ಇತ್ತೀಚೆಗೆ ನಾನೂ ಮತ್ತು ನನ್ನ ಮಡದಿ ಕಾರಿನಲ್ಲಿ ಬೆಂಗಳೂರಿಗೆ ಹೋಗುತ್ತಿದ್ದಾಗ ಬಿಡದಿಯ ಬಳಿ ದುರದೃಷ್ಟವಶಾತ್ ಭಾರೀ ರಸ್ತೆ ಅಪಘಾತಕ್ಕೊಳಗಾಗಿಬಿಟ್ಟೆವು. ನಮ್ಮ ಗಾಡಿಯೂ, ನಮ್ಮಿಬ್ಬರ ಬಾಡಿಗಳೂ ಚೆನ್ನಾಗಿಯೇ ಜಖಂಗೊಳಾಗಾದುವು. ನಮ್ಮಿಬ್ಬರಿಗೂ, ಮೂಲಾಧಾರವಾದ ಬೆನ್ನು ಮೂಳೆಗೇ ಪೆಟ್ಟು ಬಿದ್ದು ನನ್ನ ಹೆಂಡತಿಗೊಂದು ದೊಡ್ಡ ಶಸ್ತ್ರಚಿಕಿತ್ಸೆಯೂ ಮಾಡಿಸಬೇಕಾಗಿ ಬಂತು. ನನ್ನ ಹೆಮ್ಮೆಯ ಸ್ನೇಹವರ್ತುಲದ ಇನ್ನಿಲ್ಲದ ಸಹಕಾರ ಹಾಗೂ ಬೆಂಬಲದಿಂದ ನಾವು ಆ ಭೀಕರ ಸನ್ನಿವೇಶದಿಂದ ಬಹುಬೇಗ ಪಾರಾಗಿ ಹೊರಬರಲು ಸಾಧ್ಯವಾಯಿತೆಂಬುದನ್ನು ನಾನಿಲ್ಲಿ ಹೇಳಲೇಬೇಕು. ಈ ಸಂಧರ್ಭದಲ್ಲಿ ನಾವು ಪಟ್ಟ ಬೇಗೆ ಬವಣೆಗಳ ವಿಷದವಾದ ವರ್ಣನೆಯಿಂದ ನಿಮ್ಮನ್ನು ಬೋರು ಹೊಡೆಸದೆ, ಸಂಕ್ಷಿಪ್ತವಾಗಿ, ಆ ಒಂದೆರಡು ತಿಂಗಳುಗಳು ನಾವು ದೈಹಿಕವಾಗಿಯೂ ಮಾನಸಿಕವಾಗಿಯೂ ಪಡಬಾರದ ಕಷ್ಟಗಳನ್ನು ಅನುಸಭವಿಸಬೇಕಾಯಿತೆಂದಷ್ಟೇ ತಿಳಿಸಿ ಮುಖ್ಯ ವಿಚಾರದತ್ತ ಬರುತ್ತೇನೆ.
ಈ ಮೊದಲು ನಾನು ವಾಡಿಕೆಯಂತೆ, ನಾವು ‘ದುರದೃಷ್ಟವಶಾತ್’ ಅಪಘಾತಕ್ಕೊಳಗಾಗಿದ್ದಾಗಿ ತಿಳಿಸಿದೆನಾದರೂ, ಆ ಪದ ಬಳಕೆಯ ಬಗ್ಗೆ ನನಗೆ ಹೆಚ್ಚಿನ ವಿಶ್ವಾಸವಾಗಲೀ, ಧೃಢತೆಯಾಗಲೀ ಇಲ್ಲ. ಕಾರಣವಿಷ್ಟೆ, ‘ನಾವು ಬಹಳ ಅದೃಷ್ಟಶಾಲಿಗಳೆಂಬುದು’ ಆ ಅವಘಡ ನಡೆದ ಕೆಲವೇ ಘಂಟೆಗಳಲ್ಲಿ ಸ್ಥಳಕ್ಕೆ ಧಾವಿಸಿದ ಗೆಳಯರಿಂದ ಹಿಡಿದು ನಂತರದ ದಿನಗಳಲ್ಲಿ ನಮ್ಮನ್ನು ಆಸ್ಪತ್ರೆಯಲ್ಲಿ ಹಾಗೂ ಆಸ್ಪತ್ರೆಯಿಂದ ಬಿಡುಗಡೆಯ ಬಳಿಕ ಮನೆಯಲ್ಲಿ ಭೇಟಿಯಾದ ಸ್ನೇಹಿತರು, ಬಂಧು ವರ್ಗದವರು ಹಾಗೂ ಇತರ ಹಿತೈಶಿಗಳೆಲ್ಲರ ಒಕ್ಕೊರೊಲ ಅಭಿಪ್ರಾಯವಾಗಿತ್ತು. ನಾವಿನ್ನೂ ಆಸ್ಪತ್ರೆಯಲ್ಲಿ ಪ್ರಥಮಚಿಕಿತ್ಸೆ ಪಡೆಯುತ್ತಿರುವಾಗಲೇ ಆಗಮಿಸಿದ ಮೊದಲ ಕಂತಿನ ಗೆಳಯರು, ‘ ನಿನ್ನದೃಷ್ಟ ಚೆನ್ನಾಗಿದೆ ಕಣೋ, ಬರ್ತಾ ಬಿಡದಿ ಹತ್ರ ಗಾಡಿನೋಡ್ಕೊಂಡ್ ಬಂದ್ವಲ್ಲ, ಗಾಡಿ ನೋಡಿದ್ರೆ ಸ್ಪಾಟೌಟು ಅನ್ನೋಹಂಗಿದ್ಯಲ್ಲಮ್ಮಾ’ ಅಂದರು. ಅಪಘಾತದ ಸ್ಥಳದಿಂದ ಕಾರು ತರಲು ಹೋಗಿದ್ದವರು ಹಿಂತಿರುಗಿ ಬಂದೊಡನೆ, ‘ನಿನ್ ಲಕ್ ದೊಡ್ದು ಗುರೂ, ಗಾಡಿ ಆ ಸೈನ್ಬೋರ್ಡಿಗೆಹೊಡ್ದುನಿಂತಿದೆ, ಇಲ್ದೇ ಇದ್ದಿದ್ರೆ ಗ್ಯಾರಂಟೀ ಇಬ್ರೂ ಔಟು, ನಾವೀಗ್ ನೋಡ್ಕೊಂಡ್ಬಂದ್ವಲ್ಲಪ್ಪಾ, ಅಲ್ಲಿಂದ ಬರೀ ಐವತ್ತಡಿ ದೂರದಲ್ಲಿ ಇಪ್ಪತ್ತಡಿ ಹಳ್ಳಾ ಇದೆ ಕಣೋ, ದೇವ್ರು ದೊಡ್ಡೋನು’ ಎಂದರು. ನಂತರ ಬಂದವರೊಬ್ಬರು, ‘ಸದ್ಯ, ಇಷ್ಟರಲ್ಲೇ ಹೋಯ್ತಲ್ಲಾ, ನಿಂ ಟೈಂ ಚೆನ್ನಾಗಿತ್ತು ಅನ್ಸುತ್ತೆ’, ಅಂದರೆ, ಇನ್ನೊಬ್ಬರು ‘ಲಾಸ್ಟ್ ವೀಕ್ ಇಂತದೇ ಒಂದ್ಯಾಕ್ಸಿಡೆಂಟಲ್ಲಿ ಗಂಡ ಹೆಂಡ್ತಿ ಇಬ್ರೂ ಹೋಗ್ಬುಟ್ರಂತೆ ಕಣ್ರೀ, ನಿಜ್ವಾಗ್ಲೂ ನಿಮ್ಮದೃಷ್ಟ ಚೆನ್ನಾಗಿದೆಯಪ್ಪಾ’, ಎಂದರು. ಆಮೇಲೆ ಬಂದ ಉಳಿದವರದೂ ಕೂಡಾ ಹೆಚ್ಚೂಕಮ್ಮಿ ಅದೇ ವರಸೆಯಲ್ಲಿನ ವಿವಿಧ ಆವೃತ್ತಿಗಳು. ಈ ಎಲ್ಲಾ ಮಾತುಗಳನ್ನು ಕೇಳಿ ನಮಗೂ ನಾವು ಅದೃಷ್ಟಶಾಲಿಗಳೇ ಇರಬೇಕು ಎಂದೆನಿಸತೊಡಗಿದ್ದು ನಿಜ. ಏತನ್ಮಧ್ಯೆ, ಇನ್ನೊಂದು ವಿಷಯವನ್ನು ನಿಮ್ಮೊಂದಿಗೆ ಹಂಚಿಕೊಳ್ಳಬೇಕಾಗಿದೆ. ಹಿಂದೆ ಕೆಲವು ವರ್ಷಗಳ ಕೆಳಗೆ ನನ್ನ ಆಪ್ತವಲಯದ ಕೆಲ ಮಿತ್ರರು ಜೀವನದಲ್ಲಿ ನಿಜಕ್ಕೂ ಸವಾಲೆನಿಸುವಂಥ ಕಷ್ಟಗಳಿಗೆ ಒಳಗಾಗಿ ಹೋಗಿದ್ದರು. ಅವರ ಬದುಕಿನಲ್ಲಿ ವಿಧಿಯೆಂಬ ಲೋಲಕವು ಭರವಸೆ ಹಾಗೂ ಹತಾಶೆಗಳ ನಡುವೆ ನಿರಂತರವಾಗಿ ತೊಯ್ದಾಡುತ್ತಿದ್ದ ದಿನಗಳವು. ಆಗೆಲ್ಲಾ ನಾನು ಅದಾವುದೋ ಭ್ರಮೆಯಲ್ಲಿ ಸ್ವಯಂಘೋಷಿತ ಸಾಂತ್ವನಾ ಪರಿಣಿತನಂತೆ, ಮೊದಲೇ ಸಂತ್ರಸ್ತರಾಗಿದ್ದ ನನ್ನ ಪಾಪದ ಗೆಳಯರಿಗೆ, ನಾನು ಬೇರೆ ಕೊರೆಯುವ ಚಾಳಿ ಬೆಳೆಸಿಕೊಂಡು ಬಿಟ್ಟಿದ್ದೆನೆಂದು ನನಗ ಈಗೀಗ ಅನಿಸುತ್ತಿದೆ. ಆದರೆ ನಾನು ಆ ದಿನಗಳಲ್ಲಿ ನೊಂದ ಆ ಗೆಳಯರನ್ನು ಸಂತೈಸುವ ಪ್ರಾಮಾಣಿಕ ಸದುದ್ದೇಶದಿಂದ ಹೇಳುತ್ತಿದ್ದ ಕೆಲವು ಕಥೆಗಳು, ನನ್ನ ಈಗಿನ ಪರಿಸ್ಥಿತಿಯಲ್ಲಿ ನೆನಪಾಗಿ ಬಹಳ ಪ್ರಸ್ತುತ ಎನಿಸುತ್ತಿದೆ. ಆ ಕಥೆಗಳನ್ನು ಈಗ ಈ ಲೇಖನದಲ್ಲಿ ನಿಮ್ಮೊಂದಿಗೆ ಹಂಚಿಕೊಳ್ಳಲಿದ್ದೇನೆ.
