ಮೂಲ: ಕಾರ್ಲ್ ಸ್ಟೀಫನ್ ಸನ್
ಅನುವಾದ: ಜೆ.ವಿ. ಕಾರ್ಲೊ
“ಒಂದು ವೇಳೆ ಅವು ದಿಕ್ಕು ಬದಲಿಸಿದರೆ, ಬೇರೆ ಮಾತು.. ಆದರೆ ಹಾಗೆಂದು ಭಾವಿಸಲು ಯಾವುದೇ ಆಧಾರಗಳಿಲ್ಲ. ಅವು ನಿಮ್ಮ ತೋಟದ ಕಡೆಗೇ ಬರುತ್ತಿವೆ. ಹೆಚ್ಚೆಂದರೆ ಇನ್ನು ಎರಡು ದಿವಸ!”
ಲೆನಿಂಜೆನ್ನನ ಮುಖದ ಮೇಲೆ ಆತಂಕದ ಗೆರೆಗಳು ಮೂಡಿದವು. ತನ್ನ ನಂದಿ ಹೋಗಿದ್ದ ದಪ್ಪನೆಯ ಚಿರೂಟನ್ನು, ಹಸಿದವನಂತೆ ಗಬಗಬನೆ ಸೇದತೊಡಗಿದ. ಅವನಿಗೆ ಸುದ್ಧಿ ಕೊಡಲು ಬಂದಿದ್ದ ಜಿಲ್ಲಾಧಿಕಾರಿಯ ಮುಖದ ಮೇಲೂ ಚಿಂತೆಯ ಗೆರೆಗಳು ಮೂಡಿದ್ದವಷ್ಟೇ ಅಲ್ಲದೆ ಅವನು ಯಥೇಚ್ಛವಾಗಿ ಬೆವರುತ್ತಿದ್ದ. ಲೆನಿಂಜೆನ್ ಕೂತಲ್ಲಿಂದ ತನ್ನ ತುಟಿಗಳ ಮಧ್ಯದಿಂದ ಚಿರೂಟನ್ನು ಬಲವಂತದಿಂದೆಂಬಂತೆ ಹೊರಗೆಳೆದು ಮುಂದಕ್ಕೆ ಬಾಗಿದ. ಬಿಸಿಲಿಗೆ ಹೊಳೆಯುತ್ತಿದ್ದ ಬಿಳಿ ಕೂದಲು, ಎದ್ದು ಕಾಣುತ್ತಿದ್ದ ದಪ್ಪನೆಯ ಮೂಗು.. ಅವನು ಪುಕ್ಕ ಕಳಚಿಕೊಳ್ಳುತ್ತಿದ್ದ ಮುದಿ ರಣ ಹದ್ದಿನಂತೆ ಕಾಣತೊಡಗಿದ.
“ಅಷ್ಟು ದೂರದಿಂದ ಬಂದು ಈ ಸುದ್ಧಿಯನ್ನು ಮುಟ್ಟಿಸಿದಕ್ಕಾಗಿ ಧನ್ಯವಾದಗಳು ಸರ್. ನೀವು, ಇಲ್ಲಿಂದ ಜಾಗ ಖಾಲಿ ಮಾಢಿ ಹೋಗಿ ಎನ್ನುತ್ತಿದ್ದೀರಾ! ನೀವು ನನ್ನನ್ನು ಅಪಹಾಸ್ಯ ಮಾಡುತ್ತಿದ್ದೀರಿ?.. ಇರುವೆಗಳಷ್ಟೇ ಅಲ್ಲ, ದೈತ್ಯ ಡೈನೋಸಾರ್ ಗಳು ಬಂದರೂ ನಾನು ಇಲ್ಲಿಂದ ಓಡಿ ಹೋಗುವವನಲ್ಲ.”
ಆ ಬ್ರೆಜಿಲಿಯನ್ ಸರಕಾರಿ ಅಧಿಕಾರಿ ಅಸಹಾಯಕತೆಯಿಂದ ಕೈ ಚೆಲ್ಲ್ಲಿದ.
.”ಮಿಸ್ಟರ್ ಲೆನಿಂಜೆನ್! ನಿಮಗೆ ಹುಚ್ಚು ಹಿಡಿದಿಲ್ಲ ತಾನೆ?.. ನೀವು ಖಂಡಿತವಾಗಿಯೂ ಈ ರಾಕ್ಷಸ ಇರುವೆಗಳ ಎದುರು ಗೆಲ್ಲಲಾರಿರಿ. ಪ್ರಕೃತಿಗೆ ಅಥವ ದೈವಶಾಪಕ್ಕೆ ಸೆಡ್ಡು ಹೊಡೆದು ನಿಲ್ಲುವುದು ಹುಚ್ಚುತನ. ಅದು ಯಾರಿಗೂ ಸಾಧ್ಯವಿಲ್ಲ. ಹತ್ತು ಮೈಲು ಉದ್ದ, ಎರಡು ಮೈಲು ಅಗಲ. ಯಕಶ್ಚಿತ್ ಇರುವೆಗಳು ಎಂದು ತಾತ್ಸಾರ ಮಾಡಬೇಡಿ. ಈ ಹಿಂಡಿನ ಒಂದೊಂದು ಇರುವೆಯೂ ಒಂದು ಯಕಶ್ಚಿತ್ ಇರುವೆಯಲ್ಲ! ಪಾತಾಳ ಗರ್ಭದಿಂದ ಎದ್ದು ಬಂದಿರುವ ಸೈತಾನ ಇರುವೆಗಳು! ನಿಮಗೆ ಇವುಗಳ ಬಗ್ಗೆ ಏನೂ ಗೊತ್ತಿಲ್ಲವೆಂದು ತೋರುತ್ತದೆ. ನೀವು ಮೂರು ಭಾರಿ ಉಗಿಯುವಷ್ಟರಲ್ಲಿ ಈ ಇರುವೆಗಳು ಒಂದು ಬಲಿತ ಕೋಣವನ್ನು ತಿಂದು ಮುಗಿಸಿಬಿಡುತ್ತವೆ!”
ಲೆನಿಂಜೆನ್ ನಗೆಯಾಡಿದ. ಅವನ ನಗುವಿನೊಳಗಿನ ವ್ಯಂಗ್ಯ ಅಧಿಕಾರಿಗೆ ಕಾಣದಿರಲಿಲ್ಲ. “ಪ್ರಕೃತಿ..ದೈವ ಶಾಪ! ವ್ಹಾಹ್, ಎಂತಾ ಮೂಡ ನಂಬಿಕೆ!! ಏನೇ ಆಗಲಿ, ನಾನು ಹೆದರಿ ಓಡಿ ಹೋಗುವ ಹೇಡಿಯಂತೂ ಅಲ್ಲ. ಹಾಗಂತ ಬೊಗಸೆಯೊಳಗೆ ಮಿಂಚನ್ನು ಬಾಚಿ ಕೊಳ್ಳುವಷ್ಟು ಮೂರ್ಖನೂ ಅಲ್ಲ. ನಾನು ನನ್ನ ಬುದ್ಧಿವಂತಿಕೆಯನ್ನು ಉಪಯೋಗಿಸುತ್ತೇನೆ ಆಫಿಸರ್. ಮೂರು ವರ್ಷಗಳ ಹಿಂದೆ ಈ ಫಾರಮನ್ನು ಖರೀದಿಸಿ ಇಲ್ಲಿ ಕೃಷಿಯನ್ನು ಆರಂಭಿಸಿದ ನಂತರ ಆನೇಕ ಎಡರುತೊಡರುಗಳನ್ನು ಎದುರಿಸಿದ್ದೇನೆ. ಅವುಗಳನ್ನೆಲ್ಲಾ ಮೆಟ್ಟಿ ನಿಲ್ಲಲು ನನ್ನದೇ ಯೋಜನೆಗಳನ್ನು ಅಳವಡಿಸಿಕೊಂಡಿದ್ದೇನೆ. ನಾನು ಎಲ್ಲದಕ್ಕೂ, ಅಂದರೆ ಎಲ್ಲಾ ಅಡೆತಡೆಗಳಿಗೂ ತಯಾರಾಗಿದ್ದೇನೆ. ನೀವು ಹೇಳುತ್ತಿರುವ ಈ ಸೈತಾನ ಇರುವೆಗಳಿಗೂ!” ಎಂದ.
ಆ ಬ್ರೆಜಿಲಿಯನ್ ಅಧಿಕಾರಿ ಎದ್ದು ನಿಂತ. ಅವನ ಮುಖ ಬಾಡಿಕೊಂಡಿತ್ತು. “ಲೆನಿಂಜೆನ್.. ನಾನು ನನ್ನ ಕರ್ತವ್ಯವನ್ನು ಮಾಡಿದ್ದೇನೆ. ಒಂದು ಸಂಗತಿ ಮರೆಯಬೇಡಿ. ನೀವು ಇಂತಾ ಇರುವೆಗಳನ್ನು ಈವರೆಗೆ ನೋಡಿರಲಾರಿರಿ. ನಿಮ್ಮ ಸುರಕ್ಷತೆ ಮಾತ್ರವಲ್ಲ, ನಿಮ್ಮ ನಾಲ್ಕುನೂರು ಕೆಲಸಗಾರರ ಜೀವ ಭದ್ರತೆಗೂ ನೀವೇ ಹೊಣೆಗಾರರಾಗಿರುತ್ತೀರಿ.” ಎಂದು ಹೊರಡಲಣಿಯಾದ.
ಲೆನಿಂಜೆನ್ ಅವನನ್ನು ಬೀಳ್ಕೊಡಲು ನದಿಯವರೆಗೂ ಹೋದ. ನದಿಯ ತೀರದಲ್ಲಿ ಅವನ ಯಾಂತ್ರಿಕ ದೋಣಿ ಕಾಯುತ್ತಿತ್ತು. ಅವನ ದೋಣಿ ಅಲ್ಲಿಂದ ಮರೆಯಾಗುವವರೆಗೂ ಲೆನಿಂಜೆನ್ ಅಲ್ಲಿಯೇ ನಿಂತಿದ್ದ. ಅವನ ಮನಸ್ಸಿನಲ್ಲಿ ಅಧಿಕಾರಿಯು ಹೇಳಿದ್ದ ಎಚ್ಚರಿಕೆಯ ಮಾತುಗಳೇ ಗುಂಯ್ ಗುಡುತ್ತಿದ್ದವು: “ನಿಮಗೆ ಈ ಇರುವೆಗಳ ಬಗ್ಗೆ ಏನೂ ಗೊತ್ತಿಲ್ಲ ಲೆನಿಂಜನ್!” ಅಧಿಕಾರಿ ಮತ್ತೆ ಮತ್ತೆ ಹೇಳಿದ್ದ.
ಆದರೆ, ಲೆನಿಂಜೆನ್ನನಿಗೆ ತನ್ನ ತೋಟದ ಕಡೆಗೆ ದಂಡೆತ್ತಿ ಬರುತ್ತಿದ್ದ ಶತ್ರು ಪಾಳೆಯದ ಬಗ್ಗೆ ಸಂಪೂರ್ಣ ಅರಿವಿತ್ತು. ಈ ತೋಟವನ್ನು ಖರೀದಿಸುವ ಬಹಳ ವರ್ಷಗಳ ಮೊದಲಿನಿಂದಲೂ ಅವನು ಬ್ರೆಜಿಲಿನ ಈ ಪ್ರಾಂತ್ಯದಲ್ಲಿ ನೆಲೆಸಿದ್ದ. ಈ ಸೈತಾನ ಪಡೆಯ ಭಂಟರಾದ ಈ ರಾಕ್ಷಸ ಇರುವೆಗಳು ರೈತರ ಬೆಳೆಗಳ, ಜಾನವಾರುಗಳ ಮೇಲೆ ನಡೆಸಿದ ಧಾಂದಲೆ ಅವನು ಸ್ವತಃ ತನ್ನ ಕಣ್ಣುಗಳಿಂದ ನೋಡಿದ್ದ. ಇದನ್ನೆಲ್ಲಾ ಮೊದಲೇ ಮನಗಂಡು ಅವನು ಸೂಕ್ತ ರಕ್ಷಣೆಯನ್ನು ಮಾಡಿಕೊಂಡಿದ್ದ. ಹೀಗೆ, ತಾನು ಕೈಗೊಂಡಿದ್ದ ಕ್ರಮಗಳ ಬಗ್ಗೆ ಅವನಿಗೆ ತುಂಬು ವಿಶ್ವಾಸವಿತ್ತು.
ಲೆನಿಂಜೆನ್ ತನ್ನ ಕೃಷಿ ಜೀವನದಲ್ಲಿ ಆನೇಕ ಪ್ರಾಕೃತಿಕ ವಿಪತ್ತುಗಳನ್ನು ಎದುರಿಸಿದ್ದ… ಬರಗಾಲ, ನೆರೆ, ಕಠಿಣ ಚಳಿ, ಬಿರುಗಾಳಿ ಇತ್ಯಾದಿ.. ಅವನ ನೆರೆ ಹೊರೆಯ ಬಹಳಷ್ಟು ರೈತರು ಆರ್ಥಿಕವಾಗಿ, ಮಾನಸಿಕವಾಗಿ ಸೋತು ಸುಣ್ಣವಾಗಿದ್ದರೆ ಲೆನಿಂಜೆನ್ ಇನ್ನೂ ತಲೆ ಎತ್ತಿ ನಿಂತಿದ್ದ. ಇದು ಬರೇ ಅದೃಷ್ಟವೆಂದಷ್ಟೇ ಅಲ್ಲವೆಂದು ಅವನಿಗೆ ಮನದಟ್ಟಾಗಿತ್ತು. ಮನುಷ್ಯ ತನ್ನ ಬುದ್ಧಿವಂತಿಕೆ ಮತ್ತು ಸಾಮಾನ್ಯ ಪರಿಜ್ಞಾನವನ್ನು ಧೃತಿಗೆಡದೆ ಉಪಯೋಗಿಸಿದರೆ ಯಾವುದೇ ತೊಂದರೆ, ಪೇಚುಗಳಿಂದ ಬಚಾವಾಗಬಹುದೆಂದು ಅವನು ಕಂಡುಕೊಂಡಿದ್ದ.
ಜೀವನವನ್ನು ಹೇಗೆ ಎದುರಿಸುವುದೆಂದು ಲೆನಿಂಜೆನ್ ಚೆನ್ನಾಗಿ ಅರಿತು ಕೊಂಡಿದ್ದ. ಇಂತ ಘಟನೆಗಳು ಮನಷ್ಯನನ್ನು ಗಟ್ಟಿಗೊಳಿಸುತ್ತವೆಂದು ಅವನು ನಂಬಿದ್ದ.
ಬುದ್ಧಿವಂತಿಕೆಯೇ ಮನುಷ್ಯನ ಪ್ರಬಲ ಅಸ್ತ್ರ. ಅದನ್ನು ಸಾಣೆ ಹಿಡಿದು ಹರಿತಗೊಳಿಸುತ್ತಿದ್ದರೆ ಯಾವ ವಿಷಮ ಪರಿಸ್ಥಿತಿಯಲ್ಲೂ ಬಚಾವಾಗಬಹುದೆಂದು ಅವನು ನಂಬಿದ್ದ. ಈ ವರೆಗೂ ಅವನು ಬ್ರೆಜಿಲಿನ ದಟ್ಟ ಅರಣ್ಯಗಳಲ್ಲಿ ಎಲ್ಲಾ ಎಡರು ತೊಡರುಗಳನ್ನು ಜಯಿಸಿ ಗಟ್ಟಿಯಾಗಿದ್ದ. ಮೊದಲು ಮನುಷ್ಯನ ಅಂತರ್ಗತ ಬುದ್ಧಿವಂತಿಕೆ. ಎರಡನೆಯದಾಗಿ ಆಧುನಿಕ ವಿಜ್ಞಾನದ ಸಹಾಯದಿಂದಾಗಿ ಅವನು ತನ್ನ ಕೃಷಿ ಭೂಮಿಯಲ್ಲಿ ಪವಾಡ ಸದೃಶ ಇಳುವರಿಯನ್ನು ತೆಗೆದಿದ್ದ. ಈಗ.. ತನ್ನ ತೋಟದ ಕಡೆಗೆ ಮುನ್ನುಗ್ಗಿ ಬರುತ್ತಿರುವ ಶತ್ರು ಸೈನ್ಯವನ್ನು ತಾನು ಖಂಡಿತವಾಗಿಯೂ ಹಿಮ್ಮೆಟ್ಟಿಸಬಲ್ಲೆ ಎಂಬ ಆತ್ಮವಿಶ್ವಾಸ ಮತ್ತು ಧೃಡ ನಂಬಿಕೆ ಅವನಿಗಿತ್ತು.
ಅಂದೇ ಸಂಜೆ ಲೆನಿಂಜೆನ್ ತನ್ನ ಕೆಲಸಗಾರರ ಒಂದು ಸಭೆಯನ್ನು ಸೇರಿಸಿದ. ಮೂರನೆಯವರಿಂದ ಅವರಿಗೆ ಸುದ್ಧಿ ತಿಳಿಯುವುದು ಅವನಿಗೆ ಬೇಕಿರಲಿಲ್ಲ. ಅವರೆಲ್ಲಾ ಸ್ಥಳೀಯರೇ! “ಇರುವೆಗಳು ಬರಲಿವೆ..!” ಎಂಬ ಎರಡು ಶಬ್ಧಗಳು ಉಸುರಿದರೆ ಸಾಕಿತ್ತು, ಅವರೆಲ್ಲರ ಬೆವರಿಳಿಯುತ್ತಿತ್ತು. ಗಂಟಲು ಒಣಗಿ ಮರುಭೂಮಿಯಾಗುತ್ತಿತ್ತು. ಕಂಪಿಸಲು ತೊಡಗಿ ಜೀವ ಉಳಿಸಿಕೊಳ್ಳಲು ದಾರಿ ಹುಡುಕುತ್ತಿದ್ದರು. ಆದರೆ, ಅವರ ಮೇಲೆ ಲೆನಿಂಜೆನ್ನನ ಪ್ರಭಾವ ಎಷ್ಟೊಂದು ಗಾಢ ಪ್ರಭಾವ ಬೀರಿತ್ತೆಂದರೆ ಅವರು ಏನೂ ಮಾತನಾಡಲಿಲ್ಲ. ಅವನು ಹೇಳಿದ್ದನ್ನು ಅವರೆಲ್ಲಾ ಗಮನವಿಟ್ಟು ಕೇಳಿದರು. ಅವರೆಲ್ಲಾ ಮಾನಸಿಕವಾಗಿ ಮತ್ತು ದೈಹಿಕವಾಗಿ ಶತ್ರು ಇರುವೆಗಳ ವಿರುದ್ಧ ಯಾವುದೇ ಆತಂಕಗಳಿಲ್ಲದೆ ಅವನೊಂದಿಗೆ ಹೋರಾಡಲು ಸಿದ್ಧರಾದರು. ಇರುವೆಗಳ ಆಕ್ರಮಣವನ್ನು ಹಿಮ್ಮೆಟ್ಟಿಸುವುದು ಮಕ್ಕಳಾಟವಾಗಿರಲಿಲ್ಲ. ಹಾಗಂತ ಅವರ ಯಜಮಾನನೂ ಸಾಮಾನ್ಯ ಮನುಷ್ಯನಾಗಿರಲಿಲ್ಲವೆಂದು ಅವರು ಈಗಾಗಲೇ ಕಂಡುಕೊಂಡಿದ್ದರು.
