ಅಂಗಿ ಅಂದ್ರೇ ಮಾನ ಮುಚ್ಚುತ್ತೆ, ಅಂಗಿ ಅಂದ್ರೇ ನಮ್ಮ ಅಂದ ಹೆಚ್ಚೀಸುತ್ತೆ ,ಅಂಗಿಗೆ ಹಲವಾರು ಬಣ್ಣ, ಅಂಗಿಗೆ ಹಲವಾರು ಗುಣಧರ್ಮ ಇದು ಕೊಳ್ಳುವವನ ಆರ್ಥಿಕತೆಯ ಮೇಲಿನ ಅವಲಂಬನೆ. ಹೀಗೆ ಅಂಗಿಯ ವಿಚಾರ ಬಂದಾಗಲೆಲ್ಲಾ ಹೀಗೆಲ್ಲ ಹೇಳಬಹುದು. ಬಹುಶಃ ನಾನ ಚಿಕ್ಕವನಿದ್ದಾಗಿನಿಂದ ಕೇಳಿದ್ದು ‘ಅ’ ಅಂದ್ರೇ ಅವ್ವ ‘ಅಂ’ ಅಂದ್ರೇ ಅಂಗಿ, ಸರ್ಕಾರಿ ಕನ್ನಡ ಪಾಠ ಶಾಲೆಯ ಪಾಠ ನಿಜ ನೋಡಿ, ಯಾಕಂದ್ರೇ ಕನ್ನಡ ಶಾಲೆಗಳು ಬದುಕುವ ಕಲೆಗಳನ್ನೂ ಕಲಿಸುತ್ತವೆ. ಅವ್ವ ಮತ್ತು ಅಂಗಿ ಯಾವತ್ತು ನಮ್ಮ ಮಾನ ತಗಿಯಲ್ಲ, ಅವ್ವ ಅಂಗಿ ತೊಡಿಸುವಾಗ ಎರಡು ಕೈಗಳನ್ನ ಅಗಲಿಸಿ ಆಯಾಮಗಳನ್ನ ಹೇಳಿ ಕೊಟ್ಟವಳು. ಅಂಗಿಯನ್ನ ಇನ್ನ್ ಶರ್ಟ್ ಮಾಡುವಾಗ ಕೈ ಮೇಲಕ್ಕೆ ಎತ್ತೀಸಿ ಸೂರ್ಯ ನಮಸ್ಕಾರದಂತ ಯೋಗದ ಪಾಠಗಳನ್ನ ಹೇಳಿ ಕೊಟ್ಟವಳೂ. ಹರಿದ ಅಂಗಿಯ ಹೊಲಿದು ನನ್ನ ಮಾನ ಮುಚ್ಚಿ ಮೆರೆದವಳು.
ಜಳಕ ಮಾಡಿಸಿ ಅಂಗಿ ಹಾಕಿ ಕೊಳ್ಳದೆ ಹಠಕ್ಕೆ ಬಿದ್ದಾಗ ಸಂತೈಸಲೂ ನನ್ನನ್ನ ಊರು ರಾಜನಿಗೆ ಹೋಲಿಸುವ ಅವಳ ಮಾತುಗಳು ಈಗಲೂ ನನ್ನ ಕಿವಿಯ ಮೇಲೆ ಕುಣಿಯುತ್ತಿವೆ.
ನಮ್ಮೂರಿನ ಸೋಮವಾರದ ಸಂತೆಯಲ್ಲಿ,ಕಾದಿಟ್ಟ ಪುಡಿಗಾಸಿನಲ್ಲಿ ಬಟ್ಟೆಯ ಮಾರುವವನ ದರದ ಚೌಕಾಶಿಗೆ ಕೆಲವೊಮ್ಮೆ ಸೋತು, ಬಟ್ಟೆ ಖರೀದಿಸಿ ಮಗನ ಅಂದಕೆ ತಕ್ಕಂತೆ ಅಂಗಿಯ ಹೊಲಿಸಲು, ಸಿಂಪಿಗನ ಹತ್ತಿರ ಹೋಗಿ ಹಬ್ಬಕ್ಕೆ ಕೊಡಿ ಸ್ವಾಮಿ…. ಅಂತ ಗೋಗರೆದ ಅದೇಷ್ಟೋ ಸಂಗತಿಗಳು ಈಗಲೂ ನನ್ನ್ ಕಣ್ಣ ಮುಂದೆ ಹಾಗೆ ಇದೆ.
