ಆಗಂತುಕ: ಪಾರ್ಥಸಾರಥಿ ಎನ್

parthasarathy narasingarao
ಬಾಗಿಲಲ್ಲಿ ನಿಂತ ಕುಮುದಳಿಗೆ  ಮನೆಯ ಎದುರಿಗೆ  , ಶಂಕರ ಯಾರ ಜೊತೆಗೋ ಮಾತನಾಡುತ್ತಿರುವುದು ಗಮನ ಸೆಳೆಯಿತು.  ದಿಟ್ಟಿಸಿ ನೋಡಿದಳು, ಯಾರೋ ಬಿಕ್ಷುಕನಿರಬೇಕು ಅಂದುಕೊಂಡಳು. ಅವನ ಮಾಸಿದ ಕಾವಿಯ ನಿಲುವಂಗಿ, ಬಲಹೆಗಲಿಗೆ ಜೋತುಬಿದ್ದ ಬಟ್ಟೆಯ ಜೋಳಿಗೆ. ಹಾಗೆ ಕೈಯಲ್ಲಿ  ಆಸರೆಗೆ ಹಿಡಿದು ನಡೆಯುವಂತ ಉದ್ದನೆಯ ನಯಮಾಡಿದ ಕೋಲು.  ಸಾಕಷ್ಟು ಉದ್ದ ಎನ್ನಬಹುದಾದ ಬಿಳಿ ಕರಿ ಬಣ್ಣ ಮಿಶ್ರಿತ ಗಡ್ಡ ಅವಳ ಗಮನ ಸೆಳೆಯಿತು.   ಶಂಕರ ಆಗುವದಿಲ್ಲ  ಅನ್ನುವಂತೆ ತಲೆ ಅಡ್ಡಡ್ಡ ಆಡಿಸುತ್ತಿದ್ದ. ಕುಮುದ ಹೊರಗೆ ಬಂದು ನಿಂತಿದ್ದು ಕಂಡು ಅವಳ ಕಡೆ ನಡೆದು ಬಂದ. ಅವನ ಹಿಂದೆಯೆ ನಿಧಾನಕ್ಕೆ ಹೆಜ್ಜೆ ಇಟ್ಟ ಆ ಕಾವಿದಾರಿ ನಡೆದು ಬಂದ. 

'ಅಮ್ಮ ಈ ಸನ್ಯಾಸಿ ನೋಡಿ,  ಬೇಡ ಎಂದರೆ ಹೋಗುತ್ತಲೆ ಇಲ್ಲ. ಅದೇನೊ ಈದಿನ ರಾತ್ರಿ ನಮ್ಮ ಜಗಲಿಯಲ್ಲಿ ಮಲಗಿರುತ್ತೇನೆ ಅನ್ನುತ್ತಿದ್ದಾನೆ. ನಾನು ಆಗುವದಿಲ್ಲ ಎಂದರೆ, ನಿಮ್ಮನ್ನೆ ಕೇಳುತ್ತೇನೆ ಎಂದು ಇಲ್ಲಿ ನಿಂತಿದ್ದಾನೆ. ಊರಿಗೆ ಹೊಸಬ , ಪರಿಚಯವೂ ಇಲ್ಲ ಹೇಗಮ್ಮ ಇಂತಹುದಕ್ಕೆಲ್ಲ ಒಪ್ಪಲಾಗುತ್ತೆ '
ಸನ್ಯಾಸಿ ಮೌನವಾಗಿ ನಿಂತು ಕುಮುದಳನ್ನೆ ದಿಟ್ಟಿಸುತ್ತಿದ್ದ. ಅವಳು ಅವನ ಮುಖವನ್ನೆ ನೋಡಿದಳು, ಈಗೆಲ್ಲ ಸನ್ಯಾಸಿಗಳು ಹಳ್ಳಿಯಲ್ಲಿ ಕಾಣುವುದು ಅಪರೂಪವೆ, ಹಾಗಿರುವಾಗ ಇವನನ್ನು ಕಾಣುವಾಗ ಅವಳಿಗೂ ಸ್ವಲ್ಪ ಅನುಮಾನವೆ ಅನ್ನಿಸಿತು. 

