
ಎಲ್ಲ ಮರೆತಿರುವಾಗ ಇಲ್ಲ ಸಲ್ಲದ ನೆವವ
ಹೂಡಿ ಬರದಿರು ಮತ್ತೆ ಹಳೆಯ ನೆನಪೇ
ಕಲ್ಲಿನಂದದಿ ಬಿದ್ದು ತಿಳಿಯಾದ ಎದೆಗೊಳವ
ರಾಡಿಗೊಳಿಸುವೆ ಏಕೆ, ಮಧುರ ನೆನಪೇ?
ಬಹಳ ಒಳ್ಳೆಯ ಕವಿ ಹಾಗೂ ಅದಕಿಂತಲೂ ಒಳ್ಳೆಯ ಮನುಷ್ಯರಾದ ನಿಸಾರ್ ಅಹಮದ್ ಅವರನ್ನು ನಾವು ಕಳೆದುಕೊಂಡಿದ್ದೇವೆ. ‘ಕನ್ನಡವೆಂದರೆ ಬರಿ ನುಡಿಯಲ್ಲ. ………’ ಎಂದು ತಿಳಿಸಿ ಕೊಟ್ಟವರಿವರು. ಮನಸು ಗಾಂಧಿಬಜಾರು ಎಂದವರು. ಕನ್ನಡ ನಾಡು ನುಡಿಗಳ ನಿತ್ಯೋತ್ಸವವನ್ನು ಸತ್ಯವಾಗಿಸಿದವರು. ಕುರಿಗಳು ಸಾರ್ ಕುರಿಗಳು ಎಂದು ವಿಡಂಬಿಸಿದವರು. ಮೂಲತಃ ಭೂಗರ್ಭ ವಿಜ್ಞಾನಿಯಾದರೂ ನವೋಲ್ಲಾಸದ ಕವಿಗಳಾಗಿಯೇ ಹೆಸರು ಮಾಡಿದವರು. ಒಂದು ತಲೆಮಾರಿನ ಸುಸಂಸ್ಕೃತ ಮತ್ತು ಸುಪ್ರಬುದ್ಧ ಸಾಹಿತಿಯಾಗಿ ಸಾವಿರ-ಲಕ್ಷ ಮಂದಿಗೆ ಮಾದರಿಯಾದವರು. ನಿಮ್ಮೊಡನಿದ್ದೂ ನಿಮ್ಮಂತಾಗದೇ ಎಂದು ಅವರು ಒಮ್ಮೆ ಅಲವತ್ತುಕೊಂಡರೂ ನಾಡು ಅವರನ್ನು ಎಂದೂ ಹಾಗೆ ದೂರವಿಡಲಿಲ್ಲ! ಹಾಗೆ ದೂರವಿಡುವಂಥ ಯಾವ ಕ್ಷುಲ್ಲಕತೆ ಮತ್ತು ಸಣ್ಣತನಗಳು ಅವರಲ್ಲಿ ಇರಲಿಲ್ಲ.

