ಅವಸ್ಥೆ!: ಎಸ್.ಜಿ.ಶಿವಶಂಕರ್

Shivashankar S G


`ನೆನ್ನೆ ರಾತ್ರಿ ದಾವಣಗೆರೆಯವರು  ಫೋನು ಮಾಡಿದ್ದರು..ಶಾಲಿನಿಯನ್ನು ಹುಡುಗ ಒಪ್ಪಿದ್ದಾನಂತೆ..ಆದ್ರೆ ಹುಡುಗ ಕಾರು ತಗೋಬೇಕಂತೆ, ಆರು ಲಕ್ಷ ವರದಕ್ಷಿಣೆ ಕೇಳ್ತಿದ್ದಾರೆ..ನೀನು ಹೂ ಅಂದರೆ..ನಿಮ್ಮಪ್ಪ ಫೋನು ಮಾಡಿ ಮಾತುಕತೆಗೆ ಕರೀಬೇಕೂಂತಿದ್ದಾರೆ…!

ತಿಂಡಿಯ ತಟ್ಟೆ ಟೇಬಲ್ಲಿನ ಮೇಲಿಡುತ್ತಾ ತನ್ನ ತಾಯಿ ಹೇಳಿದಾಗ ರಾಜೀವನಿಗೆ ತನ್ನ ಶರೀರದ ಆ ಜಾಗ ನೆನಪಾಯಿತು. ಹೌದು ಸ್ನಾನ ಮಾಡುವಾಗ ನೋಡಿಕೊಂಡೆನಲ್ಲ..! ಅದರ ನೆನಪಿಂದ ಅವನಿಗೆ ವಿಚಿತ್ರವಾದ ಸಂಕಟವಾಯಿತು. ಆಹಾರ ಗಂಟಲಲ್ಲಿ ಇಳಿಯಲಿಲ್ಲ. ಕಿಟಿಕಿಯಿಂದಾಚೆ ನೋಡಿದ ಇನ್ನೂ ಕತ್ತಲಿತ್ತು. ಗಡಿಯಾರ ಆರೂವರೆಯನ್ನು ತೋರಿಸುತ್ತಿತ್ತು. `ಥೂ..ದರಿದ್ರದ ಟೈಮು! ಇದು ತಿಂಡಿ ತಿನ್ನೋ ಸಮಯವೆ? ಎಂದು ಗೊಣಗುತ್ತಾ, ತಟ್ಟೆ ಪಕ್ಕಕ್ಕೆ ಸರಿಸಿ ಕಾಫಿ ಕುಡಿದ.

`ಯಾಕೆ..ಚೆನ್ನಾಗಿಲ್ಲವೆ..?
`ಏನೋ..ತಿನ್ನೋಕಾಗ್ತಿಲ್ಲ’  ತಾಯಿಯ ಮಾತಿಗೆ ಚುಟುಕಾಗಿ ಉತ್ತರಿಸಿದ.
`ಒಂದ್ಸಲ ಚೆಕಪ್ ಮಾಡಿಸ್ಕೋಂತ ಎಷ್ಟು ದಿನಗಳಿಂದ ಹೇಳ್ತಿದ್ದೀನಿ….ನಿನ್ನ ಆರೋಗ್ಯ ಮುಖ್ಯನಪ್ಪಾ..ಇನ್ನೂ ಶಾಲಿನ ಮದುವೆಯಾಗಬೇಕು, ಸತ್ಯನ ಓದು ಮುಗೀಬೇಕು..ನಿಮ್ಮಪ್ಪ ನೋಡಿದ್ರೆ ಇಷ್ಟು ಬೇಗ ಕೆಲಸ ಕಳೆದುಕೊಂಡರು’ 
ಹೌದು ತನ್ನ ಅರೋಗ್ಯದ ಬಗೆಗೆ ಇವರಿಗೆಲ್ಲಾ ಕಾಳಜಿ…ಏಕೆಂದರೆ ತಾನಿನ್ನೂ ಈ ಮನೆಗೆ  ತೇಯ್ದುಕೊಳ್ಳಬೇಕಾದದ್ದು ಇದೆ! 
`ದಾವಣೆಗೆರೆಯವರಿಗೆ ಏನು ಹೇಳೋದು..?’ ಮನೆಯಿಂದಾಚೆ ಕಾಲಿಡುವಾಗ ಅಮ್ಮ ಜೋರಾಗಿಯೇ ಕೇಳಿದ್ದಳು.
`ಮದುವೆ ವ್ಯಾಪಾರ ಅಲ್ಲ! ಯಾವೋನು ಕೊಡ್ತಾನೆ…ಆರು ಲಕ್ಷ..! ಈಗಾಗಲೇ ಎರಡು ಬಾಂಡು ಬರೆದುಕೊಟ್ಟು ಕಂಪೆನಿಯ ಜೀತದಾಳಾಗಿದ್ದೇನೆ ..ಇನ್ನೂ ಕೈಚಾಚಿದರೆ ನನ್ನನ್ನೇ ಹರಾಜು ಮಾಡಿಕೊಳ್ಳಬೇಕಾಗುತ್ತೆ…’ ಎಂದಷ್ಟು ಹೇಳಿ ಉತ್ತರಕ್ಕೆ ಕಾಯದೆ ಮನೆಯಿಂದಾಚೆ ಕಾಲಿಟ್ಟ ರಾಜೀವ. ಹೊರಗೆ ಕಂಪೆನಿಯ ಪಿಕಪ್ ವ್ಯಾನು ಕಾದಿತ್ತು!

`ಅವನೇನು ಮನುಷ್ಯನೋ ಮೃಗವೋ..ಎಷ್ಟು ಒರಟಾಗಿ ಮಾತಾಡ್ತಾನೆ!’ ಮನೆಯೊಳಗಿನಿಂದ ಅಪ್ಪ ಕೋಪದಿಂದ ಬುಸುಗುಟ್ಟುತ್ತಿದ್ದ. 
ತನ್ನಲ್ಲಿ ವಿಚಿತ್ರವಾದ ಬದಲಾವಣೆಯಾಗುತ್ತಿದೆ. ಯಾರೂ ನಂಬದ, ವಿಶ್ವದಲ್ಲೆಲ್ಲೂ ಘಟಿಸಿದ ವಿಚಿತ್ರವೊಂದು ತನ್ನ ದೇಹದಲ್ಲಿ ಘಟಿಸುತ್ತಿದೆ. ಇದು ಸುಳ್ಳು ಎಂದು ನೂರು ಬಾರಿ ಹೇಳಿಕೊಂಡರೂ ಅದು ಸುಳ್ಳಾಗುತ್ತಿಲ್ಲ! ಬದಲಿಗೆ ಕಟುವಾದ ಸತ್ಯವೇ ಅಗುತ್ತಿದೆ. ಬೆಳಿಗ್ಗೆ ಸ್ನಾನ ಮಾಡುವಾಗ ಅದನ್ನು ನೋಡಬಾರದು ಎಂದರೂ ಕಂಡಿತ್ತು! ಮೊದಲಿಗೆ ಬರಿಯ ಅನುಮಾನವಾಗಿದ್ದು ಈಗ ಸ್ಪಷ್ಟವಾಗಿತ್ತು. ಸ್ಟೀಲಿನಂತೆ ಹೊಳೆಯುತ್ತಿತ್ತು! ಇನ್ನು ನಂಬದಿರಲು ಸಾಧ್ಯವೇ ಇರಲಿಲ್ಲ. ಅಲ್ಲೇ, ಮೊದಲು ಕಂಡ ಜಾಗದಲ್ಲೇ, ಹೊಕ್ಕುಳದಿಂದ ಒಂದಿಂಚು ಕೆಳಗೆ, ಹೊಟ್ಟೆಯ ಮೇಲೆ ಒಂದು ರೂಪಾಯಿಯಗಲ ಸ್ಪಷ್ಟವಾಗಿ ರೂಪುಗೊಂಡಿತ್ತು! ತಿಂಗಳ ಕೆಳಗೆ ಅದು ಮಚ್ಚೆಯಂತಿತ್ತು, ಈಗ ರೂಪಾಯಿಯಗಲವಾಗಿದೆ. ಅದೇನೆಂದು ತಿಳಿಯುತ್ತಿಲ್ಲ! ಯಾರನ್ನು ಕೇಳುವುದು? ಏನೆಂದು ಕೇಳುವುದು?  ಈವರೆಗೆ ಇಂತದೆಲ್ಲೂ ಕಂಡಿಲ್ಲ, ಕೇಳಿಲ್ಲ! ಜಗತ್ತಿನಲ್ಲೆಲ್ಲೂ ಕಾಣದ ವಿಚಿತ್ರ! ತನ್ನ ದೇಹದಲ್ಲಿ ಹೀಗೇಕಾಗುತ್ತಿದೆ? ಇದಕ್ಕೆ ಕಾರಣವೇನು..?  ಎಲ್ಲರಂತೇ ಇರುವೆನಲ್ಲಾ..? ಎಲ್ಲರಂತೆ ತಿನ್ನುತ್ತೇನಲ್ಲ? ಎಲ್ಲರಂತೆ ಉಸಿರಾಡುತ್ತೇನಲ್ಲ? ಎಲ್ಲರಂತೆ ಚಿಂತಿಸುತ್ತಿರುವೆನಲ್ಲ? ಹಾಗಿರುವಾಗ ಇಂತದೊಂದು ವಿಚಿತ್ರ ಹೇಗಾಗುತ್ತಿದೆ..? ತನ್ನ ಯಾವ ಅಪರಾಧವೂ ಇಲ್ಲದೆ ಇಂತದ್ದೇಕೆ ಆಗುತ್ತಿದೆ..? ಈ ಯೋಚನೆ ಬರುತ್ತಿದ್ದಂತೆ ರಾಜೀವನ ಅರಿವೇ ಇಲ್ಲದಂತೆ ಅವನ ಕೈ ಆ ಜಾಗವನ್ನು ಮುಟ್ಟಿ ನೋಡಿತ್ತು. ಗಡುಸಾದ ನುಣುಪಾದ ಲೋಹ! ಅದರ ಸುತ್ತ ಎಂದಿನಂತೆ ಮೃದುವಾದ ಮಾಂಸಲ ಭಾಗ! ಇದೆಲ್ಲಾ ಒಂದು ತಿಂಗಳಿಂದ ನಡೆಯುತ್ತಿದೆ. ಮಚ್ಚೆಯಂತಿದ್ದುದು ಈಗ ರೂಪಾಯಿಯಗಲ! ಮುಂದೆ ಅದು ಇನ್ನೂ ದೊಡ್ಡದಾಗದಿರದೆ..? ಬೆಳೆದು ಬೆಳೆದು ದೇಹವನ್ನೆಲ್ಲಾ ವ್ಯಾಪಿಸಿದರೆ..? ತಾನು ಬದುಕುಳಿಯುವೆನೆ..? ಹುಟ್ಟಿನಿಂದ ತಾನು ಹೀಗಿರಲಿಲ್ಲ. ಎಲ್ಲ ಸಹಜವಾಗಿಯೇ ಇತ್ತು! ಹುಟ್ಟಿನಲ್ಲಿ ಮುದ್ದಾದ ಮಗು! ನೂರಾರು ಹಳೆಯ ಫೋಟೋಗಳು ಅದನ್ನು  ಹೇಳುತ್ತವೆ. ಬೆಳೆಯುವಾಗ ಸುರದ್ರೂಪಿ ಹುಡುಗ. ಹರೆಯದಲ್ಲಿ ಮನಸೆಳೆಯುವ ರೂಪ ರಾಜೀವನದು. `ರಾಜೂ..ನೀನು ನನ್ನ ಹೀರೋ..ನೀನು ಸಿಕ್ಕಿದ್ದು ನನ್ನ ಪುಣ್ಯದ ಫಲ’ ಎಂದು ದೀಪ ಅದೆಷ್ಟು ಸಲ ಹೇಳಿದ್ದಳು! 