’ ನಿಮ್ಮದು ಯಾವ ಊರಾಯಿತು, ಈ ಹಳ್ಳಿಗೇಕೆ ಬಂದಿರುವಿರಿ ' 
ಸನ್ಯಾಸಿಯ ಮುಖದಲ್ಲಿ ಎಂತಹುದೋ ಒಂದು ನಗು ಕಾಣಿಸಿತು. 
' ನಮ್ಮಂತಹ ಸನ್ಯಾಸಿಗಳಿಗೆ ಊರಿನ ಬಂದನವಿಲ್ಲ ತಾಯಿ. ಹೀಗೆ ನಡೆದು ಹೊರಟಿದ್ದೆ ಧರ್ಮಸ್ಥಳ ಸೇರೋಣ ಎಂದು , ರಾತ್ರಿಯಾಯಿತು. ಈ ದೇಶ ವಿಶ್ರಾಂತಿ ಬೇಕೆನ್ನುತ್ತಿದೆ. ಹಾಗಾಗಿ ನಿಮ್ಮ ಮನೆಯ ಜಗುಲಿಯಲ್ಲಿ ಈದಿನ ವಿಶ್ರಮಿಸಿ ಬೆಳಗ್ಗೆ  ಎದ್ದು ಹೋಗುವ ಎಂದು ಕೇಳಿದೆ. ಈತ ಆಗುವದಿಲ್ಲ ಎನ್ನುತ್ತಿದ್ದಾನೆ. ನಮ್ಮಿಂದ ನಿಮಗೆ ಯಾವ ತೊಂದರೆಯೂ ಆಗುವದಿಲ್ಲ. ಆತಂಕಪಡಬೇಡಿ 'ಎಂದ . 
ಅವನು ಆಡುವ ಕನ್ನಡವು ಸ್ವಲ್ಪ ಪುಸ್ತಕದ ಬಾಷೆಯಂತೆ ಇತ್ತು. 
'ಧರ್ಮಸ್ಥಳವೆ, ಇಲ್ಲಿಂದ ಸಾಕಷ್ಟು ದೂರವೇ ಇದೆ,  ನಡೆಯುತ್ತ ಹೊರಟಿದ್ದೀರಾ, ? ಎಲ್ಲಿಂದ ಬರುತ್ತಿದ್ದೀರಿ? '
ಆಶ್ಚರ್ಯದಿಂದಲೇ ಕೇಳಿದಳು.  
" ಎಲ್ಲಿಂದಲೆ ? " 
ಸನ್ಯಾಸಿ ಮುಖದಲ್ಲಿ ಯಾವುದೋ ಯೋಚನೆಯ ಅಲೆಗಳು 
’ ನಾನು ಸಾಕಷ್ಟು ಸಮಯದಿಂದ ಉತ್ತರ ಭಾರತದಲ್ಲಿಯೆ ಇದ್ದೆ ತಾಯಿ,  ಧರ್ಮಸ್ಥಳದ ಮಂಜುನಾಥ ಬಾ ಎಂದ, ಹೊರಟು ಬಂದೆ ಎಲ್ಲಿಂದ ಬಂದೆ ಎಂದು ಹೇಳಲಿ,  ಕಾಶಿಯಲ್ಲಿ ಸ್ವಲ್ಪ ಕಾಲವಿದ್ದೆ ಅಲ್ಲಿಂದ ಹೊರಟು ಎಷ್ಟು ಕಾಲವಾಯಿತು ಲೆಕ್ಕ ಇಡಲಿಲ್ಲ ' ಎಂದ 
ಅವಳಿಗೆ ಮತ್ತೆ ಸ್ವಲ್ಪ ಆಶ್ಚರ್ಯವಾಯಿತು.
' ಕಾಶಿಯಿಂದ ಬರುತ್ತಿರುವ ಸನ್ಯಾಸಿಗಳೆ ನೀವು,  ಸರಿ, ಆದರೆ ಕನ್ನಡ ಎಷ್ಟು ಸ್ವಷ್ಟವಾಗಿ ಆಡುತ್ತಿದ್ದೀರಿ ? '
ಸನ್ಯಾಸಿಯ ಮುಖದಲ್ಲಿ ಎಂತದೋ ಕಸಿವಿಸಿ, 
' ಹೌದಮ್ಮ , ಕನ್ನಡ  ಚೆನ್ನಾಗಿಯೆ ಬರುತ್ತದೆ, ಮೂಲದಲ್ಲಿ ನಾನು ಇಲ್ಲಿಯವನೇ, ಕನ್ನಡದವನು,  ಉತ್ತರಭಾರತದಲ್ಲಿ ನೆಲೆಸಿದ್ದೆ '
' ಇಲ್ಲಿಯವರೆ ? , ಹಾಗಿದ್ದರೆ ನಿಮ್ಮ ಊರು ಯಾವುದಾಯಿತು '   ಬಿಡದೆ ಮತ್ತೆ ಪ್ರಶ್ನಿಸಿದಳು ಕುಮುದ, ಅವಳ ಕುತೂಹಲ ಗರಿಗೆದರಿತ್ತು.
' ಬಹುಶಃ ನಾನು ಇಲ್ಲಿ ಮಲಗುವುದು , ನಿಮಗೆ ತೊಂದರೆ ಅನ್ನಿಸುತ್ತಿದೆ . ಬಿಡಿ ತಾಯಿ , ಚಿಂತೆಯಿಲ್ಲ, ಮತ್ತೆ ಎಲ್ಲಿಯಾದರು ಪ್ರಯತ್ನಿಸುವೆ, ಆಗಲೂ ಆಗದಿದ್ದಲ್ಲಿ ನಿಶ್ಚಿಂತೆ,  ಈ ಶಾಂತಿಗ್ರಾಮದ ನರಸಿಂಹ ನನಗೆ ಆಶ್ರಯ ಕೊಡಲು ಏಕೊ ಕೊಸರಾಡುವ ಎಂದು ಭಾವಿಸಿ, ಮುಂದೆ ನಡೆಯುತ್ತ ಹೊರಟುಬಿಡುವೆ ' 
ಕುಮುದಳಿಗೆ ಆರ್ಥವಾಯಿತು, ಸನ್ಯಾಸಿಗೆ ಅವಳ ಪ್ರಶ್ನೆಗೆ ಉತ್ತರಿಸುವ ಮನಸಿಲ್ಲ. ಒಂದು ಕ್ಷಣ ಯೋಚಿಸಿದ ಅವಳು 
'ಹಾಗೇನಿಲ್ಲ,  ನಮಗೆ ಯಾವ ತೊಂದರೆಯೂ ಇಲ್ಲ, ನೀವು ಈ ದಿನ , ನಮ್ಮ ಮನೆಯ ಜಗುಲಿಯ ಮೇಲೆ ಮಲಗಿ ಪರವಾಗಿಲ್ಲ 'ಎಂದಳು.  
ಮನೆ ಕೆಲಸದ ಶಂಕರ  ಅವಳ ಮುಖವನ್ನೆ ಆಶ್ಚರ್ಯ , ಆತಂಕದಿಂದ ನೋಡುತ್ತಿದ್ದ.  
’ ತಮ್ಮ ಹೆಸರು '   ಅವಳು ಮತ್ತೆ ಕೇಳಿದಳು 
' ಸನ್ಯಾಸಿಗೆ ಯಾವ ಹೆಸರಿನ ಬಂದನ ತಾಯಿ, ನಿಮಗೆ ಬೇಕಿದ್ದಲ್ಲಿ ಸಚ್ಚಿದಾನಂದ ಅನ್ನಬಹುದು '  
ಅವನು ನಿರ್ಲಿಪ್ತತೆಯಿಂದ ನುಡಿದ 
' ಕುಮುದ ಯಾರ ಜೊತೆಗೆ ಮಾತನಾಡುತ್ತಿರುವುದು '  ಒಳಗಿನಿಂದ ಅತ್ತೆ  ಕೂಗುತ್ತಿರುವ ದ್ವನಿ ಕೇಳಿಸಿತು, ಅವಳು ಒಳಗೆ ಹೊರಟಳು. 

