ಅವ್ವ ನನ್ನನ್ನು ಕರೆದು ನನಗ ಸಲ್ಪು ಅಫು ತಂದು ಕೊಡು ಅಂದ್ಳು, ನಾ ಎಲ್ಲೆ ಸಿಗತದವ್ವಾ ಅಂದಾಗ ಬಾಯಿ ಮೇಲೆ ಸೆರಗಿಟ್ಟುಕೊಂಡು ಅಳಲು ಶುರು ಮಾಡಿದಳು. ನನಗೆ ಗಾಬರಿ ಆಗಿತ್ತೋ ಸಿಟ್ಟು ಬಂದಿತ್ತೋ ಈಗ ನೆನಪಿಲ್ಲ. ಅಫು ಅಂದ್ರೇನಂತ ನಾನೂ ಕೇಳ್ಲಿಲ್ಲ, ಅವ್ವನೂ ಹೇಳ್ಲಿಲ್ಲ. ಆ ಅಫು ತರೋ ವಿಚಾರ ಮಾತ್ರ ಅಲ್ಲಿಗೇ ನಿಂತಿತ್ತು. ನಾನು ಆಗ ಪಿಯುಸಿ ಓದ್ತಿದ್ದೆ, ಅಂದ್ರೆ, ಅಷ್ಟು ದೊಡ್ಡವನಿದ್ದೆ, ಆದ್ರೂ ನನಗೆ ಅಫು ಬಗ್ಗೆ ಗೊತ್ತಿರಲಿಲ್ಲ. ಈಗಿನ ಜನರೇಷನ್ ಹುಡುಗರಿಗೆ ಹೋಲಿಸಿದರೆ ಇಂಥದರಲ್ಲಿ ನಾನು ಹಿಂದಿದ್ದೆ ಅಂತ ಅನ್ನಬಹುದು. ಅವ್ವ ಒಂದಿನ ನನಗ ಅಫು ತರಲಿಕ್ಕೆ ಹೇಳಿದ್ಳು ಅಂತ ಸ್ವಲ್ಪ ವರ್ಷ ಆದಮೇಲೆ ಮನೆಯಲ್ಲಿರುವವರೆಲ್ಲ ಮಾತಾಡುತ್ತಾ ಕುಳಿತಾಗ ನಾ ಹೇಳಿದೆ. ಅಮ್ಮ ಅಳಲು ಶುರು ಮಾಡಿದ್ಳು. ಅಕಿಗೆ ನಿಮ್ಮಜ್ಜನ್ನ ಬಿಟ್ಟು ಇದ್ದ ಗೊತ್ತಿದ್ದಿಲ್ಲ, ಎಂಟು ವರ್ಷದಕಿದ್ದಾಗ ಲಗ್ನ ಮಾಡಕೊಂಡು ಈ ಮನಿಗೆ ಬಂದ್ಳು. ಈಗ, ಹೆಚ್ಚು ಕಮ್ಮಿ ಅರವತ್ತು ವರ್ಷ ಜೊತಿಗಿದ್ದು ಈಗ ಒಮ್ಮೆಲ್ಗೆ ಒಬ್ಬಕಿನ ಇರೋದಂದ್ರ ಸಾಧ್ಯದ ಮಾತೇನು? ಮಕ್ಕಳು, ಸೊಸೆಂದ್ರು, ಅಳಿಯಂದ್ರು, ಇಪ್ಪತ್ತೈದು ಮೂವತ್ತು ಮಮ್ಮಕ್ಕಳು, ಆದ್ರ ಯಾರಿದ್ರೇನು, ನಮ್ಮಪ್ಪ ಇದ್ದಂಗಾದೀತೇನು? ತಮ್ಮಪ್ಪನ್ನ ನೆನೆಸಿಕೊಂಡು ಅಮ್ಮನ ಗಂಟಲುಬ್ಬಿ ಮಾತು ಕಟ್ಟಿ ಹೋಯಿತು.