ಒಂದಾನೊಂದು ಕಾಲದಲ್ಲಿ ಒಂದು ಸಣ್ಣ ಪ್ರಾಂತ್ಯದಲ್ಲಿ ಒಬ್ಬ ರಾಜನಿದ್ದನು. ಆ ರಾಜನಿಗೊಬ್ಬ ಕುಶಾಗ್ರಮತಿಯಾದ ಮಂತ್ರಿಯೂ ಇದ್ದನು. ಆ ರಾಜನು ಆಡಳಿತದ ಎಲ್ಲ ವಿಚಾರಗಳಲ್ಲಿ ತನ್ನ ಮಂತ್ರಿಯೊಂದಿಗೆ ಸಮಾಲೋಚನೆ ನಡೆಸಿಕೊಂಡು ದಕ್ಷನಾಗಿ ರಾಜ್ಯವಾಳುತ್ತಿದ್ದನು. ಆ ಮಂತ್ರಿಗೊಂದು ಅಭ್ಯಾಸ, ಅವನು ಎಲ್ಲ ಸಂಧರ್ಭಗಳಲ್ಲೂ ‘ಆದದ್ದೆಲ್ಲಾ ಒಳಿತೇ ಆಯಿತು, ಎಲ್ಲವೂ ದೈವೇಚ್ಛೆ’ ಎನ್ನುತ್ತಿದ್ದನು. ಆ ರಾಜನಿಗೆ ಬೇಟೆಯ ಹುಚ್ಚು ಬಹಳ. ಹೀಗಿರುವಾಗ ಒಮ್ಮೆ ರಾಜನು ತನ್ನ ಮಂತ್ರಿಯನ್ನೂ ಕೆಲ ಯೋಧರನ್ನೂ ಕರೆದುಕೊಂಡು ಬೇಟೆಗೆಂದು ಹೊರಟನು. ಅವರೆಲ್ಲರೂ ಕಾಡಿನಲ್ಲಿ ಹೋಗುತ್ತಿರಲು ಬೇಟೆಯೊಂದನ್ನು ಕಂಡ ರಾಜನು ತನ್ನ ಕುದುರೆಯನ್ನು ಅತಿ ವೇಗವಾಗಿ ನಡೆಸುತ್ತಾ ಬೇಟೆಯನ್ನು ಅರಸಿಹೋಗಿ ತನ್ನ ತಂಡದಿಂದ ಬೇರೆಯಾಗಿ ಹೋದನು. ಆದರೆ ಅತ್ಯಂತ ಸ್ವಾಮಿನಿಷ್ಠನಾದ ಮಂತ್ರಿಯು ತಾನೂ ಅತಿ ವೇಗವಾಗಿ ಕುದುರೆಯನ್ನೋಡಿಸುತ್ತಾ ರಾಜನ ಹಿಂದೆಯೇ ಬಂದು ಶೀಘ್ರದಲ್ಲೇ ರಾಜನನ್ನು ಕೂಡಿಕೊಂಡನು. ಅಷ್ಟರಲ್ಲಿ ಕತ್ತಲಾಗತೊಡಗಿ ಬೇಟೆಯನ್ನರಸಿ ಬಹುದೂರ ಬಂದಿದ್ದ ಅವರಿಗೆ ತಾವು ದಾರಿ ತಪ್ಪಿರುವ ಅರಿವಾಯಿತು. ಅದೇ ವೇಳೆಗೆ ಗುಡುಗು ಸಿಡಿಲಿನಿಂದ ಕೂಡಿದ ಮಳೆಯು ಭೋರ್ಗರೆಯಲು ತೊಡಗಿ, ಅವರು ಆ ಕತ್ತಲಿನಲ್ಲಿಯೇ ಒಂದು ಸುರಕ್ಷಿತ ತಾಣವನ್ನು ಅರಸಿ ಹೋಗುತ್ತಿರಲು, ರಾಜನ ಕುದುರೆಯು ಆಯ ತಪ್ಪಿ ಬಿದ್ದು ಬಿಟ್ಟಿತು. ಆ ಆಕಸ್ಮಿಕದಲ್ಲಿ ಕೆಳಗೆ ಬಿದ್ದ ರಾಜನ ಕಾಲ ಬೆರಳೊಂದು ಮುರಿದು ತುಂಡಾಗಿ ಹೋಯಿತು. ಇದನ್ನು ನೋಡಿದ ಮಂತ್ರಿಯು ಎಂದಿನಂತೆ,‘ಆದದ್ದೆಲ್ಲಾ ಒಳಿತೇ ಆಯಿತು, ಎಲ್ಲವೂ ದೈವೇಚ್ಛೆ’ ಎಂದು ಬಿಟ್ಟನು. ಇದನ್ನು ಕೇಳಿದ ರಾಜನು ಕೋಪದಿಂದ ಕುದ್ದು ಹೋದನು. ‘ಈಗ ನಡೆದದ್ದರಲ್ಲಿ ನೀನು ಒಳಿತೇನನ್ನು ಕಂಡೆ? ರಾಜನ ಬೆರಳು ಮುರಿದೊಡೆ ಒಳಿತಾಯಿತೆನ್ನುವ ನಿನಗೆಷ್ಟು ಸೊಕ್ಕು’ ಎಂದು ಮಂತ್ರಿಯನ್ನು ನಿಂದಿಸುತ್ತಿರುವಷ್ಟರಲ್ಲಿ ಸೂರ್ಯೋದಯವಾಯಿತು. ಇನ್ನೂ ಕೋಪದಲ್ಲಿದ್ದ ರಾಜನು ಮಂತ್ರಿಯನ್ನು ಅಲ್ಲಿಯೇ ಇದ್ದ ಮರವೊಂದಕ್ಕೆ ಕಟ್ಟಿ ‘ಇಲ್ಲಿಯೇ ಯಾವುದಾದರೂ ಕ್ರೂರಮೃಗಕ್ಕೆ ಆಹಾರವಾಗಿ ಸಾಯಿ’ ಎನ್ನಲು, ಅದಕ್ಕೆ ಉತ್ತರವಾಗಿ ಮಂತ್ರಿಯು ಮತ್ತೊಮ್ಮೆ,‘ಆದದ್ದೆಲ್ಲಾ ಒಳಿತೇ ಆಯಿತು, ಎಲ್ಲವೂ ದೈವೇಚ್ಛೆ’ ಎಂದನು. ನಂತರ ಮಂತ್ರಿಯನ್ನು ಅಲ್ಲಿಯೇ ಬಿಟ್ಟು ದಾರಿಯನ್ನು ಹುಡುಕುತ್ತಾ ಹೋದ ರಾಜನು ಕಾಡಿನಲ್ಲಿ ಸುತ್ತಾಡುತ್ತಿದ್ದನು. ಆಗ ಹಠಾತ್ತನೆ ಹಲವಾರು ದಿಕ್ಕುಗಳಿಂದ ಅನೇಕ ಆದಿವಾಸಿಗಳು ಬಂದು ಅವನನ್ನು ಸುತ್ತುವರಿದು ಬಂಧಿಯಾಗಿಸಿಬಿಟ್ಟರು. ತಮ್ಮ ಬಂಧಿಯನ್ನು ವನದೇವತೆಗೆ ಬಲಿಕೊಡಲು ಸರ್ವ ಸಿದ್ಧತೆಗಳನ್ನು ಮಾಡಿಕೊಂಡ ಕಾಡುಜನರು ಅವನಿಗೆ ಸ್ನಾನ ಮಾಡಿಸಿ ಹೂಮಾಲೆ ಹಾಕಿ ತಮ್ಮ ನಾಯಕನ ಬಳಿ ಕರೆದುಕೊಂಡು ಹೋದರು. ರಾಜನನ್ನು ಸೂಕ್ಷ್ಮವಾಗಿ ಪರಿಶೀಲಿಸಿದ ಆದಿವಾಸಿಗಳ ನಾಯಕನು ರಾಜನ ಕಾಲ್ಬೆರಳು ಮುರಿದಿರುವುದನ್ನು ಕಂಡು ನಿರಾಶನಾಗಿ ‘ಅಂಗ ಊನವಾಗಿರುವ ಈ ಮನುಷ್ಯನು ನರಬಲಿಗೆ ಯೋಗ್ಯನಲ್ಲ ಹಾಗಾಗಿ ಇವನಿಂದ ನಮಗೆ ಯಾವುದೇ ಉಪಯೋಗವಿಲ್ಲ, ಇವನನ್ನು ಬಿಡುಗಡೆಗೊಳಿಸಿ’ ಎಂದು ಆಙ್ಞಾಪಿಸಲು, ಕಾಡುಜನರು ನಿರಾಶರಾಗಿ ರಾಜನನ್ನು ಬಿಟ್ಟು ಬಿಟ್ಟರು. ತನ್ನ ಮುರಿದ ಕಾಲ್ಬೆರಳಿನಿಂದ ತನ್ನ ಜೀವವೇ ಉಳಿಯಿತೆಂಬುದನ್ನು ಅರಿತ ರಾಜನಿಗೆ, ಆಗ ಮಂತ್ರಿಯ ಮಾತಿನ ಅರ್ಥವಾಯಿತು. ಒಡನೆ, ಅಲ್ಲಿಯೇ ಹತ್ತಿರದಲ್ಲಿದ್ದ ತನ್ನ ಕುದುರೆಯನ್ನು ಏರಿದ ರಾಜನು ಯಾವುದೇ ತಡ ಮಾಡದೆ ಮಂತ್ರಿಯನ್ನು ಕಟ್ಟಿ ಹಾಕಿದ್ದ ಸ್ಥಳವನ್ನು ಹುಡುಕಿಕೊಂಡು ಬಂದು ಮಂತ್ರಿಯನ್ನು ಬಂಧ ಮುಕ್ತನನ್ನಾಗಿ ಮಾಡಿ, ‘ನೀನು ಹೇಳಿದ್ದು ನಿಜ, ನನ್ನ ಬೆರಳು ಮುರಿದದ್ದರಿಂದ ಒಳ್ಳೆಯದೇ ಆಯಿತು. ಅದರಿಂದ ನನ್ನ ಜೀವವೇ ಉಳಿಯಿತು’ ಎಂದು ನಡೆದ ಕಥೆಯನ್ನು ಹೇಳಿ, ‘ಆದರೆ ಒಂದು ಮಾತ್ರ ಅರ್ಥವಾಗುತ್ತಿಲ್ಲ, ನಿನ್ನನ್ನು ನಾನು ಮರಕ್ಕೆ ಕಟ್ಟಿ ಹಾಕಿ ಒಂಟಿಯಾಗಿ ಬಿಟ್ಟು ಹೋಗುವಾಗಲೂ ನೀನು ‘ಆದದ್ದೆಲ್ಲಾ ಒಳಿತೇ ಆಯಿತು’, ಎಂದೆಯಲ್ಲಾ ಅದರಿಂದೇನು ಒಳಿತಾಯಿತು?’ ಎಂದು ಕೇಳಲು ಮಂತ್ರಿಯು, ‘ಮಹಾಸ್ವಾಮಿ, ನೀವು ಹಾಗೆ ನನ್ನನ್ನು ಹಾಗೆ ಕಟ್ಟಿ ಹಾಕದೇ ನಿಮ್ಮೊಂದಿಗೇ ಕರೆದೊಯ್ದಿದ್ದಲ್ಲಿ ಯಾವುದೇ ಊನವಿಲ್ಲದ ಮನುಷ್ಯ ದೊರೆತನೆಂದು ಆದಿವಾಸಿಗಳು ನನ್ನನ್ನು ಬಲಿ ಕೊಡದೇ ಬಿಡುತ್ತಿದ್ದರೇ?’ ಎನ್ನಲು ಸಂತೋಷಗೊಂಡ ರಾಜನು ನಗುತ್ತಾ, ‘ನಿಜ, ನಿಜ, ಆದದ್ದೆಲ್ಲಾ ಒಳಿತೇ ಆಯಿತು, ಎಲ್ಲವೂ ದೈವೇಚ್ಛೆ’ ಎಂದು ಹೇಳಿ ಮಂತ್ರಿಗೆ ಸೂಕ್ತ ಬಹುಮಾನಗಳನ್ನಿತ್ತು ಸನ್ಮಾನಿಸಿದನು.
ವಿಸ್ಮಯಕರ ದೈವಲೀಲೆಗಳ ಹಿಂದಿರಬಹುದಾದ ದೈವಸಂಕಲ್ಪಗಳನ್ನು ಅರಿತವರಾರು? ಹಲವಾರು ಬಾರಿ ನಮ್ಮ ಜೀವನದಲ್ಲಿ ಮೇಲ್ನೋಟಕ್ಕೆ ಅವಗಢಗಳಂತೆ ಕಂಡುಬರುವ ಘಟನೆಗಳು ಅಸಲಿಗೆ ಛದ್ಮವೇಷದಲ್ಲಿನ ದೈವಾನುಗ್ರಹವೆಂಬುದು ನಮಗೆ ತಿಳಿಯುವುದೇ ಇಲ್ಲವಲ್ಲ! ಇದೇ ಧಾಟಿಯಲ್ಲಿ ಸಾಗುವ ಚೀನೀ ಸಣ್ಣ ಕಥೆಯೊಂದಿದೆ. ಈ ಕಥೆ, ನಾವು ಜೀವನದಲ್ಲಿ ಎದುರಿಸಬಹುದಾದ ಅನಿರೀಕ್ಷಿತ ತಿರುವುಗಳನ್ನೂ, ಏಳುಬೀಳುಗಳನ್ನೂ ಸಮಚಿತ್ತದಿಂದ ಎದುರಿಸಬೇಕಾದ ಔಚಿತ್ಯದ ಕುರಿತು ಬೆಳಕು ಚೆಲ್ಲುತ್ತದೆ. ಒಂದೂರಿನಲ್ಲಿ ಒಬ್ಬ ಪ್ರಬುದ್ಧನಾದ ಶ್ರೀಮಂತನಿದ್ದನು. ಅವನಿಗೊಬ್ಬ ವಯಸ್ಸಿಗೆ ಬಂದ ಮಗನೂ ಇದ್ದನು. ಒಂದು ಒಳ್ಳೆಯ ಕುದುರೆಯ ಹೆಮ್ಮೆಯ ಒಡೆಯನಾಗಿದ್ದ ಆ ಶ್ರೀಮಂತನಬಳಿ ಸಾಮಾನ್ಯವಾಗಿ ಜನ ಬಯಸುವ ಎಲ್ಲ ಲೌಕಿಕ ವಸ್ತುಗಳೂ ಇದ್ದು, ನೆಮ್ಮದಿಯ ಜೀವನ ಸಾಗಿಸುತ್ತಿದ್ದನು. ಹೀಗಿರುವಾಗ ಒಮ್ಮೆ ಇಡೀ ಊರಿನಲ್ಲೇ, ಆ ಶ್ರೀಮಂತನ ಅಮೂಲ್ಯ ಆಸ್ತಿಯೆಂದೆನಿಸಿಕೊಂಡಿದ್ದ ಅವನ ನೆಚ್ಚಿನ ಕುದುರೆಯು ಲಾಯದಿಂದ ಎಲ್ಲಿಗೋ ಓಡಿ ಹೋಗಿ ತಪ್ಪಿಸಿಕೊಂಡುಬಿಟ್ಟಿತು. ಆ ವಿಷಯತಿಳಿದ ಶ್ರೀಮಂತನ ನೆರೆಹೊರೆಯವರು ಅವನ ಮನೆಗೆ ಬಂದು, ‘ ನಿನ್ನ ನೆಚ್ಚಿನ ಕುದುರೆ ಓಡಿಹೋಗಿ ಬಿಟ್ಟಿತಂತೆ, ಎಂಥಾ ದುರಾದೃಷ್ಟ’ ಎಂದರು. ಆಗ ಆ ಶ್ರೀಮಂತನು ‘ ನಿಮಗೆ ಹೇಗೆ ಗೊತ್ತು ಅದು ದುರಾದೃಷ್ಟ ಅಂತ?’ ಎಂದು ಕೇಳಿದನು. ನಂತರ ಶ್ರೀಮಂತನ ತಪ್ಪಿಸಿಕೊಂಡ ಕುದುರೆಯು ಕಾಡಿಗೆ ಹೋಗಿ ಅಲ್ಲಿ ಇನ್ನೂ ಹಲವಾರು ಕುದುರೆಗಳ ಸ್ನೇಹ ಗಳಿಸಿ ಅವುಗಳೊಂದಿಗೆ ವಾಸಿಸುತ್ತಿತ್ತು. ಮುಂದೊಂದು ದಿನ ಅದಕ್ಕೆ ಕಾಡಿನ ಜೀವನ ದುಸ್ತರವೆನಿಸಿ, ತನ್ನ ಗೆಳಯರಿಗೆ, ಊರಿನಲ್ಲಿ ತನ್ನ ಹಳೆಯ ಮಾಲೀಕನು ದಯಾಳುವಾಗಿದ್ದು ಅಲ್ಲಿ ಎಲ್ಲರಿಗೂ ಧಾರಾಳವಾಗಿ ತಿನ್ನಲು ಉಣ್ಣಲು ದೊರೆಯುತ್ತದೆ, ಎಂದು ತಿಳಿಸಿ ಅವುಗಳನ್ನೊಪ್ಪಿಸಿ, ತನ್ನ ಗೆಳಯರಾದ ೧೨ ಕುದುರೆಗಳೊಂದಿಗೆ, ತನ್ನ ಮಾಜಿ ಒಡಯನಾದ ಶ್ರೀಮಂತನ ಮನೆಗೆ ಹಿಂತಿರುಗಿತು. ಈ ಸುದ್ದಿ ತಿಳಿದ ನೆರೆಹೊರೆಯವರು ಶ್ರೀಮಂತನ ಮನೆಗೆ ಬಂದು ‘ಅಬ್ಬಾ ೧೩ ಭಾರೀ ಕುದುರೆಗಳು, ಎಂಥಾ ಅದೃಷ್ಟ’ ಎನ್ನಲು ಶ್ರೀಮಂತನು,‘ ನಿಮಗೆ ಹೇಗೆ ಗೊತ್ತು ಅದು ಅದೃಷ್ಟ ಅಂತ?’ಎಂದು ಕೇಳಿದನು. ಅದಕ್ಕೆ ಸರಿಯಾಗಿ ಮರುದಿನ ಆ ಕುದುರೆಗಳ ಸವಾರಿ ಮಾಡಲು ಹೋದ ಶ್ರೀಮಂತನ ಮಗನು ಕುದುರೆಯ ಮೇಲಿಂದ ಬಿದ್ದು ಕಾಲು ಮುರಿದುಕೊಂಡು, ಅವನಿಗೆ ಶಾಶ್ವತವಾದ ಕುಂಟಾಗಿಹೋಯಿತು. ಇದನ್ನರಿತ ನೆರೆಹೊರೆಯವರು ಶ್ರೀಮಂತನಬಳಿಬಂದು, ‘ನಿನ್ನ ಮಗ ಕುಂಟನಾಗಿ ಹೋದನಲ್ಲಾ ಎಂಥಾ ದುರಾದೃಷ್ಟ’ ಎಂದರು. ಆಗ ಮತ್ತೆ ಆ ಶ್ರೀಮಂತನು ‘ ನಿಮಗೆ ಹೇಗೆ ಗೊತ್ತು ಅದು ದುರಾದೃಷ್ಟ ಅಂತ?’ ಎಂದು ಕೇಳಿದನು. ನಂತರದ ದಿನಗಳಲ್ಲಿ ಆ ಪ್ರಾಂತ್ಯದಲ್ಲಿ ಯುದ್ಧದ ಘೋಷಣೆಯಾಗಿ, ಪ್ರಾಂತ್ಯದ ಹಳ್ಳಿಹಳ್ಳಿಗಳಲ್ಲೂ ಇದ್ದ ಯುವಕರನ್ನೆಲ್ಲಾ ಯುದ್ಧಕ್ಕಾಗಿ ಸೈನ್ಯದಲ್ಲಿ ಭರ್ತಿ ಮಾಡಿಕೊಳ್ಳಲಾಯಿತು. ಶ್ರೀಮಂತನ ಮಗನನ್ನು ಕುಂಟನೆಂಬ ಕಾರಣಕ್ಕೆ ಸೈನ್ಯದಲ್ಲಿ ಭರ್ತಿ ಮಾಡಿಕೊಳ್ಳಲಿಲ್ಲ. ಯುದ್ಧದಲ್ಲಿ ಆ ದೇಶಕ್ಕೆ ಸೋಲುಂಟಾಗಿ ಎಲ್ಲ ಯೋಧರೂ ಸಾವನ್ನಪ್ಪಿದರು. ಆ ಊರಲ್ಲಿ ಶ್ರೀಮಂತನ ಮಗನನ್ನು ಹೊರತು ಪಡಿಸಿ ಯಾವುದೇ ಯುವಕರು ಬದುಕುಳಿಯಲಿಲ್ಲ. ಶ್ರೀಮಂತನು ತನ್ನ ಕುಂಟ ಮಗನೊಂದಿಗೆ ಬಹುಕಾಲ ಸುಖವಾಗಿ ಬಾಳಿದನು.