ಕುಮುದ ಇರುವುದು ಚೆನ್ನರಾಯಪಟ್ಟಣ ಹಾಸನದ ನಡುವೆ ಸಿಗುವ ಶಾಂತಿಗ್ರಾಮ ಎನ್ನುವ ಸಣ್ಣ ಊರಿನಲ್ಲಿ. ಅವಳು ಅಲ್ಲಿಗೆ ಮದುವೆಯಾಗಿ ಗಂಡನ ಮನೆಗೆ ಬಂದು ಒಂಬತ್ತು ವರ್ಷವೆ ಕಳೆದಿದೆ.  ತವರು ಮನೆ ಇರುವುದು ಧರ್ಮಸ್ಥಳದ ಹತ್ತಿರದ ಉಜಿರೆ.  ಗಂಡ ಮಹಾದೇವ ಶಾಂತಿಗ್ರಾಮದವನೇ, ಸ್ವಂತ ಮನೆ . ಆತ ತನ್ನ ವ್ಯವಹಾರದ ನಿಮಿತ್ತ ಹೊರಗೆ ಹೋಗುವದುಂಟು , ಬರುವಾಗ ಎರಡು ಮೂರು ದಿನಗಳೆ ಕಳೆಯುವುದು.  ಮನೆಯಲ್ಲಿ ಹೆಂಡತಿ , ತಾಯಿ ಇಬ್ಬರೆ. ಆಗಾಗ ಕಾಣಿಸಿಕೊಳ್ಳುವ ಕಳ್ಳರ ಭಯ.  ಹಾಗಾಗಿ ಅವನು ಮನೆ ಬಿಟ್ಟು ಹೊರಹೋಗುವಾಗ ಮನೆಯ ಕೆಲಸದಾಳು ಶಂಕರನಿಗೆ ರಾತ್ರಿ ತನ್ನ ಮನೆಯಲ್ಲಿ ಮಲಗಲು ತಿಳಿಸಿಹೋಗುತ್ತಿದ್ದ. ಶಂಕರ ರಾತ್ರಿ ಆಗುವಾಗ ಬಂದು ಹೊರಗಿನ ಜಗಲಿಯಲ್ಲಿ ಮಲಗುತ್ತಿದ್ದ, ಆಗೆಲ್ಲ ಅವನ ರಾತ್ರಿ ಊಟದ ವ್ಯವಸ್ಥೆ ಸಹ ಅವರ ಮನೆಯಲ್ಲೆ . ಈಗಲೂ ಗಂಡ ದೂರದ ಮುಂಬಯಿಗೆ ಎಂದು ಹೋಗಿದ್ದಾನೆ ಬರುವುದು ವಾರವೆ ಆಗಬಹುದೇನೊ, ಆ ಬೇಸರದಲ್ಲಿಯೆ ಕುಮುದ ಸಂಜೆ ಮನೆಯ ಹೊರಗೆ ಸುಮ್ಮನೆ ನಿಂತಿದ್ದಳು.  ಅದ್ಯಾರೋ ಸನ್ಯಾಸಿಯೊ , ಬಿಕ್ಷುಕನೋ ಅವನಿಗೆ ಮನೆಯ ಮುಂದಿದ್ದ ಮತ್ತೊಂದು ಜಗಲಿಯಲ್ಲಿ ಮಲಗಲು ತಿಳಿಸಿ, ಆ ವಿಷಯ ಅತ್ತೆಗೆ ಹೇಳಲು ಒಳಗೆ ಹೊರಟಳು .

ಕುಮುದಳ ಅತ್ತೆ  ವಾಸಂತಿಯಮ್ಮನವರಿಗೆ ಆಶ್ಚರ್ಯ , ಅದ್ಯಾರು ಸನ್ಯಾಸಿ ನಮ್ಮ ಊರಿನಲ್ಲಿ , ತಾನು ಎಂದು ಕಂಡೆ ಇಲ್ಲವಲ್ಲ ಎಂದುಕೊಳ್ಳುತ್ತಲೆ ಹೊರಗೆ ಬಂದಳು. ಆಗಲೆ ಬಂದು ಜಗಲಿಯಲ್ಲಿ ಚಕ್ಕಮಕ್ಕಳ ಹಾಕಿ ಕುಳಿತಿದ್ದ ಸನ್ಯಾಸಿಯನ್ನು ಕಂಡಳು. ಅದೇನೊ ಅವನ ಸೌಮ್ಯ ಮುಖವನ್ನು ಕಾಣುವಾಗ ಅವಳಿಗೆ ಸೊಸೆಗೆ ವಿರುದ್ದವಾಗಿ ಕೂಗಾಡಿ ಅವನನ್ನು ಕಳಿಸಲು ಮನ ಒಪ್ಪಲಿಲ್ಲ. 
' ನೀರು ಕುಡಿಯುತ್ತೀರ ? " ಎಂದಳು.  
ಸನ್ಯಾಸಿ ಮುಗುಳ್ನಗೆಯೊಡನೆ ಆಗಲಿ ಎನ್ನುವಂತೆ ತಲೆ ಆಡಿಸುವಾಗ, ಒಳಗೆ ಬಂದು ಸೊಸೆಗೆ ನೀರು ತರುವಂತೆ ಹೇಳಿ ಬಂದಳು. ಅತ್ತೆ ತನ್ನ ಮಾತನ್ನು ತೆಗೆದುಹಾಕದೆ ಪುರಸ್ಕರಿಸಿದ್ದು ಸೊಸೆಗೆ ಸಂತಸವೆನಿಸಿ ನಗುಮುಖದೊಡನೆ , ಒಂದು ಪಾತ್ರೆಯಲ್ಲಿ ನೀರು, ಲೋಟ ತಂದಳು.  ಸನ್ಯಾಸಿ ಮೌನವಾಗಿಯೆ ಎರಡು ಲೋಟ ನೀರು ಕುಡಿದು ಲೋಟ ಜಗಲಿಯ ಮೇಲಿಟ್ಟ.  
' ನೀವು ಹಾಸನಕ್ಕೆ ಹೋಗುತ್ತಿದ್ದರೆ, ಮುಖ್ಯರಸ್ತೆಯಲ್ಲಿ ಸಾಗಬೇಕಿತ್ತಲ್ಲ, ಕತ್ತಲಾಯಿತು ಎಂದು ಇಲ್ಲಿ ಬಂದಿರಾ ' ಅತ್ತೆ ನಯವಾಗಿಯೆ ಕೇಳಿದರು ಸನ್ಯಾಸಿಯನ್ನು. 

'ಹಾಗಲ್ಲಮ್ಮ  , ಶಾಂತಿಗ್ರಾಮಕ್ಕೆ ನಾನು ಬೆಳಗ್ಗೆಯೆ ಬಂದೆ, ಮುಖ್ಯರಸ್ತೆಯಲ್ಲಿ ಹೋಗುವಾಗ, ಇಲ್ಲಿರುವ ನರಸಿಂಹ ದೇವಾಲಯದ ಬಗ್ಗೆ ತಿಳಿಯಿತು.  ಶಾಂತಿಗ್ರಾಮದ ನರಸಿಂಹನ ದರ್ಶನ ಮಾಡಿ ಮುಂದೆ ಹೋದರಾಯಿತು, ಎಂದು ಅಲ್ಲಿ ಹೊರಟೆ. ದರ್ಶನ ಮಾಡಿ ಎಲ್ಲವನ್ನು ನೋಡಿ ಹೊರಡುವಾಗ ಕತ್ತಲಾಯಿತು,. ಹಾಗಾಗಿ ನಿಮ್ಮ ಆಶ್ರಯ ಕೋರಿದೆ '
'ಮತ್ತೆ ಊಟಕ್ಕೆ ಏನು ಮಾಡಿದಿರಿ ? "
" ಊಟದ ಯೋಚನೆ ನಮಗಿಲ್ಲ ಅಮ್ಮ , ನಾವು ಎಲ್ಲಿರುವೆವು ಅಲ್ಲಿ ಹೇಗೊ ಕಳೆಯುತ್ತದೆ,  ಸನ್ಯಾಸಿಯಾಗಿ ಒಂದು ಹೊತ್ತಿನ ಊಟ , ಸಿಗದಿದ್ದರೆ,  ಯಾವ ಚಿಂತೆಯೂ ಇಲ್ಲ " 

