13 ಫೆಬ್ರವರಿ, 2016
ದೆಹಲಿಯ ಮಯೂರ್ ವಿಹಾರ್ ಎಂಬ ಪ್ರದೇಶದ, ಕೋಟ್ಲಾ ಹಳ್ಳಿಯ ಮೂರನೇ ಗಲ್ಲಿಯಲ್ಲಿ ತಲೆಯೆತ್ತಿರುವ ಕಟ್ಟಡದ ಐದನೇ ಮಹಡಿಯ ಮನೆಯೊಂದು ಆ ದಿನ ತುಸು ಹೆಚ್ಚೇ ಅನ್ನುವಷ್ಟು ಚಟುವಟಿಕೆಯಲ್ಲಿತ್ತು.
ನಾನು ಆಫ್ರಿಕಾದ ಮೂಲೆಯೊಂದರಲ್ಲಿರುವ ಲುವಾಂಡಾಗೆ ಉದ್ಯೋಗ ನಿಮಿತ್ತವಾಗಿ ತೆರಳುವ ತರಾತುರಿಯಲ್ಲಿದ್ದೆ. ಪ್ಯಾಕಿಂಗ್ ಬಹುತೇಕ ಮುಗಿದಿದ್ದರೂ ಬ್ಯಾಗಿನೊಳಗೆ ಇನ್ನೇನು ತುರುಕಬಹುದು ಎಂಬ ದುರಾಸೆಯಿಂದ ನನ್ನ ಕಣ್ಣುಗಳು ಮನೆಯ ಮೂಲೆಮೂಲೆಗಳನ್ನು ಜಾಲಾಡುತ್ತಿದ್ದವು. ನಾಲ್ಕೈದು ಭಾರದ ಪುಸ್ತಕಗಳು “ಬಾ ಬಾರೋ… ಎತ್ತಿಕೋ ನನ್ನ'' ಎಂದು ಮೌನವಾಗೇ ಬಲು ಪ್ರೀತಿಯಿಂದ ನನ್ನನ್ನು ಕರೆಯುತ್ತಿದ್ದವು. ಬ್ಯಾಗುಗಳು ನಿಗದಿತ ತೂಕಕ್ಕಿಂತ ಹೆಚ್ಚಾಗುತ್ತಿರುವ ಅಂದಾಜಾಗುತ್ತಿದ್ದಂತೆಯೇ ನಾನು ತೀರಾ ಸೆಲೆಕ್ಟಿವ್ ಆಗತೊಡಗಿದ್ದೆ. ಅಂತೂ ಇಂತೂ ರಾಷ್ಟ್ರ ರಾಜಧಾನಿಯಿಂದ ಹೊರಡುವ ಸಮಯ ಬಂದೇ ಬಿಟ್ಟಿತ್ತು.
ಹೀಗೆ ನನ್ನದೇ ಗಡಿಬಿಡಿಯಲ್ಲಿ ನಾನು ಮುಳುಗಿದ್ದಾಗ ನನ್ನದೇ ವಯಸ್ಸಿನ ಮೂವರು ತರುಣರು ಪೆಚ್ಚುಮೋರೆ ಹಾಕಿಕೊಂಡು, ಕಣ್ಣಲ್ಲೇ ನನ್ನನ್ನು ತಿಂದುಹಾಕುವರೇನೋ ಎಂಬಂತೆ ಕಳೆದೊಂದು ಘಂಟೆಯಿಂದ ಕಾಯುತ್ತಾ ಕುಳಿತಿದ್ದರು. ಸಾಗರ್ ನ ಎಡಗೈಯಲ್ಲಿ ಬಿಯರ್ ಕ್ಯಾನ್ ಒಂದು ಭದ್ರವಾಗಿದ್ದರೆ, ಬಲಗೈ ಒಂದು ಪುಸ್ತಕವನ್ನು ಹಿಡಿದುಕೊಂಡಿತ್ತು. ಕೂತಲ್ಲೇ ವಿನಾಕಾರಣ ಅಲುಗಾಡುತ್ತಿದ್ದ ಅವನ ಕಾಲುಗಳು ಅಸಮಾಧಾನವನ್ನು ಸ್ಪಷ್ಟವಾಗಿ ಹೊರಹಾಕುತ್ತಿದ್ದವು. ಲಲಿತ್ ಎಂದಿನಂತೆ ಸುಮ್ಮನೆ ಕುಳಿತಿದ್ದ. ಅವನ ಒದ್ದಾಟವೇನಿದ್ದರೂ ಮನಸ್ಸಿನೊಳಗಷ್ಟೇ. ಅಲೋಕ್ ನೋಟ್ ಬುಕ್ ಮತ್ತು ಪೆನ್ನೊಂದನ್ನು ಹಿಡಿದುಕೊಂಡು ತಕ್ಕಮಟ್ಟಿಗೆ ಶಾಂತವಾಗಿ ಕುಳಿತಿದ್ದರೂ ಆಗೊಮ್ಮೆ ಈಗೊಮ್ಮೆ ಏನೋ ಗೊಣಗುತ್ತಿದ್ದ. ಅದೇನು ಎಂಬುದರ ಬಗ್ಗೆ ತಲೆಕೆಡಿಸಿಕೊಳ್ಳುವ ತಾಳ್ಮೆಯೂ, ಸಮಯವೂ ನನಗಂತೂ ಇರಲಿಲ್ಲ. ಅವನ ಕಣ್ಣುಗಳು ನಾನು ಹೋದಲ್ಲೆಲ್ಲಾ ಸದ್ದಿಲ್ಲದೆ ನನ್ನನ್ನು ಹಿಂಬಾಲಿಸುತ್ತಿದ್ದವು.
ಬರೋಬ್ಬರಿ ಮೂರು ಬ್ಯಾಗುಗಳನ್ನು ಉಸಿರುಗಟ್ಟುವ ಮಟ್ಟಿಗೆ ತುಂಬಿಸಿ ನಾನು ನಿರಾಳನಾದೆ. “ಓಕೆ ಗಯ್ಸ್'' ಎಂದು ಘೋಷಣೆಯ ಬೀಜಮಂತ್ರವನ್ನು ಮೂವರಿಗೂ ಕೇಳಿಸುವಂತೆ ಹೇಳಿ ಕುರ್ಚಿಯೊಂದನ್ನು ಎಳೆದು ಮೂವರಿಗೂ ಎದುರಾಗಿ ಕುಳಿತೆ. ಮೂವರ ಮುಖಗಳೂ ಹೂವಿನಂತೆ ಅರಳಿದವು. ಸಾಗರನ ಕೈಯಿಂದ ಬಿಯರ್ ಕ್ಯಾನನ್ನು ಕಸಿದುಕೊಂಡ ನಾನು ಪೆನ್ನು ಮತ್ತು ನೋಟ್ ಬುಕ್ಕನ್ನು ಅಲೋಕನ ಕೈಯಿಂದ ತೆಗೆದುಕೊಂಡು ಜಿದ್ದಿಗೆ ಬಿದ್ದವನಂತೆ ಬರೆಯತೊಡಗಿದೆ. ಮೂವರ ಕತ್ತೂ ಕುತೂಹಲದಿಂದ ನನ್ನೆಡೆಗೆ ಬಾಗಿದವು. ಕುರ್ಚಿಯನ್ನು ಹಿಂದಕ್ಕೆಳೆದುಕೊಂಡ ನಾನು ಮೌನವಾಗಿ ಬರೆಯುವುದನ್ನು ಮುಂದುವರೆಸಿದೆ. ನನ್ನ ಪ್ರೈವಸಿಯ ಅಗತ್ಯತೆಯ ಬಗ್ಗೆ ಮೊದಲೇ ತಿಳಿದವರಂತೆ ನನ್ನೆಡೆಗೆ ಬಾಗಿದ ಕತ್ತನ್ನು ಹಿಂದೆ ತಂದು ಸಮಾಧಾನದ ನಿಟ್ಟುಸಿರು ಬಿಟ್ಟರು.
ಮುಂದಿನ ಹದಿನೈದು ನಿಮಿಷದಲ್ಲಿ ಮೂರು ಶಾಯರಿ ಶೈಲಿಯ ಹಿಂದಿ ಕವಿತೆಗಳು ನನ್ನ ಲೇಖನಿಯಿಂದ ಮೂಡಿಬಂದವು. ನೋಟ್ ಬುಕ್ಕನ್ನು ಅಲೋಕನಿಗೆ ಕೊಟ್ಟ ನಾನು ಹಿಂದಕ್ಕೊರಗಿ ತಣ್ಣನೆಯ ಬಿಯರ್ ಅನ್ನು ಹೀರಿಕೊಂಡೆ. ಓದಿಕೊಂಡ ಮೂವರೂ ಕಣ್ಣಲ್ಲೇ ಮೆಚ್ಚುಗೆಯನ್ನು ಸೂಚಿಸಿದರು. “ಸಾಲಾ… ಕವಿ ಮಹಾರಾಜ್'' ಎಂದು ಕೀಟಲೆಯನ್ನೂ ಮಾಡಿದರು. ನಾನೂ ಮುಗುಳ್ನಕ್ಕು, ಮಾತನಾಡುವ ಗೋಜಿಗೆ ಹೋಗದೆ ಮನದಲ್ಲೇ ನನ್ನ ದೂರದ ಪ್ರಯಾಣದ ಮಾಸ್ಟರ್ ಪ್ಲ್ಯಾನ್ ಮಾಡತೊಡಗಿದೆ. ಯಾಕೋ ಏನೋ, ದೆಹಲಿಯ ಆ ಕೊರೆಯುವ ಚಳಿಯಲ್ಲೂ ಚಿಲ್ಡ್ ಬಿಯರ್ ಖುಷಿ ಕೊಟ್ಟಿತು.
ಸಾಗರ್, ಲಲಿತ್ ಮತ್ತು ಅಲೋಕ್ ಎಲ್ಲರಂತೆ ಮರುದಿನದ ವ್ಯಾಲೆಂಟೈನ್ ದಿನದ ಸಿದ್ಧತೆಯಲ್ಲಿದ್ದರು. ಅಂಗೋಲಾದ ರಾಜಧಾನಿ ಲುವಾಂಡಾಗೆ ದುಬೈ ವಾಯುಮಾರ್ಗವಾಗಿ ದೆಹಲಿಯಿಂದ ತೆರಳಲಿರುವ ನನ್ನ ಮುಂದಿನ ಇಪ್ಪತ್ತೈದು ಘಂಟೆಗಳು ನೀರಸ ವೈಮಾನಿಕ ಹಾರಾಟದಲ್ಲಿ ಮುಗಿದುಹೋಗಲಿದ್ದವು.
ವ್ಯಾಲೆಂಟೈನ್ ದಿನಕ್ಕೆ ಕ್ಷಣಗಣನೆ ಶುರುವಾಗಿತ್ತು.
****
ನಾನು ಒಂದು ಪ್ರತಿಷ್ಠಿತ ಸರ್ಕಾರಿ ಸಂಸ್ಥೆಯೊಂದರಲ್ಲಿ ಉದ್ಯೋಗಿ. ಅಲ್ಪ ಸ್ವಲ್ಪ ಓದುವ ಹುಚ್ಚಿದ್ದ ನನಗೆ ದೆಹಲಿಗೆ ಬಂದ ನಂತರವಂತೂ ಎಲ್ಲರಂತೆ ಉರ್ದು, ಗಝಲ್, ಶಾಯರಿಗಳು ಸಂಗಾತಿಗಳಾಗಿ ಬಿಟ್ಟಿದ್ದವು. ನಾನು ಬರೆಯಬಲ್ಲೆ ಎಂಬ ಸಂಗತಿ ಖಾತ್ರಿಯಾದಂದಿನಿಂದ ಆಗೊಮ್ಮೆ ಈಗೊಮ್ಮೆ ಪತ್ರಿಕೆಗಳಿಗೆ ಬರೆಯುತ್ತಿದ್ದೆ. ನಾನು ಬರೆಯಬಲ್ಲೆ ಎಂಬ ವಿಷಯ ಉಳಿದವರಿಗೂ ನನಗಿಂತ ಗಟ್ಟಿಯಾಗಿ ಖಾತ್ರಿಯಾದ್ದರಿಂದ ಅವರಿಗಾಗಿ ರಿಪೋರ್ಟು-ರಶೀದಿ, ಲೆಟರು-ಲಾಲಿ, ಕಾವ್ಯ-ಕಾಜಾಣ ಎಂಬ ಭೇದವಿಲ್ಲದೆ ಬರೆಯುತ್ತಾ ಸಮಾಜಸೇವೆ ಮಾಡುವ ಭಾಗ್ಯ (?) ನನ್ನದಾಯಿತು. ಇವಿಷ್ಟು ಬಿಟ್ಟರೆ ನನ್ನ ಬಗ್ಗೆ ಇನ್ನೇನೂ ಆಸಕ್ತಿದಾಯಕ ವಿಷಯಗಳಿಲ್ಲ. ಇನ್ನು ಉಳಿದ ಮೂವರದ್ದು ಮೂರು ಕಥೆ. ಅಂದ ಹಾಗೆ ಆ ಸಂಜೆ ಬರೆದ ನಾನು ಬರೆದ ಮೂರು ಕವಿತೆಗಳು ಮೂವರಲ್ಲಿ ಹಂಚಿಹೋದವು. ನಾನು ಭಾರತದ ನೆಲವನ್ನು ಬಿಟ್ಟಿ ಆಗಲೇ ಚಿಮ್ಮಿಯಾಗಿತ್ತು. ನನ್ನ ಆ ಮೂರು ಕವಿತೆಗಳು ನನಗೆ ತಿಳಿದ ಮಟ್ಟಿಗೆ ಮರುದಿನದ ವ್ಯಾಲೆಂಟೈನ್ ದಿನದ ಸಡಗರಕ್ಕೆ ಮದುವಣಗಿತ್ತಿಯಂತೆ ಸಜ್ಜಾಗುತ್ತಿದ್ದವು.
