ಕನ್ನಡ ನಾಡಿನಲಿ
ಶ್ರೀಗಂಧದ ನಾಡಿನಲಿ
ಸಹ್ಯಾದ್ರಿಯ ಗೂಡಿನಲಿ
ಕಾವೇರಿಯ ಮಡಿಲಿನಲಿ
ನನ್ನದೊಂದು ಪುಟ್ಟ ಗುಡಿಸಲು
ಕನ್ನಡ ನುಡಿಯು ಮಿನುಗುವುದಲ್ಲಿ
ಹಸಿರು ತೋರಣದೊಲು
ಹಸಿರನುಟ್ಟ ಭುವನಗಿರಿ
ಮುಡಿಯಲಿಟ್ಟು ನವಿಲುಗರಿ
ಹಕ್ಕಿಗೊರಲ ತಬ್ಬಿ ಹಿಡಿದು
ಚಂದಿರನ ಗಿಲಕಿ ಬಡಿದು
ನನ್ನ ಹ್ರುದಯ ಕನ್ನಡವನೆ ಮಿಡಿಯುವುದು
ನನ್ನ ಮಡದಿ ಮತ್ಸ್ಯಕನ್ಯೆ
ಬಳೆಯ ಸದ್ದು ಗೆಜ್ಜೆನಾದ ಅಡಿಗಡಿಗೂ ಕನ್ನಡ
ಸುತನ ಪ್ರವರ ತೊದಲು ನುಡಿಯಲಿ ಸವಿಜೇನು ಕನ್ನಡ
ನಮ್ಮ ಮನೆಯ ಅಂಗಳದಿ ಪ್ರಜ್ವಲಿಪುದು ಕನ್ನಡ
ರಾಷ್ಟ್ರನುಡಿ ರಾಜನುಡಿ ಯಾವುದಾದರೇನು
ದಾಯಾದಿಗಳ ನುಡಿಯ ನಡೆಯು ಎಂತಿದ್ದರೇನು
ನನ್ನ ಮನದ ಮನೆಯ ನುಡಿಯು ಎಂದೂ ಒಂದೇ ಕನ್ನಡ
ನೂರು ನುಡಿಗಳ ಬಿರುಗಾಳಿ ಚಂಡಮಾರುತವೇ ಬರಲಿ
ಎದೆಯ ಭಾವದಾಳಕೆ ಇಳಿದ ಬೇರು ತರಗೆಲೆಯಲ್ಲ ಕನ್ನಡ
ಎದೆಯ ಮೇಲೆ ಕೊರೆದುಕೊಳ್ಳಿ
ಮನದ ಆಳಕೂ ಬರೆದುಕೊಳ್ಳಿ
ಹ್ರುದಯದೊಳಗೆ ಅರಳುವಂತೆ ಕನ್ನಡ ಕನ್ನಡ ಕನ್ನಡ
ನಮ್ಮೆಲ್ಲರ ಮನೆಯಂಗಳದಿ ಕನ್ನಡದ ಹೂ ಅರಳಲಿ
ಕಂಪು ಬೀರುತಿರಲಿ ಮನ ನಗೆ ಬೆಳಕಾಗಲಿ ಎಲ್ಲರೊಳಗೆ
ಎರವಲು ನುಡಿಯ ಹಿಂದೆ ಅಲೆಯುವಿರೇಕೆ ಸುಮ್ಮನೆ
ಕನ್ನಡಮ್ಮನ ನುಡಿಯೊಲವು ಮರೆತಿರೇಕೆ ಇಷ್ಟು ಬೇಗನೆ
ಗಿರಿ ಪಂಕ್ತಿಯ ಎದೆಯಿಂದ ಚಿಮ್ಮಿ ಬಂತು
ಕಾನನದ ಕೊರಳಿನಿಂದ ಹೊಮ್ಮುತಿಹುದು
ಕನ್ನಡ ಕನ್ನಡ ಕನ್ನಡ
ನಿಮ್ಮ ಎದೆಯು ಬರಡೇನು
ನಿಮ್ಮ ಮನವು ಕುರುಡೇನು
ಬಳಸಿ ಸ್ವಲ್ಪ ಕನ್ನಡ
ನೆಟ್ಟು ನೋಡಿ ತೊದಲ್ನುಡಿಯಲಿ
ಕನ್ನಡ ನುಡಿಯು ಅಮ್ರುತ
ಗುಂಡಿಗೆಯ ಗದ್ದುಗೆ ಮೇಲೆ
ನೆಟ್ಟುಬಿಡಿ ಕನ್ನಡ ನುಡಿ ಬಾವುಟ
-ಚಿನ್ನುಪ್ರಕಾಶ್ ಶ್ರೀರಾಮನಹಳ್ಳಿ
ಆಕಾಶ ಧುಮ್ಮಿಕ್ಕುತ್ತಿದೆ ನೀರಾಗಿ
ಜುಳುಜುಳು ಆಕಾಶದಲ್ಲಿ ಬಾವಲಿಗಳೆಂಬೊ ತಿಮಿಂಗಿಲಗಳು
ಟಪಟಪ ರೆಕ್ಕೆಬಡಿದು ವೈಯ್ಯಾರದಿಂದ ಈಜುತ್ತಿವೆ.
