ಅವ್ವಣ್ಣಿ: ಗಿರಿಜಾ ಜ್ಞಾನಸುಂದರ್

“ಮಗಾ ಸ್ಕೋರ್ ಎಷ್ಟು?” ಗೇಟ್ ಇಂದ ಹುಡುಗರ ಜೋರಾದ ದನಿ.. “ಯಾರು? ಸ್ಲಿಪ್ಪರ್ ಆ? ನಮ್ ಹುಡ್ಗ ಇಲ್ಲ ಕಣಪ್ಪ” ಅಜ್ಜಿಯ ದನಿ. “ಅಜ್ಜಿ, ಸ್ಕೋರ್ ಎಷ್ಟಾಗಿದೆ?” ” ಚೆನ್ನಾಗಾಡ್ತಿದಾರೆ ನಮ್ಮವರು, ೨೩೮ ಆಗಿದೆ ಬರಿ ೩ ಜನ ಔಟ್… ತಂಡೂಲ್ಕರ್ ಇನ್ನು ಆಡ್ತಿದಾನೆ, ತುಂಬ ಚೆನ್ನಾಗಿದೆ ಆಟ.. ಬಾ ನೀನು ನೋಡಿವಂತೆ” “ಇಲ್ಲ ಅಜ್ಜಿ.. ಟ್ಯೂಷನ್ ಗೆ ಹೋಗ್ಬೇಕು. ಅಮ್ಮ ಬೈತಾರೆ, ಇಂಡಿಯಾ ವಿನ್ ಆಗುತ್ತೆ ಬಿಡಿ… ಖುಷಿ ಆಯಿತು” ಅಂತ ಹೇಳಿ ಸ್ಟೀಫೆನ್ ಹೊರಟ.

“ಅಜ್ಜಿ ಹುರುಳಿ ಹಪ್ಪಳ ಮಾಡೋಕೆ ಬರಲ್ಲ.. ಹೆಂಗೆ ಮಾಡೋದು ಅಂತ ಹೇಳ್ತೀರಾ.. ಬರ್ಕೊಂಡ್ ಹೋಗಿ ಮಾಡ್ತಿನಿ” ನಮ್ಮ ಮೇಲಿನ ಮನೆಯ ಕಮಲಾ ಆಂಟಿ ನನ್ನ ಅಜ್ಜಿಯ ಬಳಿ ಕೇಳಿದರು. ” ಅಯ್ಯೋ ಬಾಮ್ಮ… ನಾಳೆ ಬೆಳಿಗ್ಗೆ ತಿಂಡಿ ತಿನ್ಕೊಂಡು ನಿಮ್ಮನೆಗೆ ಬರ್ತೀನಿ, ಇಬ್ರು ಸೇರ್ಕೊಂಡು ಮಾಡೋಣ.. ಅದೇನ್ ಮಹಾ ಬ್ರಹ್ಮ ವಿದ್ಯೇನ?” ಅಂತ ಹೇಳಿ ಅವರ ಮನೆಗೆ ಹೋದ ಅಜ್ಜಿ ಸಾಯಂಕಾಲ ವಾಪಾಸ್ ನಮ್ಮ ಮನೆಗೆ ಬಂದಿದ್ದು. ಹಪ್ಪಳದ ಜೊತೆ ಸಬ್ಬಕ್ಕಿ ಸಂಡಿಗೆನೂ ಮಾಡಿ, ಬಸ್ಸಾರು ಮಾಡೋ ಸುಲಭವಾದ ವಿಧಾನನೂ ಹೇಳಿ ಬಂದಿದ್ದರು. ಕಮಾಲಗಂತೂ ಅಜ್ಜಿ ಅಂದ್ರೆ ಸಾಕ್ಷಾತ್ ದೇವಿ ಸ್ವರೂಪ ಆಗಿ ಹೋಗಿತ್ತು. ದಿನವೂ ಅಜ್ಜಿಯನ್ನು ಮಾತಾಡಿಸೋ ನೆಪದಲ್ಲಿ ಹೊಸ ಹೊಸ ಅಡುಗೆಯ ವಿಧಾನವನ್ನು ಕಲಿತುಕೊಳ್ಳುತಿದ್ದಳು. ಅಜ್ಜಿಯು ಅಷ್ಟೇ ಒಂದಿಷ್ಟು ಬೇಜಾರು ಮಾಡಿಕೊಳ್ಳದೆ ನಗು ನಗುತ್ತ ಹೇಳುತ್ತಿದ್ದರು. ಹೊಸದಾಗಿ ಮದುವೆಯಾಗಿದ್ದ ಹುಡುಗಿ ಅಚ್ಚುಕಟ್ಟಾಗಿ ಅಡುಗೆ ಮಾಡಿ ತನ್ನ ಮನೆಯವರನ್ನೆಲ್ಲ ಮೆಚ್ಚಿಸಿಕೊಂಡಳು. ಇನ್ನು ನನ್ನ ತಮ್ಮನ ಸ್ನೇಹಿತರಿಗೆಲ್ಲ ಅಜ್ಜಿಯ ಜೊತೆ ಮಾತನಾಡುವುದೇ ಒಂದು ಖುಷಿ. ಅವರ ಜೊತೆ ಕುಳಿತು ಕ್ರಿಕೆಟ್ ನೋಡುತ್ತಿದ್ದರೆ, ಒಂದೊಂದು ನಿಮಿಷವೂ ತಮಾಷೆ. ಭಾರತದ ವಿರುದ್ಧ ಆಡುತ್ತಿದ್ದ ಆಟಗಾರನೊಬ್ಬ ‘ಕ್ಯಾಚ್ ಔಟ್’ ಮಾಡಿದರೆ ಅವರು “ಅಯ್ಯೋ ಎಷ್ಟು ಚೆನ್ನಾಗಿ ಆಡ್ತಿದ್ರಲ್ಲಪ್ಪ ನಮ್ ಹುಡುಗ್ರು…. ಇವ್ನು ಬಂದು ಆಥಿಕೊಂಬುಟ್ಟ.. ಇಲ್ಲಾಂದ್ರೆ ನೂರು ಹೊಡೀತಿದ್ದ ಪಾಪ, ಅವ್ನ್ ನಾಲಿಗೆ ಸೇದೋಗ” ಹುಡುಗರೆಲ್ಲ ಬಿದ್ದು ಬಿದ್ದು ನಗುತ್ತಿದ್ದರು.