ಅತ್ತೆಯ ಯೋಚನೆ ಮತ್ತೇನೊ ಓಡುತ್ತಿತ್ತು,  ಅಲ್ಲ ಈ ಸನ್ಯಾಸಿ ಕಾಶಿಯಿಂದ ಬರುತ್ತಿರುವುದು ಅನ್ನುತ್ತಾರೆ, ನೋಡಿದರೆ ವಿಶೇಷ ಶಕ್ತಿಗಳಿರುವ ಹಾಗೆ ಕಾಣಿಸುತ್ತದೆ.  ಮನೆಗೆ ಸೊಸೆ ಕುಮುದ ಬಂದು ಒಂಬತ್ತು ವರ್ಷಗಳಾಗುತ್ತ ಬಂದಿತು ,  ಏನೆಲ್ಲ ಮಾಡಿಯಾಯಿತು, ಹರಕೆ ಹೊತ್ತಾಯಿತು, ವೈದ್ಯವಾಯಿತು. ಇಷ್ಟಾದರು ಅವಳಿಗೆ ಒಂದು ಮಗು ಎಂದು ಆಗಲಿಲ್ಲ . ವೈದ್ಯರೆಲ್ಲ ಸದಾ, ಅವಳಲ್ಲಿ ಆಗಲಿ , ಮಗ ಮಹಾದೇವನಲ್ಲಿ ಆಗಲಿ ಯಾವುದೆ ದೋಷವಿಲ್ಲ ಅನ್ನುವರು. ಬೆಂಗಳುರು ಅಂತೆಲ್ಲ ಓಡಾಡಿ ಆಗಿತ್ತು ಆದರು ಅದೇಕೊ ಅವಳಿಗೆ ಒಂದು ಮಗುವಾಗಿರಲಿಲ್ಲ. ಕಾಶಿಯಿಂದ ಬಂದಿರುವ ಈ ಸನ್ಯಾಸಿ ತನಗೆ ಮೊಮ್ಮಗನಿಲ್ಲ ಎನ್ನುವ ಯೋಚನೆ ನೀಗಲು ಸಹಾಯ ಮಾಡುವನೇನೊ ಎನ್ನುವ ಆಸೆ ಅವಳಲ್ಲಿ. ಹಾಗೆಂದು ಅಪರಿಚಿತನಾದ ಇವನನ್ನು ಹೇಗೆ ಕೇಳುವುದು ಎನ್ನುವ ಆತಂಕ. 

ಸುಮ್ಮನೆ ಕುಳಿತಿದ್ದ, ಆಕೆಯನ್ನು ದಿಟ್ಟಿಸಿದ ಸನ್ಯಾಸಿ ಹೇಳಿದ, 
" ಅಮ್ಮ ಯಾವುದೋ ಯೋಚನೆಯಲ್ಲಿ ಮುಳುಗಿದ್ದೀರಿ,  ಚಿಂತಿಸಬೇಡಿ. ಎಲ್ಲವೂ ಒಳ್ಳೆಯದೆ ಆಗುತ್ತದೆ. ಶಾಂತಿಗ್ರಾಮದ ನರಸಿಂಹನನ್ನು ನಂಬಿ '  ಎಂದ 
ಸನ್ಯಾಸಿಯ ಬಾಯಲ್ಲಿ ಆ ಮಾತನ್ನು ಕೇಳುವಾಗ ಅವಳಲ್ಲಿ ಎಂತಹುದೋ ಒಂದು ನೆಮ್ಮದಿ ತುಂಬಿಕೊಂಡಿತು. 
' ಸ್ವಾಮಿ ನಿಮ್ಮಸಂಜೆಯ ದೀಪ ಬೆಳಗುವಾಗ , ನಿಮ್ಮ ಬಾಯ ಹರಕೆ ಬಂದಿದೆ,  ನನಗೆ ನೆಮ್ಮದಿಯಾಯಿತು, ಈ ಸಂಜೆ ನಮ್ಮಲ್ಲಿ ಊಟವಾಗಲಿ ,ತಮಗೆ ಏನು ಆದೀತು 'ಎಂದಳು 

ಸನ್ಯಾಸಿ ಸ್ವಲ್ಪ ಕಾಲ ಮೌನವಾಗಿ ಕುಳಿತು ನುಡಿದ, 
’ ರಾತ್ರಿ ಸಮಯದಲ್ಲಿ ನಾವು ಏನನ್ನು ತಿನ್ನಬಾರದು,  ಆದರೆ ಈ ದಿನ ಬೆಳಗಿನಿಂದ ಏನು ತಿಂದಿರುವದಿಲ್ಲ, ಆಲ್ಲದೆ ಅನ್ನಪೂರ್ಣಸ್ವರೂಪರಾದ ನಿಮ್ಮ ಆಪ್ಪಣೆಯಾಗಿದೆ, ನೀವು ಏನು ಕೊಟ್ಟರು ತಿನ್ನುವೆ. ಆದರೆ ನನ್ನದು ಅಲ್ಪಾಹಾರ, ಸ್ವಲ್ಪ ಮಾತ್ರ ಕೊಡಿ. ಅಲ್ಲದೆ ನಾನು ಮನೆಯೊಳಗೆ ಪ್ರವೇಶಿಸುವದಿಲ್ಲ,  ಇಲ್ಲೆ ಜಗಲಿಯಲ್ಲಿಯೆ ತಂದು ಕೊಡಿ ಚಿಂತೆಯಿಲ್ಲ. ಸ್ವಲ್ಪ ಕಾಲ ಕಳೆಯಲಿ " ಎಂದ 