ರಾಕ್ಷಸ ಇರುವೆಗಳ ಆಗಮನ ಮರುದಿನ ಮಧ್ಯಾಹ್ನದ ಹೊತ್ತಿಗೆ ಶುರುವಾಯಿತು. ಇದಕ್ಕೆ ಮುನ್ನ ಲಾಯದಲ್ಲಿದ್ದ ಕುದುರೆಗಳಿಗೆ ಅಪಾಯದ ಮುನ್ಸೂಚನೆ ಅದು ಹೇಗೆ ಸಿಕ್ಕಿತೋ, ಅವೆಲ್ಲಾ ಯಾವುದೋ ಆತಂಕದ ಮನ್ಸೂಚನೆ ಸಿಕ್ಕಿದಂತೆ ಎಲ್ಲಾ ಒಟ್ಟಿಗೇ ಕೆನೆದು ದಾಂಧಲೆ ಎಬ್ಬಿಸಿದವು. ಬಹುಶಃ ಕುದುರೆಗಳಿಗೆ ಇಂತದೊಂದು ಅಪೂರ್ವ ಪ್ರಜ್ಞೆ ಗಾಳಿಯಿಂದಲೇ ಸಿಕ್ಕಿರಬೇಕೇನೋ!
ಲಾಯದೊಳಗೆ ಕುದುರೆಗಳ ಕೆನೆತ, ಆತಂಕದಿಂದ ಎಬ್ಬಿಸುತ್ತಿದ್ದ ಖರಪುಟಗಳ ಸದ್ದು ಒಂದು ಭಯಾನಕ ವಾತಾವರಣವನ್ನು ನಿರ್ಮಿಸಿತು. ಇಷ್ಟೇ ಅಲ್ಲ, ಕಾಡಿನಲ್ಲಿದ್ದ ವನ್ಯ ಪ್ರಾಣಿಗಳೂ ಕೂಡ ದಿಕ್ಕುಪಾಲಾಗಿ ಓಡತೊಡಗಿದವು. ಗೂಡಿನಲ್ಲಿದ್ದ ಹಕ್ಕಿಗಳು ಆತಂಕದಿಂದ ಅಕ್ರಂದಿಸತೊಡಗಿದವು. ಕೀಟಲೆಕೋರ ಕೋತಿಗಳು ಕೂಡ ಉಸಿರು ಬಿಗಿ ಹಿಡಿದು ತೆಪ್ಪಗಾದವು. ಹುತ್ತಗಳೊಳಗೆ ಅಡಗಿದ್ದ ಹಾವುಗಳು ಹೊರಬಂದು ಸರಸರನೆ ದಿಕ್ಕೆಟ್ಟು ಓಡತೊಡಗಿದವು. ಎಲ್ಲಾ ಜೀವಿಗಳೂ ಆತಂಕಗೊಂಡಿದ್ದವು.
ಬೆಟ್ಟದ ಮೇಲಿನಿಂದ ಸಡಿಲಗೊಂಡ ಕಲ್ಲುಗಳು, ಒಣ ಮರ ಇತ್ಯಾದಿಗಳು ಬೋರ್ಗರೆಯುವ ನೆರೆಗೆ ದಬ್ಬಿಕೊಂಡು ಬಂದ ವಸ್ತುಗಳಂತೆ ಲೆನಿಂಜೆನ್ ತನ್ನ ತೋಟದ ಸುತ್ತ ನಿರ್ಮಿಸಿದ್ದ ಕಾಲುವೆಯ ತಡೆಗೋಡೆಗೆ ಅಪ್ಪಳಿಸಿ ಅಲ್ಲಿಂದ ಇಳಿಜಾರನ್ನು ಕಂಡುಕೊಳ್ಳುತ್ತಾ ತೋಟದ ಹಿಂದಿನ ನದಿಯ ಕಡೆಗೆ ಹರಿದವು. ಇರುವೆಗಳ ಆಕ್ರಮಣವನ್ನು ನಿರೀಕ್ಷಿಸಿಯೇ ಲೆನಿಂಜನ್ ತನ್ನ ತೋಟದ ಸುತ್ತಲೂ ದೊಡ್ಡದಾದ ಕಾಲುವೆಯನ್ನು ನಿರ್ಮಿಸಿದ್ದ. ಇದು ಹೆಚ್ಚು ಕಮ್ಮಿ ಹನ್ನೆರಡು ಅಡಿ ಅಗಲವಿದ್ದು ಹೆಚ್ಚು ಆಳವಿರಲಿಲ್ಲ. ಕಾಲುವೆಯಲ್ಲಿ ನೀರು ಹರಿಯದಿದ್ದಾಗ ಯಾವುದೇ ಜೀವಿಗಳಿಗೆ ಒಳ ಬರಲು ಅಡ್ಡಿಯಿರಲಿಲ್ಲ. ಇಂದು ಕಾಲುವೆಯಲ್ಲಿ ಭರ್ತಿ ನೀರು ಹರಿಯುತ್ತಿತ್ತು. ಕಾಲುವೆಯ ವಿನ್ಯಾಸ ಕುದುರೆಯ ಲಾಳದಂತೆ ತೋಟದ ಮೂರೂ ಕಡೆ ಸುತ್ತುವರೆದು ಹಿಂಭಾಗದಲ್ಲಿ ನೈಸರ್ಗಿಕವಾಗಿ ಹರಿಯುತ್ತಿದ್ದ ನದಿಯ ರಕ್ಷಣೆ ಇತ್ತು. ಕಾಲುವೆಯ ಎರಡು ತುದಿಗಳು ನದಿಗೆ ತೆರೆದುಕೊಂಡಿದ್ದವು. ಲೆನಿಂಜೆನ್ನನ ಮನೆಯ ಮುಂಭಾಗದಲ್ಲಿ ಕಾಲುವೆ ಇದ್ದರೆ, ಮನೆಯ ಹಿಂಭಾಗದಲ್ಲಿ ಕೆಲಸಗಾರರ ವಸತಿಗಳು ಮತ್ತು ಇತರ ಕಟ್ಟಡಗಳಿದ್ದವು. ಲೆನಿಂಜೆನ್ ನದಿಗೆ ಅಡ್ಡಲಾಗಿ ಒಂದು ಸಣ್ಣ ಒಡ್ಡನ್ನು ನಿರ್ಮಿಸಿದ್ದ. ಅದರ ಗೇಟು ತೆರೆದರೆ ಕಾಲುವೆಗೆ ನೀರು ಹರಿಯುತ್ತಿತ್ತು.