ಪ್ರಿಯ ಓದುಗರೇ, ಕೇಳಲು ಇವು ಕೇವಲ ಕಥೆಗಳಾದರೂ ಇವುಗಳ ಹಿಂದಿನ ನೀತಿಯನ್ನು ಖಂಡಿತಾ ಉಪೇಕ್ಷಿಸುವಂತಿಲ್ಲ. ಏಕೆಂದರೆ, ಕಷ್ಟಸುಖಗಳು ಜೀವನದ ಅವಿಭಾಜ್ಯ ಅಂಗ. ಆದ್ದರಿಂದ ನಾವು ಅವುಗಳನ್ನು ಸಮಚಿತ್ತದಿಂದ ಸ್ವೀಕರಿಸಬೇಕೇ ಹೊರತು ಅವಾಸ್ತವಿಕವಾಗಿ ಬರೀ ಸುಖವನ್ನೇ ನಿರೀಕ್ಷಿಸಬಾರದು. ಮೇಲಾಗಿ ದೈವಸಂಕಲ್ಪವೇನೆಂಬುದು ಅರಿಯಲಾರದ ನಮಗೆ, ಯಾವುದರ ನಿಮಿತ್ತ ಯಾವುದೆಂದು ತಿಳಿದೀತಾದರೂ ಹೇಗೆ? ಈಗ ನನ್ನ ಸ್ವಾನುಭವದಿಂದಲೇ ಹೇಳುವುದಾದರೆ, ಕಳೆದೆರಡು ತಿಂಗಳಲ್ಲಿ ನನ್ನ ಜೀವನದಲ್ಲುಂಟಾದ ವಿವಿಧ ಒತ್ತಡಗಳಿಂದ ನನಗೆ ತೀವ್ರವಾದ ಮನೋವ್ಯಾಕುಲತೆಯಾಗಿದ್ದೇನೋ ನಿಜ. ಆದರೆ ಆ ಮಾನಸಿಕ ತುಮುಲದಿಂದ ಹೊರಬರಲೆಂದು, ಹಿಂದೆಂದೂ ಬರೆಯುವ ಬಗ್ಗೆ ತುಂಬಾ ಗಂಭೀರವಾಗಿ ಯೋಚನೆಯನ್ನೇ ಮಾಡಿರದಿದ್ದ ನಾನು, ಯಾವುದೋ ಅನಿರೀಕ್ಷಿತ ಪ್ರೇರಣೆಯಿಂದಾಗಿ ಈಗ ಭಾವೋದ್ದೀಪ್ತನಾಗಿ ಬರೆಯಲು ತೊಡಗಿಲ್ಲವೇ? ಬಹುಶಃ ನನ್ನ ಜೀವನದಲ್ಲಿ ಆ ಕಷ್ಟ ಕಾರ್ಪಣ್ಯಗಳು ಬರದಿದ್ದರೆ ನಾನು ಬರೆಯುವ ಪ್ರಯತ್ನವನ್ನೇ ಮಾಡುತ್ತಿರಲಿಲ್ಲವೇನೋ? ಆದ್ದರಿಂದ ಈ ಎಲ್ಲ ಒಟ್ಟಾರೆ ಬೆಳವಣಿಗೆಗಳಿಂದ ನನಗೆ ಒಳಿತೇ ಆಗಿದೆ ಎಂದುಕೊಳ್ಳುವುದರಲ್ಲಿ ಸುಖವಿದೆಯಲ್ಲವೇ? ಅಲ್ಲದೆ, ಬದುಕಿನಲ್ಲಿ ಬರುವ ಕಷ್ಟಗಳು ನಮ್ಮನ್ನು ಗಟ್ಟಿಗೊಳಿಸುವುದಲ್ಲದೆ, ಸುಖಬಂದಾಗ ಅದರ ಮೌಲ್ಯವನ್ನರಿತು ಅದನ್ನು ಜವಾಬ್ದಾರಿಯಿಂದ ಅನುಭವಿಸಲು ನಮ್ಮನ್ನು ಅನುವು ಮಾಡುತ್ತವೆ. ಸುಖ ದುಖಃಗಳ ಆರೋಗ್ಯಕರ ಅನುಪಾತ ಜೀವನದಲ್ಲಿ ಅತ್ಯಗತ್ಯ. ಜೀವನದಲ್ಲಿ ಬರೀ ಸುಖವನ್ನೇ ಕಂಡಿದ್ದ ಸೂಕ್ಷ್ಮಸಂವೇದನೆಯ ಸಿದ್ದಾರ್ಥ ಕಷ್ಟಗಳ ಬರೀ ದರ್ಶನಮಾತ್ರದಿಂದಲೇ ಬುದ್ಧನಾಗಿದ್ದೇನೋ ನಿಜ. ಆದರೆ ಒಬ್ಬ ಅವತಾರಪುರುಷನೆನ್ನಲಾಗುವ ಭಗವಾನ್ ಬುದ್ಧನ ಈ ಉದಾಹರಣೆ, ನನ್ನ ಅಭಿಪ್ರಾಯದಲ್ಲಿ ಒಂದು ಅಪವಾದವೇ ಹೊರತು ನಿಯಮವಾಗಲಾರದು. ಉಳಿದಂತೆ ಸಾಮಾನ್ಯ ಮಾನವರ ಜೀವನದಲ್ಲಿ ಅನಿರೀಕ್ಷಿತ ತಿರುವುಗಳಿಂದ ಈ ಸಮತೋಲನ ಬಿಗಡಾಯಿಸಿದಲ್ಲಿ, ಹೆಚ್ಚಿನವರು ‘ಪ್ಯಾಟೆಗೆ ಬಂದ ಹಳ್ಳಿ ಹೈದ,’ ಜಂಗಲ್ ಜಾಕಿ ರಾಜೇಶನಂತೆ ಮತಿಭ್ರಮಣೆಗೊಳಗಾಗಿ ದುರಂತವನ್ನಪ್ಪುವ ಸಾಧ್ಯತೆಗಳೇ ಅಧಿಕ. ಹೆಚ್.