗಮ್ಮ ಆಶಪ್ಪ ಬೊಪ್ಪಾಲ್ ಸ್ಮರಣಾರ್ಥ ಕೊಡಮಾಡುವ ರಾಜ್ಯಮಟ್ಟದ 15ನೇ ವರ್ಷದ ಅಕ್ಷರ ಲೋಕದ ನಕ್ಷತ್ರ ಪ್ರಶಸ್ತಿಗೆ ವೈ. ಬಿ. ಕಡಕೋಳರ “ಚಿತ್ರೆಗೊಂದು ಕಿಟಕಿ” ಕೃತಿ ಆಯ್ಕೆಯಾಗಿದ್ದು. ಕಳೆದ 31 ವರ್ಷಗಳಿಂದ ಬರವಣಿಗೆಯಲ್ಲಿ ತಮ್ಮದೇ ಛಾಪನ್ನು ಮೂಡಿಸಿರುವ ವೈ. ಬಿ. ;ಕಡಕೋಳರ ಎರಡು ಕೃತಿಗಳು ಜಿಲ್ಲೆ ಮತ್ತು ರಾಜ್ಯ ಪ್ರಶಸ್ತಿಗೆ ಆಯ್ಕೆಯಾಗಿರುವುದು ಸಾಹಿತ್ಯ ವಲಯದಲ್ಲಿ ಶಿಕ್ಷಕರಾಗಿ ವೃತ್ತಿ ಬದುಕಿನೊಂದಿಗೆ ಬರವಣಿಗೆ ಮೂಲಕ ಗುರುತಿಸಿಕೊಂಡ ಅಪರೂಪದ ವ್ಯಕ್ತಿ ವೈ. ಬಿ. ಕಡಕೋಳ ಎಂದರೆ ಅತಿಶಯೋಕ್ತಿಯೇನಲ್ಲ.

ಗಡಿಜಿಲ್ಲೆ ಬೆಳಗಾವಿ ನಾಡಿನ ಅವಿಭಾಜ್ಯ ಅಂಗ. ಈ ಜಿಲ್ಲೆಯ ಸವದತ್ತಿ ತನ್ನದೆ ಕೊಡುಗೆ ನಾಡಿಗೆ ನೀಡಿದೆ. ಏಳುಕೊಳ್ಳದ ಯಲ್ಲಮ್ಮ, ನವಿಲುತೀರ್ಥ ಆಣೆಕಟ್ಟು, ಸಿರಸಂಗಿ ಕಾಳಿಕಾಮಾತೆ ಹಾಗೂ ಲಿಂಗರಾಜರ ಕೋಟೆ, ನೂರೊಂದು ದೇವಾಲಯಗಳು, ನೂರೊಂದು ಭಾವಿಗಳಿಂದ ದಕ್ಷಿಣಕಾಶಿ ಎಂದು ಹೆಸರಾದ ಹೂಲಿ ಮೊದಲಾದ ಸ್ಥಳಗಳು ಪ್ರಸಿದ್ಧಿ ಪಡೆದಿವೆ. ‘ಸುಗಂಧವರ್ತಿ’ ಎಂದು ಹಿಂದೆ ಹೆಸರಾದ ಪುರ. ಈ ಸವದತ್ತಿ ಪಟ್ಟಣದ “ಕರಿಕುಲದಗಾಣಿಗರ” ಮನೆತನದ ಬಸಪ್ಪ-ಗಂಗವ್ವ ದಂಪತಿಗಳ ಹಿರಿಯ ಮಗನಾಗಿ 22/07/1971 ರಲ್ಲಿ ಸವದತ್ತಿಯಲ್ಲಿ ಜನಿಸಿದರು ಯಲ್ಲಪ್ಪ. ಇವರ ತಂದೆಯವರಾದ ಬಸಪ್ಪನವರು ನೀರಾವರಿ ಇಲಾಖೆಯಲ್ಲಿ ಹಿರಿಯ ಕೆಲಸ ನಿರೀಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದರು. ಮೊದಲ ಮಗು ಗಂಡಾಗಿ ಜನಿಸಿದ್ದು ತಂದೆ-ತಾಯಿಗಳಿಗೆ ಸಂತೋಷ ಉಂಟು ಮಾಡಿತ್ತು. ಬೆಳೆದು ದೊಡ್ಡವನಾದಂತೆ ಸಹಜವಾಗಿ ಶಾಲೆಗೆ ಹಾಕಿದರು. ಸವದತ್ತಿಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ನಂಬರ 2ರಲ್ಲಿ ಒಂದನೆಯ ತರಗತಿಗೆ ಸೇರಿಸಿದರು. ಇಲ್ಲಿ ಮುತಗಿ ಶಿಕ್ಷಕರ ಪ್ರಭಾವದಿಂದ ಶ್ರದ್ಧೆಯಿಂದ ಓದು ಬರಹಕಲಿಯುತ್ತ. ಗುರುಗಳು ಹೇಳಿದ ಮನೆಗೆಲಸ ಮಾಡಿತೋರಿಸಿ ಶಾಲೆಯಲ್ಲಿ ಎಲ್ಲ ಶಿಕ್ಷಕರ ಪ್ರೀತಿಯ ವಿದ್ಯಾರ್ಥಿಯಾಗಿ ನಿಷ್ಠೆಯಿಂದ ಅಧ್ಯಯನ ಮಾಡುತ್ತ ಏಳನೆಯ ತರಗತಿ ಪಾಸು ಮಾಡಿದರು.

