ವಾಸುಕಿ ಕಾಲಂ

ಆಕ್ಸಿಡೆಂಟ್:ವಾಸುಕಿ ರಾಘವನ್ ಅಂಕಣ


ಶಂಕರ್ ನಾಗ್ ನಿಜಕ್ಕೂ ಸಿನಿಮಾ ವ್ಯಾಕರಣ ಕಲಿತಿದ್ದು ಎಲ್ಲಿ? ಅದು ರಂಗಭೂಮಿಯ ಅನುಭವದಿಂದ ಬಂದ ಸೆನ್ಸಿಬಿಲಿಟಿಯಾ? ಅಥವಾ ಬೇರೆ ದೇಶದ ಚಿತ್ರಗಳನ್ನ ಹೆಚ್ಚಾಗಿ ನೋಡಿ ಆ ಶೈಲಿಯಿಂದ ಪ್ರಭಾವಿತರಾಗಿದ್ರಾ? ನನಗೆ ಗೊತ್ತಿಲ್ಲ! ಆದರೆ ಅವರ ನಿರ್ದೇಶನದ ಚಿತ್ರಗಳಲ್ಲಿ ಒಂದು ವಿಭಿನ್ನವಾದ ಛಾಪು ಇರುತ್ತದೆ.

ಅವರ ನಿರ್ದೇಶನದ “ಆಕ್ಸಿಡೆಂಟ್” ನನ್ನ ಮೆಚ್ಚಿನ ಚಿತ್ರಗಳಲ್ಲೊಂದು. ಚಿತ್ರದ ಕಥೆ ಬಹಳ ಸರಳ, ಆದರೆ ಅದನ್ನು ಹ್ಯಾಂಡಲ್ ಮಾಡಿರುವ ಶೈಲಿ ಅದ್ಭುತ. ಮಂತ್ರಿ ಧರ್ಮಾಧಿಕಾರಿಯ ಮಗ ದೀಪಕ್ ತನ್ನ ಗೆಳೆಯ ರಾಹುಲ್ ಜೊತೆ ಡ್ರಗ್ಸ್ ಅಮಲಿನಲ್ಲಿ ಕಾರ್ ಓಡಿಸಿಕೊಂಡು ಹೋಗುತ್ತಿದ್ದಾಗ, ನಿಯಂತ್ರಣ ತಪ್ಪಿ ರಸ್ತೆಬದಿಯಲ್ಲಿ ಮಲಗಿದ್ದ ಬಡಜನರ ಮೇಲೆ ಕಾರ್ ಹರಿಸಿಬಿಡುತ್ತಾನೆ! ಒಬ್ಬನನ್ನು ಹೊರತುಪಡಿಸಿ ಮಿಕ್ಕವರೆಲ್ಲಾ ಸಾಯ್ತಾರೆ. ಚುನಾವಣೆಗೆ ನಿಲ್ಲಲು ಸಿದ್ಧತೆ ನಡೆಸಿರುವ ಧರ್ಮಾಧಿಕಾರಿ ಇದನ್ನು ಮುಚ್ಚಿಹಾಕಲು ಪ್ರಯತ್ನಿಸುತ್ತಾನೆ. ತಮ್ಮ ಮನೆಯ ಡ್ರೈವರ್ ತಪ್ಪೊಪ್ಪಿಕೊಳ್ಳುವಂತೆ ಮಾಡಿ, ತನ್ನ ಮಗನನ್ನು ಬಚಾವು ಮಾಡಲು ಪ್ರಯತ್ನಿಸುತ್ತಾನೆ. ಆದರೆ ಈ ಘಟನೆಯ ಬಗ್ಗೆ ತನಿಖೆ ನಡೆಸುವ ಪತ್ರಕರ್ತ ರವಿ ನಿಜವಾದ ತಪ್ಪಿತಸ್ಥನನ್ನು ಕಂಡುಹಿಡಿಯಲು ಮುಂದಾಗುತ್ತಾನೆ.