ಅದೊಂದು ಯುಗ, ನಮ್ಮ ಮನಿತನ ರಾಮರಾಜ್ಯ ನಡಿಸಿಧಂಗ ನಡಿಸಿದ ನಮ್ಮಪ್ಪ, ಅದೇನು ಮಂದಿನ್ನ ಹಚಗೋಳೋದು, ಅದೇನು ಅಂತಃಕರಣ, ಅದೇನು ಬಂದ ಮಂದಿಗೆ ಮರ್ಯಾದಿ ಮಾಡೋದು, ಎಲ್ಲಾ ನೆನಿಸಿಗೋತ ಕೂಡಂಗಾಗಿ ಹೋತು, ಅಮ್ಮನ ಅಳು ಮುಂದುವರಿಯಿತು, ಎಲ್ಲರ ಕಣ್ಣುಗಳೂ ಒದ್ದೆಯಾದವು. ಅಮ್ಮ ತಮ್ಮಪ್ಪನ ಬಗ್ಗೆ ಹೇಳುವಾಗ ಪ್ರತೀ ಸಲಾನೂ ರಾಜ ಮಹಾರಾಜರ ಆಡಳಿತ ಕಣ್ಣಮುಂದೆ ನಡೆದಂತಿರುತ್ತಿತ್ತು.
ಅಜ್ಜನ ಮನೆಯ ಒಡನಾಟವನ್ನು ನೆನಪು ಮಾಡಿಕೊಂಡಾಗ ಅಮ್ಮ ಹೇಳಿದ್ದು ಅಕ್ಷರಶಃ ನಿಜ ಎನ್ನಿಸುತ್ತಿತ್ತು. ಹಿಂಡು ಹಿಂಡು ಜನ ಅಜ್ಜನನ್ನು ತಮ್ಮ ಗುರುಗಳು ಎಂದು ಭಾವಿಸಿ ಅನುಯಾಯಿಗಳಾಗಿದ್ದನ್ನು, ಅಜ್ಜ ಹೇಳಿದ್ದನ್ನು ಚಾಚೂ ತಪ್ಪದೇ ಪಾಲಿಸುತ್ತಿದ್ದುದನ್ನು, ವರ್ಷದಲ್ಲಿ ಕನಿಷ್ಠ 3-4 ಸಲವಾದರೂ ಎಷ್ಟೇ ದೂರವಾದರೂ ಭೇಟಿಯಾಗಲು ಬರುವುದನ್ನು ನಾನು ಕಣ್ಣಾರೆ ಕಂಡಿದ್ದೇನೆ. ಈ ಹಿಂಡು ಜನ ಅಜ್ಜ ಕೊಟ್ಟ ಎಲೆ ಅಡಿಕೆ ತಿನ್ನುತ್ತಾ ಇಡೀ ರಾತ್ರಿ ಅಜ್ಜನ ಮಾತು ಕೇಳುತ್ತಾ ಮಂತ್ರ ಮುಗ್ಧರಾಗಿ ಕುಳಿತಿದ್ದನ್ನು ನೆನೆದರೆ ಅಜ್ಜ ಒಬ್ಬ ಧರ್ಮಾಧಿಕಾರಿ ಆಗಿದ್ದರು ಅನ್ನುವ ಅನಿಸಿಕೆ ಧೃಡವಾಗುತ್ತಾ ಹೋಗುತ್ತದೆ. ಅಜ್ಜನ ಬಗ್ಗೆ ಹೇಳಿದಷ್ಟೂ ಕಡಿಮೆಯೇ.
ಅಜ್ಜ-ಅವ್ವನಿಗೆ ಲಕ್ಷ್ಮಿ-ನಾರಾಯಣರೇ ಎಂದು ನಮಸ್ಕರಿಸಿದವರ ಸಂಖ್ಯೆ ಕಡಿಮೆಯೇನಿಲ್ಲ. ಈ ಲಕ್ಷ್ಮಿ ಈ ನಾರಾಯಣರ ಜೊತೆ ಹೆಚ್ಚು ಕಮ್ಮಿ ಅರವತ್ತು ವರ್ಷ ಸಂಸಾರ ಮಾಡಿದ್ದನ್ನು ನೋಡಿದರೇ ಹೇಳಬಹುದು ಇವರದು ಹೇಳಿ ಮಾಡಿಸಿದ ಜೋಡಿ ಎಂದು, ಅಥವಾ ಆ ದೇವರೇ ಮಾದರಿಗಾಗಿ ಇವರನ್ನು ಜೋಡಿ ಮಾಡಿದ್ದನೇನೋ ಅನ್ನಿಸುತ್ತದೆ.