ಇವರ ತಂದೆಯವರಿಗೆ ಸವದತ್ತಿಯಿಂದ ಮುನವಳ್ಳಿಗೆ ವರ್ಗಾವಣೆಯಾದುದರಿಂದ 8ನೆಯ ತರಗತಿಯನ್ನು ಎಸ್. ಪಿ. ಜೆ. ಜಿ. ಪ್ರೌಢಶಾಲೆಯಲ್ಲಿ ಕಲಿಯಲು ಅನಿಯಾದರು. ಇಲ್ಲಿ ಬಹಳಷ್ಟು ಪ್ರಭಾವ ಬೀರಿದ ಶಿಕ್ಷಕರೆಂದರೆ ಶ್ರೀ ಎಸ್. ವ್ಹಿ. ಚೌಡಾಪೂರ ಅವರ ಗರಡಿಯಲ್ಲಿ ಪಳಗುತ್ತ ಸಾಗಿದರು. ಹೀಗೆ ಇಲ್ಲಿ ಶ್ರದ್ಧೆಯಿಂದ ಅಧ್ಯಯನ ಮಾಡುತ್ತ ಹತ್ತನೆಯ ತರಗತಿ ಪಾಸು ಮಾಡಿದರು. ಮುಂದೆ ಪದವಿ ಪೂರ್ವ ಶಿಕ್ಷಣವನ್ನು ಇದೆ ಊರಿನ ಅಜ್ಜಪ್ಪಗಡಮಿ ಸಂಯುಕ್ತ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ಶಿಕ್ಷಣಶಾಸ್ತ್ರ ಅಧ್ಯಯನ ಆರಂಭಿಸಿದರು. ಶ್ರದ್ಧೆಯಿಂದ ಓದಿ ದ್ವಿತೀಯ ಪಿ. ಯು. ಸಿ. ಯನ್ನು ಪ್ರಥಮ ಸ್ಥಾನದಲ್ಲಿ ಉತ್ತೀರ್ಣರಾದರೂ, ಕಾಲೇಜಿನಲ್ಲೂ ಇವರೆ ಮೊದಲಿಗರಾಗಿ ಕಾಲೇಜಿಗೆ ಕೀರ್ತಿತಂದರು. ಇದೆ ಮಹಾವಿದ್ಯಾಲಯದಲ್ಲಿ ಶಿಕ್ಷಕರ ತರಬೇತಿ (ಇಂಟರಶಿಫ್‍ಕೋರ್ಸ್) ಯನ್ನು ಪೂರೈಸಿದರು.

