ರವಿ ಬೆಳಗೆರೆ ಎಂಬ ದೈತ್ಯ ಶಕ್ತಿ, ಪ್ರಖರ ಬೆಳಕು, ಬತ್ತದ ಪ್ರೀತಿಯ ಒರತೆ, ಅಕ್ಷರ ಮಾಂತ್ರಿಕ, ಇತ್ಯಾದಿ, ಇತ್ಯಾದಿ …… ಇದೇ ಮಾರ್ಚ್ 15ಕ್ಕೆ ತನ್ನ ಹುಟ್ಟು ಹಬ್ಬವನ್ನು ಆಚರಿಸಿಕೊಳ್ಳಲು ನಮ್ಮ ನಡುವೆ ಇಲ್ಲವೇ ಇಲ್ಲ! ಏನೋ ಆತುರವಿರುವಂತೆ ಅರವತ್ತೆರಡು ವರ್ಷಗಳಲ್ಲೇ ನೂರು ವರ್ಷಗಳಲ್ಲಿ ಮಾಡಬಹುದಾದುದನ್ನು ಮಾಡಿ, ನೋಡ ನೋಡುತ್ತಿದ್ದಂತೆ ಮರೆಯಾಗಿ ಹೋಗಿರುವುದು ಇಂದಿಗೂ ನಂಬಲಾಗುತ್ತಿಲ್ಲ. ಇಷ್ಟು ಬೇಗ ಅಲ್ಲೆಲ್ಲೋ ಹೋಗಿ ಮಾಡುವುದಿತ್ತಾದರೂ ಏನನ್ನು? ಏನು ಮಾಡುತ್ತಿರಬಹುದು ಈಗಲ್ಲಿ? ಇಷ್ಟೆಲ್ಲ ಜನ ಆತನಿಗಾಗಿ ಹಂಬಲಿಸಿ ನೆನೆಯುತ್ತಿರುವಾಗ ಅಲ್ಲಿ ತೆರಳಬೇಕಾದ ಜರೂರತ್ತಾದರೂ ಏನಿತ್ತು? ಪ್ರೀತಿಯಿಂದ….. ಕಾಳಜಿಯಿಂದ….. ಆತ್ಮೀಯತೆಯಿಂದ….. ರೇಗಬೇಕೆನಿಸುತ್ತದೆ. ಜೊತೆ ಜೊತೆಗೆ ಅವ ಇನ್ನೆಂದೂ ಮರಳಿ ಬರಲಾರ… ಎಂದು ನೆನೆದಾಗ ತೀವ್ರ ಸಂಕಟ, ಬೈತಿಡಲಾರದಷ್ಟು ದುಃಖವಾಗುತ್ತದೆ.
ಬದುಕಿರುತ್ತಿದ್ದರೆ ಇದೇ ಮಾರ್ಚ್ 15ರಂದು ರವಿ ಬೆಳಗೆರೆ 63 ವರ್ಷಗಳನ್ನು ಪೂರೈಸಿ 64ನೇ ವರ್ಷಕ್ಕೆ ಕಾಲಿಡುವ ಸಂಭ್ರಮವನ್ನು ಎದುರು ನೋಡುತ್ತಿರಬೇಕಿತ್ತು. ಪ್ರತಿ ಮಾರ್ಚ್ ಬಂತೆಂದರೆ ನನಗೆ ಪೋನ್ ಮಾಡಿ ಕೇಳೋನು, ‘ಶೀಲಕ್ಕ, ಈಗ ನನಗೆ ವಯಸ್ಸೆಷ್ಟಾಯ್ತು? ನೀನಾದರೆ ಕರೆಕ್ಟ್ ಆಗಿ ಹೇಳ್ತೀಯ’ ಅನ್ನೋನು. ಆತ ಯಾವಾಗಲೂ ಹೇಳುತ್ತಿದ್ದ ಮಾತು, ‘ನಾನು ಎಕನಾಮಿಕ್ಸ್ ನಲ್ಲಿ ಬಹಳ ಬುದ್ಧಿವಂತನಾದರೂ ಗಣಿತದಲ್ಲಿ ವೀಕು’ ಎಂದು. (ಹಾಗಂತ ಅವನು ಹೇಳಿಕೊಂಡರೂ, ಅದು