ರಾಜೀವನ ಕೈಯಿ ಆ ಭಾಗವನ್ನು ಮುಟ್ಟಿಮುಟ್ಟಿ ನೋಡುತ್ತಿರುವಾಗ ಅವನ ಸಹೋದ್ಯೋಗಿ ಪಳನಿ ಒಳಗೆ ಬಂದಿದ್ದ! ರಾಜೀವನನ್ನು ಅನುಮಾನದಿಂದ ನೋಡಿದ. ಅವನ ಕಣ್ಣು ರಾಜೀವನ ಪ್ಯಾಂಟಿನೊಳಗೆ ತೂರಿರುವ ಕೈಯನ್ನೇ ನೋಡುತ್ತಿತ್ತು. ನಂತರ ದೃಷ್ಟಿ ಬೇರೆಡೆ ತಿರುಗಿಸಿ ತನ್ನ ಟೇಬಲ್ಲಿಗೆ ಮರಳಿದ್ದ. ಪಳನಿ  ಮುನ್ಸೂಚನೆಯಿಲ್ಲದೆ ಒಳಗೆ ಬಂದಿದ್ದು ಮತ್ತು ಅನುಮಾನದಿಂದ ತನ್ನನ್ನು ನೋಡುತ್ತಿದ್ದುದರಿಂದ ಕಸಿವಿಸಿಯಾಗಿ ರಾಜೀವ ಕೈ ತೆಗೆದ. ಅವನು ಏನೆಂದುಕೊಂಡನೋ..ಎಂದು ಕ್ಷಣ ರಾಜೀವನ ಮನಸ್ಸು ಅಳುಕಿತು! ಮರುಕ್ಷಣ ಏನಾದರೂ ಅಂದುಕೊಂಡು ಹಾಳಾಗಲೀ..! ಎಂದು ಮನಸ್ಸು ಗಡುಸಾಯಿತು. ಪಕ್ಕದಲ್ಲಿ ಕುಳಿತಿದ್ದ ಪಳನಿ ಕದ್ದು ತನ್ನತ್ತ ನೋಡುವುದು ರಾಜೀವನ ಗಮನಕ್ಕೆ ಬಂತು. `ಮೈಂಡ್ ಯುವರ್ ಓನ್ ಬಿಸಿನೆಸ್’ ರೇಗಿ ಗಡುಸಾಗಿ ಹೇಳಿದ ರಾಜೀವ. ತನ್ನ ಸ್ವರದಲ್ಲಿನ ಗಡುಸುತನಕ್ಕೆ ಅವನಿಗೇ ಅಚ್ಚರಿಯಾಗಿತ್ತು. ಅವನ ಮನಸ್ಸಿನ ಒಂದು ಭಾಗ  ನಿಯಂತ್ರಣವಿಲ್ಲದೆ ಸ್ವತಂತ್ರವಾಗಿ ವರ್ತಿಸಿದಂತೆ ಇತ್ತು. ಪಳನಿ ಹೆದರುತ್ತ ಎದ್ದು ಹೋದ! ಅವನೀಗ ಹೋಗಿ ಬಾಸಿನ ಬಳಿ ಕಂಪ್ಲೈಂಟು ಮಾಡುತ್ತಾನೆ! ಅವನ ಚಿಲ್ಲರೆ ಬುದ್ಧಿ ತನಗೆ ಗೊತ್ತಿಲ್ಲವೆ..? ಸಾಯಲಿ ಅವನು! ರಾಜೀವ ಉರಿಯುತ್ತಿದ್ಡ. 

ಪ್ರಕೃತಿ ತನ್ನ ಮೇಲೇಕೆ ಹೀಗೆ ದೌರ್ಜನ್ಯ ಮಾಡುತ್ತಿದೆ..? ಪ್ರಕೃತಿಯಲ್ಲಿ ಅನೇಕ ಜೀವಿಗಳ ಚರ್ಮ ಕಾಲ ಕಾಲಕ್ಕೆ ಹೊಸದಾಗುತ್ತದೆ. ಹಳೆಯದು ಪೆÇರೆಯಾಗಿ ಕಳಚಿ ಬಿದ್ದು ಹೊಸ ಚರ್ಮ ಬಂದಿರುತ್ತದೆ.  ಹಾವುಗಳಿವೆಯಲ್ಲ..? ತೊಂದರೆ ಬಂದರೆ ತಮ್ಮ ದೇಹದ ಒಂದು ಭಾಗವನ್ನೇ ಕಳಚಿ ಹಾಕುವ ಅನೇಕ ಕ್ರಿಮಿ, ಕೀಟಗಳಿಲ್ಲವೆ..? ಆದರೆ ತನ್ನ ದೇಹದ ಒಂದು ಭಾಗವೇ ರೂಪಾಂತರ ಹೊಂದುತ್ತಿದೆಯಲ್ಲ..? ಈ ವಿಚಿತ್ರಕ್ಕೆ ಸಮಾಧಾನಕರವಾದ ಉತ್ತರವನ್ನು ಹುಡುಕಲು ಹಲವು ರಾತ್ರಿಗಳು ಇಂಟರ್ನೆಟ್ಟಿನ ಜಾಲದಲ್ಲಿ ಹುಡುಕಾಡಿದ್ದ. ಉತ್ತರ ಸಿಗದೆ ರಾಜೀವ ಇನ್ನಷ್ಟು ಹತಾಶನಾಗಿದ್ದ.   

ಜನರ ದೃಷ್ಟಿಯಲ್ಲಿ ತಾನು ಅಪರಾಧಿ ಏಕಾಗುತ್ತಿರುವೆ..? ರಾಜೀವ ಯೋಚಿಸಿದ. ತನ್ನ ಅಪರಾಧವಾದರೂ ಏನಿದೆ..? ತನ್ನ ಮನೆಯವರೇ ತನ್ನನ್ನು ಹೊಸ ರೀತಿಯಲ್ಲಿ ನೋಡುತ್ತಿದ್ದಾರೆ. ಪದೇಪದೇ `ಯಾಕೆ ಹೀಗೆ ಮಾತಾಡೋಕೆ ಶುರು ಮಾಡಿದ್ದೀಯ?' ಅನ್ನುತ್ತಿದ್ದಾರೆ! ಅಪ್ಪನಂತೂ ತನ್ನ ಮಾತು ತುಂಬಾ ಒರಟೆಂದು ಮಾತನ್ನೇ ಬಿಟ್ಟಿದ್ದಾರೆ! ಇವರಿಗೆಲ್ಲಾ ಹೇಗೆ ಹೇಳಲಿ? ತನ್ನ ದೇಹದ ಮೇಲೆ ನಡೆಯುತ್ತಿರುವ ದೌರ್ಜನ್ಯದ ವಿಷಯವನ್ನು..? 
'ಇವತ್ತು ಏನಾದರೊಂದು ನಿರ್ಧಾರವಾಗಬೇಕು..ಹೀಗೆ ಎಷ್ಟು ದಿನ ಇರೋಕೆ ಸಾಧ್ಯ?'
ದೀಪಾಳ ಮಾತು ಅವನ ಕಿವಿಯಲ್ಲಿ ಅನುರಣಿಸಿತು. ಅವಳ ಪ್ರಶ್ನೆಗೆ ರಾಜೀವನ ಉತ್ತರ ಮೌನ! 
'ರಾಜು ನಿನಗೇನಾಗಿದೆ..? ನನ್ನ ಹತ್ರಾನಾದ್ರೂ ಹೇಳಬಾರದೆ..?'

 ಮತ್ತೆ ಕೇಳಿದ್ದಳು. ಆದರೆ ರಾಜೀವನಿಗೆ ಹೇಳುವುದಕ್ಕೆ ಸಾಧ್ಯವಿರಲಿಲ್ಲ! ಆ ಹೊಕ್ಕುಳದ ಬಳಿಯಲ್ಲಿನ  ಆ ಜಾಗ..? ಹೇಗೆ ಹೇಳುವುದು…? ಹೇಳಿದರೂ ಯಾರೊಬ್ಬರೂ ನಂಬಲಾರರು! ಈವರೆಗೆ ಕೇಳಿದವರೆಲ್ಲಾ ನಕ್ಕು ಸುಮ್ಮನಾಗಿದ್ದರು. ಇನ್ನು ಒಂದಿಬ್ಬರು ಬೆರಗಾಗಿ ರಾಜೀವನನ್ನು ನೋಡಿದ್ದರು ಅವನು ಹೇಳುತ್ತಿರುವುದು ಸುಳ್ಳು ಎಂಬಂತೆ. ಅವರಲ್ಲಿ ಒಬ್ಬರು ಚರ್ಮತಜ್ಞರೂ ಇದ್ದರು!  ತುಂಬಾ ಹಾಸ್ಯ ಪ್ರವೃತ್ತಿಯವರು ವೈದ್ಯರು. `ರಾಜೀವ್ ಏನೂ ಆಗಿಲ್ಲ, ಯೋಚನೆ ಮಾಡಬೇಡಿ. ಹಾಗೆ ಲೋಹವಾಗಿ ಪರಿವರ್ತನೆಯಾಗೋದು ಸಾಧ್ಯವಿದ್ದರೆ ನನಗೂ ಅದನ್ನು ಹೇಳಿ. ನನ್ನ ಹೆಂಡತಿಗೆ ಒಂದಿಷ್ಟು ಗಡುಸಾಗಿ ಹೇಳಬೇಕಾದ ಮಾತುಗಳಿವೆ. ಇಂತಾ ಶರೀರದಲ್ಲಿ ಗಡುಸು ಮಾತಾಡೋದಕ್ಕೆ ಸಾಧ್ಯವಿಲ'್ಲ ಎಂದು ಗಹಗಹಿಸಿ ನಕ್ಕಿದ್ದರು. ಇನ್ನು ಈ ವಿಷಯವನ್ನು ದೀಪಾ ನಂಬುವಳೆ..?

'ನೀನು ಏನೋ ಮುಚ್ಚಿಡ್ತಾ ಇದ್ದೀಯ..ಬರೀ ನನ್ನಿಂದಷ್ಟೇ ಅಲ್ಲ ನಿನ್ನ ಮನೆಯವರೆಲ್ಲರಿಂದಲೂ ಮುಚ್ಚಿಡ್ತಾ ಇದ್ದೀಯ..ಅಂತಾದ್ದೇನು ರಾಜು..? ನನ್ನಿಂದಲೂ ಮುಚ್ಚಿಡೋ ಅಂತಾದ್ದು ಏನು..? ಇಡೀ ಬದುಕನ್ನ್ನು ಹಂಚಿಕೊಳ್ಳೋಕೆ ಹೊರಟಿರೋ ನಮ್ಮ ಮಧ್ಯೆ ಅಂತಾದ್ದೇನು ಬಂದಿದೆ..? ಮೂರು ವರ್ಷದಲ್ಲಿ ಹೇಗಿದ್ದವನು ಹೇಗಾಗಿದ್ದಿಯಾ ಗೊತ್ತಾ..? ಸಿನೀಮಾ ಹೀರೋ ತರಾ ಇದ್ದವನು ಒಂದು ಅಸ್ಥಿಪಂಜರದ ಹಾಗಾಗಿದ್ದೀಯ..! ನಾನು ನಿನ್ನನ್ನು ಅರ್ಥ ಮಾಡಿಕೊಂಡ ಹಾಗೆ, ನೀನು ನನ್ನನ್ನೂ ಅರ್ಥ ಮಾಡಿಕೊಳ್ಳಬೇಕು ರಾಜು. ನಾನು ಇನ್ನೆಷ್ಟು ಕಾಲ ಕಾಯಲಿ..? ವಯಸ್ಸು ಹೀಗೇ ಇರುತ್ತಾ..? ನಾನು ಮುದುಕಿಯಾದ ಮೇಲೆ ಮದ್ವೆ ಮಾಡ್ಕೋಬೇಕೂಂತಿದ್ದೀಯಾ..?'