ಶಂಕರ್ ನಾಗ್ ನಿರ್ದೇಶನದ ಬಗ್ಗೆ ಎಷ್ಟು ಹೊಗಳಿದರೂ ಸಾಲದು. ಒಂದು ಕಡೆ ‘ಕಲಾತ್ಮಕ’ ಅಂತ ಹಣೆಪಟ್ಟಿ ಹೊತ್ತುಕೊಂಡು ಬರೋ ಚಿತ್ರಗಳಂತೆ ಡಲ್ ಲೈಟಿಂಗ್ ಆಗಲೀ, ಬೋರ್ ಹೊಡೆಸುವ ನಿರೂಪಣೆಯಾಗಲೀ ಇಲ್ಲ. ಚಿತ್ರದ ಗತಿಯಲ್ಲಿ ವೇಗವಿದೆ, ಸಂಭಾಷಣೆಯಲ್ಲಿ ಚುರುಕುತನವಿದೆ. ಹಾಗೆಯೇ ಕಮರ್ಷಿಯಲ್ ಚಿತ್ರಗಳ ಯಾವ ಫಾರ್ಮುಲಾಗಳಿಗೂ ಅವರು ಜೋತುಬೀಳುವುದಿಲ್ಲ. ಚಿತ್ರದ ಅವಧಿ ಕೇವಲ ಒಂದೂ ಮುಕ್ಕಾಲು ಗಂಟೆ. ಚಿತ್ರ ಮೊದಲ ಸೀನಿಂದಲೇ ನೇರವಾಗಿ ವಿಷಯಕ್ಕೆ ಬಂದುಬಿಡುತ್ತದೆ. ಪಾತ್ರಗಳನ್ನು ಪರಿಚಯಿಸಲು ಔಪಚಾರಿಕವಾದ “ಎಸ್ಟಾಬ್ಲಿಶಿಂಗ್ ಸೀಕ್ವೆನ್ಸ್” ಯಾವುದೂ ಇಲ್ಲ. ಅನಗತ್ಯವಾದ ಉಪಕಥೆಗಳಾಗಲೀ, ‘ಮೂಡನ್ನು ತಿಳಿಗೊಳಿಸಲು’ ಅನ್ನುವ ನೆಪವೊಡ್ಡಿಕೊಂಡು ಬರುವ ಹಾಸ್ಯದೃಶ್ಯಗಳಾಗಲೀ ಇದರಲ್ಲಿ ಇಲ್ಲ. ಇಡೀ ಚಿತ್ರದಲ್ಲಿ ಒಂದೇ ಒಂದು ಹಾಡಿಲ್ಲ. ಆದರೂ ಕೇವಲ ಹಿನ್ನಲೆ ಸಂಗೀತಕ್ಕೋಸ್ಕರ ಇಳಯರಾಜರಂತಹ ಮೇರು ಸಂಗೀತಗಾರರನ್ನ ಚಿತ್ರಕ್ಕೆ ಬಳಸಿಕೊಳ್ಳಲಾಗಿದೆ. ನಿಜವಾಗಿಯೂ ಎಂತಹ ಸ್ಪಷ್ಟತೆಯ ವಿಷನ್ ಶಂಕರ್ ನಾಗ್ ಅವರದು!