ಕೇವಲ ಅವನ ವಿನಯವಾಗಿತ್ತು). ನಾನು ಲೆಕ್ಕ ಹಾಕಿ, ಇಷ್ಟು ವರ್ಷ ಮುಗಿದು ಇಷ್ಟನೇ ವರ್ಷಕ್ಕೆ ಕಾಲಿಡುತ್ತಿದ್ದೀಯ ಅಂತ ತಿಳಿಸಿದಾಗ ಅವನಿಗೆ ಸಮಾಧಾನ! ಹಿಂದೆ 60 ವರ್ಷವಾಗುವಾಗ ಅವನಿಗೆ ತುಂಬಾ ಗೊಂದಲವಿತ್ತು. 60ಕ್ಕೆ ಬಿದ್ದಾಗ ಷಷ್ಠ್ಯಬ್ಧಿ ಅನ್ನಬೇಕೋ ಅಥವಾ 60 ಮುಗಿದ ನಂತರವೋ ಎಂದು. ಆತನಿಗೆ ತನ್ನ ಹುಟ್ಟು ಹಬ್ಬ ಅದೆಷ್ಟು ಸಡಗರ ತರ್ತಿತ್ತೋ ಗೊತ್ತಿಲ್ಲ, ಆದರೆ ಸುತ್ತ ಮುತ್ತಲಿನ ನಮಗೆಲ್ಲ ತುಂಬಾ ಸಡಗರ ಅನ್ನಿಸ್ತಿತ್ತು. ಎಲ್ಲರೂ ಸೇರುವುದು ಆತನಿಗೆ ಸಂತಸ ತರುತ್ತಿದ್ದರೂ ಹಾರ ಹಾಕಿಸಿಕೊಳ್ಳುವುದು, ಕೇಕ್ ಕತ್ತರಿಸುವುದು ಇವೆಲ್ಲ ಅವನಿಗೆ ಸಂಕೋಚವೆನಿಸುತ್ತಿತ್ತು ಎಂದು ನನ್ನ ಅನಿಸಿಕೆ.
ಬಹುಶಃ ರವಿ ಬೆಳಗೆರೆಯ ಬಾಲ್ಯ ಅಷ್ಟು ಮಧುರವಾಗಿರಲಿಕ್ಕಿಲ್ಲ ಎನಿಸುತ್ತದೆ. ಹುಟ್ಟಿನಿಂದ ತುಂಬ ಒಳ್ಳೆಯ ಮನಸ್ಸಿನ, ಕರುಣೆಯುಳ್ಳ, ಪ್ರತಿಭಾವಂತ ಹುಡುಗನಾಗಿದ್ದರೂ ಬಾಲ್ಯದಲ್ಲಿನ ಕಟು ಅನುಭವಗಳು ಕಡೆಯ ತನಕ ಅವನ ಮನದ ಒಂದು ಮೂಲೆಯಲ್ಲಿ ನಿಷ್ಠುರ ಭಾವವನ್ನು ಜಾಗ್ರತ ಸ್ಥಿತಿಯಲ್ಲಿ ಇರಿಸಿತ್ತೇನೋ ಅನಿಸುತ್ತದೆ. ಆದರೆ ನಿಜಕ್ಕೂ ಒಬ್ಬರಿಗೆ ಸಹಾಯದ ಅವಶ್ಯಕತೆ ಇದೆ ಅನ್ನಿಸಿ ಬಿಟ್ಟರೆ ಶತಾಯ ಗತಾಯ ಯಾವ ಸೀಮಾ ರೇಖೆಯನ್ನೂ ಲೆಕ್ಕಿಸದೆ ಸಹಾಯ ಮಾಡುವ ಮಾನವೀಯತೆ ಆತನಲ್ಲಿ. ಇಂತಹ ಅಪರೂಪದಲ್ಲಿ ಅಪರೂಪವೆನಿಸುವ ವ್ಯಕ್ತಿತ್ವ ಆತನದು. ಒಬ್ಬ ಹೆಣ್ಣು ಮಗಳಲ್ಲಿ ಕಾಣಲಾರದ ಕರುಣೆ, ವಾತ್ಸಲ್ಯವನ್ನು ಕೆಲವೊಮ್ಮೆ ಆತನಲ್ಲಿ ಕಂಡಿದ್ದೇನೆ.
