ತಾನೊಬ್ಬ ಮಹಾನ್ ಬುದ್ಧಿವಂತ ಎಂದು ತಿಳಿದುಕೊಂಡಿರುವ ಮನುಷ್ಯನಿಗೆ ಒಂದು ಯಕಃಶ್ಚಿತ್ ಇರುವೆ ಯೋಚಿಸಲು ಶಕ್ತವಾಗಿರುವುದಷ್ಟೇ ಅಲ್ಲದೆ ಯೋಜನೆಯನ್ನೂ ರೂಪಿಸಲೂ ಶಕ್ತವಾಗಿರುತ್ತದೆ ಎಂದರೆ ನಂಬುವುದು ಕಷ್ಟವೇ. ಲೆನಿಂಜೆನ್ನನ ಐರೋಪ್ಯ ಬುದ್ಧಿವಂತಿಕೆ ಮತ್ತು ಬ್ರೆಜಿಲಿನ್ನಿಯರರ ದೇಶಿ ಬುದ್ಧಿವಂತಿಕೆ ಈ ಇರುವೆಗಳ ಬುದ್ದಿವಂತಿಕೆಗೆ ಸರಿಸಾಟಿಯಾಗಬಲ್ಲುದೇ? ನಿಜ. ಲೆನಿಂಜೆನ್, ಇರುವೆಗಳು ಒಳಗೆ ಬರದಂತೆ ನೀರಿನ ಕಾಲುವೆಯನ್ನೇನೋ ನಿರ್ಮಿಸಿದ್ದ. ಲೆನಿಂಜೆನ್ನನ ಯೋಜನೆ ಏನೇ ಇರಲಿ.. ಅದನ್ನು ಹಾಳುಗೆಡುವುದೇ ಇರುವೆಗಳ ಪ್ರತಿಯೋಜನೆಯಾಗಿತ್ತು.
ಸಂಜೆ ನಾಲ್ಕರಷ್ಟೊತ್ತಿಗೆ ಇರುವೆಗಳ ಆಕ್ರಮಣದ ಅಂತಿಮ ರೂಪುರೇಷೆಗಳು ತಯಾರಾದಂತೆ ಕಾಣಿಸಿತು. ಕಾಲುವೆಯೊಂದೇ ಅಲ್ಲದೆ ಇರುವೆಗಳಿಗೆ ಹಿಂಭಾಗದಲ್ಲಿ ಹರಿಯುತ್ತಿದ್ದ ನದಿಯೂ ದೊಡ್ಡ ತಡೆಯಾಗಿತ್ತು. ಬಹುಶಃ ಇದರ ಸುಳಿವು ಇರುವೆಗಳ ಮಾಹಿತಿ ಜಾಲದ ನೆರವಿನಿಂದ ಅವರ ಹೈಕಮಾಂಡಿಗೆ ಮುಟ್ಟಿರಬೇಕು. ಇರುವೆಗಳಿಗೆ ಕಾಲುವೆ ದಾಟಲು ಎಲ್ಲೂ ದಾರಿ ಕಾಣದಿದ್ದರಿಂದ ಅವುಗಳಲ್ಲಿ ಗೊಂದಲ ಉಂಟಾಗಿದೆ ಎಂದು ಕುದುರೆಯ ಮೇಲೆ ಕಾಲುವೆಯ ಒಳ ಭಾಗದಲ್ಲಿ ಗಸ್ತು ತಿರುಗುತ್ತಿದ್ದ ಲೆನಿಂಜೆನ್ನನಿಗೆ ಅನಿಸಿತು.
ಬೆಟ್ಟದ ತುದಿಯಿಂದ ಹರಿದು ಬರುತ್ತಿದ್ದ ಇರುವೆಗಳ ಸಾಗರದ ಅಗಾಧತೆ ನೋಡಿ ಕಾಲುವೆಯ ಬಳಿ ನಿಂತು ನೋಡುತ್ತಿದ್ದವರ ಜಂಘಾಬಲ ಉಡುಗುತ್ತಿತ್ತು. ಸೂರ್ಯನ ಇಳಿ ಬಿಸಿಲಿಗೆ ಕರ್ರಗೆ ಮಿಣಿಮಿಣಿ ಮಿಂಚುತ್ತಿದ್ದ ಇರುವೆಗಳು ಡಾಮಾರಿನ ಅಣೆಕಟ್ಟು ಒಡೆದು ಹರಿಯುತ್ತಿರುವ ದ್ರಾವಣದಂತೆ ಕಾಣಿಸುತ್ತಿತ್ತು. ಮುಂಚೂಣಿಯಲ್ಲಿದ್ದ ಇರುವೆಗಳು ಆತ್ಮಹತ್ಯಾದಳದ ಕಾರ್ಯಕರ್ತರಂತೆ ಕಾಲುವೆಗೆ ದುಮುಕಿ ಹಿಂದಿದ್ದ ಇರುವೆಗಳಿಗೆ ತೆಪ್ಪದಂತೆ ಜೀವ ತೆರೆಯುತ್ತಿದ್ದವು. ನೀರಿಗಳಿದ ಇರುವೆಗಳು ಕಾಲುವೆಯ ಮಧ್ಯಕ್ಕೆ ಬರುತ್ತಿದ್ದಂತೆ ನೀರಿನ ರಭಸಕ್ಕೆ ಸೋತು ಕೊಚ್ಚಿ ಹೋಗುತ್ತಿದ್ದವು. ಆದರೂ, ಹಿಂದಿದ್ದ ಇರುವೆಗಳ ಸಂಖ್ಯೆಯ ಅಗಾಧತೆ ಎಷ್ಟೊಂದಿತ್ತೆಂದರೆ ಮುಂದೆ ಇಳಿದ ಇರುವೆಗಳ ಮೇಲೆ ಹತ್ತಿ ಮುಂದೆ ಸಾಗಲು ಯತ್ನಿಸುತ್ತಿದ್ದವು.