ಮಣಿಪುರ್ ಮೂಲದ ಸಾಗರ್ ಚೆಟ್ರಿ ನಾಲ್ಕು ವರ್ಷಗಳಿಂದ ನನ್ನ ಸಹೋದ್ಯೋಗಿಯಾಗಿದ್ದ. ತನ್ನ ಹದಿನೈದನೇ ವಯಸಿಗೇ ತಾನೊಬ್ಬ “ಗೇ'' ಎಂಬ ಸತ್ಯ ಅವನಿಗೆ ಅರಿವಾಗಿತ್ತಂತೆ. ಮೊದಮೊದಲಿಗೆ ಈ ವಿಷಯವನ್ನು ಯಾರಿಗೂ ಹೇಳದೇ ಮುಚ್ಚಿಟ್ಟುಕೊಂಡಿದ್ದರೂ, ನಂತರ ನಿಧಾನವಾಗಿ ತನ್ನ ನಾಚಿಕೆಯ ಪೊರೆಯಿಂದ ಹೊರಬಂದು ತಾನೂ ಇತರರಂತೆಯೇ ಎಂಬ ವಾದವನ್ನು ಮಂಡಿಸಿಕೊಳ್ಳುವಷ್ಟರ ಮಟ್ಟಿಗೆ ಸುಧಾರಿಸಿಕೊಂಡಿದ್ದ. ಅದೃಷ್ಟಕ್ಕೆ ಸಾಗರನ ಮನೆಯವರು ಅಷ್ಟೇನೂ ಈ ಬಗ್ಗೆ ಲಬೋ ಲಬೋ ಅಂತ ಬಾಯಿ ಬಡಿದುಕೊಳ್ಳಲಿಲ್ಲ. ಡೇ ಡ್ಯೂಟಿ, ನೈಟ್ ಡ್ಯೂಟಿಗಳಲ್ಲಿ ಹರಿದುಹೋಗಿರುವ, ಗುರ್ಗಾಂವ್ – ದೆಹಲಿಯಂಥಾ ಮಹಾನಗರಗಳಲ್ಲಿ ಸ್ವಾಭಾವಿಕವಾಗಿ ನೆರೆಕರೆಯವರ ಮುಖವನ್ನು ನೆಟ್ಟಗೆ ನೋಡುವಷ್ಟು ಸಮಯವೂ ಇರದ ಇವನ ಸ್ನೇಹಿತರಿಗೆ ಸಾಗರನ “ಗೇ'' ಸ್ಟೇಟಸ್ ಬಗ್ಗೆ ತಲೆಕೆಡಿಸಿಕೊಳ್ಳಲು, ಗಾಳಿ ಮಾತು ಹಬ್ಬಿಸಲು ಸಮಯವೂ ಇರಲಿಲ್ಲ. ವಾರಕ್ಕೈದು ದಿನ ಆಫೀಸಿನಲ್ಲಿ ದುಡಿಯುತ್ತಾ, ವೀಕೆಂಡುಗಳಲ್ಲಿ ಕಿವಿಗಡಚಿಕ್ಕುವ ಮ್ಯೂಸಿಕ್ ಗಳ ಗುಂಗಿನಲ್ಲಿ, ದೆಹಲಿಯ ಹುಕ್ಕಾ ಬಾರುಗಳ ಹೊಗೆಯ ಮೋಡಗಳ ಮರೆಯಲ್ಲಿ ಮಜವಾಗಿದ್ದ ಸಾಗರ್. ಅಂದ ಹಾಗೆ ಕಳೆದೆರಡು ವರ್ಷಗಳಿಂದ ದೆಹಲಿಯಲ್ಲಿ ನೆಲೆಸಿರುವ ಮಾರ್ಕೋಸ್ ಎಂಬ ಇಪ್ಪತ್ತರ ಹರೆಯದ ಇಟಾಲಿಯನ್ ವಿದ್ಯಾರ್ಥಿಯ ಜೊತೆ ಈತ ಪ್ರೇಮಪಾಶದಲ್ಲಿ ಬಿದ್ದಿದ್ದ. ಅಂತೂ ಸಾಗರನ ಜೀವನ ಅವನ ಅಭಿರುಚಿಗೆ ತಕ್ಕಂತೆ ಹುಕ್ಕಾ, ಗಾಂಜಾ, ಪಾರ್ಟಿಗಳ ಲೋಕದಲ್ಲಿ ಚೆನ್ನಾಗಿ ಸಾಗುತ್ತಿತ್ತು. ಅಂಥಾ ಒಬ್ಬ ಮಾರ್ಕೋಸ್ ಗಾಗಿ ಒಂದು ಕವಿತೆ ವ್ಯಾಲೆಂಟೈನ್ ಡೇ ನಿಮಿತ್ತ ಕಾಯುತ್ತಿತ್ತು.
ಇರಿಟೇಷನ್ ಅನ್ನೋ ಲೆವೆಲ್ಲಿನ ಮಿತಭಾಷಿ ಲಲಿತ್ ಕುಮಾರ್ ನನ್ನು ನಾವೆಲ್ಲಾ “ಲಲ್ಲೂ'' ಅನ್ನುತ್ತಿದ್ದೆವು. ಹಿಂದಿ, ಹರಿಯಾಣ್ವೀ ಆಡುಭಾಷೆಯಲ್ಲಿ “ಪೆದ್ದ'' ಅನ್ನುವುದಕ್ಕೆ ಅಡ್ಡನಾಮವಿದು. ಲಲ್ಲೂ ನನ್ನು ನಾನು ಏಳು ವರ್ಷಗಳಿಂದ ಬಲ್ಲೆ. ನನ್ನ ಕಾಲೇಜು ದಿನಗಳಲ್ಲಿ ಸಹಪಾಠಿಯಾಗಿದ್ದ ಆಸಾಮಿ ಈತ. ಮೂಲತಃ ಬಿಹಾರಿಯಾಗಿದ್ದ ಲಲ್ಲೂನನ್ನು ಒಂದು ಸಲವೂ ಒಂದು ಹೆಣ್ಣು ಜೀವದೊಂದಿಗೆ ನೆಟ್ಟಗೆ ಮಾತನಾಡಿದ್ದನ್ನು ನಾನು ನೋಡೇ ಇಲ್ಲ. “ಐದು ನಿಮಿಷಗಳಲ್ಲಿ ಹುಡುಗಿಯೊಬ್ಬಳ ಫೋನ್ ನಂಬರ್ ಪಡೆದುಕೊಳ್ಳುವುದು ಹೇಗೆ?'' ಯಂಥಾ ಟ್ರ್ಯಾಷ್ ಗಳನ್ನು ಗುಟ್ಟಾಗಿ ಲಲ್ಲೂ ದಿನಗಟ್ಟಲೆ ಓದುತ್ತಿದ್ದ. ಇಂಥಾ ಲಲ್ಲೂ ತನ್ನ ರ್ಯಾಗಿಂಗ್ ಗತವೈಭವದ ಕಾಲದಲ್ಲಿ ಮುಗ್ಧ ಜೂನಿಯರ್ ವಿದ್ಯಾರ್ಥಿಗಳನ್ನು ಒಟ್ಟಾಗಿ ಗುಂಪುಗೂಡಿಸಿ ಕೂರಿಸಿಕೊಂಡು ಲ್ಯಾಪ್ ಟ್ಯಾಪ್ ನಲ್ಲಿ ಒಂದು ಸುಂದರ ಹುಡುಗಿಯ ಚಿತ್ರವನ್ನು ತೋರಿಸಿ, “ಇವಳು ನಿಮ್ಮ ಭಾಭೀ ಕಣ್ರೋ, ನನ್ನ ಹಿಂದೆ ಯಾವ ಲೆವೆಲ್ಲಿಗೆ ದೀವಾನಾ ಆಗಿ ಬೆನ್ನು ಬಿದ್ದಿದ್ಳು ಗೊತ್ತಾ'' ಅಂತ ಹೇಳಿ ಚಪ್ಪಾಳೆ ಗಿಟ್ಟಿಸಿಕೊಳ್ಳುವುದನ್ನು ಕಂಡ ನಾನು ಹೊಟ್ಟೆ ಹುಣ್ಣಾಗುವಂತೆ ನಕ್ಕಿದ್ದೆ. ಕಾಲೇಜು ಬಿಟ್ಟ ನಂತರವೂ ಯಾವ ಹಾರ್ಡ್ ಕೋರ್ ಪ್ರಯತ್ನಗಳೂ ಇವನ ಸಾಫ್ಟ್ ಸ್ಕಿಲ್ಲುಗಳನ್ನು ದಡ ಸೇರಿಸಲಿಲ್ಲ. ನಂತರ ದೆಹಲಿಗೆ ಐ.ಎ.ಎಸ್ ಪರೀಕ್ಷೆಯ ತರಬೇತಿ ಪಡೆಯಲು ಬಂದ ಲಲ್ಲೂ ನಲ್ಲಿ ಇಲ್ಲೂ ಅಂಥಾ ಬದಲಾವಣೆಗಳು ನನಗೆ ಕಂಡುಬಂದಿರಲಿಲ್ಲ. ಇಲ್ಲಿ ನನ್ನ ಕೆಲವು ಹಿಂದಿ ಬರಹಗಳನ್ನು ಓದುತ್ತಿದ್ದ ಲಲ್ಲೂ ನನಗೊಂದು ಕವಿತೆ ಬರೆದುಕೊಡು ಎಂದು ಯಾವಾಗಲೂ ಬೆನ್ನು ಬೀಳುತ್ತಿದ್ದ. ಹೀಗೆ ಬರೆಸಿಕೊಂಡ ಕವಿತೆಗಳನ್ನು ಏನು ಮಾಡುತ್ತಿದ್ದ, ಯಾರಿಗೆ ಕೊಡುತ್ತಿದ್ದ, ಎಲ್ಲಿ ಉಪ್ಪಿನಕಾಯಿ ಹಾಕುತ್ತಿದ್ದ ಎಂಬುದು ಇಂದಿಗೂ ಬಿಡಿಸಲಾರದ ಒಗಟು. ಇವನ ಐ.ಎ.ಎಸ್ ತಯಾರಿ ದೇವರಿಗೇ ಪ್ರೀತಿ. ಈ ಒಂದು ಕವಿತೆಯೂ ನಾಳೆಯ ದಿನ ಯಾವುದಾದರೊಂದು ಅನಾಮಿಕ ಹೃದಯದ ಕದ ತಟ್ಟಲಿ ಎಂಬ ಆಶಾವಾದ ನನ್ನದು.