ಹೌದು ಇದೆಲ್ಲಾ ಮೂರೇ ವರ್ಷದಲ್ಲಿ ಘಟಿಸಿರುವುದು! ಮೂರೇ ವರ್ಷದಲ್ಲಿ ತನ್ನ ಬದುಕು ಮೂರಾಬಟ್ಟೆಯಾಗಿತ್ತು! ಕಾಲೇಜಿನಲ್ಲಿ ರಾಜೀವ ಹೀರೊ..? ಎಲ್ಲ ಅಸೂಯೆಪಡುವಂತಹ ಕೀರ್ತಿ! ನಾಟಕ, ಚರ್ಚಾಸ್ಫರ್ಧೆ, ಜೋಕು ಹೇಳುವುದು, ಆಶುಭಾಷಣ..ಎಲ್ಲ ರಂಗದಲ್ಲೂ ಮಿಂಚಿದ್ದ! ಎಲ್ಲರ ಕಣ್ಣು ಉರಿದಿತ್ತು! ಬಹುಮಾನಗಳು, ಪ್ರಶಸ್ತಿ ಪತ್ರಗಳು ಹರಿದಿದ್ದವು! ಕೊನೆಯ ವರ್ಷ ಉತ್ತಮ ಅಂಕಗಳೊಂದಿಗೆ ಪದವಿ! ಸ್ಥಳೀಯ ಹೆಸರಾಂತ ಕಂಪೆನಿಯವರು ಕ್ಯಾಂಪಸ್ಸಿಗೇ ಬಂದು ಕೆಲಸ ಕೊಟ್ಟಿದ್ದರು! ಹಿರಿಹಿರಿ ಹಿಗ್ಗುವ ಬದುಕು! ದೀಪಾ ತನ್ನ ಪ್ರತಿಯೊಂದು ಯಶಸ್ಸಿಗೂ ಮೈಜುಮ್ಮೆನ್ನುವಂತೆ ಪ್ರತಿಕ್ರಿಯಿಸುತ್ತಿದ್ದಳು. ಕದ್ದು ಮುಚ್ಚಿ ಮುತ್ತು ಕೊಟ್ಟು ಕಣ್ಣುಗಳಲ್ಲಿ ಪ್ರೀತಿ ತುಳುಕಿಸುತ್ತಿದ್ದಳು! ತನ್ನ ಬಾಳು ಬೆಳಗಿಸಲು ತುದಿಗಾಲಲ್ಲಿ ನಿಂತಿದ್ದಳು.

 ಇದು ತನಗೆ ಕೊನೆಯ ಅವಕಾಶ. ತನ್ನ ಬದುಕಿನ ಪ್ರಶ್ನೆ ಇದು. ಇದನ್ನು ಬಿಟ್ಟರೆ ತಾನು ಜಗತ್ತಿನ ಚಿಂದಂಬರ ರಹಸ್ಯವಾಗಿ ಉಳಿದುಬಿಡುತ್ತೇನೆ. ಯಾರೊಬ್ಬರಿಗೂ ಅರ್ಥವಾಗದ ವ್ಯರ್ಥ ಬದುಕು! ಇಂತ ಪರಸ್ಥಿತಿ ಯಾರಿಗೂ ಬಾರದಿರಲಿ! ಶತೃವಿಗೂ ಬೇಡ! ಆದರೆ ತನ್ನ ಈ ಸ್ಥಿತಿಗೆ ಕಾರಣರಾದವರು ಸ್ವಸ್ಥರಾಗಿರಬಾರದು! ಇದಕ್ಕಿಂತಲೂ ಹೀನಾಯವಾಗಿ ಅವರು ನರಳಬೇಕು! ಜೀವವಿದ್ದೂ ಸತ್ತಂತ ತನ್ನ ಈ ಸ್ಥಿತಿಗಿಂತಲೂ ಜೀವವಿದ್ದೂ ದಯನೀಯವಾಗಿ ಅವರೆಲ್ಲಾ ನೂರಾರು ವರ್ಷ ಬದುಕಿರಬೇಕು: ದ್ವೀಪದಂತೆ! ಸಮಾಜಕ್ಕೆ ಅವರು ಸತ್ತಿರಬೇಕು!

ಜನವರಿ ತಿಂಗಳ ಮೂರನೆಯ ವಾರ. ಚಳಿಯನ್ನು ಮೆಟ್ಟಿ ಮೆಲ್ಲಮೆಲ್ಲನೆ ಬಿಸಿಲು ತನ್ನ ಆಧಿಪತ್ಯ ಸ್ಥಾಪಿಸಿಹೊರಟಿತ್ತು.  ಸೆಕೆಯಾದಂತೆನಿಸಿ, ರಾಜೀವ ಜರ್ಕಿನ್ ಬಿಚ್ಚಿದ.  ಕೆಳೆದೆರಡು ದಿನಗಳಿಂದ ಬಿಸಿಲು ಪ್ರಖರವಾಗಿತ್ತು. ಸಮಯ ಸಂಜೆ ಆರೂಕಾಲು. ರಾಜೀವ ಡಿಪಾಟ್ರ್ಮೆಂಟು ಬಿಟ್ಟಾಗ ಇಳಿಮುಖವಾಗಿದ್ದರೂ ಬಿಸಿಲು ಕಣ್ಣು ಚುಚ್ಚಿತ್ತು. ಈ ಸಮಯದಲ್ಲಿ ಅವನು ಕಾರ್ಖಾನೆಯಿಂದ ಈಚೆ ಬಂದು ಅನೇಕ ತಿಂಗಳುಗಳೇ ಆಗಿವೆ.  ಅವನಿಗೆ ಸೂರ್ಯನ ಬಿಸಿಲನ್ನು ನೋಡಿದ ನೆನಪೇ ಇಲ್ಲ. ಬೆಳಿಗ್ಗೆ ಸೂರ್ಯನ ಬೆಳಕು ನಿಚ್ಚಳವಾಗಿ ಭುವಿಯನ್ನು ಮೆಟ್ಟುವ ಮುನ್ನ ಕಾರ್ಖಾನೆಯನ್ನು ಸೇರಿರುತ್ತಾನೆ. ಸಂಜೆ ಈ ಸಮಯದಲ್ಲಿ ಯಾವುದಾದರೊಂದು ದರಿದ್ರದ  ಮೀಟಿಂಗ್ ನಡೆಯುವುದು. ಅದು ಕನಿಷ್ಠ ಒಂದರಿಂದ ಒಂದೂವರೆ ಗಂಟೆಯ ಸಮಯವನ್ನು ತಿಂದುಬಿಡುತ್ತದೆ. ರಾಜೀವ ಆ ಮೀಟಿಂಗು ಮುಗಿಸಿ ಈಚೆ ಬರುವುದರಲ್ಲಿ ಪೂರ್ಣವಾಗಿ ಕತ್ತಲಾಗಿರುತ್ತದೆ.  ಡಿಪಾಟ್ರ್ಮೆಂಟಿಗೆ  ಹಿಂತಿರುಗಿ ಬಾಕಿ ಇದ್ದ ಪೇಪರುಗಳನ್ನೆಲ್ಲಾ ನೋಡಿ, ಮಾರನೆಯ ದಿನ ತನ್ನ ಕೆಲಸ ಯಾವವು ಎಂದು ನಿರ್ಧಾರ ಮಾಡಿ ಗುರುತು ಹಾಕಿ ಸಿಗರೇಟು ಸೇದಿ, ಬಾಸು ಹೋಗಿರುವರಾ ಎಂದು ಫೋನಿನ ಮೂಲಕ ತಿಳಿದುಕೊಂಡು ಬ್ರೀಫ್ ಕೇಸನ್ನು ಹಿಡಿದು ಈಚೆ ಬರುವುದರಲ್ಲಿ ಏಳೂ ಮುಕ್ಕಾಲು! ಬಾಸು ಹೋಗಿಲ್ಲದಿದ್ದರೆ ಇನ್ನೂ ಒಂದು ಗಂಟೆ  ಒಳಗಿದ್ದು ನಂತರವೇ ಹೋಗಬೇಕಾಗುತ್ತದೆ. ಇಂದು ಎಂದಿನಂತಿರಲು ಸಾಧ್ಯವೇ ಇರಲಿಲ್ಲ. ಇದು ತನ್ನ ಬದುಕಿನ ಪ್ರಶ್ನೆ ಎನ್ನಿಸಿತು ರಾಜೀವನಿಗೆ. ಬಾಸಿನ ಪಿ.ಎಗೆ 'ಅನಿವಾರ್ಯ ಕಾರಣಗಳಿಂದ ಹೊರಟಿರುವೆ' ಎಂದು ಹೇಳಿ ಹೊರಟಿದ್ದ. 