ಅಷ್ಟು ಕಮ್ಮಿ ಅವಧಿಯ ಚಿತ್ರವಾದರೂ ಅದರಲ್ಲಿರುವ ಡೀಟೆಯ್ಲಿಂಗ್ ಚಿತ್ರವನ್ನು ಶ್ರೀಮಂತವಾಗಿಸಿದೆ. “ಡ್ರಗ್ ತೆಗೆದುಕೊಂಡರು” ಅಂತ ಒಂದೇ ಸೀನಿನಲ್ಲಿ ತೋರಿಸಬಹುದು, ಆದರೆ ಅದರ ತೀವ್ರತೆ ನಮಗೆ ಅನುಭವಕ್ಕೆ ಬರಲ್ಲ. ಇಲ್ಲಿ ಅವರ ಡ್ರಗ್ಸ್ ವ್ಯಸನ ಹಾಗು ಅವರ ಬೇಜವಾಬ್ದಾರಿ, ವೈಭವದ ಜೀವನ ಎರಡನ್ನೂ ಪರಿಣಾಮಕಾರಿಯಾಗಿ ಹೆಣೆಯಲಾಗಿದೆ. ಮೊದಲಿಗೆ ದೀಪಕ್ ಮತ್ತು ರಾಹುಲ್ ಯಾವುದೋ ಮಾರ್ಕೆಟ್ ಅಲ್ಲಿ ಒಬ್ಬ ವ್ಯಕ್ತಿಯಿಂದ ಡ್ರಗ್ಸ್ ಕೊಳ್ಳುತ್ತಾರೆ. ನಂತರ ಇನ್ನೂ ಕೆಲವು ಗೆಳೆಯರೊಟ್ಟಿಗೆ ಡ್ರಗ್ಸ್ ಸೇವಿಸಿ, ಕುಣಿದು, ನಶೆಯ ಅಮಲಿನಲ್ಲಿ ಬೇರೆ ಹುಡುಗಿಯರೊಂದಿಗೆ ದೈಹಿಕ ಸಂಪರ್ಕ ಹೊಂದುತ್ತಾರೆ. ಅಲ್ಲಿಂದ ಮುಂದೆ ಇನ್ಯಾವುದೋ ಆಶ್ರಮದಿಂದ ಗಾಂಜಾ ಖರೀದಿಸುತ್ತಾರೆ. ಮಧ್ಯರಾತ್ರಿ ಕಾರ್ ಓಡಿಸಿಕೊಂಡು ಹೋಗುವಾಗ ಅವರನ್ನು ಓವರ್ಟೇಕ್ ಮಾಡಿಕೊಂಡು ಹೋಗುವ ಬೈಕು ಸವಾರನನ್ನು ಅಟ್ಟಿಸಿಕೊಂಡು ಹೋಗುತ್ತಾರೆ. ರೇಸಿಂಗ್ ಗೋಸ್ಕರ ಅಭ್ಯಾಸ ಮಾಡ್ತಿದೀರಾ ಅಂತ ಕೇಳಿದಾಗ, ಆ ಬೈಕು ಸವಾರ ಅವೆಲ್ಲಾ ಮಕ್ಕಳ ಆಟ, ನಂಗೆ ನಿದ್ದೆ ಬರ್ತಿರ್ಲಿಲ್ಲ ಅದಿಕ್ಕೆ ನನ್ನ ‘ಕುದುರೆ’ (ಬೈಕ್) ಮೇಲೆ ಬಂದೆ ಅಂತ ಹೇಳುತ್ತಾನೆ. ಕಾರ್ ಬೈಕ್ ರೇಸ್ ನಡೆಯುವಾಗ ರಸ್ತೆಯಲ್ಲಿ ಒಂದು ನರಪಿಳ್ಳೆಯೂ ಇರುವುದಿಲ್ಲ. ದಾರಿತಪ್ಪಿದ ಶ್ರೀಮಂತ ಹುಡುಗರ ಜೀವನಶೈಲಿ, ಅವರ ಮೌಲ್ಯಗಳನ್ನ ತುಂಬಾ ಹತ್ತಿರದಿಂದ ಪರಿಚಯಿಸುತ್ತದೆ.

