ಅವ್ವ: ಸಿದ್ದರಾಮ ತಳವಾರ, ದಾಸ್ತಿಕೊಪ್ಪ.

shidram talawar

“ಅವ್ವ ಇದ್ದರೇ ಸಾಕು 
  ಅವಳಿರದ ಸಿರಿವಂತಿಕೆ ಯಾರಿಗೆ ಬೇಕು
  ಅವಳಿರದ ಏಕಾಂತ ಯಾರಿಗೆ ಬೇಕು
  ಅವಳಿರದ ಅರಮನೆಯದಾರಿಗೆ ಬೇಕು
  ಅವಳಿರದ ಸಂತಸ, ಹಬ್ಬ, ಹರಿದಿನಗಳದಾರಿಗೆ ಬೇಕು
  ಅವ್ವ ಇದ್ದರದೇ ಕ್ರಿಸ್‍ಮಸ್, ಅದೇ ಯುಗಾದಿ ಅದೇ ರಮ್ಜಾನ್
  ಅವ್ವ ಇರಬೇಕು ಅವಳ ಜೊತೆ ನಾನೂ ಇರಬೇಕು”    

ಅವ್ವನನ್ನು ಮಮ್ಮಿಯೆಂದು ಕರೆಯಲು ನನಗೆ ತುಂಬಾ ಮುಜುಗುರ ಯಾಕೆಂದರೆ ಮಮ್ಮಿ ಎಂದರೆ ಕೇವಲ ಶಬ್ದವಾದೀತು. ಅವ್ವ ಎಂದರೆ ಆಹಾ ಅದೇನೋ ಸೊಗಸು. ಅವ್ವ ದಿನಾ ಕೂಲಿ ಕೆಲಸಕ್ಕೆ ಹೋಗಬೇಕು. ಮಧ್ಯಾಹ್ನದ ಹೊತ್ತಿಗೆ ಅದೆಷ್ಟೋ ಕಿಮೀ ದೂರದ ಹೊಲದಿಂದ ನನ್ನದೇ ನೆನಪಾಗಿ ಓಡೋಡಿ ಬರಬೇಕು ಬಂದುದೇ ತಡ ತಾನು ಊಟ ಮಾಡುವ ಬಗ್ಗೆ ಕಿಂಚಿತ್ತೂ ಯೋಚಿಸದೇ ನನಗೆ ಹಾಲುಣಿಸುವ ಆ ಅವ್ವನ ಪ್ರೀತಿಯ ಮುಂದೆ ಇನ್ನಾವ ಪ್ರೀತಿಯೂ ಬೆಲೆಯುಳ್ಳದ್ದಲ್ಲ. ಅವಳ ಆ ಕೆಸರು ಮೆತ್ತಿದ ಕೈಯಿಂದಲೇ ಬಾಚಿ ತಬ್ಬಿಕೊಂಡು ಎದೆಗಪ್ಪಿ ಮುದ್ದಾಡಿ ಕೆನ್ನೆ ಹಣೆಗೆರಡು ಮುತ್ತು ಪಡೆದ ಆ ಸಂದರ್ಭ ನಿಜಕ್ಕೂ ಸ್ವರ್ಗ ಸುಖಕ್ಕೂ ಮಿಗಿಲಾದುದು. 

ಬದುಕಿನುದ್ದಕ್ಕೂ ಮಿತಭಾಷಿಯಾಗಿಯೇ ಇದೂವರೆಗೂ ಎಲ್ಲೂ ತನ್ನ ಅಭಿವ್ಯಕ್ತಿ ಸ್ವತಂತ್ರವನ್ನು ತೋರ್ಪಡಿಸುವ ಗೋಜಿಗೆ ಹೋಗದ ನನ್ನವ್ವ ನನಗೆ ಬುದ್ದನಂತೆಯೇ ಸರಿ. ಹಗಲಿರುಳು ಮನೆಗೆಲಸ, ಕಟ್ಟಿಗೆ ಮುರಿಯುವುದು, ಪಾತ್ರೆ ಪಗಡಿ ತೊಳೆಯುವುದು ಜೊತೆಗೆ ಅಂಗಳು ಕಸಗುಡಿಸಿ ಪೂಜೆಗೆ ಹೂವನಿರಿಸಿ ನೀರು ಕಾಯಿಸಿ ನಮ್ಮನ್ನೆಲ್ಲ ಎಬ್ಬಿಸಿ ಸ್ನಾನಕ್ಕಣಿ ಮಾಡಿಸಿ ವಗ್ಗರಣೆಯೋ ಅವಲಕ್ಕಿಯೋ ಏನೋ ಒಂದನ್ನು ಮಾಡಿ ನನಗೆ ಮತ್ತುಳಿದ ನನ್ನ ಸಹೋದರ, ಸಹೋದರಿ ಕೊನೆಗೆ ನನ್ನಪ್ಪನಿಗೆ ತಿನ್ನಿಸಿಯಾದ ಮೇಲೆಯೇ ತಾ ಮುಖ ತೊಳೆದು ಒಂದಿಷ್ಟು ತಿಂಡಿಯನ್ನು ಅದೂ ಸಪ್ಪಳ ಮಾಡದೇ ತಿಂದು ನೀರು ಗುಟುಕಿಸುತ್ತಲೇ ಒಲೆ ಹಚ್ಚುವ ನನ್ನವ್ವನ ದಿನಚರಿ ಕಂಡು ನನಗೆ ಹೊಟ್ಟೆ ಉರಿಯುತ್ತದೆ. ಇಷ್ಟೆಲ್ಲ ಕೆಲಸಗಳ ಮಧ್ಯವೂ ನಗುನಗುತ್ತಲೇ ನೆರೆ ಹೊರೆಯ ನಾದಿನಿ, ನೆಗೆನ್ನಿಯರ ಜೊತೆ ಒಂದಿಷ್ಟು ಹರಟೆ, ಕುಶಲೋಪರಿ ನಡೆಸುತ್ತಲೇ ಸದಾ ಕ್ರಿಯಾಶೀಲಳಾಗಿರುವ ನನ್ನವ್ವ ಒಂದಿನಿತೂ ಬೇಸರಿಸಿಕೊಳ್ಳುವುದಿಲ್ಲವಲ್ಲಾ ಎಂಬ ನನ್ನ ಪ್ರಶ್ನೆಗೆ ಅವಳ ಆದರದ ಕಾಳಜಿಯೇ ನನಗುತ್ತರ ನೀಡುತ್ತದೆ ತಾಯಿ ಮಮತೆಯ ಮಡಿಲು ಕರುಣೆಯ ಕಡಲು.    