ಅಜ್ಜನ ಕುಟುಂಬವೇ ದೊಡ್ಡದು, ಅದರ ಜೊತೆಗೆ, ಅಜ್ಜನ ತಮ್ಮನ, ಅಕ್ಕಂದಿರ ಕುಟುಂಬ, ಅವರ ಬಳಗದವರು ಬಂದು ಹೋಗುವುದರ ಜೊತೆಗೆ ಈ ಹಿಂಡು ಹಿಂಡು ಜನ. ಹಾಗೆ ನೋಡಿದರೆ ಅಜ್ಜ ಏನೂ ಇದ್ದ ಧನಿಕ ಏನಲ್ಲ. ಆದರೂ ಇದ್ದಿದ್ದರಲ್ಲಿ ಹಿರಿಯರೆಲ್ಲರಿಗೂ ಎರಡು ಹೊತ್ತು ಮಕ್ಕಳಿಗೆ ಮೂರು ಹೊತ್ತು ಮಾಡಿ ಹಾಕುವುದು ತನ್ನ ಕರ್ತವ್ಯವೆಂದೇ ತಿಳಿದು, ಅದನ್ನು ಒಂದೇ ಒಂದು ಕೊರತೆ ಇಲ್ಲದಂತೆ ನಿಭಾಯಿಸುತ್ತಿದ್ದ ಅವ್ವ, ಅದು-ಇದನ್ನ ಜೋಡಿಸಿ, ಮನೆಯ ಅಕ್ಕ-ಪಕ್ಕದಲ್ಲಿ ಬೆಳೆದ, ಬೆಳೆಸಿದ ಸೊಪ್ಪು, ತರಕಾರಿಗಳಿಂದ ಅಡಿಗೆ ತಯಾರಿಸಿ ಬಡಿಸುತ್ತಿದ್ದ ಅವ್ವ, ಲಕ್ಷ್ಮಿಯಿಂದ ಅನ್ನಪೂರ್ಣೆಯಾಗಿಬಿಡುತ್ತಿದ್ದಳು. ಒಮ್ಮೆ ಏನೂ ತರಕಾರಿ ಇಲ್ಲದಾದಾಗ ಅಜ್ಜನ ಮರ್ಯಾದೆಯ ಪ್ರಶ್ನೆ ಎಂದು ವೀಳ್ಯದೆಲೆಯಿಂದಲೇ ಎರಡು ಮೂರು ವ್ಯಂಜನ ತಯಾರಿಸಿದ್ದೂ ಉಂಟಂತೆ. ದಿನದ ಹದಿನೆಂಟು ಗಂಟೆ ಮೈ ಮುರಿಯ ದುಡಿತ. ಗಾಣದ ಎತ್ತು. ನೆನೆಸಿಕೊಂಡರೆ ಅವ್ವನಿಗಾಗಿ ತಂತಾನೇ ಮನಸ್ಸು ರೋದಿಸುತ್ತದೆ.