ಅಲೋಕ್ ರಸ್ತೋಗಿ ಒಬ್ಬ ಈರ್ವರಿಗಿಂತಲೂ ವಿಭಿನ್ನ ಮತ್ತು ಏಕಮುಖಿ ಪ್ರೇಮಿ. ತಾನೇ ಖುದ್ದಾಗಿ ಹೋಗಿ ಏವಿಯೇಷನ್ ಏಜೆನ್ಸಿಯೊಂದರಲ್ಲಿ ಉದ್ಯೋಗ ದೊರಕಿಸಿ ಕೊಟ್ಟ ಜಾಹ್ನವಿ ಎಂಬ ಹುಡುಗಿಯನ್ನು ಮನಸಾರೆ ಇಷ್ಟಪಟ್ಟಿದ್ದ. ಒಂದೇ ಪೇಯಿಂಗ್ ಗೆಸ್ಟ್ ನಲ್ಲಿ ಇಬ್ಬರೂ ಇರುವ ಕಾರಣ ಇಬ್ಬರೂ ಒಬ್ಬರಿಬ್ಬರ ಮನೆಗೆ ಹೋಗಿ ಕಾಲಹರಣ ಮಾಡುವುದು ಸಾಮಾನ್ಯವಾಗಿತ್ತು. ಆದರೆ ಅಲೋಕ್ ನಿರೀಕ್ಷಿಸಿದಂತೇನೂ ಆಗಲಿಲ್ಲ. ಜಾಹ್ನವಿ ಒಬ್ಬಂಟಿಯಾಗಿ ಪೇಯಿಂಗ್ ಗೆಸ್ಟ್ ನಲ್ಲಿದ್ದು ಆರು ತಿಂಗಳಿಗೊಮ್ಮೆ ಕಾನ್ಪುರದ ತನ್ನ ಮನೆಗೆ ಕಾಟಾಚಾರಕ್ಕೆಂಬಂತೆ ಹೋಗಿ ಬರುತ್ತಾ ಸ್ವಾತಂತ್ರ್ಯದ ಪೂರ್ಣ ವಿಲಾಸವನ್ನು ಮಹಾನಗರದಲ್ಲಿ ಅನುಭವಿಸುತ್ತಿದ್ದಳು. ಸಿಂಗಲ್ ಆಗೇ ಇರಬೇಕೆನ್ನೋ ಮಹಾ ಆಸೆಯೇನೂ ಇರದಿದ್ದರೂ, ಅಲೋಕ್ ಬಗ್ಗೆ ಅವಳಿಗೆ ಅಂಥಾ ಆಸಕ್ತಿಯೇನೂ ಇರಲಿಲ್ಲ. ಆದರೆ ಅಲೋಕ್ ತನ್ನನ್ನು ತಾನೇ ಅವಳಿಗೆ ಅರ್ಪಿಸಿಬಿಟ್ಟಿದ್ದ. ವಾರಕ್ಕೆರಡು ಕವಿತೆಗಳನ್ನು ನನ್ನಿಂದ ಬರೆಸಿ ತನ್ನದೆಂಬಂತೆ ಅವಳೆದುರು ಓದಿ ಅವಳ ಕಣ್ಣುಗಳ ಹೊಳಪನ್ನು ತನ್ನದಾಗಿಸಿಕೊಳ್ಳುತ್ತಿದ್ದ. ತನ್ನನ್ನು ಪ್ರೇಮಿಯಾಗಿ, ಪತಿಯಾಗಿ ಒಪ್ಪಿಕೊಳ್ಳುವುದಿಲ್ಲ ಎಂಬುದು ಸ್ಪಷ್ಟವಾಗಿ ಗೊತ್ತಿರುವ ಕಾರಣವೇ ಪ್ರೊಪೋಸ್ ಮಾಡುವ ಗೋಜಿಗೇ ಅಲೋಕ್ ಹೋಗಿರಲಿಲ್ಲ. “ಐ ಲವ್ ಯೂ ಎಂದರೆ ದೂರ ಹೋಗೇಬಿಟ್ಟಾಳು ಮತ್ತೆ… ಇದ್ದಷ್ಟು ದಿನ ಹೀಗೇ ಕವಿತೆ ಹೇಳಿಕೊಂಡೇ, ಗೋಲ್-ಗಪ್ಪಾ ತಿಂದುಕೊಂಡೇ ದಿನ ಅವಳ ಜೊತೆ ದಿನ ತಳ್ಳುತ್ತೇನೆ'' ಎಂದೆಲ್ಲಾ ಹೇಳುತ್ತಿದ್ದ. ನನ್ನನ್ನು ಪುಸಲಾಯಿಸಲು, ಒಂದೆರಡು ಕವಿತೆಗಳನ್ನು ಬರೆಸಲು ಆಮಿಷಕ್ಕಾಗಿ ಬಿಯರ್ ಕ್ಯಾನ್ ಗಳನ್ನೋ, ಸೆಕೆಂಡ್ ಹ್ಯಾಂಡ್ ಪುಸ್ತಕಗಳನ್ನೋ ತಂದಿಡುತ್ತಿದ್ದ. ಅವನನ್ನು ಕಂಡರೆ ವಿಚಿತ್ರವೆನಿಸುತ್ತಿತ್ತು ನನಗೆ. ನಾಳಿನ ಕವಿತೆಯೂ ಅವಳಿಗೇ ಮೀಸಲು ಎಂಬುದನ್ನು ನನಗವನು ಪ್ರತ್ಯೇಕವಾಗಿ ಹೇಳಬೇಕಾಗಿರಲಿಲ್ಲ. ಎಂದಾದರೂ ಈ ನಾವಿಕನಿಲ್ಲದ ದೋಣಿ ದಡ ಸೇರಲಿ.