ಇತ್ತೀಚಿನ ಕೆಲ ವರ್ಷಗಳಿಂದ ನಾನು ನನ್ನವ್ವನ ಮೇಲೆ ಸದಾ ಬುಸುಗುಡತ್ತಲೇ ಇರುತ್ತೇನೆ. ಬೆಳೆಗ್ಗಿನ ತಿಂಡಿ ಚೆನ್ನಾಗಿಲ್ಲವೋ, ಪಾತ್ರೆ ಸರಿಯಾಗಿ ತೊಳೆದಿಲ್ಲವೋ, ಸಾಂಬಾರು ರುಚಿಯಾಗಿಲ್ಲವೋ ಏನೋ ಒಂದನ್ನು ಹುಡುಕಿ ಹುಡುಕಿ ಅವಳಿಗೆ ಸಿಟ್ಟು ತರಿಸಬೇಕೆಂದುಕೊಳ್ಳುತ್ತೇನೆ ಆದರೆ ಶಾಂತತೆಯಲ್ಲಿ ನನ್ನವ್ವ ಆ ಬುದ್ದನನ್ನೂ ಮೀರಿಸುವಂಥವಳು ಸಿಟ್ಟೇ ಮಾಡಿಕೊಳ್ಳದೇ ನಾಳಿ ಇದ್ಕಿಂತ ಛಲೋ ಮಾಡ್ತೀನಿ ಎಪ್ಪ ಈಗ ತಿನ್ನೋ ಶ್ಯಾಣ್ಯಾ ಅಂತ” ಎಂದು ನನ್ನ ಮುದ್ದಿನಿಂದಲೇ ತಿನ್ನಿಸಿ ನನ್ನ ಹೃದಯಕ್ಕೆ ಅತೀ ಹತ್ತಿರವಾಗುತ್ತಾಳೆ. ನಾನು ಎಲ್ಲೇ ಹೋಗಲಿ ರಾತ್ರಿ ಅಷ್ಟೊತ್ತಿಗೆ ನನ್ನವ್ವನ ಮುಖ ನೋಡದೇ ಒಂದು ಕ್ಷಣವೂ ನನಗೆ ಇರಲಾಗುವುದಿಲ್ಲಾ. ನನ್ನವ್ವನೇ ನನಗೆ ಪ್ರಪಂಚ ಇದು ಅಕ್ಷರಕ್ಕಷ್ಟೇ ಸೀಮಿತವಲ್ಲ ಆ ಭಗವಂತನ ಸಾಕ್ಷಿಗೆ ನಾನು ನನ್ನವ್ವನನ್ನು ಅಷ್ಟೊಂದು ಪ್ರೀತಿಸುತ್ತೇನೆ.    

ನನಗೆ ಈಗಷ್ಟೇ ಮದುವೆಯಾಗಿದೆ. (ಸ್ವ-ಇಚ್ಛೆಯಿಂದ ಮಾಡಿಕೊಂಡರೂ ನೀನೆ ಗಂಟಾಕಿದ್ದು ಅಂತ ಅವ್ವನನ್ನು ಆವಾಗಾವಾಗ ಛೇಡಿಸುತ್ತಲೇ ಇರುತ್ತೇನೆ) ಆಗ ನಾಲಗೆಯ ರುಚಿಗೆ ನನ್ನವ್ವನ ಮೇಲೆ ರೇಗಾಡಿರುವುದನ್ನು ನೆನಪಿಟ್ಟುಕೊಂಡ ನನ್ನವ್ವ ಈಗ ನನಗೆ ನಯವಾಗಿಯೇ ಕುಟುಕುತ್ತಲೇ  ಮಾರುತ್ತರಿಸುತ್ತಾಳೆ “ ಎಪ್ಪ ಪಲ್ಯ ಎಷ್ಟು ಛಲೋ ಮಾಡಿದಾಳಲಾ ನನ್ನ ಸೊಸಿ” ವಾಸ್ತವಿಕ ಚಿತ್ರಣ ಕಟ್ಟಿಕೊಡುವಂತೆ ನನ್ನವ್ವ ಅಡುಗೆ ಮನೆಗೆ ನನ್ನನ್ನೇ ಮಾಲೀಕನನ್ನಾಗಿಸಿ ನನ್ನವಳನ್ನೇ ಗೃಹಮಂತ್ರಿಯನ್ನಾಗಿಸಿ ತರಹೇವಾರಿ ಖಾದ್ಯ ತಯಾರಿಸಲು ಪ್ರೇರೆಪಿಸಿದರೂ ನನ್ನವ್ವ ಮಾಡಿದ ಹಿಟ್ಟಿನ ಜುಣಕ, ಟೋಮೆಟೋ ಸಾರಿನ ರುಚಿ ಯಾರು ಮಾಡಿದರೂ ಬರುವುದೇ ಇಲ್ಲ ಎನ್ನುವ ಸತ್ಯ ನನಗೆ ಯಾವಾಗಲೋ ತಿಳಿದಿದೆ. ಆದರೂ ನನ್ನವ್ವ ಮತ್ತೇ ಮತ್ತೇ ಹೊಸ ಹೊಸ ಪ್ರಯೋಗ ಮಾಡುತ್ತಲೇ ಅಡುಗೆಯಲ್ಲಿ ವೈವಿದ್ಯಮಯ ತಿಂಡಿಗಳನ್ನು ತಯಾರಿಸುವಲ್ಲಿ ನಿರತಳಾಗಿರುತ್ತಾಳೆ.    