ಇನ್ನೊಂದು ಪ್ರಮುಖ ಅಂಶ ಅಂದರೆ ನಿರ್ದೇಶಕರು ಪಾತ್ರಗಳನ್ನು ಸೃಷ್ಟಿಸಿರುವಲ್ಲಿ ತೋರಿಸಿರುವ ಕಾಳಜಿ, ಮತ್ತು ಅವುಗಳಿಗೆ ಕೊಟ್ಟಿರುವ ಹ್ಯೂಮನ್ ಟಚ್! ಅಪಘಾತಕ್ಕೆ ನೇರ ಕಾರಣ ದೀಪಕ್ ಆದರೂ, ರಾಹುಲ್ ಮಾನಸಿಕ ಖಿನ್ನತೆಗೆ ಒಳಗಾಗುತ್ತಾನೆ. ಅವನಿಗೆ ತನ್ನ ತಾಯಿಯ ಪ್ರಿಯಕರನ ಕುರಿತು ಅಸಹ್ಯ, ಸಿಟ್ಟು. ಆದರೆ ರಾಹುಲನ ತಾಯಿಯನ್ನು ಕೆಟ್ಟವಳು ಅನ್ನುವ ರೀತಿ ತೋರಿಸಿಲ್ಲ. ನಲವತ್ತೈದರ ಸುಮಾರಿನ ಹೆಂಗಸಿಗೆ ಒಬ್ಬ ಪ್ರಿಯಕರ ಇರಬಹುದು, ಅವಳಿಗೂ ದೈಹಿಕ ವಾಂಛೆಗಳು ಇರುವುದು ಸಹಜ ಅನ್ನುವ ಪ್ರಬುದ್ಧ ಧೋರಣೆ ನಿಜಕ್ಕೂ ಅಭಿನಂದನಾರ್ಹ. ಧರ್ಮಾಧಿಕಾರಿ ಕೂಡ ಮಾಮೂಲಿ ದುಷ್ಟ ರಾಜಕಾರಿಣಿ ತರಹ ಅಲ್ಲ. ಒಂದು ಕಡೆ ಮಗ ಮಾಡಿದ ತಪ್ಪಿನ ಬಗ್ಗೆ ಅಪರಾಧೀಭಾವ, ಇನ್ನೊಂದೆಡೆ ತನ್ನಲ್ಲಿರುವ ರಾಜಕೀಯ ಶಕ್ತಿಯನ್ನು ಉಪಯೋಗಿಸಿ ಹೇಗಾದರೂ ಮಗನನ್ನು ಬಚಾವುಮಾಡಿ, ಚುನಾವಣೆ ಗೆಲ್ಲಬೇಕೆಂಬ ತರಾತುರಿ ಇವುಗಳ ವೈರುಧ್ಯ ನೈಜತೆಯಿಂದ ಕೂಡಿದೆ. ಹಾಗೆಯೇ ಈ ಅನ್ಯಾಯವನ್ನ ಬಯಲಿಗೆಳೆಯಬೇಕು ಅಂತ ಹೋರಾಡುವ ರವಿಗೆ ಅವನ ಬಾಸ್ ಇಂದಲೇ ಮೋಸ ಉಂಟಾಗುತ್ತದೆ. ಅನ್ಯಾಯದ ವಿರುದ್ಧ ಹೋರಾಡುವ, ಸತ್ತ ಜನರ ಬಗ್ಗೆ ಕಾಳಜಿ ಇರುವ ರವಿ ಕೂಡ ಆವೇಶದಿಂದ ತನ್ನ ಬಾಸ್ ಗೆ “ಸರ್, ಎಂತಹ ಒಳ್ಳೆ ಸ್ಟೋರಿ ನ ಸಾಯಿಸಿಬಿಟ್ರ” ಅಂತ ಹಲುಬುತ್ತಾನೆ. ಅಂತಹಾ ಒಳ್ಳೆಯವನಲ್ಲಿ ಇರುವ ಸ್ವಾರ್ಥ, ಹಾಗೆಯೇ ಕೆಟ್ಟವರಲ್ಲಿ ಇರುವ ಒಳ್ಳೆಯತನ ಚಿತ್ರವನ್ನು ತುಂಬಾ ರಿಯಲಿಸ್ಟಿಕ್ ಆಗಿ ಮಾಡಿದೆ.

ಕಾರ್ ಇಂದ ಶುರು ಆಗುವ ಕಥೆ, ಕಾರ್ ಇಂದಲೇ ತಿರುವು ಪಡೆದುಕೊಂಡು, ಕಾರ್ ಇಂದಲೇ ಅಂತ್ಯಗೊಳ್ಳುತ್ತದೆ. ಅಷ್ಟೇನೂ ದೊಡ್ಡ ಪಾತ್ರಗಳು ಅಲ್ಲದಿದ್ದರೂ ಅನಂತ್ ನಾಗ್ ಮತ್ತು ಅರುಂಧತಿ ರಾವ್ ತಾವು ಎಂಥ ಅಪ್ರತಿಮ ಕಲಾವಿದರು ಅನ್ನುವುದನ್ನು ತೋರಿಸಿದ್ದಾರೆ. ಹಾಗೆಯೇ ಈಗಿನ ಪ್ರತಿಯೊಂದು ಕೆಟ್ಟ ಚಿತ್ರ ನೋಡಿದಾಗಲೂ ನಮ್ಮ ಬುದ್ಧಿವಂತಿಕೆಯ ಮೇಲೆ ನಂಬಿಕೆಯಿಟ್ಟಿದ್ದ ಶಂಕರ್ ನಾಗ್ ನೆನಪಾಗುತ್ತಾರೆ. “ಛೇ ಶಂಕರ್ ನಾಗ್ ಇರಬೇಕಿತ್ತು ಈಗ…” ಅಂತ ನಮಗೇ ಗೊತ್ತಿಲ್ಲದಂತೆ ನಮ್ಮ ಬಾಯಿಂದ ಹೊರಬರುತ್ತದೆ!