ಬದುಕು ಮತ್ತು ಸಾಹಿತ್ಯಗಳಿಂದ ಏನನ್ನು ಕಲಿತು ಏನನ್ನು ಕೊಡಬೇಕೆಂಬುದನ್ನು ನಿಸಾರರು ಎಲ್ಲರಿಗಿಂತ ವಿಭಿನ್ನವಾಗಿ ಮತ್ತು ವಿಶಿಷ್ಟವಾಗಿ ಅರಿತಿದ್ದವರು. ‘ನಾನೆಂಬ ಪರಕೀಯ’ನನ್ನು ಅವರು ಕಾಣಿಸಿದರೂ ಅವರೆಂದೂ ಹಾಗೆ ಅಂದುಕೊಳ್ಳಲಿಲ್ಲ. ನವ್ಯದಲ್ಲಿದ್ದೂ ಅತಿನವ್ಯದ ದುರಂತಗಳಿಗೆ ತಮ್ಮನ್ನು ಪಕ್ಕಾಗಿಸಿ ಕೊಳ್ಳದೇ ನವೋದಯವನ್ನೂ ಒಟ್ಟೊಟ್ಟಿಗೆ ತಮ್ಮೆದೆಯಲ್ಲಿ ಧರಿಸಿ, ಸಮನ್ವಯವನ್ನು ಸಾರಿದರು. ದಿವಂಗತ ಅಬ್ದುಲ್ ಕಲಾಂ ಅವರನ್ನು ಯಾರು ತಾನೇ ಇಷ್ಟಪಡುವುದಿಲ್ಲ? ಹಾಗೆಯೇ ನಮ್ಮ ಕನ್ನಡದ ನಿಸಾರರು. ಅವರು ಭೂಗರ್ಭವನ್ನು ಎಷ್ಟು ಚೆನ್ನಾಗಿ ಅರಿತಿದ್ದರೋ ಅಷ್ಟೇ ಚೆನ್ನಾಗಿ ಮನಸಿನ ಆಳ ಪಾತಾಳಗಳನ್ನು ತಮ್ಮ ಕವಿತೆಗಳಲ್ಲಿ ಕಂಡರಿಸಿದರು! ಜೊತೆಗೆ ಕಂಡು ಕೊಂಡು ಹೇಗೆ ಸೋಸಿ ತಿಳಿನೀರಾಗಿಸಿ ಕುಡಿಯಬೇಕೆಂಬುದನ್ನೂ ಹೇಳಿ ಕೊಟ್ಟರು. ಅಬ್ದುಲ್ ಕಲಾಂ ಅವರಾಗಲೀ, ನಿಸಾರರಾಗಲೀ ನಮಗೆ ಅನ್ಯಧರ್ಮೀರೆಂದೋ ಅನ್ಯಭಾಷಿಕರೆಂದೋ ಯಾವತ್ತೂ ಅನಿಸಲಿಲ್ಲ. ಎಲ್ಲ ಧರ್ಮಗಳ ಮತ್ತು ಎಲ್ಲ ಭಾಷೆಗಳ ಆಚೆಗೆ ಇರುವ ಸತ್ಯಸಹಜ ಮಾನವತಾಲೋಕವನ್ನು ಇವರಿಬ್ಬರು ನಮಗೆ ದರ್ಶಿಸಿ ಕೊಟ್ಟವರು. ಕುವೆಂಪು ಪ್ರಣೀತ ವಿಶ್ವಮಾನವತ್ವವನ್ನು ಇವರಲ್ಲಿ ನಾವು ಕಾಣುವಂತಾಯಿತು.
ನಿಸಾರರ ತಂದೆ ಷೇಕ್ ಹೈದರ್ ಅವರು ಸರಕಾರಿ ನೌಕರಿಯಲ್ಲಿದ್ದು, ಕನ್ನಡ-ಇಂಗ್ಲಿಷ್-ಸಂಸ್ಕೃತ ಬಲ್ಲ ಸಜ್ಜನ ಮೇಧಾವಿ. ಹಾಗಾಗಿ ಇವರ ಕುಟುಂಬವೇ ನಿಸಾರರ ಪಾಂಡಿತ್ಯ ಪ್ರತಿಭೆಗಳಿಗೆ ಮೂಲ ಜೊತೆಗೆ ಸಹಿಷ್ಣುತೆಯ ಬಲ! ಆ ಕಾಲಕ್ಕಾಗಲೇ ಕುವೆಂಪು ಅವರಂಥ ದಿಗ್ಗಜರ ಮನವನ್ನು ಸೆಳೆದ ನಿಸಾರರ ಕವಿತೆ ಮುಂದೆ ಇಂಥ ರಸಋಷಿಯ ಬೆಂಬಲ ಮತ್ತು ಪ್ರಯತ್ನಗಳಿಂದ ಸಾರಸ್ವತ ಲೋಕದ ದೊರೆತನವನ್ನು ಆಳಿದ್ದೂ ಎಲ್ ಗುಂಡಪ್ಪ, ಜಿ ಪಿ ರಾಜರತ್ನಂ, ಎಂ ವಿ ಸೀ, ವಿ ಸೀತಾರಾಮಯ್ಯನವರಂಥ ಗುರುಗಳು ಇವರ ಮಾರ್ಗದರ್ಶಕರಾದದ್ದೂ ಐತಿಹಾಸಿಕ ಸೋಜಿಗ! ಹಲವು ಪ್ರಥಮಗಳ ಆಗರ ನಮ್ಮ ನಿಸಾರರು. ಕರ್ನಾಟಕ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾಗಿದ್ದಾಗಿನ ಕೆಲಸಗಳು, ಭಾವಗೀತೆಯ ಧ್ವನಿಸುರುಳಿ ಹೊರ ತಂದದ್ದು, ಕವಿಯೇ ಕವನದ ಸಾರಾಂಶ ಹೇಳಿದ ಪರಿ, ಸಾಹಿತ್ಯದ ಎಲ್ಲ ಪ್ರಕಾರಗಳ ದಶವಾರ್ಷಿಕ ಸಂಚಿಕೆಗಳನ್ನು ಸಂಪಾದಿಸಿ ಕೊಟ್ಟದ್ದು, ಜೋಗದ ಸಿರಿಯಲ್ಲಿ ಕರ್ನಾಟಕವನ್ನು ಕಂಡರಿಸಿದ್ದು, ಅಮ್ಮ-ಆಚಾರ-ನಾನುವಿನ ಒಳಗುದಿ, ಸಂಜೆ ಐದರ ಮಳೆಯ ಬಣ್ಣನೆ, ಬೆಣ್ಣೆ ಕದ್ದ ಕೃಷ್ಣನ ಚೋದ್ಯ, ಬೇಸರದ ಸಂಜೆಯಲಿ ಏಕಾಂತ ಕೊಡುವ ದುಮ್ಮಾನ-ಸುಮ್ಮಾನ, ನೀ ನುಡಿಯದಿರಲೇನು ಬಯಲಾಗಿಹುದೆಲ್ಲಾ…….ಹೀಗೆ.
ತಮ್ಮ ಕವಿತೆ ಮತ್ತು ಭಾವಗೀತೆಗಳ ಮೂಲಕ ಅದರಲ್ಲೂ ಕ್ಯಾಸೆಟ್ ಪ್ರಪಂಚದಿಂದಲೇ ಎಲ್ಲ ಸಹೃದಯರ ಮತ್ತು ಗೀತಾಭಿಮಾನಿಗಳ ಮನ ಸೂರೆಗೊಂಡದ್ದು ಯಾವತ್ತೂ ಚಾರಿತ್ರಿಕ ಸಾಧನೆ. ಮತ್ತೋರ್ವ ಕವಿ ಜಿ ಎಸ್ ಶಿವರುದ್ರಪ್ಪನವರಂತೆಯೇ ನಿಸಾರರೂ ಪಾಂಡಿತ್ಯ ಮತ್ತು ಪ್ರತಿಭೆಗಳ ಸಮ್ಮಿಲ್ಲನ. ಇವರೆಲ್ಲ ಗದ್ಯ ಬರಹಗಳು, ಅನುವಾದಗಳು ಇವನ್ನು ಸಾರಿ ಹೇಳುತ್ತವೆ.