ಮೊದಲ ಬಾರಿ ನಾನು ಮೊಬೈಲ್ ಕೊಂಡಾಗ ನನಗೆ ಯಾರೂ ಫೋನ್ ಮಾಡೋರೆ ಇರಲಿಲ್ಲಾ ಆ ಕ್ಷಣದಲ್ಲಿ ನನಗೆ ಹೊಳೆದಿದ್ದು, ನನ್ನವ್ವ ನನ್ನದೇ ಮೊಬೈಲನ್ನು ಅವ್ವನ ಕೈಗಿತ್ತು ಸಮೀಪದ ಕಾಯಿನ್ ಬಾಕ್ಸ್‍ನಿಂದಲೇ ಫೋನ್ ಮಾಡಿ ಅವ್ವನ ಜೊತೆ ಹರಟೆ ಹೊಡೆದು ಅವಳನ್ನು ಪೇಚಿಗೆ ಸಿಕ್ಕಿಸಿದ್ದುದು ಹಾಗೂ ಅವಳು ಮೊದಲನೇ ಬಾರಿ ಫೋನಿನಲ್ಲಿ ಮಾತನಾಡಿದುದು ನನಗೆ ಹೆಮ್ಮೆಯ ವಿಷಯ.

ನನ್ನವ್ವ ಹೆಚ್ಚಿಗೆ ನಗುವುದೇ ಇಲ್ಲಾ. ಅವಿಭಕ್ತ ಕುಟುಂಬದಲ್ಲಿ ಬೆಳೆದು ಬಂದ ನಾನು ಅವಳ ನಗುವುದನ್ನು ನೋಡಿರುವುದು ತುಸು ಕಡಿಮೆಯೇ. ಆದರೂ ಚಿಕ್ಕಂದಿನಲ್ಲಿ ನನ್ನ ಮುಗ್ದತೆಯ ಮಾತಿನಿಂದ ಅವಳನ್ನು ನಗಿಸಿದ್ದು ಇನ್ನೂ ನೆನಪಿದೆ. ಬಾಣಂತನ ಮಾಡಿಸಿಕೊಳ್ಳುವುದಕ್ಕೆ ಈಗೆಲ್ಲ ಆಸ್ಪತ್ರೆ, ನರ್ಸು ಅಂತ ಇದ್ದಾರೆ. ಆಗೆಲ್ಲ ಸೂಲಗಿತ್ತಿಯರೇ ಇದ್ದರೂ ಅವರಿಗೆ ಒಂದು ತೆಂಗಿನಕಾಯಿ, ಜಂಪರ್ ಪೀಸ್ ಹಾಗೂ ಹತ್ತೋ ಹನ್ನೊಂದೋ ರೂಪಾಯಿ ಕೈಗಿತ್ತರೇ ಸಾಕಿತ್ತು. ಅನಕ್ಷರಸ್ಥರಾದ ಸಾಕಷ್ಟು ಅಜ್ಜಿಯರ ನಡುವೆ ಆಗಷ್ಟೇ ಮಾತು ಕಲಿತ ನಾನು ಅಜ್ಜಿಯೊಬ್ಬಳನ್ನು ಕೇಳಿಯೇ ಬಿಟ್ಟೇ ನನ್ನನ್ನು ಹಡೆಸಿಕೊಂಡಿದ್ದು ಯಾರು ಅಂತ. ಅವ್ವ ಇದನ್ನು ಕೇಳಿದ್ದೇ ತಡ ನನ್ನ ಬಾಯ್ಮುಚ್ಚಿಸಿ ಅದೆಷ್ಟು ನಕ್ಕಿದ್ದಳೆಂದರೇ ಆ ನಗು ನನಗಿನ್ನೂ ನೆನಪಿದೆ. ಅಲ್ಲಿದ್ದವರೆಲ್ಲ ನನ್ನ ಗಲ್ಲ ಹಿಂಡಿ ಹಿಂಡಿ ಕೆನ್ನೆ ಕೆಂಪಗಾಗಿ ಹೋಗಿತ್ತು ಅಷ್ಟೊಂದು ನಗುತ್ತಿದ್ದರೂ ನಾನು ಮಾತ್ರ ಕುತೂಹಲದಿಂದಲೇ ದಿಟ್ಟಿಸಿ ಅವರನ್ನೇ ನೋಡುತ್ತಲಿದ್ದೆಯಷ್ಟೇ.