ಅಡಿಗೆ ಮಾಡುವುದಿರಲಿ, ಪೂಜೆಯಿರಲಿ, ಊರಿಗೆ ಹೋಗುವುದಿರಲಿ ಅವ್ವ ಮಾಡಿಕೊಳ್ಳುತ್ತಿದ್ದ ಪೂರ್ವಸಿದ್ಧತೆ ಅವ್ವನ ಶಿಸ್ತು ಶ್ರದ್ಧೆಗಳನ್ನು ತೋರಿಸುತ್ತಿತ್ತು. ಬೆಂಕಿ ಪೊಟ್ಟಣದಿಂದ ಹಿಡಿದು ವಗ್ಗರಣೆಗೆ ಬೇಕಾಗುವ ಸಾಮಾನುಗಳವರೆಗೂ, ಆ ದಿನಕ್ಕೆ ಬೇಕಾಗುವಷ್ಟು ಕಟ್ಟಿಗೆಯನ್ನೂ, ಎಲ್ಲ ತರಕಾರಿಗಳನ್ನೂ ಹೆಚ್ಚಿ ಒಲೆಯ ಹತ್ತಿರ ಇಟ್ಟುಕೊಂಡು ಎಲ್ಲವೂ ಸರಿಯಾಗಿದೆಯೇ ಎಂದು ಧೃಡಪಡಿಸಿಕೊಂಡು ಮಲಗುವುದು, ಬೆಳಿಗ್ಗೆ ಅಜ್ಜ ಕೇಳುವ ಮುಂಚೆಯೇ ನೈವೇದ್ಯಕ್ಕೆ ಬಡಿಸಿಟ್ಟು, ಅಜ್ಜ ಪೂಜೆ ಮುಗಿಸಿ ಬರುವ ಮೊದಲೇ ಅಡಿಗೆಮನೆ ಸ್ವಚ್ಛಗೊಳಿಸಿ ಮರುದಿನಕ್ಕೆ ಮಡಿಬಟ್ಟೆ ಹಾಕಿಕೊಂಡು ಮಡಿನೀರು ತುಂಬಿಟ್ಟುಕೊಂಡು ಅಜ್ಜನಿಗಾಗಿ ಎಲೆ ಬಡಿಸಿಟ್ಟು ಕಾಯುವುದು, ಊರಿಗೆ ಹೊರಟರೆ ತನ್ನ ಮತ್ತು ಅಜ್ಜನ ಬಟ್ಟೆಗಳನ್ನು ಶುಭ್ರವಾಗಿ ಒಗೆದು ಮಡಿಸಿಟ್ಟುಕೊಳ್ಳುವುದು, ತನ್ನ ಮೇಣ-ಕುಂಕುಮ, ಹೆರಳಿಗೆ ಹಾಕುವ ಸೆuಬು, ಕನ್ನಡಿ, ಬಾಚಣಿಕೆ ಮೊದಲು ಮಾಡಿ ಅಜ್ಜನಿಗೆ ಹೋಗುವಷ್ಟು ದಿನಕ್ಕೆ ಸಾಕಾಗುವಷ್ಟು ಅಡಿಕೆ, ಎಲೆ, ಸುಣ್ಣ, ಕಾಚುಗಳನ್ನೂ ಸಿದ್ಧ ಪಡಿಸಿಟ್ಟುಕೊಳ್ಳುವುದು, ಎಲ್ಲ ಕೆಲಸ ಮುಗಿಸಿ ಎಷ್ಟೇ ಶ್ರಮವಾಗಿದ್ದರೂ ಸಾಯಂಕಾಲ ಹೆರಳು ಹಾಕಿಕೊಂಡು ಮುಖ ತೊಳೆದು ಕುಂಕುಮ ತೀಡಿ, ದೇವರ ದೀಪ ಹಚ್ಚಿ ಹಾಡು-ಹಸೆ, ಬತ್ತಿ ಮಾಡುತ್ತಾ ತಲಬಾಗಿಲ ಕಟ್ಟೆಗೆ ಕೂರುವುದು, ಮತ್ತೇ ರಾತ್ರಿಯ ತಯಾರಿ, ಹೀಗೇ ಇವೆಲ್ಲವನ್ನೂ ಅಜ್ಜ ಹೋಗುವವರೆಗೂ ಅಂದರೆ ತನ್ನ ಇಳಿವಯಸ್ಸಿನಲ್ಲೂ ಹಾಗೆಯೇ ನಡೆಸಿಕೊಂಡು ಬಂದಿರುವುದು ಅವ್ವ ಸಂಸಾರ ಮತ್ತು ಪದ್ಧತಿಗಳ ಮೇಲೆ ಇಟ್ಟಿದ್ದ ನಂಬಿಕೆ ಕಾರಣ ಇರಬಹುದು. ಯಾಕಿಷ್ಟು ನಿಯತ್ತು, ನಿಷ್ಠೆ, ನಂಬಿಕೆ ಎಂದು ಅವ್ವನನ್ನು ಯಾರೂ ಕೇಳಿರಲಿಕ್ಕಿಲ್ಲ, ಅವ್ವನೂ ಈ ನಿಟ್ಟಿನಲ್ಲಿ ಯೋಚಿಸಿರಲಿಕ್ಕಿಲ್ಲ. ನಿನ್ನ ಮನಸ್ಸು ಯಾವತ್ತೂ ರೋಸಿಹೋಗಲಿಲ್ಲವೇ ಎಂದು ಕೇಳಬೇಕಿತ್ತೆನಿಸುತ್ತದೆ.