ಭಾರತ ಸರ್ಕಾರದ ಪದ್ಮಶ್ರೀ ಪ್ರಶಸ್ತಿ, ಹಂಪಿ ಕನ್ನಡ ವಿವಿಯ ನಾಡೋಜ ಪ್ರಶಸ್ತಿ, 2006 ರಲ್ಲಿ ಶಿವಮೊಗ್ಗದಲ್ಲಿ ನಡೆದ 73 ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ಹೀಗೆ ಇವರಿಗೆ ಸಂದ ಗೌರವ ಭಾಜನ ಅನೇಕ, ಲೆಕ್ಕಕ್ಕಿಲ್ಲದಷ್ಟು. ಪರ್ಷಿಯಾದ ಕವಿ ಜಲಾಲುದ್ದೀನ್ ಮಹಮದ್ ರೂಮಿಯನ್ನು ತದೇಕವಾಗಿ ನಾನು ಭಾವಾನುವಾದ ಮಾಡುತಿದ್ದ ಈ ದಿನಗಳಲ್ಲಿ ನಿಸಾರರ ಸಾವು ನನಗೆ ಹೀಗೆ ಬರೆಯಲು ಪ್ರೇರಿಸಿತು. ಒಂದು ಸಾರ್ಥಕ ಜೀವ ಮತ್ತು ಧನ್ಯತೆಯ ಭಾವ ಎರಡೂ ಮಿಳಿತಗೊಂಡ ಸರಳ ಸಜ್ಜನ ಸಂಭಾವಿತ ಕವಿವರೇಣ್ಯ ನಮ್ಮ ನಿಸಾರರಾಗಿದ್ದರು. ರಮಣ ಮಹರ್ಷಿಯವರನ್ನು ಓರ್ವ ಶಿಷ್ಯ ಹೀಗೆ ಕೇಳುತ್ತಾರೆ : How should treat others? ಇದಕ್ಕೆ ರಮಣರ ಉತ್ತರ: There are no others!ಇದಲ್ಲವೇ ಮಾತೆಂದರೆ!
ನಿಸಾರರ ಕವಿತೆಯೊಂದರ ಸಾಲಿದು: ‘ಬೇಸರಾಗಿದೆ ಮಾತು, ಭಾರವಾಗಿದೆ ಮೌನ, ನೋವು ಕರಗಿದೆ ಕಣ್ಣಲಿ……….’ ‘ಯಾವ ಕಾಡಿನ ಮರೆಯ ಮರದ ಕೊಂಬೆಯನರಸಿ ಜೀವ ರೆಕ್ಕೆಯ ಬಿಚ್ಚಿತೋ……..’
–ಡಾ. ಹೆಚ್ ಎನ್ ಮಂಜುರಾಜ್
ನಿಸಾರರ ‘ನಿತ್ಯೋತ್ಸವ’ ಗಾನ ಸುರುಳಿಯನ್ನು ಕೇಳದೆ ಇದ್ದಲ್ಲಿ ಅಪ್ಪಟ ಗಧ್ಯ ಪ್ರೇಮಿಯಾದ ನನಗೆ ಅವರ ಪರಿಚಯವೇ ಆಗುತ್ತಿರಲಿಲ್ಲವೇನೋ. ಕನ್ನಡದ ಬಹಳಷ್ಟು ಕವಿಗಳನ್ನು ಜನಸಾಮಾನ್ಯರಿಗೆ ಪರಿಚಯಿಸಿದ ಕೀರ್ತಿ ಅವರ ಕವಿತೆಗಳಿಗೆ ಸಂಗೀತ ಅಳವಡಿಸಿ ಹಾಡಿದ ಗಾಯಕರಿಗೂ ಸಂಗಿತಕಾರರಿಗೂ ಸಲ್ಲಬೇಕು ಎಂದು ನನ್ನ ಭಾವನೆ. ಇಲ್ಲಿಂದಲೇ ನನಗೆ ಅವರ ‘ಕುರಿಗಳು ಸಾರ್ ಕುರಿಗಳು’ ಮತ್ತು ‘ನಿಮ್ಮೊಡನಿದ್ದೂ ನಿಮ್ಮಂತಾಗದೆ..’ ಕವಿತೆಗಳ ಪರಿಚಯವಾಗಿದ್ದು. ಹೀಗೆಯೇ ಪರಿಚಯವಾದವರು ‘ಜಿ.ಎಸ್. ಶಿವರುದ್ರಪ್ಪ’ ಮತ್ತು ಗೋಪಾಲಕೃಷ್ಣ ಅಡಿಗ ಮುಂತಾದವರು..
ಸೊಗಸಾದ ಪರಿಚಯ.
ನಿಮ್ಮೆ ಕಮೆಂಟನು ಈಗ ಗಮನಿಸಿದೆ ಸರ್. ಧನ್ಯವಾದಗಳು