ಎಂತಹ ಕಾಠಿಣ್ಯ ಹೃದಯದವರೂ ಕರುಣಾಮಯಿಗಳಾಗುವ ಮುಖಚರ್ಯೆ ನನ್ನವ್ವಳದು  ಅಪ್ಪ ತೀರಾ ಮುಂಗೋಪಿ, ಸಿಡುಕು ಮೂತಿಯವ, ಆದರೆ ನನ್ನವ್ವಳ ತಾಳ್ಮೆಗೆ ಮೆಚ್ಚಿ ಐದು ವರ್ಷಗಳ ಕಾಲದ ನಂತರ ನನ್ನವ್ವ ನನಗೆ ಜನ್ಮ ನೀಡಲು ಕಾರಣನಾದವ ಎಂದು ಈಗಲೂ ನನ್ನವ್ವ ಅತಿ ತಾಳ್ಮೆಯಿಂದಲೇ ಆವಾಗಾವಾಗ ಹೇಳುತ್ತಲಿರುತ್ತಾಳೆ. ನಾನೆಂದರೆ ನನ್ನವ್ವಳಿಗೆ ಬಲು ಪ್ರೀತಿ ಆ ಶಿವಯೋಗಿ ಸಿದ್ದರಾಮ ಕರುಣಿಸಿದ ವರ ಎಂದು ಹೇಳುತ್ತಲೇ ಸಿದ್ದರಾಮ ಎಂದೇ ನನ್ನನ್ನು ಕರೆಯಲು ಒತ್ತಾಯಿಸಿದವಳು. 

ಈಗಿನ ಮಹಿಳೆಯರಿಗೆಲ್ಲ ಭಾಗಶ: ಸೀರಿಯಲ್‍ಗಳ ಹುಚ್ಚು ಇರುವುದು ಜಾಸ್ತಿಯೇ ಸರಿ. ಆದರೆ ನನ್ನವ್ವ ತೀರಾ ಸೀರಿಯಲ್ ವಿರೋಧಿ. ಮೊನ್ನೆ ಮೊನ್ನೆ ಮಹದಾಯಿ ಹೋರಾಟದಲ್ಲಿ ರೈತರನ್ನು ಅಟ್ಟಾಡಿಸಕೊಂಡು ಹೊಡೆದ ಪೋಲೀಸರಿಗೆ ನನ್ನವ್ವ ಹಿಡಿಶಾಪ ಹಾಕುತ್ತಿದ್ದುದನ್ನು ನೋಡುತ್ತಲೇ ನನ್ನವ್ವಳಲ್ಲಿದ್ದ ಕನ್ನಡ ನಾಡಿನ ಪ್ರೀತಿ, ಕಾಳಜಿ, ರೈತ ಪರ ಮನೋಭಾವನೆ ಹಾಗೆಯೇ ನಮ್ಮ ನೆಲಜಲದ ಕುರಿತಾದ ಕಾಳಜಿ ಕಂಡು ಮೂಕ ಪ್ರೇಕ್ಷನಾಗಿಬಿಟ್ಟಿದ್ದೆ. ದೈನಂದಿನ ಸುದ್ದಿವಾಹಿನಿಗಳನ್ನು ಬಿಟ್ಟರೇ ಬೇರಾವ ಚಲನಚಿತ್ರಗಳಾಗಲೀ ಧಾರಾವಾಹಿಗಳಾಗಲೀ ನನ್ನವ್ವ ನೋಡಿದ್ದು ನಾ ಕಾಣೆ. (ನನ್ನ ಮದುವೆ ಸೀಡಿಯಲ್ಲಿ ಅವಳಿರುವ ದೃಶ್ಯವನ್ನು ಮಾತ್ರ ಪದೇ ಪದೇ ರಿವೈಂಡ್ ಮಾಡಿಸಿಕೊಂಡು ನೋಡುತ್ತಿರುತ್ತಾಳೆ).

ಅಕ್ಷರಗಳ ಪರಿಚಯವಿರದ ನನ್ನವ್ವಳಿಗೆ ನಾನು ಓದುತ್ತ ಕೂತುಕೊಳ್ಳುವುದನ್ನು ನೋಡುವುದೇ ಸಂತಸದ ವಿಷಯ. ಹೀಗಂತ ಆವಾಗಾವಾಗ ಬೇರೆಯವರಿಗೆ ಹೇಳುತ್ತಿರುವುದು ನನ್ನ ಗಮನಕ್ಕೆ ಬಂದಿದೆ. ನನ್ನ ತಮ್ಮ ಅಂದರೆ ನನ್ನವ್ವಳ ಕೊನೆಯ ಮಗನ ಮೇಲೆ ಅತೀ ಕಾಳಜಿ ಪ್ರೀತಿ ತೋರಿಸುವ ನನ್ನವ್ವ ಅವನೊಂದಿಗೆ ಆಗಾಗ ಹರಟೆಗಿಳಿಯುತ್ತಾಳೆ. ಅವಳಿಗೆ ಗೊತ್ತಿಲ್ಲದ ಸಂಗತಿಗಳನ್ನು ಅವನಿಂದಲೇ ತಿಳಿಸಿಕೊಂಡು ಕೇಳುತ್ತಾಳೆ ಹಾಗೆಯೇ ಆಗಾಗ ಅವನಿಂದ ಪ್ರೀತಿಯಿಂದಲೇ ಬೈಸಿಕೊಳ್ಳುತ್ತಲೂ ಇರುತ್ತಾಳೆ.