ರವಿ ಬೆಳಗೆರೆಯ, 1995ರ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಕೃತಿ ‘ಪಾ. ವೆಂ. ಹೇಳಿದ ಕಥೆ’ 13 ಸಣ್ಣ ಕಥೆಗಳ ಸಂಕಲನದಲ್ಲಿ ‘ಭ್ರೂಣ ಸಂಭಾಷಣೆ’ ಎಂಬ ಕಥೆ ನನ್ನ ಮೇಲೆ ಅತ್ಯಂತ ಪ್ರಭಾವ ಬೀರಿದ ಕಥೆ. ಒಬ್ಬ ಗರ್ಭಿಣಿ ಹೆಣ್ಣು ಮಗಳ ಭಾವನೆಗಳನ್ನು ಅದೆಷ್ಟು ಚೆನ್ನಾಗಿ ಚಿತ್ರಿಸಿದ್ದಾನೆಂದರೆ, ಒಬ್ಬ ಗಂಡಸಿಗೆ ಇಷ್ಟು ಆರ್ದ್ರವಾಗಿ ಹೆಣ್ಣಿನ ಅಂತರಂಗವನ್ನು ಹೊಕ್ಕು ಆಕೆಯ ಭಾವನೆಗಳನ್ನು ಅರ್ಥ ಮಾಡಿಕೊಳ್ಳುವುದು ಸಾಧ್ಯವೇ? ಎನಿಸಿತ್ತು. ಬಹುಶಃ ತನ್ನ ತಾಯಿಯೊಂದಿಗೆ ಒಬ್ಬನೇ ಬಹಳಷ್ಟು ಕಾಲ ಇದ್ದುದಕ್ಕೆ ಹೆಣ್ಣು ಮನಸ್ಸಿನ ಸೂಕ್ಷ್ಮ ಭಾವನೆಗಳನ್ನು ಅಷ್ಟು ನವಿರಾಗಿ ಚಿತ್ರಿಸಲು ಸಾಧ್ಯವಾಯ್ತು ಅನ್ಸುತ್ತೆ.
ದಟ್ಟ ಅನುಭವ ಕೊಡುವ ವಿವಿಧ ಕಥೆಗಳಲ್ಲಿ ರವಿ ಬೆಳಗೆರೆಗಿರುವ ಬದುಕಿನ ಅಗಾಧ ಜ್ಞಾನ ವಿವಿಧ ರೀತಿಯಲ್ಲಿ ವ್ಯಕ್ತವಾಗಿರುವುದನ್ನು ನೋಡಿದಾಗ ಅದೆಷ್ಟು ಬದುಕುಗಳನ್ನು ಇವ ತಾನೇ ಒಳಹೊಕ್ಕು ಬದುಕಿರಬಹುದೇನೋ ಅನ್ನಿಸಿ ಬಿಡುತ್ತದೆ. ಅಷ್ಟು ನೈಜ ಹಾಗೂ ಮನತಟ್ಟುವ ಭಾಷೆ. ಇನ್ನಷ್ಟು ಮತ್ತಷ್ಟು ಸಣ್ಣ ಕಥೆಗಳು ಆತನಿಂದ ಹೊರ ಬರಬೇಕಿತ್ತು. ಆತನ ಕಲ್ಪನೆ ವಿಚಿತ್ರವಾಗಿ ಅರಳುವ ಪರಿಯೇ ಅದ್ಭುತ! ಒಮ್ಮೆ ಆತನ ‘ಅಮ್ಮೀಜಾನ್’ ಮನೆಯ ಊಟದ ಕೋಣೆಯಲ್ಲಿ ಊಟದ ಮೇಜಿನ ಸುತ್ತ ಕುಳಿತು ಹರಟುತ್ತಿರುವಾಗ, ರವಿ ತುಂಬಾ ಒಳ್ಳೆಯ ಮೂಡ್ ನಲ್ಲಿ ಇದ್ದು, ಒಂದು ಸಣ್ಣ ಮಾತಿನ ಜಾಡನ್ನು ಹಿಡಿದು, ಅದನ್ನು ತಿರುಚಿ, ಹೊರಳಿಸಿ ಯಾವ್ಯಾವುದೋ ರೀತಿ ಕಲ್ಪಿಸುತ್ತಾ ನಮ್ಮನ್ನೆಲ್ಲಾ ನಗೆಗಡಲಿನಲ್ಲಿ ತೇಲಿಸಿದ್ದು ನನಗೆ ನೆನಪಿದೆ. ಆಗೇನೋ ನಾವೆಲ್ಲ ಹೊಟ್ಟೆ ಹುಣ್ಣಾಗುವಷ್ಟು ನಕ್ಕೆವು. ಈಗ ನೆನೆಸಿಕೊಂಡರೆ, ಆ ವಿಚಿತ್ರ ಕಲ್ಪನೆಗಳು ಆತನ ಬರವಣಿಗೆಯಲ್ಲಿ ಹೊಸ ಹೊಸ ಕಥೆಗಳಿಗೆ ಹೂರಣವಾಗುತ್ತಿದ್ದವೇನೋ ಅನಿಸುತ್ತದೆ. ನಾನು ಸಾಹಿತ್ಯವನ್ನು ಹೆಚ್ಚು ಓದಿಕೊಂಡಿಲ್ಲವಾದ್ದರಿಂದ ಆತನ ಕವಿ ಮನಸ್ಸನ್ನು, ಸಾಹಿತಿ ಮನಸ್ಸನ್ನು, ಕಥೆಗಾರನನ್ನು ಅರಿಯಲೇ ಇಲ್ಲ. ಹಾಗಾಗಿ ಆತ ಸಾಹಿತ್ಯಕ್ಕೆ ಸಂಬಂಧಪಟ್ಟಂತೆ ಮಾತನಾಡತೊಡಗಿದಾಗ ನಾನೆಷ್ಟು ಖಾಲಿ ಖಾಲಿ ಎನಿಸುತ್ತಿತ್ತು. ಅಷ್ಟು ಅಗಾಧ ತಿಳುವಳಿಕೆ ಆತನಿಗೆ ತನ್ನ ಕ್ಷೇತ್ರದಲ್ಲಿ.
ಚಿಕ್ಕಂದಿನಿಂದಲೂ (ನಾನು ಆತನನ್ನು ಅವನು ಹದನೆಂಟೂವರೆ ವರ್ಷಗಳಾಗಿದ್ದಾಗಿನಿಂದ ನೋಡಿದ್ದೇನೆ.) ರವಿ ಬೆಳಗೆರೆಗೆ ಬೇರೆಯವರ ನಿಯಂತ್ರಣದಲ್ಲಿರದೆ ತನ್ನದೇ ಆದ ರೀತಿಯಲ್ಲಿ ಸ್ವತಂತ್ರವಾಗಿ ಬದುಕಬೇಕೆಂಬಾಸೆ ಜಾಗೃತವಾಗಿರುತ್ತಿತ್ತು ಅನ್ನಿಸುತ್ತದೆ. ಹಾಗಾಗಿ ಸ್ನಾತಕೋತ್ತರ ಪದವೀಧರನಾಗಿದ್ದಾಗ್ಯೂ ಮನೆಯಲ್ಲಿ ಎರಡು ಎಮ್ಮೆಗಳನ್ನು ಕಟ್ಟಿ ಹಾಲು ಕರೆದು ಮಾರುತ್ತಿದ್ದುದನ್ನು ನಾನು ನೋಡಿದ್ದೇನೆ. ನಾನು ಅವನು ಮಾಡುವ ಕೆಲಸವನ್ನು ತುಂಬ ಆಶ್ಚರ್ಯದಿಂದ ನೋಡುತ್ತಿದ್ದೆ. ಅದೆಷ್ಟು ಪ್ರೀತಿಯಿಂದ ಎಮ್ಮೆಗಳನ್ನು