ಕಲಿಯುವದನ್ನು ಇಷ್ಟಕ್ಕೆ ನಿಲ್ಲಿಸದೆ ಪದವಿ ಪಡೆಯಲು ಧಾರವಾಡಕ್ಕೆ ಬಂದರು. ಧಾರವಾಡದ ಮೃತ್ಯುಂಜಯ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯದಲ್ಲಿ ಬಿ. ಎ. ಪದವಿಗೆ ಪ್ರವೇಶ ಪಡೆದರು. ಇಲ್ಲಿ ರೂಮ್ ಮಾಡಿಕೊಂಡು ಅಧ್ಯಯನ ಆರಂಭಿಸಿದರು. ಈ ಮಹಾವಿದ್ಯಾಲಯದಲ್ಲಿ ಇವರ ಮೇಲೆ ಬಹಳಷ್ಟು ಪ್ರಭಾವ ಬೀರಿದ ಪ್ರಾಧ್ಯಾಪಕರೆಂದರೆ ಡಾ. ಡಿ. ಎಂ. ಹಿರೇಮಠ ಇವರ ಗರಡಿಯಲ್ಲಿ ಪಳಗುತ್ತ ಸಾಗಿದರು. ಧಾರವಾಡದ ಪರಿಸರ ಇವರ ಸಾಹಿತ್ಯಿಕ ಆಸಕ್ತಿಗೆ ನೀರೆರದು ಬೆಳೆಸಿದೆ ಈ ಹಂತದಲ್ಲಿ ಸಿನೆಮಾ ನೋಡುವ ಹವ್ಯಾಸ ಇವರಿಗೆ ಬಹಳಷ್ಟು ಬೆಳೆದಿತ್ತು. ಇವುಗಳ ಮಧ್ಯೆ-ಶಿಸ್ತಿನಿಂದ-ಶ್ರದ್ಧೆಯಿಂದ ಅಧ್ಯಯನ ಮಾಡುತ್ತ ಬಿ. ಎ. ಪದವಿಯನ್ನು ಕಾಲೇಜಿಗೆ ಮೊದಲಿಗರಾಗಿ, ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾದರು. 1992-93ರಲ್ಲಿ ಇದೆ ಕಾಲೇಜಿನಲ್ಲಿ ಆದರ್ಶ ವಿದ್ಯಾರ್ಥಿ ಪ್ರಶಸ್ತಿ ಕೂಡಾ ಪಡೆದರು.

ಉನ್ನತ ಶಿಕ್ಷಣವನ್ನು ಮುಂದೆ ಕರ್ನಾಟಕ ವಿಶ್ವವಿದ್ಯಾಲಯದಿಂದ ಬಾಹ್ಯವಾಗಿ ಎಂ. ಎ. (ಕನ್ನಡ) ಪದವಿಯನ್ನು ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾದರು. ಪದವಿ ಕಾಲೇಜಿನ ಪ್ರಾಧ್ಯಾಪಕರ ಅರ್ಹತಾ ಪರೀಕ್ಷೆ ಕೆಸೆಟ್ ಪಾಸು ಮಾಡಿದರು. ಅಲ್ಲದೆ ಡಾ. ವ್ಹಿ. ಎಸ್. ಮಾಳಿ ಅವರ ಮಾರ್ಗದರ್ಶನದಲ್ಲಿ ಎಂ. ಫಿಲ್. “ಮುನವಳ್ಳಿ ಒಂದು ಸಾಂಸ್ಕøತಿಕ ಅಧ್ಯಯನ” ಸಂಪ್ರಬಂಧ ಕನ್ನಡ ವಿಶ್ವವಿದ್ಯಾಲಯ ಹಂಪಿಗೆ ಸಾದರಪಡಿಸಿ ಎಂ. ಫಿಲ್. ಪದವಿ ಪಡೆದುಕೊಂಡರು. ಇವರಿಗೆ ಸಾಹಿತ್ಯಿಕ ಪ್ರೇರಣೆ ಎಂದರೆ ಇವರ ತಾಯಿ ಹಾಗೂ ‘ಜೀವನಾಡಿ’ ಪತ್ರಿಕೆಯ ಉಪಸಂಪಾದಕರಾದ ಅಶೋಕ ಚಿಕ್ಕಪರಪ್ಪಾ ಮತ್ತು ಕೊಡಗಿನ ಗೌರಮ್ಮನ ಕಥೆಗಳ ಪ್ರೇರಣೆಗಳಿಂದ ಬರೆಯಲು ಅನಿಯಾದರು. ನಾಡಿನ ದಿನಪತ್ರಿಕೆ, ವಾರಪತ್ರಿಕೆ, ಮಾಸಪತ್ರಿಕೆಗಳಲ್ಲಿ ಇವರ ಕಥೆ, ಕವನ, ಬಿಡಿಬರಹಗಳು ಪ್ರಕಟವಾಗಿವೆ.