ಕಿತ್ತು ತಟ್ಟಾಟ ಆಡಿ ಬಿಸುಟಿದ ಚೆಂಡುಮಲ್ಲಿಗೆ ಹೂಗಳು
ಆಕಾಶದುದ್ದಕ್ಕೂ ಮುಳುಗಿ ಚುಕ್ಕಿಗಳಾಗಿ ಬೆಳಗಲು ಪ್ರತಿಷ್ಠಾಪನೆಗೊಂಡಿವೆ.
ಈ ಗುಲಾಬಿ ಹೂವು ಚೆಂಡುಮಲ್ಲಿಗೆಗಳಿಗೆಲ್ಲ ರಾಣಿಯೆಂಬಂತೆ
ಜಲರಾಶಿಯಲ್ಲುರಿದುರಿದು ಕೆಂಪು ಎಸಳುಗಳ ಭೂಮಿಗೆಸೆದು ಬೆಳಕು ಹಬ್ಬಿಸಿದೆ.
ವಿಮಾನಗಳು ಹಡಗುಗಳಾಗಿ ಹಕ್ಕಿಗಳ ಕಲ್ಲುಬಂಡೆಗಳಿಗೆ ಢಿಕ್ಕಿಯಾಗದಂತೆ
ಗಾಳಿಯ ನೀರನ್ನು ಸೀಳಿ ಸಿಳ್ಳೆಹಾಕಿ ಮುನ್ನುಗ್ಗುತ್ತಿವೆ.
ಕಪ್ಪು ಕಪ್ಪೆಗಳು ಮೋಡಗಳಾಗಿ ನೀರೊಳಗೆ ಕುಪ್ಪಳಿಸಿ ಹನಿಗಳ ಚಿಮುಕಿಸುತಿವೆ ನೆಲಕೆ;
ಅವು ಲೋಕದುದರವ ಹುಡುಕ್ಹುಡುಕಿ ಸಮಾಗಮಿಸುವಂತೆ ತಟತಟ ಉದುರುತ್ತಿವೆ.
ಅಡ್ಡಾಡಲೆಂಬಂತೆ ಮೇಲೆದ್ದ ಮಲೆಗಳು ಆಕಾಶದ ನೀರ ಸೀಳಲು -ದ್ವೀಪ;
ಮುಖ ತೊಳೆಯಲೆದ್ದ ಮರದ ತಲೆಮೇಲೆ ಉರಿವ ಹೂವಿನ ದೀಪ.
ಮೇಲೆ ನೀರು, ಕೆಳಗೆ ನೆಲ ;
ಮುಳುಗೇಳುತ್ತಾ ನಾವಿಲ್ಲಿ- ನಡುವಿನ ಉಬ್ಬು-ತಗ್ಗುಗಳಲ್ಲಿ.