ಚಿಕ್ಕಂದಿನಲ್ಲಿ ನನ್ನವ್ವನೊಂದಿಗೆ ನಾನು ಕೂಡ ಅಜ್ಜಿಯ ಮನೆಗೆ ಹೋಗುವುದು ಸಾಮಾನ್ಯವಾಗಿತ್ತು. ಬರೀ ಕೆಲಸ, ಒತ್ತಡದ ಬದುಕು, ಹಲವು ಚಿಂತೆಗಳಿಂದ ಬದುಕುವ ನನ್ನವ್ವನಿಗೆ ತವರಿಗೆ ಹೋಗುವುದರ ಖುಷಿ ನೋಡುವುದೇ ಚಂದ. ಆ ನಗು ಎಂದಿಗೂ ಮರೆಯಲಾಗದು. ಅಲ್ಲಿಗೆ ಹೋದರೆ ನನಗೆ ಇಡೀ ರಆತ್ರಿ ನಿದ್ರೆಯೇ ಬರುತ್ತಿರಲಿಲ್ಲ ಆ ವಾತ್ಸಲ್ಯಮಯಿ ಅಜ್ಜಿ ನನ್ನವ್ವನೊಂದಿಗೆ ನಗು ನಗುತ್ತ ಇಡೀ ಬದುಕಿನ ಸಾರಾಸಾರಗಳನೆಲ್ಲ ಸವಿಸ್ತಾರವಾಗಿ ಕೇಳುತ್ತಾ ನನ್ನವ್ವನೂ ಅಷ್ಟೇ ಮೌನ ಮುರಿದು ವಟ ವಟ ಮಾತಾಡುತ್ತಲೇ ತನ್ನ ತಂಗಿಯರೊಂದಿಗೆ ಸಂತರಸದಿಂದ ಮಾತನಾಡಿ ಪರಸ್ಪರ ಖುಷಿ ಹಂಚಿಕೊಳ್ಳುವುದು ಸಾಮಾನ್ಯ. ಹೀಗಾಗಿ ರಾತ್ರಿಯಿಡಿ ಅವ್ವ ಮಗಳು ಮತ್ತು ತಂಗಿಯರ ದುಂಡು ಮೇಜಿನ ಸಭೆ ಮತ್ತು ತಿಳಿಹಾಸ್ಯದ ಚರ್ಚಾಕೂಟವೇ ಏರ್ಪಡುತ್ತಿತ್ತು ಎನ್ನಬಹುದು.

ಹರೆಯದಲ್ಲೇ ತನ್ನನ್ನು ಅತೀಯಾಗಿ ಪ್ರೀತಿಸುತ್ತಿದ್ದ ನನ್ನವ್ವನ ಜ್ಯೇಷ್ಠ ಸಹೋದರ ನನ್ನ ಮಾವ ಅಂದರೆ ನನ್ನ ಮಾವ ಆವಾಗಲೇ ಬಿ.ಎ ಗ್ರಾಜ್ಯಯೇಟ್ ಎಂಬುದು ನನ್ನವ್ವನ ಹೆಮ್ಮೆ ಆತ ಸರ್ಕಾರಿ ನೌಕರಿ ಹಿಡಿದು ನನ್ನನ್ನೂ ನನ್ನಮಕ್ಕಳನ್ನೂ ಖುಷಿಯಾಗಿ ನೋಡಿಕೊಳ್ಳುತ್ತಾನೆ ಎಂಬ ನನ್ನವ್ವನ ಕನಸು ಕನಸಾಗೆ ಉಳಿಯಿತು. ದುರದೃಷ್ಟವಶಾತ್ ನನ್ನ ಮಾವ ತನ್ನ ಮೂವತ್ತರ ಪ್ರಾಯದಲ್ಲೇ ಅವಿವಾಹಿತನಾಗಿಯೇ ತೀರಿಹೋದದ್ದು ನನ್ನವ್ವನ ಮನಸ್ಸನ್ನು ಘಾಸಿಗೊಳಿಸಿತು. ಆವಾಗಿನಿಂದಲೇ ತವರಿನ ಬಗೆಗೆ ಆಸಕ್ತಿ ಕಳೆದುಕೊಂಡ ನನ್ನವ್ವ ಸುಖಾಸುಮ್ಮನೇ ನಾದಿನಿ ನೆಗೆನ್ನಿಯರ ಬಿರುನುಡಿಗಳಿಗೆ ಹೆದರಿ ತವರಿಗೆ ಹೋಗುತ್ತಿದ್ದಳು. ಆ ಇಡೀ ಒಂದು ವರ್ಷ ನನ್ನವ್ವನಿಗೆ ಬಹಳೇ ದು:ಖದಾಯಕವಾಗಿತ್ತು. ಕ್ರಮೇಣ ದಿನಗಳೆದಂತೆ ಥೇಟ್ ನನ್ನ ಮಾವನ ಹಾಗೇಯೇ ಇರುವ ನನ್ನನ್ನು ನೋಡುತ್ತ ಇಡೀ ನನ್ನವ್ವನ ತವರೇ ಸಂಭ್ರಮಿಸುತ್ತದೆ.

