ಆಕ್ರಮಣ (ಭಾಗ ೩): ಜೆ.ವಿ. ಕಾರ್ಲೊ

ಇಲ್ಲಿಯವರೆಗೆ

ಜಿಂಕೆಯ ಗ್ರಾಚ್ಚಾರ ಕೆಟ್ಟು ರಾಕ್ಷಸ ಇರುವೆಗಳ ಆಕ್ರಮಣಕ್ಕೆ ತುತ್ತಾಗಿತ್ತು. ಮೊಟ್ಟ ಮೊದಲಿಗೆ ಕಣ್ಣುಗಳ ಮೇಲೆ ಆಕ್ರಮಣ ನಡೆಸುವುದೇ ಈ ಇರುವೆಗಳ ವಿಶಿಷ್ಠತೆಯಾಗಿತ್ತು. ಬೇಟೆಯನ್ನು ಕುರುಡಾಗಿಸಿ ಅಸಹಾಯಕ ಸ್ಥಿತಿಗೆ ದೂಡುವುದೇ ಇರುವೆಗಳ ಕಾರ್ಯಾಚರಣೆಯ ಗುಟ್ಟಾಗಿತ್ತು.

ತನ್ನ ಹೆಗಲಿನ ಮೇಲಿದ್ದ ಕೋವಿಯಿಂದ ಲೆನಿಂಜೆನ್ ಆ ಪ್ರಾಣಿಯನ್ನು ನೋವಿನಿಂದ ಮುಕ್ತಗೊಳಿಸಿ ತನ್ನ ಜೇಬುಗಡಿಯಾರವನ್ನು ಹೊರತೆಗೆದು ಸಮಯವನ್ನು ನೋಡಿ೮ದ. ನೋಡಲು ಕಿರಿಕಿರಿ ಅನಿ೯ಸಿದರೂ ಅವನೂ ಮುಂದಿದ್ದ ದೃಶ್ಯವನ್ನು ನೋಡಿದ.. ಆರು ನಿಮಿಷ. ಕೇವಲ ಆರು ನಿಮಿಷಗಳು. ಜಿಂಕೆಯ ಅಸ್ಥಿಪಂಜರ ಅವನ ಎದುರಿಗೆ ಹೊಳಪುಕೊಟ್ಟಂತೆ ಬೆಳಗಿನ ಬಿಸಿಲಿಗೆ ಮಿರುಗುತ್ತಿತ್ತು. ಗಂಟಲಲ್ಲಿ ಏನೋ ಸಿಕ್ಕಿಕೊಂಡಂತೆ ಲೆನಿಂಜೆನನಿಗೆ ವಾಕರಿಕೆ ಬಂದಿತು. ಆದರೆ ಏನೂ ಹೊರಬರಲಿಲ್ಲ! ಅವನು ಕುದುರೆಯನ್ನು ತಿವಿದು ಮುಂದಕ್ಕೆ ಸಾಗಿದ.

ಇರುವೆಗಳೊಂದಿಗಿನ ಸಂಘರ್ಶ ತನ್ನ ಕೈಯಿಮದ ಜಾರಿ ಹೋಗುತ್ತಿದೆಯೇನೋ ಎಂಬ ಅನುಮಾನ ಅವನನ್ನು ಕಾಡಲಾರಂಭಿಸಿತು.. ಅವನು ಯೋಜಿಸದ ಕ್ರೌರ್ಯ, ಹಿಂಸೆ ಈ ಆಟದ ಪ್ರಮುಖ ಆಕರ್ಷಣೆಯಾಗಿರಲಾರದು ತಾನೆ? ಅವನು ತನ್ನನ್ನೇ ಪ್ರಶ್ನಿಸಿಕೊಂಡು ವಿಸ್ಮಯಗೊಂಡ. ಹಿಂಸೆ? ಕ್ರೌರ್ಯ? ಅದಕ್ಕೆ ಅವನೇನೂ ಹೊರತಾಗಿರಲಿಲ್ಲ. ಭೂಗರ್ಭದಿಂದ ಎದ್ದು ಬಂದಿರುವ ಈ ರಾಕ್ಷಸೀ ಇರುವೆಗಳಿಗೆ ಅಲ್ಲಿಗೇ ತಲುಪಿಸುತ್ತೇನೆಂದು ಅವನು ಅವಡುಗಚ್ಚಿದ. ಆದರೆ.. ಹೇಗೆ? ಈಗಿನ ಪರಿಸ್ಥಿತಿಯನ್ನು ಅವಲೋಕಿಸಿದರೆ, ಇರುವೆಗಳು ಅವನು ಮತ್ತು ಅವನ ಜೋಕರುಗಳನ್ನು ಭೂಗರ್ಭದೊಳಗೆ ಸಮಾಧಿ ಮಾಡುವ ಸಂಭವ ಅಧಿಕವಾಗಿತ್ತು.

ಅವನು ಅಂದಾಜಿಸಿದಂತೆ ಪಶ್ಚಿಮದಿಂದ ದಕ್ಷಿಣಕ್ಕೆ ತಿರುಗುವತ್ತ ಕಾಲುವೆಯ ರಚನೆಯು ಸುರಕ್ಷತೆಯ ದೃಷ್ಟಿಯಿಂದ ದುರ್ಬಲವಾಗಿತ್ತು. ಅವನು ಅಲ್ಲಿ ತಲುಪಿದಾಗ ಅವನ ಊಹೆ ಸರಿಯಾಗಿತ್ತು. ಆ ತಿರುವಿನಲ್ಲಿ ನೀರಿನ ವೇಗ ಸಹಜವಾಗಿ ಕುಂಠಿತವಾಗಿ ಎಲೆಯ ಮೇಲಿಂದ ನೀರಿಗಳಿದ ಇರುವೆಗಳು ಸೆಳೆತಕ್ಕೆ ಸಿಕ್ಕಿ ಕೊಚ್ಚಿಕೊಂಡು ಬಂದು ಆ ಕಿರಿದಾದ ತಿರುವಿನಲ್ಲಿ ಶೇಖರಣೆಗೊಂಡಿದ್ದವು. ಸ್ವಲ್ಪ ಹೊತ್ತಿನಲ್ಲೇ ಅಲ್ಲೊಂದು ಸೇತುವೆ ನಿರ್ಮಾಣವಾಗುವುದರಲ್ಲಿ ಯವುದೇ ಸಂಶಯಗಳಿರಲಿಲ್ಲ. ನಿರಂತರವಾಗಿ ಪೆಟ್ರೋಲ್ ಸಿಂಪರಣೆ, ಮಣ್ಣು ಮತ್ತು ಮರಳು ಬೀರುವಿಕೆಯಿಂದಾಗಿ ಇರುವೆಗಳಿಗೆ ಕಾಲುವೆ ದಾಟುವುದು ದುಸ್ತರವಾಗಿತ್ತು. ಆದರೂ ಕೊಚ್ಚಿಕೊಂಡು ಬರುತ್ತಿದ್ದ ಎಲೆಗಳ ಸಂಖ್ಯೆ ಏರುತ್ತಲೇ ಇತ್ತು. ಇನ್ನು ತುಸು ಹೊತ್ತಿನಲ್ಲಿ ಕಾಲುವೆಯು ಹಸಿರೆಲೆಗಳಿಂದ ತುಂಬಿ ಹೋಗುವುದರಲ್ಲಿ ಯಾವುದೇ ಸಂಶಯಗಳಿರಲಿಲ್ಲ.