ಲೆನಿಂಜೆನ್ನನ ಜತೆಯಲ್ಲಿ ಗಸ್ತು ತಿರುಗುತ್ತಿದ್ದ ಕೆಲವು ಖಾಸಾ ಕೆಲಸಗಾರರಿಗೆ ಅವನು ಕಾಲುವೆಯಲ್ಲಿ ಹರಿಯುತ್ತಿದ್ದ ನೀರಿನ ಹರಿವನ್ನು ಹೆಚ್ಚಿಸಲು ಅಣೆಕಟ್ಟಿನ ಬಳಿ ಕಳುಹಿಸಿದರೆ ಮತ್ತೆ ಕೆಲವರಿಗೆ ಪೆಟ್ರೋಲು ಸಿಂಪಡಿಸುವ ಮೆಶೀನುಗಳು ಮತ್ತು ಗುದ್ದಲಿಗಳನ್ನು ತರಲು ಕಳಿಸಿದ. ಕಾಲುವೆ ಮೇಲೆ ನಿಗಾ ಇಟ್ಟವರನ್ನು ಬಿಟ್ಟು ಉಳಿದವರನ್ನು ತನ್ನ ಬಳಿ ಬರಲು ಹೇಳಿ ಕಳಿಸಿದ. ಲೆನಿಂಜೆನ್ನ್ ಯೋಚಿಸಿದ್ದಕ್ಕಿಂತಲೂ ಹೆಚ್ಚು ವೇಗವಾಗಿ ಇರುವೆಗಳು ಕಾಲುವೆ ದಾಟುವಲ್ಲಿ ಯಶಸ್ವಿಯಾಗುತ್ತಲಿದ್ದವು. ಹರಿಯುವು ನೀರಿನ ವೇಗ ಹೆಚ್ಚಾಗಿದ್ದರೂ ಇರುವೆಗಳು ಒಂದರಮೇಲೊಂದು ಹತ್ತಿ ಮುನ್ನುಗ್ಗುತ್ತಲೇ ಇದ್ದವು. ನೀರಿನ ಹೆಚ್ಚಾದ ಓಟಕ್ಕೆ ಅವೇನೂ ಧೃತಿಗೆಟ್ಟಂತೆ ಕಾಣಿಸಲಿಲ್ಲ. ಮುನ್ನುಗ್ಗಿದ್ದ ಇರುವೆಗಳು ಕೊಚ್ಚಿ ಹೋದಂತೆ ಬೇರೆ ಇರುವೆಗಳು ಅವುಗಳ ಜಾಗವನ್ನು ಆಕ್ರಮಿಸಿಕೊಳ್ಳುತ್ತಿದ್ದವು.
ಪೆಟ್ರೊಲ್ ಮೆಶೀನುಗಳು ಮತ್ತು ಗುದ್ದಲಿಗಳನ್ನು ತೆಗೆದುಕೊಂಡು ಲೆನಿಂಜೆನ್ನನ ಕೆಲಸಗಾರರು ಬಂದರು. ವಿರೋಧಿ ಪಡೆ ಸುಮಾರು ಮನ್ನುಗ್ಗಿತ್ತು. ಕಾಲುವೆಯ ಉದ್ದಕ್ಕೂ ಇರುವೆಗಳು ಆಕ್ರಮಣಕ್ಕೆ ಇಳಿದಿದ್ದವಾದರೂ ಲೆನಿಂಜೆನ್ ಈಗ ನಿಂತಿರುವ ಸ್ಥಳದಲ್ಲಿ ಕಾಲುವೆಯು ಕೊಂಚ ಕಿರಿದಾಗಿತ್ತು. ಹಿ ಜಾಗದಲ್ಲೇ ಇರುವೆಗಳು ಹೆಚ್ಚೆಚ್ಚು ಮುನ್ನುಗ್ಗುತ್ತಿದ್ದವು. ಕಾಲುವೆಯ ಉಳಿದೆಡೆಗಳಲ್ಲೂ ಇದೇ ರೀತಿ ಆಗಿದ್ದಿದ್ದರೆ ಕಾವಲು ನಿಂತವರ ಸ್ಥಿತಿ ಶೋಚನೀಯವಾಗಿರುತ್ತಿತ್ತು.
ಆದರೂ, ಎಲ್ಲವೂ ಸರಿಯಾಗಿದೆ ಎಂದು ವಿಶ್ವಾಸಪೂರ್ವಕವಾಗಿ ಹೇಳುವಂತಿರಲಿಲ್ಲ. ಲೆನಿಂಜೆನ್ನನಿಗೆ ತಾನು ಇರುವೆಗಳನ್ನು ಎದುರಿಸುತ್ತೇನೆಂಬ ಆತ್ಮವಿಶ್ವಾಸವಿತ್ತೇನೋ ಸರಿ. ಆದರೆ, ಬರೇ ಆತ್ಮವಿಶ್ವಾಸವೊಂದೇ ವಾಸ್ತವವನ್ನು ಬದಲಿಸಲು ಸಾಧ್ಯವಿರಲಿಲ್ಲ. ಪ್ರಕೃತಿಯ ಯೋಜನೆಗಳ ಮುಂದೆ ಮಾನವನ ಯೋಜನೆಗಳು ತಲೆಕೆಳಗಾಗುವುದರಲ್ಲಿ ಯಾವುದೇ ಸಂಶಯಗಳಿರಲಿಲ್ಲ. ಆದರೆ, ಮನುಷ್ಯ ಮತ್ತು ಪ್ರಕೃತಿ ಮಧ್ಯದ ಸಂಘರ್ಷ ಒಂದು ನಿರ್ಣಾಯಕ ಘಟ್ಟಕ್ಕೆ ಮುಟ್ಟುತ್ತಿದೆ ಎಂಬುದು ಅರಿವಾಗುತ್ತಲೇ ಲೆನಿಂಜೆನ್ನಾನ ಉತ್ಸಾಹ ಏರಿತು. ಒಂದು ರೋಮಾಂಚಿಕ ಸಂಘರ್ಶದಲ್ಲಿ ಗೆಲ್ಲುವ ಎಲ್ಲಾ ಅವಕಾಶಗಳಿರುವ ಒಲಿಂಪಿಕ್ ಆಟಗಾರನಂತೆ ಅವನ ಮುಖ ಪ್ರಜ್ವಲಿಸುತ್ತಿತ್ತು. ಭೀತಿಯಿಂದ ನಡಗುತ್ತಿರುವ ಅವನ ಕೆಲಸಗಾರರಿಗೆ ಲೆನಿಂಜೆನ್ನನ ಆತ್ಮವಿಶ್ವಾಸ, ಧೈರ್ಯ ಸೊರಗಿ ಕುಗ್ಗಿ ಹೋಗಿದ್ದ ಬಲೂನುಗಳಿಗೆ ಗಾಳಿ ತುಂಬಿಸಿದಂತಾಯಿತು. ಕೇವಲ ಹತ್ತು ಹನ್ನೆರಡು ಅಡಿಗಳ ದೂರದಲ್ಲಿ ಕಾಲುವೆ ದಾಟಲು ತುದಿಗಾಲಿನಲ್ಲಿ ನಿಂತು ಚಡಪಡಿಸುತ್ತಿದ್ದ ಯಮದೂತ ಇರುವೆಗಳಿಗೆ ಅವರು ಸೆಡ್ಡು ಹೊಡೆಯಲು ತಯಾರಾದರು. ಲೆನಿಂಜೆನ್ನನ ಸೂಚನೆಯಂತೆ ಅವರಲ್ಲಿ ಕೆಲವರು ಕಾಲುವೆಯ ಈ ಬದಿಯಲ್ಲಿ ಮಣ್ಣನ್ನು ಅಗೆದಗೆದು ಇರುವೆಗಳ ಮೇಲೆ ಎರಚತೊಡಗಿದರು.