Jpeg

ನನ್ನ ಹೆಂಗೆಳೆಯರು ಬಂದರಂತೂ ಅಜ್ಜಿಗೆ ಸಿಂಗಾರ ಮಾಡಿ, ತರತರದ ಕೇಶಾಲಂಕಾರ ಮಾಡಿ, ಅವರ ಮಾತಿಗೆ ಬೆರಗಾಗಿ ಹೋಗುವುದಂತೂ ಖಂಡಿತಾ. ಯಾರಿಗೂ ಸಹ ಅಜ್ಜಿ ತಮ್ಮ ವಯಸ್ಸಿನವರಲ್ಲ ಎನ್ನುವ ಭಾವನೆಯೇ ಬರುತ್ತಿರಲಿಲ್ಲ. ನಮ್ಮೊಂದಿಗೆ ನಮ್ಮಂತೆಯೇ ಇರುತ್ತಿದ್ದ ಜೀವ. “ನಾನು ಚಿಕ್ಕವಳಿದ್ದಾಗ ಬರಿ ರಿಬ್ಬನ್ ಅಷ್ಟೇ ನಮ್ಗೆಲ್ಲಾ… ಹಬ್ಬಕ್ಕೆ ಹೊಸ ಲಂಗ ಜಾಕೀಟ್ ಹಾಕ್ಕೊಂಡು ರಿಬ್ಬನ್ ಕಟ್ಕೊಂಡು ಓಡಾಡ್ತಿದ್ವಿ ಕಣ್ರೆಮ್ಮ.. ನಿಮ್ಗೆಲ್ಲೆ ಏನೇನೋ ಇದಾವೆ… ಆದ್ರೂ ಅದ್ಯಾಕೆ ತಲೆ ಕತ್ತರುಸ್ಕೊಂಡು ಓಡಾಡ್ತಿರಾ?” “ಅಜ್ಜಿ ಅದು ಸ್ಟೈಲ್ ಅಜ್ಜಿ.. ನೀವು ಮಾಡ್ತಿರ್ಲಿಲ್ವ ಹಂಗೆ ನಾವುನು” ಅಂತ ಕಣ್ ಹೊಡ್ಕೊಂಡು ಓಡಾಡ್ತಿದ್ರು ನನ್ನ ಗೆಳತಿಯರು.