ಇವರೆಲ್ಲರನ್ನು ನೆನಪಿಸಿಕೊಂಡು, ತನ್ನಷ್ಟಕ್ಕೇ ನಗುತ್ತಾ ಎಮಿರೇಟ್ಸ್ ಏರ್ ಲೈನ್ಸ್ ನ ಭವ್ಯ ಏರ್ ಕ್ರಾಫ್ಟ್ ಒಂದರ ಆರಾಮದಾಯಕ ಆಸನವೊಂದರಲ್ಲಿ ಕುಳಿತು ಸಾವರಿಸಿಕೊಳ್ಳುವಷ್ಟರಲ್ಲಿ ರಾತ್ರಿಯ ಹತ್ತೂವರೆ ಘಂಟೆಯಾಗಿತ್ತು. ಲಘು ಆಹಾರದೊಂದಿಗೆ ಡ್ರಿಂಕ್ ಸರ್ವ್ ಮಾಡುತ್ತಾ ಬಂದ ಗಗನಸಖಿಯರ ಏರ್-ಲೈನ್ ಕ್ಯಾಟರಿಂಗ್ ಟ್ರಾಲಿ ನನ್ನ ಬಳಿ ಬರುತ್ತಲೇ ನಾನು ರೆಡ್ ವೈನ್ ಅನ್ನು ಆರಿಸಿಕೊಂಡೆ. ಆದರಪೂರ್ವಕವಾಗಿ ಮುಂಬಾಗಿ ರೆಡ್ ವೈನಿನ ಚಿಕ್ಕ ಬಾಟಲಿಯನ್ನು ಆಕೆ ನನ್ನ ಕೈಯಲ್ಲಿರಿಸಿದಳು. “ಹ್ಯಾಪಿ ವ್ಯಾಲೆಂಟೈನ್ಸ್ ಡೇ ಇನ್ ಅಡ್ವಾನ್ಸ್ ಮಿಸ್'', ಎಂದು ಮೆಲ್ಲನೆ ವಿನಮ್ರವಾಗಿ ಅವಳ ಕಿವಿಯಲ್ಲಿ ಉಸುರಿದೆ. ಆಕೆ ಮುಗುಳ್ನಗುತ್ತಾ, ತನ್ನ ಬಲಗೈಯಲ್ಲಿ ಮೆತ್ತಗೆ ಮಲಗಿದ್ದ ಮುದ್ದಾದ ಉಂಗುರವೊಂದನ್ನು ಪ್ರೀತಿಯಿಂದ ತನಗರಿವಿಲ್ಲದಂತೆಯೇ ನೇವರಿಸಿಕೊಂಡಳು. ಬಹುಶಃ ಯಾವುದೋ ಒಂದು ಕವಿತೆ, ಎಲ್ಲೋ ಅವಳಿಗಾಗಿ, ಮುಂಬರುವ ದಿನದ ಅಪೂರ್ವ ಘಳಿಗೆಗಾಗಿ ಕಾಯುತ್ತಲಿತ್ತು.
ಅವಳ ಹೆಸರು ಸುಸಾನ್ ಎಂದು ಅವಳ ಕೋಟ್ ಮೇಲೆ ಸಿಕ್ಕಿಸಿಕೊಂಡಿದ್ದ ಚಿನ್ನದ ಬಣ್ಣದ ಚಿಕ್ಕ ನೇಮ್ ಪ್ಲೇಟ್ ಬ್ಯಾಜ್ ನಿಂದ ತಿಳಿದುಬಂತು. ನಾನು ಎಂದಿನಂತೆಯೇ ಪುಸ್ತಕವೊಂದನ್ನು ಎತ್ತಿಕೊಂಡು ಅದರಲ್ಲೇ ಮಗ್ನನಾಗಲು ಪ್ರಯತ್ನಿಸಿದೆ. ಆದರೆ ದೇಹಕ್ಕೆ, ಕಣ್ಣುಗಳಿಗೆ ವಿಶ್ರಾಂತಿಯ ಅಗತ್ಯವಿತ್ತು. ಇನ್ನು ಒಂದೂವರೆ ಘಂಟೆಯಲ್ಲಿ ನಮ್ಮ ವಿಮಾನ ದುಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ತಲುಪಲಿತ್ತು. ಅಂದರೆ ಇನ್ನು ಕೆಲವೇ ಘಂಟೆಗಳಲ್ಲಿ ಪ್ರತೀ ವರ್ಷದಂತೆ ಈ ವರ್ಷವೂ ಏಕಾಂಗಿಯಾಗಿಯೇ ವ್ಯಾಲೆಂಟೈನ್ಸ್ ಡೇ ಅನ್ನು ಎದುರುಗೊಳ್ಳುವ ಪರಿಸ್ಥಿತಿ, ಸೋಷಿಯಲ್ ಲೈಫಿಗೆ ಸಮಯವೇ ಇರದ ನನ್ನ ಪ್ರೊಫೆಷನಲ್ ಲೈಫಿಗೆ ಸ್ವಾಭಾವಿಕವಾಗಿಯೇ ಒಲಿದು ಬಂದಿತ್ತು. ಬಿಟ್ಟಿಯಾಗಿ ಹಂಚಿಹೋಗುವ ತನ್ನ ಬೇನಾಮಿ ರೋಮ್ಯಾಂಟಿಕ್ ಕವಿತೆಗಳನ್ನು ನೆನೆಸಿಕೊಂಡು, ಒಣನಗೆಯನ್ನು ಬೀರುತ್ತಾ ನಿಟ್ಟುಸಿರಿನೊಂದಿಗೆ ಪುಸ್ತಕವನ್ನು ಬದಿಗಿಟ್ಟು ಕಣ್ಣುಗಳನ್ನು ಮುಚ್ಚಿಕೊಂಡೆ.
ಕವಿತೆಯೊಂಬುದು ಲೋಕಗೀತೆಯಾದಾಗಲೇ ಸಾರ್ಥಕ್ಯವನ್ನು ಪಡೆಯುತ್ತದೆ ಎಂಬ ಯಾರೋ, ಯಾವತ್ತೋ ಹೇಳಿದ ಮಾತನ್ನು ತನ್ನನ್ನು ತಾನು ಸಂತೈಸಿಕೊಳ್ಳಲು ಹೇಳುತ್ತಲೇ ಸಣ್ಣ ಸುಖನಿದ್ರೆಯೊಂದು ನನ್ನನ್ನು ಆವರಿಸಿಕೊಂಡಿತು.
*****
ಕೂತಲ್ಲೇ ತೂಕಡಿಸಿದ್ದ ನನಗೆ ಸುಮಾರು ಒಂದು ಘಂಟೆಯ ಬಳಿಕ ಎಚ್ಚರವಾಯಿತು. ಒಂದಿಬ್ಬರು ಮಕ್ಕಳು ವಿಮಾನದಲ್ಲಿ ಪ್ರಸಾರವಾಗುತ್ತಿದ್ದ ಸೂಪರ್ ಮ್ಯಾನ್ ಚಲನಚಿತ್ರಗಳನ್ನು ಖುಷಿಖುಷಿಯಾಗಿ ನೋಡುತ್ತಿದ್ದರು. ಇನ್ನು ಕೆಲವರು ತಮ್ಮ ರೀಡಿಂಗ್ ಲೈಟ್ ಗಳನ್ನು ಉರಿಸಿ ಗಂಭೀರ ಓದಿನಲ್ಲಿ ಮಗ್ನರಾಗಿದ್ದರು. ನನಗೂ ಬೋರಾದಂತೆನಿಸಿ ಚಲನಚಿತ್ರವೊಂದನ್ನು ಆಯ್ಕೆಮಾಡಿಕೊಂಡು ನೋಡಲಾರಂಭಿಸಿದೆ. ಸಮಯ ಕಳೆದಂತೆ ತಲೆಬುಡವಿಲ್ಲದ ಚಲನಚಿತ್ರವೂ ನೀರಸವೆನಿಸತೊಡಗಿತು. ದೆಹಲಿಯಿಂದ ದುಬೈಗೆ ಹೋಗುವ ವಾಯುಮಾರ್ಗವನ್ನು ಆಯತಾಕಾರದ ಒಂದು ಮಾನಿಟರ್ ಹವಾಮಾನದ ವಿವರಗಳೊಂದಿಗೆ ಬಿತ್ತರಿಸುತ್ತಲಿತ್ತು. ಇವೆಲ್ಲದರ ಮಧ್ಯೆ ಸುಸಾನ್ ಮತ್ತು ಇನ್ನೊಬ್ಬಳು ಗಗನಸಖಿ ಹಲವು ಸಲ ಗಸ್ತು ತಿರುಗುವವರಂತೆ ಹೋಗುವುದೂ, ಬರುವುದೂ ಮುಂದುವರೆಯಿತು.
