ಹಾಯ್ ಆತ್ಮೀಯ,
ತಪ್ಪು ತಿಳಿಯಬೇಡ ನಾನಂದದ್ದು ಆತ್ಮೀಯ ಎಂದು ಪ್ರೇಮಿಯೆಂದಲ್ಲ, ನೀನೆಂದು ನನ್ನ ಪ್ರೇಮಿಯಾಗಿರಲಿಲ್ಲ. ಆತ್ಮೀಯ ಎಂದರೆ soulmate ಅಂತ. ಇದೇನು ಇದ್ದಕಿದ್ದ ಹಾಗೆ ನೀನು ಅನ್ನುತ್ತಿದ್ದಾಳೆ ಅಂತ ಹುಬ್ಬು ಗಂಟಿಕ್ಕಬೇಡ ಇದು ಮನಸಿನ ಮಾತು ಇಲ್ಲಿ ಏಕವಚನ ಬಹುವಚನದ ಲೇಪನ ಅನವಶ್ಯಕ. ಅದು ಎಲ್ಲಿದ್ದೊ ತಿಳಿಯದು, ದಿಢೀರನೆ ಪ್ರತ್ಯಕ್ಷವಾದೆ ನನ್ನಲ್ಲಿ ನೂರಾರು ಬದಾಲಾವಣೆ ತಂದೆ, ಯಾರನ್ನು ಕುಡಿ ನೋಟದಲ್ಲು ನೋಡದವಳು ನಿನ್ನ ಕಿರುಗಣ್ಣಿನ ಕೊನೆಯಲ್ಲಿ ನೋಡುವ ಹಾಗೆ ಮಾಡಿದೆ, ಮಾತಿಗಿಂತ ಮೌನವನ್ನೆ ಆಶ್ರಯಿಸುವವಳಲ್ಲಿ ಆಡಿದರು ಮುಗಿಯದಷ್ಟು ಮಾತನ್ನು ತಂದೆ, ಯಾರಿಗೂ ತೆರೆಯದ ಬಾಗಿಲ ನಿನಗಾಗಿ ಕಾದಿರಿಸಿ ನಿಂತಾಗ, ಈ ದಾರಿ ನನ್ನದಲ್ಲವೆಂದೆ, ಆಗಲೂ ನಿನ್ನ ನಾ ದೂರಲಾರದೆ ಹೋದೆ ಏಕೆ ಗೊತ್ತಾ ನೀನು ಬಲು ಚಾಣಕ್ಯ, ನನ್ನನ್ನು ಗೊಂದಲದ ಹಳ್ಳದೊಳಗೆ ಕೆಡವಿ ಪಾರಾದೆ, ಈಗಲೂ ನನಗೆ ತಿಳಿದಿಲ್ಲ ಗೆಳೆಯ ನನ್ನೊಳಗೆ ಆಗ ಇದ್ದ ಭಾವನೆಗಳು ನೀ ಬೆಳೆದಿದ್ದೊ ಅಥವ ನನ್ನದೇ ಹುಚ್ಚು ಭ್ರಮೆಗಳೋ…
ಆದರೂ ಒಂದು ಸಂಶಯ ನೀನು ನನ್ನನ್ನು ಇಷ್ಟ ಪಡದಿದ್ದರೆ, ನಾ ಮಲಗಿದ್ದಾಗ ನನ್ನ ಕೂದಲಿನೊಡನೆ ಆಟವೇಕಾಡಿದೆ, ಬೆರಳನ್ನೇಕೆ ಸವರಿದೆ, ನನ್ನನ್ನೇಕೆ ಹೊಗಳಿದ್ದೆ, ನಾನು ಕಷ್ಟವೆಂದಾಗ ಸಹಾಯ ಮಾಡಿದ್ದು ಸುಳ್ಳಾ, ಮನದ ನೋವ ಕೇಳಿ ಸಾಂತ್ವನ ನೀಡಿದ್ದೆಯಲ್ಲವೇ, ನನ್ನ ಗುಣವನ್ನೇಕೆ ಮೆಚ್ಚಿದೆ, ಗಂಟೆಗಟ್ಟಲೆ ನೀನಾಡಿದ ಮಾತುಗಳ ಹಿಂದೆ ಏನು ಇರಲಿಲ್ಲವೆ, ಎಲ್ಲಕಿಂತ ಹೆಚ್ಚಾಗಿ ನನ್ನ ಅಣ್ಣನಿಗೆ ಕಳಿಸಬೇಕಾದ ರಕ್ಷಬಂಧನದ ಸಂದೇಶ ನಿನಗೆ ಬಂದಾಗ ಕೋಪಗೊಂಡು ಬೈದೆಯಲ್ಲ ಏಕೆ…. ನೀನು ಹೇಳುತ್ತಿದ್ದೆಯಲ್ಲ "ನಿನ್ನನ್ನು ಪಡೆವವನು ಅದೃಷ್ಟವಂತ" ಎಂದು ಆ ಅದೃಷ್ಟವಂತ ನೀನಾಗಲಿಲ್ಲ ಏಕೆ? ನಿನಗೆ ಗೊತ್ತಿತ್ತಲ್ಲವೇ ಗೆಳೆಯ ನಾನು ಪ್ರೀತಿಗಾಗಿ ಪರಿತಪಿಸುತ್ತಿದ್ದ ಜೀವವೆಂದು, ಆಗ ತಾನೆ ಹರೆಯದ ಒಸ್ತಿಲಲ್ಲಿ ನಿಂತಿರುವಳೆಂದು, ತಂದೆ ಇಲ್ಲದ ಹುಡುಗಿ ಎಂದು, ಪ್ರಪಂಚದ ಒಳಿತು ಕೆಡುಕುಗಳ ಅರಿವಿಲ್ಲದ ಮುಗ್ದೆ ಎಂದು…
ಆದರೂ ಏಕೆ ನನ್ನೊಳಗೆ ಆಸೆಗಳ ಸಸಿ ನೆಟ್ಟೆ ಚಿಗುರುವ ಮೊದಲೆ ಚಿವುಟಿದೆ ಏಕೆ? ನಿಜ ಅಂದು ನಾನು ಏನು ಅರಿಯದ ಮುಗ್ದೆಯಾಗಿದ್ದೆ, ಆದರೆ ನಿಜವಾದ ಹೆಣ್ಣಾಗಿದ್ದೆ… ನಿನಗೆ ಗೊತ್ತಾ, ಹೆಣ್ಣು ಒಮ್ಮೆ ತಾನು ಪ್ರೀತಿಸುತ್ತಿದ್ದೇನೆ ಎಂಬ ಭ್ರಮೆಗೆ ಬಿದ್ದರೆ ಬೇರೆ ಯಾರನ್ನು ಕಿರುಗಣ್ಣಿನ ಕೊನೆಯಲ್ಲೂ ಸಹ ನೋಡಲಾರಳು, ನಾನು ಅಂತದ್ದೆ ಭ್ರಮೆಯಲ್ಲಿದ್ದೆ, ಯಾವಾಗ ನೀನು ಆ ಭ್ರಮೆಯನ್ನು ಕಳಚಿದೆಯೋ ಆಗ ನನ್ನಲ್ಲೇ ಒಂದು ಕೀಳರಿಮೆ ಶುರುವಾಯಿತು ನನ್ನನ್ಯಾರು ಪ್ರೀತಿಸಲಾರರೆಂದು ಆಗಲೆ ಅವನನ್ನು ನಾನು ಒಪ್ಪಿದ್ದು ಅದಾದಮೇಲೆ ಎಲ್ಲಾ ನಿನಗೆ ಗೊತ್ತಿದ್ದೆ ಇದೆ ಏನೆಲ್ಲ ಪಾಡು ನಾನು ಅನುಭವಿಸಿದೆ ಎಂದು, ಆಗಲೂ ನಿನ್ನ ಮಾತಿನ ಧೈರ್ಯ ನನ್ನಲ್ಲಿಲ್ಲದೆ ಹೋಗಿದ್ದರೆ ಏನಾಗಿರುತ್ತಿದ್ದೆನೋ ತಿಳಿಯದು….