ವೈ. ಬಿ. ಕಡಕೋಳ ಅವರು ದಿನಾಂಕ 19/08/1994 ರಲ್ಲಿ ಸರಕಾರಿ ಪ್ರಾಥಮಿಕ ಶಾಲಾ ಶಿಕ್ಷಕರಾಗಿ “ತೆಗ್ಗಿಹಾಳ” ಗ್ರಾಮದಲ್ಲಿ ಸೇವೆಗೆ ಸೇರಿದರು. ಹದಿನೇಳು ವರ್ಷ ಇದೆ ಒಂದು ಶಾಲೆಯಲ್ಲಿ ಸೇವೆ ಸಲ್ಲಿಸಿದ್ದಾರೆ. ಇಲ್ಲಿನ ಮಕ್ಕಳ ನೆಚ್ಚಿನ ಶಿಕ್ಷಕರಾಗಿ, ಗ್ರಾಮದ ಜನರ ಬಾಯಲ್ಲಿ ಇದ್ದಾರೆ. ಈ ಗ್ರಾಮದ ಶಾಲೆಯ ಕಂಪೌಂಡ ನಿರ್ಮಾಣ ಮಾಡಿಸಿ ಸೈ ಎನಿಸಿಕೊಂಡಿದ್ದಾರೆ. ಒಂದರಿಂದ ಐದನೇಯ ತರಗತಿವರಗೆಯಿದ್ದ ಶಾಲೆಯನ್ನು ಏಳನೆಯ ತರಗತಿಗೆ ಏರಿಸುವಲ್ಲಿ ಇವರ ಶ್ರಮಸಾಕಷ್ಟು ಇದೆ. ಸಾರ್ವಜನಿಕರನ್ನು ಸಂಪರ್ಕಕ್ಕೆ ತೆಗೆದುಕೊಂಡು ಅವರ ಸಹಕಾರದಿಂದ ಮಕ್ಕಳ ಪ್ರಗತಿಗೆ ಕಾರಣರಾದ ನಿಜವಾದ ಶಿಕ್ಷಕರು ಇವರು. ಶಿಕ್ಷಣ ಇಲಾಖೆಯಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ, ವಿವಿಧ ವಿಭಾಗಗಳಲ್ಲಿ ಶಿಸ್ತಿನಿಂದ ಕೆಲಸ ಮಾಡಿ ಮೇಲಾಧಿಕಾರಿಗಳ ಮೆಚ್ಚುಗೆಗೆ ಪಾತ್ರರಾದವರು. ಇಂತಹ ಶಿಕ್ಷಕರು ವಿರಳ ಈ ವರ್ತಮಾನದಲ್ಲಿ. ಸದ್ಯ ಸವದತ್ತಿಯ ಕ್ಷೇತ್ರ ಸಂಪನ್ಮೂಲ ಕೇಂದ್ರದಲ್ಲಿ ವಿಕಲಚೇತನ ಮಕ್ಕಳ ಸಂಪನ್ಮೂಲ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿರುವ ಇವರ ಸೇವೆ ಕೂಡ ವೈಶಿಷ್ಟ್ಯ ಅರ್ಟಗಲ್ ಕ್ಲಸ್ಟರ್ ಸಿ. ಆರ್. ಪಿ ಯಾಗಿ. ನಿಯೋಜಿತ ಬಿ. ಆರ್. ಪಿ ಯಾಗಿ ಕೂಡ ತಮ್ಮ ಈ ಇಪ್ಪತ್ತೈದು ವರ್ಷದ ಅವಧಿಯಲ್ಲಿ ಇಲಾಖೆಯ ವಿವಿಧ ಹುದ್ದೆಗಳ ಜವಾಬ್ದಾರಿಯನ್ನು ಕೂಡ ಸಮರ್ಥವಾಗಿ ನಿರ್ವಹಿಸಿರುವರು. 2014-15 ರಲ್ಲಿ ಕರ್ನಾಟಕ ಸರ್ಕಾರದ ವಿಶೇಷ ಆದರ್ಶ ಶಿಕ್ಷಕ ರಾಜ್ಯ ಪ್ರಶಸ್ತಿ ಗೌರವಕ್ಕೂ ಪಾತ್ರರಾದವರು. ನರಗುಂದ ಪತ್ರಿವನದ ಬಿಲ್ವಶ್ರೀ ಪ್ರಶಸ್ತಿಗೂ ಭಾಜನರಾದವರು. ಗಡಿಜಿಲ್ಲೆಯ ಹೊಂಗಿರಣ ಸಾಹಿತ್ಯ ಪ್ರತಿಷ್ಠಾನದ ವಿಶಿಷ್ಟ ಸಾಹಿತ್ಯ ಸಾಧಕ ಪ್ರಶಸ್ತಿ ಗೌರವಕ್ಕೂ ಪಾತ್ರರಾದವರು. ಕನ್ನಡ ಸಾಹಿತ್ಯ ಪರಿಷತ್ತು ಬೆಳಗಾವಿ ಜಿಲ್ಲಾ ಘಟಕದ ಅಧ್ಯಕ್ಷೆ ಮಂಗಲಾ ಮೆಟಗುಡ್ಡ ಸಹ ಇವರ ಸಾಹಿತ್ಯ ಸೇವೆಗೆ ಜಿಲ್ಲಾ ಘಟಕದಿಂದ ಇವರನ್ನು ಗೌರವಿಸಿದ್ದನ್ನು ಇಲ್ಲಿ ಸ್ಮರಿಸಬಹುದು.

