ಆಕ್ರಮಣ (ಕೊನೆಯ ಭಾಗ): ಜೆ.ವಿ. ಕಾರ್ಲೊ

ಇಲ್ಲಿಯವರೆಗೆ

ಲೆನಿಂಜೆನ್ನನಿಗೆ ಒಮ್ಮೆಲೇ ಸಿಡಿಲು ಹೊಡೆದಂತೆ ಜ್ಞಾಪಕಕ್ಕೆ ಬಂದಿತು: ಔಟ್ ಹೌಸಿನಲ್ಲಿ ಈ ವರೆಗೆ ಉಪಯೋಗಿಸದಿದ್ದ ಎರಡು ಫೈರ್ ಎಂಜಿನುಗಳು ಹಾಗೇ ತುಕ್ಕು ಹಿಡಿದು ಬಿದ್ದಿದ್ದವು. ಲೆನಿಂಜೆನ್ ಅವಗಳನ್ನು ಹೊರಗೆಳೆಸಿ ಪೆಟ್ರೊಲ್ ಟ್ಯಾಂಕಿಗೆ ಜೋಡಿಸಿದ. ಅಷ್ಟರಲ್ಲಿ ಕೆಲವು ಇರುವೆಗಳು ಮೇಲೆ ಹತ್ತಿದ್ದವು. ಫೈರ್ ಎಂಜಿನುಗಳು ಸ್ಟಾರ್ಟ್ ಆಗುತ್ತಲೇ ಪೆಟ್ರೊಲನ್ನು ಇರುವೆಗಳ ಮೇಲೆ ಹರಿಸಿ ಮತ್ತೆ ಅವುಗಳನ್ನು ಕಾಲುವೆಗೆ ದಬ್ಬಲಾಯಿತು ಮತ್ತು ಕಾಲುವೆಗೆ ಮೊದಲಿನಂತೆ ಪೆಟ್ರೋಲು ಹರಿಯಲಾಂಭಿಸಿತು. ಕೆಲ ಹೊತ್ತಿನ ಮಟ್ಟಿಗಾದರೂ ಲೆನಿಂಜೆನ್ ಇರುವೆಗಳನ್ನು ತಡೆಯುವುದರಲ್ಲಿ ಯಶಸ್ವಿಯಾಗಿದ್ದ.

ಆದರೂ ಈ ಹೋರಾಟ ತಾತ್ಕಾಲಿಕವೆಂದು ಲೆನಿಂಜೆನ್ನನಿಂದ ಹಿಡಿದು ಕೆಲಸಗಾರರೆಲ್ಲರಿಗೂ ಗೊತ್ತಾಯಿತು. ಒಂದು ಕಡೆಯಿಂದ ಇರುವೆಗಳನ್ನು ತಡೆಹಿಡಿಯಲು ಲೆನಿಂಜೆನ್ ಯಶಸ್ವಿಯಾದರೆ ಅವು ಮತ್ತೊಮದು ದಾರಿ ಹುಡುಕುತ್ತಿದ್ದವು. ಕೆಲವು ಕೆಲಸಗಾರರು ಮೊಣಕಾಲೂರಿ ಬೇಡಿಕೊಳ್ಳಹತ್ತಿದರೆ ಮತ್ತೆ ಕೆಲವರು ಹುಚ್ಚು ಹಿಡಿದಂತೆ ಚೀರತೊಡಗಿದರು.
ಅವರೆಲ್ಲ ನೋಡುತ್ತಿದ್ದಂತೆ ಇಬ್ಬರು ಕೆಲಸಗಾರರು ಬಟ್ಟೆ ಕಳಚಿ ಪೆಟ್ರೊಲ್ ಕಾಲುವೆಯನ್ನು ಹಾರಿ ಉತ್ತರಕ್ಕೆ ನದಿಯ ಕಡೆಗೆ ಓಡತೊಡಗಿದರು. ದುರಾದೃಷ್ಟವಶಾತ್ ಅವರು ನದಿಯ ಬದಿಯಲ್ಲಿದ್ದ ತೆಪ್ಪಗಳನ್ನು ಮುಟ್ಟುವ ಮೊದಲೇ ಇರುವೆಗಳು ಅವರ ಮೇಲೆ ಆಕ್ರಮಣ ನಡೆಸಿದ್ದವು. ರಕ್ಕಸ ಇರುವೆಗಳು ಅವರನ್ನು ಅಡಿಯಿಂದ ಮುಡಿಯವರೆಗೆ ಮುತ್ತಿಕೊಂಡವು.
ನೋವಿನಿಂದ ಅರಚುತ್ತಾ ಅವರು ನದಿಗೆ ದುಮುಕಿದರು. ನದಿಯೊಳಗೆ ಇರುವೆಗಳಿಗಿಂತ ದೊಡ್ಡ ಶತ್ರುಗಳು ಅವರನ್ನು ಕಾಯುತ್ತಿದ್ದವು! ನೀರಿಗೆ ನೆಗೆದಿದ್ದ ಅವರ ಭಯಾನಕ ಕಿರಿಚಾಟ ಕೇಳಿ ದಂಗಾಗಿದ್ದ ಇತರ ಕೆಲಸಗಾರರ ಮೈ ರೋಮಗಳು ನಿಮಿರಿ ನಿಂತವು. ಮೊಸಳೆಗಳು ಮತ್ತು ಪಿರ್ಹಾನ ಮೀನುಗಳು ರಕ್ಕಸ ಕಪ್ಪು ಇರುವೆಗಳಿಗಿಂತ ಕ್ರೂರವಾಗಿದ್ದವು.
ಬಹಳಷ್ಟು ಕೆಲಸಗಾರರಿಗೆ ಮೈಮೇಲೆ ಹತ್ತಿ ಬರುವ ಇರುವೆಗಳಿಗೆ ಆಹಾರವಾಗುವ ಬದಲು ಒಮ್ಮೆಲೇ ನದಿಯೊಳಗಿನ ಶತ್ರುಗಳಿಗೆ ಆಹಾರವಾಗುವುದು ಲೇಸೆಂದು ಅನಿಸಿರಬೇಕು. ಕೆಲವರು ನದಿಯ ಕಡೆಗೆ ಓಡತೊಡಗಿದರು.