ಇದರ ಜೊತೆಗೆ ಈವರೆಗೆ ಕೀಟನಾಶಕಗಳಿಗಷ್ಟೇ ಬಳಸುತ್ತಿದ್ದ ಪೆಟ್ರೋಲ್ ಸಿಂಪರಣೆ ಮೆಶೀನುಗಳನ್ನು ಲೆನಿಂಜೆನ್ ಇರುವೆಗಳ ಮೇಲೆ ಪ್ರಯೋಗಿಸಲು ಆದೇಶವಿತ್ತ. ಈ ವರೆಗೆ ಮಣ್ಣು ಎರಚುವಿಕೆಯಿಂದ ಕಂಗಾಲಾಗಿದ್ದ ಇರುವೆಗಳ ಪಾಳಯದಲ್ಲಿ ಹೊಸದಾಗಿ ಪೆಟ್ರೋಲ್ ಅಸ್ತ್ರದಿಂದಾಗಿ ಗೊಂದಲ ಉಂಟಾಯಿತು.
ಅದು ಕೆಲ ಸಮಯಕ್ಕಷ್ಟೇ. ಭೂಗತ ಲೋಕದ ರಕ್ಕಸ ಇರುವೆಗಳು ಪ್ರತಿ ಅಸ್ತ್ರವನ್ನು ಹೂಡಿದವು. ಕಾಲುವೆ ದಾಟಲು ಹಾತೊರೆಯುತ್ತಿದ್ದ ಇರುವೆಗಳು ತಕ್ಷಣ ಹಿಂದೆ ಸರಿಯತೊಡಗಿದವು. ಲೆನಿಂಜೆನ್ನನ ಕೆಲಸಗಾರರು ಗಾತ್ರದಲ್ಲಿ ಇರುವೆಗಳಿಗಿಂತ ದೊಡ್ಡವರಾಗಿದ್ದರೂ ಸಂಖ್ಯೆಯಲ್ಲಿ ನಗಣ್ಯರಾಗಿದ್ದರು. ಕಾಲುವೆಯ ಅಷ್ಟುದ್ದಕ್ಕೂ ರಕ್ಷಣೆಗಾಗಿ ಕೆಲಸಗಾರರನ್ನು ನಿಯೋಜಿಸುವಷ್ಟು ಸಂಖ್ಯಾಬಲ ಮತ್ತು ಶಸ್ತ್ರಾಸ್ತ್ರಗಳು ಲೆನಿಂಜೆನ್ನನಲ್ಲಿ ಇರುವುದು ಸಾಧ್ಯವಿರಲಿಲ್ಲ. ಇದು, ಈ ರಾಕ್ಷಸ ಇರುವೆಗಳಿಗೆ ಗೊತ್ತಾಗಿತ್ತು! ಕಾವಲಿದ್ದ ಕಡೆಯಿಂದ ಇರುವೆಗಳು ಕಾವಲಿಲ್ಲದ ಕಡೆಗೆ ಈಜಲಾರಂಭಿಸಿದವು. ಈ ಬದಿಯಲ್ಲಿದ್ದ ಕೆಲಸಗಾರರಿಗೆ ಇಡೀ ಕಾಲುವೆಯನ್ನು ರಕ್ಷಿಸುವುದು ಸಾಧ್ಯವೇ ಇರಲಿಲ್ಲ.
ಲೆನಿಂಜೆನ್ನನ ಆಳುಗಳು ಎರಚುತ್ತಿದ್ದ ಮಣ್ಣಿನೊಳಗೆ ಕೆಲವು ದೊಡ್ಡ ಹೆಂಟೆಗಳೂ ಇರುತ್ತಿದ್ದವು. ಈ ಹೆಂಟೆಗಳನ್ನೇ ತೆಪ್ಪದಂತೆ ಬಳಸಿ ಕೆಲವು ಇರುವೆಗಳು ಈ ದಡಕ್ಕೆ ಬರತೊಡಗಿ ಕಾಲುವೆ ಬದಿಯ ಗೋಡೆಯನ್ನು ಹತ್ತತೊಡಗುತ್ತಿದ್ದವು. ಅವುಗಳ ಮೇಲೆ ಮಣ್ಣೋ, ಮರಳೋ ಇಲ್ಲ ಪೆಟ್ರೋಲೋ ಸುರಿದು ಅವುಗಳನ್ನು ನಿಷ್ಕ್ರಿಯಗೊಳಿಸಿ ನೀರಿನಲ್ಲಿ ಮುಳುಗಿಸುತ್ತಿದ್ದರು. ಆದರೂ ಲೆನಿಂಜೆನ್ನನ ಆಳುಗಳ ಸಂಖ್ಯೆ ಇರುವೆಗಳ ಸಂಖ್ಯೆಗೆ ಸರಿಸಾಟಿಯಾಗುವುದು ಸಾಧ್ಯವೇ ಇರಲಿಲ್ಲ. ಅವರ ಸ್ಥಿತಿ ಚಿಂತಾಜನಕವಾಗತೊಡಗಿತು.