-ಕಾಜೂರು ಸತೀಶ್
ಕೊನೆಗೂ ಬದುಕು ಕಟ್ಟಿಕೊಳ್ಳುವಲ್ಲಿ ಸೋತುಬಿಟ್ಟೆ,
ಕೊನೆಗೂ ಬದುಕು ಕಟ್ಟಿಕೊಳ್ಳುವಲ್ಲಿ ಸೋತುಬಿಟ್ಟೆ,
ಬಣ್ಣದ ಚಿಟ್ಟೆಗಳನ್ನ ದೂರದಲ್ಲೇ ನಿಂತು
ನೋಡಬೇಕಿತ್ತು,
ರೆಕ್ಕೆಗಳಿಗೆ ಪದ ಕಟ್ಟುವುದೊಂದು
ನಿಜಕ್ಕೂ ಪಾಪದ ಕೆಲಸ,
ಬಣ್ಣ ಕಳೆದುಕೊಂಡ ಚಿಟ್ಟೆ ಯಾವ ಹೂ
ಮೋಹದ ನಿರ್ಜೀವ ಆಬ್ಜೆಕ್ಟೋ ಏನೋ
ಸಮ್ಟೈಮ್ಸ್ ಕೂತ ಚೇರಿನ ಕಾಲು ನಡುಗುವುದನ್ನ ಗ್ರಹಿಸಿದ್ದೇನೆ,
ನಿಂತ ನಿಲುವು ವಾಲುವ ನೋವುಂಡಿದ್ದೇನೆ,
ಆಕಾಶದತ್ತ ಬೊಗಸೆ ಅನೂಹ್ಯವೊಂದನ್ನ
ಬೇಡುವಾಗ ಅಪ್ಪಿಕೊಂಡಿದ್ದ ಮಂದಿ ಎದೆಗಳಲ್ಲಿ ಅಸಹ್ಯ ನಗೆಯಾಡಿಕೊಂಡದ್ದಿದೆ,
ನಡೆಗೆ ಎಡತಾಕಿದ ಅತೀ ಸಣ್ಣ ಕಲ್ಲೂ
ಎಲುಬಿನ ಪ್ರತೀ ಮೂಳೆಯ ಕೃಶ ನಳಿಕೆಯ ಮೇಲೆ ಬೇರು ಬಿಡುತ್ತಲೇ ಇದೆ, ಕೀಳುವುದೊಂದು ಅಪ್ರಾಪ್ತ ಕ್ರಿಯೆಯ ಪಕ್ಕಾ
ಪ್ಲಾನಡ್ ಭೋಗದ ಸುಳ್ಳು ಸುಖ,
ಭುಜ ತಗುಲಿಸುತ್ತಿದ್ದ ಅವಳು ಈಗಲೂ
ಎದೆಯ ಅತೀ ಸಮೀಪ ಬಿಸಿಯುಸಿರು
ಬಿಟ್ಟಾಗ, ಹೃದಯ, ಅದೃಶ್ಯ ಕೈ ಬೆರಳಿನುಗುರ
ಚೂಪು ತಿವಿತಕ್ಕೆ ಸ್ಪಂದಿಸುವ ಬಲೂನು,
ಮಾರಾಟವಾಗದ ಹೂ, ಹುಳ್ಳ ಹುಡುಗಿಯ ದೈನ್ಯತೆ,
ಪ್ರಖರ ಬಿಸಿಲಿನ ಕಿರಣಗಳ ರೇಖೆ, ಹೂದಳ
ಸುಕ್ಕುಗಟ್ಟುವುದನ್ನ ಕಾದು ಕ್ಯಾಪ್ಚರ್ ಮಾಡಿಕೊಂಡ ಫೋಟೋಗ್ರಾಫರ್,
ತುಂಡುಡುಗೆಯಲ್ಲಿ ಮೈ ಕುಣಿಸಿ ತೋಳುಗಳನ್ನ ಮೆಲ್ಲ ಗಾಳಿ ಸವರಲು ಬಿಟ್ಟುಬಿಡುವ ವಿದೇಶಿ ಡ್ಯಾನ್ಸರ್ ಅಬ್ಬಾ…
ಕಣ್ಣೆದುರೇ ನಿರ್ಭಯದಿಂದ ಬಟ್ಟೆ ಕಳಚಿಕೊಳ್ಳುವ ಒಂದೊಂದು ದೃಶ್ಯವೂ ಬದುಕನ್ನ
ನಿಗದಿ ಮಾಡಿ ಬೋಲ್ಡ್ ಅಕ್ಷರಗಳನ್ನ ಉಳಿಸಿಬಿಡುತ್ತವೆ
ಇವೆಲ್ಲವೂ ಅನವಶ್ಯ ಹಲ್ಲ ಸಂದಿಯಲ್ಲಿ ಸಿಲುಕಿದ
ನಾರು ಮಾಂಸದ ಹಾಗೆ ಕೊಳೆಯುವಾಗ
ಮತ್ತೆ ಮತ್ತೆ ಆ ಹಳೇ ರೇಡಿಯೋ ಅದನ್ನೇ
ಹಾಡುತ್ತದೆ
ಕೊನೆಗೂ ಬದುಕು ಕಟ್ಟಿಕೊಳ್ಳುವಲ್ಲಿ ಸೋತುಬಿಟ್ಟೆ,
-ರಾಜಶೇಖರ ಬಂಡೆ
