ಆನಂದ ಲಕ್ಕೂರ ಅವರ ವಿಭಾ ಸಾಹಿತ್ಯ ಪುರಸ್ಕೃತ ಕವನ ಸಂಕಲನ “ಉರಿವ ಏಕಾಂತ ದೀಪ” ಓದಿ ಮುಗಿಸಿದಾಗ ಅದರಲ್ಲಿ ನನಗೆ ಎರಡು ಕವನಗಳು ಪ್ರಮುಖ ಅನಿಸಿದವು. ಒಂದನೇಯದು ‘ಅವ್ವ’ ಮತ್ತು ಎರಡನೇಯದು ‘ಇನ್ನು ದಾಹವಾಗುವದಿಲ್ಲ ಬಿಡು’. ಇವೆರಡರಲ್ಲಿ ಯಾವದನ್ನು ಅಭಿಪ್ರಾಯಕ್ಕಾಗಿ ಎತ್ಕೋಬೇಕು ಎಂದು ಯೋಚಿಸುವಾಗ ‘ಅವ್ವ’ಕ್ಕಿಂತ ದಾಹವಾಗುದಿಲ್ಲ ಕವಿತೆ ಪ್ರಸ್ತುತ ಸಾಮಾಜಿಕ ಅರಾಜಕತೆ, ಅಸಹಿಷ್ಣತೆಯ ಹಿನ್ನಲೆಯಲ್ಲಿ ಮುಖ್ಯವೆನಿಸುದರಿಂದ ಇದನ್ನು ಮೊದಲು ಪರಿಚಯಿಸುವುದು ಅಗತ್ಯವೆನಿಸಿತು. ಇದರ ಜೊತೆಗೆ ಕವಿ ಇದನ್ನು ಒಂದು ಸತ್ಯ ಘಟನೆ ಆಧರಿಸಿ, ಮಾತಿನ ಧಾಟಿಯ ಸರಳ ಸುಂದರ ನಿರೂಪಣಾ ಶಕ್ತಿಯಿಂದ ಕಾವ್ಯಶಿಲ್ಪವನ್ನು ಓದುಗರ ಕಣ್ಮುಂದೆ ಜೀವಂತಗೊಳಿಸುತ್ತಾರೆ.
2008ರಲ್ಲಿ ಆಂಧ್ರಪ್ರದೇಶದ ಶ್ರೀಕಾಕುಳಂ ಜಿಲ್ಲೆಯ ಗ್ರಾಮವೊಂದರಲ್ಲಿ ಸವರ್ಣೀಯ ಶಿಕ್ಷಕಿಯೊಬ್ಬಳು ದಲಿತ ಬಾಲಕಿ ನೀರಡಸಿ ನೀರಿನ ಮಡಿಕೆ ಮುಟ್ಟಿದಳು ಎಂಬ ಕಾರಣಕ್ಕೆ ಅವಳ ಕಣ್ಣನ್ನೆ ಕಿತ್ತು ಹಾಕಿದ ಅಮಾನವೀಯ ಘಟನೆ ಕವಿಯ ಹೂಮನಸ್ಸು ಮುದುಡುವಂತೆ ಮಾಡಿದೆ.
“ದಟ್ಟವಾಗಿ ಹಬ್ಬಿರುವ ಕಾರ್ಮೋಡಗಳ ಕಂಡು/ ಮಳೆ ಬರುತ್ತದೆಂದು ಬಯಸುತ್ತಿಲ್ಲ/ ವಿಶಾಲವಾದ ಸಮುದ್ರದಲ್ಲೂ ಕೂಡಾ/ಗಂಟಲು ತೇವಾಗುತ್ತದೆ ಎಂಬ ನಂಬಿಕೆಯಿಲ್ಲ”
ಎನ್ನುವ ಅವಿಶ್ವಾಸ, ಅಪನಂಬಿಕೆ, ಆತಂಕದಿಂದಲೇ ಆರಂಭವಾಗುವ ಕವಿತೆ ಅಸಮಾನತೆಯ ಸಮಾಜದಲ್ಲಿ ಸಮಾನತೆಯ ಮಾತುಗಳು, ಸಂಘಟನೆಗಳು, ಚಳವಳಿಗಳು, ಹೋರಾಟಗಳು ಕವಿಗೆ ಮಳೆ ಬರಿಸದ ಹುಸಿ ಮೋಡಗಳಾಗಿ ಕಾಣುತ್ತವೆ. ಸಮುದ್ರದಷ್ಟು ವಿಶಾಲವಾದ ಭರವಸೆಗಳಿದ್ದರೂ ಅವೆಲ್ಲ ದಾಹ ನೀಗಿಸದ ಉಪ್ಪು ನೀರು. ಶ್ರೇಣಿಕೃತ ಸಮಾಜದಲ್ಲಿ ಬಡವರ ಮೇಲೆ ಶ್ರೀಮಂತರ ದಬ್ಬಾಳಿಕೆ, ದಲಿತರ ಮೇಲೆ ಸವರ್ಣೀಯರ ದೌರ್ಜನ್ಯದ ಘಟನೆಗಳು ಪದೇ ಪದೇ ಘಟಿಸುತ್ತಲೇ ಇರುವುದು ಕವಿಗೆ ಪರಿಸ್ಥಿತಿ ಸುಧಾರಿಸುವ ಆಶಾಕಿರಣ ಗೋಚರಿಸುವ ಲಕ್ಷಣ ಕಾಣುತ್ತಿಲ್ಲ. ಸಮಾಜಿಕ ಸಮಾನತೆ ಬಯಸುವ ಪ್ರಗತಿಪರ ಚಿಂತಕ ಲೇಖಕನೊಬ್ಬನಿಗೆ ಸಮಾನತೆ ಎಂಬುದು ಮರೀಚಿಕೆಯಾಗಿ ಕಾಣ್ತಾಯಿದೆ.
ಉಚ್ಚ ಜಾತಿಯ ಜನ ಕೀಳ ಜಾತಿಯ ಗರ್ಭೀಣಿಯರಿಗೆ ಶಪಿಸಿದರೆ ಅಂಗವಿಕಲ ಮಕ್ಕಳು ಹುಟ್ಟುತ್ತಾರೆ ಎನ್ನುವ ಜನರ ಮೂಢನಂಬಿಕೆಗೆ ಕವಿ ದಿಗಿಲುಗೊಂಡಿದ್ದಾನೆ. ಅಷ್ಟೆಯಲ್ಲ ಹುಟ್ಟುವಾಗ ಸುಂದರವಾಗಿಯ ಹುಟ್ಟಿದ ಮಕ್ಕಳು ಸಹ ಸುವರ್ಣೀಯರ ಸಿಟ್ಟಿಗೆ ಬಲಿಯಾದರೆ ಅಂಗವಿಕಲರಾಗುತ್ತಾರೆ ಎನ್ನುವ ನಗ್ನಸತ್ಯವನ್ನು ಬಿಚ್ಚಿಡುತ್ತಾರೆ. ಅವರ ಈ ತರ್ಕಿಗೆ ಅವರ ಈ ಕಾವ್ಯನಾಯಕಿಯೇ ಸಾಕ್ಷಿಯಾಗುತ್ತಾಳೆ. ಹಾಗೇಯೇ ಅಸ್ಪೃಶ್ಯರ ಸ್ಪರ್ಶದಿಂದ ನದಿಗಳು ಸಹ ಬತ್ತಿಹೋಗಿ ಮರಭೂಮಿಯಾಗುತ್ತವೆ ಎನ್ನುವ ಜನರ ನಂಬಿಕೆಗಳು ಕವಿಯನ್ನು ವಿಚಲಿತಗೊಳಿಸಿವೆ. ಆದ್ದರಂದ ಕವಿಯ ದುಃಖಿ ಹೃದಯ –
“ಇಂಥ ನಂಬಿಕೆಗಳಿರುವ ಕಡೆ ನಿನ್ನ ಕಣ್ಣೀರು ವ್ಯರ್ಥ, ನಿನ್ನ ಕೋರಿಕೆಯೂ ವ್ಯರ್ಥ. ಹಿಟ್ಟನ ಮಡಿಕೆ ನಾಯಿ ಮುಟ್ಟಿದರು ನಡದೀತು, ಮನುಷ್ಯಳಾದ ನೀನು ಕುಡಿಯಲು ನೀರು ಕೇಳಿದರೆ ಮಾತ್ರ ನಡೆಯುವದಿಲ್ಲ” ಎಂದು ಮಲಿನ ಮನಸ್ಸುಗಳ ಮನಸ್ಥಿತಿಯನ್ನು ದಾಖಲಿಸುತ್ತಾರೆ. ಹಿಂದುಳಿದವರು ಶಾಲೆಗೆ ಹೋಗುವದೇ ಪಾಪ, ಅಂಥವರ ಪಾಲಿಗೆ ಪಾಠ ಶಾಲೆ ಅನ್ನುವದು ಜೈಲು ಸಮಾನ, ಗುರು ಬ್ರಹ್ಮ ಸ್ವರೂಪಿಯಲ್ಲ; ರಾಕ್ಷಸ ರೂಪಿ ಎನ್ನುವುದು ಮರೆತೆಯಾ ಸುರೇಖ ಎಂದು ಕವಿ ಗದ್ಗದಿತರಾಗಿ ಆ ದಲಿತ ಮಗುವನ್ನು ಪ್ರಶ್ನಿಸುತ್ತಿದ್ದರೆ ಸಹೃದಯ ಓದುಗನ ಮನಸ್ಸು ಈ ವ್ಯವಸ್ಥೆ ವಿರುದ್ಧ ಕುದಿಯುತ್ತದೆ.
“ನಾವು ಕುಡಿಯಲು ನೀರು ಕೇಳಿದರೆ ಅಪರಾಧವೆಂದು/ ನಮ್ಮನ್ನು ಗೊಬ್ಬರವಾಗಿಸಿಕೊಂಡು/
ತಮ್ಮ – ತಮ್ಮ ಹೊಲಗದ್ದೆಗಳಿಗೆ ಚೆಲ್ಲಿಕೊಳ್ಳವಂಥ/ ಇವರಿರುವ ಕಡೆ ಮಡಿಕೆಯನ್ನಾದರೂ/ ಯಾಕೆ ಮುಟ್ಟಲು ಹೋದೆ ಸುರೇಖ/ ಅದು ಕುಲಸ್ಥರ ಅಹಂಕಾರದ ಕಮಂಡಲವೆಂದು/ ತಿಳಿಯದೆ ಮಟ್ಟಿಬಿಟ್ಟಿಯಾ./
ಎಂದು ಪ್ರಶ್ನಿಸುತ್ತ ಹೋಗು ಕವಿ ಮನುಷ್ಯತ್ವ ಮರೆತವರ ಎದೆಗೆ ಇವೆ ಪ್ರಶ್ನೆಗಳಿಂದ ಇರಿಯುತ್ತಾರೆ.