ಯಾರೋ ಒಬ್ಬ ಕೆಲಸಗಾರ ಕಾಲುವೆ ಹತ್ತಿ ಮೇಲೆ ಬರುತ್ತಿದ್ದ ಇರುವೆಗಳ ಮೇಲೆ ಗುದ್ದಲಿಯ ಪ್ರಹಾರ ಮಾಡತೊಡಗಿದ. ಗುದ್ದಲಿ ಹಿಂತೆಗೆಯಲ್ಲು ಅವನು ತುಸು ತಡಮಾಡಿದನಷ್ಟೇ.. ಗುದ್ದಲಿ ಮೇಲೇತ್ತುವಷ್ಟರಲ್ಲಿ ಅದರ ಹಿಡಿಯ ಮೇಲಿಂದ ರಾಶಿ ರಾಶಿ ಇರುವೆಗಳು ಮೇಲತ್ತಿದವು. ಅವನು ಗಾಬರಿಯಿಂದ ಕಿರುಚಿ ಗುದ್ದಲಿಯನ್ನು ಕಾಲುವೆಯೊಳಗೇ ಬಿಟ್ಟು ಬಿಟ್ಟ. ಆದರೆ ತಡವಾಗಿತ್ತು. ಇರುವೆಗಳು ಅವನ ಮೈ ಹತ್ತಿದ್ದವು. ತೆರೆದ ಜಾಗದಲ್ಲಿ ಅವನನ್ನು ಏಡಿಗಳಂತ ಕೊಂಡಿಗಳಿಂದ ಕಚ್ಚತೊಡಗಿದವು. ಉರಿ ತಾಳಲಾರದೆ ನಿಶ್ಚೇಷ್ಟಿತನಾಗುವ ಮೊದಲು ಅವನು ನೋವಿನಿಂದ ಭಯಾನಕವಾಗಿ ಕಿರುಚತೊಡಗಿ ಕುಣಿಯಲಾರಂಭಿಸಿದ.
ಈ ಘಟನೆಯಿಂದಾಗಿ ಲೆನಿಂಜೆನ್ ಬಹಳಷ್ಟು ವಿಚಲಿತನಾದ. ಈ ವಿದ್ಯಾಮಾನ ಮುಂದುವರೆದರೆ … ಅಥವಾ ಈ ಘಟನೆಯಿಂದಾಗಿ ಇತರ ಕೆಲಸದಾಳುಗಳ ಮಾನಸಿಕ ಸ್ಥಿಮಿತ ಭಿಗಡಾಯಿಸಿ ಅವನ ಯೋಜನೆಯೇ ತಿರುಗುಮುರುಗಾಗುವ ಸಂಭವವಿತ್ತು. ಹೀಗಾಗುವುದನ್ನು ಅವನು ತಡೆಯಲೇ ಬೇಕಿತ್ತು. ಅವನು ದೊಡ್ಡ ಗಂಟಲಿನಲ್ಲಿ ಅರಚಿದ: “ಹುಚ್ಚಪ್ಪಾ! ಮೊದಲು ನಿನ್ನ ಕೈಗಳನ್ನು ಪೆಟ್ರೋಲಿನಲ್ಲಿ ಅದ್ದು…ಬೇಗ!” ಅವನ ದನಿಯಲ್ಲಿ ಅಧಿಕಾರದ ದರ್ಪವಿತ್ತು. ಕೆಲಸಗಾರ ಕುಣಿದಾಡುವುದನ್ನು ನಿಲ್ಲಿಸಿ ತನ್ನ ಮೇಲಂಗಿಯನ್ನು ಕಿತ್ತು ಬಿಸಾಕಿ ಎರಡೂ ತೋಳುಗಳನ್ನು ಪೆಟ್ರೋಲಿನಲ್ಲಿ ಅದ್ದಿದ. ಆದರೂ ಕೆಲವು ಇರುವೆಗಳು ಹಟತೊಟ್ಟಂತೆ ಅವನ ತೋಳುಗಳಿಗೆ ಕಚ್ಚಿ ಹಿಡಿದಿದ್ದ ಪಟ್ಟನ್ನು ಬಿಡಲಿಲ್ಲ. ಅವುಗಳನ್ನು ಹೊಸೆದು ಹಾಕಲು ಮತ್ತೊಬ್ಬ ಕೆಲಸಗಾರ ಬರಬೇಕಾಯಿತು.
ಈ ಘಟನೆಯ ನಂತರ ಕಾಲುವೆಯ ಬದಿಯಲ್ಲಿ ಕೆಲಸ ಮಾಡುತ್ತಿದ್ದ ಆಳುಗಳು ಎಚ್ಚೆತ್ತುಕೊಡು ಹಿಂದೆ ಸರಿದರು. ಈ ಗೊಂದಲದಲ್ಲಿ ಲೆನಿಂಜೆನ್ನನ ಪ್ರತಿ ಆಕ್ರಮಣದ ಯೋಜನೆ ಕೆಲ ಸಮಯಕ್ಕೆ ಹಿಂದೆ ಸರಿಯಿತು ಈ ಕಾಲಾವಕಾಶವನ್ನು ಇರುವೆಗಳು ಸದುಪಯೋಗಿಸಿಕೊಂಡವು. ಆದರೂ, ಕಾಲುವೆಯು ಈವರೆಗೆ ಅವುಗಳಿಗೆ ಅಬೇಧ್ಯವಾಗಿತ್ತು. ಕೆಲಸಗಾರರು ಹೊಸ ಹುರುಪಿನಿಂದ ಮಣ್ಣು, ಮರಳು ಇರುವೆಗಳ ಮೇಲೆ ತೂರತೊಡಗಿದರು. ಇಷ್ಟರಲ್ಲಿ ವಯಸ್ಸಾದ ಒಬ್ಬ ಕೆಲಸಗಾರ ಇರುವೆ ಕಚ್ಚಿಸಿಕೊಂಡ ಕೆಲಸಗಾರನಿಗೆ ಕುಡಿಯಲು ವನಸ್ಪತಿ ಔಷದಿಯೊಂದನ್ನು ತಯಾರಿಸಿ ತಂದು ಕೊಟ್ಟ. ಅವನು ಇದನ್ನು ಮೊದಲೇ ತಯಾರಿಸಿ ಇಟ್ಟುಕೊಂಡಿದ್ದನು. ಇರುವೆಗಳ ನಂಜನ್ನು ತನ್ನ ಗಿಡಮೂಲಿಕೆಗಳ ಔಷದಿ ನಿಷ್ಕ್ರಿಯಗೊಳಿಸುತ್ತದೆಂದು ಅವನು ನಂಬಿದ್ದ.