ಮಾಡಲು ಬೇರೇನೂ ಕೆಲಸವಿಲ್ಲದರ ಪರಿಣಾಮ ಸುಮ್ಮನೆ ಸುಸಾನ್ ಳನ್ನೇ ದಿಟ್ಟಿಸುತ್ತಿದ್ದೆ. ಆರಡಿ ಎತ್ತರದ ನಿಲುವಿನ ಈ ಹೆಣ್ಣು ನೋಡಲು ಸಾಧಾರಣವಾಗಿದ್ದರೂ ಆಕರ್ಷಕವಾಗಿದ್ದಳು. ವಯಸ್ಸು ಇಪ್ಪತ್ತರ ಆಸುಪಾಸುನಲ್ಲಿದ್ದರೂ ಡಾರ್ಕ್ ಸರ್ಕಲ್ ಗಳ ಮುದ್ರೆ ಎದ್ದು ಕಾಣುತ್ತಿತ್ತು. ಮಟ್ಟಸವಾಗಿ ಹೇರ್ ಪಿನ್ ಗಳ ಮಧ್ಯದಲ್ಲಿ ಕೂರಿಸಲ್ಪಟ್ಟಿದ್ದ ಹೊಂಬಣ್ಣದ ಅವಳ ಕೂದಲು, ಅವಳ ಶುಭ್ರವಾದ ಬಿಳಿಯ ಮೈಬಣ್ಣಕ್ಕೆ ಒಪ್ಪುತ್ತಿದ್ದವು. ಈ ಮಧ್ಯೆ ಅವಳು ತನ್ನ ಚಿಕ್ಕದಾದ ಮುದ್ದಾದ ಉಂಗುರವನ್ನು ಬಾರಿ ಬಾರಿ ಸವರಿಕೊಳ್ಳುವುದನ್ನು ಸುಮ್ಮನೆ ಕುತೂಹಲದ ಕಣ್ಣುಗಳಿಂದ ನಾನು ನೋಡುತ್ತಿದ್ದೆ. ಮೊದಮೊದಲು ಬೆರಳನ್ನು ತುರಿಸುತ್ತಿದ್ದಾಳೋ ಎಂಬ ಉಡಾಫೆಯಿಂದ ನೋಡಿದ್ದರ ಪರಿಣಾಮವೋ ಏನೋ, ಆ ಉಂಗುರದ ಹೊಳಪನ್ನು ಅವಳ ಕಣ್ಣುಗಳಲ್ಲಿ ನಾನು ಗಮನಿಸದೇ ಹೋಗಿದ್ದೆ. ಆದರೆ ಕೆಲವು ಭಾವನೆಗಳೇ ಹಾಗಿರುತ್ತವೆ. ಅರ್ಥೈಸಲು ಅವುಗಳಿಗೆ ಪದಗಳ ಹಂಗಿನ ಅವಶ್ಯಕತೆಯಿಲ್ಲ. ಎಲ್ಲರಂತೆ ವ್ಯಾಲೆಂಟೈನ್ ಮೂಡಿನಲ್ಲಿದ್ದ ನನಗೆ ಆ ಉಂಗುರದ ಮಹಿಮೆಯನ್ನು ಕಲ್ಪಿಸಿಕೊಳ್ಳಲು ಹೆಚ್ಚು ಸಮಯವೇನೂ ಬೇಕಾಗಲಿಲ್ಲ. ದುಶ್ಯಂತನ ನೆನಪಿನಲ್ಲಿರುವ ಶಕುಂತಲೆಯಂತೆ ಆ ಕ್ಷಣದಲ್ಲಿ ಸುಸಾನ್ ನನಗೆ ಕಂಡಳು.
ವಿಮಾನ ಸದ್ದು ಮಾಡದೆ ಮೋಡಗಳನ್ನು ಸೀಳುತ್ತಾ ತನ್ನ ಗಮ್ಯದೆಡೆಗೆ ಧಾವಿಸುತ್ತಿತ್ತು. ನನ್ನ ಬಲಭಾಗದಲ್ಲಿ ಕುಳಿತಿದ್ದ ಐರಿಷ್ ವೃದ್ಧ ದಂಪತಿಗಳು ತಣ್ಣಗೆ ನಿದ್ರೆಗೆ ಜಾರಿದ್ದರು. ನಿದ್ರೆಯೂ ಹಾರಿಹೋಗಿದ್ದುದರ ಪರಿಣಾಮ ಸುಮ್ಮನೆ ಕೂತಲ್ಲೇ ನಾನು ಚಡಪಡಿಸುತ್ತಾ ದುಬೈ ನಲ್ಲಿ ತನ್ನ ಪಾಲಿಗೆ ಸಿಗುವ ಕೆಲವೇ ಘಂಟೆಗಳಲ್ಲಿ ಮಾಡಬಹುದಾದ ಸೈಟ್ ಸೀಯಿಂಗ್ ಬಗ್ಗೆ ಚಿಂತಿಸತೊಡಗಿದೆ. ಆದರೂ ಮನದ ಮೂಲೆಯೊಂದು ಸುಸಾನ್ ಳಲ್ಲೇ ಬೀಡುಬಿಟ್ಟು ಮಹಾಮೇಧಾವಿಯಂತೆ ಚಿಂತನೆ ಮಾಡತೊಡಗಿತ್ತು. ತೀರಾ ಅಂತರ್ಮುಖಿಯಲ್ಲದಿದ್ದರೂ ನಾನು ತಕ್ಕ ಮಟ್ಟಿಗೆ ಸೋಷಿಯಲ್ ಆಗಿದ್ದೆ ಅನ್ನುವುದು ಒಪ್ಪಲೇಬೇಕಾದ ಸತ್ಯ. ಆದರೆ ತಾನಾಗೇ ಆಗಂತುಕರನ್ನು ಮಾತಿಗೆಳೆಯುವ ಕಲೆಯೇನೂ ನನಗೆ ಸಿದ್ಧಿಸಿರಲಿಲ್ಲ. ಅದರಲ್ಲೂ ಏರ್ ಕ್ಯಾಬಿನ್ ಕ್ರ್ಯೂ ಜೊತೆ ಯಾವತ್ತೂ ಮಾತಿಗಿಳಿದವನಲ್ಲ ನಾನು. ಆದರೂ ಆ ರಾತ್ರಿ ಮನಸ್ಸು ಬೇರೇನನ್ನೋ ಹೇಳುತ್ತಿತ್ತು.
ವಿಮಾನದ ಲ್ಯಾಂಡಿಂಗ್ ಗೆ ಇಪ್ಪತ್ತು ನಿಮಿಷಗಳು ಬಾಕಿ ಇರುವಂತೆಯೇ ಏನೋ ನೆಪ ಮಾಡಿ ಸುಸಾನ್ ಳನ್ನು ಮಾತನಾಡಿಸುವ ಹುಚ್ಚು ಧೈರ್ಯ ಮಾಡಿ ಹಿಂಬದಿಯ ಏರ್-ಕ್ರಾಫ್ಟ್ ಲ್ಯಾವೆಟರಿಯ ಕಡೆಗೆ ನಾನು ಹೆಜ್ಜೆಹಾಕತೊಡಗಿದೆ. ನನ್ನ ಹುಚ್ಚು ಧೈರ್ಯವನ್ನು ಕಂಡು ನನಗೇ ನಗು ಬಂದಿತ್ತು ಆ ದಿನ. ಆದರೆ ಅಂಥಾ ಮಹಾಅದೃಷ್ಟವನ್ನೇನೂ ನಾನು ಪಡೆದುಕೊಂಡು ಬಂದಿರಲಿಲ್ಲ. ಏರ್-ಕ್ರಾಫ್ಟ್ ಲ್ಯಾವೆಟರಿಯೊಳಗೆ ಯಾರೋ ಒಬ್ಬ ಪ್ರಯಾಣಿಕ ಸೇರಿಕೊಂಡಿದ್ದ. ಅದಕ್ಕೆ ತಾಗಿಕೊಂಡೇ ಇರುವ ಜಂಪ್ ಸೀಟ್ ಗಳನ್ನು, ಫೂಡ್ ಸ್ಟೋರೇಜ್ ಶೆಲ್ಫ್ ಗಳನ್ನು ಹೊಂದಿರುವ ಮಿನಿ ಗ್ಯಾಲರಿಯಂತಿರುವ ಭಾಗ ಪರದೆಯಿಂದ ಮುಚ್ಚಿತ್ತು. ಅಂತೂ ಅಲ್ಲೂ, ಇಲ್ಲೂ, ಎಲ್ಲೂ ಸಲ್ಲದವನಾಗಿ ಅತ್ತ ಏರ್-ಕ್ರಾಫ್ಟ್ ಲ್ಯಾವೆಟರಿಯ ಬಾಗಿಲು ತೆರೆಯಲು ಕಾಯುತ್ತಿರುವವನಂತೆ ನಟಿಸುತ್ತಾ, ಇತ್ತ ಮುಚ್ಚಿದ ಪರದೆಯ ಹಿಂದಿರುವ ಏರ್ ಕ್ಯಾಬಿನ್ ಸಿಬ್ಬಂದಿಗಳ ಕೈಗಳು ಯಾವಾಗ ಹೊರಬರುತ್ತವೆಯೋ ಎಂದು ಮೂರ್ಖನಂತೆ ಕಾಯುತ್ತಲಿದ್ದೆ.