ಡಿ ಕೋಟೆಯ ಬಳ್ಳೆಹಾಡಿಯಲ್ಲಿ ನೆಮ್ಮದಿಯಾಗಿ ಬದುಕು ಮಾಡಿಕೊಂಡಿದ್ದ ಮುಗ್ಧ ಯುವಕನೊಬ್ಬನ ಜೀವನದಲ್ಲಿನ ಅನಿರೀಕ್ಷಿತ ತಿರುವುಗಳ ವಿಧಿಯಾಟ, ಅವನ ಬದುಕನ್ನು ಹೇಗೆ ಮೂರಾಬಟ್ಟೆ ಮಾಡಿಬಿಟ್ಟಿತು ನೋಡಿ. ಅವನು ರಿಯಾಲಿಟಿ ಶೋನಲ್ಲಿ ೧೦ ಲಕ್ಷಗೆದ್ದಾಗ ಅವನ ಹಾಡಿಯಲ್ಲಿನ ನೆರೆಹೊರೆಯವರು ಅವನ ಪೋಷಕರ ಬಳಿ ಹೋಗಿ ಮೇಲಿನ ಕಥೆಯಲ್ಲಿ ಹೇಳುವಂತೆ ‘ ನಿಮ್ಮಗ ಅತ್ಲಕ್ಸ ಗೆದ್ದವ್ನಂತೆ, ಏನದ್ರುಸ್ಟಾನ್ರಪ್ಪಾ’ ಎಂದು ಹೇಳಿರಲಿಕ್ಕಿಲ್ಲವಾ, ಈಗ ನೋಡಿ, ಪಾಪ ಆ ಮುಗ್ಧನ ಕಥೆ ಎಂಥಾ ದುರಂತದಲ್ಲಿ ಕೊನೆಯಾಗಿ ಹೋಗಿದೆ. ಹಾಗಾಗಿ, ಜೀವನದಲ್ಲಿ ಕಷ್ಟ ಬಂದಾಗ ಅತಿಯಾಗಿ ಕುಗ್ಗದೇ, ಸುಖ ಬಂದಾಗ ಅತಿಯಾಗಿ ಹಿಗ್ಗದೇ ಸಾಧ್ಯವಾದಷ್ಟೂ ಸಮಚಿತ್ತರಾಗಿ ಬದುಕುವುದೇ ಜಾಣತನ.
ಅಂದಹಾಗೆ, ಮೊನ್ನೆ ಪೇಟೇ ಬೀದಿಯಲ್ಲಿ ಸ್ನೇಹಿತರೊಬ್ಬರು ಸಿಕ್ಕಿ, ‘ಅಯ್ಯೋ ನೆನ್ನೆ ನನ್ಮಗ ಬೈಕ್ ಅಪಘಾತದಲ್ಲಿ ಮೈಕೈಯೆಲ್ಲಾ ತರಚಿಸಿಕೊಂಡು ಬಂದೀದಾನ್ಕಣ್ರೀ, ಒಳ್ಳೇ ದುರ್ಭಿಕ್ಷದಲ್ ಅಧಿಕ್ಮಾಸ ಅಂದಂಗೆ ಗಾಡಿ ರೆಡಿ ಮಾಡ್ಸಕ್ಬೇರೆ ಒಂದೈದಾರ್ಸಾವ್ರ ಖರ್ಚಿಗೆ ತಂದಿಟ್ಟೀದಾನೆ ಮಗರಾಯ’ ಎಂದು ಬೇಸರಿಸಿಕೊಂಡರು. ‘ಸದ್ಯ ಅಷ್ಟರಲ್ಲೇ ಹೋಯ್ತಲ್ಲಾ, ನಿಂ ಅದೃಷ್ಟ ಚೆನ್ನಾಗಿದೆ ಅನ್ಕೋಳಿ, ಮಗಂಗೆ ಸೀರಿಯಸ್ಸಾಗೇನೂ ಆಗ್ಲಿಲ್ವಲ್ಲ.’ ಎಂದು ನನಗರಿವಿಲ್ಲದಂತೆಯೇ ಹೊರಬಿದ್ದ ನನ್ನ ಮಾತುಗಳನ್ನು ಕೇಳಿ ನಾನೇ ದಂಗಾದೆ.
*****
Nice Keep writing.
Ramoo Mysore
Dear Nana
I knew nothing about your accident. Now, after reading you I came to know it. Hope you n your wife are ok
Ramu Mysore