ಮನುಜ ಮನಸ್ಸು ಮಾಡಿದರೆ ಅಸಾಧ್ಯವಾದುದು ಯಾವುದೂ ಇಲ್ಲ ಎಂಬುದಕ್ಕೆ ನಿದರ್ಶನ ಶಿಲ್ಪಿ ಬಡೆಕ್ಕಿಲ ಶಾಮಸುಂದರ ಭಟ್. ಬಡೆಕ್ಕಿಲ ಕೃಷ್ಣ ಭಟ್ ಹಾಗೂ ಸರಸ್ವತೀ ದಂಪತಿಗಳ ಮೂರನೇ ಮಗನಾಗಿ ಜನಿಸಿದ ಶಾಮಸುಂದರ ಎರಡು ವರ್ಷ ಆಗಿದ್ದಾಗಲೇ ಪೋಲಿಯೋ ರೋಗಕ್ಕೆ ತುತ್ತಾದ. ಒಂದು ಕಾಲು ದುರ್ಬಲವಾಗಿ ಕೃಶವಾಯಿತು. ಇದರಿಂದ ವಿದ್ಯಾಭ್ಯಾಸವೂ ಕುಂಠಿತವಾಯಿತು. ಮನೆಯಲ್ಲೇ ಅಕ್ಷರಾಭ್ಯಾಸದಲ್ಲಿ ತೊಡಗಿದ. ತಂದೆ ವೈದ್ಯರು. ಮೊದಲಿಗೆ ದ.ಕ. ಜಿಲ್ಲೆಯ ವಿಟ್ಲದಲ್ಲಿ, ತದನಂತರ ಪುತ್ತೂರಿನಲ್ಲಿ ವಾಸ. ಅಲ್ಲಿ ಶಾಮಸುಂದರ (೧೯೬೯-೭೫) ಮಣ್ಣಿನಲ್ಲಿ ಮೂರ್ತಿಗಳನ್ನು ಮಾಡಲು ತೊಡಗಿದ. ಯಾರಿಂದಲೂ ಕಲಿತದ್ದಲ್ಲ. ಅವನ ಪಾಡಿಗೆ ಮೂರ್ತಿಗಳನ್ನು ರಚಿಸುವುದರಲ್ಲೆ ಮಗ್ನನಾಗಿರುತ್ತಿದ್ದ.
ಮುಂದೆ ಅವರ ಸಂಸಾರ ಬೆಂಗಳೂರಿಗೆ ಸ್ಥಳಾಂತರಗೊಂಡಿತು. ೧೯೭೬-೭೭ರಲ್ಲಿ ‘ಕೆನ್ ಸ್ಕೂಲ್ ಆಫ್ ಆರ್ಟ್’ ನಲ್ಲಿ ಆರ್.ಎಂ. ಹಡಪದರ ಮಾರ್ಗದರ್ಶನದಲ್ಲಿ ವರ್ಣಕಲೆ, ಮೃತ್ತಿಕೆ, ಪ್ಲಾಸ್ಟರ್ ಆಫ್ ಪ್ಯಾರೀಸ್‌ನಲ್ಲಿ ವಿಗ್ರಹಗಳನ್ನು ರಚಿಸುವ ಕಲೆಯನ್ನು ಕಲಿತರು. ಊರೂರು ಸುತ್ತಿ ಕೊನೆಗೆ ಮೈಸೂರಿಗೆ ಬಂದರು. ೧೯೭೮-೮೦ರಲ್ಲಿ ಶ್ರೀ ಚಾಮರಾಜೇಂದ್ರ ಟೆಕ್ನಿಕಲ್ ಇನ್ಟಿಟ್ಯೂಟ್ ನಲ್ಲಿ ೩ ವರ್ಷ ಸಾಂಪ್ರಾದಾಯಿಕ ಶಿಲ್ಪಕಲೆಯನ್ನು ಕರಗತ ಮಾಡಿಕೊಂಡರು. ಮುಂದೆ ಸ್ವತಂತ್ರವಾಗಿ ಬದುಕಬೇಕೆಂಬ ಇಚ್ಛೆಯಿಂದ ಶಿಲ್ಪಕಲೆಯನ್ನು ವೃತ್ತಿಯಾಗಿ ಆಯ್ಕೆ ಮಾಡಿಕೊಂಡರು. ಬಿಡದಿಯಲ್ಲಿ ಕೆಲವು ವರ್ಷ ಇದ್ದು, ಕೊನೆಗೆ ಮೈಸೂರಿಗೆ ಬಂದು ಸ್ವಂತಮನೆ ಕಟ್ಟಿ ಅಲ್ಲಿ ಶಿಲಾಮೂರ್ತಿಗಳನ್ನು ರಚಿಸುವ ಕಾಯಕದಲ್ಲಿ ಮಗ್ನರಾಗಿದ್ದಾರೆ. ಕಾಷ್ಠಶಿಲ್ಪ ರಚನೆಯಲ್ಲೂ ಕೈಯಾಡಿಸಿದ್ದಾರೆ. ವರ್ಣಚಿತ್ರಕಲೆಯಲ್ಲೂ ನಿಷ್ಣಾತರು.