ನರಕ ಕೂಪದಿಂದ ಎದ್ದು ಬಂದಂತ ಈ ಇರುವೆಗಳಿಗೆ ಮತ್ತೆ ಅಲ್ಲೇ ಕಳುಹಿಸುವ ಉಪಾಯ ಲೆನಿಂಜೆನ್ನನ ತಲೆಯೊಳಗೆ ಮಥಿಸುತ್ತಲೇ ಇತ್ತು.
ಒಮ್ಮೆಲೇ ಅವನ ತಲೆಯೊಳಗೆ ಒಂದು ವಿಚಾರ ಹೊಳೆಯಿತು. ಈ ಸಂದರ್ಭಕ್ಕೆ ಅದೇ ಸರಿಯಾದ ಉಪಾಯವೆಂದು ಅವನು ಬಗೆದ. ಅವನ ಬಂಗಲೆ, ಗೋದಾಮು, ಕುದುರೆ ಲಾಯ, ಕೊಟ್ಟಿಗೆ ಮತ್ತು ಕೆಲಸದಾಳುಗಳ ವಸತಿ ಸಂಕೀರ್ಣ ಎತ್ತರದ ಪ್ರದೇಶದಲ್ಲಿದ್ದವು. ಎಸ್ಟೇಟು ಅರ್ಧ ಚಂದ್ರಾಕೃತಿಯಲ್ಲಿದ್ದು ಹಿಂಭಾಗದಲ್ಲಿ ನದಿ ಹರಿಯುತ್ತಿತ್ತು. ಎಸ್ಟೆಟಿನ ಸುತ್ತ ನೀರಿನ ಕಾಲುವೆ ಹರಿಯುತ್ತಿತ್ತು. ಹೆಚ್ಚಿನ ಸುರಕ್ಷತೆಗೆ ಬಂಗಲೆಯ ಸುತ್ತ ಪೆಟ್ರೊಲ್ ಕಾಲುವೆ ಇತ್ತು. ಉತ್ತರಕ್ಕೆ, ಎರಡು ಮೈಲು ದೂರದಲ್ಲಿ ನದಿಗೆ ಒಡ್ಡು ಕಟ್ಟಲಾಗಿತ್ತು. ಒಡ್ಡಿನ ಗೇಟನ್ನು ಪೂರ್ತಿ ತೆರೆದರೆ ಅರ್ಧ ಗಂಟೆ ಅಥವಾ ಅದಕ್ಕಿಂತ ಮುನ್ನವೇ ಕಾಲುವೆಯಲ್ಲಿ ಮಾತ್ರವಲ್ಲ ತೋಟದೊಳಗೂ ತುಂಬುತ್ತಿತ್ತು. ರಾಕ್ಷಸ ಇರುವೆಗಳು ನೀರಿನೊಳಗೆ ನಾಶವಾಗುವುದರಲ್ಲಿ ಯಾವುದೇ ಸಂಶಯವಿರಲಿಲ್ಲ. ಎತ್ತರದಲ್ಲಿದ್ದ ಬಂಗಲೆ ಇತ್ಯಾದಿ ಕಟ್ಟಡಗಳವರೆಗೆ ನೀರು ಏರುವ ಸಂಭವವಿರಲಿಲ್ಲ. ಕೆಲವು ಸಾಹಸಿ ಇರುವೆಗಳು ಮೇಲತ್ತಲು ಪ್ರಯತ್ನಪಟ್ಟರೂ ಪೆಟ್ರೋಲ್ ಕಾಲುವೆಯಿಂದಾಗಿ ಖಂಡಿತ ಸಾಧ್ಯವಾಗಲಾರದು.

ಈ ಯೋಜನೆ ಯಶಸ್ವಿಯಾಗುವುದರಲ್ಲಿ ಲೆನಿಂಜೆನ್ನನಿಗೆ ಯಾವುದೇ ಸಂಶಯಗಳಿರಲಿಲ್ಲ. ಆದರೆ ಗೇಟು ತೆರೆಯಲು ಒಡ್ಡಿನ ಬಳಿಗೆ ಯಾರನ್ನು ಕಳುಹಿಸುವುದೆಂಬುದೇ ಒಂದು ದೊಡ್ಡ ಪ್ರಶ್ನೆ ಅವನನ್ನು ಕಾಡುತ್ತಿತ್ತು. ಎರಡು ಮೈಲು ದೂರ! ಅದೂ ಇರುವೆಗಳ ಮಧ್ಯದಿಂದ! ಮೊದಲು ನದಿಗೆ ಹಾರಿದವರ ಬೆನ್ನು ಹಿಡಿದು ಓಡುತ್ತಿದ್ದ ಕೆಲಸಗಾರರು ಕಾಲು ದಾರಿಯನ್ನೂ ಕ್ರಮಿಸಿರಲಿಲ್ಲ. ಇಷ್ಟೆಲ್ಲ ಅರಿವಿದ್ದೂ ಒಡ್ಡಿನ ಕಡೆಗೆ ಹೋಗುವ ಎದೆಗಾರ ಕೆಲಸಗಾರನನ್ನು ಹುಡುಕುವುದು ಸಾಧ್ಯವೇ ಇರಲಿಲ್ಲ. ಒಂದು ವೇಳೆ ಹೋದರೂ ವಾಪಸ್ಸು ಬರುವ ಧೈರ್ಯವಿರಲಿಲ್ಲ.

