ಅಶ್ಫಾಕರ ” ನನ್ನೊಳಗಿನ ಕವಿತೆ ” ಕವನ ಸಂಕಲನ ಕುರಿತ ಎರಡು ಅಭಿಪ್ರಾಯಗಳು

“ಪ್ರತಿಮೆಯೊಳಗೇ ಕರಗಿಹೋಗುವ ಕಲ್ಲಿನ ಗುಣ ಅಶ್ಫಾಕರ ” ನನ್ನೊಳಗಿನ ಕವಿತೆ ” ಯ ಮೂಲದ್ರವ್ಯ

ನೆರಳಿನ ಹಾದಿಯ ಬಿಸಿಲಿನ ಮಂಟಪವೂ ಹೌದು. ಕಲ್ಪನೆಯ ಕನಸುಗಳಲ್ಲಿ ನೆನಪಿನ ಹೆಜ್ಜೆಗಳನ್ನು ಮೂಡಿಸುವ ಪದಪಾದಪಯಣವೂ ಹೌದು. ವಿಶೇಷ ಆಸ್ವಾದನೆಗೆ ಹದಗೊಂಡು ಮುದವೀವ ಪದಪಂಕ್ತಿಯ ಭೋಜನಾಲಯವೂ ಹೌದು. ಕಣ್ಣಿಗೆ ಕಾಣುವ ಅಕ್ಷರಗಳಿಗೆ ಧ್ವನಿನೀಡಿ ಭಾವಸ್ಪರ್ಶಕ್ಕೆ ಮನಸನ್ನು ತೆರೆದಿಡುವಲ್ಲಿ “ನನ್ನೊಳಗಿನ ಕವಿತೆ” ಗಳು ಸಾರ್ಥಕ್ಯವನ್ನು ಕಂಡಿವೆ.

ಕಾವ್ಯದೊಳಗಿನ ಕನಸು; ಕನಸಿನೊಳಗಿನ ಕಾವ್ಯ; ಮೌನದೊಳಗಿನ ಮನಸು; ಮನಸಿನೊಳಗಿನ ಮೌನ, ವಾಸ್ತವದ ನೆರಳಿನಲೆಯೊಳಗೆ ಜೀವಂತಿಕೆಯನ್ನು ಪಡೆದುಕೊಳ್ಳುತ್ತವೆ. ಮಹತ್ವಪೂರ್ಣ ಗಜ಼ಲ್ ಕವಿಯಾದ ಅಶ್ಫಾಕರು ಕಾವ್ಯದ ಬೇರಿನ ಚೈತ್ರಸಂಭ್ರಮವನ್ನು ಕಂಡು ಉಂಡವರು. “ವ್ಯರ್ಥ ಅಶ್ರುಧಾರೆ ಜೀವಜಲವಾಗಿ ಅರಳಿ ನಗುವ ಹೂಕಂಡು ನಲಿಯುವುದೇ ಜೀವ-ಜೀವನ ” ಎಂಬ ಪರಮಾಸ್ವಾದನೀಯ ವಾಸ್ತವಧೋರಣೆಯನ್ನು ತಳೆದವರು.

ಪ್ರೇಮಕಾಮಗಳ ನಡುವಿನ ತಲ್ಲಣಗಳ ತೌಲನಿಕ ಚಿಂತನೆಯನ್ನು ಸರಿದೂಗಿಸುವಲ್ಲಿ “ನನ್ನೊಳಗಿನ” ಕವಿತೆ ಅಭೂತಪೂರ್ವ ದರ್ಶನವೊಂದನ್ನು “ಸಿಕ್ಸ್ತ್ ಸೆನ್ಸ್ ” ನಲ್ಲಿ ಕಾಣಿಸುತ್ತದೆ :