ಹಿಂದಿನ ಕಾಲದಲ್ಲಿ ಊರಿನ ಸುತ್ತ ಒಂದು ಕಾಲುವೆ ಇರುವುದನ್ನು ನೀವು ಗಮನಿಸಿರಬಹುದು. ಕಾಲುವೆ, ವೈರಿಗಳಿಂದ ರಕ್ಷಣೆ ಪಡೆಯುವ ಪ್ರಮುಖ ಅಸ್ತ್ರವಾಗಿರುತ್ತಿತ್ತು. ಕಾಲುವೆಗೆ ಬೇಕೆಂದಾಗ ನೀರು ಹರಿಸಬಹುದಿತ್ತು. ಇಂದು ಕಾಲುವೆ ತುಂಬಿ ಹರಿಯುತ್ತಿತ್ತು. ಈ ರಕ್ಕಸ ಇರುವೆಗಳು ತೆಪ್ಪ ಕಟ್ಟಿ ಕಾಲುವೆ ದಾಟುವಷ್ಟು ಬುದ್ಧಿವಂತರಾಗಿದ್ದರೆ ಮಾತ್ರ ಅವು ಈಚೆ ದಡ ಸೇರಬಹುದಿತ್ತು! ಈ ವಿಷಯದಲ್ಲಿ ಲೆನಿಂಜೆನ್ ನಿಶ್ಚಿಂತನಾಗಿದ್ದ.
ಹನ್ನೆರಡು ಅಡಿ ಅಗಲದ ಕಾಲುವೆ ಈ ರಕ್ಕಸ ಇರುವೆಗಳನ್ನು ತಡೆಯಲು ಸಾಕೆಂದೇ ಲೆನಿಂಜೆನ್ನ್ ಅಭಿಪ್ರಾಯವಾಗಿತ್ತು. ಇರುವೆಗಳ ಆಗಮನದ ನಿರೀಕ್ಷೆಯಲ್ಲಿದ್ದ ಲೆನಿಂಜೆನ್ ತನ್ನ ಸುರಕ್ಷತೆಯ ಕ್ರಮಗಳಲ್ಲಿ ಕೆಲವು ಬದಲಾವಣೆಗಳನ್ನು ಮಾಡತೊಡಗಿದ. ಕಾಲುವೆಯು ಪಶ್ಚಿಮ ದಿಕ್ಕಿನಲ್ಲಿ ಹುಣಸೆಮರಗಳ ತೋಪಿನ ಮಧ್ಯೆ ಸಾಗಿತ್ತು. ಇಲ್ಲಿ ಕೆಲವು ದೈತ್ಯ ಮರಗಳ ಕೊಂಬೆಗಳು ಕಾಲುವೆಯೊಳಗೆ ಬಾಗಿದ್ದವು. ಇರುವೆಗಳು ಇವುಗಳ ಮುಖಾಂತರ ಕಾಲುವೆ ದಾಟುವ ಸಂಭವವಿತ್ತು. ಆದ್ದರಿಂದ ಅವುಗಳನ್ನು ಕತ್ತರಿಸಲು ಲೆನಿಂಜೆನ್ ಆದೇಶಿಸಿದ.
ಲೆನಿಂಜೆನ್ ತೋಟದೊಳಗಿನಿಂದ ಹೆಣ್ಣು ಮಕ್ಕಳು, ಮಕ್ಕಳು ಮತ್ತು ಪಶು ಪಕ್ಷಿಗಳನ್ನು ಹೊಳೆಯಾಚೆಯ ಸುರಕ್ಷಿತ ಸ್ಥಳಗಳಿಗೆ ಸಾಗಿಸಿದ.. ಹಾಗಂತ ಅವನಿಗೆ ತನ್ನ ಸುರಕ್ಷಿತ ಕ್ರಮಗಳ ಬಗ್ಗೆ ಅನುಮಾನವಿತ್ತೆಂದು ಅಲ್ಲ.
“ಜಾನುವಾರುಗಳು, ಹೆಣ್ಮಕ್ಕಳು ಆತಂಕಗೊಂಡರೆ ಹೋರಾಟಗಾರರ ಧೈರ್ಯ ಕುಂದುತ್ತದೆ.” ಎಂದು ಅವನು ತನ್ನ ಕೆಲಸಗಾರರಿಗೆ ಯವಾಗಲೂ ಹೇಳುತ್ತಿದ್ದ.