ಅದಾದನಂತರವೆ ತಿಳಿದದ್ದು ನಮ್ಮಿಬ್ಬರದು ಪ್ರೀತಿ ಸ್ನೇಹಗಳ ಮೀರಿದ ಆತ್ಮಗಳ ಬಂದವೆಂದು, ನಿನಗೆ ನಾನೇನು ಅಲ್ಲದೇ ಇರಬಹುದು ಆದರೆ ನನಗೆ ನೀನು soulmate ಅಂದರೆ ಆತ್ಮೀಯ ಸಖ. ಈ ಪ್ರಪಂಚದಲ್ಲಿ ಬೇರೆ ಯಾರು ನಿನಗೆ ಸಮವಿಲ್ಲ… ಈಗ ನಿನಗೆ ಮದುವೆಯಾಗಿದೆ, ಮುದ್ದಾದ ಮಗುವಿದೆ, ನನಗೂ ಮದುವೆಯಾಗಿದೆ ವಿಪರ್ಯಾಸವೆಂಬಂತೆ ನಿನ್ನ ತಮ್ಮನೇ ನನ್ನ ಪತಿ, ನೀನಂದು ಹೇಳಿದ್ದೆ "ನಿನಗೆ ನನಗಿಂತಲೂ ಒಳ್ಳೆ ಹುಡುಗ ಸಿಗುತ್ತಾನೆ" ಎಂದು, ಆ ಹುಡುಗ ನಿನ್ನ ತಮ್ಮನೇ ಆಗಿದ್ದು ವಿಧಿಯಾಟ, ನೀನು ಹೇಳಿದ್ದು ನಿಜ ಆತ ನಿನಗಿಂತಲೂ ಒಳ್ಳೆಯವನೇ, ನನ್ನ ವಿಷಯದಲ್ಲಿ ತುಂಬಾ ಸ್ವಾರ್ಥಿ ಆತನ ಪ್ರಕಾರ ಅದು ಪ್ರೇಮವಂತೆ ಇರಲಿ ಆ ಸ್ವಾರ್ಥದಲ್ಲೂ ಸುಖವಿದೆ. ಎಲ್ಲ ಮುಗಿದ ಮೇಲೆ ಈಗ ಇದೆಲ್ಲ ಏಕೆ ಹೇಳುತ್ತಿರುವೆ ಎಂದುಕೊಳ್ಳುತ್ತಿರುವೆಯ, ಮೊನ್ನೆ ಹೀಗೆ ಮೊದಲ ಕ್ರಷ್ ನ ಪ್ರಸ್ತಾಪ ಬಂತು ಆಗ ತಟ್ಟನೆ ನಿನ್ನ ಬಿಂಬ ಮನದಲ್ಲಿ ಇಣುಕಿ ಮರೆಯಾಯಿತು, ನನ್ನ ಮೊದಲ ಪ್ರೇಮದ ಫಲದಿಂದ ನನ್ನ ಜೀವನ ಎಲ್ಲಿಂದ ಎಲ್ಲಿಗೆ ಬಂದಿತೆಂದು ಯೋಚಿಸಿದೆ, ಇದೆಲ್ಲ ನಿನಗೆ ಹೇಳಬೇಕೆಂದು ತುಂಬಾ ದಿನಗಳಿಂದ ಅಂದುಕೊಳ್ಳುತ್ತಿದ್ದೆ ಆದರೆ ಹೇಳಲಾಗಿರಲಿಲ್ಲವಷ್ಟೆ..
ನಿನ್ನ ಬಗ್ಗೆ ಎಂದಿಗೂ ಸಂತೋಷವೇ, ಮುತ್ತಿನಂಥ ಹೆಂಡತಿ, ಮುದ್ದಾದ ಮಗು ನಿನ್ನ ಬಾಳು ಯುಗಾದಿಯಾಗಲಿ….
ಸಾಗುತಿಹಳು ಈ ಅಭಿಸಾರಿಕೆ
ನಿನ್ನ ಋಣದ ಪರಿದಿಯಾಚೆಗೆ
ಸ್ನೇಹದ ಕೊಂಡಿ ಕಳಚಿ ದೂರಕೆ
ಮತ್ತೆ ಬರಲಾರಳು ನಿನ್ನ ನೆನಪಿನ ಲೋಕಕ್ಕೆ….
ಇಂತಿ ನಿನಗೆ ಏನು ಆಗಲಾರದ,…
ಚೆಂದದ ಲೇಖನ ಲಾವಣ್ಯ ಅವರೇ !.. ನಿಮ್ಮ ಲೇಖನಿಯಿಂದ ಇನ್ನಷ್ಟು ಸೊಗಸಾದ ಬರಹಗಳ ನಿರೀಕ್ಷೆಯಲ್ಲಿ 🙂
ಧನ್ಯವಾದಗಳು, ಪ್ರಯತ್ನಿಸುತ್ತೇನೆ
Nice write up…