ಇದು ದೀಪ ತನಗೆ ಕೊಟ್ಟಿರುವ ಕೊನೆಯ ಅವಕಾಶ! ಈ ಅವಕಾಶ ಬಿಡಬಾರದೆಂದು ಹೊರಟಿದ್ದ. ಅವಳು ತನ್ನ ಬದುಕಿಗೆ ಬಂದರೆ ತನಗೆ ಜೀವನ ಇಲ್ಲದಿದ್ದರೆ ತಾನೇನಾಗಿಬಿಡುವೆನೋ..! ಜೀವದಿಂದಿರಲಾರೆನೋನೋ? ಜೀವವಿದ್ದರೂ ಶವದಂತೆ ಇದ್ದುಬಿಡುವೆನೇನೋ..? ಹೀಗೆ ಏನೇನೋ ಅರ್ಥಕ್ಕೆ ನಿಲುಕದ ಕೆಲವೊಮ್ಮೆ ಪರಸ್ಪರ ಸಂಬಂಧಗಳೇ ಇಲ್ಲದ ಯೋಚನೆಗಳು ರಾಜೀವನನ್ನು ಮುತ್ತುತ್ತಿವೆ. ಇಂತ ಭಾವನೆ ತನ್ನಲ್ಲಿ ಏಕೆ ಬರುತ್ತಿದೆ ಎಂದು ರಾಜೀವನಿಗೆ ಅರ್ಥವಾಗುತ್ತಿಲ್ಲ ಮನಸ್ಸು ರೊಚ್ಚಿಗೆದ್ದಿತ್ತು.  ಈ ಮೂರು ವರ್ಷ…ಹೀಗೇ ತಾನು ಮನುಷ್ಯ ಎಂಬುದನ್ನೇ ಮರೆತು ಕತ್ತೆಯಂತೆ ಈ ಕಾರ್ಖಾನೆಯಲ್ಲಿ ದುಡಿದಿರುವೆ! ನಾಯಿಯಂತೆ ಎಲ್ಲ ಬೈಗಳವನ್ನೂ ನುಂಗಿ ಬಾಲ ಅಲ್ಲಾಡಿಸಿರುವೆ! ನನ್ನತನ ಎಂಬುದನ್ನೇ ಕಳೆದುಕೊಂಡಿರುವೆ..ಈ ದೇಹದೊಳಗೆ `ನಾನು' ಇರುವೆನೋ ಎಂಬುದೇ ಅನುಮಾನವಾಗಿ ಹೋಗಿದೆ! ಇಂಜಿನಿಯರಿಂಗ್ ಓದಿದ್ದು ನಿಜಕ್ಕೂ ತಪ್ಪಾಯಿತೆಂದು ಈಗನ್ನಿಸುತ್ತಿದೆ ರಾಜೀವನಿಗೆ. ಹಗಲು ರಾತ್ರಿ ಜೀತದಾಳಿನಂತೆ ದುಡಿಯುವ ಈ ಬದುಕೂ..ಬದುಕೇ..? ತನ್ನಂತವರ ಮೇಲೆ ದಬ್ಬಾಳಿಕೆ ನಡೆಸುವವರು ಅದೆಷ್ಟು ಜನ..? ತಲೆಯಿಲ್ಲದವರು..ತಲೆಯಿದ್ದೂ ಒಳಗೆ ಮಿದುಳಿಲ್ಲದವರು! ಅದೆಷ್ಟೋ ಜನ ಮೇಲಧಿಕಾರಿಗಳು! ಮನೆಯಲ್ಲಿ ತಮ್ಮ ಸ್ಥಾನ ಕಳೆದುಕೊಂಡು  ಫ್ಯಾಕ್ಟರಿಯಲ್ಲೇ ಬದುಕನ್ನು ಕಳೆಯುವವರು..! ಮಂತ್ರಿಗಳ, ಕಂತ್ರಿಗಳ ಶಿಫಾರಸ್ಸಿನೊಂದಿಗೆ ಬಂದವರೆಲ್ಲಾ ಮೇಲೆ ಕುಳಿತು ದಬ್ಬಾಳಿಕೆ ನಡೆಸುತ್ತಾರೆ! ದಿನಕ್ಕೆ ಹನ್ನೆರಡು ಗಂಟೆ ದಣಿದರೂ ತೃಪ್ತಿಯಿಲ್ಲದ ಬಾಸುಗಳು! ಮಾತೆತ್ತಿದರೆ ಜಪಾನು ದೇಶದಲ್ಲಿ ಹನ್ನೆರಡು ಗಂಟೆ ದುಡಿಯುವ ಜನರ ಉದಾಹರಣೆ ಕೊಡುವ ಬಾಸುಗಳು ಸಿಕ್ಕಲ್ಲಿ ಬುಸುಗುಟ್ಟುವರು! ಫಕ್ಕನೆ ಕಚ್ಚುವರು! ವಿಷವೂಡಿಸುವರು! ಬೆಂಕಿ ಹಚ್ಚುವರು! ಕೇಳುವ ಕಿವಿ ಸಿಕ್ಕರೆ ಶಂಖ ಊದುವರು! ನೋಡುವ ಕಂಗಳು ಸಿಕ್ಕರೆ ಯಕ್ಷಗಾನ ಕುಣಿವರು! ಜಾಗಟೆ ಬಡಿಯುವರು! ಮೇಲಿನವರನ್ನು ಮೆಚ್ಚಿಸಲು ಅಸಹ್ಯದ ಕೆಲಸ ಮಾಡಲೂ ಹೇಸಲೊಲ್ಲದ ಹೇಸಿಗೆಯ ಜನರು! ಇಂತ ಬಾಸುಗಳನ್ನು ದೇವರಂತೆ ವರ್ಣಿಸುವ ನೂರಾರು ವಂಧಿಮಾಗಧರು!    
  
 ರಾಜೀವ ಹತ್ತು ನಿಮಿಷ ನಡೆದು ಸೆಕ್ಯೂರಿಟಿ ಗೇಟು ತಲುಪಿದಾಗ ಗಾರ್ಡು ಅವನಿಗಾಗಿ ಕಾಯುತ್ತಿದ್ದ. 
`ಸಾರ್ ಜಿ.ಎಮ್ ಸ್ಟಾಫ್ ಆಫೀಸರು ಮೆಸೇಜು ಕೊಟ್ಟಿದ್ದಾರೆ..ನೀವು ಮನೆಗೆ ಹೋಗಬಾರದಂತೆ. ಈಗಲೇ ಹೋಗಿ ಜಿ.ಎಮ್ ನೋಡಬೇಕಂತೆ
ಕೋಪ ಭುಗಿಲೆದ್ದಿತು, ಸೆಕ್ಯೂರಿಟಿಯವನ ಮುಖಕ್ಕೆ ರಪ್ಪನೆ ಬಾರಿಸುವ ಅದಮ್ಯ ಪ್ರೇರಣೆ! ಅದನ್ನು ಕಷ್ಟಪಟ್ಟು ತಡೆದ ರಾಜೀವ. ಪಾಪದವ ಅವನದೇನು ತಪ್ಪು..? ಅವನೂ ತನ್ನಂತೆ ಜೀತದವನೇ ಅಲ್ಲವೆ ಅನ್ನಿಸಿತು.
`ಸಾಯೋದಕ್ಕೂ ಇಲ್ಲಿ ಪರ್ಮಿಷನ್ ತಗೋಬೇಕು' ಎಂದು ಗೊಣಗುತ್ತಾ ರಾಜೀವ ಹಿಂದೆ ತಿರುಗಿದ. ಮೈಮನಗಳು ಉರಿಯುತ್ತಿದ್ದವು.  ಮೊಬೈಲು ಫೋನು ರಿಂಗಾಯಿತು. ಕಿವಿಗೆ ಹಿಡಿದುಕೊಂಡ. ಬಾಲ್ಯದ ಗೆಳೆಯ ಜಯದೇವನ ಮಾತು ಕೇಳಿದವು.
`ಇನ್ನೂ ಅಲ್ಲೇ ಸಾಯ್ತಾ ಇದ್ದೀಯೇನೋ ಮರಿ..?

`ಮತ್ತೇನು ಮಾಡಲಿ? ನಿನ್ನಷ್ಟು ಪುಣ್ಯ ಮಾಡಿಲ್ಲವಲ್ಲ.. ಎಲ್ಲರ ತಪ್ಪು ಹಿಡಿದು ದಬಾಯಿಸಿ ಹಣ ಮಾಡೋ ವೃತ್ತಿ ನನ್ನದಲ್ಲವಲ್ಲ ?’
`ಯಾಕೋ ಗರಂ ಆಗಿದ್ದೀಯಲ್ಲೋ..? ಸ್ವಲ್ಪ ನರಂ ಆಗೋದಕ್ಕೆ ಒಂದು ಅವಕಾಶ. ನಾಳೆ ನಿಮ್ಮ ಕಂಪೆನಿಗೆ ಆಡಿಟ್ಗೆ ಬರ್ತಿದ್ದೀನಿ..ಇವತ್ತು ಸಂಜೆ ಫ್ರೀ ಮಾಡ್ಕೊಂಡು ಹೋಟೆಲ್ ಜ್ಯೂವೆಲ್ಗೆ ಬಾ..ಒಳ್ಳೇ ಪಾರ್ಟಿ…ಸ್ಕಾಚು, ಚಿಕನ್ನು ಎಲ್ಲಾ ಇದೆ ನಾನೇನು ಕಾಸು ಖರ್ಚು ಮಾಡ್ತಿಲ್ಲ..'
`ನೀನು ಯಾಕೋ ಖರ್ಚು ಮಾಡಬೇಕು..? ನಿಮ್ಮಂತರವರ ಸೇವೆಗೆ ನೂರಾರು ಜನ ಸಿದ್ಧವಾಗಿರುವಾಗ..?
`ಯಾಕೆ ಮರಿ ಹೀಗೆ ಮಾತಾಡ್ತಿದ್ದೀಯಾ..? ಮೂಡು ಸರಿ ಇದ್ದ ಹಾಗಿಲ್ಲ..? ತರಲೆ ತಾಪತ್ರಯಗಳು ಇದ್ದೇ ಇರುತ್ತವೆ ಕಣೋ..ಅದನ್ನ ಮರೆಯೋ ಅಂತಾ ಪಾರ್ಟಿ ಸಂಜೆ ಬಾ..ಏಳಕ್ಕೆ..ಮರೀಬೇಡ..' ಫೋನು ಸಂಪರ್ಕ ಕಡಿಯಿತು! 

ಇದ್ದಕ್ಕಿದ್ದಂತೆ ವಿಶ್ವನ ಹೊಟ್ಟೆಯಲ್ಲಿ ಹಿಂಡಿದಂತೆ ಸಂಕಟವಾಯಿತು! ಹೊಟ್ಟೆ ಹಿಡಿದುಕೊಂಡು ಬಗ್ಗಿದ. ಹೊಟ್ಟೆಯ ನರನಾಡಿ, ಮಾಂಸಖಂಡಗಳನ್ನೆಲ್ಲಾ ಯಾರೋ ಹಿಂಡಿದಂತಹ ಸಂಕಟ!  ಜೋರಾಗಿ ನಗುತ್ತಾ, ಗದ್ದಲ ಮಾಡುತ್ತಾ ಗೇಟಿನತ್ತ ಪಂಜರದಿಂದ ತಪ್ಪಿಸಿಕೊಂಡ ಹಕ್ಕಿಗಳಂತೆ ಹೊರಟಿದ್ದ ಅಕೌಂಟ್ಸ್ ಡಿಪಾಟ್ರ್ಮೆಂಟಿನ ಸಹೋದ್ಯೋಗಿಗಳು ಎದುರಾದರು.
 ಏನಾಯಿತು..? ಯಾರೋ ಕೇಳಿದರು. ಕಣ್ಣು ಕತ್ತಲಿಟ್ಟಿದ್ದರಿಂದ ಯಾರೆಂದು ಕಾಣಲಿಲ್ಲ.
`ಏನಿಲ್ಲಾ…ಹೊಟ್ಟೆ ನೋವು..ಸರಿಹೋಗುತ್ತೆ.. ಎಂದ ರಾಜೀವ.

'ಅಂಬುಲೆನ್ಸಿಗೆ ಫೋನು ಮಾಡೋಣವೇ..?' 
`ಬೇಡ ಏನಾಗಿಲ್ಲ ಅದೇ ಸರಿ ಹೋಗುತ್ತೆ’ ರಾಜೀವ ಸಾವರಿಸಿಕೊಂಡು ಎದ್ದು ನಡೆಯತೊಡಗಿದ. ನೋವು ಸ್ವಲ್ಪ ಶಮನವಾದಂತಾಯಿತು. ಏನೋ ಅನುಮಾನ ಬಂದು, ಪ್ಯಾಂಟಿನ ಮೇಲಿಂದಲೇ ಹೊಟ್ಟೆಯನ್ನು ಮುಟ್ಟಿಕೊಂಡ. ದೇಹದ ಇನ್ನಷ್ಟು ಭಾಗ ಲೋಹವಾಗಿ ಪರಿವರ್ತನೆಯಾಗಿದೆ ಎಂಬ ಅನುಮಾನವಾಯಿತು. ಕೈಯನ್ನು ಪ್ಯಾಂಟಿನೊಳಗೆ ತೂರಿಸಿದ ನಿಜ…ಅಂಗೈಯಷ್ಟು ಜಾಗ ಲೋಹವಾಗಿ ಪರಿವರ್ತನೆಯಾಗಿತ್ತು!  ಶರೀರದಲ್ಲಿನ ಎಲ್ಲಾ ಶಕ್ತಿಯೂ ಸೋರಿಹೋದಂತೆನಿಸಿತು. ಅಲ್ಲಿಯೇ ಕುಸಿದು ಕುಳಿತುಕೊಳ್ಳುವಂತಾಯಿತು. ಮುಂದೆ ಕಾಲಿಡಲು ಸಾಧ್ಯವಿಲ್ಲ ಎಂಬ ಭಾವನೆ ಮೂಡಿತು. 