ಈಗ ಒಂದೇ ದಾರಿ ಉಳಿದಿತ್ತು. ತಾನೇ ಈ ಸಾಹಸಕ್ಕಿಳಿಯುವುದು. ಹಾಗೆಂದು ಈ ಯೋಜನೆ ಸಫಲವಾಗುವುದೆಂಬ ಖಾತ್ರಿ ಏನೂ ಇರಲಿಲ್ಲ. ಅವನೇನು ದೇವಪುರುಷನೇ? ಹಾಗೆಂದು ಈ ಇರುವೆಗಳೂ ಕೂಡ ಅವಿನಾಶಕಾರಿಯೂ ಅಲ್ಲ! ನಾಗರ ಹಾವು ಹೆಡೆ ಎತ್ತಿ ಶಿಕಾರಿಯನ್ನು ಯಕ್ಷಿಗೊಳಪಡಿಸಿದಂತೆ ಈ ಇರುವೆಗಳೂ ತನ್ನ ಕೆಲಸಗಾರರ ಮೇಲೆ ಜಾದು ಬೀರಿವೆಯಷ್ಟೇ, ಎಂದು ತರ್ಕಿಸಿದನು.
ಇರುವೆಗಳು ಮತ್ತೆ ತೆಪ್ಪ ಕಟ್ಟಲು ಶುರುವಿಟ್ಟುಕೊಂಡಿದ್ದವು. ಲೆನಿಂಜೆನ್ ಒಂದು ಕುರ್ಚಿಯ ಮೇಲೆ ಹತ್ತಿ ತನ್ನ ಕೆಲಸಗಾರರನ್ನು ಉದ್ದೇಶಿಸಿ ಮಾತನಾಡತೊಡಗಿದ.

.”ಮಿತ್ರರೇ, ದಯವಿಟ್ಟು ನನ್ನ ಮಾತುಗಳನ್ನು ಕಿವಿಗೊಟ್ಟು ಕೇಳಿಸಿಕೊಳ್ಳಿ. ” ಅವರೆಲ್ಲಾ ಅವನ ಕಡೆಗೆ ತಿರುಗಿದರು. ಅವರ ಮುಖಗಳ ಮೇಲೆ ಮರಣದ ಛಾಯೆ ಎದ್ದು ಕಾಣುತ್ತಿತ್ತು.. “ನನಗೆ ಗೊತ್ತು ನೀವು ಆ ರಕ್ಕಸ ಇರುವೆಗಳ ಬಗ್ಗೆ ಭಯಭೀತರಾಗಿದ್ದಿರಿ. ಅವುಗಳಿಗಿಂತ ಹೆಚ್ಚಾಗಿ ನನ್ನ ಬಗ್ಗೆ!.. ಆದರೂ, ಈ ವರೆಗೂ ನೀವು ನನಗೆ ಸಹಕಾರವನ್ನಿತ್ತು ನನ್ನ ಜೊತೆಯಲ್ಲಿದ್ದೀರಿ. ಧನ್ಯವಾದಗಳು. ಇರುವೆಗಳನ್ನು ತಡೆಯಲು ನಾವು ಸೋಲುತ್ತಿದ್ದೇವೆಂದು ನಿಮಗೆ ಅನಿಸುತ್ತಿರುಬಹುದು. ಆದರೆ, ನಾನು ಇಷ್ಟು ಬೇಗ ಸೋಲನ್ನೊಪ್ಪಿಕೊಳ್ಳುವವನಲ್ಲ. ನಮಗೆ ಇನ್ನೂ ಅವಕಾಶವಿದೆ. ನದಿಯ ನೀರನ್ನು ತೋಟಕ್ಕೆ ತಿರುಗಿಸಿ ನೆರೆಯನ್ನುಂಟು ಮಾಡುವುದು. ನನಗೆ ಗೊತ್ತು. ನಿಮ್ಮ ಮಧ್ಯದಲ್ಲಿ ಯಾರಾದೊಬ್ಬರು ಒಡ್ಡಿನ ಬಳಿ ಹೋದರೂ ಜೀವಂತವಾಗಿ ಹಿಂದಕ್ಕೆ ಬರಲಾರರು. ಅಲ್ಲದೆ, ನಾನೂ ಕೂಡ ನಿಮ್ಮಲ್ಲ್ಯಾರನ್ನೂ ಕಳಿಸಲೂ ತಯಾರಿಲ್ಲ. ಆಗ, ನನಗೂ ಇರುವೆಗಳಿಗೂ ಯಾವುದೇ ವ್ಯತ್ಯಾಸವಿರುವುದಿಲ್ಲ! ಗಾನಸುಧೆ ಹರಿಸಲು ನಾನೇ ಹೇಳಿದ್ದೆ, ಅದರ ಶುಲ್ಕವನ್ನು ನಾನೇ ಭರಿಸುತ್ತೇನೆ..”

