ಹೆನ್ರಿ ಡೇವಿಡ್ ಥೋರೋ ಹೇಳಿದಂತೆ, “ಮನುಷ್ಯರು ಯಶಸ್ಸುಗಳಿಸಲೆಂದೇ ಜನಿಸಿರುವರು, ಅಪಜಯ ಹೊಂದುವುದಕ್ಕಲ್ಲ” ಸಂತೋಷದಂತೆ ಯಶಸ್ಸು ಸಹ ಮಾನವನ ಮೂಲಭೂತ ಗುರಿಯಾಗಿದೆ. ‘ನಾವು ಹೆಚ್ಚು ಗುಲಾಬಿಗಳನ್ನು ಪಡೆಯಬೇಕಾದರೆ ಹೆಚ್ಚು ಗಿಡಗಳನ್ನು ನೆಡಬೇಕು’ ಎಂದು ಇಲಿಯೆಟ್ ಒಂದೆಡೆ ಹೇಳಿದ್ದಾನೆ. ನಾವು ಜೀವನದಲ್ಲಿ ಏನೇ ಸಾಧಿಸಲು ನಮಗೆ ಅತ್ಯಗತ್ಯವಾದದ್ದು ಹಣವಲ್ಲ, ಯಾರ ಆಶ್ರಯವೂ ಅಲ್ಲ, ಇನ್ನೊಬ್ಬರ ಉತ್ತೇಜನವೂ ಇಲ್ಲ. ಬೇಕಾಗಿರುವುದು ಆತ್ಮವಿಶ್ವಾಸ. ಇದು ಇಲ್ಲದ ವ್ಯಕ್ತಿ ಎಷ್ಟೇ ಉತ್ತೇಜನ ನೀಡಿದರೂ ಯಶಸ್ಸಿನ ದಾರಿಯಲ್ಲಿ ನಡೆಯಲಾರ. ಆತ್ಮ ವಿಶ್ವಾಸವೆಂದರೇನು ಎನ್ನುವ ಪ್ರಶ್ನೆಗೆ ಉತ್ತರ ಸರಳವಾದರೂ ವ್ಯಾಪ್ತಿ ವಿಶಾಲವಾದುದು. ಯಾವುದೇ ಕೆಲಸವನ್ನು ಮಾಡುವ ಮೊದಲು ಆ ಕೆಲಸವನ್ನು ಮಾಡಿಯೇ ತೀರುತ್ತೇನೆಂಬ ಧೃಢ ಸಂಕಲ್ಪ ಮಾಡಿಕೊಳ್ಳಬೇಕು. ಅದು ಬಿಟ್ಟು ಈ ಕೆಲಸ ನನ್ನಿಂದ ಮಾಡಲು ಸಾಧ್ಯವೇ ಎಂದು ಅನುಮಾನ ವೈಕ್ತಪಡಿಸಿದರೆ ಖಂಡಿತಾ ಅದನ್ನು ಸಾಧಿಸಲು ಸಾಧ್ಯವಾಗುವುದಿಲ್ಲ.