ಲೆನಿಂಜೆನ್ ಕುದುರೆಯನ್ನು ಒಡ್ಡಿನ ಕಡೆಗೆ ಓಡಿಸಿದ. ಕಾಲುವೆಯಲ್ಲಿ ನೀರಿನ ಹರಿಯುವಿಕೆಯ ಗೇಟನ್ನು ಮೇಲೆ ಕೆಳಗೆ ಇಳಿಸಲು ಒಂದು ಸ್ಟಿಯರಿಂಗ್ ವ್ಹೀಲಿನ ಥರ ಲೋಹದ ಚಕ್ರವಿತ್ತು. ಅದನ್ನು ನಿಯಂತ್ರಿಸಲು ಲೆನಿಂಜೆನ್ ಒಬ್ಬ ಕೆಲಸಗಾರನನ್ನು ನೇಮಿಸಿದ್ದ. ಲೆನಿಂಜೆನ್ ಅವನಿಗೆ ತಕ್ಷಣ ಒಡ್ಡಿನ ಗೇಟನ್ನು ಇಳಿಸುವಂತೆ ಸೂಚಿಸಿದ. ಒಮ್ಮೆಲೇ ಕಾಲುವೆಗೆ ಹರಿಯುವ ನೀರು ತಗ್ಗಿ ಕ್ರಮೇಣ ಹರಿವು ಕಡಿಮೆಯಾಯಿತು. ಇದರ ಬೆನ್ನ ಹಿಂದೆಯೇ ಗೇಟನ್ನು ಮೇಲಕ್ಕೆ ಎತ್ತಿ ನೀರನ್ನು ಒಮ್ಮೆಲೇ ಹೆಚ್ಚಿಸಲು ಲೆನಿಂಜೆನ್ ಆದೇಶಿಸಿದ. ಹೀಗೆಯೇ ಇಳಿಸುವುದು, ಎತ್ತರಿಸುವುದು ನಡೆಯಿತು.

ಶುರುವಿನಲ್ಲಿ ಲೆನಿಂಜೆನ್ನನಿಗೆ ಈ ಉಪಾಯದಲ್ಲಿ ಯಶಸ್ಸು ಸಿಕ್ಕಿತು. ಕಾಲುವೆಯಲ್ಲಿ ನೀರು ಇಳಿದಂತೆ ಎಲೆಗಳ ಮೇಲೆ ಸವಾರಿ ಮಾಡುತ್ತಿದ್ದ ಇರುವೆಗಳು ಕಾಲುವೆಯ ತಳಕ್ಕೆ ಇಳಿಯುತ್ತಿದ್ದವು. ಅದರ ಬೆನ್ನ ಹಿಂದೆಯೇ ರಭಸದಿಂದ ಏರಿ ಬರುತ್ತಿದ್ದ ನೀರಿಗೆ ಕೊಚ್ಚಿಕೊಂಡು ಹೋಗಿ ನದಿಗೆ ಸೇರುತ್ತಿದ್ದವು.

ನೀರಿನ ಏರಿಳಿಕೆಯ ಮಧ್ಯಂತರದಲ್ಲಿ ಮೇಲೆ ಹತ್ತಿದ್ದ ಇರುವೆಗಳಿಂದ ಕೆಲಸಗಾರರು ಕಂಗಾಲಾಗಿದ್ದರು. ಅವರ ಕೂಗು, ಬೈಗುಳಗಳಿಂದ ವಾತಾವರಣ ಬಿಸಿ ಏರಿತು. ಮೈಮೇಲೆ ಹತ್ತಿದ್ದ ಇರುವೆಗಳನ್ನು ಹೊಸಕಿ ಹಾಕಲು ಅವರು ತಮ್ಮ ಬಟ್ಟೆಗಳನ್ನು ಕಳಚತೊಡಗಿದರು. ಇರುವೆಗಳನ್ನು ಹಿಚುಕಿ ಕೊಲ್ಲಲು ವಿಶೇಷ ಬಲಪ್ರಯೋಗದ ಅಗತ್ಯವಿಲ್ಲದಿದ್ದರೂ ಅವರ ಕೃತ್ಯದಲ್ಲಿ ರೋಷ ಎದ್ದು ಕಾಣುತ್ತಿತ್ತು. ಗುಂಪಿನಿಂದ ಹೊರ ಬಂದಿದ್ದ ಇರುವೆಗಳನ್ನು ಕೊಲ್ಲಲು ಅವರಿಗೆ ಕಷ್ಟವೆನಿಸಲಿಲ್ಲ. ಕಾಲುವೆಯಲ್ಲಿ ನೀರು ಏರಿಳಿಯುತ್ತಿತ್ತು. ಬಹಳಷ್ಟು ಇರುವೆಗಳು ನದಿಯ ಕಡೆಗೆ ಕೊಚ್ಚಿಕೊಂಡು ಹೋಗುತ್ತಿದ್ದವು. ಅಷ್ಟರಲ್ಲಿ ಕಾಲುವೆಯಲ್ಲಿ ತಳಕ್ಕೆ ಇಳಿದಿದ್ದ ನೀರು ಮತ್ತೆ ಮೇಲೆ ಏರಲೇ ಇಲ್ಲ. ಕೆಲಸಗಾರರು ಹೌಹಾರಿ ಆತಂಕಗೊಂಡರು. ಏನೋ ಎಡವಟ್ಟಾಗಿದೆ ಎಂದು ಅವರಿಗೆ ಗೊತ್ತಾಯಿತು. ಅವರೂ ದಣಿದಿದ್ದರು. ಅಷ್ಟರಲ್ಲಿ ಒಡ್ಡಿನ ಕಡೆಯಿಂದ ಓಡಿಬಂದ ಕೆಲಸಗಾರ ಏದುಸಿರು ಬಿಡುತ್ತಾ ಬಡಬಡಿಸತೊಡಗಿದ:

“ಅವು ಒಳಗೆ ಬಂದಿವೆ!!”
ಲೆನಿಂಜೆನ್ನನ ಕೆಲಸಗಾರರು ತಮ್ಮ ಮುಂದಿರುವ ಇರುವೆಗಳನ್ನು ಗಮನಿಸುವತ್ತ ನಿರತರಾಗಿದ್ದು ಅವರಿಗೆ ದಕ್ಷಿಣ ದಿಕ್ಕಿನತ್ತ ಗಮನ ಹರಿಸಲು ಪುರುಸೊತ್ತೇ ಇರಲಿಲ್ಲ.
ಯಾವಾಗ ಲೆನಿಂಜೆನ್ನಾನ ಕೆಲಸಗಾರ ಕಾಲುವೆಯಲ್ಲಿ ಹರಿಯುತ್ತಿರುವ ನೀರನ್ನು ನಿಲ್ಲಿಸಿದನೋ, ಈ ಸಂದರ್ಭಕ್ಕಾಗಿ ಕಾಯುತ್ತಿದ್ದ ಇರುವೆಗಳು ಒಮ್ಮೆಲೇ ಕಾಲುವೆ ದಾಟಿ ಆಚೆ ಬದಿಯ ಕಾಲುವೆ ದಂಡೆಯನ್ನು ಹತ್ತತೊಡಗಿದವು. ಒಡ್ಡಿನ ಗೇಟು ಕೆಳಗೆ ಇಳಿಸಿ ಮೇಲೆ ಎತ್ತುವವನಿಗೆ ಅದೊಂದು ಯಾಂತ್ರಿಕ ಕ್ರಿಯೆಯಾಗಿತ್ತು. ಅವನ ರಟ್ಟೆಗಳಷ್ಟೇ ಆ ಕ್ರಿಯೆಯಲ್ಲಿ ಭಾಗಿಯಾಗಿದ್ದವು. ಅವನ ಗ್ಯಾನ ಆ ಕೆಲಸದಲ್ಲಿರಲಿಲ್ಲ. ಅವನ ಕಣ್ಣುಗಳು ಗೇಟನ್ನು ಏರಿಳಿಸುವ ಕ್ರಿಯೆಯಲ್ಲಷ್ಟೇ ನೆಟ್ಟಿತ್ತು. ಕಾಲುವೆಯ ಕೊನೆಯಲ್ಲಿ ಏನು ಘಟಿಸುತ್ತಿದೆ ಎಂದು ಗೊತ್ತಾಗುವಷ್ಟರಲ್ಲಿ ವೇಳೆ ಮಿಂಚಿತ್ತು. ಇರುವೆಗಳ ನೆರೆಯೇ ಮೇಲೆ ಹತ್ತಿತ್ತು! ಅವನು ಒಡ್ಡಿನ ಗೇಟು ಎತ್ತುವಷ್ಟರಲ್ಲಿ ಇರುವೆಗಳು ಅವನನ್ನು ಸುತ್ತುವರೆದಿದ್ದವು. ಅವನು ತನ್ನ ಕೆಲಸವನ್ನು ಅಲ್ಲಿಯೇ ಬಿಟ್ಟು ಜೋರಾಗಿ ಚೀರಾಡುತ್ತಾ ಗಾಬರಿಗೊಂಡು ಅಲ್ಲಿಂದ ಓಡತೊಡಗಿದ.

ಪರಿಸ್ಥಿತಿಯನ್ನು ಅಂದಾಜಿಸಿದ ಲೆನಿಂಜೆನ್ ತನ್ನ ಎಸ್ಟೇಟಿನ ಕತೆ ಮುಗಿಯಿತೆಂದೇ ಭಾವಿಸಿದ. ಆದರೂ ಹತಾಶನಾಗದೆ ಅವನು ತಲೆ ಮೇಲೆ ಕೈ ಹೊತ್ತು ಸುಮ್ಮನೆ ಕೂರಲಿಲ್ಲ. ಈವರೆಗೆ ತನ್ನ ಬುದ್ಧಿವಂತಿಕೆಯಿಂದ ಇರುವೆಗಳನ್ನು ತಡೆಯಲು ಮಾಡಬೇಕಾದ ಕೆಲಸಗಳನ್ನೆಲ್ಲಾ ಅವನು ಮುಗಿಸಿದ್ದ. ತಲೆ ಗಟ್ಟಿ ಇದೆ ಎಂದು ಬಂಡೆಗೆ ಗುದ್ದುವವನು ನಿಜವಾಗಿಯೂ ಮೂರ್ಖ! ಗಾಳಿಯಲ್ಲಿ ಮೂರು ಭಾರಿ ಗುಂಡು ಹಾರಿಸಿ ಲೆನಿಂಜೆನ್ ತನ್ನ ಕೆಲಸಗಾರರ ಗಮನವನ್ನು ತನ್ನೆಡೆಗೆ ಸೆಳೆದು, ಎಲ್ಲರನ್ನೂ ಕಾಲುವೆಯ ಒಳ ಭಾಗದಲ್ಲಿ ನಿರ್ಮಿಸಿದ್ದ ಕಾಲುವೆಯ ಸುರಕ್ಷತೆಗೆ ಬರಲು ಆದೇಶಿಸಿ ತನ್ನ ಬಂಗಲೆಗೆ ಹೋದ.

ಅಲ್ಲಿಂದ ಬಂಗಲೆಗೆ ಎರಡು ಮೈಲು ದೂರವಿತ್ತು. ರಾಕ್ಷಸ ಇರುವೆಗಳ ವಿರುದ್ಧ ಹೋರಾಡಲು ಮತ್ತು ಯೋಚಿಸಲು ಇನ್ನೂ ಸಮಯಾವಕಾಶವಿತ್ತು. ಬಂಗಲೆಯ ಹತ್ತಿರ ಪೆಟ್ರೋಲಿನ ಮೂರು ಬೃಹತ್ ಟ್ಯಾಂಕುಗಳಿದ್ದವು. ಒಂದು ಟ್ಯಾಂಕಿನ ಪೆಟ್ರೋಲು ಬಹಳಷ್ಟು ಖಾಲಿಯಾಗಿತ್ತು. ಉಳಿದೆರಡು ಟ್ಯಾಂಕುಗಳ ಪೆಟ್ರೋಲು ಬಂಗಲೆ ಮತ್ತು ಕೆಲಸದಾಳುಗಳ ವಸತಿ ಸಂಕೀರ್ಣದ ಸುತ್ತ ಕಟ್ಟಿದ್ದ ಸಿಮೆಂಟಿನ ಒಳಚರಂಡಿಗೆ ನೆಲದೊಳಗೆ ಹೂತಿದ್ದ ಪೈಪಿನಿಂದ ಹರಿಯುತ್ತಿತ್ತು. ಲೆನಿಂಜೆನ್ನನ ಕೆಲಸದಾಳುಗಳು ಒಬ್ಬೊಬ್ಬರೇ ಒಳ ಕಾಲುವೆಯ ಸುತ್ತ ಬಂದು ನೆರೆದರು. ತೋರಿಕೆಗೆ ಅವರೆಲ್ಲಾ ಏನೂ ವಿಶೇಷ ಘಟಿಸಿರದಂತೆ ಕಂಡರೂ, ಅವರ ಹಾವಭಾವ, ಮಾತು ಅವರೊಳಗೆ ಮಥಿಸುತ್ತಿದ್ದ ಆತಂಕ ತೋರಿಸುತ್ತಿತ್ತು. ಅವರ ಕುಗ್ಗಿ ಹೋಗುತ್ತಿದ್ದ ಆತ್ಮವಿಶ್ವಾಸ ಕುರುಡನನಿಗೂ ಅನುಭವವಾಗುವಷ್ಟು ಸ್ಪಷ್ಟವಾಗಿತ್ತು.

ಲೆನಿಂಜೆನ್ ಅವರನ್ನೆಲ್ಲಾ ತನ್ನ ಬಳಿ ಕರೆದ.
“ಗೆಳೆಯರೇ..” ಅವನು ಮಾತನಾಡಲಾಂಭಿಸಿದ, “ಮೊದಲ ಸುತ್ತು ನಾವು ಸೋತಿದ್ದೇವೆ, ಪರವಾಯಿಲ್ಲ ಬಿಡಿ. ನಾವು ಖಂಡಿತವಾಗಿಯೂ ಶತ್ರುಗಳ ನಾಶ ಮಾಡಿಯೇ ತೀರುತ್ತೇವೆ, ಏನೂ ಸಂಶಯವಿಲ್ಲ. ಯಾರಿಗಾದರೂ ಅನುಮಾನವಿದ್ದರೆ ಮುಂದೆ ಬನ್ನಿ. ನಿಮಗೆ ಕೊಡಬೇಕಾಗಿರುವ ಬಾಕಿಯನ್ನು ಈಗಲೇ ಕೊಟ್ಟು ಬಿಡುತ್ತೇನೆ. ರಾಕ್ಷಸ ಇರುವೆಗಳು ಇಲ್ಲಿವರೆಗೂ ಬರಲು ಇನ್ನೂ ಸಮಯವಿದೆ. ಸಾಕಷ್ಟು ತೆಪ್ಪಗಳಿವೆ. ನೀವು ಹೊರಡಬಹುದು.”
… ಆದರೆ, ಒಬ್ಬರೂ ಮುಂದೆ ಬರಲಿಲ್ಲ.

ಲೆನಿಂಜೆನ್ ತಲೆದೂಗಿದ. ಅವನ ತುಟಿಗಳ ಮೇಲೆ ಆತ್ಮವಿಶ್ವಾಸದ ಮಂದಹಾಸ ಮಿನುಗುತ್ತಿತ್ತು. ಅವನು ಬಲ ಮುಷ್ಠಿಯನ್ನು ಬಿಗಿದು ಹೆಬ್ಬೆಟ್ಟನ್ನು ಮೇಲೆ ಎತ್ತಿ ಗೆಲುವಿನ ಸನ್ನೆಯನ್ನು ಮಾಡಿದ. “ಒಗ್ಗಟ್ಟು ಎಂದರೆ ಇದು! ನಿಮ್ಮ ಮೇಲೆ ನನಗೆ ಖಂಡಿತವಾಗಿಯೂ ಭರವಸೆಯಿತ್ತು. ನಮ್ಮ ಯೋಜನೆಯ ನಿಜವಾದ ಅಗ್ನಿ ಪರೀಕ್ಷೆ ನಾಳೆ ಬೆಳಿಗ್ಗೆ ಶುರುವಾಗುತ್ತದೆ. ಈ ರಾಕ್ಷಸ ಇರುವೆಗಳು ಬಾಲ ಮುದುರಿ ಓಡಿಹೋಗಲು ಶುರುವಿಟ್ಟುಕೊಳ್ಳುವಾಗ ನಿಮಗೆ ಅಂಡು ಕೆರೆದು ಕೊಳ್ಳಲೂ ಬಿಡುವಿರುವುದಿಲ್ಲ! ಇದೆಲ್ಲಾ ಮುಗಿದ ನಂತರ ನಿಮಗೆ ಖಂಡಿತವಾಗಿಯೂ ವಿಶೇಷ ಬೋನಸ್ಸು ಕಾದಿರುತ್ತದೆ ಮರೆಯಬೇಡಿ! ಈಗ ಇಲ್ಲಿಂದ ಹೊರಡಿ. ಹೊಟ್ಟೆಗೆ ಏನಾದರೂ ವ್ಯವಸ್ಥೆ ಮಾಡಿಕೊಳ್ಳಿ.. ನನಗೂ ಹಸಿವು ತಾಳಲಾಗುತ್ತಿಲ್ಲ.” ಎಂದ.