“ನಾನು ಪೆಟ್ರೋಲ್ ಕಾಲುವೆ ದಾಟುತ್ತಿದ್ದಂತೆಯೇ ಕಾಲುವೆಗೆ ಬೆಂಕಿ ಹಚ್ಚಿ. ಅದು ನಂದಿ ಹೋಗುವ ಮೊದಲೇ ನದಿಯ ನೀರು ಒಳನುಗ್ಗಲು ಶರುರುವಾಗುತ್ತದೆ. ನೀವೆಲ್ಲಾ ಒಂದೇ ಜಾಗದಲ್ಲಿ ಕಲೆತು ನಾನು ವಾಪಸ್ಸು ಬರುವುದನ್ನೇ ಕಾಯುತ್ತಿರಿ. ನಾನು ಖಂಡಿತ ವಾಪಸ್ಸು ಬರುತ್ತೇನೆ. ನನ್ನ ಮೇಲೆ ನಂಬಿಕೆ ಇಡಿ.”
ಅವನು ಎತ್ತರದ ಚರ್ಮದ ಬೂಟುಗಳನ್ನು ಧರಿಸಿ ಕೈಗಳಿಗೆ ಚರ್ಮದ ಗವಸುಗಳನ್ನು ಧರಿಸಿದ. ಬೂಟು ಮತ್ತು ಪ್ಯಾಂಟಿನ ಮಧ್ಯೆ, ಕೈಗವಸು ಮತ್ತು ಶರ್ಟಿನ ತೋಳುಗಳ ಮಧ್ಯೆ ಮತ್ತು ಶರ್ಟಿನ ಕಾಲರ್ ಮತ್ತು ಕುತ್ತಿಗೆಯ ಭಾಗಗಳಲ್ಲಿ ಪೆಟ್ರೋಲಿನಿಂದ ನೆನೆಸಿದ ಬಟ್ಟೆಯನ್ನು ಸುತ್ತಿದ. ಇರುವೆಗಳು ಮೊದಲು ಆಕ್ರಮಣ ನಡೆಸುವುದೇ ಕಣ್ಣುಗಳ ಮೇಲೆ ಎಂದು ಅವನಿಗೆ ಗೊತ್ತಿತ್ತು. ಕಣ್ಣುಗಳಿಗೆ ಅವನು ಸೊಳ್ಳೆ ನಿರೋಧಕ ಕನ್ನಡಕಗಳನ್ನು ಧರಿಸಿದ. ಕಿವಿ ಮತ್ತು ಮೂಗಿನ ಹೊಳ್ಳೆಗಳಿಗೆ ಹತ್ತಿಯನ್ನು ತುಂಬಿಸಿ, ಕೆಲಸದಾಳುಗಳಿಗೆ ತನ್ನ ಮೈಮೇಲೆ ಪೆಟ್ರೋಲನ್ನು ಸಿಂಪಡಿಸಲು ಹೇಳಿದ.

ಎಲ್ಲವನ್ನೂ ಮುಗಿಸಿ ಅವನು ಹೊರಡಲಣಿಯಾಗುತ್ತಿದ್ದಂತೆ ಒಬ್ಬ ವಯಸ್ಸಾದ ಕೆಲಸದಾಳು ಮುಂದೆ ಬಂದ. ಅವನ ಕೈಯಲ್ಲಿ ಚಿಕ್ಕದೊಂದು ಕಟೋರಿ ಇತ್ತು.ಅದರೊಳಗೆ ಅವನೇ ತಯಾರಿಸಿದ್ದ ಒಂದು ನಾಟಿ ಔಷದವಿತ್ತು. ಅದು ಯಾವುದೋ ಕಾಡು ಜಿರಲೆಗಳನ್ನು ಅರೆದು ತಯಾರಿಸಿದ್ದ ಔಷದವಂತೆ. ಅದನ್ನು ಮೈಗೆ ಹಚ್ಚಿಕೊಂಡರೆ, ಅದರ ವಾಸನೆಗೆ ಎಂತ ವಿಷಯುಕ್ತ ಕೀಟಗಳೂ ಹತ್ತಿರಕ್ಕೆ ಸುಳಿಯುವುದಿಲ್ಲವೆಂದು ಅವನ ನಂಬಿಕೆ. ಈ ದುರ್ವಾಸನೆಯೇ ಶತ್ರುಗಳಿಂದ ಜಿರಲೆಗಳಿಗೆ ರಕ್ಷಣಾ ಅಸ್ತ್ರವಂತೆ! ಲೆನಿಂಜೆನ್ ಅವನಿಗೆ ಅಡ್ಡಿ ಪಡಿಸಲಿಲ್ಲ. ಅದನ್ನೆಲ್ಲಾ ತನ್ನ ಮೈ ಮೇಲೆ ಹಚ್ಚಿಕೊಂಡ
ಈ ರಕ್ಕಸ ಇರುವೆಗಳು ತಮ್ಮ ಶಿಕಾರಿಯ ದೇಹದೊಳಗೆ ಚುಚ್ಚಿ ಬಿಡುವ ಯಾವುದೋ ವಿಷಕಾರಿ ದ್ರವ ಶಿಕಾರಿಯನ್ನು ನಿಶ್ಚೇಷ್ಟಿತಗೊಳಿಸಿದ್ದನ್ನು ಮುದುಕ ಕೆಲಸದಾಳು ಈ ಮೊದಲು ತಯಾರಿಸಿದ್ದ ಔಷದಿ ಹೇಗೆ ಪ್ರತಿರೋಧಕವಾಗಿ ಕೆಲಸ ಮಾಡಿತೆನ್ನುವುದನ್ನು ಅವರೆಲ್ಲಾ ನೋಡಿದ್ದರು. ಆದ್ದರಿಂದ ಲೆನಿಂಜೆನ್ ಆ ಔಷದಿಯನ್ನು ಮೂಗು ಮುಚ್ಚಿಕೊಂಡು ಕುಡಿದ. ಅವನ ಧ್ಯಾನವೆಲ್ಲಾ ಒಡ್ಡಿನ ಕಡೆಗಿತ್ತು.
ಅವನು ಪೆಟ್ರೊಲ್ ಕಾಲುವೆ ದಾಟಿ ಇರುವೆಗಳ ಸಾಗರದ ಮಧ್ಯದಿಂದ ಒಡ್ಡಿನ ಕಡೆಗೆ ನಡೆಯತೊಡಗಿದ.