ಅಮ್ಮ ಹೇಳಿದ್ದ ಒಂದು ಘಟನೆಯಂತೂ ಅವ್ವನ ಎದೆಗಾರಿಕೆಗೆ, ತನಗೊಪ್ಪಿಸಿದ ಕೆಲಸವನ್ನು ಮಾಡುವ ನಿಯತ್ತಿಗೆ, ತನಗೆಷ್ಟೇ ಕಷ್ಟವಾದರೂ ಇತರರಿಗೆ ಸಹಾಯ ಮಾಡುವ ಆ ಮನಸ್ಸು ಎಲ್ಲರಿಗೂ ಇರಬೇಕೆನಿಸುತ್ತದೆ. ಆ ಎದೆಗಾರಿಕೆ ಎಲ್ಲರಿಗೆ ಬೇಕು ಅನ್ನಿಸಿದರೂ ಆ ಕಷ್ಟ ಯಾರಿಗೂ ಬೇಡ ಎನ್ನಿಸುತ್ತದೆ. ಸುಮಾರು 65-66ನೇ ಇಸ್ವಿ ಇರಬಹುದು. ಅಮ್ಮ ಅಪ್ಪ ಆಗ ಧಾರವಾಡದ ಒಂದು ಹಳ್ಳಿಯಲ್ಲಿದ್ದರಂತೆ. ಅಮ್ಮನಿಗೆ ಹುಷಾರಿಲ್ಲದ ಕಾರಣ ಅಪ್ಪ ಪತ್ರ ಹಾಕಿ ಅವ್ವನನ್ನು ಕರೆಸಿಕೊಂಡಿದ್ದರಂತೆ. ಆಗ ಅಜ್ಜ ಅವ್ವ ರಾಯಚೂರು ಜಿಲ್ಲೆಯ ಮೂಲೆಯ ಒಂದು ಹಳ್ಳಿಯಲ್ಲಿದ್ದರಂತೆ. ಪತ್ರ ಮುಟ್ಟುವುದೇ ವಾರಾನುಗಟ್ಟಲೆಯಾಗುವ ಕಾಲ. ಪತ್ರ ಮುಟ್ಟಿದ ಕೂಡಲೆ ಅಜ್ಜನಿಗೆ ಸಮಯವಿಲ್ಲದ ಕಾರಣ ಅವ್ವ ಒಬ್ಬಳೇ ಹೊರಟು ಬಂದಳಂತೆ. ಹೊರಡುವ ದಿನ ಮನೆಯಲ್ಲಿ ಅಜ್ಜನ ಪೂಜೆ ಊಟ ಮುಗಿಸಿ ತಾನು ಊಟ ಮಾಡಿ, ಹುಷಾರಿಲ್ಲದ ಮಗಳ ಮನೆಗೆ ಬೇಕಾದ ಚಟ್ನಿಪುಡಿ, ಮೆಂತ್ಯಹಿಟ್ಟು, ಅಳ್ಳಿಟ್ಟುಗಳನ್ನು ಕಟ್ಟಿಕೊಂಡು, ಒಂದು ಚೀಲದಲ್ಲಿ ತನ್ನ ಬಟ್ಟೆ, ಒಂದು ತಿರಣಿ ತಂಬಿಗೆಯಲ್ಲಿ ನೀರು ತುಂಬಿಕೊಂಡು ಉರಿಬಿಸಿಲಿನಲ್ಲಿ ಒಬ್ಬಳೇ ಬಂದು ಕಾದು ಕೂತು ಅವರಿವರನ್ನು ಕೇಳಿ ಧಾರವಾಡದ ವರೆಗೆ ಬಂದು