ಇನ್ನೊಂದಷ್ಟು ಜನರು ಮನೆಗೆ ತೆರಳುತ್ತಿದ್ದರು. ಅವರೆಲ್ಲಾ ರಾಜೀವನನ್ನು ನೋಡಿಕೊಂಡು ಹೋದರು. ಅವನನ್ನು ಮಾತನಾಡಿಸುವ ಧೈರ್ಯ ಯಾರಿಗೂ ಇರಲಿಲ್ಲ. 

ದೀಪಾ ತನಗಾಗಿ ಇಂದು ಕಾಯುತ್ತಿರುತ್ತಾಳೆ. ಅವಳನ್ನು ಆದಷ್ಟು ತಾನು ಬೇಗನೆ ಭೇಟಿಯಾದರೆ ತಾನು ಉಳಿದೇನು ಇಲ್ಲವಾದಲ್ಲಿ ತನಗೆ ಗಂಭೀರವಾದದ್ದು ಏನೋ ಆಗುವುದು ಎನ್ನುವ ಭಾವನೆ ದಟ್ಟವಾಗಿ ರಾಜೀವನ ಮನಸ್ಸಿನಲ್ಲಿ ಮೂಡಿತು. ದೀಪಾಳನ್ನು ಪ್ರೀತಿಸತೊಡಗಿದಾಗ ತಾನು ಕವಿಯಾಗಿದ್ದೆ. ರಮ್ಯವಾದ ಕವನಗಳನ್ನು ರಚಿಸಿದ್ದೆ. ಹತ್ತಿಪ್ಪತ್ತು ಕವನಗಳು ಒಂದೇ ಸಮನೆ ಪತ್ರಿಕೆಗಳಲ್ಲಿ ಬಂದುವು. ಕಾವ್ಯಲೋಕಕ್ಕೆ ತಂತ್ರಜ್ಞಾನಿಯೊಬ್ಬನ ಕೊಡುಗೆ ಎಂದು ಕೆಲವು ಕವನಗಳನ್ನು ಕಾವ್ಯಲೋಕ ಗುರುತಿಸಿತ್ತು. ಕಾರ್ಖಾನೆಯ ಸೇರಿದ ಮೇಲೆ ಯಂತ್ರಗಳೊಡನಾಟದಲ್ಲಿ, ಪರಸ್ಪರರ ಕಾಲೆಳೆಯುವ, ಯಾರಾದರೊಬ್ಬನ ಮೇಲೆ ಗೂಬೆ ಕೂರಿಸುವ ಜನರ ಸ್ಫರ್ಧೆಯನ್ನು ಹತ್ತಿಕ್ಕುವ ಸಲುವಾಗಿ ಶಕ್ತಿಮೀರಿ ದುಡಿಯತೊಡಗಿದ್ದ. ಆ  ವಾತಾವರಣದಲ್ಲಿ ಅವನಲ್ಲಿನ ಕವಿ ಎಂದೋ ಸತ್ತು ಹೋಗಿದ್ದ. ಅದರ ಸ್ಪಷ್ಟ ಅರಿವು ರಾಜೀವನಿಗಿತ್ತು. ಒಮ್ಮೆ ಎಲ್ಲೋ ದೀಪಾ ಕೇಳಿದ್ದಳು 'ನೀನೇಕೆ ಬರೆಯುವುದನ್ನು ನಿಲ್ಲಿಸಿದೆ..?' ಅವಳ ಪ್ರಶ್ನೆಗೆ 'ನಾನು ಹೇಗೆ ಬರೆಯಲಿ..?' ಎಂಬ ಪ್ರಶ್ನೆಯನ್ನೇ ಉತ್ತರವಾಗಿ ನೀಡಿದ್ದ.  
ರಾಜೀವ ಕಾಲೆಳೆಯುತ್ತಾ ಮಹಡಿಯ ಮೆಟ್ಟಿಲುಗಳನ್ನು ಪ್ರಯಾಸದಿಂದ ಹತ್ತಿದ. ಒಂದೊಂದು ಮೆಟ್ಟಿಲು ಹತ್ತಲೂ ಶರೀರದ ಚೈತನ್ಯವನ್ನೆಲ್ಲಾ ಒಟ್ಟುಗೂಡಿಸಿ ಹತ್ತಬೇಕಾಯಿತು.   

`ಯಾಕ್ಸಾರ್…ಹುಷಾರಿಲ್ಲವಾ..? ಏನೋ ಒಂದ್ತರಾ ಇದ್ದೀರಾ..?' ಜಿ.ಎಮ್ ಸ್ಟಾಫ್ ಆಫೀಸರ್ ಕೇಳಿದ.
`ಸ್ವಲ್ಪ ಆಯಾಸ..' ರಾಜೀವ ವಿಸಿಟರ್ಸ್ ಸೋಫಾದಲ್ಲಿ ಕುಸಿದು ಕುಳಿತ.
`ನಾಳೆ ಫಾರಿನ್ ಡೆಲೆಗೇಶನ್ ಬರ್ತಿದೆ ಸಾರ್..ಜಾಯಿಂಟ್ ವೆಂಚರ್ ವಿಷಯದಲ್ಲಿ. ದೊಡ್ಡ ಟೀಮು ಸಾರ್..ನೀವು ಬೇಗ ಹೊರಟಿದ್ದಕ್ಕೆ ಬಾಸು ಅಪ್ಸೆಟ್ ಆಗಿದ್ದಾರೆ..'

ಇನ್ನು ತಡೆಯುವುದು ಸಾಧ್ಯವಿಲ್ಲ! ಕೆಲಸ ಹೋದರೆ ಹೋಯಿತು, ಕುದುರೆ ಬಾಲ ಕತ್ತೆ ಜುಟ್ಟು! ಇದರ ಸಲುವಾಗಿ ತಾನು ಇಷ್ಟೆಲ್ಲ ಹಿಂಸೆ, ಅವಮಾನ, ಒತ್ತಡಗಳನ್ನು ತಡೆದುಕೊಳ್ಳಬೇಕೆ..? ಮನೆಗೆ ಹೊರಟಿದ್ದವನನ್ನು ತಡೆಯಬೇಕೆ..? ಅದೆಷ್ಟು ಭಾನುವಾರಗಳನ್ನು ತ್ಯಾಗ ಮಾಡಿದ್ದೇನೆ..ಈ ಕಂಪೆನಿಯ ಸಲುವಾಗಿ; ಹೊಟ್ಟೆ ಪಾಡಿನ ಸಲುವಾಗಿ. ಸಾಕು ಇನ್ನು ಇದೆಲ್ಲ. ಇದೆಲ್ಲದರ ನಡುವೆ ತಾನು ಅಸ್ತಿತ್ವವನ್ನೇ ಕಳೆದುಕೊಳ್ಳುತ್ತಿರುವೆ. ಹೊರ ಜಗತ್ತಿನ ಪಾಲಿಗೆ ತಾನೆಂದೋ ಸತ್ತು ಹೋಗಿರುವೆ. ಇಲ್ಲಿನ ಬಹುತೇಕ ಜನರಂತೆ ತನಗೆ ಅಸ್ತಿತ್ವ ಇರುವುದು ಇಲ್ಲಿ, ಈ ಕಾರ್ಖಾನೆಯಲ್ಲಿ ಮಾತ್ರ. ಇಲ್ಲಿಂದ ಹೊರಗೆ ಹೋಗಲು ಸಾಧ್ಯವೇ ಇಲ್ಲ! ಅಕಸ್ಮಾತ್ ಹೋದರೆ ಅಲ್ಲಿ ತಾನೊಬ್ಬ ಅನಾಮಧೇಯ! ಒಂದು ಕಾಲದಲ್ಲಿ ತುಂಬಿ ಪುಟಿಯುತ್ತಿದ್ದ ಭಾವನೆಗಳ, ಕ್ರಿಯಾತ್ಮಕ ಚಿಂತನೆಗಳ ಮನಸಿನಲ್ಲಿ ಇಂದು ಶೂನ್ಯ ಆವರಿಸಿದೆ. 

 ಜಿ.ಎಮ್ ಆಫೀಸಿನಲ್ಲಿ ನಿಮಿಷಕ್ಕೊಮ್ಮೆ ಫೋನು ರಿಂಗಾಗುತ್ತಿತ್ತು; ಒಳಗಿಂದ ಕಾಲಿಂಗ್ ಬೆಲ್ ಸದ್ದಾಗುತ್ತಿತ್ತು. ಉಸಿರು ಕಟ್ಟಿಸುವ ವಾತಾವರಣ. 
`ಸ್ವಲ್ಪ ಟೀ ಕುಡಿತೀರಾ ಸಾರ್ ಎಸ್.ಒ' ಕೇಳಿದ.
`ಸತ್ಯ ಹೇಳಬೇಕಂದರೆ ವಿಷ ಕುಡಿಯೋ ಮನಸ್ಸಾಗಿದೆ ' ಎಂದ ರಾಜೀವನ ಕಣ್ಣಂಚಿನಲ್ಲಿ ನೀರು ತುಳುಕಿತ್ತು.
`ತುಂಬಾ ಬೇಜಾರಿನಲ್ಲಿದ್ದೀರಿ. ಪ್ಲಾನಿಂಗ್ ಛೀಫ್ ಒಳಗಿದ್ದಾರೆ, ಅವರು ಬಂದ ತಕ್ಷಣ ನೀವು ಹೋಗಿ ನೋಡಿ ಸಾರ್'
`ಸಿಟೀಲಿ ಯಾರೋ ನನ್ನ ಕಾಯ್ತಿದ್ದಾರೆ…ನಾನು ಅಲ್ಲಿಗೆ ಹೋಗೋದು ತೀರಾ ಅನಿವಾರ್ಯವಾಗಿದೆ..'
`ಯಾರು..? ಡಾಕ್ಟರಾ ಸಾರ್..? ಅಪಾಯಿಂಟ್ಮೆಂಟ್ ತಗೊಂಡಿದ್ದೀರಾ..?'

`ಹೌದು, ಈ ಅಪಾಯಿಂಟ್ಮೆಂಟ್ ಉಳಿಸಿಕೊಂಡರೆ ನನಗೆ  ಬದುಕು..ಇಲ್ಲಾ ಸಾವು!' ಎಂದು ಒತ್ತರಿಸಿ ಬರುತ್ತಿದ್ಡ ದುಃಖವನ್ನು ತಡೆದು ಹೇಳುತ್ತಿರುವಂತೆ ಮತ್ತೆ ದೇಹವನ್ನೆಲ್ಲಾ ಹಿಂಡಿದಂತೆ ನೋವು ಶುರುವಾಯಿತು! ದೇಹವನ್ನೆಲ್ಲಾ ಒಂದು ಚೆಂಡಿನಂತೆ ಮಾಡಿಕೊಂಡು ವಿಲಿವಿಲಿ ಒದ್ದಾಡಿದ ರಾಜೀವ.
`ತುಂಬಾ ತೊಂದರೇಲಿ ಇರೋ ಹಾಗಿದೆ..ಒಂದ್ನಿಮಿಷ ಬಾಸಿಗೆ ಹೇಳಿ ಬಂದುಬಿಡಲೆ..?’ ಎಸ್.ಒ ಕೇಳಿದ. 