ಮಾತನಾಡಿಸುತ್ತಿದ್ದ. ಸ್ವಚ್ಛವಾಗಿ ಕೆಚ್ಚಲು ತೊಳೆದು ಶ್ರದ್ಧೆಯಿಂದ ಹಾಲು ಕರೆಯುತ್ತಿದ್ದ. ಹಾಲು ಕರೆದು ಕರೆದು ಅವನ ಹೆಬ್ಬೆಟ್ಟಿನ ಬಳಿ ಅಂಗೈ ಊದಿರುತ್ತಿತ್ತು. ಕರೆದ ಹಾಲನ್ನು ದೊಡ್ಡ ಬಕೆಟ್ಟಿನಲ್ಲಿ ಹಾಕಿ, ಅಮ್ಮನೆದುರಿನಲ್ಲೇ ಬೇರೆ ಬೇರೆ ಕ್ಯಾನುಗಳಲ್ಲಿ ಹಾಲು ತುಂಬಿಸುತ್ತಿದ್ದ. ನಂತರ, ಪಂಚೆಯನ್ನೆತ್ತಿ ಕಟ್ಟಿ ಪಕ್ಕಾ ಹಳ್ಳಿಯವನ ಹಾಗೆ ಕ್ಯಾನುಗಳನ್ನು ಸೈಕಲ್ಲಿನ ಹ್ಯಾಂಡಲ್ಗೆ ಸಿಕ್ಕಿಸಿ ಹಾಲು ಮಾರಲು ಹೋಗುತ್ತಿದ್ದುದನ್ನು ನಾನು ನೋಡಿದ್ದು ಇನ್ನೂ ಕಣ್ಣಿಗೆ ಕಟ್ಟಿದಂತಿದೆ. ಯಾವ ಕೆಲಸವನ್ನೇ ಮಾಡಲಿ, ಹಾಲು ಕರೆಯುವುದರಿಂದ ಹಿಡಿದು ತಾನು ರಚಿಸುವ ಪುಸ್ತಕದ ಕಡೆಯ ಪುಟ ಬರೆಯುವಾಗಲೂ ಆತನ ಶ್ರದ್ಧೆ ಯಾವ ಕಾರಣಕ್ಕೂ, ಯಾವ ಕ್ಷಣಕ್ಕೂ ಸ್ವಲ್ಪವೂ ಮಾಸುತ್ತಿರಲಿಲ್ಲ. ಈ ಶ್ರದ್ಧೆ, ಉತ್ಸಾಹ, ಸಮರ್ಪಣಾ ಭಾವ ಇಲ್ಲದಿದ್ದರೆ ಅವನು ಇಷ್ಟೆತ್ತರಕ್ಕೆ ಬೆಳೆಯಲು ಸಾಧ್ಯವಾಗುತ್ತಿತ್ತೇ? ತನ್ನ ಆರೋಗ್ಯವನ್ನೂ ಕಡೆಗಣಿಸಿ ಕೆಲಸದಲ್ಲಿ ತೊಡಗಿಕೊಳ್ಳುತ್ತಿದ್ದುದಕ್ಕೆ, ಜೊತೆಗೆ, ಕೆಲ ದುರಭ್ಯಾಸಗಳಿಂದಾಗಿ ಜಟ್ಪಿಯಂತಿದ್ದವ ಬಳಲಿ ಬತ್ತಿಹೋದ. ರವಿ ಬೆಳಗೆರೆ ದೀರ್ಘ ಕಾಲ ಬದುಕದಿದ್ದರೂ ಸ್ವಲ್ಪ ಕಾಲದಲ್ಲೇ ಪತ್ರಿಕೋದ್ಯಮಕ್ಕೆ, ಸಾಹಿತ್ಯ ಕ್ಷೇತ್ರಕ್ಕೆ, ಸಾಮಾನ್ಯರ ಬದುಕಿನ ಆಶೋತ್ತರಗಳಿಗೆ, ಶಿಕ್ಷಣ ಕ್ಷೇತ್ರಕ್ಕೆ ಎಂದೂ ಮರೆಯಲಾಗದ ಕೊಡುಗೆ ಕೊಟ್ಟು ಹೋದ. ರವಿ ಬೆಳಗೆರೆ ಕೇವಲ ಒಬ್ಬ ವ್ಯಕ್ತಿಯಾಗಿ ಬದುಕದೆ ತಾನು ಒಂದು ಶಕ್ತಿ – ಸಂಸ್ಥೆ ಎಂಬುದನ್ನು ಶಾಶ್ವತವಾಗಿ ನಿರೂಪಿಸಿದ. ಆತ ಭೌತಿಕವಾಗಿ ಇಲ್ಲದಿದ್ದರೂ ಪ್ರೇರಕ ಶಕ್ತಿಯಾಗಿ ಸದಾಕಾಲ ನಮ್ಮೊಂದಿಗಿರಲಿ, ಚಿರಕಾಲ ಈ ಜಗತ್ತಿನೊಂದಿಗಿರಲಿ.
-ಶೀಲಾ ಅರಕಲಗೂಡು