ಹರ್ಷಿತಳಾದ ಅತ್ತೆ ವಾಸಂತಿಯಮ್ಮ , ಒಳಗೆ ಬಂದು ಸೊಸೆಗೆ ಬಿಸಿಯಾಗಿ ಚಪಾತಿ, ತೊವ್ವೆ, ಸ್ವಲ್ಪ ಅನ್ನ ಮಾಡುವಂತೆ ತಿಳಿಸಿ. ಹೊರಬಂದು ಸನ್ಯಾಸಿಯನ್ನು ಮಾತನಾಡಿಸುತ್ತ ಕುಳಿತಳು.  ಅವನಿಂದ ಹಿಮಾಲಯದ ತಪ್ಪಲಿನ ಬದರಿ , ಕೇದಾರ , ಹೃಷಿಕೇಶ, ಕಾಶಿ ಮುಂತಾದ ನಗರಗಳ  ವಿಷಯಗಳನ್ನು , ಹತ್ತು ಹಲವು ಕತೆಗಳನ್ನು ಕೇಳುತ್ತಿರುವಾಗಲೆ, ಕುಮುದ ತನ್ನ  ಅಡುಗೆ ಕೆಲಸ ಮುಗಿಸಿ, ತಟ್ಟೆಯಲ್ಲಿ ಸನ್ಯಾಸಿಗೆ ಹಾಕಿ ತಂದು ಕೊಟ್ಟಳು. ಅವನು ಅಲ್ಲಿಯೆ ಕೈ ತೊಳೆದು, ಅತ್ತೆಯ ಜೊತೆ ಮಾತನಾಡುತ್ತಲೆ ಚಪಾತಿ ಹಾಗು ಅನ್ನವನ್ನು ತಿನ್ನುವಾಗ, ಕುಮುದಳು ಸಹ ಅಲ್ಲಿಯೆ ನಿಂತು ಸನ್ಯಾಸಿಯ ಮಾತು ಕೇಳುತ್ತ ನಿಂತಿದ್ದಳು .  ಅವನ ಊಟ ಮುಗಿಸಿ , ನೀರು ಕುಡಿದು. ಜಗಲಿಯಲ್ಲಿ ಇವರು ಕೊಟ್ಟ ಚಾಪೆ ಹಾಸಿ ಮಲಗಿದಾಗ, ಜಗಲಿಯ ಮತ್ತೊಂದು ಮಗ್ಗುಲಿಗೆ ಶಂಕರ ಸಹ ಮಲಗಿದ. ಒಳಗೆ ಬಂದ , ಅತ್ತೆ ಸೊಸೆ ಬಾಗಿಲು ಭದ್ರಪಡಿಸಿ, ತಾವು ಊಟ ಮುಗಿಸಿ ಮಲಗಲು ತೆರಳುವಾಗ ರಾತ್ರಿ ಹತ್ತು ಗಂಟೆ ದಾಟಿತ್ತು. 

ಅತ್ತೆ ತನ್ನ ಕೋಣೆ ಸೇರಿ ನಿದ್ರೆಗೆ ಜಾರಿದರು ಕುಮುದಳಿಗೆ ಅದೇಕೊ ನಿದ್ರೆಯ ಸುಳಿವಿಲ್ಲ. ಹೊರಗೆ ಮಲಗಿದ್ದ ಸನ್ಯಾಸಿಯ ಮುಖವೇ ಅವಳನ್ನು ಕಾಡುತ್ತಿತ್ತು.  ಊರಿಗೆ ಹೊಸಬ ಎಂದು ಕಾಣಿಸುತ್ತಾನೆ. ಆದರೆ ಅವನ ಮುಖ ಮೊದಲೆ ನೋಡಿರುವದೇನೊ ಅನ್ನಿಸುತ್ತಿದೆ.  ದುಂಡನೆ ಮುಖದವರಿಗೆ ಉದ್ದನೆ ಗಡ್ಡ ಸರಿಹೋಗುವದಿಲ್ಲ ಎಂದು ಅವಳ ಅಭಿಪ್ರಾಯ.  ಬೆಳ್ಳಗೆ ಇದ್ದು , ಕೋಲು ಮುಖದವರಾದರೆ ಉದ್ದನೆ ಗಡ್ಡ ಸರಿಹೊಂದುತ್ತದೆ. ಈ ಸನ್ಯಾಸಿಯದು ಅಷ್ಟೆ  ಸಣ್ಣದೇಹ ಉದ್ದನೆ ಕೋಲುಮುಖ. ಮುಖದಲ್ಲಿನ ಶಾಂತಭಾವ. ಧರಿಸಿದ್ದ ಸನ್ಯಾಸಿಯ ದಿರಿಸು ವಿಭೂತಿ ಎಲ್ಲವೂ ಅವನಿಗೆ ಹೊಂದಿಕೆಯಾಗಿ ಮನದಲ್ಲಿ ಒಂದು ಗೌರವ ಭಾವ ಮೂಡಿಸುತ್ತಿತ್ತು. ಮತ್ತೆ ಚಿಂತಿಸಿದಳು ಇವನ ಮುಖ ಎಲ್ಲಿ ನೋಡಿರುವುದು.  ಈ ಹಳ್ಳಿಯಲ್ಲಿ ಅವಳು ಬಂದಾರಿಬ್ಬ ಈ ರೀತಿ ಸನ್ಯಾಸಿಯೊಬ್ಬರು ಬಂದಿರುವುದನ್ನು ಅವಳು ಕಂಡಿಲ್ಲ.  ಶ್ರವಣಬೆಳಗೊಳ ಹತ್ತಿರವಾದ ಕಾರಣ ಜೈನ ಸನ್ಯಾಸಿಗಳು ಆಗೊಮ್ಮೆ ಈಗೊಮ್ಮೆ ಕಾಣಿಸುವರಾದರು, ಹಿಂದೂ ಸನ್ಯಾಸಿಗಳು ಅಪರೂಪವೆ, ಅದರಲ್ಲು ತನ್ನ ಮನೆ ಇರುವುದು ತೀರ ಒಳಬಾಗದಲ್ಲಿ ಇಲ್ಲಿ ಏಕೆ ಬಂದ ಎನ್ನುವ  ಕುತೂಹಲ ಕಾಡಿತು. ಅಲ್ಲದೆ ಅತ್ತೆಯ ಜೊತೆ ಮಾತನಾಡುವಾಗಲು ಆ ಸನ್ಯಾಸಿ ತನ್ನ ಮುಖವನ್ನೆ ಗಮನಿಸುತ್ತಿದ್ದ ಅನ್ನಿಸಿತು. ಅಥವ ಅದು ತನ್ನ ಭ್ರಮೆಯ ? ಅನ್ನಿಸಿತು ಅವಳಿಗೆ . 

ಮತ್ತೊಮ್ಮೆ ಅವಳ ಮನ ಚಿಂತಿಸಿತು, ಇವನ ಮುಖ ನೋಡಿರುವದಾ ಎಂದು, ಸನ್ಯಾಸಿಯು ತನ್ನ ಹೆಸರು ಏನು ಎಂದಾಗ, ಏನೆಂದ ಸಚ್ಚಿದಾನಂದ ಅಂದುಕೊಳ್ಳಬಹುದು ಅಂದನಾ ? 
ತಟ್ಟನೆ ಅವಳ ಮನದಲ್ಲಿ ಬೆಳಕೊಂದು ಹತ್ತಿತು!
ಸಚ್ಚಿದಾನಂದ ಎಂದರೆ !   ಅವನೇನಾ ! ತನ್ನು ಊರು ಉಜಿರೆಯವನು. ಅವಳ ಮನ ಗತಕ್ಕೆ ಸರಿದಿತ್ತು, ಸಚ್ಚಿದಾನಂದ ಹಾಗು ತಾನು ಒಂದೆ ಊರಿನವರು, ಚಿಕ್ಕವಯಸಿನಿಂದಲೂ ಜೊತೆಯೆ. ಆಡುವುದು ಶಾಲೆಗೆ ಹೋಗುವುದರಿಂದ ಹಿಡಿದು ಜೊತೆಯಾಗಿಯೆ ಬೆಳೆದವರು. ತನಗಿಂತಲೂ ಎರಡುವರ್ಷಕ್ಕೆ ದೊಡ್ಡವನೇನೊ.  ತಾನು ಎಸ್ ಎಸ್ ಎಲ್ ಸಿ ಗೆ ಬರುವದರೊಳಗೆ ಅವನು ಎಸ್ ಎಸ್ ಎಲ್ ಸಿ ಫೇಲಾಗಿ , ಓದುವುದು ನಿಲ್ಲಿಸಿ. ಊರಲ್ಲಿ ಓಡಿಯಾಡಿಕೊಂಡಿದ್ದ, ಅವರಪ್ಪ ಮಾಡುತ್ತಿದ್ದ ದೇವರ ಪೂಜೆ, ತಿಥಿ ಅಂತ ಅದೇ ಪುರೋಹಿತಿಕೆ ಕೆಲಸ ಮುಂದುವರೆಸುವದರಲ್ಲಿ ಆಸಕ್ತಿ ತೋರಿದ್ದ. ಓದು ಅವನ ತಲೆಗೆ ಹತ್ತದು. ತಾನು ಓದು ಮುಂದುವರೆಸಿ, ಕಾಲೇಜನ್ನು ಸೇರಿ ಕಾಮರ್ಸ್ ಪಡೆದು ಡಿಗ್ರಿ ಓದಿಗೆ ಸೇರುವಾಗಲು, ಅವನು ನಿಶ್ಚಿಂತನಾಗಿಯೆ ಇದ್ದ. 