ಜೀವನದಲ್ಲಿ ನಾವು ಆಶಾ ಜೀವಿಗಳಾಗಿರಬೇಕು. ಗಾಂಧೀಜಿಯವರಿಗೆ ಆತ್ಮವಿಶ್ವಾಸವಿದ್ದುದರಿಂದಲೇ ನಮ್ಮ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿದ್ದು. ಯಾವುದೇ ಒಳ್ಳೆಯ ಕೆಲಸಕ್ಕೆ ದೈವ ಬೆಂಬಲ ಇದ್ದೇ ಇರುತ್ತದೆ. ಅದನ್ನು ಮೊದಲು ನಮ್ಮ ಮನಸ್ಸಿನಲ್ಲಿ ಮೂಡಿಸಬೇಕು. ಯಶಸ್ಸಿನ ಹಾದಿ ಸುಗಮವಲ್ಲ. ಅದು ಯಾವಾಗಲೂ ಏರಿಳಿತಗಳಿಂದ ಕೂಡಿರುತ್ತದೆ. ಆದರೂ ಅವನ್ನೆಲ್ಲಾ ನಿಭಾಯಿಸಿಕೊಂಡು ಹೋದರೆ ಮಾತ್ರ ಗುರಿಮುಟ್ಟಬಹುದು. ಇತ್ತೀಚೆಗೆ ಕುರಿಯನ್ ವರ್ಗಿಸ್ ನಿಧನರಾದ ಸುದ್ಧಿ ಎಲ್ಲರಿಗೂ ತಿಳಿದೇ ಇದೆ. ಅವರು ಸಾಯುವ ಕೆಲವು ದಿನಗಳ ಮುನ್ನ ದಂಪತಿಗಳಿಗೆ ಕ್ಷೀರ ಕ್ರಾಂತಿಗೆ ನೀಡಿದ ಅಪೂರ್ವ ಕೊಡುಗೆಗಾಗಿ ಬೆಂಗಳೂರಿನಲ್ಲಿ ಸನ್ಮಾನಿಸಲಾಯಿತು. 90 ರ ಹರೆಯದ ಕುರಿಯನ್ ಅಂದು ಚೈತನ್ಯದ ಚಿಲುಮೆಯಾಗಿದ್ದರು. ಮೂಲತಃ ಮೆಕಾನಿಕಲ್ ಇಂಜಿನಿಯರಿಂಗ್ ಪದವೀಧರರಾದ ಕುರಿಯನ್ ನಂತರ ಅಮೇರಿಕಾದ ಮಿಚಿಗನ್ ವಿಶ್ವ ವಿದ್ಯಾನಿಲಯದಲ್ಲಿ ಸ್ನಾತಕೋತ್ತರ ಪದವಿ ಪಡೆದರು. ಪದ್ಮವಿಭೂಷಣ, ಮ್ಯಾಗ್ಸೇಸೆ ಪ್ರಶಸ್ತಿ ಜೊತೆಗೆ ಹಲವಾರು ಪ್ರಶಸ್ತಿಗಳಿಗೆ ಭಾಜನರಾದ ಕುರಿಯನ್ ಭಾರತ ಹಾಲಿನ ಉತ್ಪಾದನೆಯಲ್ಲಿ ವಿಶ್ವದ ನಂಬರ್ ಒನ್ ಸ್ಥಾನಕ್ಕೇರಲು ಶ್ರಮಿಸಿದ್ದಾರೆ.
ಕುರಿಯನ್ ಅವರ ಜೀವನದಲ್ಲಿ ನಡೆದ ಒಂದು ಸಣ್ಣ ಘಟನೆ ಅವರ ಆತ್ಮ ವಿಶ್ವಾಸವನ್ನು ಹೆಚ್ಚಿಸಿದ್ದಲ್ಲದೆ, ಅವರು ತಮ್ಮದಲ್ಲದ ಕ್ಷೇತ್ರವಾದ ಡೈರಿ ಉದ್ಯಮದಲ್ಲಿ ತಮ್ಮನ್ನು ತೊಡಗಿಸಿಕೊಂಡು ನಮ್ಮ ದೇಶದಲ್ಲಿ ‘ಕ್ಷೀರ ಕ್ರಾಂತಿ’ ಮಾಡಲು ಪ್ರಚೋದಿಸಿತು. ಅವರು ಇಂಜಿನಿಯರ್ ಆಗಿದ್ದಾಗ ಒಮ್ಮೆ ಇಂಗ್ಲೆಂಡಿಗೆ ಅಂತರ ರಾಷ್ಟ್ರೀಯ ಸಮಾವೇಶವೊಂದಕ್ಕೆ ಹೋಗಿದ್ದರು. ಅವರ ಪಕ್ಕದಲ್ಲಿ ಕುಳಿತಿದ್ದ ಆಂಗ್ಲ ಇಂಜಿನಿಯರ್ ಒಬ್ಬ ಕುರಿಯನ್ ಅವರೊಡನೆ ಮಾತನಾಡುತ್ತಿರುವಾಗ ಭಾರತದ ಹಾಲಿನ ಪ್ರಸ್ತಾಪವಾಯಿತು. ಆತ ಮಾತನಾಡುತ್ತಾ ಮುಂಬೈನ ಹಾಲು ಇಂಗ್ಲೆಂಡಿನ ಗಟಾರದ ನೀರಿಗಿಂತಲೂ ಕೆಳಮಟ್ಟದಲ್ಲಿದೆಯೆಂದು ಟೀಕಿಸಿದರು. ಈ ಒಂದು ಸಣ್ಣ ಮಾತು ಅಪ್ಪಟ ದೇಶಾಭಿಮಾನಿಯಾಗಿದ್ದ ಕುರಿಯನ್ ಅವರ ಆತ್ಮಾಭಿಮಾನವನ್ನು ಕೆರಳಿಸಿತು. ಭಾರತಕ್ಕೆ ಹಿಂದಿರುಗಿದವರೇ ಹೆಚ್ಚು ವೇತನ ಪಡೆಯುತ್ತಿದ್ದ ತಮ್ಮ ಹುದ್ದೆಗೆ ರಾಜೀನಾಮೆ ನೀಡಿ ಕಡಿಮೆ ವೇತನಕ್ಕೆ ಕೈರಾ ಜಿಲ್ಲಾ ಸಹಕಾರಿ ಡೈರಿಗೆ ಸೇರಿಕೊಂಡರು. ಅಲ್ಲಿ ಆಧುನಿಕ ತಂತ್ರಜ್ಞಾನ ಬಳಕೆ ಮಾಡಿಕೊಂಡು, ಅಪಾರ ಪರಿಶ್ರಮದಿಮದ 1950ರಲ್ಲಿ ಕೆಲವೇ ಸಾವಿರ ಲೀಟರ್ ಉತ್ಪಾದಿಸುತ್ತಿದ್ದ ಸಂಸ್ಥೆ ದಿನವೊಂದಕ್ಕೆ 90 ಲಕ್ಷ ಲೀಟರ್ ಹಾಲು ಉತ್ಪಾದನೆ ಮಾಡುವ ಸಾಮಥ್ರ್ಯ ಹೊಂದಲು ಕಾರಣರಾದರು. ಗುಜರಾತಿನ ಈ ಸಂಸ್ಥೆ ‘ಅಮುಲ್’ ಹೆಸರಿನಲ್ಲಿ ವಿಶ್ವಮಾನ್ಯತೆ ಪಡೆಯಲು ಕಾರಣರಾದದ್ದು ಕುರಿಯನ್. ವಿಶ್ವದಲ್ಲಿ ಮೊದಲಬಾರಿಗೆ ಎಮ್ಮೆ ಹಾಲಿನಿಂದ ಹಾಲು ಪುಡಿಯನ್ನು ಉತ್ಪಾದಿಸಿದ ಕೀರ್ತಿ ಸಹ ಇವರಿಗೆ ಸಲ್ಲುತ್ತದೆ. 1973 ರಲ್ಲಿ ಗುಜರಾತ್ ಹಾಲು ಉತ್ಪಾದಕರ ಮಾರ್ಕೆಟಿಂಗ್ ಫೆಡರೇಷನ್ ಸ್ಥಾಪಿಸಿ ಹಾಲಿನ ಉತ್ಪನ್ನಗಳನ್ನು ತಯಾರಿಸಿ ಇಡೀ ವಿಶ್ವಕ್ಕೇ ‘ಅಮುಲ್’ ಹೆಸರಿನಲ್ಲಿ ಪೂರೈಸಿದ ಕೀರ್ತಿಗೆ ಭಾಜನರಾಗಿ “ಕ್ಷೀರ ಕ್ರಾಂತಿಯ ಜನಕ” ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಒಂದು ವೇಳೆ ಕುರಿಯನ್ ಆತ್ಮವಿಶ್ವಾಸವನ್ನು ಕಳೆದುಕೊಂಡಿದ್ದರೆ, ನಮ್ಮ ದೇಶದಲ್ಲಿ ಕ್ಷೀರ ಕ್ರಾಂತಿ ನಡೆಯುತ್ತಿರಲಿಲ್ಲ. ಅವರು ಇಂಜಿನಿಯರ್ ಆಗಿ ಹಣ ಗಳಿಸುತ್ತಿದ್ದರೇ ವಿನಃ ಹೀಗೆ ಅಜರಾಮರರಾಗುತ್ತಿರಲಿಲ್ಲ.