`ಬೇಡ ಸ್ವಲ್ಪ ಹೊತ್ತಿನಲ್ಲಿ ಸರಿ ಹೋಗುತ್ತೆ. ಒಂದ್ನಿಮಿಷ ಟಾಯ್ಲೆಟ್ಟಿಗೆ ಹೋಗಿ ಬರ್ತೀನಿ' ರಾಜೀವ ಎದ್ದು ಕಾರಿಡಾರಿನ ಗೋಡೆ ಹಿಡಿದು ನಡೆಯುತ್ತಾ ಟಾಯ್ಲೆಟ್ಟಿಗೆ ಹೋದ. ಪ್ಯಾಂಟನ್ನು ಕೆಳಗೆ ಸರಿಸಿ ನೋಡಿದ. ಅವನ ಅನುಮಾನ ನಿಜವಾಗಿತ್ತು. ಹೊಟ್ಟೆಯ ಭಾಗವೆಲ್ಲಾ ಪೂರ್ಣವಾಗಿ ಲೋಹವಾಗಿ ಪರಿವರ್ತನೆಯಾಗಿತ್ತು! ದುಃಖ ಒತ್ತರಿಸಿ ಬಂತು. ಈಗಲೂ ಕಾಲ ಮಿಂಚಿಲ್ಲ..ಈಗಲೂ ತನಗೆ ಉಳಿದುಕೊಳ್ಳಲು ಅವಕಾಶವಿದೆ! ಅಲ್ಲಿ ದೀಪಾ ಕಾಯುತ್ತಿರುತ್ತಾಳೆ. ಅವಳನ್ನು ಕಂಡರೆ, ಅವಳೊಂದಿಗೆ ಬೆರೆದರೆ…ತಾನು ಉಳಿದೇನು! 

ಒಂದೊಂದು ಸಲ ನೋವು ಬಂದಾಗಲೂ ತನ್ನ ದೇಹದ ಒಂದಿಷ್ಟು ಭಾಗ ರೂಪಾಂತರವಾಗುತ್ತಿದೆ. ರಕ್ತ ಮಾಂಸ ತುಂಬಿದ ಭಾಗ ಲೋಹವಾಗಿ ಪರಿವರ್ತನೆಯಾಗ್ತಿದೆ. ಇದಕ್ಕೆಲ್ಲಾ ಮದ್ದೆಂದರೆ ಇಲ್ಲಿಂದ ಓಡಿ ಹೋಗಬೇಕು! ಬಲಿಷ್ಠ ಕೋಟೆಯನ್ನು, ಗೇಟು ಕಾಯುವ ಸೆಕ್ಯೂರಿಟಿಯವರನ್ನು, ಕಾಂಪೌಂಡಿನ ಸುತ್ತ ಕಾವಲು ಕಾಯುವ ತರಪೇತಿ ಕೊಟ್ಟ ನಾಯಿಗಳನ್ನು ಮೀರಿ ಓಡಿಹೋಗಬೇಕು! ಬೆರಳು ಒತ್ತಿ ಬಯೋಮೆಟ್ರಿಕ್ ಮೂಲಕ ಹಾಜರಾತಿ ದಾಖಲಿಸುವ ಮೆಷಿನ್ನುಗಳ ಕುಂಯ್ ಕುಂಯ್ ಶಬ್ದ! ಅಣಕಿಸುವ, ಹೆದರಿಸುವ, ಗದರಿಸುವ, ಪದರುಪದರುಗಳಲ್ಲಿಯೂ ಕಾಣಿಸುವ ಉದ್ಯೋಗಿಗಳು, ಆಫೀಸರುಗಳು, ಎಕ್ಸಿಕ್ಯೂಟೀವ್ಗಳು, ಗರಗರ ಶಬ್ದ ಮಾಡುವ ಯಂತ್ರಗಳು, ದಭ್ ದಭ್.. ಎಂದು ಅನಾಮತ್ತಾಗಿ ಎತ್ತಿ ಹಾಕುವ ಬೃಹತ್ ಲೋಹದ ಭಾಗಗಳು..ಇವೆಲ್ಲದರಿಂದ, ಇವರೆಲ್ಲರಿಂದ ದೂರ..ಬಲು ದೂರ ಓಡಿ ಹೋಗಿ ದೀಪಾಳನ್ನು ಕೂಡಿದರೆ..ಉಳಿದೇನು! ಆದರೆ ಇದು ಹೇಗೆ ಸಾಧ್ಯ..? 

`ಸಾರ್..ಆರ್ ಯೂ ಓಕೆ..?' ಎಸ್.ಓ ಟಾಯ್ಲೆಟ್ಟಿನಾಚೆ ನಿಂತು ಕೂಗಿ ಕೇಳಿದ.
`ಎಸ್…ಐ ಯಾಮ್ ಓಕೆ' ಟಾಯ್ಲೆಟ್ಟಿನಲ್ಲಿಯೂ ಬಿಡಲಾರರೆ ಜನ..?
ಇನ್ನೈದು ನಿಮಿಷಗಳಲ್ಲಿ ಬಾಸಿನ ಚೇಂಬರಿನಲ್ಲಿ ಕೂತಿದ್ದ ರಾಜೀವ.
`ಆರ್ ಯೂ ಓಕೆ ರಾಜೀವ್..? ಎಸ್.ಓ ಹೇಳಿದರು ನೀವು ಸ್ವಲ್ಪ ತೊಂದರೇಲಿ ಇದ್ದೀರಿ ಅಂತ..ಆರ್ ಯೂ ಓಕೆ ನೌ..?' ಮಾಮೂಲಿನಂತೆ ಗದರದೆ, ಹೆದರಿಸದೆ ಲೋಹದಷ್ಟೇ ನಿರ್ಲಿಪ್ತತೆಯಿಂದ ನುಡಿದರು ಬಾಸು.                                                                         

`ಎಸ್…ಸಾರ್..ಐ ಯಾಮ್ ಓಕೆ ಎಂದು ಹೇಳುತ್ತಿರುವಾಗಲೇ ರಾಜೀವನಿಗೆ ಮೈ ಬಿಸಿಯಾದಂತೆ ಭಾಸವಾಯಿತು. ಮೈ ನಡುಗುತ್ತಿರುವಂತೆ ಅನಿಸಿತು.

`ಈಗ ತಾನೆ ಎಂಡಿ ಕಾರ್ಪೋರೇಟ್ ಆಫೀಸಿನಿಂದ ಫೋನು ಮಾಡಿದ್ದರು. ನಾಳೆ ಡೆಲಿಗೇಶನ್ ಬರ್ತಿದೆ. ಇದು ಮೋಸ್ಟ್ ಇಂಪಾರ್ಟೆಂಟ್ ಫಾರಿನ್ ಡೆಲಿಗೇಶನ್ ವಿತ್ ದಿ ಇನ್ಟೆನ್ಶನ್  ಆಫ್ ಜಾಯಿಂಟ್ ವೆಂಚರ್! ಐ ವಾಂಟ್ ಯುವರ್ ಷಾಪ್ ಟು ಬಿ ಕೆಪ್ಟ್ ಇಂಪ್ರೆಸೀವ್! ನೀವು ಹಾಗೆ ಮಾಡ್ತೀರಿ ಅಂತ ನನಗೆ ನಂಬಿಕೆ ಇದೆ. ಮೂರು ಜನ ಮೋಸ್ಟ್ ಇಂಟೆಲಿಜೆಂಟ್ ಆಫೀಸರ್ಸ್ನ ಟೀಮ್ ಮಾಡಿದ್ದೀನಿ. ಯು ಆರ್ ಒನ್ ಇನ್ನುಳಿದವರು ರಘು ಮತ್ತು ರವಿ..ಓ.ಕೆ…? ಟೆಕ್ನಿಕಲ್ಗೆ ನೀವು, ರಘು ಕ್ವಾಲಿಟಿ ಸೈಡ್, ರವಿ ಫೈನಾನ್ಸ್ ಸೈಡ್! ಅವರಿಬ್ಬರನ್ನೂ ಕರೆದಿದ್ಡೇನೆ. ಎಲ್ಲ ಸೇರಿ ನಾಳೆ ಒಂದು ಪ್ರೆಸೆಂಟೇಷನ್ ಮಾಡಬೇಕು ಡೆಲಿಗೇಶನ್ನಿಗೆ. ಅದರ ಬಗ್ಗೆ ಡಿಸ್ಕಸ್ ಮಾಡಿ ಫರ್ಮಪ್ ಮಾಡಿಕೊಳ್ಳೋಣ. ರಾತ್ರಿ ಹತ್ತು ಗಂಟೆಗೆ ಎಂಡಿಗೆ ನಾನು ಫೋನು ಮಾಡಬೇಕು..ಐ ವಿಲ್ ಕಾಲ್ ಯೂ ಇನ್ ಅನದರ್ ಫೈವ್ ಮಿನಿಟ್ಸ್… ಓಕೆ ರಾಜೀವ್?

ಬಾಸಿನ ಮಾತಿಗೆ ಅತ್ಯಂತ ವ್ಯಘ್ರವಾಗಿ ಪ್ರತಿಕ್ರಿಯೆ ತೋರಿಸಬೇಕೆಂದಿದ್ದ ರಾಜೀವ, `ಓ.ಕೆ ಸಾರ್' ಎನ್ನುತ್ತಾ ಆಚೆ ನಡೆದ. ಟೇಬಲ್ ಕುಟ್ಟಿ, ಬಾಯಿಗೆ ಬಂದಿದ್ದೆಲ್ಲಾ ಬೊಗಳಿ,  ರಾಜೀನಾಮೆ ಚೀಟಿಯನ್ನು ಬಿಸಾಡಬೇಕೆಂದಿದ್ದ! ತನಗೆ ಹಣ, ಪದವಿ, ಪ್ರತಿಷ್ಠೆಗಳಂತ ತುಣುಕು ರೊಟ್ಟಿ ಬೇಕಿರಲಿಲ್ಲ! ಈ ಜನ ತನ್ನನ್ನು ಏನೆಂದು ತಿಳಿದಿದ್ದಾರೆ ? ಇವರಿಗೆ ಬುದ್ಧಿ ಕಲಿಸಬೇಕು! ಮಾನವೀಯತೆ ಅಂದರೆ ಏನೆಂದು ತೋರಿಸಿಕೊಡಬೇಕು! ಕಾರ್ಖಾನೆಗಳನ್ನು ನಾಜಿ ಕ್ಯಾಂಪುಗಳನ್ನಾಗಿ ಮಾಡಿದ್ದಾರೆ! ಈ ಉಸಿರುಗಟ್ಟಿಸುವ, ಸ್ವಂತಿಕೆಯನ್ನು ಕಳೆದುಕೊಂಡು ಪರಕೀಯತೆಯ ಕೊಳಕಿನಲ್ಲಿ ನಾರುತ್ತಿರುವ ವಾತಾವರಣದಿಂದ ತಾನು ದೂರ ಹೋಗಬೇಕು! ತಾನು ಮನುಷ್ಯನಾಗಿ ಉಳಿಯುವಂತ ಪರಿಸರಕ್ಕೆ ಹೋಗಬೇಕು! ಖಂಡಿತವಾಗಿ ದೀಪಾ ತನ್ನನ್ನು ಉಳಿಸುತ್ತಾಳೆ!