ಹೊರ ಕಾಲುವೆಯ ಒಳಗೆ ಮತ್ತೊಂದು ಸಣ್ಣ ಕಾಲುವೆ ಇತ್ತು. ಇದು ಮೇಲೆ ಎತ್ತರದ ಗುಡ್ಡದಲ್ಲಿ ನಿರ್ಮಿಸಿದ್ದ ಕುದುರೆ ಲಾಯ ಮತ್ತು ಕೊಟ್ಟಿಗೆಗಳವರೆಗೂ ಹಬ್ಬಿತ್ತು. ಇದು ಕಾಂಕ್ರಿಟಿನಲ್ಲಿ ನಿರ್ಮಿಸಿದ್ದ ಕಾಲುವೆಯಾಗಿತ್ತು. ಈ ಸಣ್ಣ ಕಾಲುವೆಯೊಳಗೆ ಮೂರು ಬೃಹತ್ ಗಾತ್ರದ ಪೆಟ್ರೋಲ್ ಟ್ಯಾಂಕಿನ ಪೈಪುಗಳನ್ನು ಇಳಿಬಿಡಲಾಗಿತ್ತು. ಒಂದು ವೇಲೆ ರಕ್ಕಸ ಇರುವೆಗಳು ನೀರು ಕಾಲುವೆಯನ್ನು ದಾಟಿ ಒಳಗೆ ಬಂದರೂ ಪೆಟ್ರೋಲ್ ಕಾಲುವೆಯನ್ನು ದಾಟಿ ಬರುವುದು ಸಾಧ್ಯವೇ ಇರಲಿಲ್ಲ.
ಲೆನಿಂಜೆನ್ ದೊಡ್ಡ ಕಾಲುವೆಯ ಹಿಂದೆ ಅಲ್ಲಲ್ಲಿ ತನ್ನ ಕೆಲಸಗಾರರನ್ನು ನಿಲ್ಲಿಸಿದ. ಸಮಧಾನವಾದ ನಂತರ ಅವನು ನಿಶ್ಚಿಂತೆಯಿಂದ ಎರಡು ಮರಗಳಿಗೆ ಕಟ್ಟಿದ್ದ ತೂಗೂಯ್ಯಾಲೆಯಲ್ಲಿ ಕುಳಿತು ತನ್ನ ನಂದಿ ಹೋಗಿದ್ದ ಚಿರೂಟನ್ನು ಹೊತ್ತಿಸಿದ. ಹಾಗೆಯೇ ಅವನಿಗೆ ಜೋಂಪು ಹತ್ತಿತು. ಅಷ್ಟರಲ್ಲಿ ತೋಟದ ಹೊರಗೆ ಕಾವಲು ನಿಂತಿದ್ದ ಕೆಲಸಗಾರ ತರಾತುರಿಯಿಂದ ಓಡಿ ಬಂದ. ದಕ್ಷಿಣದ ಕಡೆಯಿಂದ ರಾಕ್ಷಸ ಇರುವೆಗಳು ಬರುತ್ತಿರುವುದು ಕಾಣಿಸುತ್ತಿದೆ ಎಂದು ಅವನು ಸುದ್ಧಿ ಮುಟ್ಟಿಸಿದ.
ಈ ಸುದ್ಧಿಯನ್ನು ಕೇಳುತ್ತಿದ್ದಂತೆ ಲೆನಿಂಜೆನ್ ಎಚ್ಚರಗೊಂಡ. ಉಯ್ಯಾಲೆಯಿಂದ ಕೆಳಗೆ ಜಿಗಿದು ಕುದುರೆಯನ್ನು ಹತ್ತಿದ. ಇದುವರೆಗೆ ಚಡಪಡಿಸುತ್ತಾ ನಿಂತಿದ್ದ ಕುದುರೆ ಉತ್ಸಾಹದಿಂದ ದಣಿಯನ್ನು ಹೊತ್ತುಕೊಂಡು ಗೇಟಿನ ಕಡೆಗೆ ದೌಡಾಯಿಸಿತು. ತೋಟದ ದಕ್ಷಿಣದ ದಿಕ್ಕಿನ ವಿಸ್ತೀರ್ಣವು ಸುಮಾರು ಮೂರು ಮೈಲುಗಳಷ್ಟಿತ್ತು. ಈ ಪ್ರದೇಶವು ಎತ್ತರದಲ್ಲಿತ್ತು. ಇದರ ಮಧ್ಯದಿಂದ ನೋಡಿದರೆ ಲೆನಿಂಜೆನ್ನನ ತೋಟವೆಲ್ಲಾ ಕಾಣಿಸುತ್ತಿತ್ತು. ಈ ಜಾಗವು ಲೆನಿಂಜೆನ್ ಮತ್ತು ಇಪ್ಪತ್ತು ಚದರ ಮೈಲುಗಳಷ್ಟು ಹಬ್ಬಿದ್ದ ರಾಕ್ಷಸ ಇರುವೆಗಳ ಸಂಘರ್ಷದ ಕೇಂದ್ರವಾಗಲಿತ್ತು.
ಆ ದೃಶ್ಯವನ್ನು ಕಂಡವರು ಸಾಯುವವರೆಗೂ ಅದನ್ನು ಮರೆಯಲು ಸಾಧ್ಯವಿರಲಿಲ್ಲ. ದೂರದ ಗುಡ್ಡದ ಮೇಲಿನಿಂದ ದಟ್ಟವಾದ ಕರಿ ಛಾಯೆ ಮೂಡಿಬರುತ್ತಿತ್ತು. ದಟ್ಟ ಅಂಧಕಾರ ಕವಿದಂತೆ ಅದು ಅವನು ನೋಡು ನೋಡುತ್ತಿದ್ದಂತೆ ಅದು ಗುಡ್ಡದ ಬುಡದವರೆಗೆ ಮೆಲ್ಲಗೆ ಹಬ್ಬಿತು. ಬಿರಿದ ಅಣೆಕಟ್ಟಿನಿಂದ ಕರಿ ನೀರು ಹರಿದು ಬರುವಂತೆ ಅದು ವಿಸ್ತಾರಗೊಂಡು ಮುನ್ನುಗ್ಗತೊಡಗಿತು. ಪೂರ್ವದಿಂದ ಪಶ್ಚಿಮದ ವರೆಗೆ ಅದು ವಿಸ್ತಾರಗೊಂಡು ಬರುತ್ತಿರುವಂತೆ ಅದಕ್ಕೆ ಎದುರಾದ ಹಸಿರು ಬರಿದಾಗತೊಡಗಿತು. ಯಾರೋ ಕತ್ತಿಯಲ್ಲಿ ಕತ್ತರಿಸುತ್ತಿರುವಂತೆ ಅದಕ್ಕೆ ಎದುರಾದ ಒಂದು ಹಸಿರು ಕಡ್ಡಿಯೂ ಭೂಮಿಯ ಮೇಲೆ ಉಳಿಯಲಿಲ್ಲ.