“. . . . . ಗಲ್ಲಕ್ಕೆ ಮೆತ್ತಿದ್ದ ಕೊಳಕು ಲಿಪ್ಸ್ಟಿಕ್
ವಾಸನೆ ಮೂಗಿಗೆ ಬಡಿದು ವಾಕರಿಸುತ್ತೇನೆ
ಮತ್ತು ಮೃತ್ಯುಚುಂಬನದ ಭಯವಾಗಿ
ತತ್ ಕ್ಷಣಕ್ಕೆ ಹಿಂದೆ ಸರಿಯುತ್ತೇನೆ. . . . “

ಇಲ್ಲಿಯ ” ಮೃತ್ಯುಚುಂಬನ ” ಎಂಬ ಪದಭೃಂಗ ಸಮಾಜಮುಖಿ ವಿಡಂಬನೆಯ ಮಹತ್ತರ ತಂತ್ರಸೂತ್ರ ! ಕಾವ್ಯದೊಳಗಿನ ಘನಮೌಲ್ಯದ ಸಮರ್ಥನೀಯ ಪ್ರಜ್ಞಾವಿಲಾಸದ ಭಾವಬಿಂಬ.

” ಮಾಯಾಬಜಾರ್ ” ನಲ್ಲಿ ಕಾಣುವ “ಹಾವಿನಾಲಿಂಗನದಿ ಕರಗಿ ವಿಷವಾದ ಹುಡುಗಿ. . . . ” ಎಂಬ ಸಾಲಿನಲ್ಲಿ ಆಸ್ವಾದಕ್ಕೆ ದಕ್ಕುವ ಭಾವಗಾಂಭೀರ್ಯದ ಸಂಘರ್ಷದ ಕಿಡಿನೋಟ ಬೆಂಕಿಯೊಳಗಿನ ಬೆಳಗೂ ಹೌದು; “ಕೆಂಡದೊಳಗಿನ ಕಾಂತಿಯೂ ಹೌದು; ಅಮಾವಾಸ್ಯೆಯ ಕನಸುಗಳಲ್ಲಿ ಖುಷಿಯಿಂದ ಕದ್ದು ಇಣುಕುವ ಬೆಳುದಿಂಗಳ ನೋಟವೂ ಹೌದು !! ಮುಳ್ಳುಹಾಸಿಗೆಯ ಮೇಲೆ ಹೊರಳಾಡುವ ಪುಷ್ಪವನ್ನು ಸ್ಪರ್ಶಿಸುವ ಪತಂಗದ ತವಕವೂ ಹೌದು. ನೆರಳನ್ನೇ ಅರಸಿಹೊರಟ ಸೂರ್ಯನ ದರ್ಶನದ ಪ್ರಖರತೆಯೂ ಹೌದು.

“ಎಲ್ಲಾ ಎಲ್ಲೆಗಳ ಮೀರಿ ಹಾರಲು ನಾ ಹಕ್ಕಿಯಾಗಬೇಕು ” ಎಂಬುದು ಪದಪಂಜರದೊಳಗಿನ ಕವಿತೆಯೆಂಬ ಹಕ್ಕಿಯ ಆಶಯವೇ ಇರಬೇಕು.
” ನನ್ನೊಳಗಿನ ಕವಿತೆ” ಯಲ್ಲಿ ಗರಿಬಿಚ್ಚಿ ಹಾರಾಡಲು ಬಯಲನ್ನು ಕಂಡುಕೊಂಡವರು ಅಶ್ಫಾಕರು.

ಅವರ ಈ ಕಾವ್ಯರಚನಾಕೌಶಲ್ಯವು ಕನ್ನಡಸಾರಸ್ವತಲೋಕದಲ್ಲಿ ತನ್ನದೇ ವಿಶಿಷ್ಟವಾದ ಛಾಪನ್ನು ದಾಖಲಿಸಲಿ ಎಂದು ಹಾರೈಸೋಣ.