ಸಿಂಪಿಗ ಅಂಗಿಯ ಅಳತೆ ತೆಗೆದು ಕೊಳ್ಳುವಾಗ ಎದೆ ಸೆಟಿಸಿ ನಿಲ್ಲುವ ಕಲೆ ಕಲಿಸಿ ಕೊಟ್ಟವಳು. ಅದರಲ್ಲಿಯೂ ಉದ್ದನೆಯ ತೋಳಿನ ಅಂಗಿಯ ಹೊಲಿದು ಕೊಡಿ ಅನ್ನುವುದರಲ್ಲಿ ಅವ್ವನ ಕಾಳಜಿ ನಿಜವಾಗಿಯೂ ಮೆಚ್ಚಬೇಕು. ಆಟ ಆಡುವಾಗ ಎಡುವಿ ಬಿದ್ದರೆ ಮೊಣಕೈಗೆ ಗಾಯ ಆಗದಿರಲಿ ಅನ್ನೋ ಈ ಅವ್ವನ ಕಾಳಜಿಗೆ ನಾನು ಈಗಲೂ ಮೂಖ ವಿಸ್ಮಿತ. ಅವ್ವನ ಈ ಕಾಳಜಿ ಕೇವಲ ಅಂಗಿಯ ಮೇಲಷ್ಟೆ ಅಲ್ಲ, ತುಂಬಿದ ಬಂಧು ಬಾಂಧವರ ಎದುರು ಮಗನು ಮೇಲಕ್ಕೆ ಕಾಣಬೇಕು ಅನ್ನೋ ಪ್ರೀತಿಯ ನಿಸ್ವಾರ್ಥ ಈಗ ಅರ್ಥ ಆಗುತ್ತೆ. ಅವ್ವನ ಆದಾಯದಲ್ಲಿ ಅಂಗಿಯ ಕೊಂಡು ಊರ ಹಬ್ಬ ಮಾಡುವ ಕಾಲವದು. ನನಗೆ ಈಗಲೂ ನೆನಪಿದೆ ಹೊಸ ಅಂಗಿಯನ್ನು ತಂದು ನೀರಿನಲ್ಲಿ ತೊಳೆದನಂತರ ಮೊದಲು ಹಸುವಿನ ಮೇಲೆ ಹಾಕಿ ಆಮೇಲೆ ಮೈಗೇರಿಸಿಕೊಂಡ ಆ ದಿನ. ಇದು ಅವ್ವನ ಕಾಳಜಿಯ ಇನ್ನೊಂದು ಮುಖ.ಮಗನಿಗೆ ದುಷ್ಟ ಶಕ್ತಿಗಳು ಬೆನ್ನು ಬೀಳಬಾರದು ಇಲ್ಲ ಹಸುವಿನ ಗುಣ ಮಗನಿಗೂ ಬರಲಿ ಅನ್ನೋ ನಂಬಿಕೆ ಇರಬಹುದೇನೋ…?