ನನಗಂತೂ ಅಜ್ಜಿ ನನ್ನ ತಲೆಗೆ ಎಣ್ಣೆ ಹಚ್ಚುತ್ತಾರೆಂದು ಭಯ… ಅವರಿಗಂತೂ ನನ್ನ ತಲೆಯ ಮೇಲೇ ಕಣ್ಣು. “ಬಾರೆ ಒಂಚೂರು ಹಚ್ತೀನಿ, ಸುಮ್ನೆ ಬೆವರು ಮಾಡ್ತಿನಿ….. ಹೆಚ್ಗೆ ಹಚ್ಚಲ್ಲ ಕಣೆ” ಅಂತ ನನ್ನ ಹಿಂದೆಯೇ ಸುತ್ತುತ್ತಿದ್ದರು. ನಾನೋ ನನ್ನ ಸ್ಟೈಲ್ ಎಲ್ಲಿ ಕಡಿಮೆ ಆಗುವುದೆಂದು ಅವರಿಂದ ತಪ್ಪಿಸಿಕೊಂಡು ಗೋಡೆ ಹತ್ತಿ ದೂರ ಓಡುತ್ತಿದ್ದೆ.

ಸಂಜೆಯಾಗುತ್ತಿದ್ದಂತೆ ಬಾಯಿಗೆ ರುಚಿ ರುಚಿಯಾಗಿ ಖಾರಾಪುರಿ, ಬೋಂಡಾ ಚುರುಮುರಿ ಎಲ್ಲ ಮನೆಯಲ್ಲಿಯೇ ತಯಾರಾಗಿ ನಮಗೆ ಹೊರಗೆ ಹೋಗದಂತೆ ತಡೆಗಟ್ಟುತ್ತಿದ್ದವು. ನಮ್ಮನ್ನು ಆಟಕ್ಕೆ ಕರೆಯಲು ಬರುತ್ತಿದ್ದ ದೊಡ್ಡ ಬಳಗಕ್ಕೂ ತಾನು ಮಾಡಿದ್ದರಲ್ಲಿಯೇ ಹಿತಮಿತವಾಗಿ ಹಂಚಿ ಸಮಾಧಾನ ಪಡಿಸುವ ಕಲೆ ಅಜ್ಜಿಗಷ್ಟೇ ಗೊತ್ತಿತ್ತು. ಒಂದು ಡಬ್ಬಿಯ ತುಂಬ ಚಕ್ಕುಲಿ, ರವೇ ಉಂಡೆ, ಕಜ್ಜಾಯ, ಕಡ್ಲೆ ಉಂಡೆ ಹೀಗೆ ಇನ್ನು ತಿಂಡಿಗಳು ಅಜ್ಜಿ ತನ್ನ ಊರಿಗೆ ಹೋಗುವಷ್ಟರಲ್ಲಿ ತಯಾರು ಮಾಡಿ ಹೋಗುತ್ತಿದ್ದರು. ಅಜ್ಜಿ ಊರಿಗೆ ಹೊರಟರಂತೂ ಕಣ್ಣಲ್ಲಿ ಧಾರಾಕಾರವಾಗಿ ನೀವು ಬರುತ್ತಿತ್ತು. ಅವರು ಕೈಗೆ ಕೊಡುತ್ತಿದ್ದ ಸಣ್ಣ ಪುಟ್ಟ ಪುಡಿಗಾಸು ನಮಗೆ ಸ್ವಲ್ಪ ಮಟ್ಟಿಗೆ ಸಮಾಧಾನ ತರುತ್ತಿತ್ತು.