ರಾಜೀವ ಆಚೆ ಎಸ್.ಓ ರೂಮಿಗೆ ಕಾಲಿಡುತ್ತಿದ್ದಂತೆ ಮತ್ತೆ ಸಂಕಟ ಶುರುವಾಯಿತು. ಈ ಸಲ ಅದು ಹೊಟ್ಟೆಯ ಭಾಗವನ್ನು ಮೀರಿ ಎದೆ ಮತ್ತು ತಲೆಯನ್ನು ವ್ಯಾಪಿಸಿತ್ತು. ಕೈಯಲ್ಲಿದ್ದ ಡೈರಿಯನ್ನು ಸೋಫಾದ ಮೇಲೆ ಬಿಸಾಡಿ ಮತ್ತೊಮ್ಮೆ ಟಾಯ್ಲೆಟ್ ಕಡೆಗೆ ಧಾವಿಸಿದ. 

ಈ ಸಲ ಹೊಟ್ಟೆಯ ಜೊತೆಗೆ ಎದೆಯ ಭಾಗವೆಲ್ಲಾ ಮಾಂಸಲವಾಗಿದ್ದರೂ ಗಡುಸಾಗತೊಡಗಿತ್ತು. ಟಾಯ್ಲೆಟ್ಟಿನ ಎರಡು ಗೋಡೆಗಳನ್ನು ಹಿಡಿದು ಜೋರಾಗಿ ಕಿರಿಚಿಬಿಟ್ಟ! ಕನಿಷ್ಠ ಮೂರ್ನಾಲ್ಕು ನಿಮಿಷಗಳವರೆಗೂ ರಾಜೀವ ಒಂದೇ ಸಮನೆ ಕಿರುಚಿರಬಹುದು! ಅದು ಇಡೀ ಬಿಲ್ಡಿಂಗ್ನಲ್ಲಿ ಪ್ರತಿಧ್ವನಿಸಿದಂತಾಯಿತು! ಈ ಶಬ್ದಕ್ಕೆ ಇಡೀ ಫ್ಯಾಕ್ಟರಿಯ ಜನ ಟಾಯ್ಲೆಟ್ಟಿನ ಮುಂದೆ ನೆರೆಯಬಹುದೆಂದು ಊಹಿಸಿದ ರಾಜೀವ. ದುಃಖ, ಕೋಪ, ನೋವು, ಸಂಕಟ ಎಲ್ಲ ಒಟ್ಟಿಗೇ ಅವನನ್ನು ಮುತ್ತಿದ್ದವು! ತಲೆಯನ್ನು ಗೋಡೆಗೆ ಗಟ್ಟಿಸಬೇಕೆನ್ನಿಸಿತು. ಗೋಡೆಯ ಕೈಬಿಟ್ಟು ಸಿಡಿಯುತ್ತಿದ್ದ ತನ್ನ ತಲೆಯನ್ನು ಒತ್ತಿ ಹಿಡಿದುಕೊಂಡ! ಅರೆಬರೆಯಾಗಿ ಕಳಚಿದ್ದ ಅವನು ಪ್ಯಾಂಟು ನೆಲಕ್ಕೆ ಬಿತ್ತು. ಹೊಟ್ಟೆ ಮತ್ತು ತೊಡೆ ಸೇರುವ ಜಾಗದಲ್ಲಿ ಬಾಲ್ಬೇರಿಂಗ್ನ ಜಾಯಿಂಟ್! ಲೋಹದ ಮೊಣಕಾಲಿನ ಕವರು ಕಂಡಿತು! ತನ್ನ ಮನುಷ್ಯತ್ವ ಕಳಚಿ ಹೋಗುತ್ತಿದೆ!  ತಾನು ರೋಬೋ ಆಗುತ್ತಿರುವೆ! ಯಂತ್ರಮಾನವನಾಗುತ್ತಿರುವೆ. ಇದೇ ವೇಗದಲ್ಲಿ ಪರಿವರ್ತನೆಯಾದರೆ ತಾನು ಟಾಯ್ಲೆಟ್ಟಿನಿಂದ ಆಚೆ ಕಾಲಿಡುವಷ್ಟರಲ್ಲಿ ಸಂಪೂರ್ಣ ಲೋಹದ ಮಾನವನಾಗುವೆ! ದೀಪಾಳ ಪಾಲಿಗೆ, ತನ್ನ ಸಂಸಾರಕ್ಕೆ, ಸಮಾಜಕ್ಕೆ ಸತ್ತುಹೋಗುವೆ! ಆ ಜಾಗದಲ್ಲಿ ಒಂದು  ಲೋಹದ ಮನುಷ್ಯ ಅಸ್ತಿತ್ವ ಪಡೆದುಕೊಳ್ಳುತ್ತಾನೆ!  ಹಗಲು ರಾತ್ರಿಗಳು ದಣಿವಿಲ್ಲದೆ, ವಿರೋಧವಿಲ್ಲದೆ ದುಡಿಯುವ ರೋಬೋ.  ಸ್ವ-ಚಿಂತನೆಯೇ ಇಲ್ಲದ, ಭಾವನೆಗಳೇ ರೂಪುಗೊಳ್ಳದ, ಆತ್ಮಾಭಿಮಾನವೇ ಇಲ್ಲದ, ತಿಂಗಳಿಗೆ ಸರಿಯಾಗಿ ಸಂಬಳ ತೆಗೆದುಕೊಂಡು ಹೋಗಿ ಮನೆಯಲ್ಲಿ ಸುರಿಯುವ, ಯಾವುದೋ ವಿದೇಶದಲ್ಲಿ ಮಾಡಿದ ಕಂಪ್ಯೂಟರ್ ಪ್ರೊಗ್ರಾಮಿನಂತೆ, ಕ್ಲಬ್ಬು, ಪಾರ್ಟಿಗಳಲಿ ಕುಡಿಯುತ್ತಾ, ಅಬ್ಬರಿಸಿ ನಗುತ್ತಾ, ಕೊಳಕು ಜೋಕುಗಳಿಗೆ ಸೂರು ಹಾರಿ ಹೋಗುವಂತೆ ನಗುವ ರೋಬೋ! ಬಾಸುಗಳು ಬೊಗಳುವುದನ್ನೆಲ್ಲಾ ಮನಸಾರೆ ಮೆಚ್ಚಿ ಹೊಗಳುವಂತ ಪೆÇ್ರೀಗ್ರಾಮ್ ಅಳವಡಿಸಿರುವ ರೋಬೋ!

ರಾಜೀವ ಹೆದರಿ ಪ್ಯಾಂಟು ಮೇಲೆತ್ತಿಕ್ಕೊಂಡ! ಬೆಲ್ಟು ಬಿಗಿದುಕೊಂಡ. ಇನ್ನೊಂದು ಕ್ಷಣವೂ ಇಲ್ಲಿರಬಾರದು! ಓಡಿ ಹೋಗಬೇಕು! ದೀಪಾ ಕರೆಯುತ್ತಿದ್ದಾಳೆ! ಅವಳ ಧ್ವನಿ ಕೇಳುತ್ತಿದೆ. 'ರಾಜೀವ, ಓಡಿ ಬಾ…ಯಾರ ಕೈಗೂ ಸಿಕ್ಕಬೇಡ! ನೀನಿರೋದು ಒಂದು ಪೈಶಾಚಿಕ ಪ್ರಪಂಚ!. ಈ ಕ್ಷಣ ನೀನು ಓಡಿ ಬರದಿದ್ದರೆ..ಇನ್ನೆಂದೂ ಬರೋಕಾಗೋದಿಲ್ಲ! ಯೋಚಿಸೋಕೆ ಸಮಯ ಇಲ್ಲ..ಓಡು ..ಹಕ್ಕಿಯಾಗು, ರೆಕ್ಕೆ ಬಿಚ್ಚು, ಹಾರು, ನೋಡು ನೀಲ ಆಕಾಶ ಎಷ್ಟು ವಿಸ್ತಾರ..ಅಲ್ಲಿ ನೋಡು ಮುಳುಗೋ ಸೂರ್ಯ ಅದೆಷ್ಟು ಮೋಹಕ! ಇನ್ನೊಂದು ಕ್ಷಣವೂ ಅಲ್ಲಿರಬೇಡ..ಹೂ ಹೆಜ್ಜೆ ಹಾಕು! ನಾನು ನಿನ್ನನ್ನು ತುಂಬಾ ಪ್ರೀತಿಸ್ತೇನೆ ರಾಜು..ಓ ಮೈ ಹೀರೋ…ರಾಜೂ…ಬಾ..ಬೇಗ ಬಾ..ನನ್ನ ತೆರೆದ ತೋಳುಗಳು ನಿನ್ನನ್ನು ಆಲಂಗನಕ್ಕೆ ಹಾತೊರೆಯುತ್ತಿವೆ..!'.

ಆಚೆ ತುಂಬಾ ಜನರು ಮಾತಾಡುತ್ತಿದ್ದರು. ಅವರಲ್ಲಿ ಕೆಲವರು ಜೋರಾಗಿ ಮಾತಾಡುತ್ತಿದ್ದರು. ಕೆಲವರು ಬಾಗಿಲನ್ನು ಒಡೆದೇಬಿಡಬೆಕೆನ್ನುತ್ತಿದ್ದರು. ಯಾರೋ ಡಾಕ್ಟ್ರರನ್ನು ಕರೆಸಿ ಎನ್ನುತ್ತಿದ್ದರು.

ರಾಜೀವ ಟಾಯ್ಲೆಟ್ಟಿನ ಬಾಗಿಲನ್ನು ತೆರೆಯುವುದನ್ನೇ ಕಾಯುತ್ತಿದ್ದಂತೆ ಇದ್ದರು ಆಚೆಯಿದ್ದ ಜನ. ಬಾಗಿಲು ತೆರೆದ ರಾಜೀವ ಮಿಂಚಿನ ವೇಗದಲ್ಲಿ ಜನರ ಗುಂಪನ್ನು ಭೇದಿಸಿ ಓಡಿಬಿಟ್ಟ! ಹಿಂತಿರುಗಿ ನೋಡುವುದಕ್ಕೂ ಹೆದರಿಕೆಯಾಗಿ ಓಡಿದ. ಆ ಜನರೆಲ್ಲ ತನ್ನನ್ನು ಅಟ್ಟಿಸಿಕೊಂಡು ಬರುತ್ತಿರುವಂತೆ ರಾಜೀವನಿಗನ್ನಿಸಿತು. ಈ ಜನರ ಕೈಗೆ ತಾನು ಸಿಕ್ಕೇನೆಯೇ..? ತಾನು ಪೂರ್ಣಪ್ರಮಾಣದಲ್ಲಿ ಯಂತ್ರವಾಗುವುದಕ್ಕೆ ಮುಂಚೆಯೇ ಈ ಕಾರ್ಖಾನೆಯಿಂದ, ಈ ಜನರಿಂದ ದೂರ ಓಡಿಬಿಡಬೇಕು! ಹಾಗೆಂದುಕೊಳ್ಳುತ್ತಲೇ ಓಡಿದ ರಾಜೀವ, ಚಿಗರೆಯಂತೆ! ಆಗಲೇ ಅವನಿಗೆ ಗೋಚರಿಸಿದ್ದು: ತಾನು ಮುಂದಕ್ಕೆ ಹೋಗುತ್ತಲೇ ಇಲ್ಲ ಎಂದು! ಬರಿ ನಿಂತಲ್ಲಿಯೇ ಓಡುತ್ತಿದ್ದೇನೆ..! ಅದರ ಅರಿವಾದೊಡನೆ ಒಮ್ಮೆಲೇ ಹತಾಶನಾದ ರಾಜೀವ!  ಕಣ್ಣು ಕತ್ತಲಿಟ್ಟಿತು! 