” ಮೂರನೇ ಕಣ್ಣಿಗಾಗಿ/
ಇದ್ದ ಕಣ್ಣನ್ನೆ ಕಳೆದು ಕೊಂಡೆಯಲ್ಲ ಸುರೇಖ/ ಇಲ್ಲಿ ಗಂಗೆ ಅವರ ಹೇಲಿನ ಗುಂಡಿಯಲ್ಲಾದರೂ/ ಇಂಗುತ್ತದೆಯೆ ಹೊರತು/ ಬಾಯಾರಿ ನೀರಿಗಾಗಿ ಹಪತಪಿಸುತ್ತಿರುವ/ ನಿನ್ನ ಗಂಟಲೊಳಗೆ ಹೇಗೆತಾನೆ ಇಳಿಯುತ್ತದೆ”
ಇಲ್ಲಿ ಮೂರನೆ ಕಣ್ಣು ಅನ್ನುವದು ಜ್ಞಾನದ ಸಂಕೇತವಾಗುತ್ತದೆ. ಅಕ್ಷರ ಜ್ಞಾನದ ಕಣ್ಣು ಪಡೆಯಲು ಹೋಗಿ ಇದ್ದ ಕಣ್ಣಗಳನ್ನೆ ಕಳೆದುಕೊಂಡು ಜೀವನಪೂರ್ತಿ ಕಣ್ಣೀರಲ್ಲಿ ಕೈತೊಳೆಯಬೇಕಾದ ಪರಿಸ್ಥಿತಿ ಆ ಮಗುವಿಗೆ. ನೀರು (ಗಂಗೆ) ಅವರ ಸಂಡಾಸ ಗುಂಡಿಯಲ್ಲಾದರೂ ಇಳಿಯಬಹುದು ಆದರೆ ಗಂಟಲಾರಿ ಪ್ರಾಣ ಬಿಡುತ್ತಿರುವ ಸುರೇಖನಂಥವರ ಪ್ರಾಣ ಉಳಿಸಲು ಸಾಧ್ಯವೇ ಇಲ್ಲ ಎನ್ನುವಂಥ ಕಟುಸತ್ಯವನ್ನು ಬಹಿರಂಗಗೊಳಿಸುತ್ತಾರೆ. ಗಂಗಾ, ಜಮುನಾ, ಕಾವೇರಿಯಂಥ ಪವಿತ್ರ ನದಿಗಳು ಕೂಡ ನಿನ್ನ ಹೆಣವನ್ನು ಹೆತ್ತು ಸಾಗುವ ಚಟ್ಟುಗಳಾಗುತ್ತವೆ ವಿನಹ ನಿನ್ನ ದಾಹ ತಣಿಸುವದಿಲ್ಲ ಎನ್ನುವ ಕವಿ ಮಾತು ನಮಗೆ ಸ್ವಲ್ಪ ಅತಿರೇಕದ್ದು ಅನಿಸಿದರೂ ಕವಿಗೆ ಮಾತ್ರ ವರ್ಗೀಕೃತ ವ್ಯವಸ್ಥೆಯಲ್ಲಿ ಇದು ಅಸಾಧ್ಯವೆನಿಸುವದಿಲ್ಲ.
“ಇವರಿಗೆ ದಾಹವಾದರೆ/
ಹೊಲಗೇರಿಯ ನೆತ್ತರು ಕುಡಿಯುವಂಥ/ ಮೃಗಗಳಿರು ಈ ದ್ವೀಪದಲ್ಲಿ/ ಅವರು ನೀರು ಕುಡಿದು ಚೆಲ್ಲಿದ ನೀರನ್ನು ಕುಡಿದಿಯಾ?/ ಅಯ್ಯೋ ಅವರು ನಿನ್ನ ಕಣ್ಣನ್ನು ಕೀಳದೆ ಬಿಡುತ್ತಾರಾ?/
ಎಂದು ಕೇಳುವ ಕವಿ ಇದಕ್ಕೆ ಅತಿ ಕ್ರೂರ ವ್ಯಕ್ತಿಗಳು ಕೂಡ ಕೆಲವೊಂದು ಸಂದರ್ಭದಲ್ಲಿ ಸ್ವಲ್ಪ ಕಡಿಮೆ ಪ್ರಮಾಣದ ಅಮಾನವೀಯತೆ ತೋರಿದ ಪ್ರಸಂಗಗಳು ಇದಕ್ಕೆ ಪೂರಕವೆಂಬಂತೆ ದಾಖಲಿಸುತ್ತಾರೆ.
ಶಿಲುಬೆಗೇರುವಾಗ ಏಸು ನೀರಡಿಸಿ ನೀರು ಕೇಳಿದರೆ ವಿಷದ ಬಟ್ಟಲಾದರೂ ಕೊಟ್ಟರು, ಕೈದಿಗಳು ದಾಹವಾಗಿ ನೀರು ಕೇಳಿದರೆ ಪೋಲೀಸರು ಬಿಸಿನೀರಾದರು ಕುಡಿಯಲಿಕ್ಕೆ ಕೊಟ್ಟಾರು, ಆದರೆ ಸುರೇಖಳಂಥ ನತದೃಷ್ಟರು ಕುಡಿಯಲು ನೀರು ಕೇಳಿದರೆ ಅವರ ಕಣ್ಣುಗಳನ್ನೇ ಕಿತ್ತು ರಕ್ತದ ಕಣ್ಣೀರು ಕುಡಿಸುತ್ತಾರೆ ಎಂದು ಕೆಂಡಾಮಂಡವಾಗುತ್ತಾರೆ.
“ಒಂದು ಕಣ್ಣು ಕಣ್ಣಲ್ಲ ಸುರೇಖ/
ಒಂದು ಮಗು ಅದು ಮಗುವಲ್ಲ !/
ನೀನು ಈಗಿರುವ ಏಕೈಕ ಕಣ್ಣಿನಿಂದ/
ಮಹಾಯುದ್ಧದ ಕನಸು ಕಾಣು/
ನೀರು ಕೇಳಿದರೆ ನೆತ್ತರು ಕೊಡುವ ಕಡೆ/ ನೆತ್ತರು ಕಡಿಯುವುದು ತಪ್ಪಿಲ್ಲವೆಂದು/ ಹೇಳಲು ಸಿದ್ಧಳಾಗು ಸುರೇಖ ಸಿದ್ಧಳಾಗು”
ಎಂದು ಕವಿ ಆಕ್ರೋಷದಿಂದ ಅಮಾನವೀಯತೆ ಮೆರೆಯುವ ಅಗ್ರ ಜಾತೀಯ ಜನರಿಗೆ ಬುದ್ದಿ ಕಲಿಸಲು ಮುಂದಾಗುವಂತೆ ಕರೆ ನೀಡುತ್ತಾರೆ.
ಮೇಲ್ನೋಟಕ್ಕೆ ಕವಿತೆ ಅತಿಸರಳ ಅನ್ನಿಸಿದರು ತನ್ನ ಅಂತರಾಳದಲ್ಲಿ ಈಗಲೋ ಆಗಲೋ ಆಸ್ಪೋಟಿಸಬಹುದಾದಂಥ ಜ್ವಾಲಾಮುಖಿಯನ್ನೆ ಅಡಗಿಸಿಕೊಂಡಿದೆ. ಸಮಾಜದಲ್ಲಿ ನಡೆಯುತ್ತಿರುವಂಥ ದಲಿತರ ಮೇಲಿನ ದೌರ್ಜನ್ಯಗಳ ವಿರುದ್ಧದ ಧ್ವನಿಯಾಗಿದೆ. ಅಮಾಯಕ ದಲಿತರನ್ನು ಬತ್ತಲೆ ಮಾಡಿ ಮಜಾ ಪಡುತ್ತಿರುವ, ಅವರನ್ನು ಹಾಡುಹಗಲೇ ಬೆಂಕಿ ಹಚ್ಚಿ ಸುಟ್ಟು ಅಮಾನವೀಯತೆ ತೋರುತ್ತಿರುವ ವಿಕೃತ ಮನಸ್ಸುಗಳು ಇರುವವರೆಗೂ ಈ ಕಾವ್ಯ ಪ್ರಸ್ತುತವೆನ್ನಿಸುತ್ತದೆ. ಕಾವ್ಯದ ಕೊನೆಯಲ್ಲಿ “ನೀರು ಕೇಳಿದರೆ ನೆತ್ತರ ಕೊಡುವ ಕಡೆ,ರಕ್ತ ಕುಡಿಯುವುದು ತಪ್ಪಲ್ಲ”ವೆಂದು ಸಾರುವ ಮೂಲಕ ದಮನಿತ ವರ್ಗದಲ್ಲಿ ಕ್ರಾಂತಿಯ ಕಿಚ್ಚು ಹೊತ್ತಿಸುವ ಕಾರ್ಯ ಕವಿ ಈ ಕವನದ ಮೂಲಕ ಮಾಡುವುದು ತುಂಬ ಅರ್ಥಪೂರ್ಣವಾಗಿ ಕಾಣುತ್ತದೆ.
– ಅಶ್ಫಾಕ್ ಪೀರಜಾದೆ