ಮನೆಯಲ್ಲಿ ಅಪ್ಪ ಹೊಡೆದಾಗ ಮನಸ್ಸಿನಲ್ಲಿ ಯೋಚಿಸುತ್ತಿದ್ದುದು ಒಂದೇ – ನೀವು ಹೀಗೆ ಮಾಡಿದ್ರೆ ಅಜ್ಜಿ ಮನೆಗೆ ಹೋಗತೀನಿ… ಅಜ್ಜಿಗೆ ನಿಮಗಿಂತ ಜಾಸ್ತಿ ಪ್ರೀತಿ ನನ್ನ ಮೇಲೇ. ಆದರೆ ಅಜ್ಜಿ ಊರಿಗೆ ಹೋಗಲು ದುಡ್ಡು ಬೇಕು..ದಾರಿಯೇನೋ ಗೊತ್ತು, ಆದರೆ ಇನ್ನು ಚಿಕ್ಕವಳು ನಾನು… ಒಂಥರಾ ಭಯ.

೫ ಜನ ಮಕ್ಕಳಲ್ಲಿ ನನ್ನಜ್ಜಿಗೆ ೪ ಜನ ಗಂಡು ಮಕ್ಕಳು. ಹಿರಿ ಮಗನ ಮಕ್ಕಳು ನಾವು. ನನ್ನಜ್ಜಿ ೨೪ ಹರೆಯದ ಮಗನನ್ನು ಕಳೆದುಕೊಳ್ಳುವಂತೆ ಮಾಡಿತ್ತು ವಿಧಿ. ನನ್ನ ಚಿಕ್ಕಪ್ಪ ಸಾವನ್ನು ಅರ್ಥ ಮಾಡಿಕೊಳ್ಳೂ ಆಗದ ವಯಸ್ಸು ನಮ್ಮದು. ಆದರೂ ಅಲ್ಲಿ ನಡೆಯುತ್ತಿರುವುದು ನಮಗೆ ಇಷ್ಟ ಆಗದ ಸಂದರ್ಭವಾಗಿತ್ತು. ಅಲ್ಲಿ ನನ್ನ ಮನಸ್ಸು ಕರಗುವಂತೆ ಮಾಡಿದ್ದೂ ನನ್ನ ಅಜ್ಜಿಯ ಕರುಳಿನ ಕೂಗು. ನನ್ನ ಪುಟ್ಟ ವಯಸ್ಸಿಗೆ ಅದನ್ನು ಅರ್ಥ ಮಾಡಿಕೊಳ್ಳುವಷ್ಟು ಬುದ್ಧಿ ಇರಲಿಲ್ಲವಾದರೂ ಅಜ್ಜಿಗೆ ಹೇಗೆ ಸಮಾಧಾನ ಮಾಡಬಹುದು ಎಂದು ಕಳವಳ ಪಡುತ್ತಿತ್ತು.

ವರುಷಗಳು ಉರುಳಿದಂತೆ ನಿಧಾನವಾಗಿ ಮರೆತಂತೆ ಕಂಡರೂ “ನಮ್ಮ ಚಂದ್ರ ಇದ್ದಿದ್ದರೆ ಹಿಂಗೇ ಇರ್ತಿದ್ದ” ಅನ್ನುವ ಮಾತು ಆಗಾಗ ಅವರ ಬಾಯಲ್ಲಿ ಬರುತ್ತಿತ್ತು. ಅಷ್ಟಲ್ಲದೇ ಹೇಳುತ್ತಾರೆಯೇ “ಪುತ್ರಶೋಕೆ ನಿರಂತರೇ” ಅನ್ನುವ ಮಾತನ್ನು.