ಶ್ರೀ ವೈ. ಬಿ. ಕಡಕೋಳ ಅವರು ಶಿಕ್ಷಕ ವೃತ್ತಿಯ ಜೊತೆಗೆ ಹವ್ಯಾಸಕ್ಕಾಗಿ ಬರವಣಿಗೆಗೆ ಇಳಿದು ಕಥೆ, ಕವನ, ಕ್ಷೇತ್ರ ಕಾರ್ಯದ ಅನುಭವದಲ್ಲಿ ಅರಳಿದ ಸಾಹಿತ್ಯ ಕೃತಿಗಳನ್ನು ಓದುಗರಿಗೆ ನೀಡಿದ್ದಾರೆ. ಇವರ ಅನುಭವದಲ್ಲಿ ಐದು ಸ್ವತಂತ್ರ ಕೃತಿಗಳು, ಎರಡು ಸಂಪಾದಿತ ಕೃತಿಗಳು ಅರಳಿವೆ. ಈಗ ಅವುಗಳ ಪರಿಚಯ ಮಾಡಿಕೊಳ್ಳೋಣ.

ಸಾವು ಬದುಕಿನ ನಡುವೆ : ಈ ಕಥಾ ಸಂಕಲನವು ಶಿವಲೀಲಾ ಪ್ರಕಾಶನ ಮುನವಳ್ಳಿಯಿಂದ 2003 ರಲ್ಲಿ ಪ್ರಕಟವಾಗಿದೆ. ಈ ಕೃತಿ 60 ಪುಟಗಳ ಹರವು ಪಡದಿದೆ. ಇದು ವೈ. ಬಿ. ಕಡಕೋಳ ಅವರ ಚೊಚ್ಚಿಲ ಕಥಾ ಸಂಕಲನವಾಗಿದೆ. ಈ ಕಥಾ ಸಂಕಲನದಲ್ಲಿ ಒಟ್ಟು 14 ಕಥೆಗಳು ಎಡೆಪಡೆದಿವೆ. ತಮ್ಮ ಕಾಲೇಜು ಜೀವನದ ಅನುಭವದಿಂದ ಹೊರಬಂದ ಕಥೆಗಳು ಇವಾಗಿವೆ. ನಿದರ್ಶನಕ್ಕಾಗಿ ಏಳು ಕಥೆಗಳನ್ನು ಮಾತ್ರ ವಿಮರ್ಶೆಗೆ ಒಳಪಡಿಸಲಾಗಿದೆ.

ಸಂಸ್ಕಾರಫಲ : ಈ ಮಕ್ಕಳ ಕಥಾ ಸಂಕಲನವು 2011 ರಲ್ಲಿ ಶಿಖರ ಸಾಹಿತ್ಯ ಪ್ರಕಾಶನ ಬೆಳಗಾವಿಯಿಂದ ಪ್ರಕಟವಾಗಿದೆ. 48 ಪುಟದ ಹರವು ಪಡದಿದೆ. 13 ಕಥೆಗಳು ಈ ಸಂಕಲನದಲ್ಲಿ ಎಡೆಪಡೆದಿವೆ. ಇಲ್ಲಿನ ಕಥೆಗಳಿಗೆ ಶಿರ್ಷಿಕೆಗಳನ್ನು ಹೀಗೆ ನೀಡಿದ್ದಾರೆ. ಶೌರ್ಯ ಮೆರೆದ ಬಾಲಕ, ವಿಜಯ ಸೇನೆ ಹಾಗೂ ಆರು ರಾಣಿಯರು, ಮಾತಿನಮರ್ಮ, ಫಲಿಸದ ತಂತ್ರಗಳು, ಪರಮಾತ್ಮನ ಅಸ್ತಿತ್ವ, ಯಾರು ದುರದೃಷ್ಟಶಾಲಿ?, ಪರೀಕ್ಷಿತನ ಜಾಣ್ಮೆ, ಮಾತೆಯ ಮೌಲ್ಯ, ನನಸೆಂದುಕೊಂಡ ಕನಸು, ಛಲತಂದ ಫಲ, ತುಂಟ ಅನಂತು, ಸಂಸ್ಕಾರ ಫಲ, ದುರಾಸೆಯಫಲ ಎಂದು ಚಂದದಿಂದ ಹೆಸರುಗಳನ್ನು ಪೋಣಿಸಿದ್ದಾರೆ.