-ಅಮೋಘಂ ಚೈತ್ರಕಾರಂಜಿ


ಶಕ್ತಿಯುತ ಕವಿತೆಗಳು ಆರ್ದ್ರವೆನಿಸುವ ಭಾವ

ನನ್ನೊಳಗಿನ‌ ಕವಿತೆ ಕವನ ಸಂಕಲನವನ್ನು ಪ್ರಸಿದ್ದ ಗಜಲ್ ಕವಿ ಅಶ್ಫಾಕ್ ಪೀರ್ಜಾದೆ ಧಾರವಾಡ ಅವರು ನಂಗೆ ಕಳಿಸಿ ಕೊಟ್ಟಿದ್ದಾರೆ. ಎರಡು ದಿನಗಳ ಒಳಗೆ ಸಮಯದ ಅಭಾವದ ನಡುವೆ ಓದಿ ಮುಗಿಸಿದೆ. ತಕ್ಷಣ ಒಂದೆರಡು ಸಾಲುಗಳನ್ನು ಬರೆದು ಬಿಡಬೇಕೆಂಬ ಆಸೆ ಹೊತ್ತು ಬಂದೆ. ಒಟ್ಟಾರೆ ಕವಿತೆಗಳು ನಿಜಕ್ಕೂ ಶಕ್ತಿದಾಯಕವಾಗಿವೆ. ಒಂದೊಂದು ಕವಿತೆಗಳು ಒಡಲಾಳದ ಭಾವವನ್ನು ಆರ್ದ್ರ ವಾಗಿ ಹೇಳುತ್ತಾ ಹೋಗುತ್ತವೆ. ಬೇರೆ ರೀತಿಯಲ್ಲಿ ಕಟ್ಟಲು ಹೊರಡುವ ಕವಿ ಕೊನೆಯಲ್ಲಿ ಭಾವನಾತ್ಮಕ ಬಂಧನದ ಬಂಧಿತರಾಗುವುದು ಥೇಟ್ ನನ್ನಂತೆಯೇ. ಎಷ್ಟೇ ವಾಸ್ತವಿಕ ಹಿನ್ನೆಲೆಯಲ್ಲಿ ಚೂಪಾದ ಲೇಖನಿಯನ್ನು ಝಳಪಿಸಿದರೂ ಕೊನೆಯಲ್ಲಿ ಭಾವುಕ ಪರಿಧಿಯ ಹಂತ ತಲುಪುವ ಕವಿತೆಗಳು ನಿಜಕ್ಕೂ ಇಷ್ಟವಾಗುತ್ತವೆ.

ವಾಸ್ತವಿಕತೆಯ ಚಿತ್ರಣವನ್ನು ಸೊಗಸಾಗಿ ವಿಶದೀಕರಿಸಿಕೊಳ್ಳುವ ಕವಿತೆಗಳ ಆಶಯ ಈ ಸಮಾಜ, ಅದರ ತೊಡಕುಗಳು, ದೊಂಬರಾಟದ ಜೀವನ ಕ್ರಮಗಳು, ದಾಂಪತ್ಯದ ಒಳಾಂತರಂಗದ ಸರಸ ವಿರಸಗಳ ಮಜಲುಗಳು, ಇವೆಲ್ಲವುಗಳ ಸಂಗಮವೇ ಕವಿತೆಗಳಾಗಿ ರೂಪುಗೊಂಡಿವೆ. ಆದರೆ ಈ ಕವಿ ಹೇಳುವ ರೀತಿ ಗಟ್ಟಿತನದ್ದು ಎಂದರೆ ತಪ್ಪಾಗಲಿಕ್ಕಿಲ್ಲ.

31 ನೇ ಕವಿತೆ ಅವಲೋಕನದ ಕೊನೆಯ stanza ಹಾಗೂ 55 ನೇ ಕವಿತೆ ʼಎಲ್ಲಿಗೆ ಹೊರಡುವೆ’ ಕಣ್ಣನ್ನು ಒದ್ದೆ ಮಾಡುವಲ್ಲಿ ಸಫಲವಾಗುತ್ತವೆ.