ನಿಮ್ಮಲ್ಲಿ ನಿಮಗೆ ವಿಶ್ವಾಸವಿರಲಿ. ಯಶಸ್ಸಿನ ರಹಸ್ಯವಿರುವುದು ಬಲಿಷ್ಠ ಮನಸ್ಸಿನಲ್ಲಿ, ತುಂಬು ಆತ್ಮ ವಿಶ್ವಾಸದಲ್ಲಿ, ಬಲಿಷ್ಠ ಮನಸ್ಸಿನಿಂದ, ಧೃಢ ವಿಶ್ವಾಸದಿಂದ ಮನುಷ್ಯನ ಬದುಕಿಗೆ ಒಂದು ಬಲ, ಬೆಲೆ ಬರುತ್ತದೆ. ನಮ್ಮಲ್ಲಿರುವ ಕೀಳರಿಮೆಯನ್ನು ಕಿತ್ತೊಗೆಯಬೇಕು. ಅದರ ಬದಲು ವಿಶ್ವಾಸದ ಬೆಳೆಯನ್ನು ಬೆಳೆಸಬೇಕು. ಆಗಲೇ ಮನುಷ್ಯನೆಂದೆಣಿಸಕೊಂಡವನು ಜೀವನದಲ್ಲಿ ಏನನ್ನಾದರೂ ಸಾಧಿಸಬಲ್ಲ ಸಾಧಕನಾಗುತ್ತಾನೆ.
ಯಾವಾಗಲೂ ಸಣ್ಣ ವಿಷಯಗಳ ಬಗ್ಗೆ ಮಾತ್ರ ಶಕ್ತಿ ಮತ್ತು ಸಮಯವನ್ನು ವ್ಯರ್ಥಮಾಡಿಕೊಂಡರೆ ಜೀವನದ ಪ್ರಮುಖ ವಿಷಯಗಳ ಬಗ್ಗೆ ಗಮನ ಕೊಡಲು ಸಾಧ್ಯವಾಗುವುದಿಲ್ಲ. ಆದ್ದರಿಂದ ಯಾವಾಗಲೂ ಸಂತೋಷಕ್ಕೆ ಕಾರಣವಾಗುವ ವಿಷಯಗಳ ಬಗ್ಗೆ ಹೆಚ್ಚು ಗಮನ ಕೊಡಬೇಕು.
ಅದೊಂದು ಕಾಲೇಜು. ಪ್ರಾಧ್ಯಾಪಕರು ತರಗತಿಯಲ್ಲಿ ಪಾಠ ಮಾಡುತ್ತಿದ್ದಾರೆ. ಅವರ ಮುಂದಿದ್ದ ಮೇಜಿನ ಮೇಲೆ ಕೆಲವು ವಸ್ತುಗಳನ್ನಿಟ್ಟುಕೊಂಡಿದ್ದಾರೆ. ಪ್ರಾಧ್ಯಾಪಕರು ತರಗತಿಯಲ್ಲೊಂದು ಪ್ರಯೋಗ ಮಾಡಿದರು. ಅದೆಂದರೆ ಒಂದು ಖಾಲಿ ಗಾಜಿನ ಪಾತ್ರೆಯನ್ನು ಕೈಲಿ ಹಿಡಿದು, ಅದನ್ನು ಸಣ್ಣ ಕಲ್ಲುಗಳಿಂದ ತುಂಬಿದರು. ನಂತರ ಗಾಜಿನ ಪಾತ್ರೆ ತುಂಬಿದೆಯೆ ಎಂದು ಕೇಳಿದರು. ಅದಕ್ಕೆ ವಿದ್ಯಾರ್ಥಿಗಳೆಲ್ಲರೂ ಹೌದೆಂದು ಒಮ್ಮೆಲೇ ದನಿಗೂಡಿಸಿದರು. ನಂತರ ಗಾಜಿನ ಸಣ್ಣ ಗೋಲಿಗಳನ್ನು ತೆಗೆದುಕೊಂಡು ಆ ಪಾತ್ರೆಗೆ ಹಾಕಿ ಚೆನ್ನಾಗಿ ಕುಲುಕಿದರು. ಆ ಗೋಲಿಗಳೆಲ್ಲವೂ ಕಲ್ಲುಗಳ ಸಂದಿಯಲ್ಲಿ ಸೇರಿಹೋದವು. ಆಗ ವಿದ್ಯಾರ್ಥಿಗಳಿಗೆ ಕೇಳಿದರು, ಈಗ ಗಾಜಿನ ಪಾತ್ರೆ ತುಂಬಿದೆಯೆ ಎಂದು. ಅದಕ್ಕೆ ಎಲ್ಲರೂ ತುಂಬಿದೆ ಎಂದರು. ನಂತರ ಪ್ರಾಧ್ಯಾಪಕರು ಒಂದು ಪುಟ್ಟ ಪಾತ್ರೆಯಲ್ಲಿದ್ದ ಮರಳನ್ನು ಪುನಃ ಆ ಗಾಜಿನ ಪಾತ್ರೆಗೆ ಸುರಿದು ಚೆನ್ನಾಗಿ ಕುಲುಕಿದರು. ಮರಳಿನ ಕಣಗಳು ಅಲ್ಲಿದ್ದ ಸಂದಿಯಲ್ಲಿ ಅಡಗಿ ಕುಳಿತವು.