ಲೆನಿಂಜೆನ್ ಒಮ್ಮೆ ತನ್ನ ಪರಿಸ್ಥಿತಿಯನ್ನು ಕೂಲಂಕುಶವಾಗಿ ಪರಿಶೀಲಿಸಿದ. ಯಾರಾದರೂ ಹೊರಗಡೆಯಿಂದ ಬಂದು ಸ್ವತಂತ್ರವಾಗಿ ಪರಿಶೀಲಿಸಿದ್ದರೆ ಲೆನಿಂಜೆನ್ನನಿಗೆ ಸಾವಿರಕ್ಕೆ ಒಂದು ಅಂಕವನ್ನೂ ಕೊಡುತ್ತಿರಲಿಲ್ಲವೇನೋ! ಆ ಧೈತ್ಯ ಕಪ್ಪು ಇರುವೆಗಳ ಸಾಗರವನ್ನು ನೋಡಿದರೆ ಹಾಗನ್ನಿಸುವುದು ಸಹಜವಾಗಿತ್ತು. ಆದರೆ ಮನುಷ್ಯನ ಮಿದುಳು ಅನುಪಮವಾದದ್ದು. ಅದರೊಳಗೆ ಏನೆಲ್ಲಾ ನಡೆಯುತ್ತಿರುತ್ತದೆ, ಅದರೊಳಗೆ ರೂಪುಗೊಳ್ಳುವ ಯೋಜನೆ ಪ್ರತಿಯೋಜನೆಗಳು ಹೊರಗಿನವರಾರಿಗೂ ಗೊತ್ತಾಗುವುದಿಲ್ಲ.
ಪ್ರಕೃತಿಯನ್ನು ಪ್ರಕೃತಿಯ ಅಸ್ತ್ರಗಳಿಂದಲೇ ಎದುರಿಸಬೇಕೆಂದು ನಂಬಿದ್ದ ಲೆನಿಂಜೆನ್ನನ ಆಲೋಚನೆಯಲ್ಲಿ ಯಾವುದೇ ಅತಿಶಯವಿರಲಿಲ್ಲ. ಕಾಲುವೆಯ ಮೇಲಿನ ಒಡ್ಡಿನಿಂದ ಹರಿಯುತ್ತಿದ್ದ ನೀರಿನ ಸೆಳವು ಹೆಚ್ಚಾಗಿದ್ದರಿಂದ, ಅದನ್ನು ಎದುರಿಸಿ ಕಾಲುವೆ ದಾಟುವುದು ಇರುವೆಗಳಿಗೆ ಅಸಾಧ್ಯವಾಗಿತ್ತು. ಅವುಗಳು ಏನೇ ಪ್ರಯಾಸಪಟ್ಟರೂ ನೀರಿನ ಸೆಳವು ಅವುಗಳ ಗುಂಪನ್ನು ಚಲ್ಲಾಪಿಲ್ಲಿಗೊಳಿಸಿ ನದಿಯ ಕಡೆಗೆ ಸೆಳೆದುಕೊಂಡು ಹೋಗುತ್ತಿತ್ತು.
ಸೋಲಿನ ದವಡೆಯಿಂದ ಲೆನಿಂಜೆನ್ ಗೆಲುವನ್ನು ತನ್ನೆಡೆಗೆ ಸೆಳೆಯಲು ಯಶಸ್ವಿಯಾಗಿದ್ದ. ಭೀತಿ, ಹತಾಶೆಯಿಂದ ಜರ್ಝರಿತರಾಗಿದ್ದ ಕೆಲಸಗಾರರು ಇರುವೆಗಳನ್ನು ಕಾಲುವೆಯ ನೀರು ನದಿಯ ಕಡೆಗೆ ಸೆಲೆದುಕೊಂಡು ಹೋಗುತ್ತಿರುವುದನ್ನು ನೋಡಿ ಸಂತೋಷ, ಉದ್ವೇಗದಿಂದ ಕೇಕೆ ಹಾಕತೊಡಗಿದರು. ಮೈಮೇಲೆ ದೆವ್ವ ಬಂದಂತೆ ರಪರಪನೆ ಮಣ್ಣು, ಮರಳು ಇರುವೆಗಳ ಮೇಲೆ ಎರಚತೊಡಗಿದರು. ಕಾಲುವೆಯ ಆಚೆ ಬದಿಯಲ್ಲಿದ್ದ ಇರುವೆಗಳ ಸಂಖ್ಯೆ ತೆಳ್ಳಗಾದಂತೆ ಕಾಣಬರತೊಡಗಿತು. ಇರುವೆಗಳು ಕಾಲುವೆ ದಾಟುವುದು ಅಸಾಧ್ಯವೆಂದು ಬಗೆದಿರಬೇಕು. ಅವು ಹಿಂದೆ ಸರಿಯತೊಡಗಿದವು. ನೀರಿನಲ್ಲಿ ಇಳಿದು ಆಕ್ರಮಣ ನಡೆಸುವ ಅವುಗಳ ಯೋಜನೆ ನಿರ್ಫಲವಾಗಿತ್ತು. ಸಹಸ್ರಾರು ಇರುವೆಗಳ ಬಲಿದಾನ ವ್ಯರ್ಥವಾಗಿತ್ತು. ಅಲ್ಲಲ್ಲಿ ಕಾಲುವೆ ದಾಟಿ ಬಂದಿದ್ದ ಇರುವೆಗಳನ್ನು ಕೆಲಸಗಾರರು ಹುಡುಕಿ ಹುಡುಕಿ ಹೊಸೆದುಹಾಕುತ್ತಿದ್ದರು.