ಅತ್ತ ಪರದೆಗಳ ಹಿಂದಿನ ಪಿಸು ಮಾತುಗಳು ಮಂದವಾಗಿ ಕೇಳಿಬರುತ್ತಿದ್ದವು. ವ್ಯಾಲೆಂಟೈನ್ ಡೇ ದಿನವೇ ಡ್ಯೂಟಿ ಚಾರ್ಟ್ ನಲ್ಲಿ ಕೊನೇ ಕ್ಷಣದಲ್ಲಿ ತನ್ನ ಹೆಸರನ್ನು ಸೇರಿಸಿಕೊಂಡ ಭಂಡ ಏರ್-ಲೈನ್ಸ್ ಮ್ಯಾನೇಜರ್ ಒಬ್ಬನ ಬಗ್ಗೆ ಸುಸಾನ್ ತನ್ನ ಸಹೋದ್ಯೋಗಿ ಗಗನಸಖಿಯೊಂದಿಗೆ ಅಸಮಾಧಾನದಿಂದ ಮೆಲ್ಲನೆ ಗೊಣಗುತ್ತಿದ್ದಳು. ಇನ್ನೊಬ್ಬಳು ಸೂಕ್ತ ಪದಗಳಿಗಾಗಿ ತಡಕಾಡುತ್ತಾ “ಎವ್ರಿ ಥಿಂಗ್ ವಿಲ್ ಬಿ ಫೈನ್ ಹನೀ… ಮೀಟ್ ಹಿಮ್ ಆಫ್ಟರ್ ಟುಮಾರೋಸ್ ಆಫ್ಟರ್-ನೂನ್ ಲ್ಯಾಂಡಿಂಗ್… ವಿ ವಿಲ್ ಟ್ರೈ ಟು ಬೈ ಎ ಗಿಫ್ಟ್ ಅಟ್ ಏರ್-ಪೋರ್ಟ್ ಇಟ್-ಸೆಲ್ಫ್'' ಎನ್ನುತ್ತಾ ಸಂತೈಸಲು ಪ್ರಯತ್ನಿಸುವಂತೆ ಕೇಳಿಬಂತು. ಹೂಂ, ಹೂಂ ಎನ್ನುತ್ತಾ ಕ್ಷೀಣವಾಗಿ ಕೇಳಿಬರುತ್ತಿದ್ದ ಪರದೆಯ ಹಿಂದಿನ ಸುಂದರಿ ಸುಸಾನ್ ಳ ಧ್ವನಿ ಬೇಸರದಿಂದ ನಿಟ್ಟುಸಿರಿಟ್ಟಂತೆ ಭಾಸವಾಯಿತು ನನಗೆ.
ಅಷ್ಟರಲ್ಲಿ ಲ್ಯಾವೆಟರಿಯ ಒಳಗಿದ್ದ ಕುರುಚಲು ಮೇಕೆ ಗಡ್ಡದ ಯುವಕನೊಬ್ಬ ಹೊರಬಂದು ಪ್ಲೀಸ್ ಎನ್ನುತ್ತಾ ನನಗಾಗಿ ಬಾಗಿಲನ್ನು ತೆರೆದಿಟ್ಟ. ಸೌಮ್ಯವಾಗಿ ಅವನಿಗೆ ಧನ್ಯವಾದವನ್ನು ಹೇಳಿ ಸುಮ್ಮನೆ ಒಳಹೋಗಿ ಪೆದ್ದನಂತೆ ಕನ್ನಡಿ ನೋಡಿಕೊಂಡು ಹೊರಬಂದೆ. ನಾವು ಕೆಲ ನಿಮಿಷಗಳಲ್ಲೇ ದುಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಲ್ಯಾಂಡ್ ಆಗಲಿರುವೆವೆಂದೂ, ಎಲ್ಲಾ ಪ್ರಯಾಣಿಕರೂ ದಯವಿಟ್ಟು ತಮ್ಮ ತಮ್ಮ ಆಸನಗಳಿಗೆ ವಾಪಾಸಾಗಬೇಕೆಂದೂ ಪೈಲಟ್ ಮನವಿ ಮಾಡಿದ. ಕೂಡಲೇ ಸುಸಾನ್ ಮತ್ತು ಅವಳ ಸಹೋದ್ಯೋಗಿ ಗಗನಸಖಿ ಹೊರಬಂದು ಪೈಲಟ್ ನ ಆಜ್ಞೆ ಚಾಚೂತಪ್ಪದೆ ಪಾಲನೆಯಾಗಿದೆಂಬುದನ್ನು ಖಾತ್ರಿಗೊಳಿಸಲು ಗತ್ತಿನಿಂದ ಕಾರ್ಯಪ್ರವೃತ್ತರಾದರು.
ಎಲ್ಲಾ ಪ್ರಯಾಣಿಕರು, ಸಾಮಾನ್ಯ ನಾಗರಿಕರು ಹಬ್ಬದ, ಪ್ರವಾಸದ ಗುಂಗಿನಲ್ಲಿರುವಾಗ ತಮ್ಮ ಆತಿಥ್ಯದ ಕರ್ತವ್ಯದಲ್ಲೇ ಮಗ್ನರಾಗಿ ನಗುಮುಖದಿಂದ ಸೇವೆಸಲ್ಲಿಸುತ್ತಿರುವ ಸುಸಾನ್ ಳಂಥಾ ಹಾಸ್ಪಿಟಾಲಿಟಿ ಇಂಡಸ್ಟ್ರಿ ಯಲ್ಲಿ ಸೇವೆ ಸಲ್ಲಿಸುತ್ತಿರುವ ಹಲವು ಮುಖಗಳು ಒಮ್ಮೆಲೇ ನೆನಪಾದವು. ಅವಳ ಪತಿಯೋ, ಪ್ರೇಮಿಯೋ… ಆ ವ್ಯಾಲೆಂಟೈನ್ಸ್ ದಿನದ ಹಲವು ಅಮೂಲ್ಯ ಘಂಟೆಗಳನ್ನು ಕಳೆದುಕೊಳ್ಳಲಿರುವುದಂತೂ ಸತ್ಯವಾಗಿತ್ತು. ಒಂದು ಕ್ಷಣ ಬೇಸರವಾದಂತೆನಿಸಿತು. ಪೈಲಟ್ ನ ಆಣತಿಯಂತೆ ಲಗುಬಗೆಯ ಹೆಜ್ಜೆಗಳನ್ನು ಹಾಕಿ, ತನ್ನ ಆಸನದಲ್ಲಿ ಕುಳಿತು ಸೀಟ್-ಬೆಲ್ಟ್ ಅನ್ನು ಬಿಗಿದುಕೊಂಡೆ.