ಇಇಲ್ಲಿ, ಪೆಟ್ರೊಲ್ ಕಾಲುವೆ ಉರಿದು ನಂದಿ ಹೋಗಿತ್ತು. ಕೆಲವು ಇರುವೆಗಳು ಕಾಲುವೆಯ ಒಳಗೋಡೆಗಯನ್ನು ಹತ್ತುತ್ತಿದ್ದವು. ಇಂದು ನಾಲ್ಕನೆಯ ಭಾರಿ ಕಾಲುವೆಯಲ್ಲಿ ಪೆಟ್ರೊಲ್ ಉರಿದಿತ್ತು. ಪೆಟ್ರೊಲ್ ಉರಿಯುತ್ತಿದ್ದ ಹಳದಿ ಕೆಂಪು ಮಿಶ್ರಿತ ವರ್ಣಕ್ಕೆ ಕೆಲಸಗಾರರ ಮುಖ ಗಾಬರಿ ಹಾಗೂ ಆಯಾಸದಿಂದ ಭಯಾನಕವಾಗಿ ಕಾಣಿಸುತ್ತಿದ್ದವಾದರೆ, ಇರುವೆಗಳು ಕೀಲಿ ಕೊಟ್ಟಂತೆ ಯಾಂತ್ರಿಕವಾಗಿ ತಮ್ಮ ಕಾಯಕದಲ್ಲಿ ತೊಡಗಿದ್ದವು. ಎಲ್ಲೆಡೆ ಕರ್ರಗಿನ ಟಾರು ಉಕ್ಕಿ ಬರುತ್ತಿರುವಂತೆ ಕಾಣಿಸುತ್ತಿತ್ತು. ಅತ್ತಗೆ, ಲೆನಿಂಜೆನ್ ಒಡ್ಡಿನ ಕಡೆಗೆ ಓಡುತ್ತಲೇ ಇದ್ದ. ಅವನ ತಲೆಯೊಳಗೆ ಒಂದೇ ವಿಚಾರ ಅನುರಣಿಸುತ್ತಲೇ ಇತ್ತು: ಆದಷ್ಟು ಬೇಗ ತಾನು ಒಡ್ಡಿನ ಬಳಿ ಹೋಗಲೇ ಬೇಕು. ಗಿಡ, ಮರ, ಪೊದೆಗಳಿತ್ಯಾದಿಗಳ ಅಡೆತಡೆಯನ್ನು ಅವನು ಅಂದಾಜಿಸಿದ್ದ. ನೆಲದ ಮೇಲೂ, ಇರುವೆಗಳು ಮೈಮೇಲೆ ಹತ್ತದಿರಲು ಎಷ್ಟು ವೇಗವಾಗಿ ಕಾಲೂರಿ ತೆಗೆಯಬೇಕೆಂದು ಅವನು ಅಂದಾಜಿಸಿದ್ದ. ಇಷ್ಟೆಲ್ಲ ಸುರಕ್ಷತೆಗಳ ನಡುವೆಯೂ ಎಲ್ಲಿ ಇರುವೆಗಳು ತನ್ನನ್ನು ಮುಗಿಸುತ್ತವೆಂದು ಅವನು ದಿಗಿಲುಗೊಂಡಿದ್ದ. ಆ ಮೊದಲೇ ಅವನು ಒಡ್ಡಿನ ಬಳಿ ಹೋಗುವುದು ಅಗತ್ಯವಾಗಿತ್ತು.

ವಯಸ್ಸಾದ ಕೆಲಸದಾಳಿನ ನಾಟೀ ಔಷದದ ಪ್ರಭಾವ ಚೆನ್ನಾಗಿತ್ತು. ಅರ್ಧ ದಾರಿ ಎಷ್ಟು ಜಾಗರೂಕತೆಯಿಂದ ಕ್ರಮಿಸಿದ್ದರೂ ಕೆಲವು ಇರುವೆಗಳನು ಅವನ ಮೈ ಹತ್ತಿದ್ದವು. ಕೆಲವು ಅವನ ಮುಖದ ಮೇಲೂ ಓಡಾಡುತ್ತಿದ್ದವು. ಯಾಂತ್ರಕವಾಗಿ ಅವನು ಅವುಗಳನ್ನು ಹೊಸೆದು ಹಾಕಿದ. ಅವನಿಗೂ ನೀರಿನ ಒಡ್ಡಿಗೂ ಮಧ್ಯದ ಅಂತರ ಕಡಿಮೆಯಾಗುತ್ತಲಿತ್ತು.