ಅದು ಹೇಗೊ ಮೊದಲಿನಿಂದಲೂ ಜೊತೆ ಜೊತೆಯಾಗಿಯೆ ಇದ್ದ ನಮ್ಮಿಬ್ಬರ ನಡುವೆ ಪ್ರೇಮ ಚಿಗುರಿತ್ತು. ಜೊತೆಯಲ್ಲಿ ಓಡಿಯಾಡುತ್ತಿದ್ದರು, ಸುತ್ತ ಮುತ್ತಲಿನವರು ಏನು ಅಷ್ಟೆ ತಲೆ ಕೆಡಸಿಕೊಂಡವರಲ್ಲ, ಚಿಕ್ಕವಯಸ್ಸಿನಿಂದಲು ಜೊತೆಗೆ ಇದ್ದವರು ಎನ್ನುವ ಭಾವನೆಯಲ್ಲಿದ್ದರು. ಆದರೆ ಕಾಲೇಜಿನಲ್ಲಿ ಜೊತೆಗೆ ಓದುತ್ತಿದ್ದ ಗೆಳತಿಯರಿಗೆ ಮಾತ್ರ ಅದರ ಸುಳಿವು ಹತ್ತಿತ್ತು.  

ತಾನು ಡಿಗ್ರಿ ಕೊನೆಯ ವರ್ಷದಲ್ಲಿರುವಾಗ ಸೋದರತ್ತೆ ಬೆಂಗಳೂರಿನಿಂದ ಒಂದು ಸಂಬಂಧ ತಂದ್ದಿದ್ದರು, ಅವರ ಕಡೆಯದೆ, ಹುಡುಗ ಸಾಕಷ್ಟು ಓದಿಕೊಂಡಿದ್ದ, ಆದರೆ ಸ್ವಂತ ಬಿಸನೆಸ್ ಮಾಡುವ ಇಚ್ಚೆ ಅವನದು. ಅಪ್ಪ ಅಮ್ಮನಿಗೆ ಮಾತ್ರ ತುಂಬಾನೆ ಇಷ್ಟವಾಗಿಹೋದ. ಶಾಂತಿಗ್ರಾಮದ ಅವರ ಊರಿನಲ್ಲಿ ಸಾಕಷ್ಟು ಜಮೀನು, ಆಸ್ತಿಪಾಸ್ತಿ ಇದ್ದು ಒಬ್ಬನೆ ಮಗ ಬೇರೆ ಎಂದು ಅವರಿಗೆಲ್ಲ ಸಂಭ್ರಮ.

ಸಚ್ಚಿದಾನಂದನ ಜೊತೆ ಸುಖವಾಗಿ ಓಡಾಡಿಕೊಂಡಿದ್ದ ತನಗೆ ಅಘಾತ. ಹೇಗೊ ಅವನಿಗೆ ವಿಷಯ ತಿಳಿಸಿ, ತನ್ನ ತಂದೆಯ ಜೊತೆ ಮಾತನಾಡಲು ತಿಳಿಸಿದರೆ ಅವನಿಗೆ ಭಯ.  ಹೇಗೊ ಅವನು ಸಹ ಅವರ ಅಪ್ಪ ಅಮ್ಮನಿಗೆ ವಿಷಯ ತಿಳಿಸಿ,  ಅಪ್ಪನ ಜೊತೆ ಮಾತನಾಡಲು ಬಂದರು. ಆದರೆ ಅಪ್ಪ ಯಾವ ಆಸಕ್ತಿಯೂ ತೋರಿಸಲಿಲ್ಲ. ಅಪಾರ ಆಸ್ತಿಪಾಸ್ತಿಹೊಂದಿ, ಸಾಕಷ್ಟು ಓದಿ ಸ್ವಂತ ಬಿಸನೆಸ್ ನಡೆಸಿರುವ ಮಹಾದೇವನೆಲ್ಲಿ.  ಊರಿನಲ್ಲಿ ಯಾವ ಕೆಲಸವೂ ಇಲ್ಲದೆ ಅಪ್ಪನ ಜೊತೆ ಪುರೋಹಿತತನ ನಡೆಸುತ್ತ ಬಡತನದಲ್ಲಿರುವ ಸಚ್ಚಿದಾನಂದ ಎಲ್ಲಿ ? ಎಂದರು. ತನ್ನ ಯಾವ ಪ್ರತಿಭಟನೆಗೂ ಬೆಲೆ ಸಿಕ್ಕಲಿಲ್ಲ. ಬಲವಂತದ ಮದುವೆಗೆ ಒಪ್ಪಲೇ ಬೇಕಿತ್ತು , ಬೇರೆ ಯಾವ ದಾರಿಯೂ ಇರಲಿಲ್ಲ. ಕಡೆಗೆ ಮದುವೆಯಾಗಿ ಗಂಡನ ಜೊತೆ ಶಾಂತಿಗ್ರಾಮಕ್ಕೆ ಬಂದು ನೆಲೆಸಿದ್ದೆ.  ನಂತರ ಯಾವಾಗಲೊ ಊರಿಗೆ ಹೋದಾಗ, ಸಚ್ಚಿದಾನಂದ ವಿಷಯ ತಿಳಿಯಲು ಕಷ್ಟವೆನಿಸಿತು. ಆದರೆ ಕಾಲೇಜಿನ ಸ್ನೇಹಿತೆಯೊಬ್ಬಳು ಪಿಸುನುಡಿಯಲ್ಲಿಯೆ ಅವನ ವಿಷಯ ತಿಳಿಸಿದ್ದಳು, ತಮ್ಮಿಬ್ಬರ ಮದುವೆ ಮುರಿದುಬಿದ್ದ  ಬೇಸರದಲ್ಲಿ ಅವನು ಉಜಿರೆ ತೊರೆದು ಹೊರಟುಹೋಗಿದ್ದ. ಕೆಲವರು ಹೇಳುವಂತೆ ಹಿಮಾಲಯದ ಕಡೆಗೆ ಹೊರಟುಹೋಗಿದ್ದ. 

