ಕಥಾಲೋಕ

ಅಹಂಕಾರ ದರ್ಪಗಳ ಮಧ್ಯೆ ಬಂದ ಅವನೊಬ್ಬ: ಬಸವರಾಜ ಕಾಸೆ

?????????????

ಮಧ್ಯೆ ರಾತ್ರಿ ಎರಡು ಗಂಟೆಯ ಸಮಯ, ಸಿಟಿ ರೈಲು ನಿಲ್ದಾಣದ ಎದುರು ಪುಟಪಾತ್ ಅಲ್ಲಿ ಹೇಗೇಗೊ ಪೇಪರ್ ಹಾಸಿಕೊಂಡು ಮಲಗಿರುವ ಜನರು. ಗಾಢ ಅಂಧಕಾರದ ನಡುವೆ ಕುಂಟುತ್ತಿರುವ ಕುದುರೆ ನಿಂತಲ್ಲೇ ಎಗರಾಡಿ ಬರುತ್ತಿದೆ ಅವನ ಮೈಮೇಲೆ, ಇನ್ನೇನು ತುಳಿದು ಬಿಟ್ಟಿತು ಎನ್ನುವಷ್ಟರಲ್ಲಿ ಒಂದೆಡೆ ರಣಕೇಕೆ ಹಾಕಿ ನಗುತ್ತಿರುವ ರಾಜ ರಾಣಿ ಮಂತ್ರಿಗಳು, ಅಷ್ಟರಲ್ಲಿ ಜೋರಾಗಿ ತಿರುಗುತ್ತಿರುವ ಯಂತ್ರವೊಂದು ಕಳಚಿ ಭಯಾನಕವಾಗಿ ಬಿದ್ದು ಬಿಟ್ಟಿತು. ಹೊಡಿ ಆರು ನೂರಾ ಎಂಭತ್ತು ಎಂಬ ಕರಾಳ ಧ್ವನಿ…ಮಲಗಿದ್ದ ಅವನು ಇದ್ದಕ್ಕಿದ್ದಂತೆ ಬೆಚ್ಚಿ ಓಡತೊಡಗಿದ. ಯಾರು ತಿರುಗಾಡದ ನಿರ್ಜನ ರೈಲು ಹಳಿಗಳ ಹತ್ತಿರ ಮುಂದಿರುವ ಕಲ್ಲು ತಾಗಿ ಬಿದ್ದು ಕಾಪಾಡಿ ಕಾಪಾಡಿ ಕಿರುಚತೊಡಗಿದ. ಮೆಲ್ಲಗೆ ರಕ್ತ ಹನಿ ತೊಟ್ಟಿಕುವುದನ್ನು ಕಂಡು ಒಂದೇ ಸಮನೆ ಅಳತೊಡಗಿದ. ಆದರೆ ಯಾರು ಅಲ್ಲಿಲ್ಲ. ಇನ್ನೂ ಜೋರಾಗಿ ಏನೋ ಗುಡುಗಿದ ಹಾಗೆ ಶಬ್ದ, ಆದರೂ ಹಾಗೆ ಮೈ ನೆಲಕ್ಕೆ ಸವರುತ್ತಾ ಬರಲು ಪ್ರಯತ್ನಿಸಿ ಜ್ಞಾನ ತಪ್ಪಿದ.

ಅವನು ತೇಜ್ ಅಲಿಯಾಸ್ ಡೈಮಂಡ್ ತೇಜ್. ಆಗರ್ಭ ಶ್ರೀಮಂತರ ಕುಡಿ, ಸಾಕಷ್ಟು ಅಹಂಕಾರ ದರ್ಪಗಳ ತುಂಬಿಕೊಂಡು ಕೊಬ್ಬಿದ ಟಗರು. ಅವನಿಗೆ ಸುಮ್ಮಸುಮ್ಮನೆ ಎಲ್ಲೆಲ್ಲೋ ಕೂಗಾಡುವುದು, ಯಾರಿಗೋ ಹೊಡಿದು ಹೀಯಾಳಿಸಿ ನಗುವುದು ಆತನ ದಿನಚರಿಯ ಒಂದು ಫ್ಯಾಷನ್. ಅದನ್ನು ಆತ ದೊಡ್ಡಸ್ಥಿಕೆಯ ಗುರುತು ಎಂದುಕೊಂಡಿದ್ದ. ಹೀಗೆ ಒಮ್ಮೆ ಹೋಗುವಾಗ ತನ್ನ ಎದುರಿಗೆ ಅಡ್ಡ ಬಂದ ಅಂತ ಹೇಳಿ ಸುಹಾಸ್ ಎನ್ನುವವನಿಗೆ ಭೀಕರವಾಗಿ ಒಂದು ಇಬ್ಬರೊಂದಿಗೆ ಸೇರಿ ಹೊಡೆದು ಹೋಗಿ ಬಿಟ್ಟಿದ. ಆದರೆ ಅಮಾಯಕ ಸುಹಾಸ ಹೇಗೋ ಮನೆ ತಲುಪಿ ಹುಷಾರಾಗಿ ತನ್ನಷ್ಟಕ್ಕೆ ತಾನಿದ್ದ. ಇದಾಗಿ ಐದು ಆರು ವರ್ಷಗಳೇ ಕಳೆಯುತ್ತಾ ಬಂತು.