ಸುಸಾನ್ ಮತ್ತು ಅವಳ ಸಹೋದ್ಯೋಗಿ ಗಗನಸಖಿ ಎಂದಿನಂತೆ ನಗುವನ್ನು ಚೆಲ್ಲುತ್ತಲೇ, ಎಲ್ಲವೂ ಸುಸೂತ್ರವಾಗಿ ನಡೆಯುತ್ತಿದೆಯೆಂಬುದನ್ನು ಖಾತ್ರಿಪಡಿಸಿಕೊಂಡು ಪರದೆಯ ಹಿಂದಿನ ಗ್ಯಾಲರಿಯಲ್ಲಿ ಮರೆಯಾದರು.
****
14 ಫೆಬ್ರವರಿ 2016
ಲ್ಯಾಂಡಿಂಗ್ ಘೋಷಣೆಯಾದ ಹತ್ತರಿಂದ ಹನ್ನೆರಡು ನಿಮಿಷಗಳ ಸರಿಯಾಗಿ ನಮ್ಮ ಎಮಿರೇಟ್ಸ್ ಏರ್ ಲೈನ್ಸ್ ನಾಜೂಕಾಗಿ ಮಹಾನಗರಿ ದುಬೈಯ ಧರೆಗಿಳಿಯಿತು. ಪ್ರಯಾಣಿಕರೆಲ್ಲರೂ ಒಬ್ಬೊಬ್ಬರಾಗಿ ಆಕಳಿಸುತ್ತಾ, ಮೈಯನ್ನು ಸಡಿಲಿಸುತ್ತಾ ಒಬ್ಬೊಬ್ಬರಾಗಿ ತಮ್ಮ ತಮ್ಮ ಹ್ಯಾಂಡ್ ಬ್ಯಾಗೇಜುಗಳೊಂದಿಗೆ ವಿಮಾನದಿಂದ ಇಳಿಯತೊಡಗಿದರು. ಎಲ್ಲಾ ಪ್ರಯಾಣಿಕರನ್ನು ಒಬ್ಬೊಬ್ಬರಾಗಿ ತನ್ನ ಮುಂದೆ ಸರಿಸುತ್ತಾ ಕೊನೆಯದಾಗಿ ವಿಮಾನದಿಂದ ಇಳಿಯುವಂತೆ ನಾನು ನೋಡಿಕೊಂಡೆ. ಸುಸಾನ್ ತನ್ನ ಕೈಗಳನ್ನು ಜೋಡಿಸುತ್ತಾ, ಮಂದಹಾಸ ಬೀರುತ್ತಾ ಇಳಿಯುತ್ತಿರುವ ಪ್ರತೀ ಪ್ರಯಾಣಿಕನಿಗೂ ಶುಭಕೋರುತ್ತಿದ್ದಳು. ಅವಳ ಸಹೋದ್ಯೋಗಿ ಕಾಕ್ ಪಿಟ್ ಬಳಿ ಮರೆಯಾದಂತೆ ಕಂಡುಬಂತು.
ವಿಮಾನದಿಂದ ನಿರ್ಗಮಿಸುತ್ತಿರುವ ಕೊನೆಯ ಪ್ರಯಾಣಿಕನಾದ ನನ್ನ ಸರದಿ ಬರುತ್ತಲೇ “ವಿಷ್ ಯೂ ಅ ವೆರೀ ಹ್ಯಾಪೀ ವ್ಯಾಲೆಂಟೈನ್ಸ್ ಡೇ ಅಗೈನ್ ಮಿಸ್ ಸೂಸಾನ್'' ಎನ್ನುತ್ತಾ ಆಕರ್ಷಕ ಮೇಲು ಹೊದಿಕೆಯುಳ್ಳ ಹೊಸ ಪುಸ್ತಕವೊಂದನ್ನು ಅವಳ ಕೈಗಿತ್ತೆ. ಏನಾಗುತ್ತಿದೆಯೆಂಬುದನ್ನು ಅರಿಯದ ಆಕೆ ಆಶ್ಚರ್ಯದಿಂದ ಕಣ್ಣರಳಿಸಿ “ಫಾರ್ ಮೀ ಸೆನ್ಹರ್?'' ಎಂದು ಹುಬ್ಬೇರಿಸುತ್ತಾ ತುಂಟನಗೆಯನ್ನೆಸೆದಳು. ವ್ಯಾಲೆಂಟೈನ್ ದಿನ ಸುಮ್ಮನೆ ಹುಡುಗಾಟವಾಡುವ ಕಾಲೇಜು ವಿದ್ಯಾರ್ಥಿಯಂತೆ ಕಂಡೆನೋ ಏನೋ ನಾನು. “ಫಾರ್ ಯುವರ್ ಲವ್ ಮೈ ಡಿಯರ್, ವಿಷಸ್ ಅಗೈನ್'' ಎನ್ನುತ್ತಾ ಮುಗುಳ್ನಗೆಯೊಂದಿಗೆ ಪುಟ್ಟದಾಗಿ ಕೈಬೀಸುತ್ತಾ ತನ್ನ ಕಿರಿದಾದ ಬ್ಯಾಗಿನೊಂದಿಗೆ ಹೊರನಡೆದೆ.
ಪ್ರಸಿದ್ಧ ಕವಿ ಜಲಾಲುದ್ದೀನ್ ರೂಮಿಯ ರೊಮ್ಯಾಂಟಿಕ್ ಕವಿತೆಗಳನ್ನೊಳಗೊಂಡ ಸುಂದರ ಪುಸ್ತಕದ ಮೇಲೆ ಸುಸಾನ್ ಮಂದಹಾಸ ಬೀರುತ್ತಾ ಕೈಯಾಡಿಸುವ ದೃಶ್ಯವನ್ನು ದೈತ್ಯ ಏರ್-ಕ್ರಾಫ್ಟ್ ನಿಂದ ಮರೆಯಾಗುವ ಮುನ್ನ ಕೊನೆಯದಾಗಿ ನೋಡಿ ಸುಮ್ಮನೆ ಖುಷಿಪಟ್ಟುಕೊಂಡೆ. ತತ್ಸಂಬಂಧಿ ಅಗತ್ಯ ದಾಖಲಾತಿ ಕಾರ್ಯವಿಧಿಗಳನ್ನು ಪೂರ್ಣಗೊಳಿಸಿ ದುಬೈ ಏರ್ ಪೋರ್ಟ್ ನಿಂದ ಹೊರಬೀಳುತ್ತಿದ್ದಂತೆಯೇ ಕಾಪ್-ಥೋರ್ನ್ ದುಬೈ ಹೋಟೇಲಿನ ಚೆಂದದ ಶ್ವೇತವರ್ಣದ ಕಾರೊಂದು ನನ್ನನ್ನು ಕರೆದೊಯ್ಯಲು ಕಾದು ನಿಂತಿತ್ತು.
ರೂಮಿ, ಗಿಬ್ರಾನ್, ನೆರೂಡರ ಕವಿತೆಗಳೆಲ್ಲಾ ದುಬೈಯ ತಂಗಾಳಿಯಲ್ಲಿ ಸುಗಂಧವನ್ನು ಬೀರುತ್ತಾ ಮೈ-ಮನಗಳನ್ನು ಆವರಿಸಿಕೊಂಡಂತೆ ಭಾಸವಾಯಿತು. ಅದೆಷ್ಟು ಕವಿತೆಗಳು ಹೆಸರಿನ ಹಂಗಿಲ್ಲದೆಯೇ, ಜಾನಪದ ಗೀತೆಯಂತೆ, ಲೋಕಗೀತೆಯಂತೆ ಹಬ್ಬಿ, ಅವೆಷ್ಟು ಹೃದಯಗಳಲ್ಲಿ ಪ್ರೀತಿಯ ಹಣತೆಯನ್ನು ಬೆಳಗುತ್ತಿವೆಯೋ…
ಚೆನ್ನಾಗಿವೆ ಘಟನೆಗಳು ಮತ್ತು ನಿಮ್ಮ ಅನುಭವ 🙂
ಪ್ರತಿಕ್ರಿಯೆಗಾಗಿ ಧನ್ಯವಾದಗಳು. ಇದೊಂದು ಕಾಲ್ಫನಿಕ ಕಥೆಯಷ್ಟೆ!! 🙂