ದಿನವಿಡೀ ಇರುವೆಗಳ ವಿರುದ್ಧ ಸಂಘರ್ಶದಲ್ಲಿ ತೊಡಗಿದ್ದ ಕೆಲಸಗಾರರಿಗೆ ಹೊಟ್ಟೆಯ ಬಗ್ಗೆ ಮರೆತೇ ಹೋಗಿತ್ತು. ಎಲ್ಲರೂ ಒಳ ಕಾಲುವೆಯ ಸುರಕ್ಷತೆಯಲ್ಲಿದ್ದು ಇರುವೆಗಳು ನೀರು ಕಾಲುವೆಯ ಹೊರಗಿದ್ದು ಕಣ್ಣಿಗೆ ಕಾಣಿಸುತ್ತಿರಲಿಲ್ಲವಾದ್ದರಿಂದ ಅವರಿಗೆಲ್ಲಾ ಥಟ್ಟನೆ ಹಸಿವು ಜಾಗೃತವಾಯಿತು.


ಲೆನಿಂಜೆನ್ ಪೆಟ್ರೊಲ್ ಕಾಲುವೆಯ ಮೇಲೆ ಹಾಕಿದ್ದ ತಾತ್ಕಾಲಿಕ ಕಾಲುಸೇತುವೆಗಳನ್ನು ಬಿಚ್ಚಿಡಲು ಹೇಳಿದ. ಹಿಂಡಿನಿಂದ ಬೇರ್ಪಟ್ಟು ಬಂದಿದ್ದ ಇರುವೆಗಳು ಪೆಟ್ರೊಲ್ ಕಾಲುವೆಯ ಹೊರಭಾಗದಲ್ಲಿ ನಿಂತು ನೋಡಿ ವಾಪಸ್ಸಾದವು. ಎರಡೂ ಕಾಲುವೆಯ ಮಧ್ಯದಲ್ಲಿದ್ದ ಹಸಿರು ಅವರಿಗೆ ಸಧ್ಯಕ್ಕೆ ಸಾಕಿತ್ತು. ಅವರು ನೋಡುನೋಡುತ್ತಿದ್ದಂತೆಯೇ ಕಾಲುವೆಯ ಮಧ್ಯದಲ್ಲಿದ್ದ ಹಸಿರು ನಿರ್ಣಾಮವಾಗತೊಡಗಿತು. ನೂರಾರು ಕೂಲಿಕಾರರ ಶ್ರಮ, ಲೆನಿಂಜೆನ್ನನ ಬಂಡವಾಳ ರಕ್ಕಸ ಇರುವೆಗಳು ತಿಂದು ತೇಗಿದವು.

.ಸಂಜೆಯ ಹೊತ್ತಿಗೆ ಹಸಿರಿನಿಂದ ನಳನಳಿಸುತ್ತಿದ್ದ ಲೆನಿಂಜೆನ್ನನ ಕಾಲುವೆಗಳ ಮಧ್ಯದ ತೋಟ ಅಸ್ಥಿಪಂಜರವನ್ನಾಗಿಸಿ ಪೆಟ್ರೊಲ್ ಕಾಲುವೆಯ ಹೊರಬದಿಗೆ ಬಂದು ನಿಂತವು. ಅಷ್ಟೇ. ಯಾವುದೇ ಸಾಹಸಕ್ಕೆ ಕೈಹಾಕದೆ ಧ್ಯಾನಸ್ಥ ಭಂಗಿಯಲ್ಲಿ ಸುಮ್ಮನೆ ಗುಂಪು ಕಟ್ಟಿಕೊಂಡು ನಿಂತವು. ಲೆನಿಂಜೆನ್ ಕೆಲಸಗಾರರನ್ನು ಕಾಲುವೆಯ ಉದ್ದಕ್ಕೂ ನೇಮಿಸಿ ಅವರ ಕೈಗೆ ವಿದ್ಯುತ್ ದೀಪಗಳನ್ನಿತ್ತು ಆಫೀಸಿಗೆ ತೆರಳಿದ. ಅವನು ತನಗಾದ ನಷ್ಟವನ್ನು ಲೆಕ್ಕಹಾಕತೊಡಗಿದ. ಆದ ನಷ್ಟವನ್ನು ಭರ್ತಿ ಮಾಡಿಕೊಳ್ಳಲು ಅವನ ತಲೆಯೊಳಗೆ ನಾನಾ ಯೋಜನೆಗಳು ಮೂಡಲಾರಂಭಿಸಿದವು. ಸಮಧಾನದಿಂದ ಎದ್ದು ಅವನು ನಿದ್ದೆ ಮಾಡಲು ತೆರಳಿದ.