ಸುಹಾಸನಿಗೆ ಮತ್ತೆ ಹೇಗೋ ತೇಜ್ ಪರಿಚಯವಾಗಿ ವಿಧ ವಿಧವಾಗಿ ಆತನ ಗುಣಗಳನ್ನು ಬಣ್ಣಿಸಿ ಕೆಲವು ತಿಂಗಳಲ್ಲಿ ಆತನ ಆಪ್ತ ಸ್ನೇಹಿತನಾಗಿ ಬಿಟ್ಟ. ಒಂದು ದಿನ ಕುಡಿಯುತ್ತಾ ಕುಳಿತಾಗ ಸುಹಾಸ ದುಡ್ಡು ಸುಲಭವಾಗಿ ಡಬಲ್ ಮಾಡುವ ಐಡಿಯಾಗಳನ್ನು ಹೇಳತೊಡಗಿದ. ‘ಗುರುಗಳೇ ರೇಸ್ ಅಲ್ಲಿ ಏನು ಮಜಾ ಅಂತೀರಾ, ಅಲ್ಲೇ ನಾನು ಸ್ವಲ್ಪ ದುಡ್ಡು ಮಾಡಿದ್ದು.. ತುಂಡುಡುಗಿಯರ ಸುತ್ತ ಸೊಂಟ ಸವರುತ್ತಾ ಓಡುವ ಕುದುರೆ ನೋಡಿ ಬೆಟ್ ಮಾಡತಾ ಇದ್ದರೆ ಪಕ್ಕದಲ್ಲಿ ಇದ್ದ ಅಜಯ ವಲ್ಯ ಅವರೇ ದಂಗಾಗಿ ಹೋಗಿ ಕೈ ಕೊಟ್ಟು ವಿಶ್ ಮಾಡಿದರು. ಅದು ನನಗಿಂತ ನಿಮ್ಮಂತಹ ಹೈಪೈ ಜನಕ್ಕೆ ಸೂಟು ಗುರು, ನೀವು ಅಲ್ಲಿ ಇರಬೇಕು, ಇಲ್ಲಿ ಅಲ್ಲ’ ಅಂದ. ಇದರಿಂದ ಆಕರ್ಷಿತನಾದ ತೇಜ್ ತಾನು ಹಾಗೆ ಮೆರೆಯಬೇಕು, ರಾಜ್ಯ ದರ್ಬಾರ್ ಮಾಡಬೇಕು ಎಂದು ಕನವರಿಸತೊಡಗಿದ. ಇದರಿಂದ ಸುಹಾಸ ಒಳಗೊಳಗೇ ನಕ್ಕು ಖುಷಿಯಿಂದ ಕುಣಿಯತೊಡಗಿದ. ಏಟಿಗೆ ಏಟು ಪರ್ಯಾಯವಲ್ಲ ಎನ್ನುವುದನ್ನು ಅರಿತಿದ್ದ ಆತ ಶತ್ರುವನ್ನು ಮಿತ್ರನಾಗಿ ಮಾಡಿಕೊಂಡು ದಿನದಿಂದ ದಿನಕ್ಕೆ ತನಗೆ ಬೇಕಾದಂತೆ ಪಳಗಿಸತೊಡಗಿದ.

ಮೋಜು ಮಸ್ತಿ ಆ ರಂಗು, ಅಲ್ಲಿಯ ಚೆಲ್ಲು ಚೆಲ್ಲು ವಾತಾವರಣ ತೇಜಗೆ ಹುಚ್ಚು ಹಿಡಿಸಿಬಿಟ್ಟಿತು. ಆರಂಭದಲ್ಲಿ ಕುತೂಹಲದಿಂದ ಶುರುವಾದ ಶೋಕಿ ಆತನಿಗೆ ಚಟವಾಗಿ ಮಾರ್ಪಟ್ಟಿತು. ರೇಸ್ ಇಲ್ಲದಿದ್ದಾಗ ಒದ್ದಾಡತ್ತಿದ್ದ ಆತನಿಗೆ ತೇಜ್ ಅದೇ ತರಹದ ಸ್ಕಿಲ್ ದಂಧೆ, ಇಸ್ಪೀಟ್ ಕ್ಲಬ್ ಮೊದಲಾದವುಗಳ ರುಚಿ ಹತ್ತಿಸಿಬಿಟ್ಟ. ಮೊದಮೊದಲು ಬರುತ್ತಿದ್ದ ದುಡ್ಡು ಆಮೇಲೆ ನಿಧಾನಕ್ಕೆ ಕರಗತೊಡಗಿತು. ಜೂಜು ಪಾರ್ಟಿ ಕ್ಲಬ್ ಮೋಜು ಮಸ್ತಿಯೇ ಸುಖ ಎಂದುಕೊಂಡ. ಅಷ್ಟರಲ್ಲೇ ಸುಹಾಸ ಆತನಿಂದ ಹೇಳದೆ ಕೇಳದೆ ದೂರವಾಗಿ ಸಂಪರ್ಕ ಸಂಖ್ಯೆ ಮೊದಲಾದವುಗಳನ್ನು ಬದಲಾಯಿಸಿಕೊಂಡು ಯಾವುದೋ ಚಿಕ್ಕ ಕಂಪನಿಯಲ್ಲಿ ಕೆಲಸ ಮಾಡುತ್ತಾ ತನ್ನ ಜೀವನ ನೋಡಕೊಂಡ. ಸುಹಾಸ ಗುರಿ ಏನು ಇತ್ತೋ, ತೇಜಗೆ ಏನು ಮಾಡಬೇಕು ಇತ್ತೋ ಅದನ್ನು ಮಾಡಿ ಆಗಿತ್ತು.