ಚರಿತ್ರೆಗೊಂದು ಕಿಟಗಿ : ಈ ಕೃತಿ ವಿಜಯಲಕ್ಷ್ಮೀ ಪ್ರಕಾಶನ ಮೈಸೂರಿನಿಂದ 2016ರಲ್ಲಿ ಪ್ರಕಟಗೊಂಡಿದೆ. 43 ಸ್ಥಳ ನಾಮಗಳ ಪರಿಚಯವನ್ನು ಇಲ್ಲಿ ಮಾಡಲಾಗಿದೆ. ಇಲ್ಲಿನ ಎಲ್ಲ ಲೇಖನಗಳು ಈ ಹಿಂದೆ ‘ಕನ್ನಡಪ್ರಭ’ ದಿನಪತ್ರಿಕೆಯಲ್ಲಿ 43 ವಾರ ಪ್ರಕಟವಾಗಿವೆ. ಈ ಕೃತಿ 143 ಪುಟಗಳ ಹರವು ಪಡದಿದೆ. ಈ ಕೃತಿಯಲ್ಲಿ “ವೇಣುಗ್ರಾಮ-ಬೆಳಗಾವಿ” ಬಗ್ಗೆ ಹೀಗೆ ವಿಶ್ಲೇಷಿಸಿದ್ದಾರೆ.

ದೇಗುಲದರ್ಶನ : ಈ ಕೃತಿ ಬೆಂಗಳೂರಿನ ಎಸ್. ಎಲ್. ಎನ್. ಪಬ್ಲಿಕೇಶನ್‍ದಿಂದ 2018ರಲ್ಲಿ ಪ್ರಕಟವಾಗಿದೆ. ಈ ಕೃತಿ 180 ಪುಟಗಳ ಹರವು ಪಡದಿದೆ. 34 ಅಧ್ಯಾಯಗಳನ್ನು ಒಳಗೊಂಡಿದೆ. ಅಧ್ಯಾಯಗಳ ಶೀರ್ಷಿಕೆ ಹೀಗೆ ಹೆಸರಿಸಿದ್ದಾರೆ.

ಕಥೆಯಲ್ಲ ಜೀವನ : ಈ ಕೃತಿ 2018 ರಲ್ಲಿ ಶಿವಲೀಲಾ ಪ್ರಕಾಶನ ಮುನವಳ್ಳಿಯಿಂದ ಪ್ರಕಟವಾಗಿದೆ. ಇದು ಇವರ ಸಂಪಾದಿತ ಕೃತಿ. 108 ಪುಟಗಳ ಹರವು ಪಡದಿದೆ. ಇದು ಲೂಸಿ ಸಾಲ್ಡಾನ ಅವರ ಆತ್ಮಕಥೆಯನ್ನು ಕಡಕೋಳ ಅವರು ವ್ಯವಸ್ಥಿತವಾಗಿ ಸಂಪಾದಿಸಿದ್ದಾರೆ. ಲೂಸಿ ಸಾಲ್ಡಾನಾ ಅವರ ಕಷ್ಟದ ಬದುಕಿನ ನೋವು, ನಲಿವು, ವೃತ್ತಿ ಬದುಕಿನ ನೆನಪುಗಳ ಬರಹಕ್ಕೆ ಒಂದು ರೂಪಕೊಟ್ಟ ಶ್ರಮ ಎದ್ದುಕಾಣುವದು.