ಹಿಂದನದೆಲ್ಲ ನೆನೆಯುವಾಗ ಅವಳಿಗೆ ತಕ್ಷಣ ಅನ್ನಿಸಿತು, ಈಗ ಸನ್ಯಾಸಿಯಾಗಿ ಬಂದಿರುವನು ಅದೇ ಸಚ್ಚಿದಾನಂದನೆ ಇರಬಹುದಾ ? , ಅವನ ಮುಖ ಕಣ್ಣು ದೇಹದ ಆಕಾರ ಕಾಣುವಾಗ ಅನ್ನಿಸಿತು, ಖಂಡಿತ ಅವನೇ ಇರಬಹುದು.  ಜಿಡ್ಡುಕಟ್ಟಿದ ದೂಳು ಹಿಡಿದ ತಲೆಯ ಉದ್ದಕೂದಲು. ಕಪ್ಪು ಬಿಳಿ ಮಿಶ್ರಿತ ಗಡ್ಡ ಎಲ್ಲವು ಅವನ ರೂಪವನ್ನು ಬದಲಿಸಿದ್ದರು, ಅವನೆ ಇರಬಹುದು ಎನ್ನುವ ಭಾವ ಅವಳನ್ನು ಕಾಡಿತು. ಮತ್ತೊಮ್ಮೆ ಹೊರಹೋಗಿ ಅವನನ್ನು ಮಾತನಾಡಿಸಲ, ನೀನು ನಮ್ಮ ಊರಿನ ಸಚ್ಚಿದಾನಂದನಾ ಎಂದು ಕೇಳಲಾ ? ಎಂದುಕೊಂಡಳು. ಆದರೆ ಸಂಸ್ಕಾರ ತಡೆಯಿತು, ಇಂತಹ ಅಪರಾತ್ರಿಯಲ್ಲಿ ಬಾಗಿಲು ತೆರೆದುಹೊರಹೋಗಿ, ಅವನನ್ನು ಮಾತನಾಡಿಸುವುದು ಸರಿಯಾಗದು. ಬೆಳಗ್ಗೆ  ಹೊರಹೋಗಿ ಅವನನ್ನು ವಿಚಾರಿಸಬೇಕು ಅಂದಕೊಂಡಳು.

ರಾತ್ರಿ ಎಲ್ಲ ಅವಳನ್ನು ಹಲವು ಭಾವ ಕಾಡಿತು, ಸಚ್ಚಿದಾನಂದನ ಜೊತೆ  ಓಡಿಯಾಡಿದ ಘಟನೆಗಳು, ಸ್ಥಳ ಮಾತುಗಳು, ಅವನ ದ್ವನಿ, ಮುಖ ಎಲ್ಲವೂ ಅವಳನ್ನು ಕಾಡಿಸುತ್ತಿದ್ದವು. ತೀರ ಮುಗ್ದನಾದ ಅವನಿಗೆ ನಾನು ಮೋಸ ಮಾಡಿದನೇನೊ ಎನ್ನುವ ಭಾವ ಅವಳನ್ನು ಅಗಾಗ್ಯೆ ಕಾಡಿಸುತ್ತ ಇದ್ದದ್ದು, ಇಂದು ದೊಡ್ಡ ಸ್ವರೂಪ ತಾಳಿತ್ತು. 

ಒಂದು ಉತ್ಕಟ ಸ್ಥಿತಿ ಅವಳನ್ನು ರಾತ್ರಿಪೂರ್ತಿ ನಿದ್ದೆ ಮಾಡಲು ಬಿಡಲಿಲ್ಲ . ಹೇಗೊ ಮಲಗಿದ್ದವಳು ಬೆಳಗ್ಗೆ ಐದಕ್ಕೆ ಎದ್ದು, ಹಿಂದೆ ನಡೆದು, ಬಚ್ಚಲುಮನೆಗೆ ಹೋಗಿ, ಮುಖತೊಳೆದು. ಒಳೆಗೆ ಸೌದೆ ಹಾಕಿ ಉರಿ ಹಚ್ಚಿ.  ಪೊರಕೆ ಹಾಗು ಒಂದು ಬಕ್ಕಿಟು ನೀರು ಹಿಡಿದು ಹೊರಬಂದಳು, ಬಾಗಿಲು ಸಾರಿಸಲು.  

ಬಾಗಿಲು ತೆರೆದು ಹೊರಬಂದು ಎಡಬಾಗಕ್ಕೆ ತಿರುಗಿದಳು, 
ಅಲ್ಲಿನ ಜಗುಲಿ ಖಾಲಿಯಿತ್ತು, ಅರೇ ಇಲ್ಲಿ ಮಲಗಿದ್ದ ಸನ್ಯಾಸಿ ಎಲ್ಲಿ ಹೋದ ? . ಬಲಕ್ಕೆ ತಿರುಗಿದಳು ಶಂಕರ ಇನ್ನೂ ಮಲಗಿದ್ದ. ಅವನಿಗೆ ಎಚ್ಚರವಾಯಿತು ಅನ್ನಿಸುತ್ತೆ. 
 ’  ಏನ್ರವ್ವ ಇಷ್ಟು ಬೇಗ ?    ’ 
ಅವಳು ಅವನಿಗೆ ಉತ್ತರಿಸಿದೆ , 
 " ಅಲ್ಲವೋ ಶಂಕರ , ಇಲ್ಲಿ ಮಲಗಿದ್ದ ಸನ್ಯಾಸಿ ಎಲ್ಲಿ ಕಾಣಿಸುತ್ತಿಲ್ಲವಲ್ಲ  
ಎಂದಳು. 
" ಅವರು ಬೆಳಗ್ಗೆ ಬೆಳಗ್ಗೆನೆ ಎದ್ದು ಹೊರಟುಹೋದರು ಅಮ್ಮ,    ಆತ ಹೊರಟಾಗ ಇನ್ನು ಕತ್ತಲು ಕತ್ತಲಿತ್ತು, ನಾನು ಇದೇನು ಬುದ್ದಿ ಇಷ್ಟು ಬೇಗ ಅಂದರೆ,  ಸೂರ್ಯ ಹುಟ್ಟಿದರೆ ನಡೆಯಲು ಬಿಸಿಲಾಗುತ್ತೆ, ಬೇಗನೆ ಹೊರಟುಬಿಡಬೇಕು, ಎರಡು ಮೂರು ದಿನದಲ್ಲಿ ಧರ್ಮಸ್ಥಳ ಸೇರುವೆ ಎಂದು ಹೊರಟರು.  " ಎಂದ ಶಂಕರ ಜಗಲಿಯಲ್ಲಿ ಎದ್ದು ಕುಳಿತು.  