ಈ ಮೇಲಿನ ಮೂರು ಕವಿತೆಗಳನ್ನು ಆಡಿಯೋದಲ್ಲಿ ಆಯಾ ಕವಿಗಳ ಧ್ವನಿಯಲ್ಲಿ ಕೇಳಲು ಈ ಕೆಳಗಿನ ಕೊಂಡಿಗಳನ್ನು ಮೇಲೆ ಕ್ಲಿಕ್ಕಿಸಿ. ಈ ಧ್ವನಿಮುದ್ರಿಕೆಗಳನ್ನು ಡೌನ್ ಲೋಡ್ ಮಾಡಿಕೊಳ್ಳಲು ಆಯಾ ಲಿಂಕ್ ಗಳ ಮೇಲೆ ರೈಟ್ ಕ್ಲಿಕ್ ಮಾಡಿ ನಂತರ save as ಆಪ್ಷನ್ ನಿಂದ ನಿಮ್ಮ ಕಂಪ್ಯೂಟರ್ ಗೆ ಡೌನ್ ಲೋಡ್ ಮಾಡಿಕೊಳ್ಳಿ…
kajoor Satish-Aakasha dummukkuttide
Bande-Konegu baduku kattikolluvalli
*****
mooru kavitegaloo thumba chennagive.abhinandanegalu-smitha
chennagive kavitegalu mattu vaachanavu….kooda…
ಹೊಸ ಪ್ರಯೋಗ…..ಕಾವ್ಯ ಪ್ರಕಟಣೆಯೊಂದಿಗೆ….ಕವಿ ಮಿತ್ರರ ವಾಣಿಯನ್ನು ಕೇಳುವ ಸದಾವಕಾಶವನ್ನು ಕಲ್ಪಿಸಿದ ಪಂಜು ಬಳಗದ ಎಲ್ಲಾ ಮಿತ್ರರಿಗೆ ಧನ್ಯವಾದಗಳು….
ಆತ್ಮೀಯ ಕವಿ ಮಿತ್ರರಿಗೆ ಒಂದು ಸೂಚನೆ : ಕಾವ್ಯ ವಾಚನ ಶೈಲಿಯಲ್ಲಿ ಭಾವನೆಗಳು ಪ್ರಕಟಗೊಳ್ಳಲಿ ಮತ್ತು ಧ್ವನಿಯಲ್ಲಿ ಏರಿಳಿತಗಳಿದ್ದರೇ ಕೇಳಲೂ ಇನ್ನೂ ಚೆನ್ನ….ಅಲ್ಪಪ್ರಾಣ ಮತ್ತು ಮಹಾಪ್ರಾಣಗಳ ಉಚ್ಛಾರಗಳ ಕಡೆಗೆ ಗಮನವಿರಲಿ. ತಪ್ಪು ಭಾವಿಸಬೇಡಿ…ಭಾಷೆಯ ಅಭಿಮಾನದಿಂದ ಹೇಳುತ್ತಿರುವ ಅಭಿಪ್ರಾಯವೇ ಹೊರತು ಯಾರನ್ನಾಗಲಿ ಬೇಜಾರು ಮಾಡಲು ಹೇಳಿದ್ದಲ್ಲ…ಶುಭಾಶಯಗಳು….ಶುಭದಿನ ಸ್ನೇಹಿತರೇ….
ಹೊಸ ಪ್ರಯೋಗ…..ಕಾವ್ಯ ಪ್ರಕಟಣೆಯೊಂದಿಗೆ….ಕವಿ ಮಿತ್ರರ ವಾಣಿಯನ್ನು ಕೇಳುವ ಸದಾವಕಾಶವನ್ನು ಕಲ್ಪಿಸಿದ ಪಂಜು ಬಳಗದ ಎಲ್ಲಾ ಮಿತ್ರರಿಗೆ ಧನ್ಯವಾದಗಳು….
ಹೊಸ ಪ್ರಯೋಗ ತುಂಬಾ ಚೆನ್ನಾಗಿದೆ.
ಶುಭವಾಗಲಿ.
ಹೊಸ ಪ್ರಯೋಗ !
ಕವಿಗಳ ದ್ವನಿಯನ್ನೂ ಕೇಳಬಹುದು !
ಯೂ ಟ್ಯೂಬ್ ನಲ್ಲಿ ವೀಡಿಯೋ ಹಾಲಿ ಲಿಂಕ್ ಕೊಟ್ಟರೆ ಗಾಯನ ಕೇಳುತ್ತ ನೋಡಲೂ ಬಹುದು 🙂
Kanooru satishravara kavana Mattu vachana Bahala sogasagide
ಚೆಂದವಾಗಿವೆ