ಆಗಲೂ ಅವರು ಗಾಜಿನ ಪಾತ್ರೆ ತುಂಬಿದೆಯೆ ಎಂದು ಕೇಳಿದಾಗ ಎಲ್ಲರೂ ಹೌದೆಂದು ತಲೆಯಾಡಿಸಿದರು. ಆಗ ಪ್ರಾಧ್ಯಾಪಕರು ವಿಷಯಕ್ಕೆ ಬಂದರು, ‘ನೋಡಿ ವಿದ್ಯಾರ್ಥಿಗಳೇ, ಈ ಗಾಜಿನ ಪಾತ್ರೆ ನಿಮ್ಮ ಜೀವನವನ್ನು ಪ್ರತಿನಿಧಿಸುತ್ತದೆ. ಈ ಪಾತ್ರೆಯಲ್ಲಿರುವ ಕಲ್ಲುಗಳೇ ನಿಮ್ಮ ಕುಟುಂಬ, ನಿಮ್ಮ ಪತ್ನಿ, ನಿಮ್ಮ ಆರೋಗ್ಯ, ನಿಮ್ಮ ಮಕ್ಕಳು. ಇಷ್ಟೆಲ್ಲಾ ಇದ್ದರೂ ನಿಮ್ಮ ಜೀವನ ಪರಿಪೂರ್ಣವಾಗಿರುವುದಿಲ್ಲ. ಗಾಜಿನ ಗೋಲಿಗಳು ನಿಮ್ಮ ಉದ್ಯೋಗ, ನಿಮ್ಮ ಮನೆ, ನಿಮ್ಮ ವಾಹನ ಇತ್ಯಾದಿ. ಇಷ್ಟಾದರೂ ನಿಮ್ಮ ಜೀವನ ಪರಿಪೂರ್ಣವಾಯಿತೆ? ಇಲ್ಲ. ಅದು ಬಿಟ್ಟು ಉಳಿದೆಲ್ಲ ಸಣ್ಣ ಪುಟ್ಟ ವಸ್ತುಗಳು, ಘಟನೆಗಳು, ವ್ಯಕ್ತಿಗಳು ಮರಳಿನಂತೆ ನಿಮ್ಮನ್ನಾವರಿಸಿಕೊಂಡು ನಿಮ್ಮ ಜೀವನ ಪರಿಪೂರ್ಣತೆ ಪಡೆಯಲು ನೆರವಾಗುತ್ತಾರೆ.” ವಿದ್ಯಾರ್ಥಿಗಳು ಒಂದರೆಕ್ಷಣ ಯೋಚಿಸಿ, ‘ಹೌದಲ್ಲಾ ಇವೆಲ್ಲವೂ ಸೇರಿಯೇ ನಮ್ಮ ಜೀವನ ಪರಿಪೂರ್ಣತೆ ಪಡೆಯುವುದು’ ಎಂದೆನಿಸಿತು. ನಂತರ ಪ್ರಾಧ್ಯಾಪಕರು ಹೇಳಿದರು, “ಒಂದು ವೇಳೆ ನೀವು ಗಾಜಿನ ಪಾತ್ರೆಗೆ ಮರಳನ್ನೇನಾದರೂ ಮೊದಲೇ ತುಂಬಿದರೆ, ಗೋಲಿಗಳಿಗಾಗಲೀ ಅಥವಾ ಕಲ್ಲುಗಳಿಗಾಗಲೀ ಸ್ಳಳವಿರುವುದಿಲ್ಲ. ಅಂದರೆ, ಆದ್ದರಿಂದ ಮೊದಲು ಕಲ್ಲುಗಳು, ನಂತರ, ಗೋಲಿಗಳು, ಕೊನೆಗೆ ಮರಳಿನ ಬಗ್ಗೆ ಗಮನವಿರಲಿ”
ನಾವು ನಮ್ಮ ಜೀವನದಲ್ಲಿ ಯಾವುದಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡಬೇಕು ಎಂಬುದನ್ನು ನೀಡದೆ, ಕೇವಲ ಕ್ಷುಲ್ಲಕ ವಿಷಯಗಳಿಗೆ ಪ್ರಾಮುಖ್ಯತೆ ನೀಡಿ ನಮ್ಮ ಜೀವನವನ್ನು ಹಾಳುಮಾಡಿಕೊಳ್ಳುತ್ತೇವೆ.