ನಾವು ಹೊಸ ಅಂಗಿ ಹಾಕಿಕೊಂಡ ಸಂತಸಕ್ಕಿಂತ ಹೆಚ್ಚಾಗಿ ಅವ್ವ ನಮಗೆ ತೊಡಸಿ ನೋಡುವ ಸಂಭ್ರಮ ಇದೆಯಲ್ಲ ಅದು ಅವ್ವನಿಗೆ ನಿಜವಾದ ಹಬ್ಬ. ಅವ್ವನಿಗೆ ಅವಳ ಹರಿದ ಸೀರೆಗಿಂತ ನನ್ನ ಅಂಗಿಯಗಳ ಮೇಲೆ ಹಿತಾಶಕ್ತಿ ಜಾಸ್ತಿ ಸ್ವಲ್ಪ ಗಲೀಜದಾದರೂ ನನ್ನ ಮೇಲೆ ಉರಿದು ಕೊಳ್ಳದೆ,ಬೇಜಾರಿಲ್ಲದೆ ಒಗೆದು ಒಣ ಹಾಕುವಳು. ಅದಲ್ಲದೆ ಹಿತ್ತಾಳೆಯ ಚಂಬಿನಲ್ಲಿ ಇದ್ದಿಲಾಕಿ ಕಾಯಿಸಿ ಇಸ್ತ್ರೀ ಹಾಕಿ ಕೊಡಲು ಅಂಗಿಗೆ ಮತ್ತೊಂದು ಹೊಸತನದ ಹೊಳಪು.ಹಾಕಿ ಕೊಂಡ ನನಗೆ ಇನ್ನೇಷ್ಟು ಇರಬೇಡ ಉತ್ಸುಕತೆ. ಹೀಗೆ ಊರ ಜಾತ್ರೇ ಮತ್ತು ಹಬ್ಬಗಳಿಗೆ ನನ್ನ ಅಂಗಿ ಹೊಸ ಹೊಳಪಿನೊಂದಿಗೆ ಮಿಂಚುತ್ತಿತ್ತು. ಇನ್ನೂ ಶಾಲಾ ರಾಷ್ಟ್ರೀಯ ಹಬ್ಬಗಳಿಗಂತೂ ನೀಲಿ ಎದ್ದಿದ ಬಿಳಿ ಅಂಗಿ ಫಳಫಳಿಪಿಸುತ್ತಿತ್ತು.
ಇಷೇಲ್ಲ ಹೇಳಿದ ಮೇಲೆ ನಿಮಗೆ ಅಂಗಿಗೆ ಇರುವ ಜೇಬಿನ ಬಗ್ಗೆ ಹೇಳಲೆ ಬೇಕು.ಅವತ್ತು ನಮ್ಮ ಶಾಲೆಯಲ್ಲಿ ಸರಸ್ವತಿ ಪೂಜೆಗೆ ಅಂತಾ, ಮೇಷ್ಟ್ರೂ ಒಂದೂ ರೂಪಾಯಿ ತರಲು ಹೇಳಿದ್ದರೂ ಅವ್ವನಿಗೆ ಪೂಜೆ ಅಂದ್ರೇ ಇಷ್ಟ್ .ಅವಳಿಗೆ ಇರುವ ದೇವರ ಮೇಲಿನ ನಂಬಿಕೆ ಈಗಲೂ ನಂಗೆ ಅಷ್ಟೀಲ್ಲ . ಇದನ್ನೇ ಅವ್ವನ ಮುಂದೇ ಹೇಳಿದರೇ ಈಗಲೂ ನನ್ನನ್ನೂ ನೀ.. ನನ್ನ ಮಗನೇ ಅಲ್ಲ ಅಂತ ಬೈಯುತ್ತಾಳೆ. ಅವಳಿಗಿರೋ ಆ ದೇವರ ಮೇಲಿನ ನಂಬಿಕೆ ಏನೋ ನನಗೇ ಅವಳ ಬಗ್ಗೆ ಬರೇಯಲು ಪ್ರೇರಿಪಿಸುತ್ತೇ. ಅದು ಏನೇ ಇರಲಿ, ಅವತ್ತು ಅವ್ವ ಕೊಟ್ಟ ಒಂದು ರೂಪಾಯಿ ನಾಣ್ಯ ಜೇಬಿಗಿರಿಸಿ ಶಾಲೆಗೆ ನಡೇದೆ,ಶಾಲೆಯಲ್ಲಿ ಜೇಬಿಗೆ ಕೈ ಇರಿಸಿ ನೋಡಿದರೆ ಹರಿದ ಜೇಬು ,ಅವ್ವ ಕೊಟ್ಟ ಒಂದು ರೂಪಾಯಿ ನಾಣ್ಯ ಬೀದಿಯ ಪಾಲು.