ಹೌದು ನನ್ನ ಮಾವ ನೋಡಲು (ಹರೆಯದಲ್ಲಿ) ಈಗ ನನ್ನಂತೆಯೇ ಕಾಣಿಸುತ್ತಾನೆ. ಆತನ ಬಗ್ಗೆ ಅಷ್ಟೇನೂ ಅರಿಯದ ನಾನು ಆಗಾಗ್ಗೆ ನನ್ನವ್ವನ ಕೇಳಿ ತಿಳಿದುಕೊಂಡು ಕುತೂಹಲ ಪರಿಹರಿಸಿಕೊಳ್ಳುತ್ತಿದ್ದೆ. ಆತನ ಭಾವಚಿತ್ರ ನೋಡುವಾಗಲೆಲ್ಲಾ ನನ್ನವ್ವನ ಕಣ್ಣೀರು ಹಾಗೂ ದು:ಖ ಉಮ್ಮಳಿಸಿ ಬರುತ್ತವೆ. ಅಷ್ಟೊಂದು ಪ್ರೀತಿಸುವ ಅಣ್ಣನನ್ನು ಕಳೆದುಕೊಂಡಿದ್ದು ನನ್ನವ್ವನ ಮನಸ್ಸನ್ನು ಆ ಪರಿಯಲ್ಲಿ ಘಾಸಿಗೊಳಿಸಿದೆ. ಕೊನೆಯ ಬಾರಿ ನನ್ನವ್ವ ರಾಖಿ ಕಟ್ಟಲು ಹೋದಾಗ ನನ್ನವ್ವನಿಗೆ ಸೀರೆ ತಂದು ನನ್ನನ್ನೂ ತಬ್ಬಿ ಮುದ್ದಾಡಿ ಜೇಬಿಗೆ ಐದು ರೂಪಾಯಿ ಇಳಿಸಿ ಕೆನ್ನೆಗೆರಡು ಮುತ್ತು ಕೊಟ್ಟು ಹೋಗಿದ್ದು ಇನ್ನೂ ನೆನಪಿದೆ. ಅದೇ ಕೊನೆ ಮತ್ತೇ ನಾನು ಕೂಡ ನನ್ನ ಮಾವನನ್ನ ನೋಡಲೇ ಇಲ್ಲಾ. ನಿಜವಾಗಲೂ ಆತ ಭಾವನಾಜೀವಿಯಾಗಿದ್ದ ಎಂಬುದಕ್ಕೆ ನಾನೇ ಉದಾಹರಣೆ. 

ಒಮ್ಮೆ ನನ್ನವ್ವ ಕಟ್ಟಿಗೆ ತರಲು ಹೋದ ಸಂದರ್ಭದಲ್ಲಿ ಹೆಜ್ಜೇನಿನ ಕಡಿತಕ್ಕೆ ಒಳಗಾಗಿ ಮುಖವೆಲ್ಲ ದಪ್ಪಗಾದಾಗ ನನಗೆ ಅವಳನ್ನು ನೋಡಲು ತುಂಬ ಕಷ್ಟವೆನಿಸಿತು. ಆದಾಗ್ಯೂ ನನ್ನವ್ವ ದಪ್ಪನೆಯ ಮುಖ ಮಾಡಿಕೊಂಡು ನಗು ನಗುತ್ತಲೇ ಜೇನು ಕಡಿಸಿಕೊಂಡಿರುವ ಸಾಂದರ್ಭಿಕ ಚಿತ್ರಣವನ್ನು ಕಣ್ಣಿಗೆ ಕಟ್ಟುವಂತೆ ನಿರೂಪಿಸಿದ್ದಳು. ತಕ್ಷಣಕ್ಕೆ ವೈದ್ಯೋಪಚಾರ ಮಾಡಿಸಿದ ನಂತರ ಮತ್ತೇ ನನ್ನವ್ವ ತಾಯಿ ಪಾರ್ವತಿಯ ಅನುರೂಪವಾಗಿದ್ದಳು.

ಅವ್ವ ಆಗಾಗ್ಗೆ ಅಧ್ಯಾತ್ಮಿಕದತ್ತ ಒಲವು ತೋರಿಸುತ್ತಾಳೆ. ಇಡೀಯಾಗಿ ಪುರಾಣ ಪ್ರವಚನ ಕೇಳುವುದೆಂದರೆ ನನ್ನವ್ವನಿಗೆ ಬಲು ಪ್ರೀತಿ. ಒಮ್ಮೊಮ್ಮೆ ತೀರ ನಾಸ್ತಿಕಳಾಗಿ ಬದುಕಿನಲ್ಲಿ ಬುದ್ದನನ್ನೂ ಮೀರಿಸುವ ತೆರದಿ ಬದುಕು ಬೇಡವೆನಿಸಿದಂತೆ ಮೌನಿಯಾಗುತ್ತಾಳೆ. ಕುಟುಂಬ ನಡೆಸುವ ಕಲೆ ನನ್ನವ್ವನಿಗೆ ತುಂಬ ಕರಗತವಾಗಿದೆ. ಏನೂ ಸಂಪಾದನೆಯಿಲ್ಲದ ಅದೆಷ್ಟೋ ವರುಷಗಳ ಕಾಲ ನಮ್ಮ ಮನೆ ನಡೆಸಿದುದು ನನ್ನವ್ವ ಮಾತ್ರವೇ. ಕಾಯಕಜೀವಿಯಾಗಿದ್ದ ನನ್ನವ್ವ ಎಂದೂ ಕೈಕಟ್ಟಿ ಸುಮ್ಮನೇ ಕೂತವಳಲ್ಲ. ಕಸಮುಸುರೆ ತಿಕ್ಕಿಯಾದರೂ ಸರಿ ಮನೆ ನಿರ್ವಹಣೆ ಮಾಡುತ್ತಿದ್ದಳು ಮತ್ತೊಬ್ಬರ ಮನೆಯ ಸಗಣಿ ಬಾಚಿ ಬಂದ ಹಣದಿಂದ ನನ್ನ ಶಾಲೆಯ ಅದೆಷ್ಟೋ ಫೀಸುಗಳನ್ನು ಕಟ್ಟುತ್ತಿದ್ದಳು ಎಂದು ಈಗಲೂ ನಾನು ಹೆಮ್ಮೆಯಿಂದ ಹೇಳಬಲ್ಲೆ. 