ಕೊನೆಗೂ ಅವನು ಒಡ್ಡಿನ ಬಳಿಗೆ ತಲುಪಿದ. ಗೇಟಿ ನಿಯಂತ್ರಿಸುವ ಚಕ್ರದ ಮೇಲೆ ಇರುವೆಗಳು ತುಂಬಿದ್ದವು. ಅವನು ಅದರ ಮೇಲೆ ಕೈ ಇಟ್ಟಿದ್ದೆ ತಡ, ರೋಷಗೆದ್ದ ಇರುವೆಗಳು ಅವನ ಮೇಲೆ ಹತ್ತಿದವು. ಅವನು ಧೃತಿಗೆಡದೆ ಗೇಟು ನಿಯಂತ್ರಕದ ಚಕ್ರವನ್ನು ಒಂದು ಸುತ್ತು ತಿರುಗುವಷ್ಟರಲ್ಲಿ ಇರುವೆಗಳು ಅವನ ಮುಖದ ಮೇಲೆಲ್ಲಾ ತುಂಬಿಕೊಂಡಿದ್ದವು. ಆದರೂ ಲೆನಿಂಜೆನ್ ವಿಚಲಿತನಾಗಲಿಲ್ಲ. ಬಲವಾಗಿ ತುಟಿಗಳನ್ನು ಕಚ್ಚಿಕೊಂಡ. ಕೆಲ ಗಳಿಗೆ ಇರುವೆಗಳನ್ನು ಮರೆತು ಗೇಟಿನ ಚಕ್ರವನ್ನು ತಿರುಗಿಸುತ್ತಲೇ ಹೋದ. ಒಡ್ಡಿನಿಂದ ನೀರು ರಭಸದಿಂದ ಕಾಲುವೆಗೆ ಹರಿಯತೊಡಗಿತು. ಇನ್ನು ಸ್ವಲ್ಪ ಹೊತ್ತಿನಲ್ಲೇ ನೀರು ಕಾಲುವೆ ತುಂಬಿ ತೋಟದೊಳಗೆ ಹರಿಯುವುದರಲ್ಲಿ ಯಾವುದೇ ಅನುಮಾನಗಳಿರಲಿಲ್ಲ. ಗೇಟನ್ನು ಸಂಪೂರ್ಣವಾಗಿ ಮೇಲೆತ್ತುವವರೆಗೂ ಅವನು ಸುತ್ತಮುತ್ತ ಏನು ನಡೆಯುತ್ತಿದೆ ಎನ್ನುವುದನ್ನು ಗಮನಿಸಲು ಹೋಗಲೇ ಇಲ್ಲ. ತನ್ನ ಕೆಲಸ ಮುಗಿದ ನಂತರ ಅವನು ನೆಮ್ಮದಿಯಿಂದ ಉಸಿರು ಎಳೆದುಕೊಳ್ಳಲು ಎದ್ದು ನಿಂತಾಗ ತಾನು ಸಂಪೂರ್ಣವಾಗಿ ಇರುವೆಗಳಿಂದ ಆವೃತ್ತನಾಗಿರುವುದು ಅವನ ಗಮನಕ್ಕೆ ಬಂದಿತು. ಅವನ ಮೈ, ಬಟ್ಟೆಗಳೆಲ್ಲಾ ಪೆಟ್ರೊಲಿನಿಂದ ನೆಂದಿದ್ದರೂ, ಎಲ್ಲ ಅಡೆ ತಡೆಗಳನ್ನು ದಾಟಿಯೂ ಅವನ ಹಸಿ ಮೈಯನ್ನು ಹುಡುಕುತ್ತಾ ಒಳಗೆ ಸೇರಿದ್ದವು. ಕೆಲವು ಅವನ ಕೆನ್ನೆಗೆ ಕಚ್ಚಿ ಜೋತಾಡುತ್ತಿದ್ದವು. ಅವನಿಗೆ ಮೊದಲ ಭಾರಿ ಮೈ ಸುಡುತ್ತಿರುವ ಅನುಭವವಾಯಿತು.

ಮೈ ಉರಿ ಎಷ್ಟು ಭಯಾನಕವಾಯಿತೆಂದರೆ ಅವನು ನೀರಿನಲ್ಲಿ ಬೀಳುವವನಿದ್ದ. ಆದರೆ ಪಿರ್ಹಾನಗಳನ್ನು (Pirhana) ನೆನೆದು ಅವನು ಆ ಸಾಹಸಕ್ಕೆ ಕೈ ಹಾಕಲಿಲ್ಲ. ಮೈಮೇಲೆ ಹತ್ತಿದ್ದ ಇರುವೆಗಳನ್ನು ಕೊಡವುತ್ತಾ, ಹೊಸಕುತ್ತಾ ಅವನು ಬಂಗಲೆಯ ಕಡೆಗೆ ಓಡತೊಡಗಿದ. ಅವನ ಮುಖದಿಂದ ರಕ್ತ ಒಸರುತ್ತಿತ್ತು. ಅಷ್ಟರಲ್ಲಿ ಒಂದು ಇರುವೆ ಅವನ ಕನ್ನಡಕದ ತಳದಲ್ಲಿ ಕಚ್ಚಿತು. ಆ ಸೂಕ್ಷ್ಮ ಜಾಗದಲ್ಲಿ ಎದ್ದ ಭಯಾನಕ ನೋವಿನಿಂದ ಅವನಿಗೆ ಜೋರಾಗಿ ಕೂಗಿಕೊಳ್ಳಬೇಕೆನಿಸಿತು. ಅಲ್ಲದೆ ಆ ಇರುವೆ ತನ್ನ ಕಣ್ಣಿನ ನರಕ್ಕೆ ಚುಚ್ಚಿದ ಯಾವುದೋ ಆಸಿಡ್ ಅವನ ಇಡೀ ದೇಹವನ್ನು ಬೆಂಕಿ ಆವರಿಸಿಕೊಂಡ ಅನುಭವವಾಗತೊಡಗಿತು. ಕಣ್ಣು ಮುಚ್ಚಿಕೊಂಡೇ ಅವನು ಓಡತೊಡಗಿದ. ಮುದುಕ ಕೆಲಸದಾಳು ಕೊಟ್ಟಿದ್ದ ಔಷದಿ ಈಗ ಯಾವ ಉಪಯೋಗಕ್ಕೂ ಬಂದಂತೆ ಕಾಣಿಸಲಿಲ್ಲ. ಅವನ ಎದೆಯೊಳಗೆ ಭತ್ತ ಕುಟ್ಟುತ್ತಿರುವಂತೆ ಶಬ್ಧ ಕೇಳಿಸುತ್ತಿತ್ತು. ಶ್ವಾಸಕೋಶ ಒಡೆದು ಹೋಗುತ್ತಿರುವಂತೆ ಭಾಸವಾಗತೊಡಗಿತು.