ಕನ್ನಡದ ಬರಹಗಳನ್ನು ಹಂಚಿ ಹರಡಿ

6 thoughts on “ಆಕ್ಸಿಡೆಂಟ್:ವಾಸುಕಿ ರಾಘವನ್ ಅಂಕಣ

  1. ಇಂದಿಗೂ ನನಗೆ ಈ ಚಿತ್ರದ ತಾಂತ್ರಿಕತೆಯ ಕುರಿತು ಕುತೂಹಲವಿದೆ….ನನ್ನಿಂದ ಮತ್ತೇ ಮತ್ತೇ ನೋಡಿಸಿಕೊಳ್ಳುವ ಕೆಲವೇ ಚಿತ್ರಗಳಲ್ಲಿ ಇದೂ ಒಂದು ! ಉತ್ತಮ ವಿಮರ್ಶೆ….

  2. ಪ್ರತೀ ಬಾರಿ ದೊಡ್ಡವರು ಇ೦ತಹ ಕೆಲಸ ಮಾಡಿದಾಗಲೆಲ್ಲ ಶ೦ಕರ್ ನಾಗ್ ಇ೦ತಹ ಚಿತ್ರ ಮಾಡಿದ್ದರು ಅನ್ನೋದು ವಿಷಾದವಾಗಿ ಕಾಡುತ್ತದೆ. ಮೊನ್ನೆ ಫುಟ್ ಪಾಥ್ ಮೇಲೆ ಓಡಿಸಿ ಮಲಗಿದ್ದವರನ್ನು ಯಮಲೋಕಗಟ್ಟಿದವ, ಸಲ್ಮಾನ್ ಖಾನ್ ಇತ್ಯಾದಿ ಫಿಲ್ಮ್ ಸ್ಟಾರ್ ಗಳು ಮಾಡಿದ ಆಕ್ಸಿಡೆ೦ಟ್ ಗಳು.. 
    ಚಿತ್ರದಲ್ಲಿ ಹೀರೋಯಿಸ೦ ಇಲ್ಲ. ರಮೇಶ್ ಭಟ್, ಶ೦ಕರ್ ನಾಗ್ ಲಾರ್ಜರ್ ದ್ಯಾನ್ ಲೈಫ್ ಆಗಿ ಎಲ್ಲರನ್ನೂ ಹೊಡೆಬಡೆದು ಗೆಲ್ಲುವ ಸೀನ್ ಗಳಿಲ್ಲ. ರಿಯಲಿಸ೦ ಟಚ್ ಇದೆ. 
    ಗಾಡ್ ಫಾದರ್ ನ ರೆಫರೆನ್ಸ್ ನೋಡಿದಾಗ "ತು೦ಬಾ ಮೋಸ ಆಗಿ ಹೋಯಿತು.. ಇಷ್ಟು ಬೇಗ ಶ೦ಕರ್ ಹೋಗ್ಬಾರಿದಿತ್ತು.." ಅನಿಸಿತ್ತು..ಈಗಲೂ ಅನಿಸುತ್ತಿದೆ. 
    ಡೈರಕ್ಟರ್, ಅ೦ಬಿಗನ ಅವಶ್ಯಕತೆ ಕನ್ನಡಕ್ಕೀಗ ಬಹಳ ಜರೂರತ್ತಾಗಿದೆ.
    ಸರಳ, ಜನರನ್ನು ಸುಲಭವಾಗಿ ಮುಟ್ಟುವ ವಿಮರ್ಶೆ 🙂

  3. Shankranna erbekithu
    Avara hesarige cinima gelso thakath edhe hagantha gimick madoku shankrannana hesru balaskotha edare
    Anthavru entha cinimagalana nodli
    Short n sweet vimarshe chenagidhe

Leave a Reply

Your email address will not be published. Required fields are marked *