ಅವನು ಎಚ್ಚರಗೊಂಡಾಗ ಸೂರ್ಯ ಉದಯಿಸಿದ್ದ. ಎದ್ದವನೇ ತನ್ನ ಬಂಗಲೆಯ ತಾರಸಿಗೆ ಹತ್ತಿದ. ಕೆಳಗಿನ ದೃಶ್ಯ ನೋಡುತ್ತಿದ್ದಂತೆಯೇ ಅವನ ಮೈರೋಮಗಳು ನೆಟ್ಟಗಾದವು. ಕಪ್ಪು ಇರುವೆಗಳ ಮಹಾಪೂರವೇ ಅವನ ತೋಟದೊಳಗೆ ಆವರಿಸಿಕೊಂಡಿತ್ತು. ನೆಲವೆನ್ನುವುದು ಕಾಣಿಸುತ್ತಲೇ ಇರಲಿಲ್ಲ. ಅವನ ತೋಟದಲ್ಲಿನ ಫಸಲಷ್ಟೇ ಅಲ್ಲದೆ, ಗಿಡಗಳ ಮೇಲಿದ್ದ ಸಣ್ಣ ಚಿಗುರೂ ಮಾಯವಾಗಿತ್ತು. ಒಂದು ಹುಲ್ಲಿನ ಎಸಳೂ ಕಾಣಿಸುತ್ತಿರಲಿಲ್ಲ. ಎಲ್ಲವನ್ನೂ ಸ್ವಾಹ ಮಾಡಿದ ಇರುವೆಗಳು ಸಂತೃಪ್ತಿಯಿಂದ ಎಳೆಬಿಸಿಲಿಗೆ ಮೈ ಒಡ್ಡಿಕೊಂಡು ಮಿರಮಿರನೆ ಮಿಂಚುತ್ತಿದ್ದವು. ಅವುಗಳಿಗೆ ಯಾವುದೇ ಗಡಿಬಿಡಿ ಇದ್ದಂತೆ ಕಾಣಿಸುತ್ತಿರಲಿಲ್ಲ. ಅವುಗಳೊಳಗೆ ಮುಂದಿನ ಯೋಜನೆಯ ಬಗ್ಗೆ ಚರ್ಚೆ ನಡೆಯುತ್ತಿದ್ದಿರಬೇಕು! ಉತ್ತರಕ್ಕೆ ನದಿ ಹರಿಯುತ್ತಿತ್ತು. ಇರುವೆಗಳಿಗೆ ಅದನ್ನು ದಾಟಲು ಸಾಧ್ಯವೇ ಇರಲಿಲ್ಲ. ಆದರೂ ಅಲ್ಲಿಯವರೆಗ ಇರುವೆಗಳು ನೆರೆದಿದ್ದವು.
ಲೆನಿಂಜೆನ್ನನ ತೋಟವನ್ನು ತಿಂದು ಮುಗಿಸಿದ ಇರುವೆಗಳು ತೃಪ್ತಿಗೊಂಡಂತೆ ಕಾಣಿಸುತ್ತಿರಲಿಲ್ಲ. ಲೆನಿಂಜೆನ್ನನಿಗೆ ಅನುಮಾನಗಳಿದ್ದವು. ಇದು ಪ್ರಾರಂಭವಷ್ಟೇ ಎಂದು ಅವನಿಗನ್ನಿಸತೊಡಗಿತು. ಇರುವೆಗಳ ದೃಷ್ಟಿ ತನ್ನ ತೋಟದ ಮೇಲಲ್ಲ , ಬದಲು ತನ್ನ ಧಾನ್ಯ ತುಂಬಿದ ಗೋದಾಮುಗಳು, ನಾಲ್ಕು ನೂರು ಕೆಲಸಗಾರರು, ಮತ್ತು ಅಸಂಖ್ಯಾತ ಕುದುರೆ, ಗೋವುಗಳ ಮೇಲೆ ಎಂಬುದು ಅವನಿಗೆ ಸಿಡಿಲೆರಗಿದಂತೆ ಅರಿವಾಗತೊಡಗಿತು.

ಮೊದಲಿಗೆ ಇರುವೆಗಳಂತ ಕ್ಷುದ್ರ ಜೀವಿಗಳಿಂದ ರಕ್ಷಣೆ ಪಡೆಯಲು ಪೆಟ್ರೋಲ್ ಕಾಲುವೆ ಬೇಕಾದಷ್ಟು ಎಂದು ಅವನಿಗನ್ನಿಸಿತ್ತು. ಅವುಗಳಿಗೆ ಪೆಟ್ರೊಲ್ ಕಾಲುವೆಗೆ ಇಳಿಯುವುದು ಅಪಾಯಕರವೆಂದು ಅನಿಸಿರಬೇಕು. ಕಾಲುವೆಯ ದಡದ ಮೇಲೆ ಬಿಸಿಲು ಕಾಯುತ್ತಾ ಕುಳಿತುಕೊಂಡಿದ್ದವಷ್ಟೇ ಇಳಿಯುವ ಸಾಹಸ ಮಾಡಲಿಲ್ಲ! ಬಿಸಿಲು ಏರುತ್ತಿದ್ದಂತೇ ಇರುವೆಗಳು ಕಾರ್ಯೋನ್ಮುಖವಾದವು. ಎಲ್ಲರೂ ನೋಡುತ್ತಿರುವಂತೆಯೇ ಇರುವೆಗಳು ಪೆಟ್ರೊಲ್ ಕಾಲುವೆಯೊಳಗೆ ಮರಗಳ ಸಿಪ್ಪೆ, ಚೆಕ್ಕೆಗಳು, ಎಲೆಗಳ ತೊಟ್ಟುಗಳು, ತರಗೆಲೆಗಳನ್ನು ತಂದು ಸುರಿಯತೊಡಗಿದವು. ಸುತ್ತಮುತ್ತ ಆಗಾಗಲೇ ಹಸಿರೆನ್ನುವುದರ ನಾಮಾವಶೇಷವಾಗಿತ್ತು. ಇರುವೆಗಳ ದಂಡು ಉತ್ತರದ ಕಡೆಯಿಂದ ಹುಣಸೆ ಎಲೆಗಳನ್ನು ಹೊತ್ತು ತರತೊಡಗಿತು. ಇದೇ ಎಲೆಗಳನ್ನು ಹಿಂದಿನ ದಿನ ಇರುವೆಗಳು ತೆಪ್ಪದಂತೆ ಬಳಸಿ ಕಾಲುವೆಯನ್ನು ದಾಟಿದ್ದವು.
ಪೆಟ್ರೋಲು ನೀರಿನಂತೆ ನದಿಗೆ ಹರಿಯುತ್ತಿರಲಿಲ್ಲವಾದ್ದರಿಂದ ಇರುವೆಗಳು ತಂದು ಸುರಿಯುತ್ತಿದ್ದ ಎಲೆಗಳು ತಟಸ್ಥವಾಗಿ ತೇಲುತ್ತಿದ್ದವು. ಈ ಕಾಮಗಾರಿ ಬಹಳ ಹೊತ್ತಿನವರೆಗೆ ನಡೆಯಿತು. ಇರುವೆಗಳಿಗೆ ಕೊನೆಗೂ ಲೆನಿಂಜೆನ್ನನ ಮೇಲೆ ನೇರವಾಗಿ ಆಕ್ರಮಣ ಮಾಡಬಹುದೆಂಬ ಧೈರ್ಯ ಮೂಡಿರಬೇಕು.