ನಮ್ಮ ನೆರೆಹೊರೆಯವರೊಡನೆ ಕ್ಷುಲ್ಲಕ ವಿಷಯಗಳ ಬಗ್ಗೆ ಮನಸ್ತಾಪ ಬೆಳೆಸಿಕೊಳ್ಳದೆ, ಮಹತ್ತರವಿಷಯಗಳ ಬಗ್ಗೆ ಆಲೋಚಿಸಬೇಕು. ನಮ್ಮ ಉದ್ಯೋಗ, ನಮ್ಮ ಕುಟುಂಬ, ನಮ್ಮ ಬಂಧು ಬಾಂಧವರು, ನಮ್ಮ ಗೆಳೆಯರು, ನಮ್ಮ ಪರಿಸರ ಇವುಗಳ ಬಗ್ಗೆ ನಮಗೆ ಕಾಳಜಿ ಹೆಚ್ಚಿದಷ್ಟೂ ನಮ್ಮ ಸುಖ-ಸಂತೋಷಗಳು ವೃದ್ಧಿಯಾಗುತ್ತಾ ಹೋಗುತ್ತವೆ. ಮಾನವೀಯ ಸಂಬಂಧಗಳು ಹೆಚ್ಚಾದಂತೆ ದ್ವೇಷ-ಅಸೂಯೆಗಳಿಗೆ ಸ್ಥಾನವಿರುವುದಿಲ್ಲ. ನಮ್ಮ ಬದುಕಿನಲ್ಲಿ ನಾವು ಕಲಿಯುವ ವಿಷಯಗಳು ಬಹಳಿವೆ. ಎಲ್ಲವನ್ನೂ ಶಾಲೆಗಳಲ್ಲಿ ನಾಲ್ಕುಗೋಡೆಗಳ ಮಧ್ಯೆ ಕಲಿಯಲು ಸಾದ್ಯವಿಲ್ಲ. ಬಾಲ್ಯದಲ್ಲಿ ನಮ್ಮ ತಂದೆತಾಯಿಯ ಪ್ರಭಾವ, ನಂತರ ನಮ್ಮ ಬಂಧು ಬಳಗದವರು, ಓದುವ ಪುಸ್ತಕಗಳು, ದೃಶ್ಯ ಮತ್ತು ಶ್ರವಣ ಮಾಧ್ಯಮಗಳು, ಇವೆಲ್ಲ ನಮ್ಮ ಮೇಲೆ ಪ್ರಭಾವ ಬೀರುತ್ತವೆ. ಯಾರು ತಮ್ಮ ಸಾಮಥ್ರ್ಯ ಮತ್ತು ಪ್ರತಿಭೆಗಳನ್ನು ಚೆನ್ನಾಗಿ ಪ್ರದರ್ಶಿಸುತ್ತಾರೆಯೋ ಅಂತಹವರು ಮಾತ್ರ ಜೀವನದಲ್ಲಿ ಮುಂದೆ ಬರಲು ಸಾಧ್ಯ. ಈ ವಿಶ್ವವೇ ಒಂದು ಶಾಲಾ ಕೊಠಡಿಯಿದ್ದಂತೆ. ಅದರಲ್ಲಿನ ಜೀವನವೇ ನಮಗೆ ಬೋಧಿಸುವ ಶಿಕ್ಷಕ ಎಂಬುದನ್ನು ಮರೆಯಬಾರದು.
– ಎಂ.ಎನ್.ಸುಂದರ ರಾಜ್