ಇಷ್ಟೆಲ್ಲ ಸಾಧಿಸಲು ಛಲ ಹೊಂದುವ ಬದುಕಿನ‌ ಕೊನೆ ಇಷ್ಟೊಂದು ಹೀನವೇ? ಎಂದನ್ನಿಸದೇ ಇರದು. ಎದೆಯಲ್ಲಿ ಆರದ ಭಾವುಕ ಹನಿಗಳು ಹಾಗೆಯೇ ಕರಗಿ ಹೋಗುವಾಗ ಕೊನೆಯ ಕ್ಷಣಗಳು ನೆನಪಾಗುತ್ತವೆ.

ಕಂಬನಿಯೂ ಜಾರಿ ಹೋಗುತ್ತದೆ.
ಎಲ್ಲವೂ ಹೋದ ಮೇಲೆ ನಾವಿನ್ಯಾಕೆ

ಎಂಬ ಬಲವಾದ ಪ್ರಶ್ನೆ ಮೂಡಿ ಕವನ ಸಂಕಲನ‌ ಇಷ್ಟವಾಗುತ್ತದೆ.

ಹೊಸ ಭಾವದ ಹಾದಿಯ ಬರಹಗಾರ ಇವರು. ಅನೇಕ ಜಾಲತಾಣಗಳಲ್ಲಿ ಇವರ ಗಜಲ್ ಗಳು ಹಾಗೂ ಅನೇಕ ಪತ್ರಿಕೆಗಳಲ್ಲಿ ಇವರ ಕವಿತೆಗಳು ಪ್ರಕಟಗೊಂಡಿದ್ದನ್ನು ಗಮನಿಸಿರುವೆ ನಾನು. ಇವರ ಒಂದು ಕವಿತೆಗೆ Facebook ನಲ್ಲಿ ನಾನು ಬರೆದ ಒಂದೆರಡು ಸಾಲಿನ ಕಾಮೆಂಟ್ ನ್ನು ನನ್ನ ಒಪ್ಪಿಗೆ ಪಡೆದು ತಮ್ಮ ಕವನ ಸಂಕಲನದ ಕೊನೆಯ ಪುಟದಲ್ಲಿ ಅಚ್ಚಾಕಿಸಿಕೊಂಡಿರುವುದು ಇವರ ಹಿರಿದಾದ ಹೃದಯವಂತಿಕೆ ಎನ್ನಬಹುದು. ನನ್ನಂತಹ ಚಿಕ್ಕವನು ಇಂತಹವರ ಸಾಹಿತ್ಯ ಓದಿ ತಿಳಿದುಕೊಳ್ಳಬೇಕಾದ ಅಂಶಗಳು ಬಹಳಷ್ಟಿವೆ.

ಮುನ್ನುಡಿ ಅದ್ಭುತ.

ಕೆಲವು ಕವಿತೆಯ ಎದೆಯೊಳಗೆ ತಪ್ಪಕ್ಷರಗಳು ಕಂಡು ಬಂದಿದ್ದು ಸತ್ಯ. ಅದನ್ನಿಲ್ಲಿ ಹೇಳಲೇಬೇಕು.
ಕಾರಣ ಮುಂದಿನ ಕೃತಿಗಳಲ್ಲಿ ಇದರ ಸಂಖ್ಯೆ ಕಡಿಮೆಯಾಗುತ್ತವೆ ಎಂಬ ಆಶಾಭಾವ ನನ್ನದು.

ಕವನ ಪುಸ್ತಕ ಸುಖಾಂತ್ಯ ಕಂಡಿದೆ.
ನಂಗೆ ಹಿಡಿಸಿತು.

ನೀವೂ ಓದಿ ಹಾರೈಸಿ.

ಅಶ್ಫಾಕ್ ಸರ್ ನಮಸ್ಕಾರಗಳು.

ಇಂತಿ ನಿಮ್ಮೆಲ್ಲರ ಕಿರಿಯ ಓದುಗ,

-ಗಣಪತಿ ಹೆಗಡೆ, ದಾಂಡೇಲಿ.


ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Oldest
Newest Most Voted
Inline Feedbacks
View all comments
0
Would love your thoughts, please comment.x
()
x