ಪೂರ್ವ ದಿಕ್ಕಿನಲ್ಲಿ ಕಾಲುವೆಯು ತಿರುವು ಪಡೆದುಕೊಂಡಿತ್ತು. ದಿಕ್ಕಾಪಾಲಾಗಿ ಚದುರಿ ಹೋಗಿದ್ದ ಇರುವೆಗಳು ಆ ತಿರುವಿನಲ್ಲಿ ಜಮಾವಣೆಗೊಂಡಿದ್ದವು. ಸತತ ಮಣ್ಣು, ಮರಳಿನ ಎರಚುವಿಕೆ, ನೀರಿನ ಸೆಳೆತ, ಪೆಟ್ರೋಲಿನ ದಾಳಿಯಿಂದ ದೈಹಿಕವಾಗಿಯೂ, ಮಾನಸಿಕವಾಗಿಯೂ ಕಂಗಾಲಾಗಿ ಕಾಲುವೆ ದಾಟಲು ಅಶಕ್ತಗೊಂಡಿದ್ದ ಆ ಇರುವೆಗಳು ಮತ್ತೊಮ್ಮೆ ಅಲ್ಲಿಂದ ಪ್ರಯತ್ನಿಸುವುದು ಸಾಧ್ಯವಿರಲಿಲ್ಲ. ಹೆಚ್ಚು ಪ್ರತಿರೋದವಿಲ್ಲದೆ ಆ ಇರುವೆಗಳ ರಾಶಿ ನದಿಯ ಕಡೆಗೆ ತೇಲುತ್ತಾ ಹೋಯಿತು. ಈ ಸುದ್ಧಿ ಕಾಲುವೆಯ ಉದ್ದಕ್ಕೂ ನಿಂತಿದ್ದ ಕೆಲಸಗಾರರಿಗೆ ಮುಟ್ಟಿ ಅವರು ಸಂತೋಷದಿಂದ ಕೇಕೆ ಹಾಕುತ್ತಾ ಕಾಲುವೆಯ ತಿರುವಿನ ಸ್ಥಳಕ್ಕೆ ಓಡೋಡಿ ಬಂದರು.
ಸಾಮಾನ್ಯವಾಗಿ ಗಂಭೀರ ಸ್ವಭಾವದ ಆ ಸ್ಥಳೀಯ ಕೆಲಸಗಾರರು ತಮ್ಮ ಸ್ವಭಾವದ ವಿರುದ್ಧವಾಗಿ ಇರುವೆ ಸೈನ್ಯವನ್ನು ಸಂಹಾರ ಮಾಡಿದೆವೆಂಬ ಖುಶಿಯಿಂದ ತಮ್ಮ ಭಾವನೆಗಳನ್ನು ಹತ್ತಿಕ್ಕಲಾಗದೆ ಮುಲಾಜಿಲ್ಲದೆ ಪ್ರದರ್ಶಿಸತೊಡಗಿದರು. ಈ ರಾಕ್ಷಸ ಇರುವೆಗಳ ಬಗ್ಗೆ ಅವರು ಎಷ್ಟೊಂದು ಹೆದರಿದ್ದರೆಂಬುದನ್ನು ನೀವು ಪರಿಗಣಿಸಬಹುದು. ಆದರೆ, ಕಾಡಿನ ಮರೆಯಲ್ಲಿ ಬೀಡುಬಿಟ್ಟಿದ್ದ ಲಕ್ಷೋಪಲಕ್ಷ ಇರುವೆಗಳು ಹಸಿದ ಕಂಗಳಿಂದ ಇವರನ್ನೇ ಬಿಟ್ಟ ಕಂಗಳಿಂದ ಗಮನಿಸುತ್ತಿರುವುದು ಅವರ ಕಣ್ಣಿಗೆ ಬೀಳಲಿಲ್ಲ! ಆ ಕಪ್ಪು ರಾಕ್ಷಸ ಇರುವೆಗಳು ಸೂಕ್ತ ಸಮಯಕ್ಕಾಗಿ ಕಾಯುತ್ತಿದ್ದವು ಅಷ್ಟೇ…!
ಸೂರ್ಯ ನಿಧಾನವಾಗಿ ಪಶ್ಚಿಮ ದಿಂಗಂತದಲ್ಲಿ ಮುಳುಗತೊಡಗಿದ. ಸಂಜೆಯ ಬೆಳಕು ನಿಧಾನವಾಗಿ ಕರಗಿ ಕತ್ತಲು ಮೂಡತೊಡಗಿತು. ಇರುವೆಗಳು ಮತ್ತೆ ಆಕ್ರಮಣ ನಡೆಸುವುದು ಖಂಡಿತವಾದರೂ ಅದು ಬೆಳಗಿನ ಜಾವ ನಾಲಕ್ಕರ ನಂತರವೆಂದೇ ಲೆನಿಂಜೆನ್ ಅಂದಾಜಿಸಿದ. ಇರುವೆಗಳು ಮತ್ತೆ ಕಾಲುವೆಯನ್ನು ದಾಟಿ ಆಕ್ರಮಿಸಲು ಪ್ರಯತ್ನ ಪಡಬಹುದೆಂದು ಲೆನಿಂಜೆನ್ ಒಡ್ಡಿನ ಗೇಟನ್ನು ಮತ್ತಷ್ಟು ತೆರೆದು ಇನ್ನಷ್ಟು ನೀರನ್ನು ಕಾಲುವೆಯಲ್ಲಿ ಹರಿಸಿದ.
ಇದಲ್ಲದೆಯೂ ಇರುವೆಗಳು ಬೇರೆ ರೀತಿಯಲ್ಲಿ ಆಕ್ರಮಣ ನಡೆಸಬಹುದೆಂದು ಅವನಿಗೆ ಖಾತ್ರಿಯಾಗತೊಡಗಿತ್ತು. ಅವನು ಕೆಲವು ಕೆಲಸಗಾರರನ್ನು ಕಾಲುವೆಯ ಮೇಲೆ ರಾತ್ರಿ ಗಸ್ತು ತಿರುಗಲು ನೇಮಿಸಿದ. ಅಷ್ಟೇ ಅಲ್ಲದೆ ಕಾಲುವೆಯ ಮೇಲೆ ಬೆಳಕನ್ನು ಹಚ್ಚಲು ಎರಡು ಜೀಪುಗಳನ್ನು ಹಚ್ಚಿದ.
ಎಲ್ಲಾ ಸುರಕ್ಷತಾ ಕ್ರಮಗಳನ್ನು ಕೈಗೊಂಡು ಲೆನಿಂಜೆನ್ ವಿಶ್ರಮಿಸಲು ತೆರಳಿದ. ಅವನು ದೈಹಿಕವಾಗಿಯೂ, ಮಾನಸಿಕವಾಗಿಯೂ ತುಂಬಾ ದಣಿದಿದ್ದ. ಆದರೂ ಅವನಿಗೆ ನಿದ್ದೆ ಹತ್ತಲಿಲ್ಲ. ಅವನ ಕಣ್ಣಮುಂದಿನಿಂದ ಆ ಕ್ರೂರ ಕಪ್ಪು ಇರುವೆಗಳ ಅಗಾಧ ರಾಶಿಯನ್ನು ಮರೆಮಾಚಲು ಸಾಧ್ಯವಾಗಲೇ ಇಲ್ಲ.