ಈ ಕಾರ್ಯಾಚರಣೆಗೆ ಮೊದಲು ಸಿದ್ಧವಾಗಿದ್ದ ದಂಡು ಬೇರಯದ್ದೇ ಇರಬೇಕು. ಅವೆಲ್ಲಾ ಕಾಲುವೆಯ ಹೊರ ಗೋಡೆಯ ಮೇಲಿಂದ ಕೆಳಗಿಳಿದು ಎಲೆಗಳ ತೆಪ್ಪವನ್ನು ಹತ್ತಿದವು. ಅಲ್ಲಿಂದ ಕಾಲುವೆಯ ಒಳ ಗೋಡೆ ದೂರವಿರಲಿಲ್ಲ.

ಇದನ್ನು ಮಂತ್ರಮುಗ್ಧನಾಗಿ ನೋಡುತ್ತಾ ನಿಂತಿದ್ದ ಲೆನಿಂಜೆನ್ ಕೊಂಚವೂ ವಿಚಲಿತನಾಗಲಿಲ್ಲ. ಗೋಡೆಯ ಮೇಲೆ ಹತ್ತಲುಪಕ್ರಮಿಸಿದ ಇರುವೆಗಳನ್ನು ಕುತೂಹಲದಿಂದ ನೋಡುತ್ತಾ ನಿಂತ. ಯಾವುದೇ ಕಾರಣಕ್ಕೂ ಇರುವೆಗಳಿಗೆ ತಡೆ ಒಡ್ಡಬೇಡಿ ಎಂದು ಅವನು ಕೆಲಸಗಾರರಿಗೆ ಆದೇಶವನ್ನಿತ್ತಿದ್ದ. ಆದ್ದರಿಂದ ಅವರೆಲ್ಲಾ ಲೆನಿಂಜೆನ್ನನ ಸೂಚನೆಗೆ ಕಾಯುತ್ತಾ ಕಾಲುವೆಯ ದಂಡೆಯ ಮೇಲೆ ಕುಕ್ಕರುಗಾಲಿನಲ್ಲಿ ಕುಳಿತುಕೊಂಡಿದ್ದರು. ಈಗ ಇರುವೆಗಳು ಪೆಟ್ರೊಲ್ ಕಾಲುವೆಯಲ್ಲಿ ದಟ್ಟವಾಗಿ ತುಂಬಿಕೊಂಡಿದ್ದವು.

“ಕಾಲುವೆಯ ದಡದಿಂದ ಎಲ್ಲರೂ ದೂರ ಸರಿಯಿರಿ!” ಲೆನಿಂಜೆನ್ ಆಧೇಶಿಸಿದ.
ಯಜಮಾನನ ಯೋಜನೆ ಏನಿರಬಹುದೆಂದು ಅರಿಯದ ಕೆಲಸಗಾರರು ಸರಸರನೆ ಕಾಲುವೆಯ ಬದಿಯಿಂದ ದೂರ ಸರಿದರು, ಲೆನಿಂಜೆನ್ ಮುಂದೆ ಬಂದು ಇರುವೆಗಳ ಮೇಲೊಂದು ಕಲ್ಲೆಸೆದ. ಕಲ್ಲು ಬಿದ್ದ ಜಾಗದಲ್ಲಿ ಇರುವೆಗಳು ಚದುರಿದವು. ಪೆಟ್ರೋಲಿನ ಎಣ್ಣೆ ಅಂಶವು ಬಿಸಿಲಿಗೆ ಕಾಮನಬಿಲ್ಲಿನಂತೆ ಪ್ರಜ್ವಲಿಸುತ್ತಿತ್ತು. ಎಲ್ಲರೂ ದೂರ ನಿಂತಿರುವುದನ್ನು ಖಾತ್ರಿಪಡಿಸಿ ಲೆನಿಂಜೆನ್ ಒಂದು ಬೆಂಕಿಕಡ್ಡಿಯನ್ನು ಗಿರಿ ಕಾಲುವೆಯೊಳಗೆ ಎಸೆದು ಹಿಂದಕ್ಕೆ ಓಡಿ ಬಂದ. ಒಮ್ಮೆಲೇ ಪೆಟ್ರೊಲಿಗೆ ಬೆಂಕಿ ತಾಗಿ ಕಾಲುವೆಯು ಭಯಾನಕ ಅಗ್ನಿಕುಂಡವಾಗಿ ಮಾರ್ಪಟ್ಟಿತು.
ಇದನ್ನು ನೋಡಿ ಕೆಲಸಗಾರರು ಕುಪ್ಪಳಿಸುತ್ತಾ ಹುಯಿಲೆಬ್ಬಿಸಿದರು. ಅವರು ಮಕ್ಕಳಂತಾಗಿದ್ದರು. ಅವರ ಸಂತೋಷಕ್ಕೆ ಪಾರವೇ ಇರಲಿಲ್ಲ. ಯಜಮಾನನ ಬಗ್ಗೆ ಸುಪ್ತ ಹೆದರಿಕೆ, ಗೌರವ ಇರದಿದ್ದಲ್ಲಿ ಅವನನ್ನು ಹೊತ್ತು ಕುಣಿದಾಡುತ್ತಿದ್ದರೇನೋ!