ಹಬ್ಬ ಹರಿದಿನಗಳಲ್ಲೆಲ್ಲ ನನ್ನ ಗೆಳೆಯರು ಅಕ್ಕಪಕ್ಕದ ಮನೆಯ ಹುಡುಗರೆಲ್ಲ ಹೊಸ ಬಟ್ಟೆ ತೊಟ್ಟು ಸಂಭ್ರಮಿಸುತ್ತಿದ್ದರೆ ಬಡತನವನ್ನೇ ಹಾಸು ಹೊದ್ದಿರುವ ನನ್ನವ್ವ ತಾನು ಕೆಲಸ ಮಾಡುತ್ತಿದ್ದ ಮನೆಯ ಯಜಮಾನಿತಿ ಪ್ರೀತಿಯಿಂದಲೇ ನೀಡಿದ ತುಸು ಹಳೆಯದಾದ ಬಟ್ಟೆಯನ್ನೇ ತಂದು ನನಗೆ ತೊಡಿಸಿ ಖುಷಿಪಡುತ್ತಿದ್ದಳು. ಬದುಕಿನುದ್ದಕ್ಕೂ ಎಂದೂ ಸಂತಸ ಕಾಣದ ನನ್ನವ್ವ ನಾನು ಮೊದಲ ಸಲ ಎಸ್.ಎಸ್.ಎಲ್.ಸಿ ಯಲ್ಲಿ ಪ್ರಥಮ ಶ್ರೇಣಿಯಲ್ಲಿ ಪಾಸಾಗಿರುವುದಕ್ಕೆ ತುಂಬಾ ಖುಷಿಪಟ್ಟಿದ್ದಳು ಅವಳ ಆ ಸಂತೋಷ ಹೇಳತೀರದು. ಯಾವಾಗಲೂ ನನ್ನವ್ವನನ್ನು ನಾನು ಹೀಗೆಯೇ ನೋಡಬೇಕೆನಿಸುತ್ತೆ. 
ವಿಶಾಲ ಮನೋಭಾವನೆಯ ನನ್ನಪ್ಪ ತನ್ನ ಕಷ್ಟದ ದಿನಗಳಲ್ಲಿ ಕಂಗಾಲಾಗಿದ್ದಾಗಲೂ ನನ್ನವ್ವ ಆತನಿಗೆ ಧೈರ್ಯ ತುಂಬಿ ಆತನ ಏಳಿಗೆಯಲ್ಲಿ ಪಾಲುದಾರಳಾಗಿದ್ದಾಳೆ. ದಿನವೂ ಶಾಲೆ ತಪ್ಪಿಸದಂತೆ ಅತೀ ಮುದ್ದಿನಿಂದಲೇ ಏನಾದರೊಂದು ತಿನಿಸು ನೀಡಿ ಶಾಲೆಗೆ ಕಳಿಸುತ್ತಿದ್ದ ನನ್ನವ್ವನ ಋಣ ನನ್ನ ಬಹುಜನ್ಮದ ಸೇವೆಯಿಂದಲೂ ತೀರಿಸಲಾಗದು. ಹ್ಮ,,,, ಹೀಗೆ ಅವ್ವನ ನೆನಪಾದ ಕೂಡಲೇ ಭಾವೋದ್ವೇಗಕ್ಕೆ ಒಳಗಾಗುವ ನಾನು ಅವ್ವನ ಕುರಿತು ಬರೆಯುವುದೆಂದರೆ ತುಸು ಹೆದರಿಕೆ. ಯಾಕೆಂದರೆ ಅವ್ವನೆಂದರೆ ಮುಗಿಯದ ಅಧ್ಯಾಯ, ಅವ್ವ ನನ್ನ ವಿಶ್ವಕೋಶ, ನಾನವಳನ್ನು ಪದಗಳಲ್ಲಿ ಬಂಧಿಸಿಡಲು ಅಸಹಾಯಕನಾಗಿದ್ದೇನೆ. ಅವಿಭಕ್ತ ಕುಟುಂಬಕ್ಕೆ ಹಿರಿ ಸೊಸೆಯಾಗಿ ಬಂದು ಸಾಕಷ್ಟು ಕಷ್ಟಗಳನ್ನು ಅನುಭವಿಸಿದ ನನ್ನವ್ವ ಈಗ ತುಂಬು ಸಮಾಧಾನಿ. 