ಅಮೃತಧಾರೆ : ಈ ಕೃತಿ 2019 ರಲ್ಲಿ ಶಿವಲೀಲಾ ಪ್ರಕಾಶನ ಮುನವಳ್ಳಿಯಿಂದ ಪ್ರಕಟವಾಗಿದೆ. ಇದು ಇವರ ಸಂಪಾದಿತ ಎರಡನೆಯ ಕೃತಿಯಾಗಿದೆ. 144 ಪುಟದ ಹರವು ಪಡದಿದೆ. ಲೂಸಿ ಸಾಲ್ಡಾನಾ ಅವರು ಸಂಗ್ರಹಿಸಿದ ನುಡಿ ಮುತ್ತುಗಳನ್ನು ವ್ಯವಸ್ಥಿತ ರೀತಿಯಲ್ಲಿ ವೈ. ಬಿ. ಕಡಕೋಳ ಅವರು ಸಂಪಾದಿಸಿಕೊಟ್ಟಿದ್ದಾರೆ.

ಪಯಣಿಗ : ಈ ಕೃತಿ 2019 ರಲ್ಲಿ ನಿವೇದಿತಾ ಪ್ರಕಾಶನ ಬೆಂಗಳೂರುದಿಂದ ಪ್ರಕಟವಾಗಿದೆ. 220 ಪುಟದ ಹರವು ಪಡದಿದೆ. 47 ಏಳು ಅಧ್ಯಾಯಗಳನ್ನು ಈ ರೀತಿ ಮಾಡಿಕೊಂಡಿದ್ದಾರೆ. ಬೆಳಗಾವಿಯಲ್ಲಿ ಸ್ವಾಮಿ ವಿವೇಕಾನಂದರು, ಪ್ರಕೃತಿ ಕಾವ್ಯದ ಸೊಬಗಿನ ಚಿಕ್ಕ ಸೋಮೇಶ್ವರ ಕ್ಷೇತ್ರ, ಕಾಂಕ್ರೀಟ್ ನಾಡಿನ ನಡುವೆ ಶತಮಾನದ ಉದ್ಯಾನವನ, ಸುಂದರ ವಿಹಾರಧಾಮವಾದ ಬೆಳಗಾವಿ ಕೋಟೆ ಕೆರೆ, ಪ್ರವಾಸಿಗರ ನೆಚ್ಚಿನ ತಾಣ ಬೆಳಗಾವಿ, ಸವದತ್ತಿ ತಾಲೂಕಿನ ಪ್ರವಾಸಿ ತಾಣಗಳು, ಮಕ್ಕಳ ಮನರಂಜನೆಯ ಪ್ರವಾಸಿತಾಣ ದಾಂಡೇಲಿಯ ಇಕೋಪಾರ್ಕ, ಧಾರವಾಡ ಸೊಬಗ ಸವಿಯ ಬನ್ನಿ, ಗೊಡಚಿಮಲ್ಕಿ ಜಲಧಾರೆ, ಭಾರತದ ನಯಾಗರ ಗೋಕಾಕ ಪಾಲ್ಸ, ಹಿಮವದ್ ಗೋಪಾಲಸ್ವಾಮಿ ಬೆಟ್ಟ, ಐತಿಹಾಸಿಕ ದೇವಾಲಯಗಳ ಬೀಡು ಹೂಲಿ, ಹೊಸಪೇಟಿಯಲ್ಲೊಂದು ವಿಶಿಷ್ಟ ಉದ್ಯಾನವನ, ಕಿಲ್ಲಾ ತೋರಗಲ್, ಕಿತ್ತೂರು, ಶಿವರಾಮ ಕಾರಂತರ ನೆನಪು ಕೋಟಾದ ಥೀಮಪಾರ್ಕ, ಕುಪ್ಪಳಿಯ ಕವಿ ಶೈಲದ ಮರೆಯಲಾಗದ ನೆನಪುಗಳು, ಪಂಚನದಿಗಳ ಉಗಮಸ್ಥಾನ ಪ್ರೇಮಿಗಳ ಸ್ವರ್ಗ ಮಹಾಬಳೇಶ್ವರ, ಮಹಾಕೂಟ, ಮಂಜರಾಬಾದ್‍ಕೋಟೆ, ಮೌಳಂಗಿ ಇಕೋಪಾರ್ಕ, ಮೈಸೂರು ರೈಲು ಮ್ಯೂಜಿಯಂ, ನಲಿಯುತ ಬನ್ನಿ ನವಿಲುತೀರ್ಥಕೆ, ನೃಪತುಂಗಬೆಟ್ಟ ಧರೆಗಿಳಿದ ಸ್ವರ್ಗ, ಸರ್ವಧರ್ಮ ಸಮನ್ವಯ ತಾಣ ಓಂಕಾರ ಹಿಲ್ಸ, ಪರಸಗಡಕೋಟೆ, ಪ್ರಕೃತಿ ಕಾವ್ಯದ ತಾಣ ಸಂಜೀವಿನಿ ಉದ್ಯಾನವನ, ಬಾರೋ ಸಾಧನಕೇರಿಗೆ, ಮಳೆಯಜಲರಾಶಿಯ ಹೊತ್ತಜಲಧಾರೆ, ಧಾರವಾಡ ಪ್ರಾದೇಶಿಕ ವಿಜ್ಞಾನಕೇಂದ್ರ, ಸೊಗಲಸೋಮೇಶ್ವರ ದೇವಾಲಯ, ಬೆಳಗಾವಿ ಸುವರ್ಣಸೌಧ, ಸೈಕ್ಸ ಪಾಯಿಂಟ್ ಅಂಬಿಕಾನಗರ, ಉಳವಿ, ಹುಬ್ಬಳ್ಳಿಯ ಉಣಕಲ್ ಕೆರೆ, ಉತ್ಸವ್‍ರಾಕ್ ಗಾರ್ಡನ್, ತಪಸ್ವಿಗಳ ತಾಣ ವರವಿಕೊಳ್ಳ, ಚುಳಕಿ ಗುಹೆಗಳು ಎಂದು ಸುಂದರವಾಗಿ ವಿಭಾಗಿಸಿಕೊಂಡಿದ್ದಾರೆ.