ಮನೆಗೆ ಹೋಗಿ ಅವ್ವನಿಗೆ ಹೇಳಿದ್ರೇ ಕಂಡಿತಾ ಬೈತಾಳೆ ಆದ್ರೇ ಏನ್ ಮಾಡೋದು ಶಾಲೆಯಲ್ಲಿ ಮೇಷ್ಟ್ರೇಗೆ ಹೇಳಿದರೂ ಬೈತಾರೇ ಅವರಿಗೆ ಒಂದ್ ರೂಪಾಯಿ ಕೊಡಲೇಬೇಕು. ಇಕ್ಕಟಿಗೆ ಸಿಕ್ಕಾಕಿಗೊಂಡೆ, ಅನಿವಾರ್ಯ ಮನೆಗೆ ಹೋಗಿ ಅವ್ವನಿಗೆ ಹೇಳಿದೆ .ಆದ್ರೇ.. ಅವ್ವ ಬೈಯಲಿಲ್ಲ. ನಿನ್ನೇದಿನ ಅಂಗಿ ತೊಳೆದು ಹಾಕುವಾಗ ನಿನ್ ಹರಿದು ಜೇಬು ನೋಡಿದ್ದೆ ಹೊಲಿದು ಕೊಡೋಣ ಅನ್ನುವಷ್ಟರಲ್ಲಿ ಯಾವುದೋ ಕೆಲಸದಲ್ಲಿ ಮರೇತು ಬಿಟ್ಟೆ. ತಪ್ಪು ನಿಂದಲ್ಲ ನಂದು ಅಂತಾ ಸಂತೈಸಿದಲೂ.. ಆದ್ರೇ ಅವ್ವನ ಕಣ್ಣುಗಳಲ್ಲಿ ಆ ಒಂದು ರೂಪಾಯಿ ನಾಣ್ಯದ ಹಿಂದಿರುವ ಶ್ರಮ ನನಗೆ ಎದ್ದು ಕಾಣಿಸುತ್ತಿತ್ತು.
ಈಗಲೂ ಅಷ್ಟೇ ಒಂದ್ ನೂರು ರೂಪಾಯಿ ಅಲ್ಲ ಒಂದ್ ರೂಪಾಯಿ ಕಳೆದು ಕೊಂಡರೂ ಅವ್ವ ನೆನಪಿಗೆ ಬರುತ್ತಾಳೆ ತಪ್ಪು ನಂದೇ ಇರುವಾಗ ನನಗೆ ನಾನೆ ಸಂತೈಸಿಕೊಳ್ಳುತ್ತೇನೆ. ಇದೇಲ್ಲಾ ಸಂಗತಿಗಳು ಬಾಲ್ಯ ಕೆಣಕಿದ್ರೇ ಹೊಸದೊಂದು ಈ ಯುಗದ ಅಂಗಿಗಳಿಗೆ ಮಾನವಿಲ್ಲ. ಮಾಯಾವಿ ಜಗತ್ತು ಅಂಗಿಯ ಅಂದಕ್ಕೆ ಅಡಚಣೆಯಾಗಿ ಎರಡೂ ತೋಳುಗಳನ್ನ ತುಂಡರಿಸಲಾಗಿದೆ. ಇದೇನು ಹೊಸದಲ್ಲ ಮೊದಲೆಲ್ಲ ಅಪ್ಪ ಕೆಲಸ ಮಾಡುವಾಗ ಹಾಕುವ ನಿಲುವಂಗಿಯು ಈಗ ಹೊಸ ರೂಪತಾಳಿದೆ ಅಷ್ಟೇ. ಕಾಲ ಬದಲಾಗಿದೆ ಅನ್ನೋ.. ಅದೇಷ್ಟೋ.. ಮೂರ್ಖರ ಮಧ್ಯ ಅಂಗಿಯ ವಿಚಾರದಲ್ಲಿ ಬೀದಿಯಲ್ಲಿ ಬಟ್ಟೆ ಮಾರುವವನ ಹೊಟ್ಟೆ ಮೇಲೆ ಹೊಡೆಯುವ ಬಾರದು ನೋಡಿ ಅದಕ್ಕೆ ಖರೀದಿಸಿ ಹಾಕಿ ಕೊಂಡ ಅಂಗಿ, ಕಿರಿದಾಗಿ ಇಲ್ಲಾ ದೊಡ್ಡಾಗಿ ಕಾಣುವಾಗಲೆಲ್ಲ ಅವ್ವ ನೆನಪಾಗುತ್ತಾಳೆ.