“ ಮನೆಯೆಂಬುದೊಂದು ಮಂದಿರವಾಗಬೇಕಾದರೆ
  ಅಲ್ಲಿ ತಾಯಿ ದೇವರು ಇದ್ದರಷ್ಟೇ ಸಾಧ್ಯ “

ನನ್ನ ತಂಗಿಯ ಇಬ್ಬರು ಹೆಣ್ಣು ಮಕ್ಕಳೊಂದಿಗೆ ಹರಟೆ ಹೊಡೆಯುತ್ತ ಅವರ ಸಂತೋಷ್ಲದಲಿ ಭಾಗಿಯಾಗುತ್ತಾ ಮನೆಯೆಲ್ಲ ಸಂತಸಮಯವಾಗಿಸಿದ ನನ್ನವ್ವನಿಗೆ ಈಗ ಸುಮಾರು ಐವತ್ತರ ಪ್ರಾಯವಿರಬಹುದು. ಈಗಲೂ ಸದಾ ಚಟುವಟಿಕೆಯಿಂದಲೇ ಪಾದರಸದಂತೆ ಓಡಾಡುವ ನನ್ನವ್ವ ನೂರುಕಾಲ ಹೀಗೇಯೆ ನುಗು ನಗುತಾ ಇರಲಿ ಎಂಬುದೇ ನನ್ನ ಹಾರೈಕೆ.

ಮುಕ್ಕೋಟಿ ದೇವರಿಗೂ ಮಿಗಿಲಾದ ಅವ್ವನನ್ನು ಅಕ್ಷರಕ್ಕಿಳಿಸಲು ಆ ಬ್ರಹ್ಮನಿಗೂ ಸಾಧ್ಯವಿಲ್ಲಾ. ಅವ್ವನೆಂದರೆ ಅಕ್ಕರೆಯ ಆಗರ, ಮಮತೆಯ ಸಾಗರ. ಅದರಲ್ಲಿ ನಾನು ಬರೆದಿದ್ದು ಹನಿ ಮಾತ್ರ ಅಂತೆಯೇ ಭೂತಾಯಿಯನ್ನೂ ಅವ್ವನಿಗೆ ಹೋಲಿಸಿರುವುದಂಟು. ನನಗೆ ನನ್ನವ್ವ ಬದುಕ ಪಾಠ ಕಲಿಸಿದ ವಿಶ್ವವಿದ್ಯಾಲಯ ನಾನವಳ ನೆಚ್ಚಿನ ವಿದ್ಯಾರ್ಥಿಯೆಂಬುದೇ ನನಗೆ ಹೆಮ್ಮೆ.
-ಸಿದ್ದರಾಮ ತಳವಾರ, ದಾಸ್ತಿಕೊಪ್ಪ.    
 


 

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

2 Comments
Oldest
Newest Most Voted
Inline Feedbacks
View all comments
ಗುಂಡೇನಟ್ಟಿ ಮಧುಕರ
ಗುಂಡೇನಟ್ಟಿ ಮಧುಕರ
7 years ago

ಲೇಖಕ ಸಿದ್ದರಾಮ ತುಂಬ ಚೆನ್ನಾಗಿ ಬರೆದಿದ್ದಾರೆ. ಅವರ ತಾಯಿಯ ಪೂರ್ಣ ಚಿತ್ರಣ ಕಣ್ಣ ಮುಂದೆ ಕಟ್ಟುವಂತೆ ಬರೆದಿರಿದ್ದಾರೆ. ತಾಯಿಯ ಕುರಿತು ನಿಜವಾದ ಪ್ರೀತಿ, ಅಂತಃಕರಣವುಳ್ಳ ಮಗನಿಂದ ಮಾತ್ರ  ಇಂಥ ಲೇಖನ ಹೊರಬರಲು ಸಾಧ್ಯ.  ಇದೊಂದು  ಕೇವಲ ಅಕ್ಷರಗಳಿಂದ ಕೂಡಿದ ಲೇಖನವಾಗಿರದೆ ಸಿದ್ದರಾಮ  ಹೃದಯಾಂತರಾಳದಲ್ಲಿ  ಅದ್ದಿ ತೆಗೆದ ಭಾವನೆಗಳ ಗೂಡಾಗಿದೆ. ಇದೊಂದು ಒಳ್ಳೆಯ ಲಲಿತ ಪ್ರಬಂಧ ಮಾದರಿಯಲ್ಲಿ ಬಂದಿದೆ.

ಇಂಥ ಬೇರೆ ಬೇರ ವಿಷಯಗಳ   ಕುರಿತ  ಲಲಿತ ಪ್ರಬಂಧಗಳು ಅವರಿಂದ ಮೂಡಿಬರಲಿ. ಲಲಿತಪ್ರಬಂದ ಬರೆಯುವ ಶೈಲಿ ಅವರಲ್ಲಿದೆ. ಅವರು   ಅದನ್ನು ಸರಿಯಾದ ದಾರಿಯಲ್ಲಿ ದುಡಿಸಿಕೊಂಡದ್ದೇ ಆದರೆ ಅವರೊಬ್ಬ  ಒಳ್ಳೆಯ ಲಲಿತ ಪ್ರಬಂಧಕಾರರಾಗುವುದರಲ್ಲಿ ಸಂಶಯವಿಲ್ಲ…………. ಪದ್ಯದಂತೆ ಗದ್ಯಲೇಖನಗಳತ್ತಲೂ ಇನ್ನೂ ಹೆಚ್ಚಿನ  ಒಲವು ತೋರಿಸಲಿ

 

ಗುಂಡೇನಟ್ಟಿ ಮಧುಕರ, ಬೆಳಗಾವಿ

ಮೊ: 9448093589

santosh
santosh
7 years ago

It's super brother it heart touching bec I know ur family very well ……….presentation of matter is super no fake explanation .God bless ur mom for long with joy full life .

2
0
Would love your thoughts, please comment.x
()
x