ಬೆಳಗಿನ ಜಾವಕ್ಕೆ ಎದ್ದ ಲೆನಿಂಜೆನ್ ಹೊಸ ಹುರುಪಿನಿಂದ ಕಾಲುವೆಯ ಮೇಲೆ ಅಡ್ಡಾಡಿದ. ಇರುವೆಗಳು ಹಿಂದಿನ ದಿನದ ಹಾಗೆಯೇ ಮರಗಳ ಮರೆಯಲ್ಲಿ ನಿಂತು ತಮ್ಮ ಕ್ರೂರ ಕಣ್ಣುಗಳಿಂದ ಕಾಲುವೆಯನ್ನೇ ದಿಟ್ಟಿಸುತ್ತಿದ್ದವು. ಕಾಲುವೆ ದಾಟಿದರೆ ಲೆನಿಂಜೆನ್ನನ ವಿಶಾಲವಾದ ತೋಟ ಹರಡಿತ್ತು. ಇರುವೆ ಮತ್ತು ತನ್ನ ಮಧ್ಯದ ಸಂಘರ್ಶ ಇಷ್ಟು ಬೇಗ ಕೊನೆಗೊಂಡಿದ್ದು ನೋಡಿ ಅವನಿಗೆ ಕೊಂಚ ನಿರಾಶೆ ಆಗಿದ್ದು ಸಹಜವೇ ಆಗಿತ್ತು. ಕತ್ತಲೆಗಿಂತ ಹಗಲು ಮನುಷ್ಯ ಜೀವಿಗಳಿಗೆ ಹರುಷ ತರುತ್ತದೆ. ಅವನ ಎಣಿಕೆಯಂತೆ ಇರುವೆಗಳಿಗೆ ಕಾಲುವೆ ದಾಟಿ ಒಳ ಬರುವುದು ಸಾಧ್ಯವೇ ಇರಲಿಲ್ಲ. ಅವು ಯಾವ ಬದಿಯಿಂದ ನೀರಿಗಿಳಿದರೂ ನೀರಿನ ರಭಸಕ್ಕೆ ಕೊಚ್ಚಿಕೊಂಡು ಹೋಗಿ ಜಲಸಮಾಧಿಯಾಗುವುದಂತೂ ನಿಶ್ಚಿತವಾಗಿತ್ತು. ಆದರೂ ಇರುವೆಗಳು ಇಷ್ಟು ಬೇಗ ಸೋಲೊಪ್ಪಿಕೊಂಡು ಹಿಂದೆ ಸರಿದಿದ್ದು ಅವನಿಗೆ ನಿರಾಶೆಯನ್ನುಂಟುಮಾಡಿತ್ತು.
ಲೆನಿಂಜೆನ್ ಕಾಲುವೆಯ ಪೂರ್ವ ಮತ್ತು ದಕ್ಷಿಣ ಒಳದಂಡೆಯ ಮೇಲೆ ನಡೆಯುತ್ತಾ ಸುತ್ತಲೂ ಸೂಕ್ಷ್ಮವಾಗಿ ಗಮನಿಸಿದ. ಅವನಿಗೆ ವಿಶೇಷವಾದುದು ಏನೂ ಕಾಣಿಸಲಿಲ್ಲ. ಹಾಗೇ ನಡೆಯುತ್ತಾ ಅವನು ಹುಣಸೆ ತೋಪಿರುವ ಪಶ್ಚಿಮದ ಕಡೆಗೆ ಹೋದ. ಇರುವೆಗಳು ಅಲ್ಲಿ ಹೆಚ್ಚು ಕ್ರಿಯಾಶೀಲವಾಗಿರುವುದು ಕಂಡಿತು. ಇಲ್ಲಿಯ ಎಲ್ಲಾ ಹುಣಸೆ ಮತ್ತು ಇತರ ಮರಗಳ ಮೇಲೆ ಇರುವೆಗಳು ತುಂಬಿ ಹೋಗಿದ್ದು ಮರಗಳಲ್ಲಿ ಎಲೆಗಳೇ ಕಾಣಿಸುತ್ತಿರಲಿಲ್ಲ. ವಿಚಿತ್ರವೆಂದರೆ ಇರುವೆಗಳು ಮರಗಳ ಎಲ್ಲಾ ಎಲೆ, ಚಿಗುರುಗಾನ್ನು ಕತ್ತರಿಸಿ ಕತ್ತರಿಸಿ ಕೆಳಗೆ ಹಾಕುತ್ತಿದ್ದವು. ಮರಗಳ ಬುಡದಲ್ಲಿ ಎಲೆಗಳ ಅಗಾಧ ರಾಶಿಯೇ ಬಿದ್ದಿತ್ತು!
ಬಹುಶಃ ಇವು ಹಿಂದೆ ನಿಂತು ಆಕ್ರಮಣಕ್ಕೆ ಸಿದ್ಧರಾಗಿ ನಿಂತಿರುವ ಇರುವೆಗಳಿಗೆ ಆಹಾರ ಸರಬರಾಜು ಮಾಡುವ ಕೆಲಸಗಾರ ಇರುವೆಗಳಿರಬೇಕೆಂದು ಲೆನಿಂಜೆನ್ ಎಣಿಸಿದ. ಇರುವೆಗಳ ಗುಂಪಿನಲ್ಲೂ ಜೀತದವು, ಕೆಲಸದವು, ಕಾವಲು ಮತ್ತು ಹೋರಾಟ ಮಾಡುವ ಇರುವೆಗಳು ಇರುವುದು ಲೆನಿಂಜೆನ್ ಓದಿದ್ದ. ಇರುವೆಗಳು ಪರಿಸ್ಥಿತಿಗನುಗುಣವಾಗಿ ಹೊಂದಿಕೊಂಡು ಹೋಗುವ ಚಾಣಾಕ್ಷ ಜೀವಿಗಳೆಂದು ಲೆನಿಂಜೆನ್ ಅರಿತಿದ್ದ. ಅವುಗಳ ಸಂಘಟನಾ ಚಾತುರ್ಯ, ಶಿಸ್ತು ಮೆಚ್ಚಲೇ ಬೇಕಿತ್ತು.