ಕೊನೆಗೂ ಉಕ್ಕಿ ಬರುತ್ತಿರುವ ರಕ್ಕಸ ಇರುವೆಗಳನ್ನು ಎದುರುಗೊಳ್ಳುವ ಸಂದರ್ಭವು ಬಂದಿತ್ತು. ಆತಂಕದಿಂದ ಉಸಿರು ಬಿಗಿ ಹಿಡಿದು ಅತಂತ್ರ ಸ್ಥಿತಿಯಲ್ಲಿ ನಿಂತಿದ್ದ ಕೆಲಸಗಾರರು ಪಿಸಿ ಪಿಸಿ ಮಾತನಾಡತೊಡಗಿದರು. ಕೆಲವರು ಇರುವೆಗಳಿಗೆ ಶಾಪಹಾಕತೊಡಗಿದರು ಕೆಲವರು ಭಯ ಪ್ರೇರಿತ ಸಿಟ್ಟಿನಿಂದ ಕೂಗತೊಡಗಿದರು. ಕಾಲುವೆ ಮತ್ತು ಇರುವೆಗಳ ಮಧ್ಯದ ಅಂತರ ಕಡಿಮೆಯಾಗುತ್ತಿದ್ದಂತೆ ಸುತ್ತ ಒಮ್ಮೆಲೇ ಮೌನ ರಾರಾಜಿಸಿತು. ಇದುವರೆಗೂ ದಣಿಗಳ ಮೇಲಿದ್ದ ಅವರ ವಿಶ್ವಾಸ ಮೆಲ್ಲಗೆ ಕರಗತೊಡಗಿತು.
ತನ್ನ ಕೆಲಸಗಾರರ ಮನಸ್ಥಿತಿಯನ್ನು ಅರ್ಥ ಮಾಡಿಕೊಂಡ ಲೆನಿಂಜೆನ್ ಅವರನ್ನು ಹುರಿದುಂಬಿಸಲು ಉತ್ತೇಜಿಸುವ ಮಾತುಗಳಿಂದ ನಂದಿ ಹೋಗುತ್ತಿರುವ ಬೆಂಕಿಗೆ ಗಾಳಿ ಹಾಕುವ ಪ್ರಯತ್ನಪಟ್ಟನಾದರೂ ಅವನ ಎದೆಯೊಳಗೂ ಯಾವುದೋ ಮೂಲೆಯಿಂದ ಅಧೈರ್ಯ ಮೆಲ್ಲನೆ ಮೇಲೇಳತೊಡಗಿತು. ಮುನ್ನುಗ್ಗಿ ಬರುತ್ತಿದ್ದ ರಕ್ಕಸ ಇರುವೆಗಳ ಸೈನ್ಯದ ಮುಂದೆ ತಾನು ಕಟ್ಟಿಸಿದ್ದ ನೀರು ಕಾಲುವೆ ಯಾವ ಲೆಕ್ಕಕ್ಕೆ ಎಂಬ ಅನುಮಾನ ಕಾಡತೊಡಗಿತು. ತಮ್ಮ ಭಯಾನಕ ಕೊಂಡಿಗಳನ್ನು ಎತ್ತಿಕೊಂಡು ಎದುರಿಗೆ ಸಿಕ್ಕಿದ್ದನ್ನು ಉಗುಳು ನುಂಗುವಷ್ಟರಲ್ಲಿ ಸ್ವಾಹಾ ಮಾಡಿಕೊಂಡು ಬರುತ್ತಿರುವ ರಕ್ಕಸ ಕಪ್ಪು ಇರುವೆಗಳನ್ನು ಕಂಡು ಅವನ ಆತ್ಮವಿಶ್ವಾಸ ಉಡುಗತೊಡಗಿತ್ತು.
ಮನುಷ್ಯನ ಬುದ್ಧಿವಂತಿಕೆಗೂ ಒಂದು ಮಿತಿ ಇರುತ್ತದೆ. ತಾನು ನುಂಗುಲು ಸಾದ್ಯವಿಲ್ಲದಷ್ಟು ದೊಡ್ಡ ತುತ್ತನ್ನು ಬಾಯಿಗೆ ಹಾಕಿಲ್ಲವಷ್ಟೇ ಎಂಬ ಅನುಮಾನ ಅವನಿಗೆ ಕಾಡತೊಡಗಿತು. ಒಂದು ವೇಳೆ ಕೆಲವು ಇರುವೆಗಳು ಆತ್ಮ ಸಮರ್ಪಣೆಗೆ ಮುಂದಾಗಿ ತಮ್ಮದೇ ಸೇತುವೆ ನಿರ್ಮಿಸಿಕೊಂಡರೂ ಉಳಿದ ಇರುವೆಗಳು ತನ್ನ ತೋಟವನ್ನು ನಾಶ ಪಡಿಸುವುದು ಅಸಾಧ್ಯದ ಮಾತಾಗಿರಲಿಲ್ಲ. ಆದರೆ ಹಾಗಾಗಲು ತಾನು ಖಂಡಿತ ಬಿಡುವುದಿಲ್ಲ! ತನ್ನ ಮನಸ್ಸಿನೊಳಗಿನಿಂದ ಇಂತ ಪುಕ್ಕಲು ಭಾವನೆಗಳನ್ನು ಕೊಡವಿ ಅವನು ಹೊಸ ಹುರುಪಿನಿಂದ ಎದ್ದು ನಿಂತ. ತಾನು ಧೈರ್ಯ ಕಳೆದುಕೊಳ್ಳದವರೆಗೂ ಇರುವೆಗಳಷ್ಟೇ ಅಲ್ಲದೆ ಯಾವುದನ್ನೂ ಜಯಿಸಬಲ್ಲೆ ಎಂದುಕೊಳ್ಳುತ್ತಾ ಇರುವೆಗಳನ್ನು ಎದುರುಗೊಳ್ಳಲು ಸಿದ್ಧನಾದ.