ದೊಡ್ಡದಾದ ಅಂಗಿಯನ್ನು ಟೈಲರ್ ಹತ್ರ ಹೋಗಿ ಇದನ್ನ ನಮ್ಮ ಸೈಜಿಗೆ ಹೊಲಿದು ಕೊಡಿ ಸ್ವಾಮಿ.. ಅಂದಾಗಲೆಲ್ಲ ನಮ್ಮ ಟೈಮಿಗೆ ಕೊಡದೆ ಸತಾಯಿಸೊ ಟೈಲರನನ್ನ ಮನದಲ್ಲೇ ಶಪಿಸುವಾಗ ಅವ್ವ ನೆನಪಾಗುತ್ತಾಳೆ. ‘ಮಾಲ್’ಗಳಲ್ಲಿ ಅಂಗಿಯ ರೇಟು ದುಬಾರಿ ಐನೂರೋ ಸಾವಿರೋ ಅಂತಾ ಫಿಕ್ಸ ರೇಟ್ ಬೇರೆ .ಆದ್ರೂ ಅವಸರಕ್ಕೆ ಕೊಂಡು ಕೊಂಡ ಅಂಗಿಯ ಬಿಲ್ಲ್ ನೀಡುವಾಗ ಅವ್ವನ ಪುಡಿಗಾಸಿನ ಹಿಂದಿದ್ದ ಶ್ರಮ ನೆನಪಾಗುತ್ತೆ. ಆಗಿನ ಕಾಲಕ್ಕೆ ಅವ್ವನ ಕೂಲಿ ದಿನಕ್ಕೆ ಹತ್ತು ರೂಪಾಯಿ. ಈಗ ನನಗಿದ್ದ ಸಂಬಳದಲ್ಲಿ ಒಂದು ಅಂಗಿಯ ರೇಟು ಕೇಳಿ ನಾನದನ್ನ ತೆಗೆದುಕೊಳ್ಳುವಾಗ ಹಿಂದೆ ಮುಂದೆ ನೋಡುತ್ತೇನೆ. ಅಂಗಿ.. ಎಲ್ಲಿ ತಗೋಂಡ್ರೀ.. ?ಎಷ್ಟ್ ಕೊಟ್ರೀ….? ಇದೇ ರೇಟಿಗೆ ಇನ್ನೂ ಚೆನ್ನಾಗಿರೋ ಅಂಗಿ ಬಂದಿರೋದು ಅಂತ ಆತ್ಮೀಯರೆಲ್ಲ ಹೇಳುವಾಗ ಕೇಳುವಾಗ. ಅಂಗಿಯಲ್ಲಿ ಅವ್ವನ ಆಯ್ಕೇಯೆ ಸರಿ ಅನ್ಸತ್ತೇ. ಸಿಟಿಯಲಿ ಸಿಲುಕಿ ಸಿರೀಯಲ್ಲು ಮತ್ತು ಸಿನಿಮಾಗಳಲ್ಲಿನ ಅವ್ವನ ಪಾತ್ರ ಮಾತ್ರ ಇಷ್ಟ ಪಡೋ ಕಾಲವಿದು. ಇದೇ ಕಾರಣಕ್ಕೆ ಸಿಟಿನಲಿ ವೃದ್ದಾಶ್ರಮಗಳು ಶ್ರಮಿಸುತ್ತಿವೆ. ಒಂದು ಅಂಗಿಯ ಕಥೆಯ ಹಿಂದಿರುವ ಅವ್ವನ ಶ್ರಮಕೆ ಅವಳು ನೀಡುವ ಕೈ ತುತ್ತಿನ ಶ್ರಮ ಇನ್ನೇಷ್ಟೂ ಇರಬೇಡ..? ಅವ್ವ ಅಂದ್ರೇ ಆಲದ ಮರ, ಅವಳು ನನಗೇ ಈಗಲೂ ನೆರಳು….
–ಮಹಾಂತೇಶ್. ಯರಗಟ್ಟಿ
Nice line dear friend
ಮಹಾಂತೇಶ್ ಒಳ್ಳೆಯ ಬರವಣಿಗೆಯ ನಿನಗೆ ಅಭಿನಂದನೆ
ತುಂಬಾ ಚೆನ್ನಾಗಿದೆ ಮಹಾಂತೇಶ್ . ಅಭಿನಂದನೆಗಳು.
Excellent keep going