ಮರಗಳ ಕೆಳಗೆ ರಾಶಿ ಬಿದ್ದಿದ್ದ ಹಸಿರು ಎಲೆಗಳಿಗೆ ಜೀವ ತುಂಬಿದಂತೆ ಕಂಡಾಗ ಲೆನಿಂಜೆನ್ ಆಶ್ಚರ್ಯಚಕಿತನಾದ. ರಾಶಿ ಬಿದ್ದಿದ್ದ ಎಲೆಗಳನ್ನು ಮತ್ತೊಂದು ಇರುವೆಗಳ ಗುಂಪು ಕಾಲುವೆಯ ಕಡೆಗೆ ಹೊತ್ತುಕೊಂಡು ಹೋಗತೊಡಗಿತು. ಲೆನಿಂಜೆನ್ ವಿಸ್ಮಯಗೊಂಡನಾದರೂ ವಿಚಲಿತನಾಗಲಿಲ್ಲ. ಇರುವೆಗಳು ಅಷ್ಟು ಬೇಗ ಸೋಲೊಪ್ಪಿಕೊಳ್ಳಲು ತಯಾರಿರಲಿಲ್ಲವೆಂದು ಅವನಿಗೆ ಹೊಳೆಯಿತು. ನಿನ್ನೆಗಿಂತ ಇಂದಿನ ದಿನವೇ ತನ್ನ ಪರೀಕ್ಷಾದಿನವೆಂದು ಅವನಿಗೆ ಅರಿವಾಗತೊಡಗಿತು
ಇರುವೆಗಳಿಗೆ ಸ್ವಯಂ ತೆಪ್ಪ ಕಟ್ಟಿ ಕಾಲುವೆ ದಾಟಲು ಸಾಧ್ಯವಿಲ್ಲವೆಂದು ಅವನು ಎಣಿಸಿದ್ದ. ಈಗ ಅವನ ಕಣ್ಣೆದುರಿಗೇ ಇರುವೆಗಳು ತೆಪ್ಪವಷ್ಟೇ ಅಲ್ಲದೆ ಸೇತುವೆ ಕಟ್ಟುವ ತಯಾರಿ ನಡೆಸಿದ್ದವು! ಅವನು ನೋಡನೋಡುತ್ತಿದ್ದಂತೆಯೇ ಎಲೆಗಳ ರಾಶಿ ಕಾಲುವೆಗೆ ಬೀಳತೊಡಗಿತು! ಒಂದೊಂದು ಎಲೆಯ ಮೇಲೆ ಒಂದೊಂದು ಇರುವೆ ಹತ್ತಿ ಕುಳಿತಿತ್ತು. ಈ ಭಾರಿ ಲೆನಿಂಜೆನ್ ತನ್ನ ಕೆಲಸಗಾರರಿಗೆ ಕಾಯುತ್ತಾ ಕೂರಲಿಲ್ಲ. ಕುದುರೆಯನ್ನು ಹಿಂದಕ್ಕೆ ದೌಡಾಯಿಸುತ್ತಾ, ಕೆಲಸಗಾರರಿಗೆ, “ಬೇಗ ಬೇಗ ಪೆಟ್ರೊಲ್ ಕ್ಯಾನುಗಳನ್ನು ಹೊತ್ತುಕೊಂಡು ಹುಣಸೆ ತೋಪಿನ ಕಾಲುವೆಯ ಕಡೆಗೆ ನಡೆಯಿರಿ…ಜೊತೆಗೆ ಗುದ್ದಲಿಗಳೂ ಇರಲಿ.” ಎಂದು ಅವಸರಿಸುತ್ತಾ ಕಳುಹಿಸಿದ. ಕಾಲುವೆಯ ಆರಂಭದವರೆಗೂ ಹೋಗಿ, ಕಾವಲುಗಾರರನ್ನು ಬಿಟ್ಟು ಉಳಿದವರೆಲ್ಲರನ್ನೂ ಹುಣಸೆತೋಪಿನ ಕಾಲುವೆಯ ಕಡೆಗೆ ಅಟ್ಟಿದ.
ಇರುವೆಗಳು ಹಿಂದಿನ ದಿನ ಕಾಲುವೆ ದಾಟಲು ವೃಥಾ ಪ್ರಯತ್ನ ನಡೆಸಿದ್ದ ಜಾಗಕ್ಕೆ ಅವನು ಬಂದಾಗ ಕುತೂಹಲದಿಂದ ಅಲ್ಲೇ ನಿಂತುಕೊಂಡ. ಕಾಲುವೆಯ ಕಡೆಗೆ ಗುಡ್ಡದ ಕಡೆಯಿಂದ ಓಡಿ ಬರುತ್ತಿದ್ದ ಪ್ರಾಣಿಯೊಂದು ಅವನಿಗೆ ತೆವಳಿಕೊಂಡು ಬರುತ್ತಿರುವಂತೆ ಭಾಸವಾಯಿತು. ಅದು ಕರ್ರಗೆ ವಿಕಾರವಾಗಿ ಕಾಣಿಸುತ್ತಿತ್ತು. ಒಂದಕ್ಕೊಂದು ಅಡರುತ್ತಿದ್ದ ಅದರ ನಾಲ್ಕು ಕಾಲುಗಳು ಅದರುತ್ತಿದ್ದವು. ಅದು ಹೇಗೋ ಲೆನಿಂಜೆನ್ ನಿಂತಿದ್ದ ಕಾಲುವೆಯ ಬದಿಗೆ ಬಂದು ಬಿದ್ದಿತು. ನೋವಿನಿಂದ ಸಂಕಟಪಡುತ್ತಿದ್ದ ಆ ಪ್ರಾಣಿಯನ್ನು ಲೆನಿಂಜೆನ್ ಎವೆಯಿಕ್ಕದೆ ನೋಡಿದ. ಅದೊಂದು ಜಿಂಕೆಯಾಗಿತ್ತು. ಅದರ ಮೈಮೇಲೆ ಎಳ್ಳಷ್ಟೂ ಜಾಗ ಬಿಡದೆ ರಾಕ್ಷಸ ಕಪ್ಪು ಇರುವೆಗಳು ಮುತ್ತಿಕೊಂಡಿದ್ದವು.
– ಜೆ.ವಿ. ಕಾರ್ಲೊ
[…] ಇಲ್ಲಿಯವರೆಗೆ […]