ಪೆಟ್ರೊಲ್ ಕಾಲುವೆಗೆ ಹೊತ್ತಿದ್ದ ಬೆಂಕಿ ಪೂರ್ತಿಯಾಗಿ ನಂದಿ ಹೋಗಲು ತುಸು ಸಮಯವೇ ಹಿಡಿಸಿತು. ಕಾಲುವೆಯೊಳಗಿದ್ದ ಇರುವೆಗಳಷ್ಟೇ ಅಲ್ಲದೆ ದಡದಲ್ಲಿದ್ದ ಇರುವೆಗಳೂ ಭಸ್ಮವಾಗಿದ್ದವು.
ಆದರೂ ರಕ್ಕಸ ಇರುವೆಗಳು ಸೋಲನ್ನು ಒಪ್ಪಿಕೊಂಡಂತೆ ಕಾಣಿಸಲಿಲ್ಲ. ಲೆನಿಂಜೆನ್ನನಿಗೆ ಅವುಗಳ ಉತ್ಸಾಹ ಇಮ್ಮಡಿಯಾದಂತೆ ಕಾಣಿಸಿತು. ಕ್ರಮೇಣ ಕಾಲುವೆಯ ಬೆಂಕಿ ನಂದಿ ಅದರ ಕಾಂಕ್ಟಿಟ್ ಗೋಡೆಗಳು ತಣ್ಣಗಾಗಲಾರಂಭಿಸಿದವು. ಈಗ ಮತ್ತೊಂದು ಟ್ಯಾಂಕಿನಿಂದ ಕಾಲುವೆಗೆ ಪೆಟ್ರೊಲನ್ನು ಹರಿಸಲಾಯಿತು. ದೂರದಲ್ಲಿದ್ದ ಇರುವೆಗಳ ದಂಡು ಕಾಲುವೆಗೆ ಹತ್ತಿರವಾಗತೊಡಗಿತು. ಇರುವೆಗಳ ಆತ್ಮಹತ್ಯಾ ಮನಸ್ಥಿತಿಯ ಬಗ್ಗೆ ಲೆನಿಂಜೆನ್ನನಿಗೆ ಆಶ್ಚರ್ಯವಾಯಿತು. ಅವನಿಗೆ ಇದು ಹುಚ್ಚುತನ ಅನಿಸಿತು. ಯೋಚಿಸುತ್ತಿದ್ದಂತೆ, ಹುಚ್ಚುತನವೇನೋ ಸರಿಯೇ.. ಎಲ್ಲಿವರೆಗೆ? ತನ್ನ ಬಳಿ ಸಂಗ್ರಹಿಸಿಟ್ಟುಕೊಂಡಿದ್ದ ಪೆಟ್ರೊಲ್ ಮುಗಿದ ನಂತರ!?.. ಅವನು ಯೋಚನಾಕ್ರಾಂತನಾದ.

ಈ ಯೋಚನೆ ಲೆನಿಂಜೆನ್ನನ ತಲೆಯೊಳಗೆ ಹೊಕ್ಕುತ್ತಿದ್ದಂತೆಯೇ ಅವನ ಬೆನ್ನು ಹುರಿಯೊಳಗೆ ವಿದ್ಯುತ್ ಹರಿದಂತಾಯಿತು. ಇರುವೆಗಳು ತನ್ನ ತೋಟದ ಮೇಲೆ ಆಕ್ರಮಣ ನಡೆಸಲು ಹೊರಟಿವೆ ಎಂದು ಗೊತ್ತಾಗಿದ್ದಾಗಲೂ ಅವನು ಇಷ್ಟೊಂದು ವಿಚಲಿತನಾಗಿರಲಿಲ್ಲ. ಅವನ ಹೃದಯ ಬಡಿದುಕೊಳ್ಳಲಾರಂಭಿಸಿತು. ಅವನ ಆತ್ಮವಿಶ್ವಾಸ ಹಿಡಿ ಹಿಡಿಯಷ್ಟೇ ಕರಗತೊಡಗಿತು. ಉಸಿರು ಕಟ್ಟಿದಂತಾಗಿ ಲೆನಿಂಜೆನ್ ತನ್ನ ಶರ್ಟಿನ ಕುತ್ತಿಗೆಯ ಬಳಿಯ ಗುಂಡಿಯನ್ನು ಬಿಚ್ಚಿದ. ಒಂದು ವೇಳೆ ಪೆಟ್ರೊಲ್ ಕಾಲುವೆಯನ್ನು ದಾಟಿ ಈ ರಕ್ಕಸ ಇರುವೆಗಳು ಒಳಗೆ ನುಗ್ಗಿದರೆ ಸರ್ವನಾಶವಾಗುವುದಂತೂ ಶತಃಸಿದ್ಧ. ಇರುವೆಗಳು ಅವರನ್ನೆಲ್ಲಾ ಮುಕ್ಕಿ ತಿನ್ನುವುದರಲ್ಲಿ ಯಾವುದೇ ಸಂಶಯಗಳಿರಲಿಲ್ಲ.

ಕಾಲುವೆಯಲ್ಲಿ ಮೂರನೆಯ ಭಾರಿ ಪೆಟ್ರೊಲ್ ಹರಿಸಿ ಇರುವೆಗಳ ಮತ್ತೊಂದು ಆತ್ಮಹತ್ಯಾ ತಂಡವನ್ನು ಸುಟ್ಟು ಹಾಕಲಾಯಿತು. ಆದರೂ, ಏನೂ ಜರುಗಿಯೇ ಇಲ್ಲವೆಂಬಂತೆ ಕಾಲುವೆಯ ದಡಕ್ಕೆ ಇರುವೆಗಳ ಮತ್ತೊಂದು ದಂಡು ಸಿದ್ಧವಾಗುತ್ತಿತ್ತು. ಮುಂದಿನ ಭಾರಿ ಲೆನಿಂಜೆನ್ನನಿಗೆ ಹೃದಯಘಾತವಾಗುವಂತ ಸುದ್ಧಿ ಬಂದಿತು. ಕಾಲುವೆಗೆ ಹರಿಯುತ್ತಿದ್ದ ಪೆಟ್ರೋಲು ನಿಂತು ಹೋಗಿತ್ತು! ಮೂರನೆಯ ಮತ್ತು ಕೊನೆಯ ಟ್ಯಾಂಕಿನ ಪೆಟ್ರೊಲ್ ಹೊರಬರುವ ಪೈಪಿನಲ್ಲಿ ಇಲಿಯೋ, ಹಾವೋ ಸಿಕ್ಕಿ ಹಾಕಿ ಕೊಂಡಿತ್ತು. ಆದರೆ, ಇರುವೆಗಳಿಗೆ ಒಳನುಗ್ಗುವ ಅವಕಾಶ ಕೊಡುವ ಹಾಗೇ ಇರಲಿಲ್ಲ. ಹೇಗಾದರೂ ಕಾಲುವೆಯೊಳಗೆ ಪೆಟ್ರೊಲ್ ಹರಿಸಲೇ ಬೇಕಿತ್ತು.

– – ಜೆ.ವಿ. ಕಾರ್ಲೊ


ಮುಂದುವರೆಯುವುದು..

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

2 Comments
Oldest
Newest Most Voted
Inline Feedbacks
View all comments
Charan Kumar
Charan Kumar
3 years ago

Quite interesting

2
0
Would love your thoughts, please comment.x
()
x