ನನ್ನಜ್ಜಿ ತನ್ನ ಐವತ್ತನೇ ಆಸುಪಾಸಿನಲ್ಲಿ ತನ್ನನ್ನು ತುಂಬ ಪ್ರೀತಿಸುವ ಗಂಡನನ್ನು ಕಳೆದುಕೊಂಡು ವಿಧವೆಯಾಗಿದ್ದರೂ ಮಕ್ಕಳನ್ನು ಮನೆಯನ್ನು ನಡೆಸುವ ಜವಾಬ್ದಾರಿಯನ್ನು ಕೈಬಿಡಲಿಲ್ಲ. ಮಕ್ಕಳು ದೊಡ್ಡವರಾಗಿದ್ದರು, ಹಾಗಾಗಿ ಅವರ ಮೇಲೇ ಭಾರ ಹಾಕಬಹುದಿತ್ತು. ಆದರೆ ಸರ್ಕಾರೀ ಕೆಲಸ ಆದ್ದರಿಂದ ತಾನು ಶಿಶುವಿಹಾರದಲ್ಲಿ ಆಯಾ ಕೆಲಸವನ್ನು ಮಾಡುವುದನ್ನು ಬಿಡಲಿಲ್ಲ. ದೇವಸ್ಥಾನದಲ್ಲಿ ತನ್ನ ಮಕ್ಕಳು ಪೂಜೆ ಮಾಡುವ ವರೆಗೂ ಅವರಿಗೆ ಬಾಡಿಗೆ ಇಲ್ಲದೆ ಕೊಟ್ಟ ಜಾಗವಾದ್ದರಿಂದ, ಬಸವಣ್ಣ ದೇವಸ್ಥಾನದ ಸೇವೆಯನ್ನು ಪ್ರತಿದಿನವೂ ತಪ್ಪದೆ ಮಾಡುತ್ತಿದ್ದರು. ೩೦೦ ಜನ ಸೇರಬಹುದಾದ ಜಾಗವನ್ನು ಪ್ರತಿದಿನವೂ ಗುಡಿಸಿ, ಶುದ್ಧ ಮಾಡುತ್ತಿದ್ದರು. ಆಯಾ ಕೆಲಸದಲ್ಲಿ ಮಕ್ಕಳನ್ನು ಕರೆದುಕೊಂಡು ಹೋಗಿ ಅವರವರ ಮನೆಗೆ ಬಿಟ್ಟು ಬಂದು ತುಂಬ ದೂರ ನಡೆಯಬೇಕಾಗಿತ್ತು. ಅದರಲ್ಲಿ ಆಯಾಸವು ಬಹಳ. ಆದರೆ ನನ್ನಜ್ಜಿ ಎಂದು ಆಯಾಸ ಏನು ಹೇಳಿದ್ದನ್ನು ನಾನು ಕಾಣಲೇ ಇಲ್ಲ. ಮನೆಗೆ ಬಂದಮೇಲೆ ೬-೭ ಜನಕ್ಕೆ ಅಡಿಗೆ ಮಾಡಿ ಊಟಕ್ಕೆ ಬಿಡಿಸಿ, ನಂತರ ತನ್ನ ಊಟ ಮಾಡುತ್ತಿದ್ದರು.

ತನ್ನ ಮಕ್ಕಳಿಗೆ ತನ್ನ ಕೈಲಾದಷ್ಟು ಪ್ರೀತಿಯನ್ನು ಕೊಟ್ಟು, ಸೊಸೆಯಂದಿರಿಗೆ ಪೂರ್ಣ ಸಹಾಯ ಮಾಡುವುದು ಅವರ ಸಾಮಾನ್ಯ ಕೆಲಸಗಳು. ತನ್ನ ಸುತ್ತ ಮುತ್ತಲಿನ ಜನ, ಸಹೋದ್ಯೋಗಿಗಳು, ನೆರೆ ಹೊರೆಯವರು ಎಲ್ಲರು ಅವರಿಗೆ ಪ್ರೀತಿ ಪಾತ್ರರೇ. ಅವರಿಗೆ ಶತ್ರುಗಳೇ ಇಲ್ಲ. ತಮ್ಮಲ್ಲೇ ದ್ವೇಷವನ್ನಿಟ್ಟುಕೊಂಡು ಅವರನ್ನು ದ್ವೇಷಿಸುವವರನ್ನು ಬಿಟ್ಟರೆ, ಬೇರೆ ಯಾರು ಅವರ ಬಗ್ಗೆ ಒಂದಾದರು ಅಸಹನೆಯ ಮಾತುಗಳನ್ನು ಆಡಲು ಸಾಧ್ಯವೇ ಇಲ್ಲ.

ಅದೆಷ್ಟು ಜನರಿಗೆ ಬಾಣಂತನ, ಸೇವೆ ಮಾಡಿದ್ದರೋ ಲೆಕ್ಕವಿಲ್ಲ. ಆ ಭಾಗ್ಯ ನನಗು ಸಿಕ್ಕಿದೆ ಎಂದು ಹೇಳಲು ಹೆಮ್ಮೆ. ಅವರೊಡನೆ ಕಳೆದ ಒಂದೊಂದು ಕ್ಷಣವೂ ಅಮೂಲ್ಯ. ಅವರ ತಮಾಷೆ, ನಗು, ಎಲ್ಲವು ನನ್ನ ಹೃದಯದಲ್ಲಿ ಹಾಸು ಹೊಕ್ಕಿದೆ.