ಸೈನಿಕರ ತುಕಡಿಗಳಲ್ಲೇನಾದರೂ ತಪ್ಪು ಕಂಡು ಹಿಡಿಯಬಹುದಿತ್ತು. ಆದರೆ ಈ ರಕ್ಕಸ ಇರುವೆಗಳ ಸೈನ್ಯ ಯಾವುದೇ ಆತುರ ತೋರದೆ ಯೋಜನಾಬಧ್ಧವಾಗೆಂಬಂತೆ ಸಾಗಿ ಬರುತ್ತಿತ್ತು. ಅವುಗಳ ಮತ್ತು ಕಾಲುವೆಯ ಮಧ್ಯ ಅಂತರ ಕಡಿಮೆಯಾಗುತ್ತಲೇ ಬರುತ್ತಿತ್ತು. ಇರುವೆಗಳ ಮುಖ್ಯ ತುಕಡಿಯಿಂದ ಬೇರ್ಪಟ್ಟು ಮುಂಭಾಗದಲ್ಲೊಂದು ತುಕಡಿ ಬರುತ್ತಿತ್ತು. ಬಹುಶಃ ಇದು ಮಾಹಿತಿ ಸಂಗ್ರಹಿಸಿ ಮುಖ್ಯ ತುಕಡಿಗೆ ರವಾನಿಸುತ್ತಿತ್ತು. ಅವುಗಳಿಗೆ ಕಾಲುವೆ ಅಡ್ಡ ಇರುವ ಸುದ್ಧಿ ಮುಟ್ಟುತ್ತಿದ್ದಂತೆಯೇ ಹಿಂದೆ ಸಾಗರದಂತಿದ್ದ ಅಗಾಧ ಇರುವೆ ಸೇನೆ ಎಡ, ಬಲ ಮತ್ತು ಮಧ್ಯ, ಹೀಗೆ ಮೂರು ಹೋಳಾಯಿತು. ಮದ್ಯದ ತುಕಡಿ ಮುಂದೆ ಬರತೊಡಗಿದರೆ, ಉಳಿದೆರಡು ತುಕಡಿಗಳು ಕಾಲುವೆಯ ಪೂರ್ವ ಮತ್ತು ಪಶ್ಚಿಮದ ಕಡೆಗೆ ತಿರುಗಿದವು.
ಇಂತದೊಂದು ಅಡೆ ತಡೆ ಇರುವೆಗಳು ಮೊದಲೇ ಅಂದಾಜಿಸಿದ್ದವೇನೋ! ಯಾವುದೇ ಗೊಂದಲವಿಲ್ಲದಂತೆ ಹೊಸ ಯೋಜನೆ ಜಾರಿಗೊಳಿಸಲು ಅವುಗಳಿಗೆ ಭರ್ತಿ ಒಂದು ತಾಸು ಹಿಡಿಯಿತು. ಎಲ್ಲಾದರೂ ಒಂದು ಜಾಗದಲ್ಲಿ ಕಾಲುವೆ ದಾಟಲು ಜಾಗ ಸಿಗುವುದೆಂಬ ಧೃಡ ಆತ್ಮವಿಶ್ವಾಸ ಅವುಗಳಲ್ಲಿತ್ತು.
ಮೂಲ ತುಕಡಿಯಿಂದ ಬೇರ್ಪಟ್ಟು ಕಾಲುವೆಯ ಇಕ್ಕೆಲಗಳಿಗೂ ಸರಿದ ಇರುವೆಗಳು ನೆಲೆಗೊಳ್ಳುವವರೆಗೂ ಮಧ್ಯದಲ್ಲಿದ್ದ ಮುಂಚೂಣಿ ದಳದ ಇರುವೆಗಳು ಸಹನೆಯಿಂದ ಕಾದು ನಿಂತವು. ಅಲ್ಲೀವರೆಗೂ ಅವುಗಳಿಗೆ ಕಾಲುವೆಯ ಒಳಭಾಗದಲ್ಲಿ ನಿಂತು ತಮ್ಮನ್ನೇ ಬಿಟ್ಟ ಕಂಗಳಿಂದ ನೋಡುತ್ತಾ ನಿಂತಿದ್ದ ಲೆನಿಂಜೆನ್ನನ ಕೆಲಸಗಾರರನ್ನು, ಅಂದರೆ ಶತ್ರುಗಳನ್ನು ಗಮನವಿಟ್ಟು ನೋಡುವ ಅವಕಾಶ ಲಭಿಸಿತು. ಉದ್ದ ಕಾಲಿನ ಕಪ್ಪು-ಕೆಂಪು ವರ್ಣದ ಇರುವೆಗಳು ಸುಮಾರು ಕಿರುಬೆರಳು ಗಾತ್ರದಷ್ಟಿದ್ದವು. ಲೆನಿಂಜೆನ್ನನ ಕೆಲವು ಕೆಲಸಗಾರರಿಗೆ ಅವುಗಳ ಕಣ್ಣುಗಳಿಂದ ಹೊರಸೂಸುವ ಶೀತಲ ಕಿರಣಗಳಷ್ಟೇ ಅಲ್ಲದೆ ಒಂದು ಧೃಡ ನಿಶ್ಚಯವೂ ಎದ್ದು ಕಾಣುತ್ತಿತ್ತು. ಅವುಗಳ ಹರಿತವಾದ ಕೊಂಡಿಗಳು ಬಿಸಿಲಿಗೆ ಫಳಫಳಿಸುತ್ತಿದ್ದವು.
– ಜೆ.ವಿ. ಕಾರ್ಲೊ
ಮುಂದುವರೆಯುವುದು…
ಕಾರ್ಲೋ ಸರ್,
ತುಂಬಾ ಕುತೂಹಲಭರಿತ ಕತೆ. ಜಗತ್ತಿನ ಕತೆಗಳನ್ನು ಓದಿ, ಉತ್ತಮವಾದವನ್ನು ಆಯ್ದು ನಮಗೆ ಉಣಬಡಿಸುವ ನಿಮ್ಮ ಪರಿ ನನಗೆ ಯಾವಾಗಲೂ ಇಷ್ಟ. ದೈತ್ಯ ಇರುವೆಗಳ ಬಗ್ಗೆ ಓದಿದ್ದೆ. ಆದರೆ ಅವುಗಳನ್ನು ಇಷ್ಟು ಹತ್ತಿರದಿಂದ ಎದುರಿಸಿರಲಿಲ್ಲ! ಮುಂದಿನ ವಾರಕ್ಕಾಗಿ ಕಾಯುತ್ತಿರುವೆ …
Thank you ಗುರುಪ್ರಸಾದ್. ನಿಮ್ಮ ಸರಣಿ ಕೂಡ ಸೊಗಸಾಗಿದೆ.
[…] ಇಲ್ಲಿಯವರೆಗೆ […]