ಇಂಥಹ ಅಪರೂಪದ ಶಿಕ್ಷಕ ಸಾಹಿತಿ ಪ್ರತಿ ನಿತ್ಯವೂ ವೃತ್ತಿಯ ಜೊತೆಗೆ ಬರವಣಿಗೆಯ ಎಲ್ಲ ವಿಭಾಗಗಳಲ್ಲೂ ತಮ್ಮನ್ನು ತೊಡಗಿಸಿಕೊಂಡು ಬದುಕುತ್ತಿರುವುದಕ್ಕೆ ಇವರ ಶ್ರೀಮತಿ ಶಿವಲೀಲಾ ಗೃಹಿಣಿಯಾಗಿ ಪತಿಯ ಎಲ್ಲ ಕೆಲಸಕ್ಕೂ ಪ್ರೋತ್ಸಾಹ ನೀಡಿದರೆ ಇವರ ತಾಯಿ ಗಂಗಮ್ಮ ಮಗನ ಎಲ್ಲ ಚಟುವಟಿಕೆಗಳಿಗೆ ಬೆನ್ನೆಲಬುಗಾಗಿದ್ದು. ಮಕ್ಕಳಾದ ಅಭಿನಂದನ(ಕೆ. ಎಸ್. ಆರ್. ಪಿ) ಆತ್ಮಾನಂದ (ಬಿ. ಕಾಂ. ಮೂರನೆಯ ನಾಲ್ಕನೆಯ ಸೆಮಿಸ್ಟರ್. ) ಪ್ರಜ್ವಲ್(8ನೆಯ ತರಗತಿ) ಕೂಡ ತಂದೆಯ ವೃತ್ತಿ ಬದುಕಿನ ಜೊತೆಗೆ ಬರವಣಿಗೆಯ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡುತ್ತಿರುವುದು ತುಂಬು ಕುಟುಂಬದ ಹೆಮ್ಮೆಯ ಸಂಗತಿ. ಅಕ್ಷರ ಲೋಕದ ನಕ್ಷತ್ರ ವೈ. ಬಿ. ಕಡಕೋಳರ ಬದುಕು ಇನ್ನೂ ಹೆಚ್ಚಿನ ರೂಪದಲ್ಲಿ ಸಾಹಿತ್ಯ ರೂಪದಲ್ಲಿ ಹೊರಹೊಮ್ಮಲಿ ಅವರ ಬರಹಗಳು ಇನ್ನೂ ಹೆಚ್ಚಿನ ಗೌರವಕ್ಕೆ ಪಾತ್ರವಾಗಲಿ ಎಂದು ಆಶಿಸುವೆ. ವೈ. ಬಿ. ಕಡಕೋಳರ ಸಂಪರ್ಕ ಸಂಖ್ಯೆ. 8971117442 9449518400 ಇಂಥ ವಿರಳ ಬರಹಗಾರರನ್ನು ಅಭಿನಂದಿಸಿ ಪ್ರೋತ್ಸಾಹಿಸಿ.

ಡಾ. ವ್ಹಿ. ಬಿ. ಸಣ್ಣಸಕ್ಕರಗೌಡರ


ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x