ಅವಳಲ್ಲಿ ಎಂತದೋ ನಿರಾಸೆ ಆವರಿಸಿತ್ತು. ಅದೇನೊ ಒಮ್ಮೆ ಸನ್ಯಾಸಿಯನ್ನು ಮಾತನಾಡಿಸಬೇಕೆಂಬ ಕುತೂಹಲ ಅವಳಲ್ಲಿ ಇತ್ತು.  ಅವಳ ಹಿಂದೆ ಅವಳ ಅತ್ತೆಯೂ ಬಂದು ನಿಂತಿದ್ದರು. 
ಅವಳು ಬಾಗಿಲು ಸಾರಿಸಿ ಒಳಹೋಗಬೇಕು ಅಂದುಕೊಳ್ಳುವಾಗಲೆ ಶಂಕರ
  ’  ಅಮ್ಮ ಆ ಸನ್ಯಾಸಿ ನಿಮಗೆ ಇದ್ದನ್ನು ಕೊಟ್ಟು ಹೋದ ತಗೊಳ್ಳಿ  ’ ಎಂದ  ಅತ್ತೆ ಹಾಗು ಸೊಸೆ ಇಬ್ಬರಿಗೂ ಆಶ್ಚರ್ಯ.  ಅತ್ತೆ ಏನೋ ಅದು ಅನ್ನುವಾಗಲೆ ಅವನು ತನ್ನ ದಿಂಬಿನ ಬಳಿ ಇದ್ದ ವಸ್ತುವೊಂದನ್ನು ಹಿಡಿದು ಕೈಚಾಚಿದ. 

ಆ ಸನ್ಯಾಸಿ ಹೋಗುವಾಗ ಹೇಳಿಹೋದರಮ್ಮ, ಇದನ್ನು ಕುಮುದ್ದಮ್ಮನವರಿಗೆ ಕೊಡು ಎಂದು, ಶಂಕರನ ಮಾತಿಗೆ
ಕುಮದ ಆಶ್ಚರ್ಯದಿಂದ ದಿಟ್ಟಿಸಿದಳು , ಅದೊಂದೆ ತಾಮ್ರದ ತಾಯಿತದಂತಿತ್ತು, ನಿಂತು ಕೈಗೆ ಪಡೆದಳು, ಅತ್ತೆ ಸಹ ಅದನು ಅವಳ ಕೈನಿಂದ ತೆಗೆದುಕೊಂಡು ಪರೀಕ್ಷಿಸಿದಳು
 ’   ತಾಯಿತ ಕಣೆ , ಕಾಶಿಯಿಂದ ತಂದಿರುವುದು ಇರಬಹುದು, ಸನ್ಯಾಸಿಗಳಿಗೆ ವಿಶೇಷ ಶಕ್ತಿ ಇರುತ್ತೆ ಅಂತಾರೆ, ಬೆಳಗ್ಗೆ ಬೆಳಗ್ಗೆನೆ ಒಳ್ಳೆ ಶಕುನ, ಈಗಲಾದರು ನಿನಗೆ ಒಂದು ಮಗು ಅಂತ ಆದರೆ ಅಷ್ಟೆ ಸಾಕು ’ 
ಶಂಕರನ ಎದುರಿಗೆ ಅತ್ತೆ ಆಡಿದ ಮಾತಿನಿಂದ ಕಸಿವಿಸಿಗೊಂಡ ಕುಮುದ ತಾಯಿತ ಪಡೆದು ಒಳಬಂದಳು, 

ಅವಳಿಗೆ ಅನುಮಾನ, ತಾನು  ಅ ಸನ್ಯಾಸಿಯ ಬಳಿ ತನ್ನ ಹೆಸರು ಹೇಳಿರಲೇ ಇಲ್ಲ , ಅಲ್ಲದೆ ಅತ್ತೆ ಸಹ ಅವನೆದುರು ತನ್ನ ಹೆಸರು ಹೇಳಲಿಲ್ಲ ಎಂದು ಅವಳಿಗೆ ನೆನಪಿ, ಹಾಗಿರಲು, ತನ್ನ ಹೆಸರು ಅವನಿಗೆ ಹೇಗೆ ತಿಳಿಯಿತು. 

ಸನ್ಯಾಸಿಯಾಗಿ ಬಂದಿದ್ದವನು ಸಚ್ಚಿದಾನಂದನೆ ಇರಬಹುದೇ ? . ಆದರೆ  ಇಷ್ಟು ವರ್ಷಗಳ ನಂತರ ಏಕೆ ಬಂದಿದ್ದ. ಅವನು ಸನ್ಯಾಸಿಯಾಗಲು ತಾನೆ ಕಾರಣಳೆ? . ಈಗಲೂ ಅವನ ಮನಸ್ಸಿನಲ್ಲಿ ಒಂಬತ್ತು ವರ್ಷಗಳ ನಂತರವು ನನ್ನ ನೆನೆಪಿದೆಯೆ ? ತನ್ನನ್ನು ನೋಡಿಹೋಗಲೆಂದು ಬಂದಿದ್ದನೆ ? ಅವಳಲ್ಲಿ ಹತ್ತು ಹಲವು ಭಾವಗಳು. ಮಾನಸಿಕ ಒತ್ತಡ ತಡೆಯಲಾರದೆ ರೂಮಿಗೆ ಹೋಗಿ ಹಾಸಿಗೆ ಮೇಲೆ ಕುಳಿತಳು. ಅವಳಲ್ಲಿ ಉದ್ವೇಗ , ದುಃಖ ಸಂತಸ ಏನೆಲ್ಲ ಮಿಶ್ರಭಾವಗಳು ಹೊರಹೊಮ್ಮುತ್ತಿದ್ದು, ಅಳು ಬರುತ್ತಿತ್ತು. ಆದರೆ ಅತ್ತರೆ ಅತ್ತೆ ಪ್ರಶ್ನಿಸಬಹುದೆಂಬ ಭಯ , ಅಳುವಿಗೆ ಕಾರಣ ಏನೆಂದು ಹೇಳಲಿ ಎಂಬ ಭಾವದಲ್ಲಿ ನುಗ್ಗಿಬರುತ್ತಿದ್ದ ಅಳುವನ್ನು ತಡೆದು ಕುಳಿತಳು ಕತೆಗೆ ಪ್ರೇರಣೆ :   ಫೇಸ್ ಬುಕ್ಕಿನಲ್ಲಿ ಕಂಡ ಉಷಾ ಉಮೇಶ್ ರವರ ಕವನ  ’ ಆಗಂತುಕ ’


 

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x