`ಏನಾಯಿತು..ರಾಜೀವ್ಗೆ?' ಜಿಎಮ್ ಅಲ್ಲಿದ್ದವರನ್ನು ಕೇಳಿದರು.

`ಟಾಯ್ಲೆಟ್ಟಿನಿಂದ ಕೂಗಿದ ಶಬ್ದ ಬಂತು..ಸಾರ್. ತಕ್ಷಣ ನಾವು ಓಡಿ ಬಂದೋ..ರಾಜೀವ್ ನಿಮ್ಮನ್ನ ಭೇಟಿ ಮಾಡೋಕೆ ಮುಂಚೇನೇ ಏನೋ ತೊಂದರೇಲಿ ಇದ್ದ ಹಾಗೆ ಇದ್ದರು.  ಮಾತು ಕೂಡ ಅಸಂಬದ್ಧವಾಗಿತ್ತು. ನಿಮ್ಮನ್ನು ಮೀಟ್ ಮಾಡಿ ಬಂದ ಮೇಲೆ ಮತ್ತೆ ಟಾಯ್ಲೆಟ್ ಕಡೆಗೆ ತೀರಾ ಅವಸರದಲ್ಲೇ ಹೋದರು. ಒಳಗೆ ಹೋದ ಕೆಲವೇ ನಿಮಿಷದಲ್ಲಿ ವಿಚಿತ್ರವಾಗಿ ಕೂಗಿದರು. ಬಹಳ ಹೊತ್ತು ಬಾಗಿಲು ತೆಗೆಯಲೇ ಇಲ್ಲ. ಈಗ ಬಾಗಿಲು ತೆಗೆದು ಅನಾಮತ್ತಾಗಿ ಈಚೆ ಬಿದ್ಡರು! ನೆಲಕ್ಕೆ ಬೀಳದ ಹಾಗಿ ಹಿಡಿದುಕೊಂಡೊ. ಪ್ರಜ್ಞೆ ತಪ್ಪಿರೋ ಹಾಗಿದೆ'
ಎಸ್.ಓ ವಿವರಣೆ ನೀಡಿದರು.
`ಕಾಲ್ ದ ಅಂಬುಲೆನ್ಸ್..ಮೂವ್ ಹಿಮ್ ಟು ಹಾಸ್ಪಿಟಲ್. ಹಿ ಮಸ್ಟ್ ಬಿ ವಕ್ರ್ಡ್ ಅಪ್
ಫೋನು ಮಾಡಲು ಹಲವು ಜನ ಓಡಿದರು.

*****

ರಾಜೀವನಿಗೆ ಎಚ್ಚರವಾಯಿತು. ಬಹಳ ಕಾಲದಿಂದ ತನಗೆ ಪ್ರಜ್ಞೆಯೇ ಇರಲಿಲ್ಲವೆಂಬ ಭಾವನೆ. ಕಣ್ಣು ಬಿಟ್ಟಾಗ ಮಂದವಾದ ಬೆಳಕು ಕಂಡಿತು. ತಾನು ತನ್ನ ಮನೆಯಲ್ಲೂ ಇಲ್ಲ, ಕಾರ್ಖಾನೆಯಲ್ಲೂ ಇಲ್ಲ ಎನ್ನುವುದು ಅರಿವಾಯಿತು. ಹಾಗಾದರೆ ಇದು ಯಾವ ಜಾಗ..? ಕಣ್ಣನ್ನು ಹೊಸಕಿಕೊಂಡು ಸುತ್ತ ನೋಡುವುದರಲ್ಲಿ ಅದು ಆಸ್ಪತ್ರೆ ಎನ್ನುವುದು ತಿಳಿದು ಹೋಯಿತು! ಎಲಾ ತಾನು ಆಸ್ಪತ್ರೆಯಲ್ಲೇಕೆ ಇರುವೆ..? ಯಾವಾಗ ಇಲ್ಲಿಗೆ ಬಂದೆ..? ಇಲ್ಲಿಗೆ ಯಾರು ಕರೆದುಕೊಂಡು ಬಂದರು? ಹಿಂದಿನದನ್ನು ನೆನಪು ಮಾಡಿಕೊಳ್ಳಲು ಪ್ರಯತ್ನಿಸಿದ ರಾಜೀವ!  ದೇಹವೆಲ್ಲಾ ಲೋಹವಾಗಿ ತಾನು ಯಂತ್ರಮಾನವನಾಗುತ್ತಿರುವ ಕ್ಷಣಗಳಲ್ಲಿ ಕಾರ್ಖಾನೆಯಿಂದ ಓಡಿ ಬರಲು ಪ್ರಯತ್ನಿಸಿದ್ದು ನೆನಪಾಯಿತು. ತಾನು ಟಾಯ್ಲೆಟ್ಟಿನಿಂದ ಈಚೆ ಬಂದಾಗ ಅಲ್ಲಿ ಸುಮಾರು ಜನರು ನಿಂತಿದ್ದರು. ಆ ಗುಂಪನ್ನು ಬೇಧಿsಸಿ ತನ್ನ ಉಳಿವಿಗಾಗಿ, ತನ್ನ ದೇಹದ ಉಳಿದ ಭಾಗ ಯಂತ್ರವಾಗುವುದನ್ನು ತಡೆಯುವ ಸಲುವಾಗಿ ಅಲ್ಲಿಂದ ಓಡತೊಡಗಿದ್ದೆ. ಹುಚ್ಚು ವೇಗದಲ್ಲಿ ಓಡುತ್ತಿರುವಾಗ ತನಗೆ ಗೋಚರವಾಗಿತ್ತು ತಾನು ನಿಂತಲ್ಲಿಯೇ ಓಡುತ್ತಿರುವೆ ಎಂದು. 

ಅಂದರೆ…ಆ ಅವಸ್ಥೆ ದಾಟಿ ತಾನೀಗ ಆಸ್ಪತ್ರೆಯಲ್ಲಿರುವೆ. ಅಲ್ಲಿಂದ ಇಲ್ಲಿಯವರೆಗೆ ಏನು ನಡೆದಿದೆ? ತಾನಿನ್ನೂ ರೋಬೋ ಆಗದೆ ಮನುಷ್ಯನಾಗಿಯೇ ಉಳಿದಿರುವೆನಾ..? ಈ ಯೋಚನೆ ಬಂದೊಡನೆ ರಾಜೀವ ಹಾಸಿಗೆಯಿಂದ ಸ್ಪ್ರಿಂಗಿನಂತೆ ಪುಟಿದೆದ್ದ! ವಾರ್ಡಿನ ಗೋಡೆಯ ಇನ್ನೊಂದು ಪಕ್ಕದಲ್ಲಿ ಮಂಚವೊಂದಿತ್ತು. ಅದರಲ್ಲಿ ತನ್ನ ತಂದೆ ಮಲಗಿರುವುದು ರಾಜೀವನಿಗೆ ಕಂಡಿತು. ಕಂಡೂ ಕಾಣದಂತೆ ರಾಜೀವ ವಾರ್ಡಿನ ಅಟ್ಯಾಚ್ಡ್ ಬಾತ್ ರೂಮಿಗೆ ಹೋಗಿ ಬಾಗಿಲು ಹಾಕಿಕೊಂಡು ತನ್ನ ಉಡುಪನ್ನೆಲ್ಲಾ ಕಳಚಿ ನೋಡಿಕೊಂಡ. ಧಿಗ್ಭ್ರಮೆಯಾಯಿತು! ಇಡೀ ಶರೀರ ಲೋಹವಾಗಿ ಪರಿವರ್ತನೆಯಾಗಿತ್ತು! ದೇಹದ ಒಂದೇ ಒಂದು ಕಣದಲ್ಲಾದರೂ ಮಾನವ ಶರೀರದ ಹೋಲಿಕೆ ಇರಲಿಲ್ಲ! ಪೂರ್ಣ ಪರಿಪೂರ್ಣ ಯಂತ್ರಮಾನವ! ಮುಖ..? ಫಳಫಳ ಹೊಳೆಯುವ ಲೋಹದ ಭಾಗಗಳು! ಇಷ್ಟೆಲ್ಲದರ ನಡುವೆ ಕನಿಷ್ಠ ತನ್ನ ಮುಖವಾದರೂ ಮನುಷ್ಯರಂತೆ ಉಳಿದಿದೆಯಾ..? ವಾಷ್ಬೇಸಿನ್ನಿನ ಮುಂದೆ ಧಾವಿಸಿ ಕನ್ನಡಿಯಲ್ಲಿ ಮುಖ ನೋಡಿಕೊಂಡ ರಾಜೀವ ಚಿಟ್ಟನೆ ಚೀರಿದ! ಕಣ್ಣುಗಳಿದ್ದ ಜಾಗದಲ್ಲಿ ಎರಡು ಪುಟ್ಟ ಕ್ಯಾಮರಾಗಳಿದ್ದವು.  ತಲೆಯ ಮೇಲೆ ಎರಡು ಅಂಟೆನಾಗಳಿದ್ದವು! ಬಾಯಿ ಇರಬೇಕಾದ ಜಾಗದಲ್ಲಿ ಸ್ಪೀಕರುಗಳಿದ್ದವು! ಕೈಕಾಲುಗಳಲ್ಲಿ ಯಂತ್ರದ ತಿರುಗಣೆಗಳೂ! ಅವನು ಮನುಷ್ಯ ಎನ್ನಲು ಒಂದೇ ಒಂದು ತುಣುಕು  ಮಾಂಸಲ ಭಾಗವೂ ಇರಲಿಲ್ಲ! ಮಾನವರ ಹೋಲಿಕೆಯೂ ಶರೀರವೂ ಇರಲಿಲ್ಲ! ಹತಾಶೆಯ ಪ್ರಪಾತಕ್ಕೆ  ಕುಸಿದು ಕುಳಿತ ರಾಜೀವ! 

ಆಚೆ ಯಾರೋ ದಬದಬನೆ ಬಾಗಿಲನ್ನು ತಟ್ಟುತ್ತಿದ್ದರು! ಅವನ ಶಬ್ದ ಗ್ರಹಿಸುವ ಸೆನ್ಸಾರ್ಗಳು ಆಕ್ಟೀವ್ ಆಗಿ ಅದನ್ನು ಗ್ರಹಿಸಿದ್ದವು! ರಾಜೀವ ನೆಲವನ್ನು ಹತಾಶೆಯಿಂದ ಬಡಿಯುತ್ತಾ ಬಾಯಿಗೆ ಬಂದದ್ಡನ್ನು ಬಡಬಡಿಸುತ್ತಿದ್ದ! ವಾರ್ಡಿನೊಳಗೆ ಜನರು ತುಂಬಿಕೊಂಡರು!


 

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x