ಈಗ ನನ್ನಜ್ಜಿ ೯೦ ರ ಆಸುಪಾಸಿನ್ನಲ್ಲಿದ್ದರೆ. ಈಗಲೂ ಅವರಿಗೆ ಆರೋಗ್ಯದ ಸಮಸ್ಯೆ ಏನು ಇಲ್ಲವಾದರೂ, ವಯೋಸಹಜ ನಿಶ್ಶಕ್ತಿ, ೪೦ ಜನ ಓಡಾಡುವಷ್ಟು ಓಡಾಡಿದ್ದರಿಂದ ಮಂದಿ ಚಿಪ್ಪುಗಳು ಸವೆದಿವೆ. ಆದರೆ ಜೀವನೋತ್ಸಹ ಸ್ವಲ್ಪ ಕುಂದಿಲ್ಲ.

ನನ್ನ ಪ್ರೀತಿಯ ಅಜ್ಜಿಗೆ ಇನ್ನು ೧೦೦ ವರ್ಷ ಅರೋಗ್ಯ, ಸಂತೋಷ ಕೊಡಲಿ ಎಂದು ಬೇಡುತ್ತೇನೆ. ನೀವು ಸಹ ದಯವಿಟ್ಟು ಹಾರೈಸಿ.

ಬರೆದು ಮುಗಿಸಲಾಗದಷ್ಟು ವಿಷಯಗಳಿವೆ ಅವರ ಬಗ್ಗೆ ಹೇಳುತ್ತಾ ಹೋದರೆ. ಸಾಧ್ಯವಾದರೆ ಮುಂದೆಂದಾರೂ ಬರೆಯುತ್ತೇನೆ. ಬಹಳಷ್ಟು ವಿಷಯಗಳನ್ನು ನಾನು ಅವರಿಂದ ಕಂಡುಕೊಂಡಿದ್ದೇನೆ. ಕಲಿತಿದ್ದೇನೆ ಎಂದರೆ ತಪ್ಪಾಗುತ್ತದೆ. ೪ನೆ ತರಗತಿಯನ್ನಷ್ಟೇ ಓದಿದ್ದರು ನನ್ನಜ್ಜಿ ಒಂದು ಜೀವನಕ್ಕೆ ಸಾಕಾಗುವಷ್ಟು ಪಾಠ ಕಲಿಸುವ ವಿಶ್ವವಿದ್ಯಾನಿಲಯ. ಸಹನೆ, ಶ್ರದ್ದೆ, ಸಹಬಾಳ್ವೆ,ಪ್ರೀತಿ, ಧೈರ್ಯ, ಕ್ಷಮತೆ, ಸ್ವಾವಲಂಬನೆ, ನಗು, ಸಂತೋಷ, ಸೋತು ಗೆಲ್ಲುವುದು, ಎಂದೆಂದೂ ತಾನು ಇನ್ನು ಕಲಿಯ ಬೇಕೆಂಬ ಹಂಬಲ… ಹೀಗೆ ಎಷ್ಟೊಂದು ವಿಷಯಗಳನ್ನು ಅವರನ್ನು ಕಂಡಾಗ ಮನಗಂಡಿದ್ದೇನೆ.

ಅವರ ಅಪಾರ ಪ್ರೀತಿ, ಎಲ್ಲರನ್ನು ತನ್ನವರೆಂದು ಭಾವಿಸುವ ಗುಣ, ಹಿರಿಯ ಭಾವ, ಮನಸ್ಸಿನಿಂದ ಆಡುವ ಮಾತುಗಳು, ಹೃದಯ ತುಂಬ ನಗುವ ಅವರ ನಗು… ಎಷ್ಟೆಲ್ಲಾ ಕಲಿಯುವುದಕ್ಕಿದೆ.