ಅಲ್ಲಿಂದ ಬಸ್ಸು ಬದಲಿಸಿ 100 ಕಿಮಿ ದೂರದಲ್ಲಿರುವ ಹಳ್ಳಿಗೆ ಬಂದು ತಲುಪಿದಳಂತೆ. ಮಡಿ ಎಂದು ಹೊರಗಿನ ಯಾವ ಪದಾರ್ಥವನ್ನೂ ತಿನ್ನದ ಅವ್ವ ಬರೀ ನೀರು ಕುಡಿಯುತ್ತಾ ಅಲ್ಲಿಗೆ ಬಂದು ತಲುಪಿದಳಂತೆ. ಇಷ್ಟೇ ಅಲ್ಲ, ಬಂದ ಕೂಡಲೇ ಆರಾಮ ಕೂಡುವ ಜೀವವೂ ಅದಲ್ಲ, ಕೂಡುವ ಸಮಯವೂ ಆಗಿರಲಿಲ್ಲ. ದೂರದ ಬಾವಿಯಿಂದ ಬಳಕೆ ನೀರು, ಸಿಹಿನೀರು ತಂದು ಸ್ನಾನ, ಅಡಿಗೆ ಮುಗಿಸಿ ಮಗಳಿಗೆ ಉಣಿಸಿ ನಂತರ ತಾನು ಉಂಡಳಂತೆ. ನಾನು ಇದನ್ನ ಕೇಳಿದಾಗಲೇ ಕರುಳು ಚುರ್ ಅಂದುಹೋಯಿತು. ಅನುಭವಿಸಿದ ಆ ಜೀವಕ್ಕೆ ತಂತಾನೆ ಮನ ನಮಸ್ಕರಿಸಿತು. ಈಗಿನಂತೆ ವಾಹನಗಳ ಫೋನ್‍ನ ಸಂದೇಶಗಳ ರವಾನೆಯ ಯಾವುದೇ ಸೌಕರ್ಯವಿಲ್ಲದ ಆ ಕಾಲದಲ್ಲಿ, ಎಂದೂ ಮನೆ ಬಿಟ್ಟು ಒಬ್ಬಳೇ ಹೊರಬರದ ಅವ್ವ ಒಬ್ಬಳೇ ಹೊರಟುಬಂದದ್ದು ಎದೆಗಾರಿಕೆ ಎನ್ನಿಸಿದರೂ ಅವ್ವನಿಗೆ ಒದಗಿದ ಕಷ್ಟಗಳಿಗೆ, ಪರಿಸ್ಥಿತಿಯ ಅನಿಯಾರ್ಯತೆಗೆ ಮನಸ್ಸು ಮುದುಡಿತು.
ಇಂಥ ಅವ್ವ, ಅಜ್ಜ ಹೋದಮೇಲೆ ಒಮ್ಮಿಂದೊಮ್ಮೆಲೆ ಕೈ ಖಾಲಿಯಾದಂತಾಗಿ ಹೋದಳೋ ಏನೋ, ತಾನು ಹುಟ್ಟಿದ್ದೇ ಅಜ್ಜನಿಗಾಗಿ, ಅವರ ಮನೆಯವರಿಗಾಗಿ ದುಡಿಯಲು, ಇನ್ನು ಮಾಡುವುದಕ್ಕೆ ಏನೂ ಇಲ್ಲ ಎಂದು ಭಾವಿಸಿದಳೋ ಏನೋ. ಅದಕ್ಕೇ ಅಫು ತಿನ್ನಲು ಯೋಚಿಸಿದಳೋ ಏನೋ.