ಶ್ರೀ ಬಡೆಕ್ಕಿಲ ಶಾಮಸುಂದರ ಭಟ್
ಮೈಬಲ ಅಷ್ಟೇನೂ ಇಲ್ಲದಿದ್ದರೂ ಮನೋಬಲದಿಂದಲೇ ಎಂಥ ಒರಟು ದೊಡ್ಡ ಬಂಡೆಗಲ್ಲನ್ನೂ ಸುಂದರ ಮೂರ್ತಿಯನ್ನಾಗಿಸುವ ಚಾಕಚಕ್ಯತೆ ಅವರ ಕೈಗಳಿಗಿವೆ. ಅವರು ರಚಿಸಿರುವ ಶಿಲ್ಪಕಲಾಕೃತಿಗಳ ಸುಂದರ ರೂಪ ನಮ್ಮನ್ನು ಬೆರಗುಗೊಳಿಸುತ್ತವೆ. ಬಂಡೆಗಲ್ಲುಗಳು ರೂಪಾಂತರ ಹೊಂದಿ ಜೀವಂತವಾಗಿವೆಯೇನೋ ಅನಿಸುವಷ್ಟು ಮನಸೆಳೆಯುತ್ತವೆ. ಬಾಗಲಕೋಟೆ, ಕಾರ್ಕಳ, ಬಾದಾಮಿ, ಇತ್ಯಾದಿ ಕಡೆಗಳಿಂದ ಕಲ್ಲುಗಳನ್ನು ತರಿಸಿ ಶಿಲ್ಪ ತಯಾರಿಸಿದ್ದಾರೆ. ಬಹುತೇಕ ಈಗ ಗಣಿಗಾರಿಕೆಗೆ ಅನುಮತಿ ಇಲ್ಲದೆ ಇರುವುದರಿಂದ ಕಲ್ಲುಗಳು ಸಿಗುವುದಿಲ್ಲವಂತೆ. ಇರುವ ಕಲ್ಲುಗಳನ್ನು ಬಳಸಿ ಶಿಲ್ಪ ರಚಿಸುತ್ತಾರೆ. ಇವರ ಕೈಯಲ್ಲಿ ಈಗಾಗಲೇ ನೂರಾರು ಮೂರ್ತಿಗಳು ಅರಳಿವೆ. ಮೂರ್ತಿಗಳ ಮುಖದ ಭಾವವನ್ನು ಚೆನ್ನಾಗಿ ರಚಿಸುತ್ತಾರೆ. ಅವರು ಕೆತ್ತಿದ ಮೂರ್ತಿಗಳ ಚಿತ್ರ ನೋಡಿ.
ಶಾಮಸುಂದರರಿಗೆ ಈಗ ಸುಮಾರು ೫೨ ವರ್ಷ ಪ್ರಾಯವಿರಬಹುದು. ಸಂಕೋಚ ಪ್ರವೃತ್ತಿ, ನಯವಿನಯದೊಂದಿಗೆ ಅಪ್ಪಟ ಸ್ವಾಭಿಮಾನಿ. ಅಂಗವಿಕಲರಿಗೆ ಸಿಗುವ ಯಾವ ಸೌಲಭ್ಯವನ್ನೂ ಉಪಯೋಗಿಸಿಕೊಳ್ಳದ ಆತ್ಮಗೌರವ. ಪ್ರಶಸ್ತಿ ಇತ್ಯಾದಿಗೆ ಯಾವತ್ತೂ ಅರ್ಜಿ ಹಾಕದಷ್ಟು ಸಂಕೋಚ ಸ್ವಭಾವ. ೧೫೬೬, ಚಾಲುಕ್ಯಶಿಲ್ಪ, ೧೮ನೇ ಅಡ್ಡ ರಸ್ತೆ, ರೂಪಾನಗರ, ಮೈಸೂರು, ಇಲ್ಲಿ ಪ್ರತೀದಿನ ಬಡೆಕ್ಕಿಲ ಶಾಮಸುಂದರ ಭಟ್ ಕೈಯಲ್ಲಿ ಉಳಿ, ಚಾಣ ಹಿಡಿದು ಬಂಡೆಕಲ್ಲನ್ನು ಹದಬರಿಸಿ ಸುಂದರ ಮೂರ್ತಿಯನ್ನಾಗಿ ಮಾಡುವುದರಲ್ಲಿ ಸದಾ ಮಗ್ನರಾಗಿರುತ್ತಾರೆ. ಇವರ ಈ ಪವಿತ್ರ ಕಾಯಕಕ್ಕೆ ಸದಾ ಬೆಂಬಲವಾಗಿ ತಾಯಿ ಸರಸ್ವತೀ, ಪತ್ನಿ ಪೂರ್ಣಿಮಾ ಇದ್ದಾರೆ.
ಮಾಲಾ
*****