ದಿನದಿಂದ ದಿನಕ್ಕೆ ಎಲ್ಲ ಕಳೆದುಕೊಂಡು ಬೀದಿಗೆ ಬಿದ್ದರೂ ತೇಜ್ ಚಪಲ ಕಮ್ಮಿ ಆಗಿ ಬುದ್ಧಿ ಬರಲೇ ಇಲ್ಲ. ಲಕ್ಷಾಂತರ ರೂಪಾಯಿ ಸಾಲ ಮಾಡಿ ಎಲ್ಲಾ ಕಳೆದುಕೊಂಡರು ಕೂಡ ಅವನು ಹೇಗಾದರೂ ಮಾಡಿ ಕುಡಿಬೇಕು, ಆಡಬೇಕು, ಮಜಾ ಮಾಡಬೇಕು ಇಷ್ಟೇ ಅವನ ತಲೆಯಲ್ಲಿ ಇರುತ್ತಾ ಇದ್ದಿದ್ದು. ಇದಕ್ಕಾಗಿ ಅಡ್ಡ ದಾರಿ ಹಿಡಿದು ಜೈಲಿಗೆ ಹೋಗಿ ಬಂದ. ಒಂದು ಹೊತ್ತಿನ ಊಟಕ್ಕೆ ಗತಿಯಿಲ್ಲದೆ ಹುಡುಕಾಡಕೊಂಡು ಮದುವೆ ಛತ್ರ ಅಥವಾ ಕಾರ್ಯಕ್ರಮ ಇದ್ದಲ್ಲಿ ಹೋಗಿ ಊಟ ಮಾಡುತ್ತಿದ್ದ. ಅಲ್ಲಿ ಕೊಟ್ಟ ತಾಂಬೂಲ ಸಹ ಅಂಗಡಿಗೆ ಕೊಟ್ಟು ಬಂದ ಹತ್ತು ರೂಪಾಯಿಯಲ್ಲಿ ಕುಡಿಯುತ್ತಿದ್ದ. ವಿಐಪಿ ಹಾಲ್ ಬಿಟ್ಟು ಜೆ ಸಿ ರೋಡಿನ ಬೆಟ್ಟಿಂಗ್ ಕೌಂಟರ್ ಅಲ್ಲಿ ಆ ಕುದುರೆ ಬರುತ್ತೆ, ಈ ಕುದುರೆ ಬರುತ್ತೆ ಅಂತ ಅವರಿವರಿಗೆ ಹೇಳಿ ಅಷ್ಟು ಇಷ್ಟ ದುಡ್ಡು ಪೀಕುತ್ತಿದ್ದ.

ಐಷಾರಾಮಿ ಲೀಲಾ ಪ್ಯಾಲೇಸ್ ಅಲ್ಲಿ ಇರುತ್ತಿದ್ದ ತೇಜ್ ಈಗ ಮೆಜೆಸ್ಟಿಕನ ಗುಂಡೂರಾವ್ ಪ್ಯಾಲೇಸ್ ಅಂದರೆ ಬಸ್ ಮತ್ತು ರೈಲು ನಿಲ್ದಾಣಗಳಲ್ಲಿ ರಾತ್ರಿ ಮಲಗುತ್ತಿದ್ದ. ಜೀವನದಲ್ಲಿ ಯಾವತ್ತೂ ಎದ್ದು ನಿಲ್ಲಕ್ಕಾಗದೆ ಇರುವಷ್ಟು ಬಿದ್ದು ಹೋಗಿರುವ ತೇಜನ ಕೊನೆಯ ದಿನ ಅಂದು ರೈಲು ಪಕ್ಕದ ಹಳಿಯಲ್ಲಿ ಕೊನೆಯಾಗಿತ್ತು.

-ಬಸವರಾಜ ಕಾಸೆ


 

ಕನ್ನಡದ ಬರಹಗಳನ್ನು ಹಂಚಿ ಹರಡಿ

Leave a Reply

Your email address will not be published. Required fields are marked *