ಅಜ್ಜ ಹೋದದ್ದು ರಾಮೇಶ್ವರದಲ್ಲಿ. ತನ್ನ 76ನೇ ವಯಸ್ಸಿನಲ್ಲಿ ಎಲ್ಲರಿಗೂ ಹೇಳುವುದು ಕೇಳುವುದು ಎಲ್ಲ ಮುಗಿಸಿ ಯಾತ್ರೆಗೆ ಹೋದ ಅಜ್ಜ ಮರಳಿ ಬರಲಿಲ್ಲ. ಅಜ್ಜ ದೈವಾಂಶ ಸಂಭೂತ, ಅವರಿಗೆ ತಾನು ವಾಪಸ್ ಬರುವುದಿಲ್ಲ ಎಂದು ಮೊದಲೇ ತಿಳಿದಿತ್ತು, ನೀನೂ ಬೇಗ ಬಂದು ಬಿಡ್ತೀಯ ಎಂದು ಅವ್ವನಿಗೆ ಅಜ್ಜ ಮೊದಲೇ ಹೇಳಿದ್ದರು ಅಂತ ಅವ್ವ ಹೇಳಿದ ನೆನಪಿದೆ.
ನನ್ನ ಧಡ್ಡತನದಿಂದಲೋ ಏನೋ ಆ ದಿನ ಆವ್ವನಿಗೆ ನಾನು ಅಫು ತಂದು ಕೊಡಲಿಲ್ಲ. ಆದರೆ ಅದಾದ ನಂತರ ಅವ್ವ ಬಹಳ ದಿನ ಬದುಕಲಿಲ್ಲ. ಅಜ್ಜನ ವರ್ಷದ ಶ್ರಾದ್ಧವಾದ ಕೆಲವೇ ದಿನಗಳಲ್ಲಿ ಅವ್ವನೂ ಹೊರಟುಹೋದಳು. ಅವ್ವ ಅಜ್ಜನ ಮಧ್ಯೆ ಹೆಚ್ಚಿನ ವಯಸ್ಸಿನ ಅಂತರವಿರಲಿಲ್ಲವಂತೆ. ಮುಂದಿನ ಜನ್ಮದಲ್ಲೂ ಅಜ್ಜನ ಹೆಂಡತಿಯಾಗಲು, ಅವರ ನಂತರ ಹುಟ್ಟಲು ಅವ್ವ ಒಂದು ವರ್ಷ ಕಾದಳೇನೋ ಎನಿಸುತ್ತದೆ.
ಅವ್ವ ನಮ್ಮ ಪುರಾಣಗಳಲ್ಲಿ ಬರುವ ಯಾವ ಪತಿವೃತೆಯರಿಗೂ ಕಡಿಮೆಯಿಲ್ಲ ಎನಿಸುತ್ತದೆ. ಅವಳು ಒಬ್ಬ ಅಪ್ಪಟ ಭಾರತೀಯ ಪರಿಪೂರ್ಣ ಮಹಿಳೆ ಎನಿಸುತ್ತದೆ. ಮೌಲ್ಯಗಳ ಬಗ್ಗೆ, ಸಂಬಂಧಗಳ ಮೇಲಿನ ನಂಬಿಕೆ ಶ್ರದ್ಧೆ ಕಡಿಮೆಯಾಗುತ್ತಿರುವ ಈ ಕಾಲದಲ್ಲಿ, ಇಂಥ ಜೀವ ಒಂದಿತ್ತು ಎಂದು ಜನ ತಿಳಿದುಕೊಳ್ಳುವ, ಅವಳು ಮೌಲ್ಯಗಳ ಮೇಲಿಟ್ಟ ನಂಬಿಕೆಯ ಬಗ್ಗೆ ತಿಳಿದುಕೊಳ್ಳುವ ಅಗತ್ಯತೆ ಇದೆ ಎನಿಸುತ್ತದೆ. ಅವ್ವನ ಬಗ್ಗೆ ನನಗೆ ಗೊತ್ತಿದ್ದಷ್ಟು ಮತ್ತೆ ಯಾವಾಗಲಾದರೂ ಹೇಳಲು ಬಯಸುತ್ತೇನೆ. ಪ್ರಯತ್ನಿಸುತ್ತೇನೆ.
****