ಅವನು ಬಲವಂತದಿಂದ ಕಣ್ಣುಗಳನ್ನು ತೆರೆದ. ದೂರದಲ್ಲಿ ಪೆಟ್ರೊಲ್ ಉರಿಯುತ್ತಿರುವುದು ಅಸ್ಪಷ್ಟವಾಗಿ ಕಾಣಿಸತೊಡಗಿತು. ತಾನು ಅಲ್ಲಿಯವರೆಗೆ ಹೋಗಬಲ್ಲೆನೇ ಎಂಬ ಸಂಶಯ ಅವನನ್ನು ಕಾಡಿತು. ಅವನ ಮನೋಪಟಲದ ಮೇಲೆ ತನ್ನ ಹಿಂದಿನ ಜೀವನದ ದೃಶ್ಯಗಳು ಮೂಡತೊಡಗಿದವು. ಇನ್ನೊಂದೆಡೆ ಅವನ ತಾರ್ಕಿಕ ಮನಸ್ಸು ಇಂತ ಆಲೋಚನೆಗಳು ಮನುಷ್ಯ ಸಾವಿಗೆ ಎದುರಾಗುವಾಗ ಮಾತ್ರ ಬರುತ್ತವೆಂದು ಎಚ್ಚರಿಸಿತು. ಆದರೂ, ಅವನು ಯಾಂತ್ರಕವಾಗಿ ಓಡುತ್ತಲೇ ಇದ್ದ. ಒಮ್ಮೆಲೇ ಒಂದು ಕಲ್ಲನ್ನು ಎಡವಿ ಲೆನಿಂಜೆನ್ ಕೆಳಗೆ ಬಿದ್ದ. ಎದ್ದೇಳಲು ಎಷ್ಟು ಪ್ರಯತ್ನ ಪಟ್ಟರೂ ಸಾಧ್ಯವೇ ಆಗಲಿಲ್ಲ.
ಅವನ ಆತಂಕ ಹೆಚ್ಚಾಗುತ್ತಲೇ ಹೋಯಿತು. ಅವನ ಕಣ್ಣ ಎದುರೇ ಇರುವೆಗಳು ಆರು ನಿಮಿಷಗಳೊಳಗೆ ಜಿಂಕೆಯನ್ನು ತಿಮದು ಮುಗಿಸಿದ್ದವು. ಜಿಂಕೆಯ ಅಸಹಾಯಕತೆಯ ಭೀತಿ, ನೋವಿನ ಆರ್ತನಾದ ಬೇಡ ಬೇಡವೆಂದರೂ ಅವನ ಕಣ್ಣ ಮುಂದೆ ಸುಳಿಯಿತು. “ದೇವರೇ!, ನನಗೆ ಆ ರೀತಿ ಸಾಯಲು ಇಷ್ಟವಿಲ್ಲ…” ಮನದೊಳಗೆ ಚೀರುತ್ತಾ ಅವನು ಅದು ಯಾವುದೋ ಅಮಾನುಷ ಶಕ್ತಿ ಅವಾಹಿಸಿಕೊಂಡಂತೆ ಎದ್ದು ಓಡತೊಡಗಿದ.

ಉರಿಯುತ್ತಿರುವ ಅಗ್ನಿ ಕುಂಡದೊಳಗಿನಿಂದ ಒಂದು ಮನುಷ್ಯಾಕೃತಿ ಜಿಗಿದು ಕಾಲುವೆಯ ಒಳ ಬದಿಗೆ ಬಂದು ಬಿದ್ದಿತು. ಆದು ಲೆನಿಂಜೆನ್ನನ ಆಕೃತಿಯಾಗಿತ್ತು. ಅವನು, ಜೀವನದಲ್ಲಿ ಇದೇ ಮೊದಲ ಭಾರಿ ಪ್ರಜ್ಞೆ ತಪ್ಪಿ ಅಸಹಾಯಕನಾಗಿ ಕುಸಿದಿದ್ದ. ರಕ್ತಸಿಕ್ತ ಅಸ್ತವ್ಯಸ್ತ ಮುಖ..ಕೆಲಸಗಾರರು ನಿಜಕ್ಕೂ ಆಶ್ಚರ್ಯಚಕಿತರಾಗಿದ್ದರು. ಅವನು ಗೋರಿಯಿಂದ ಎದ್ದು ಬಂದವನಂತೆ ಕಾಣಿಸುತ್ತಿದ್ದ. ಅವರು ಬೇಗ ಬೇಗ ಅವನ ಬಟ್ಟೆಗಳನ್ನು ಕಳಚಿದರು. ಇನ್ನೂ ಕೆಲವು ಇರುವೆಗಳು ಅವನ ಮಾಂಸವನ್ನು ಕಚ್ಚಿ ಹಿಡಿದು ಜೋತಾಡುತ್ತಿದ್ದವು. ಮೈಮೇಲೆಲ್ಲಾ ಗಾಯಗಳಾಗಿದ್ದವು. ಎರಡು ಜಾಗದಲ್ಲಿ ಮೂಳೆಗಳು ಕಾಣಿಸುತ್ತಿದ್ದವು. ಆಳುಗಳು ಅವನನ್ನು ಬಂಗಲೆಗೆ ಎತ್ತಿಕೊಂಡು ಹೋದರು.