ನನ್ನಜ್ಜಿಯಂತೆಯೇ ನಿಮ್ಮ ಮನೆಗಳಲ್ಲೂ ಪ್ರೀತಿಯ ಕಣಜಗಳಿರುತ್ತವೆ. ಅವರುಗಳ ಪ್ರೀತಿಯನ್ನು ಅನುಭವಿಸಿ, ಅವರ ಅನುಭವಗಳನ್ನೂ ನಾವು ತಿಳಿದು, ಸವಿಯೋಣ. ತುಂಬು ಜೀವಗಳು ಇವೆಲ್ಲ. ಪುಣ್ಯವಂತರಿಗಷ್ಟೇ ಇವರುಗಳ ಸಹವಾಸ ಸಿಗಲು ಸಾಧ್ಯ. ನಮಗೆಲ್ಲ ಅಷ್ಟೊಂದು ಪ್ರೀತಿಯನ್ನು ಕೊಟ್ಟಿರುವ ಜೀವಗಳಿಗೆ ನಾವು ಏನನ್ನು ಕೊಡಲಾಗುವುದಿಲ್ಲ. ಏನು ಕೊಟ್ಟರು ಕಡಿಮೆಯೇ. ಏನು ಕೊಡಲು ಸಾಧ್ಯ ನಮಗೆ.. ನಮ್ಮ ಯಾವ ಸಿರಿತನವನ್ನು ಅವರು ಬಯಸುವುದಿಲ್ಲ. ಒಂದೆರಡು ಪ್ರೀತಿಯ ಮಾತು. ಅವರೊಡನೆ ನಾವು ನಡೆದುಕೊಳ್ಳುವ ರೀತಿ ಅಷ್ಟೇ. ವಯಸ್ಸಾಗುತ್ತ ಮಕ್ಕಳಾಗುವ ಈ ಜೀವಗಳಿಗೆ ಸಾಧ್ಯವಾದರೆ ಹೆಚ್ಚು ಹೆಚ್ಚು ಪ್ರೀತಿಯನ್ನು ಕೊಡೋಣ. ಅವರ ಜೀವನದ ಶೈಲಿಯನ್ನು ಒಂದಿಷ್ಟಾದರೂ ನಾನು ಅನುಸರಿಸೋಣ, ಪ್ರೀತಿಯನ್ನು ಹಂಚೋಣ.

ಹೌದು, ನನ್ನಜ್ಜಿಯ ಹೆಸರು- ಜಯಮ್ಮ. ಜೀವನವನ್ನು ಜಯಿಸಿರುವ ನನ್ನ ಪ್ರೀತಿಯ ಜಯ ಅವರು. ದಯವಿಟ್ಟು ನನ್ನ ಜಯನ ಆರೋಗ್ಯಕ್ಕೆ, ಆಶಯಕ್ಕೆ ನಿಮ್ಮೆಲ್ಲರ ಹಾರೈಕೆಯಿರಲಿ.

ಗಿರಿಜಾ ಜ್ಞಾನಸುಂದರ್


ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

6 Comments
Oldest
Newest Most Voted
Inline Feedbacks
View all comments
Shilpa Bastawade
Shilpa Bastawade
4 years ago

ಗಿರಿಜಾ ಅವರೇ.. ಬಹಳ ಚೆನ್ನಾಗಿದೆ

Girija Jnanasundar
Girija Jnanasundar
4 years ago

ಧನ್ಯವಾದಗಳು ಶಿಲ್ಪ🙏

umesh desai
4 years ago

ಬಹಳ ಆಪ್ತ ಬರಹ…..

Mahantesh Jakaty
Mahantesh Jakaty
4 years ago

ಗಿರಿಜ ಈ ಜಯಮ್ಮಜ್ಜಿ ಕಾಲ್ಪನಿಕ ನಾ ವಾಸ್ಥವಿಕವಾಗಿ ಇದ್ದರೆ? ಲೇಖನ ಸೊಗಸಾಗಿದೆ,ಓದಕೊಂಡ ಹೊಯ್ತು

Girija Jnanasundar
Girija Jnanasundar
4 years ago

Thank you

Girija
Girija
4 years ago

Mahantesh, avaru nanna nijavada ajji.. avara photo kooda katheyodane ide. Kalpanika khanditha alla.

6
0
Would love your thoughts, please comment.x
()
x