ಪೆಟ್ರೋಲು ಉರಿದು ಮುಗಿಯುತ್ತಿದ್ದಂತೆ ಕೆಲಸದಾಳುಗಳು ಕಾಲುವೆಯ ಹೊರಗೆ ಇಣುಕಿ ನೋಡತೊಡಗಿದರು. ಒಡ್ಡಿನ ಗೇಟನ್ನು ಮುಚ್ಚಿದ್ದರಿಂದ ನೀರು ಪೆಟ್ರೊಲ್ ಕಾಲುವೆಯವರೆಗೂ ತುಂಬಿಕೊಂಡಿತ್ತು. ಬಂಗಲೆ ಎತ್ತರದಲ್ಲಿದ್ದರಿಂದ ನೀರು ಅಲ್ಲಿಯವರೆಗೂ ಏರಲು ಸಾಧ್ಯವಿರಲಿಲ್ಲ. ಇರುವೆಗಳಿಗೆ ಪೆಟ್ರೋಲ್ ಕಾಲುವೆ ದಾಟಿ ಬರಲು ಸಾಧ್ಯವಾಗಿರಲಿಲ್ಲವಾದ್ದರಿಂದ ಅವುಗಳೆಲ್ಲಾ ಏರುತ್ತಿರುವ ನೀರಿನೊಳಗೆ ನಾಶವಾಗಿದ್ದವು.
.ನೀರು ಮೇಲಮೇಲಕ್ಕೆ ಏರುತ್ತಿರುವಂತೆಯೇ ಪೆಟ್ರೋಲಿನಿಂದ ಉರಿಯುತ್ತಿದ್ದ ಬೆಂಕಿ ನಂದಿ ಹೋಗಿತ್ತು. ನೀರು ತನ್ನ ಮಟ್ಟವನ್ನು ಕಂಡುಕೊಂಡಂತೆಯೇ ನದಿಗೆ ಮರಳತೊಡಗಿತು.

ಲೆನಿಂಜೆನ್ ಬ್ಯಾಂಡೇಜುಗಳಿಂದಾವೃತನಾಗಿ ಮಂಚದ ಮೇಲೆ ಅಸಹಾಯಕನಾಗಿ ಬಿದ್ದುಕೊಂಡಿದ್ದ. ಮುದುಕ ಕೆಲಸದಾಳು ಅವನ ಶುಶ್ರೂಷೆ ಮಾಡುತ್ತಾ, ಗಿಡಮೂಲಿಕೆಗಳನ್ನು ಅರೆದು ಅವನ ರಕ್ತಸ್ರಾವವನ್ನು ನಿಲ್ಲಿಸಿದ್ದ. ಅವರೆಲ್ಲಾ ಅವನ ಸುತ್ತ ಜಮಾಯಿಸಿದ್ದರು.
“ಸಾಹೆಬ್ರಿಗೆ ಏನೂ ಆಗುವುದಿಲ್ಲ! ಅವರು ಆದಷ್ಟು ಬೇಗ ಗುಣಮುಖರಾಗುತ್ತಾರೆ.” ಮುದುಕ ಕೆಲಸದಾಳು ಅವರಲ್ಲಿ ಧೈರ್ಯ ತುಂಬುತ್ತಿದ್ದ.

.”ಹೊರಗೆಲ್ಲಾ ಹೇಗಿದೆ? ಏನೂ ತೊಂದರೆ ಇಲ್ಲ ತಾನೆ?” ಲೆನಿಂಜೆನ್ ಕಣ್ಣು ತೆರೆದು ಕೇಳಿದ.
“ಇರುವೆಗಳೆಲ್ಲಾ ನಾಶವಾಗಿ ಹೋದವು” ಅವರು ಎಲ್ಲಾ ಒಟ್ಟಿಗೇ ಉತ್ತರಿಸಿದರು.
ಅಷ್ಟರಲ್ಲಿ ಮುದುಕ ಕೆಲಸದಾಳು ತಾನು ತಯಾರಿಸಿದ್ದ ನಿದ್ರೆ ಔಷಧಿಯನ್ನು ಒಂದು ಒಣಗಿದ ಹಾಲುಸೋರೆಕಾಯಿ ಬುರುಡೆಯಲ್ಲಿ ತುಂಬಿಸಿ ತಂದು ಲೆನಿಂಜೆನ್ನನಿಗೆ ಕುಡಿಸಿದ.
“ನಾನು ಖಂಡಿತವಾಗಿಯೂ ವಾಪಸ್ಸು ಬರುತ್ತೇನೆಂದು ನಿಮಗೆ ಹೇಳಿದ್ದೆನಲ್ಲವೇ?” ಲೆನಿಂಜನ್ ತೃಪ್ತಿಯಿಂದ ನಗೆಯಾಡಿ ಕಣ್ಣು ಮುಚ್ಚಿದ.

ಜೆ. ವಿ. ಕಾರ್ಲೊ


ಮುಗಿಯಿತು..

( Carl Stepenson ನ Leiningen Versus the Ants ನೀಳ್ಗತೆಯ ಅನುವಾದ )

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x